ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಿಕಸಿತ ಭಾರತ ಸಂಕಲ್ಪ ಯಾತ್ರೆ ಕುರಿತು ಪಾಲ್ಘರ್ ನಲ್ಲಿ ಬೃಹತ್ ಮಾಹಿತಿ ಪ್ರಸರಣ ಶಿಬಿರ ನಡೆಯಿತು
ವಿಕಸಿತ ಭಾರತ ಸಂಕಲ್ಪ ಯಾತ್ರೆಯ ನಿಜವಾದ ಯಶಸ್ಸು ಕೊನೆಯ ವ್ಯಕ್ತಿಯನ್ನು ತಲುಪುವುದಾಗಿದೆ: ಪಾಲ್ಘರ್ ನಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್
ಎಲ್ಲರ ಸಹಭಾಗಿತ್ವ ಮತ್ತು ಅಭಿವೃದ್ಧಿಯೊಂದಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ಸಂಕಲ್ಪವು ಶೀಘ್ರವಾಗಿ ಈಡೇರುತ್ತದೆ: ಕೇಂದ್ರ ಪಂಚಾಯತಿ ರಾಜ್ ಸಹಾಯಕ ಸಚಿವ ಶ್ರೀ ಕಪಿಲ್ ಮೋರೇಶ್ವರ ಪಾಟೀಲ್
Posted On:
20 NOV 2023 6:20PM by PIB Bengaluru
ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ (ವಿಬಿಎಸ್‌ವೈ) ಸಂಬಂಧಿಸಿದ ಬೃಹತ್ ಶಿಬಿರವನ್ನು ಇಂದು ಪಾಲ್ಘರ್ ಜಿಲ್ಲೆಯ ದಹನುದಲ್ಲಿರುವ ಸೇಂಟ್ ಮೇರಿಸ್ ಹೈಸ್ಕೂಲ್‌ನಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್ ಅವರು ಕೆಲವು ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿತರಿಸಿದರು.
ಕಳೆದ ಬುಧವಾರ (ನವೆಂಬರ್ 15, 2023) ಜನಜಾತೀಯ ಗೌರವ ದಿವಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನ ಖುಂಟಿಯಲ್ಲಿ ವಿಕಸಿತ ಭಾರತ್ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಂತರ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವಾಹನಗಳು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಮಹಾರಾಷ್ಟ್ರದ ಐದು ಬುಡಕಟ್ಟು ಜಿಲ್ಲೆಗಳ ಪಾಲ್ಘರ್, ಗಡ್ಚಿರೋಲಿ, ನಾಂದೇಡ್, ನಾಸಿಕ್ ಮತ್ತು ನಂದೂರ್ಬರ್ ತಾಲ್ಲೂಕುಗಳಲ್ಲಿ ಸಂಚರಿಸುತ್ತಿವೆ.
ಪಾಲ್ಘರ್ ನಲ್ಲಿ ನಡೆದ ಬೃಹತ್ ಶಿಬಿರದಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನೆಗಳು ಅಭಿವೃದ್ಧಿ ಗ್ರಾಮೀಣ ಪ್ರದೇಶಗಳನ್ನು ತಲುಪಬೇಕು. ಸರ್ಕಾರದ ಯಾವುದೇ ಯೋಜನೆಯ ನಿಜವಾದ ಯಶಸ್ಸು ಕೊನೆಯ ಮೈಲಿಯಲ್ಲಿರುವ ವ್ಯಕ್ತಿಯು ಅದರ ಪ್ರಯೋಜನಗಳನ್ನು ಪಡೆದುಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದರು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಭಾರತ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ, ಈಗ ನಮ್ಮ ದೇಶವನ್ನು ಅಭಿವೃದ್ಧಿಪಡಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ವಿ ಬಿ ಎಸ್ ವೈ ಉಪಕ್ರಮವನ್ನು ಶ್ಲಾಘಿಸಿದ ಅವರು, ದೇಶದಲ್ಲಿ ಸಮಾನತೆ ತರಲು ಬುಡಕಟ್ಟು ಸಮಾಜ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
