ಪ್ರಧಾನ ಮಂತ್ರಿಯವರ ಕಛೇರಿ
ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
Posted On:
31 OCT 2023 12:53PM by PIB Bengaluru
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಇಲ್ಲಿ ನೆರೆದಿರುವ ಎಲ್ಲಾ ಯುವಕರು ಮತ್ತು ನಿಮ್ಮಂತಹ ಧೈರ್ಯಶಾಲಿಗಳ ಈ ಉತ್ಸಾಹವು ರಾಷ್ಟ್ರೀಯ ಏಕತಾ ದಿವಸ್‌ನ (ರಾಷ್ಟ್ರೀಯ ಏಕತಾ ದಿನ) ದೊಡ್ಡ ಶಕ್ತಿಯಾಗಿದೆ. ಒಂದು ರೀತಿಯಲ್ಲಿ, ನನ್ನ ಮುಂದೆ ಮಿನಿ ಭಾರತವನ್ನೇ ನೋಡಬಹುದು. ವಿವಿಧ ರಾಜ್ಯಗಳು, ವಿವಿಧ ಭಾಷೆಗಳು ಮತ್ತು ವಿಭಿನ್ನ ಸಂಪ್ರದಾಯಗಳು ಇಲ್ಲಿವೆ, ಆದರೆ ಇಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಏಕತೆಯ ಗಟ್ಟಿಯಾದ ಎಳೆಯಿಂದ ಸಂಪರ್ಕ ಹೊಂದಿದ್ದಾನೆ. ಲೆಕ್ಕವಿಲ್ಲದಷ್ಟು ಮಣಿಗಳಿವೆ, ಆದರೆ ಹಾರವು ಒಂದೇ ಆಗಿದೆ. ಲೆಕ್ಕವಿಲ್ಲದಷ್ಟು ದೇಹಗಳಿವೆ, ಆದರೆ ಮನಸ್ಸು ಒಂದೇ ಆಗಿದೆ. ಆಗಸ್ಟ್ 15 ನಮ್ಮ ಸ್ವಾತಂತ್ರ್ಯೋತ್ಸವ ಆಚರಣೆಯ ದಿನ ಮತ್ತು ಜನವರಿ 26 ನಮ್ಮ ಗಣರಾಜ್ಯೋತ್ಸವದ ದಿನವಾಗಿದೆ, ಅದೇ ರೀತಿ ಅಕ್ಟೋಬರ್ 31 ದೇಶದ ಮೂಲೆ ಮೂಲೆಗೂ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುವ ಹಬ್ಬವಾಗಿದೆ.
ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮ, ಜನವರಿ 26ರಂದು ದೆಹಲಿಯ ಕರ್ತವ್ಯ ಪಥದಲ್ಲಿ ಮೆರವಣಿಗೆ ಮತ್ತು ಅಕ್ಟೋಬರ್ 31 ರಂದು ಏಕತಾ ಪ್ರತಿಮೆಯಲ್ಲಿ ಮಾತೆ ನರ್ಮದಾ ತೀರದಲ್ಲಿ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮ. ಇವು ರಾಷ್ಟ್ರೀಯ ಆರೋಹಣದ ತ್ರಿಕೂಟವಾಗಿದೆ. ಇಂದು ಇಲ್ಲಿ ನಡೆದ ಮೆರವಣಿಗೆ ಹಾಗೂ ಕಾರ್ಯಕ್ರಮಗಳು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಏಕತಾ ನಗರಕ್ಕೆ ಭೇಟಿ ನೀಡುವವರು ಈ ಭವ್ಯವಾದ ಪ್ರತಿಮೆಯನ್ನು ನೋಡುವುದು ಮಾತ್ರವಲ್ಲದೆ, ಸರ್ದಾರ್ ಸಾಹೇಬರ ಜೀವನ, ಅವರ ತ್ಯಾಗ ಮತ್ತು ಏಕತೆಯ ಭಾರತವನ್ನು ನಿರ್ಮಿಸುವಲ್ಲಿ ಅವರ ಕೊಡುಗೆಯನ್ನು ಸಹ ಪಡೆಯುತ್ತಾರೆ. ಈ ಪ್ರತಿಮೆಯ ನಿರ್ಮಾಣದ ಕಥೆಯೇ 'ಏಕ್ ಭಾರತ್ ಶ್ರೇಷ್ಠ ಭಾರತ'ದ ಮನೋಭಾವದ ಪ್ರತಿಬಿಂಬವಾಗಿದೆ. ಇದರ ನಿರ್ಮಾಣಕ್ಕಾಗಿ, ದೇಶದ ಮೂಲೆ ಮೂಲೆಗಳಿಂದ ರೈತರು ಉಕ್ಕಿನ ಮನುಷ್ಯನ ಪ್ರತಿಮೆಗೆ ಕೃಷಿ ಉಪಕರಣಗಳು ಮತ್ತು ಕಬ್ಬಿಣವನ್ನು ನೀಡಿದರು. ದೇಶದ ಮೂಲೆ ಮೂಲೆಯಿಂದ ಮಣ್ಣು ತಂದು ಇಲ್ಲಿ ಏಕತೆಯ ಗೋಡೆ ನಿರ್ಮಿಸಲಾಗಿದೆ. ಇದು ಎಂತಹ ದೊಡ್ಡ ಸ್ಫೂರ್ತಿ! ಅದೇ ಸ್ಫೂರ್ತಿಯಿಂದ ತುಂಬಿದ ಕೋಟ್ಯಂತರ ದೇಶವಾಸಿಗಳು ಈ ಕಾರ್ಯಕ್ರಮದ ಭಾಗವಾಗಿದ್ದಾರೆ.
