ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತಿನ ಮೆಹ್ಸಾನಾದಲ್ಲಿ ಸುಮಾರು 5800 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು


"ಅಕ್ಟೋಬರ್ 30 ಮತ್ತು 31 ಎಲ್ಲರಿಗೂ ಅಸಾಧಾರಣ ಸ್ಫೂರ್ತಿಯ ಮೂಲಗಳು, ಏಕೆಂದರೆ ಮೊದಲನೆಯದು ಗೋವಿಂದ ಗುರು ಅವರ ಪುಣ್ಯತಿಥಿ ಮತ್ತು ಎರಡನೆಯದು ಸರ್ದಾರ್ ಪಟೇಲ್ ಅವರ ಜನ್ಮದಿನವಾಗಿದೆ"

"ಭಾರತದ ಅಭಿವೃದ್ಧಿಯ ಕಥೆಯು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ"

"ಮೋದಿ ಯಾವುದೇ ನಿರ್ಣಯ ತೆಗೆದುಕೊಂಡರೂ ಅದನ್ನು ಅವರು ಈಡೇರಿಸುತ್ತಾರೆ"

"ನೀರಾವರಿ ಯೋಜನೆಗಳಿಂದಾಗಿ ಉತ್ತರ ಗುಜರಾತಿನಲ್ಲಿ ನೀರಾವರಿಯ ವ್ಯಾಪ್ತಿ 20-22 ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಾಗಿದೆ"

"ಗುಜರಾತಿನಲ್ಲಿ ಆರಂಭವಾದ ಜಲ ಸಂರಕ್ಷಣಾ ಯೋಜನೆ ಈಗ ದೇಶದಲ್ಲಿ ಜಲ ಜೀವನ್ ಮಿಷನ್ ರೂಪವನ್ನು ಪಡೆದುಕೊಂಡಿದೆ"

"ಉತ್ತರ ಗುಜರಾತಿನಲ್ಲಿ 800 ಕ್ಕೂ ಹೆಚ್ಚು ಹೊಸ ಗ್ರಾಮ ಡೈರಿ ಸಹಕಾರ ಸಂಘಗಳನ್ನು ರಚಿಸಲಾಗಿದೆ"

"ಅಭಿವೃದ್ಧಿಯೊಂದಿಗೆ ನಮ್ಮ ಪರಂಪರೆಯನ್ನು ಜೋಡಿಸುವ ಅಭೂತಪೂರ್ವ ಕೆಲಸವನ್ನು ಇಂದು ದೇಶದಲ್ಲಿ ಮಾಡಲಾಗುತ್ತಿದೆ"