ಕೇಂದ್ರ ಪಂಚಾಯತ್ ರಾಜ್ ರಾಜ್ಯ ಸಚಿವ ಶ್ರೀ ಕಪಿಲ್ ಮೊರೇಶ್ವರ ಪಾಟೀಲ್, ಮಹಾರಾಷ್ಟ್ರ ಸರ್ಕಾರದ ಪಾಲ್ಘರ್ ಉಸ್ತುವಾರಿ ಸಚಿವ ಶ್ರೀ ರವೀಂದ್ರ ಚವ್ಹಾಣ್, ಜಿಲ್ಲಾ ಪರಿಷತ್ ಅಧ್ಯಕ್ಷ ಶ್ರೀ ಪ್ರಕಾಶ್ ನಿಕಮ್, ಸಂಸದ ಶ್ರೀ ರಾಜೇಂದ್ರ ಗಾವಿತ್, ಶಾಸಕ ಶ್ರೀ ವಿನೋದ್ ಭಿವಾ ನಿಕೋಲ್, ಪಾಲ್ಘರ್ ಜಿಲ್ಲಾಧಿಕಾರಿ ಶ್ರೀ ಗೋವಿಂದ್ ಬೋಡ್ಕೆ, ಕೊಂಕಣ ವಲಯದ ವಿಶೇಷ ಮಹಾನಿರೀಕ್ಷಕ ಶ್ರೀ ಪ್ರವೀಣ್ ಪವಾರ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬುಡಕಟ್ಟು ಸಮಾಜದ ಉನ್ನತಿ ಮತ್ತು ಪ್ರಯೋಜನಕ್ಕಾಗಿ ಕೇಂದ್ರ ಸರ್ಕಾರ ತಂದಿರುವ ವಿವಿಧ ಯೋಜನೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕೆಂದು ರಾಜ್ಯಪಾಲರು ಮನವಿ ಮಾಡಿದರು. ಪ್ರತಿಯೊಬ್ಬರೂ ಇದಕ್ಕೆ ಅರ್ಹರೇ ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಪ್ರತಿಯೊಬ್ಬ ಅರ್ಹರು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಬುಡಕಟ್ಟು ಸಮಾಜದ ಅಭಿವೃದ್ಧಿಗೆ ಹಲವಾರು ಪ್ರಯತ್ನಗಳನ್ನು ಮಾಡಿದೆ ಮತ್ತು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತಂದಿದೆ ಎಂದು ಕೇಂದ್ರ ಸಚಿವ ಶ್ರೀ ಕಪಿಲ್ ಮೊರೇಶ್ವರ ಪಾಟೀಲ ಹೇಳಿದರು. ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಇತರ ಪಾಲುದಾರರು ಸಹ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಬುಡಕಟ್ಟು ಸಮುದಾಯವನ್ನು ತಲುಪಲು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು. ಎಲ್ಲರ ಸಹಭಾಗಿತ್ವ ಮತ್ತು ಅಭಿವೃದ್ಧಿಯೊಂದಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಧಾನಿಯವರ ಸಂಕಲ್ಪವನ್ನು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದು ಅವರು ಹೇಳಿದರು.
ವಿ ಬಿ ಎಸ್ ವೈ ಐಇಸಿ ಪ್ರಚಾರ ವಾಹನವು ಇಂದು ಪಾಲ್ಘರ್ ಜಿಲ್ಲೆಯ ವಾಡಾದ ಪಲ್ಸೈ ಗ್ರಾಮವನ್ನು ಪ್ರವೇಶಿಸಿತು. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಪ್ರತಿನಿಧಿಗಳು ಮೆಗಾ ಶಿಬಿರ ಆಯೋಜಿಸಿದ್ದ ಮೈದಾನದಲ್ಲಿ ನೆರೆದಿದ್ದ ನಾಗರಿಕರಿಗೆ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಈ ಮಾಹಿತಿಯ ಆಧಾರದ ಮೇಲೆ ಅರ್ಹ ಯೋಜನೆಗಳಿಗೆ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಲಾಯಿತು.