ದೇಶಾದ್ಯಂತ 'ಏಕತೆಯ ನಡಿಗೆ ಅಥನಾ ಓಟ'ದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರು ಓಟದ ಭಾಗವಾಗುತ್ತಿದ್ದಾರೆ. ದೇಶದಲ್ಲಿ ಈ ಏಕತೆಯ ಹರಿವು ನೋಡಿದಾಗ, 140 ಕೋಟಿ ಭಾರತೀಯರಲ್ಲಿ ಈ ಏಕತೆಯ ಮನೋಭಾವವನ್ನು ನೋಡಿದಾಗ, ಸರ್ದಾರ್ ಸಾಹೇಬರ ಆದರ್ಶಗಳು 'ಏಕ ಭಾರತ ಶ್ರೇಷ್ಠ ಭಾರತ' ಎಂಬ ಸಂಕಲ್ಪದ ರೂಪದಲ್ಲಿ ನಮ್ಮೊಳಗೆ ಇದೆ ಎಂಬುದು ತೋರುತ್ತದೆ. ಈ ಶುಭ ಸಂದರ್ಭದಲ್ಲಿ ನಾನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ. ನಾನು ಎಲ್ಲಾ ದೇಶವಾಸಿಗಳಿಗೆ ರಾಷ್ಟ್ರೀಯ ಏಕತಾ ದಿವಸದ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ನನ್ನ ಕುಟುಂಬ ಸದಸ್ಯರೆ,
ಮುಂಬರುವ 25 ವರ್ಷಗಳು ಭಾರತಕ್ಕೆ ಈ ಶತಮಾನದ ಅತ್ಯಂತ ಪ್ರಮುಖ 25 ವರ್ಷಗಳಾಗಿವೆ. ಈ 25 ವರ್ಷಗಳಲ್ಲಿ ನಾವು ನಮ್ಮ ಭಾರತವನ್ನು ಸಮೃದ್ಧವಾಗಿ ಅಭಿವೃದ್ಧಿಗೊಳಿಸಬೇಕಾಗಿದೆ. ಕಳೆದ ಶತಮಾನದಲ್ಲಿ, ಸ್ವಾತಂತ್ರ್ಯದ ಮೊದಲು, ಪ್ರತಿಯೊಬ್ಬ ನಾಗರಿಕನು ಸ್ವತಂತ್ರ ಭಾರತಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ 25 ವರ್ಷಗಳ ಅವಧಿ ಆಗಿತ್ತು. ಈಗ ಸಮೃದ್ಧ ಭಾರತ ಕಟ್ಟುವ ಗುರಿ ಸಾಧಿಸಲು, ಮುಂದಿನ 25 ವರ್ಷಗಳ 'ಅಮೃತ ಕಾಲ' ನಮ್ಮ ಮುಂದೆ ಒಂದು ಅವಕಾಶವಾಗಿ ಬಂದಿದೆ. ನಾವು ಸರ್ದಾರ್ ಪಟೇಲ್ ಅವರಿಂದ ಸ್ಫೂರ್ತಿ ಪಡೆದು ಪ್ರತಿಯೊಂದು ಗುರಿಯನ್ನು ಸಾಧಿಸಬೇಕು.
