ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ `ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ’ (ಟಿವೈಇಪಿ) ಅಡಿಯಲ್ಲಿ 200 ಬುಡಕಟ್ಟು ಯುವಕರೊಂದಿಗೆ ಸಂವಾದ ನಡೆಸಿದರು
ಇಂದು, ಬುಡಕಟ್ಟು ಸಮುದಾಯದ ಜನರಿಗೆ ಸಾಕಷ್ಟು ಅವಕಾಶಗಳು ಲಭ್ಯವಿವೆ, ಬುಡಕಟ್ಟು ಮಹಿಳೆ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ 200 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ 10 ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲು ನಿರ್ಧರಿಸಿದ್ದಾರೆ
ಎಡಪಂಥೀಯ ತೀವ್ರಗಾಮಿಗಳು ಮತ್ತು ಅವರ ಸಿದ್ಧಾಂತವು ದೇಶದ ಅಭಿವೃದ್ಧಿ ಮತ್ತು ಉಜ್ವಲ ಭವಿಷ್ಯಕ್ಕೆ ವಿರುದ್ಧವಾಗಿದೆ
ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳು, ರಸ್ತೆಗಳು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಬಯಸದವರು ಯುವಕರ ಉಜ್ವಲ ಭವಿಷ್ಯದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ
ಹಿಂಸಾಚಾರವು ಉದ್ಯೋಗಗಳನ್ನು ಒದಗಿಸಲು ಸಾಧ್ಯವಿಲ್ಲ, ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಸೃಷ್ಟಿಗಾಗಿ ಸಮಾಜದ ಮುಖ್ಯವಾಹಿನಿಗೆ ಸೇರುವುದು ಅವಶ್ಯಕ
ದೇಶದಿಂದ ಎಡಪಂಥೀಯ ಉಗ್ರವಾದದ ಕಲ್ಪನೆಯನ್ನು ನಿರ್ಮೂಲನೆ ಮಾಡುವಲ್ಲಿ ಬುಡಕಟ್ಟು ಯುವಕರು ಪ್ರಮುಖ ಪಾತ್ರ ವಹಿಸಬೇಕು
ತಪ್ಪು ಹಾದಿಯಲ್ಲಿ ನಡೆಯದಂತೆ ಅಥವಾ ಇತರರಿಗೆ ಹಾಗೆ ಮಾಡಲು ಅವಕಾಶ ನೀಡದಿರುವುದು ಬುಡಕಟ್ಟು ಯುವಕರ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು
Posted On:
18 OCT 2023 8:02PM by PIB Bengaluru
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ʻಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮʼ(ಟಿವೈಇಪಿ) ಅಡಿಯಲ್ಲಿ 200 ಬುಡಕಟ್ಟು ಯುವಕರೊಂದಿಗೆ ಸಂವಾದ ನಡೆಸಿದರು.
ಬುಡಕಟ್ಟು ಯುವಕರೊಂದಿಗಿನ ಸಂವಾದದ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವರು, ಇಂದು ಬುಡಕಟ್ಟು ಸಮುದಾಯದ ಜನರಿಗೆ ಸಾಕಷ್ಟು ಅವಕಾಶಗಳು ಲಭ್ಯವಿವೆ. ಬುಡಕಟ್ಟು ಮಹಿಳೆ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿರುವುದು ಹೆಮ್ಮೆಯ ವಿಷಯ ಎಂದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ 200 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ 10 ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು.
ಎಡಪಂಥೀಯ ತೀವ್ರಗಾಮಿಗಳು ಮತ್ತು ಅವರ ಸಿದ್ಧಾಂತವು ದೇಶದ ಅಭಿವೃದ್ಧಿ ಮತ್ತು ಉಜ್ವಲ ಭವಿಷ್ಯಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳು, ರಸ್ತೆಗಳು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಬಯಸದವರು ಯುವಕರ ಉಜ್ವಲ ಭವಿಷ್ಯದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು. ಹಿಂಸಾಚಾರವು ಉದ್ಯೋಗಗಳನ್ನು ಒದಗಿಸಲು ಸಾಧ್ಯವಿಲ್ಲ. ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಸೃಷ್ಟಿಗಾಗಿ ಸಮಾಜದ ಮುಖ್ಯವಾಹಿನಿಗೆ ಸೇರುವುದು ಅವಶ್ಯಕ ಎಂದು ಶ್ರೀ ಶಾ ಹೇಳಿದರು. ದೇಶದಿಂದ ಎಡಪಂಥೀಯ ಉಗ್ರವಾದದ ಕಲ್ಪನೆಯನ್ನು ನಿರ್ಮೂಲನೆ ಮಾಡುವಲ್ಲಿ ಬುಡಕಟ್ಟು ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಕರೆ ನೀಡಿದರು. ತಪ್ಪು ಹಾದಿಯಲ್ಲಿ ನಡೆಯದಿರುವುದು ಅಥವಾ ಇತರರಿಗೆ ಹಾಗೆ ಮಾಡಲು ಅವಕಾಶ ನೀಡದಿರುವುದು ಬುಡಕಟ್ಟು ಯುವಕರ ಜವಾಬ್ದಾರಿಯಾಗಿದೆ ಎಂದು ಗೃಹ ಸಚಿವರು ಹೇಳಿದರು.