ವಿ ಬಿ ಎಸ್ ವೈ ಐಇಸಿ ಪ್ರಚಾರ ವಾಹನವು ಇಂದು ನಾಂದೇಡ್ ಜಿಲ್ಲೆಯ ಕಿನ್ವಾತ್ ತಾಲೂಕಿನ ಥಾರಾಕ್ಕೆ ತಲುಪಿತು. ಅಲ್ಲಿದ್ದ ಗ್ರಾಮಸ್ಥರು ವಿ ಬಿ ಎಸ್ ವೈ ವಾಹನವನ್ನು ಸಂಭ್ರಮದಿಂದ ಸ್ವಾಗತಿಸಿದರು. ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ನಾಗರಿಕರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಸಂಬಂಧಿತ ಕಲ್ಯಾಣ ಯೋಜನೆಗಳ ಬಗ್ಗೆ ನಾಗರಿಕರಿಗೆ ವಿಶೇಷವಾಗಿ ತಿಳಿಸಲಾಯಿತು. ಇಂದು ನಾಂದೇಡ್ ಜಿಲ್ಲೆಯ ಬೋಧಿಯಲ್ಲಿ ಸಹ ವಿ ಬಿ ಎಸ್ ವೈ ಪ್ರಚಾರ ವಾಹನಕ್ಕೆ ಸ್ವಾಗತ ಕೋರಲಾಯಿತು.
ನಂದೂರ್ಬರ್ ಜಿಲ್ಲೆಯ ಶಹದಾದಲ್ಲಿ ಪಿಎಂ ಸೆಲ್ಫಿ ಬೂತ್ ಸ್ಥಾಪಿಸಲಾಗಿದ್ದು, ಅಲ್ಲಿ ವಿ ಬಿ ಎಸ್ ವೈ ಪ್ರಚಾರ ವಾಹನ ನಿಲ್ಲಿಸಲಾಗಿದೆ. ಸ್ಥಳೀಯ ನಾಗರಿಕರು ಸೆಲ್ಫಿ ಬೂತ್ ಸುತ್ತ ನೆರೆದು ಸಂಭ್ರಮಿಸಿದರು.
ವಿ ಬಿ ಎಸ್ ವೈ ಐಇಸಿ ಪ್ರಚಾರ ವಾಹನಗಳು ಇಂದು ವಿದರ್ಭದ ಗಡ್ಚಿರೋಲಿ ಜಿಲ್ಲೆಯ ಅಹೇರಿ ಮತ್ತು ಅರ್ಮೋರಿಗೆ ಆಗಮಿಸಿದವು. ಸ್ಥಳೀಯ ವಿದ್ಯಾರ್ಥಿಗಳು ಮ್ಯೂಸಿಕಲ್ ಬ್ಯಾಂಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಐಇಸಿ ಪ್ರಚಾರ ವಾಹನವನ್ನು ಸ್ವಾಗತಿಸಿದರು. ಐಇಸಿ ಪ್ರಚಾರ ವಾಹನದ ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಸ್ಥಳೀಯ ನಾಗರಿಕರಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಇಂದು ನಾಸಿಕ್ ಜಿಲ್ಲೆಯ ಬಾಗ್ಲಾನ್ ತಾಲೂಕಿನಲ್ಲಿ ಒಂದು ಐಇಸಿ ಪ್ರಚಾರ ವಾಹನವು ಸರ್ಕಾರಿ ಯೋಜನೆಗಳ ಬಗ್ಗೆ ಸ್ಥಳೀಯ ನಾಗರಿಕರಲ್ಲಿ ಜಾಗೃತಿ ಮೂಡಿಸಿತು.
ಈ ಐಇಸಿ ಪ್ರಚಾರ ವಾಹನಗಳು, ಕೇಂದ್ರ ಸರ್ಕಾರದ ಬೃಹತ್ ಸಂವಹನ ಅಭಿಯಾನದ ಭಾಗವಾಗಿದ್ದು, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳ ಪ್ರಮುಖ ಯೋಜನೆಗಳು ಮತ್ತು ಸಾಧನೆಗಳನ್ನು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಚಲನಚಿತ್ರಗಳು, ಕರಪತ್ರಗಳು, ಕಿರುಪುಸ್ತಕಗಳು ಮತ್ತು ಸ್ಟ್ಯಾಂಡಿಗಳ ಮೂಲಕ ಪ್ರಸಾರ ಮಾಡಲು ಸಜ್ಜುಗೊಂಡಿವೆ.
*****
(Release ID: 1978418)
Visitor Counter : 132