Posted On: 30 OCT 2023 3:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಮೆಹ್ಸಾನಾದಲ್ಲಿ ಸುಮಾರು 5800 ಕೋಟಿ ರೂಪಾಯಿಗಳ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು ರೈಲು, ರಸ್ತೆ, ಕುಡಿಯುವ ನೀರು ಮತ್ತು ನೀರಾವರಿಯಂತಹ ಬಹು ವಲಯಗಳನ್ನು ಒಳಗೊಂಡಿವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಕ್ಟೋಬರ್ 30 ಮತ್ತು 31 ದಿನಾಂಕಗಳು ಪ್ರತಿಯೊಬ್ಬರಿಗೂ ಅಸಾಧಾರಣ ಸ್ಫೂರ್ತಿಯ ಮೂಲವಾಗಿವೆ, ಏಕೆಂದರೆ ಮೊದಲನೆಯದು ಗೋವಿಂದ ಗುರು ಅವರ ಪುಣ್ಯತಿಥಿ ಮತ್ತು ಎರಡನೆಯದು ಸರ್ದಾರ್ ಪಟೇಲ್ ಅವರ ಜನ್ಮದಿನವಾಗಿದೆ. "ನಮ್ಮ ಪೀಳಿಗೆಯು ವಿಶ್ವದಲ್ಲೇ ಅತಿ ದೊಡ್ಡ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಸರ್ದಾರ್ ಸಾಹೇಬ್ ಅವರಿಗೆ ಗೌರವವನ್ನು ಸಲ್ಲಿಸಿದೆ" ಎಂದು ಶ್ರೀ ಮೋದಿ ಹೇಳಿದರು. ಗೋವಿಂದ ಗುರುಗಳ ಜೀವನವು ಭಾರತದ ಸ್ವಾತಂತ್ರ್ಯದಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಮತ್ತು ತ್ಯಾಗದ ಸಂಕೇತವಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ಮಂಗರ್ ಧಾಮದ ಮಹತ್ವವನ್ನು ರಾಷ್ಟ್ರ ಮಟ್ಟದಲ್ಲಿ ಸ್ಥಾಪಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಕಾರ್ದಯಕ್ರಮಕ್ಕೂ ಮೊದಲು ಅಂಬಾಜಿ ಮಂದಿರದಲ್ಲಿ ದರ್ಶನ ಪಡೆದ ಮತ್ತು ಪೂಜೆಯನ್ನು ನೆರವೇರಿಸಿದ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು ಮತ್ತು ಅಂಬಾಜಿ ದೇವಿಯ ಆಶೀರ್ವಾದವನ್ನು ಪಡೆಯುವ ಅವಕಾಶವನ್ನು ಪಡೆದಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಗಬ್ಬರ್ ಪರ್ವತವನ್ನು ಅಭಿವೃದ್ಧಿಪಡಿಸಿ ಅದರ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಅಂಬೆಯ ಆಶೀರ್ವಾದದಿಂದ ಸುಮಾರು 6000 ಕೋಟಿ ರೂಪಾಯಿಗಳ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗಿದೆ ಎಂದು ಹೇಳಿದರು. ಈ ಯೋಜನೆಗಳು ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತವೆ ಮತ್ತು ಈ ಭಾಗದ ರೈತರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಅವರು ಹೇಳಿದರು. ಮೆಹ್ಸಾನಾ, ಪಟಾನ್, ಬನಸ್ಕಾಂತ, ಸಬರ್ಕಾಂತ, ಮಹಿಸಾಗರ್, ಅಹಮದಾಬಾದ್ ಮತ್ತು ಗಾಂಧಿನಗರದ ಸುತ್ತಮುತ್ತಲಿನ ಜಿಲ್ಲೆಗಳು ಈ ಯೋಜನೆಗಳ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು. ಇಂದಿನ ಯೋಜನೆಗಳಿಗಾಗಿ ಅವರು ಗುಜರಾತ್ ಜನತೆಯನ್ನು ಅಭಿನಂದಿಸಿದರು.

"ಭಾರತದ ಅಭಿವೃದ್ಧಿಯ ಕಥೆಯು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನದ ಲ್ಯಾಂಡಿಂಗ್ ಮತ್ತು ಯಶಸ್ವಿ ಜಿ20 ಅಧ್ಯಕ್ಷತೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಸಂಕಲ್ಪಕ್ಕೆ ಹೊಸ ಅರ್ಥ ಬಂದಿರುವುದನ್ನು ಪ್ರಸ್ತಾಪಿಸಿದ ಅವರು, ಭಾರತದ ಸ್ಥಾನಮಾನದ ಏರಿಕೆಯ ಶ್ರೇಯಸ್ಸು ಜನರ ಶಕ್ತಿಗೆ ಸಲ್ಲಬೇಕು ಎಂದರು. ಪ್ರಧಾನಿಯವರು ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಎತ್ತಿ ತೋರಿಸಿದರು ಮತ್ತು ನೀರಿನ ಸಂರಕ್ಷಣೆ, ನೀರಾವರಿ ಮತ್ತು ಕುಡಿಯುವ ನೀರಿನ ಕ್ರಮಗಳನ್ನು ಪ್ರಸ್ತಾಪಿಸಿದರು. ರಸ್ತೆಗಳಾಗಲೀ, ರೈಲು ಅಥವಾ ವಿಮಾನ ನಿಲ್ದಾಣಗಳಾಗಲೀ ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಹೂಡಿಕೆಯಾಗುತ್ತಿದೆ. ಇದರಿಂದಾಗಿ ಭಾರತದಲ್ಲಿ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಇಂದು ದೇಶದ ಉಳಿದ ಭಾಗಗಳು ಕಾಣುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಗುಜರಾತಿನ ಜನರು ಈಗಾಗಲೇ ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. "ಮೋದಿ ಯಾವುದೇ ನಿರ್ಣಯ ತೆಗೆದುಕೊಂಡರೂ ಅದನ್ನು ಅವರು ಈಡೇರಿಸುತ್ತಾರೆ" ಎಂದು ಪ್ರಧಾನಿ ಹೇಳಿದರು. ಗುಜರಾತ್ ಜನತೆಯಿಂದ ಆಯ್ಕೆಯಾದ ಸ್ಥಿರ ಸರಕಾರಕ್ಕೆ ಕ್ಷಿಪ್ರ ಅಭಿವೃದ್ಧಿಯ ಶ್ರೇಯಸ್ಸು ಸಲ್ಲುತ್ತದೆ ಎಂದ ಅವರು, ಉತ್ತರ ಗುಜರಾತ್ ಸೇರಿದಂತೆ ಇಡೀ ರಾಜ್ಯಕ್ಕೆ ಇದರಿಂದ ಲಾಭವಾಗಿದೆ ಎಂದರು.