ಇಂದು ಇಡೀ ಜಗತ್ತು ಭಾರತವನ್ನು ನೋಡುತ್ತಿದೆ. ಇಂದು ಭಾರತವು ಸಾಧನೆಗಳ ಹೊಸ ಶಿಖರದಲ್ಲಿದೆ. ಜಿ-20ರಲ್ಲಿ ಭಾರತದ ಸಾಮರ್ಥ್ಯ ನೋಡಿ ಜಗತ್ತೇ ಅಚ್ಚರಿಗೊಂಡಿತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ನಾವು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ನಾವು ಹೆಮ್ಮೆಪಡುತ್ತೇವೆ. ಅನೇಕ ಜಾಗತಿಕ ಬಿಕ್ಕಟ್ಟುಗಳ ನಡುವೆ ನಮ್ಮ ಗಡಿಗಳು ಸುರಕ್ಷಿತವಾಗಿವೆ ಎಂದು ನಾವು ಹೆಮ್ಮೆಪಡುತ್ತೇವೆ. ಮುಂದಿನ ಕೆಲವು ವರ್ಷಗಳಲ್ಲಿ ನಾವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದ್ದೇವೆ ಎಂದು ನಾವು ಹೆಮ್ಮೆಪಡುತ್ತೇವೆ. ಜಗತ್ತಿನ ಯಾವುದೇ ದೇಶ ತಲುಪಲು ಸಾಧ್ಯವಾಗದ ಚಂದ್ರನ ಮೇಲೆ ಭಾರತ ಇಂದು ತಲುಪಿರುವುದು ನಮಗೆ ಹೆಮ್ಮೆಯ ವಿಷಯ. ಇಂದು ಭಾರತವು ತೇಜಸ್ ಯುದ್ಧ ವಿಮಾನಗಳನ್ನು ಮತ್ತು ಐಎನ್‌ಎಸ್ ವಿಕ್ರಾಂತ್ ಅನ್ನು ಸ್ವದೇಶಿಯಾಗಿ ತಯಾರಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಇಂದು ನಮ್ಮ ವೃತ್ತಿಪರರು ಪ್ರಪಂಚದಾದ್ಯಂತ ಶತಕೋಟಿ-ಟ್ರಿಲಿಯನ್ ಡಾಲರ್ ಕಂಪನಿಗಳನ್ನು ನಡೆಸುತ್ತಿದ್ದಾರೆ ಮತ್ತು ಮುನ್ನಡೆಸುತ್ತಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ. ಇಂದು ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ತ್ರಿವರ್ಣ ಧ್ವಜದ ವೈಭವವು ನಿರಂತರವಾಗಿ ಹೆಚ್ಚುತ್ತಿದೆ ಎಂದು ನಾವು ಹೆಮ್ಮೆಪಡುತ್ತೇವೆ. ದೇಶದ ಯುವಕರು, ಪುತ್ರರು, ಪುತ್ರಿಯರು ದಾಖಲೆ ಸಂಖ್ಯೆಯಲ್ಲಿ ಪದಕ ಗೆಲ್ಲುತ್ತಿರುವುದು ನಮಗೆ ಹೆಮ್ಮೆ ತಂದಿದೆ.
ಸ್ನೇಹಿತರೆ,
‘ಅಮೃತ ಕಾಲ’ದ ಈ ಅವಧಿಯಲ್ಲಿ ಭಾರತವು ಗುಲಾಮ ಮನಸ್ಥಿತಿಯನ್ನು ದೂರವಿಡುವ ಮೂಲಕ ಮುನ್ನಡೆಯಲು ನಿರ್ಧರಿಸಿದೆ. ನಾವು ರಾಷ್ಟ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಅದೇ ಸಮಯದಲ್ಲಿ ನಮ್ಮ ಪರಂಪರೆಯನ್ನು ಉಳಿಸುತ್ತಿದ್ದೇವೆ. ಭಾರತವು ತನ್ನ ನೌಕಾ ಧ್ವಜದಿಂದ ವಸಾಹತುಶಾಹಿಯ ಸಂಕೇತವನ್ನು ತೆಗೆದುಹಾಕಿದೆ. ವಸಾಹತುಶಾಹಿ ಆಡಳಿತದ ಯುಗದಲ್ಲಿ ಮಾಡಿದ ಅನಗತ್ಯ ಕಾನೂನುಗಳನ್ನು ಸಹ ರದ್ದುಗೊಳಿಸಲಾಗುತ್ತಿದೆ. ಭಾರತೀಯ ನ್ಯಾಯ ಸಂಹಿತೆ ಐಪಿಸಿಯನ್ನು ಸಹ ಬದಲಾಯಿಸಲಾಗುತ್ತಿದೆ. ಒಮ್ಮೆ ಇಂಡಿಯಾ ಗೇಟ್‌ನಲ್ಲಿ ವಿದೇಶಿ ಶಕ್ತಿಯ ಪ್ರತಿನಿಧಿಯ ಪ್ರತಿಮೆ ಇತ್ತು, ಆದರೆ ಈಗ ಆ ಸ್ಥಳದಲ್ಲಿ ನೇತಾಜಿ ಸುಭಾಷರ ಪ್ರತಿಮೆ ನಮಗೆ ಸ್ಫೂರ್ತಿ ನೀಡುತ್ತಿದೆ.
