ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್ ಅವರು 2023ರ ನವೆಂಬರ್ 4ರಂದು ಬೆಂಗಳೂರಿನಲ್ಲಿ ʻಡಿಜಿಟಲ್ ಜೀವನ ಪ್ರಮಾಣಪತ್ರʼ ಅಭಿಯಾನವನ್ನು ಪರಿಶೀಲಿಸಿದರು.
ನವೆಂಬರ್ 4, 2023 ರಂದು ಬೆಂಗಳೂರಿನಲ್ಲಿ ಪಿಂಚಣಿದಾರರ ಕಲ್ಯಾಣ ಸಂಘಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸಂವಾದ ಸಭೆ ನಡೆಯಿತು
ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ಮುಖ ದೃಢೀಕರಣ (ಫೇಸ್ ಅಥೆಂಟಿಕೇಶನ್) ತಂತ್ರಜ್ಞಾನ ಬಳಕೆಯ ಬಗ್ಗೆ ಪಿಂಚಣಿದಾರರು ಮೆಚ್ಚುಗೆ ವ್ಯಕ್ತಪಡಿಸಿದರು
Posted On:
05 NOV 2023 12:53PM by PIB Bengaluru
ಕೇಂದ್ರ ಸರ್ಕಾರಿ ಪಿಂಚಣಿದಾರರ 'ಜೀವನವನ್ನು ಸುಲಭಗೊಳಿಸಲು' ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ʻಡಿಜಿಟಲ್ ಜೀವನ ಪ್ರಮಾಣಪತ್ರʼ(ಡಿಎಲ್‌ಸಿ) ಅಂದರೆ ʻಜೀವನ್ ಪ್ರಮಾಣ್ʼ ಅನ್ನು ವ್ಯಾಪಕವಾಗಿ ಉತ್ತೇಜಿಸುತ್ತಿದೆ. 2014ರಲ್ಲಿ, ಬಯೋಮೆಟ್ರಿಕ್ ಸಾಧನಗಳನ್ನು ಬಳಸಿಕೊಂಡು ʻಡಿಎಲ್‌ಸಿʼಗಳನ್ನು ಸಲ್ಲಿಸಲು ಪ್ರಾರಂಭಿಸಲಾಯಿತು. ಬಳಿಕ, ಆಧಾರ್ ದತ್ತಾಂಶದ ಆಧಾರದ ಮೇಲೆ ʻಮುಖ ದೃಢೀಕರಣ (ಫೇಸ್ ಅಥೆಂಟಿಕೇಶನ್) ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಇಲಾಖೆಯು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ) ಹಾಗೂ ಆಧಾರ್ ಪ್ರಾಧಿಕಾರದ(ʻಯುಐಡಿಎಐ) ಜೊತೆಗೆ ತೊಡಗಿಸಿಕೊಂಡಿತು. ಇದರಿಂದಾಗಿ ಯಾವುದೇ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಿದೆ. ಈ ಸೌಲಭ್ಯದ ಅಡಿಯಲ್ಲಿ, ʻಮುಖ ದೃಢೀಕರಣʼ ತಂತ್ರಜ್ಞಾನದ ಮೂಲಕ ವ್ಯಕ್ತಿಯ ಗುರುತನ್ನು ಖಚಿತಪಡಿಸಲಾಗುತ್ತದೆ ಮತ್ತು ʻಡಿಎಲ್‌ಸಿʼ ಸೃಷ್ಟಿಯಾಗುತ್ತದೆ. ನವೆಂಬರ್ 2021ರಲ್ಲಿ ಪ್ರಾರಂಭಿಸಲಾದ ಈ ಅದ್ಭುತ ತಂತ್ರಜ್ಞಾನವು ಬಾಹ್ಯ ಬಯೋ-ಮೆಟ್ರಿಕ್ ಸಾಧನಗಳ ಮೇಲಿನ ಪಿಂಚಣಿದಾರರ ಅವಲಂಬನೆಯನ್ನು ಕಡಿಮೆ ಮಾಡಿದೆ ಮತ್ತು ಸ್ಮಾರ್ಟ್‌ಫೋನ್ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈ ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಹೆಚ್ಚು ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡಲಾಗಿದೆ.

ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಲು ʻಮುಖ ದೃಢೀಕರಣ ತಂತ್ರಜ್ಞಾನʼವನ್ನು ಬಳಸಲು ಎಲ್ಲಾ ಕೇಂದ್ರ ಸರ್ಕಾರಿ ಪಿಂಚಣಿದಾರರು ಮತ್ತು ಪಿಂಚಣಿ ವಿತರಣಾ ಪ್ರಾಧಿಕಾರಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು 2022ರ ನವೆಂಬರ್ ತಿಂಗಳಲ್ಲಿ ದೇಶಾದ್ಯಂತ 37 ನಗರಗಳಲ್ಲಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು. ಈ ಅಭಿಯಾನವು ಭಾರಿ ಯಶಸ್ಸನ್ನು ಕಂಡಿದ್ದು, ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ 35 ಲಕ್ಷಕ್ಕೂ ಅಧಿಕ ʻಡಿಎಲ್‌ಸಿʼಗಳನ್ನು ವಿತರಿಸಲಾಗಿದೆ. 17 ಪಿಂಚಣಿ ವಿತರಣಾ ಬ್ಯಾಂಕುಗಳು, ಸಚಿವಾಲಯಗಳು / ಇಲಾಖೆಗಳು, ಪಿಂಚಣಿದಾರರ ಕಲ್ಯಾಣ ಸಂಘ, ಯುಐಡಿಎಐ, ʻಎಂಇಐಟಿವೈʼ ಸಹಯೋಗದೊಂದಿಗೆ 50 ಲಕ್ಷ ಪಿಂಚಣಿದಾರರನ್ನು ಗುರಿಯಾಗಿಸಿಕೊಂಡು 2023ರ ನವೆಂಬರ್ 1 ರಿಂದ 30 ರವರೆಗೆ ದೇಶಾದ್ಯಂತ 100 ನಗರಗಳ 500 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಾಗುತ್ತಿದೆ.

ಅಭಿಯಾನದ ಭಾಗವಾಗಿ, ʻಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾʼ ಮತ್ತು ʻಕೆನರಾ ಬ್ಯಾಂಕ್ʼ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ʻಡಿಎಲ್‌ಸಿʼ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ʻಎಸ್‌ಬಿಐʼ ವತಿಯಿಂದ ʻಇಸ್ರೋʼ, ಬೆಂಗಳೂರಿನ ʻಎನ್‌ಎಎಲ್, ಯಲಹಂಕ ನ್ಯೂಟೌನ್, ಯಲಹಂಕ ವಾಯುನೆಲೆ, ಹೆಸರಘಟ್ಟ ವಾಯುನೆಲೆ ಮುಂತಾದೆಡೆ ಶಿಬಿರಗಳನ್ನು ಆಯೋಜಿಸಲಾಗಿತ್ತು. ಕೆನರಾ ಬ್ಯಾಂಕ್ ವತಿಯಿಂದ ವಿಜಯನಗರ-2, ಬಸವೇಶ್ವರ, ಹನುಮಂತನಗರ, ಮಲ್ಲೇಶ್ವರಂ ಮತ್ತು ರಾಜಾಜಿನಗರ-2ನೇ ಬ್ಲಾಕ್ ʻಡಿಪಿಸಿಡಿʼಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ. ಪಿಂಚಣಿದಾರರಿಗೆ ತಮ್ಮ ಆಧಾರ್ ದಾಖಲೆಗಳನ್ನು ನವೀಕರಿಸಲು ಸಹಾಯ ಮಾಡಲು ಆಧಾರ್ ಪ್ರಾಧಿಕಾರದ ತಂಡವು ಶಿಬಿರಗಳಲ್ಲಿ ಭಾಗವಹಿಸುತ್ತಿದೆ.
ಅಭಿಯಾನದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಬ್ಯಾಂಕ್ ಅಧಿಕಾರಿಗಳು, ಪಿಂಚಣಿದಾರರು ಮತ್ತು ಮೂರು ನೋಂದಾಯಿತ ಪಿಂಚಣಿದಾರರ ಸಂಘಗಳಾದ ʻಕರ್ನಾಟಕ ಕೇಂದ್ರ ಸರ್ಕಾರಿ ಪಿಂಚಣಿದಾರರ ಸಂಘʼ, ʻಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ಪಿಂಚಣಿದಾರರ ಸಂಘʼ ಮತ್ತು ʻಅಖಿಲ ಭಾರತ ಬಿಎಸ್ಎನ್ಎಲ್ ಪಿಂಚಣಿದಾರರ ಕಲ್ಯಾಣ ಸಂಘʼದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ (ಪಿಂಚಣಿ) ಶ್ರೀ ವಿ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಇಲಾಖೆಯ ತಂಡವು ನವೆಂಬರ್ 4 ರಂದು ಬೆಂಗಳೂರಿಗೆ ಭೇಟಿ ನೀಡಿತು.