ಇಡೀ ಉತ್ತರ ಗುಜರಾತ್ ಪ್ರದೇಶದಲ್ಲಿ ಕುಡಿಯಲು ಮತ್ತು ನೀರಾವರಿಗೆ ನೀರಿನ ಕೊರತೆಯಿಂದ ಜೀವನವು ಕಷ್ಟಕರವಾಗಿದ್ದ ಮತ್ತು ಹೈನುಗಾರಿಕೆಯು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದ  ಸಮಯವನ್ನು ನೆನಪಿಸಿಕೊಂಡ ಪ್ರಧಾನಿ, ರೈತರು ವರ್ಷಕ್ಕೆ ಒಂದು ಬೆಳೆಯನ್ನು ಮಾತ್ರ ಬೆಳೆಯಲು ಸಾಧ್ಯವಾಗುತ್ತಿತ್ತು ಎಂದು ತಿಳಿಸಿದರು. ಈ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ಮಾಡಿದ ಕೆಲಸವನ್ನು ಪ್ರಧಾನಿ ಎತ್ತಿ ತೋರಿಸಿದರು ಮತ್ತು ಇಲ್ಲಿ ನೀರು ಸರಬರಾಜು ಮತ್ತು ನೀರಾವರಿಗಾಗಿ ಮಾಡಿದ ಕೆಲಸವನ್ನು ಪ್ರಸ್ತಾಪಿಸಿದರು. ನಾವು ಉತ್ತರ ಗುಜರಾತಿನ ಕೃಷಿ ಕ್ಷೇತ್ರ ಮತ್ತು ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದೇವೆ ಎಂದು ಅವರು ಒತ್ತಿ ಹೇಳಿದರು. ಉತ್ತರ ಗುಜರಾತಿನ ಜನರಿಗೆ ಸಾಧ್ಯವಾದಷ್ಟು ಹೊಸ ಆದಾಯದ ಮಾರ್ಗಗಳನ್ನು ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದರು. ಗುಜರಾತಿನ ಅಭಿವೃದ್ಧಿಗಾಗಿ ನರ್ಮದಾ ಮತ್ತು ಮಾಹಿ ನದಿಗಳ ನೀರನ್ನು ಬಳಸಿಕೊಳ್ಳುವ ಸುಜಲಾಂ-ಸುಫಲಾಂ ಯೋಜನೆಯನ್ನು ಅವರು ಪ್ರಸ್ತಾಪಿಸಿದರು. ಗರಿಷ್ಠ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಸಬರಮತಿಯಲ್ಲಿ 6 ಬ್ಯಾರೇಜ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶ್ರೀ ಮೋದಿ ತಿಳಿಸಿದರು. ಈ ಬ್ಯಾರೇಜ್‌ ಗಳಲ್ಲಿ ಒಂದನ್ನು ಇಂದು ಉದ್ಘಾಟಿಸಲಾಗಿದೆ. ನಮ್ಮ ರೈತರು ಮತ್ತು ಹತ್ತಾರು ಹಳ್ಳಿಗಳು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು.