ಸ್ನೇಹಿತರೆ,
ಇಂದು ಭಾರತವು ಸಾಧಿಸಲಾಗದ ಗುರಿಯಿಲ್ಲ. ನಾವು ಭಾರತೀಯರು ಒಟ್ಟಾಗಿ ಸಾಧಿಸಲಾಗದ ಯಾವುದೇ ನಿರ್ಣಯವಿಲ್ಲ. ಕಳೆದ 9 ವರ್ಷಗಳಲ್ಲಿ, ಪ್ರತಿಯೊಬ್ಬರೂ ಪ್ರಯತ್ನಿಸಿದಾಗ, ಯಾವುದೂ ಅಸಾಧ್ಯವಲ್ಲ ಎಂಬುದನ್ನು ದೇಶ ಕಂಡಿದೆ. 370ನೇ ವಿಧಿಯಿಂದ ಕಾಶ್ಮೀರವನ್ನು ಮುಕ್ತಗೊಳಿಸಬಹುದೆಂದು ಎಂದಾದರೂ ಯಾರಾದರೂ ಭಾವಿಸಿದ್ದರಾ? ಆದರೆ ಇಂದು ಕಾಶ್ಮೀರ ಮತ್ತು ದೇಶದ ನಡುವೆ 370ನೇ ವಿಧಿಯ ಗೋಡೆ ಕುಸಿದಿದೆ. ಸರ್ದಾರ್ ಸಾಹೇಬರು ಎಲ್ಲೇ ಇದ್ದರೂ, ಅವರು ಅತ್ಯಂತ ಸಂತೋಷ ಅನುಭವಿಸುತ್ತಾರೆ ಮತ್ತು ನಮ್ಮೆಲ್ಲರನ್ನು ಆಶೀರ್ವದಿಸುತ್ತಿದ್ದಾರೆ. ಇಂದು ಕಾಶ್ಮೀರದ ನನ್ನ ಸಹೋದರ ಸಹೋದರಿಯರು ಭಯೋತ್ಪಾದನೆಯ ನೆರಳಿನಿಂದ ಹೊರಬಂದು, ಸ್ವಾತಂತ್ರ್ಯದ ಗಾಳಿಯಲ್ಲಿ ಉಸಿರಾಡುತ್ತಿದ್ದಾರೆ, ದೇಶದ ಅಭಿವೃದ್ಧಿಯಲ್ಲಿ ಒಟ್ಟಾಗಿ ನಡೆಯುತ್ತಿದ್ದಾರೆ. ಈ ಭಾಗದಲ್ಲಿರುವ ಇಲ್ಲಿನ ಸರ್ದಾರ್ ಸರೋವರ ಅಣೆಕಟ್ಟು ಕೂಡ 5-6 ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಎಲ್ಲರ ಪ್ರಯತ್ನದಿಂದ ಕಳೆದ ಕೆಲವು ವರ್ಷಗಳಲ್ಲಿ ಈ ಅಣೆಕಟ್ಟಿನ ಕಾಮಗಾರಿಯೂ ಪೂರ್ಣಗೊಂಡಿದೆ.
ಸ್ನೇಹಿತರೆ,
ಏಕತಾ ನಗರವು 'ಸಂಕಲ್ಪ್ ಸೇ ಸಿದ್ಧಿ' ಅಥವಾ ನಿರ್ಣಯದ ಮೂಲಕ ಸಾಧನೆಗೆ ಉತ್ತಮ ಉದಾಹರಣೆಯಾಗಿದೆ. 10-15 ವರ್ಷಗಳ ಹಿಂದೆ, ಕೆವಾಡಿಯಾ ಇಷ್ಟು ಬದಲಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಇಂದು ಏಕತಾ ನಗರವನ್ನು ಜಾಗತಿಕ ಹಸಿರು ನಗರವೆಂದು ಗುರುತಿಸಲಾಗುತ್ತಿದೆ. ವಿಶ್ವಾದ್ಯಂತ ದೇಶಗಳ ಗಮನ ಸೆಳೆದ 'ಮಿಷನ್ ಲೈಫ್' ಆರಂಭವಾದ ನಗರವಿದು. ಇಲ್ಲಿಗೆ ಬಂದಾಗಲೆಲ್ಲ ಅದರ ಆಕರ್ಷಣೆ ಮತ್ತಷ್ಟು ಹೆಚ್ಚುತ್ತಿರುವಂತೆ ಕಾಣುತ್ತದೆ. ರಿವರ್ ರಾಫ್ಟಿಂಗ್, ಏಕ್ತಾ ಕ್ರೂಸ್, ಏಕ್ತಾ ನರ್ಸರಿ, ಏಕ್ತಾ ಮಾಲ್, ಆರೋಗ್ಯ ವ್ಯಾನ್, ಕ್ಯಾಕ್ಟಸ್ ಮತ್ತು ಬಟರ್‌ಫ್ಲೈ ಗಾರ್ಡನ್, ಜಂಗಲ್ ಸಫಾರಿ, ಮಿಯಾವಾಕಿ ಫಾರೆಸ್ಟ್, ಮೇಜ್ ಗಾರ್ಡನ್ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕಳೆದ 6 ತಿಂಗಳಲ್ಲೇ ಇಲ್ಲಿ 1.5 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಸೌರ ವಿದ್ಯುತ್ ಉತ್ಪಾದನೆ ಮತ್ತು ಸಿಟಿ ಗ್ಯಾಸ್ ವಿತರಣೆಯಲ್ಲೂ ಏಕ್ತಾ ನಗರ ಮುಂಚೂಣಿಯಲ್ಲಿದೆ.