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಪಿಂಚಣಿದಾರರನ್ನುದ್ದೇಶಿಸಿ ಮಾತನಾಡಿದರು ಮತ್ತು ಪಿಂಚಣಿದಾರರ 'ಜೀವನವನ್ನು ಸುಲಭಗೊಳಿಸುವ' ನಿಟ್ಟಿನಲ್ಲಿ ಇಲಾಖೆಯ ಉಪಕ್ರಮಗಳ ಬಗ್ಗೆ ಪಿಂಚಣಿದಾರರಿಗೆ ಮಾಹಿತಿ ನೀಡಿದರು. ಪ್ರಸ್ತುತ ನಡೆಯುತ್ತಿರುವ ಅಭಿಯಾನವು ʻಡಿಎಲ್‌ಸಿʼ ಸಲ್ಲಿಕೆಗಾಗಿ ʻಮುಖ ದೃಢೀಕರಣʼವನ್ನು ಬಳಸುವ ತಂತ್ರಜ್ಞಾನವನ್ನು ದೂರದ ಪ್ರದೇಶಗಳಲ್ಲಿನ ಪಿಂಚಣಿದಾರರಿಗೆ ತಲುಪುವಂತೆ ಖಚಿತಪಡಿಸಿಕೊಳಳುವ ನಿಟ್ಟಿನಲ್ಲಿ ಕೈಗೊಳ್ಳಲಾದ ಒಂದು ಉಪಕ್ರಮವಾಗಿದೆ. ಅವರು ತಮ್ಮ ಮನೆಗಳಿಂದಲೇ ತಂತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಈ ರಾಷ್ಟ್ರವ್ಯಾಪಿ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನವನ್ನು ಜನಾಂದೋಲನವನ್ನಾಗಿ ಪರಿವರ್ತಿಸುವಂತೆ ಅವರು ಬ್ಯಾಂಕರ್‌ಗಳು ಮತ್ತು ಪಿಂಚಣಿದಾರರಿಗೆ ಕರೆ ನೀಡಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ವೃತ್ತದ ಸಿಜಿಎಂ ಶ್ರೀ ಕೃಷ್ಣ ಶರ್ಮಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರು. ಬೆಂಗಳೂರು ವೃತ್ತದ ಪಿಂಚಣಿದಾರರಿಗೆ ಪ್ರಯೋಜನವಾಗುವಂತೆ ಅಭಿಯಾನದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು. ಪ್ರತಿ ಎಸ್‌ಬಿಐ ಶಾಖೆಯಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ʻಡಿಜಿಟಲ್ ಜೀವನ ಪ್ರಮಾಣಪತ್ರʼಗಳ ಅಭಿವೃದ್ಧಿಯು ಪಿಂಚಣಿದಾರರಿಗೆ, ವಿಶೇಷವಾಗಿ ವೃದ್ಧರು, ಅಂಗವಿಕಲರು ಮತ್ತು ಆಸ್ಪತ್ರೆಗೆ ದಾಖಲಾದವರಿಗೆ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪಿಂಚಣಿದಾರರ ಸಂಘಗಳ ಪ್ರತಿನಿಧಿಗಳು ಮಾಹಿತಿ ನೀಡಿದರು. ಮುಖ ದೃಢೀಕರಣ ತಂತ್ರಜ್ಞಾನದ ಬಳಕೆಯ ಮೂಲಕ, ಪಿಂಚಣಿದಾರರ ಮನೆಗಳು, ಆಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಮತ್ತು ʻಡಿಎಲ್‌ಸಿʼ ಶಿಬಿರಗಳನ್ನು ನಡೆಸುವ ಮೂಲಕ ಅಂತಹ ಪಿಂಚಣಿದಾರರ ಜೀವನ ಪ್ರಮಾಣಪತ್ರವನ್ನು ಯಶಸ್ವಿಯಾಗಿ ಸೃಷ್ಟಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
400ಕ್ಕೂ ಹೆಚ್ಚು ಪಿಂಚಣಿದಾರರು ಸಭೆಯಲ್ಲಿ ಭಾಗವಹಿಸಿದ್ದರು. ಪಿಂಚಣಿದಾರರಿಗೆ ಆರಾಮದಾಯಕತೆಯನ್ನು ಹೆಚ್ಚಿಸಲು ಈಗ ವ್ಯಾಪಕವಾಗಿ ಬಳಸಲಾಗುತ್ತಿರುವ ಈ ಕ್ರಾಂತಿಕಾರಿ ತಂತ್ರದ ಅಭಿವೃದ್ಧಿಯ ಬಗ್ಗೆ ಅವರು ಅತೀವ ಸಂತೃಪ್ತಿ ವ್ಯಕ್ತಪಡಿಸಿದರು.
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈ ಅಭಿಯಾನವನ್ನು ದೇಶಾದ್ಯಂತ ಯಶಸ್ವಿಗೊಳಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ.
****
(Release ID: 1974869)
Visitor Counter : 196