ಈ ನೀರಾವರಿ ಯೋಜನೆಗಳಿಂದಾಗಿ ಉತ್ತರ ಗುಜರಾತಿನಲ್ಲಿ 20-22 ವರ್ಷಗಳಲ್ಲಿ ನೀರಾವರಿಯ ವ್ಯಾಪ್ತಿ ಹಲವು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸರ್ಕಾರವು ಒದಗಿಸಿದ ಸಣ್ಣ ನೀರಾವರಿಯ ಹೊಸ ತಂತ್ರಜ್ಞಾನವನ್ನು ಉತ್ತರ ಗುಜರಾತಿನ ರೈತರು ತಕ್ಷಣವೇ ಅಳವಡಿಸಿಕೊಂಡಿದ್ದಾರೆ ಮತ್ತು ಬನಸ್ಕಾಂತದಲ್ಲಿ 70 ಪ್ರತಿಶತ ಪ್ರದೇಶವು ಹೊಸ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ರೈತರು ಈಗ ಗೋಧಿ, ಹರಳು, ನೆಲಗಡಲೆ ಮತ್ತು ಬೇಳೆ ಹಾಗೂ ಫೆನ್ನೆಲ್, ಜೀರಿಗೆ ಮತ್ತು ಇತರ ಅನೇಕ ಮಸಾಲೆ ಬೆಳೆಗಳನ್ನು ಬೆಳೆಯಬಹುದು. ದೇಶದ ಶೇಕಡಾ 90 ರಷ್ಟು ಇಸಾಬ್‌ ಗೋಲ್ ಅನ್ನು ಗುಜರಾತಿನಲ್ಲಿ ಸಂಸ್ಕರಿಸಲಾಗುತ್ತಿದ್ದು, ಅದಕ್ಕೆ ವಿಶಿಷ್ಟವಾದ ಗುರುತನ್ನು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಹೆಚ್ಚುತ್ತಿರುವ ಕೃಷಿ ಉತ್ಪನ್ನಗಳನ್ನು ಪ್ರಸ್ತಾಪಿಸಿದ ಅವರು ಆಲೂಗಡ್ಡೆ, ಕ್ಯಾರೆಟ್, ಮಾವು, ಆಮ್ಲಾ, ದಾಳಿಂಬೆ, ಪೇರಲ ಮತ್ತು ನಿಂಬೆಯನ್ನು ಉಲ್ಲೇಖಿಸಿದರು. ಡೀಸಾವನ್ನು ಆಲೂಗೆಡ್ಡೆಯ ಸಾವಯವ ಕೃಷಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಹ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಬನಸ್ಕಾಂತದಲ್ಲಿ ಆಲೂಗಡ್ಡೆ ಸಂಸ್ಕರಣೆಗಾಗಿ ಬೃಹತ್ ಸ್ಥಾವರವನ್ನು ಸ್ಥಾಪಿಸುವ ಬಗ್ಗೆಯೂ ಶ್ರೀ ಮೋದಿ ಉಲ್ಲೇಖಿಸಿದರು. ಮೆಹ್ಸಾನಾದಲ್ಲಿ ನಿರ್ಮಿಸಿರುವ ಆಗ್ರೋ ಫುಡ್ ಪಾರ್ಕ್ ಅನ್ನು ಪ್ರಸ್ತಾಪಿಸಿದ ಅವರು, ಬನಸ್ಕಾಂತದಲ್ಲಿ ಇದೇ ರೀತಿಯ ಮೆಗಾ ಫುಡ್ ಪಾರ್ಕ್ ನಿರ್ಮಿಸಲು ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರತಿ ಮನೆಗೆ ನೀರು ಒದಗಿಸುವ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಗುಜರಾತಿನಲ್ಲಿ ಪ್ರಾರಂಭವಾದ ಜಲ ಸಂರಕ್ಷಣಾ ಯೋಜನೆಯು ಈಗ ದೇಶದಲ್ಲಿ ಜಲ ಜೀವನ್ ಮಿಷನ್‌  ರೂಪವನ್ನು ಪಡೆದುಕೊಂಡಿದೆ ಎಂದರು. ಗುಜರಾತಿನಲ್ಲಿರುವಂತೆ ಹರ್ ಘರ್ ಜಲ್ ಅಭಿಯಾನವು ದೇಶದ ಕೋಟ್ಯಂತರ ಜನರ ಜೀವನವನ್ನು ಬದಲಾಯಿಸುತ್ತಿದೆ ಎಂದು ಅವರು ಹೇಳಿದರು.

ಪಶುಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹಿಳೆಯರೇ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದ ಪ್ರಧಾನಿ ಮೋದಿ, ಉತ್ತರ ಗುಜರಾತಿನಲ್ಲಿ ನೂರಾರು ಹೊಸ ಪಶುವೈದ್ಯಕೀಯ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ, ಇದರಿಂದಾಗಿ ಪ್ರಾಣಿಗಳ ಆರೋಗ್ಯ ಮತ್ತು ಹಾಲು ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದರು. ಕಳೆದ ಎರಡು ದಶಕಗಳಲ್ಲಿ, ಉತ್ತರ ಗುಜರಾತಿನಲ್ಲಿ 800 ಕ್ಕೂ ಹೆಚ್ಚು ಹೊಸ ಗ್ರಾಮ ಡೈರಿ ಸಹಕಾರ ಸಂಘಗಳನ್ನು ರಚಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. “ಅದು ಬನಾಸ್ ಡೈರಿಯಾಗಲಿ, ದೂದ್ ಸಾಗರ್ ಅಥವಾ ಸಬರ್ ಡೈರಿಯಾಗಲಿ ಅವುಗಳನ್ನು ಅಭೂತಪೂರ್ವವಾಗಿ ವಿಸ್ತರಿಸಲಾಗುತ್ತಿದೆ. ಹಾಲಿನ ಹೊರತಾಗಿ, ಇವುಗಳು ರೈತರ ಇತರ ಉತ್ಪನ್ನಗಳಿಗೆ ದೊಡ್ಡ ಸಂಸ್ಕರಣಾ ಕೇಂದ್ರಗಳಾಗಿ ಮಾರ್ಪಡುತ್ತಿವೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ಜಾನುವಾರುಗಳಿಗೆ ಉಚಿತ ಲಸಿಕೆ ಹಾಕುವ ಬೃಹತ್ ಅಭಿಯಾನವನ್ನು ನಡೆಸುತ್ತಿದ್ದು, 15,000 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ. ಈ ಭಾಗದ ಜಾನುವಾರು ಸಾಕಣೆದಾರರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಕರೆಕೊಟ್ಟರು. ಹಸುವಿನ ಸಗಣಿಯಿಂದ ಜೈವಿಕ ಅನಿಲ ಮತ್ತು ಜೈವಿಕ ಸಿ ಎನ್‌ ಜಿ ತಯಾರಿಸಲಾಗುವ ಗೋಬರ್ಧನ್ ಯೋಜನೆಯಡಿ ಅನೇಕ ಘಟಕಗಳನ್ನು ಸ್ಥಾಪಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಉತ್ತರ ಗುಜರಾತಿನಲ್ಲಿ ಆಟೋಮೊಬೈಲ್ ಉದ್ಯಮದ ವಿಸ್ತರಣೆಯ ಕುರಿತು ಮಾತನಾಡಿದ ಶ್ರೀ ಮೋದಿ, ಮಂಡಲ್-ಬೇಚಾರ್ಜಿ ಆಟೋಮೊಬೈಲ್ ಹಬ್‌ ಅಭಿವೃದ್ಧಿಯನ್ನು ಪ್ರಸ್ತಾಪಿಸಿದರು, ಇದು ಉದ್ಯೋಗಾವಕಾಶಗಳು ಮತ್ತು ಜನರಿಗೆ ಆದಾಯವನ್ನು ಹುಟ್ಟುಹಾಕಿದೆ. ಇಲ್ಲಿನ ಕೈಗಾರಿಕೆಗಳ ಆದಾಯವು ಕೇವಲ 10 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಆಹಾರ ಸಂಸ್ಕರಣೆಯ ಹೊರತಾಗಿ, ಮೆಹ್ಸಾನಾದಲ್ಲಿ ಔಷಧೀಯ ಉದ್ಯಮ ಮತ್ತು ಎಂಜಿನಿಯರಿಂಗ್ ಉದ್ಯಮವೂ ಅಭಿವೃದ್ಧಿಗೊಂಡಿದೆ. ಬನಸ್ಕಾಂತ ಮತ್ತು ಸಬರ್ಕಾಂತ ಜಿಲ್ಲೆಗಳಲ್ಲಿ ಸೆರಾಮಿಕ್ ಸಂಬಂಧಿತ ಕೈಗಾರಿಕೆಗಳು ಅಭಿವೃದ್ಧಿಗೊಂಡಿವೆ ಎಂದು ಶ್ರೀ ಮೋದಿ ಹೇಳಿದರು.