ಇಂದು ಇಲ್ಲಿ ವಿಶೇಷ ಪಾರಂಪರಿಕ ರೈಲು ಕೂಡ ಸೇರ್ಪಡೆಯಾಗಲಿದೆ, ಇದು ಹೊಸ ಪ್ರವಾಸಿ ಆಕರ್ಷಣೆಯಾಗಿದೆ. ಏಕತಾ ನಗರ ನಿಲ್ದಾಣ ಮತ್ತು ಅಹಮದಾಬಾದ್ ನಡುವೆ ಚಲಿಸುವ ಈ ರೈಲು ನಮ್ಮ ಪರಂಪರೆ ಮತ್ತು ಆಧುನಿಕ ಸೌಲಭ್ಯಗಳ ಒಂದು ನೋಟ ಹೊಂದಿದೆ. ಇದರ ಎಂಜಿನ್‌ಗೆ ಸ್ಟೀಮ್ ಎಂಜಿನ್‌ನ ನೋಟವನ್ನು ನೀಡಲಾಗಿದೆ, ಆದರೆ ಇದು ವಿದ್ಯುತ್‌ನಿಂದ ಚಲಿಸುತ್ತದೆ. ಏಕತಾ ನಗರದಲ್ಲಿ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು ಇಲ್ಲಿ ಪ್ರವಾಸಿಗರು ಇ-ಬಸ್, ಇ-ಗಾಲ್ಫ್ ಕಾರ್ಟ್ ಮತ್ತು ಇ-ಸೈಕಲ್ ಜೊತೆಗೆ ಸಾರ್ವಜನಿಕ ಬೈಕ್ ಹಂಚಿಕೆ ವ್ಯವಸ್ಥೆಯ ಸೌಲಭ್ಯವನ್ನೂ ಪಡೆಯಲಿದ್ದಾರೆ. ಕಳೆದ 5 ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬಂದಿದ್ದಾರೆ, ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿರುವ ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಇದರಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಅವರು ಹೊಸ ಆದಾಯದ ಮೂಲಗಳನ್ನು ಸಹ ಪಡೆಯುತ್ತಿದ್ದಾರೆ.
ಸ್ನೇಹಿತರೆ,
ಇಂದು ಇಡೀ ಜಗತ್ತು ಭಾರತದ ಸಂಕಲ್ಪದ ಶಕ್ತಿ, ಭಾರತೀಯರ ಶೌರ್ಯ ಮತ್ತು ಶಕ್ತಿ ಮತ್ತು ಜೀವನವನ್ನು ಪೂರ್ಣವಾಗಿ ಬದುಕುವ ನಮ್ಮ ಇಚ್ಛೆಯನ್ನು ಅಪಾರ ಗೌರವ ಮತ್ತು ನಂಬಿಕೆಯಿಂದ ನೋಡುತ್ತಿದೆ. ಭಾರತದ ನಂಬಲಾಗದ ಮತ್ತು ಸರಿಸಾಟಿಯಿಲ್ಲದ ಪ್ರಯಾಣವು ಇಂದು ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನಾವು ಕೆಲವು ವಿಷಯಗಳನ್ನು ಎಂದಿಗೂ ಮರೆಯಬಾರದು, ನಾವು ಯಾವಾಗಲೂ ಅವರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ರಾಷ್ಟ್ರೀಯ ಏಕತಾ ದಿವಸ್‌ನಲ್ಲಿ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ದೇಶವಾಸಿಗಳಿಗೂ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಂದು ಇಡೀ ಪ್ರಪಂಚದಲ್ಲಿ ಪ್ರಕ್ಷುಬ್ಧತೆಯಿದೆ. ಕೊರೊನಾ ನಂತರ ಹಲವು ದೇಶಗಳ ಆರ್ಥಿಕತೆ ಕುಸಿದಿದೆ. ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಅನೇಕ ದೇಶಗಳು ಇಂದು 30-40 ವರ್ಷಗಳಲ್ಲಿ ಅತಿ ಹೆಚ್ಚು ಹಣದುಬ್ಬರ ಎದುರಿಸುತ್ತಿವೆ. ಆ ದೇಶಗಳಲ್ಲಿ ನಿರುದ್ಯೋಗ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಭಾರತ ವಿಶ್ವದಲ್ಲಿ ತನ್ನ ಪತಾಕೆಯನ್ನು ಹಾರಿಸುತ್ತಿದೆ. ಒಂದರ ಹಿಂದೆ ಒಂದರಂತೆ ಸವಾಲುಗಳನ್ನು ಮೆಟ್ಟಿ ನಿಂತು ನಾವು ನಿರಂತರವಾಗಿ ಮುನ್ನಡೆಯುತ್ತಿದ್ದೇವೆ. ನಾವು ಹೊಸ ದಾಖಲೆಗಳನ್ನು ನಿರ್ಮಿಸಿದ್ದೇವೆ, ನಾವು ಹೊಸ ಮಾನದಂಡಗಳನ್ನು ಸಹ ರೂಪಿಸಿದ್ದೇವೆ. ಇಂದು ಕಳೆದ 9 ವರ್ಷಗಳಲ್ಲಿ ದೇಶವು ಮುನ್ನಡೆದ ನೀತಿಗಳು ಮತ್ತು ನಿರ್ಧಾರಗಳ ಪರಿಣಾಮವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನುಭವಿಸುತ್ತಿದೆ. ಭಾರತದಲ್ಲಿ ಬಡತನ ಕಡಿಮೆಯಾಗುತ್ತಿದೆ. 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ದೇಶದಿಂದ ಬಡತನ ತೊಲಗಿಸಬಹುದು ಎಂಬ ವಿಶ್ವಾಸ ನಮಗಿದೆ. ನಾವು ಈ ದಿಕ್ಕಿನಲ್ಲಿ ಮುಂದುವರಿಯಬೇಕು. ಆದ್ದರಿಂದ ಈ ಅವಧಿಯು ಪ್ರತಿಯೊಬ್ಬ ಭಾರತೀಯನಿಗೆ ಬಹಳ ನಿರ್ಣಾಯಕವಾಗಿದೆ. ದೇಶದ ಸ್ಥಿರತೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೂ ಮಾಡಬಾರದು. ನಾವು ನಮ್ಮ ಹೆಜ್ಜೆಗಳಿಂದ ವಿಮುಖರಾದರೆ, ನಾವು ನಮ್ಮ ಗುರಿಯಿಂದಲೂ ವಿಮುಖರಾಗುತ್ತೇವೆ. 140 ಕೋಟಿ ಭಾರತೀಯರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಶ್ರಮ ಎಂದಿಗೂ ವ್ಯರ್ಥವಾಗಬಾರದು. ನಾವು ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ನಮ್ಮ ನಿರ್ಣಯಗಳಿಗೆ ಅಂಟಿಕೊಳ್ಳಬೇಕು.
ನನ್ನ ದೇಶವಾಸಿಗಳೆ,
ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅವರು ದೇಶದ ಆಂತರಿಕ ಭದ್ರತೆಯ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದರು. ಆತ ಉಕ್ಕಿನ ಮನುಷ್ಯ. ಕಳೆದ 9 ವರ್ಷಗಳಿಂದ ದೇಶದ ಆಂತರಿಕ ಭದ್ರತೆಗೆ ಹಲವು ರಂಗಗಳಿಂದ ಸವಾಲು ಎದುರಾಗಿದೆ. ಆದರೆ ನಮ್ಮ ಸಶಸ್ತ್ರ ಪಡೆಗಳ ಕಠಿಣ ಪರಿಶ್ರಮದಿಂದಾಗಿ, ದೇಶದ ಶತ್ರುಗಳು ಮೊದಲಿನಂತೆ ತಮ್ಮ ಯೋಜನೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ಜನಸಂದಣಿ ಇರುವ ಸ್ಥಳಗಳಿಗೆ ಹೋಗಲು ಜನರು ಹೆದರುತ್ತಿದ್ದ ಆ ಅವಧಿಯನ್ನು ಜನರು ಇನ್ನೂ ಮರೆತಿಲ್ಲ. ಹಬ್ಬದ ಜನಸಂದಣಿ, ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳು, ಆರ್ಥಿಕ ಚಟುವಟಿಕೆಗಳ ಎಲ್ಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದೇಶದ ಅಭಿವೃದ್ಧಿ ತಡೆಯುವ ಷಡ್ಯಂತ್ರ ನಡೆದಿತ್ತು. ಸ್ಫೋಟದ ನಂತರ ವಿನಾಶ, ಬಾಂಬ್ ಸ್ಫೋಟದಿಂದ ಉಂಟಾದ ವಿನಾಶವನ್ನು ಜನರು ನೋಡಿದ್ದಾರೆ. ಆ ನಂತರ ತನಿಖೆಯ ಹೆಸರಿನಲ್ಲಿ ಅಂದಿನ ಸರಕಾರಗಳ ನಿರ್ಲಕ್ಷ್ಯವೂ ಕಂಡುಬಂದಿದೆ. ದೇಶವು ಆ ಯುಗಕ್ಕೆ ಮರಳಲು ನೀವು ಅವಕಾಶ ಕೊಡಬಾರದು. ನಿಮ್ಮ ಎಲ್ಲಾ ಶಕ್ತಿಯಿಂದ ನೀವು ಅದನ್ನು ನಿಲ್ಲಿಸಬೇಕು. ನಾವೆಲ್ಲರೂ ದೇಶವಾಸಿಗಳು ಅದನ್ನು ತಿಳಿದಿರಬೇಕು, ಗುರುತಿಸಬೇಕು, ಅರ್ಥ ಮಾಡಿಕೊಳ್ಳಬೇಕು ಮತ್ತು ದೇಶದ ಏಕತೆಗೆ ಆಕ್ರಮಣ ಮಾಡುವವರ ಬಗ್ಗೆ ಜಾಗರೂಕರಾಗಿರಬೇಕು.
ಸ್ನೇಹಿತರೆ,
ನಮ್ಮ ಅಭಿವೃದ್ಧಿ ಪಯಣದಲ್ಲಿ ರಾಷ್ಟ್ರೀಯ ಏಕತೆಯ ದಾರಿಯಲ್ಲಿ ಬಹುದೊಡ್ಡ ಅಡಚಣೆ ಎಂದರೆ ತುಷ್ಟೀಕರಣದ ರಾಜಕಾರಣ. ಶಮನಕಾರರು ಭಯೋತ್ಪಾದನೆ, ಅದರ ಭೀಕರತೆ ಮತ್ತು ಅದರ ದೈತ್ಯತನವನ್ನು ಎಂದಿಗೂ ನೋಡುವುದಿಲ್ಲ ಎಂಬುದಕ್ಕೆ ಭಾರತದಲ್ಲಿ ಕಳೆದ ಹಲವಾರು ದಶಕಗಳು ಸಾಕ್ಷಿಯಾಗಿದೆ. ಮಾನವತೆಯ ವೈರಿಗಳ ಜತೆ ನಿಲ್ಲಲು ಶಮನಕಾರರು ಹಿಂಜರಿಯುವುದಿಲ್ಲ. ಅವರು ಭಯೋತ್ಪಾದಕ ಚಟುವಟಿಕೆಗಳ ತನಿಖೆಯನ್ನು ನಿರ್ಲಕ್ಷಿಸುತ್ತಾರೆ, ದೇಶ ವಿರೋಧಿ ವಿಚಾರಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಾರೆ. ಈ ತುಷ್ಟೀಕರಣದ ನೀತಿ ಎಷ್ಟು ಅಪಾಯಕಾರಿ ಎಂದರೆ ಈ ಜನರು ಭಯೋತ್ಪಾದಕರನ್ನು ರಕ್ಷಿಸಲು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇಂತಹ ಮನಸ್ಥಿತಿ ಯಾವುದೇ ಸಮಾಜಕ್ಕೆ ಪ್ರಯೋಜನವಾಗಲಾರದು. ಇದರಿಂದ ಯಾವ ದೇಶಕ್ಕೂ ಪ್ರಯೋಜನವಾಗುವುದಿಲ್ಲ. ಏಕತೆಗೆ ಧಕ್ಕೆ ತರುವ ಇಂತಹ ಚಿಂತನೆಯಿಂದ ದೇಶದ ಮೂಲೆ ಮೂಲೆಯಲ್ಲಿ ಪ್ರತಿಯೊಬ್ಬ ದೇಶವಾಸಿಯೂ ಪ್ರತಿ ಕ್ಷಣ, ಎಲ್ಲ ಕಾಲದಲ್ಲೂ ಜಾಗರೂಕರಾಗಿರಬೇಕು.