5000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಇಂದಿನ ರೈಲ್ವೇ ಯೋಜನೆಗಳ ಬಗ್ಗೆ ಮಾತನಾಡಿದ ನ್ನು ಪ್ರಧಾನಮಂತ್ರಿಯವರು ಮೆಹ್ಸಾನಾ ಮತ್ತು ಅಹಮದಾಬಾದ್ ನಡುವಿನ ಮೀಸಲಾದ ಸರಕು ಸಾಗಣೆ ಕಾರಿಡಾರ್ ಅನ್ನು ಪ್ರಸ್ತಾಪಿಸಿದರು. ಪಿಪಾವವ್, ಪೋರಬಂದರ್ ಮತ್ತು ಜಾಮನಗರದಂತಹ ಪ್ರಮುಖ ಬಂದರುಗಳೊಂದಿಗೆ ಉತ್ತರ ಗುಜರಾತಿನ ಸಂಪರ್ಕವನ್ನು ಇದು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಇದು ಉತ್ತರ ಗುಜರಾತಿನಲ್ಲಿ ಲಾಜಿಸ್ಟಿಕ್ಸ್ ಮತ್ತು ಶೇಖರಣೆ ಸಂಬಂಧಿತ ವಲಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿ ಹಸಿರು ಹೈಡ್ರೋಜನ್ ಮತ್ತು ಸೌರಶಕ್ತಿ ಉತ್ಪಾದನೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಪಟಾನ್ ಮತ್ತು ಬನಸ್ಕಾಂತದಲ್ಲಿನ ಸೌರಶಕ್ತಿ ಪಾರ್ಕ್ ಅನ್ನು ಉಲ್ಲೇಖಿಸಿದರು ಮತ್ತು ಮೊಧೇರಾ 24 ಗಂಟೆಗಳ ಕಾಲ ಸೌರಶಕ್ತಿಯಿಂದ ಚಲಿಸುವ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು. ಇಂದು, ಮೇಲ್ಛಾವಣಿಯ ಸೌರಶಕ್ತಿಗಾಗಿ ಸರ್ಕಾರವು ನಿಮಗೆ ಗರಿಷ್ಠ ಹಣಕಾಸಿನ ನೆರವು ನೀಡುತ್ತಿದೆ. ಪ್ರತಿ ಕುಟುಂಬದ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ಕಳೆದ 9 ವರ್ಷಗಳಲ್ಲಿ, ಸರಿಸುಮಾರು 2,500 ಕಿಮೀ ಪೂರ್ವ ಮತ್ತು ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್‌ ಗಳು ಪೂರ್ಣಗೊಂಡಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು, ಇದರಿಂದಾಗಿ ಪ್ರಯಾಣಿಕರ ರೈಲುಗಳು ಮತ್ತು ಸರಕು ರೈಲುಗಳ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಾಗಿದೆ. ಪಾಲನಪುರದಿಂದ ಹರಿಯಾಣದ ರೇವಾರಿಗೆ ರೈಲುಗಳ ಮೂಲಕ ಹಾಲನ್ನು ಸಾಗಿಸುವ ವ್ಯವಸ್ಥೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಕಟೋಸನ್ ರಸ್ತೆ-ಬೆಚರಾಜಿ ರೈಲು ಮಾರ್ಗ ಮತ್ತು ವಿರಾಮಗಮ್-ಸಮಖಯಾಲಿ ಜೋಡಿಮಾರ್ಗದ ಕೆಲಸವು ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಗುಜರಾತಿನಲ್ಲಿ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು ವಿಶ್ವಪ್ರಸಿದ್ಧ ಕಚ್ ರಾಣ್ ಉತ್ಸವವನ್ನು ಉಲ್ಲೇಖಿಸಿದರು. ಅವರು ಇತ್ತೀಚೆಗೆ ವಿಶ್ವದ ಅತ್ಯುತ್ತಮ ಪ್ರವಾಸಿ ಗ್ರಾಮವೆಂದು ಗುರುತಿಸಲ್ಪಟ್ಟ ಕಚ್‌ ನ ಧೋರ್ಡೊ ಗ್ರಾಮವನ್ನು ಉಲ್ಲೇಖಿಸಿದರು. ಉತ್ತರ ಗುಜರಾತ್ ದೇಶದ ಪ್ರಮುಖ ಪ್ರವಾಸಿ ತಾಣವಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖ ಪ್ರವಾಸಿ ಕೇಂದ್ರವಾಗುತ್ತಿರುವ ನಡಬೆಟ್ ಉದಾಹರಣೆ ನೀಡಿದ ಅವರು, ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಧರೋಯಿ ಬಗ್ಗೆ ಪ್ರಸ್ತಾಪಿಸಿದರು. ಮೆಹ್ಸಾನಾದಲ್ಲಿರುವ ಮೊಧೇರಾ ಸೂರ್ಯ ದೇವಾಲಯ, ನಗರದ ಮಧ್ಯಭಾಗದಲ್ಲಿ ಉರಿಯುತ್ತಿರುವ ಅಖಂಡ ಜ್ಯೋತಿ, ವಡ್ನಗರದ ಕೀರ್ತಿ ತೋರಣ ಮತ್ತು ಇತರ ನಂಬಿಕೆ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಸಹ ಅವರು ಪ್ರಸ್ತಾಪಿಸಿದರು. ಪುರಾತನ ನಾಗರಿಕತೆಯ ಕುರುಹುಗಳನ್ನು ಬಹಿರಂಗಪಡಿಸುವ ಉತ್ಖನನವನ್ನು ಉಲ್ಲೇಖಿಸಿದ ಅವರು ವಡ್ನಗರ ಇಡೀ ಪ್ರಪಂಚದ ಆಕರ್ಷಣೆಯ ಕೇಂದ್ರವಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರವು ಇಲ್ಲಿ 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಹೆರಿಟೇಜ್ ಸರ್ಕ್ಯೂಟ್ ಅಡಿಯಲ್ಲಿ ಅನೇಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದೆ ಎಂದ ಅವರು ರಾಣಿ ಕಿ ಬಾವ್‌ ಉದಾಹರಣೆಯನ್ನು ನೀಡಿದರು, ಇದು ಪ್ರತಿ ವರ್ಷ ಸರಾಸರಿ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದರು. ಅಭಿವೃದ್ಧಿಯೊಂದಿಗೆ ನಮ್ಮ ಪರಂಪರೆಯನ್ನು ಜೋಡಿಸುವ ಅಭೂತಪೂರ್ವ ಕೆಲಸವನ್ನು ಇಂದು ದೇಶದಲ್ಲಿ ಮಾಡಲಾಗುತ್ತಿದೆ. ಇದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಗುಜರಾತ್ ಮುಖ್ಯಮಂತ್ರಿ, ಶ್ರೀ ಭೂಪೇಂದ್ರ ಪಟೇಲ್, ಸಂಸತ್‌ ಸದಸ್ಯ ಶ್ರೀ ಸಿ ಆರ್ ಪಾಟೀಲ್ ಮತ್ತು ಕೇಂದ್ರಸ ರಾಜ್ಯ ಸಚಿವೆ ಶ್ರೀಮತಿ ದರ್ಶನಾ ಜರ್ದೋಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಇಂದು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಾದ ಯೋಜನೆಗಳು: ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್‌ ನ (ಡಬ್ಲ್ಯು‌ ಡಿ ಎಫ್‌ ಸಿ) ನ್ಯೂ ಭಂಡು-ನ್ಯೂ ಸನಂದ್(ಎನ್) ವಿಭಾಗ; ವಿರಂಗಮ್ - ಸಮಖಿಯಾಲಿ ಜೋಡಿ ರೈಲು ಮಾರ್ಗ; ಕಟೋಸನ್ ರಸ್ತೆ- ಬೆಚ್ರಾಜಿ - ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂ ಎಸ್‌ ಐ ಎಲ್ ಸೈಡಿಂಗ್) ರೈಲು ಯೋಜನೆ; ವಿಜಾಪುರ ತಾಲೂಕು ಮತ್ತು ಮೆಹಸಾನ ಮತ್ತು ಗಾಂಧಿನಗರ ಜಿಲ್ಲೆಯ ಮಾನಸ ತಾಲೂಕಿನ ವಿವಿಧ ಗ್ರಾಮದ ಕೆರೆಗಳ ಮರುಪೂರಣ ಯೋಜನೆ; ಮೆಹ್ಸಾನಾ ಜಿಲ್ಲೆಯ ಸಬರಮತಿ ನದಿಯ ಮೇಲೆ ವಲಸಾನ ಬ್ಯಾರೇಜ್; ಪಾಲನಪುರ, ಬನಸ್ಕಾಂತದಲ್ಲಿ ಎರಡು ಕುಡಿಯುವ ನೀರು ಯೋಜನೆಗಳು; ಮತ್ತು ಧರೋಯ್ ಅಣೆಕಟ್ಟು ಆಧಾರಿತ ಪಾಲನಪುರ ಲೈಫ್‌ಲೈನ್ ಯೋಜನೆ - ಹೆಡ್ ವರ್ಕ್ ಮತ್ತು 80 ಎಂ ಎಲ್‌ ಡಿ ಸಾಮರ್ಥ್ಯದ ನೀರು ಸಂಸ್ಕರಣಾ ಘಟಕ.

ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದ ಯೋಜನೆಗಳು: ಖೇರಾಳುವಿನ ವಿವಿಧ ಅಭಿವೃದ್ಧಿ ಯೋಜನೆಗಳು; ಮಹಿಸಾಗರ ಜಿಲ್ಲೆಯ ಸಂತ್ರಂಪುರ ತಾಲೂಕಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಯೋಜನೆ; ನರೋಡಾ - ದೆಹಗಾಮ್ - ಹರ್ಸೋಲ್ - ಧನ್ಸುರಾ, ಸಬರ್ಕಾಂತ ರಸ್ತೆ ಅಗಲೀಕರಣ; ಗಾಂಧಿನಗರ ಜಿಲ್ಲೆಯ ಕಲೋಲ್ ನಗರಪಾಲಿಕಾ ಒಳಚರಂಡಿ ಮತ್ತು ಸೆಪ್ಟೇಜ್ ನಿರ್ವಹಣೆ ಯೋಜನೆ; ಮತ್ತು ಸಿದ್ಧಪುರ (ಪಟಾನ್), ಪಾಲನಪುರ (ಬನಸ್ಕಾಂತ), ಬಯಾದ್ (ಅರವಳ್ಳಿ) ಮತ್ತು ವಡ್ನಾಗರ (ಮೆಹ್ಸಾನಾ) ಗಳಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ ಯೋಜನೆಗಳು.

*****

 

 



(Release ID: 1973098) Visitor Counter : 105