ನನ್ನ ಪ್ರೀತಿಯ ದೇಶವಾಸಿಗಳೆ,
ಇದೀಗ ದೇಶದಲ್ಲಿ ಚುನಾವಣೆಯ ವಾತಾವರಣ ನಿರ್ಮಾಣವಾಗಿದೆ. ಕೆಲವು ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿದೆ. ರಾಜಕೀಯವನ್ನು ಯಾವುದೇ ಸಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ಯಾವುದೇ ವಿಧಾನಗಳನ್ನು ನೋಡದ ದೊಡ್ಡ ರಾಜಕೀಯ ಬಣ ದೇಶದಲ್ಲಿದೆ ಎಂಬುದನ್ನು ನೀವು ಗಮನಿಸಿರಬೇಕು. ದುರದೃಷ್ಟವಶಾತ್, ಈ ರಾಜಕೀಯ ಬಣವು ಸಮಾಜ ಮತ್ತು ದೇಶಕ್ಕೆ ವಿರೋಧಿ ತಂತ್ರಗಳನ್ನು ಅನುಸರಿಸುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ದೇಶದ ಏಕತೆಯನ್ನು ಒಡೆಯಲೂ ಈ ಬಣ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಸ್ವಹಿತಾಸಕ್ತಿಯೇ ಪ್ರಧಾನ. ಆದ್ದರಿಂದ, ಈ ಸವಾಲುಗಳ ನಡುವೆ, ನೀವು ನನ್ನ ದೇಶವಾಸಿಗಳು, ಸಾರ್ವಜನಿಕರು, ನಿಮ್ಮ ಪಾತ್ರವು ಬಹಳ ಮಹತ್ವದ್ದಾಗಿದೆ. ಈ ಜನರು ದೇಶದ ಏಕತೆಗೆ ಧಕ್ಕೆ ತರುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಬಯಸುತ್ತಾರೆ. ಈ ವಿಷಯಗಳ ಬಗ್ಗೆ ದೇಶವು ಜಾಗೃತರಾಗಿದ್ದರೆ ಮಾತ್ರ ತನ್ನ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು, ನಮ್ಮ ಪ್ರಯತ್ನದಿಂದ ದೇಶದ ಏಕತೆ ಕಾಪಾಡಿಕೊಳ್ಳಲು ನಾವು ಒಂದೇ ಒಂದು ಅವಕಾಶವನ್ನು ಬಿಡಲು ಸಾಧ್ಯವಿಲ್ಲ. ನಾವು ಒಂದೇ ಒಂದು ಹೆಜ್ಜೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಏಕತೆಯ ಮಂತ್ರದೊಂದಿಗೆ ನಾವು ನಿರಂತರವಾಗಿ ಬದುಕಬೇಕು. ಈ ಏಕತೆಯನ್ನು ಕಾಪಾಡಿಕೊಳ್ಳಲು ನಾವು ನಿರಂತರವಾಗಿ ನಮ್ಮ ಕೊಡುಗೆಯನ್ನು ನೀಡಬೇಕಾಗಿದೆ. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ನಮ್ಮ 100 ಪ್ರತಿಶತ ಕೊಡುಗೆಯನ್ನು ನಾವು ನೀಡಬೇಕು. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನೀಡಲು ಇದು ಏಕೈಕ ಉತ್ತಮ ಮಾರ್ಗವಾಗಿದೆ ಮತ್ತು ಸರ್ದಾರ್ ಸಾಹೇಬರು ನಮ್ಮೆಲ್ಲರಿಂದ ಇದನ್ನೇ ನಿರೀಕ್ಷಿಸುತ್ತಾರೆ.
ಸ್ನೇಹಿತರೆ,
MyGovನಲ್ಲಿ ಇಂದಿನಿಂದ ಸರ್ದಾರ್ ಸಾಹೇಬರಿಗೆ ಸಂಬಂಧಿಸಿದ ರಾಷ್ಟ್ರೀಯ ಸ್ಪರ್ಧೆಯೂ ಆರಂಭವಾಗಿದೆ. ಸರ್ದಾರ್ ಸಾಹೇಬ್ ರಸಪ್ರಶ್ನೆ ಮೂಲಕ, ದೇಶದ ಯುವಕರು ಅವರನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ ಪಡೆಯಲಿದ್ದಾರೆ.
ನನ್ನ ಕುಟುಂಬ ಸದಸ್ಯರೆ,
ಇಂದಿನ ಭಾರತವೇ ನವ ಭಾರತ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಆತ್ಮವಿಶ್ವಾಸದಿಂದ ತುಂಬಿದ್ದಾನೆ. ಈ ವಿಶ್ವಾಸವು ಮುಂದುವರಿಯುತ್ತದೆ ಮತ್ತು ದೇಶವು ಬೆಳೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈ ಚೈತನ್ಯ ನಮ್ಮಲ್ಲಿ ಉಳಿಯಲಿ. ಈ ಭವ್ಯತೆ ಉಳಿಯಲಿ! ಇದರೊಂದಿಗೆ, 140 ಕೋಟಿ ದೇಶವಾಸಿಗಳ ಪರವಾಗಿ ನಾನು ಮತ್ತೊಮ್ಮೆ ಗೌರವಾನ್ವಿತ ಸರ್ದಾರ್ ಪಟೇಲ್ ಅವರಿಗೆ ವಿನಮ್ರ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಾವೆಲ್ಲರೂ ಈ ಏಕತೆಯ ರಾಷ್ಟ್ರೀಯ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸೋಣ. ಜೀವನದಲ್ಲಿ ಏಕತೆಯ ಮಂತ್ರದಿಂದ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಜೀವನದ ಪ್ರತಿ ಕ್ಷಣವನ್ನು ಏಕತೆಗೆ ಮೀಸಲಿಡಿ. ಈ ಹಾರೈಕೆಯೊಂದಿಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದನೆಗಳು!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ತುಂಬು ಧನ್ಯವಾದಗಳು.
*********
(Release ID: 1974022)
Visitor Counter : 171
Read this release in:
Assamese
,
English
,
Urdu
,
Hindi
,
Marathi
,
Manipuri
,
Punjabi
,
Gujarati
,
Odia
,
Tamil
,
Malayalam