ಇಂದು ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ ಮತ್ತು ಬುಡಕಟ್ಟು ಜನಾಂಗದವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿವೆ ಎಂದು ಬುಡಕಟ್ಟು ಯುವಕರು ತಮ್ಮ ಮನೆಗೆ ಹಿಂದಿರುಗಿದ ಬಳಿಕ ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಜನಿಸಿದ ಸ್ಥಳವು ಮುಖ್ಯವಲ್ಲ, ಆದರೆ ಒಬ್ಬ ವ್ಯಕ್ತಿಯು ಜೀವನದಲ್ಲಿ ಮಾಡಿದ ಕೆಲಸ ಮುಖ್ಯ ಎಂದು ಅವರು ಹೇಳಿದರು. ಕಠಿಣ ಪರಿಶ್ರಮದಿಂದ ಮಾತ್ರ ಸಂಪತ್ತು, ಜ್ಞಾನ ಮತ್ತು ಗೌರವವನ್ನು ಸಾಧಿಸಬಹುದು ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರವು 2014 ರಿಂದ ಎಡಪಂಥೀಯ ಉಗ್ರವಾದದ ವಿರುದ್ಧ ʻಶೂನ್ಯ ಸಹಿಷ್ಣುತೆʼ ನೀತಿಯನ್ನು ಅಳವಡಿಸಿಕೊಂಡಿದೆ. ಕೇಂದ್ರದ ʻಶೂನ್ಯ ಸಹಿಷ್ಣುತೆʼ ನೀತಿಯ ಪರಿಣಾಮವಾಗಿ, ಕಳೆದ 4 ದಶಕಗಳಲ್ಲೇ ಅತ್ಯಂತ ಕಡಿಮೆ ಮಟ್ಟದ ಹಿಂಸಾಚಾರ ಮತ್ತು ಸಾವುಗಳು 2022ರಲ್ಲಿ ದಾಖಲಾಗಿವೆ. 2005 ರಿಂದ 2014ರ ಅವಧಿಗೆ ಹೋಲಿಸಿದರೆ 2014 ಮತ್ತು 2023ರ ನಡುವೆ ಎಡಪಂಥೀಯ ಉಗ್ರವಾದ ಸಂಬಂಧಿತ ಹಿಂಸಾಚಾರ ಪ್ರಕರಣಗಳು ಶೇ. 52ರಷ್ಟು ಕಡಿಮೆಯಾಗಿವೆ. ಎಡಪಂಥೀಯ ಉಗ್ರವಾದ ಪ್ರಕರಣಗಳಿಂದ ಉಂಟಾದ ಒಟ್ಟು ಸಾವುಗಳ ಪ್ರಮಾಣ ಶೇ.69ರಷ್ಟು, ಭದ್ರತಾ ಪಡೆಗಳ ಸಾವುಗಳ ಪ್ರಮಾಣ ಶೇ.72ರಷ್ಟು ಮತ್ತು ನಾಗರಿಕ ಸಾವುಗಳ ಸಂಖ್ಯೆ ಶೇ.68 ಕ್ಕಿಂತಲೂ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದರು.
ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಸ್ತೆ ನಿರ್ಮಾಣ, ದೂರಸಂಪರ್ಕ, ಆರ್ಥಿಕ ಸೇರ್ಪಡೆ, ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣದಂತಹ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಎಡಪಂಥೀಯ ಉಗ್ರವಾದದಿಂದ ಹೆಚ್ಚು ಬಾಧಿತವಾದ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ʻವಿಶೇಷ ಕೇಂದ್ರ ನೆರವುʼ(ಎಸ್‌ಸಿಎ) ಯೋಜನೆಯಡಿ 14,000ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಿದೆ, ಈ ಯೋಜನೆಗಳಲ್ಲಿ 80% ಕ್ಕೂ ಹೆಚ್ಚು ಪೂರ್ಣಗೊಂಡಿವೆ. ಈ ಯೋಜನೆಯಡಿ ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳಿಗೆ 3,296 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ʻವಿಶೇಷ ಮೂಲಸೌಕರ್ಯ ಯೋಜನೆʼ(ಎಸ್ಐಎಸ್) ಅಡಿಯಲ್ಲಿ, ಭದ್ರವಾದ ಪೊಲೀಸ್ ಠಾಣೆಗಳ ನಿರ್ಮಾಣ, ರಾಜ್ಯ ಗುಪ್ತಚರ ಶಾಖೆಗಳ ಸ್ಥಾಪನೆ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳ ವಿಶೇಷ ಪಡೆಗಳ ಬಲವರ್ಧನೆಗಾಗಿ 992 ಕೋಟಿ ರೂ.ಗಳ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಕೇಂದ್ರ ಸರ್ಕಾರವು ಹಿಂದಿನ ಅವಧಿಗೆ ಹೋಲಿಸಿದರೆ ಭದ್ರತಾ ಸಂಬಂಧಿತ ವೆಚ್ಚವನ್ನು (ಎಸ್ಆರ್‌ಇ) ದ್ವಿಗುಣಗೊಳಿಸಿದೆ ಎಂದು ಅಮಿತ್ ಶಾ ಅವರು ತಿಳಿಸಿದರು.
2005 ರಿಂದ 2014 ರವರೆಗೆ ಹೋಲಿಸಿದರೆ 2014 ರಿಂದ 2023 ರವರೆಗೆ ಎಡಪಂಥೀಯ ಉಗ್ರವಾದದ ಹಿಂಸಾಚಾರ ಪ್ರಕರಣಗಳಲ್ಲಿ ಗಮನಾರ್ಹ ಕುಸಿತವನ್ನು ಸೂಚಿಸುವ ದತ್ತಾಂಶದ ಒಂದು ಇಣುಕು ನೋಟ ಇಲ್ಲಿದೆ:
ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಭದ್ರತಾ ಸಾಧನೆಗಳು
ಸೂಚಕಗಳು
|
ಮೇ 2005 ರಿಂದ ಏಪ್ರಿಲ್ 2014 ರವರೆಗೆ
|
ಮೇ 2014 ರಿಂದ ಏಪ್ರಿಲ್ 2023 ರವರೆಗೆ
|
ಶೇಕಡವಾರು ಕುಸಿತ
|
ಹಿಂಸಾಚಾರದ ಒಟ್ಟು ಘಟನೆಗಳು
|
14,862
|
7128
|
52% ಕುಸಿತ
|
ಎಡಪಂಥೀಯ ಉಗ್ರವಾದ ಸಂಬಂಧಿತ ಸಾವುಗಳು
|
6035
|
1868
|
69% ಕುಸಿತ
|
ಭದ್ರತಾ ಸಿಬ್ಬಂದಿ ಸಾವು
|
1750
|
485
|
72% ಕುಸಿತ
|
ನಾಗರಿಕರ ಸಾವು
|
4285
|
1383
|
68% ಕುಸಿತ
|
ಹಿಂಸಾಚಾರ ವರದಿಯಾದ ಜಿಲ್ಲೆಗಳು
|
96 (2010)
|
45 (2022)
|
53% ಕುಸಿತ
|
ಹಿಂಸಾಚಾರ ವರದಿಯಾದ ಪೊಲೀಸ್ ಠಾಣೆಗಳು
|
465 (2010)
|
176 (2022)
|
62% ಕುಸಿತ
|
ಗೃಹ ವ್ಯವಹಾರಗಳ ಸಚಿವಾಲಯವು ಕಳೆದ 15 ವರ್ಷಗಳಿಂದ ʻಬುಡಕಟ್ಟು ಯುವ ವಿನಿಮಯʼ ಕಾರ್ಯಕ್ರಮವನ್ನು (ಟಿವೈಇಪಿ) ನಡೆಸುತ್ತಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ʻನೆಹರು ಯುವ ಕೇಂದ್ರ ಸಂಘಟನೆʼ(ಎನ್‌ವೈಕೆಎಸ್) ಮೂಲಕ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಎಡಪಂಥೀಯ ಉಗ್ರವಾದದಿಂದ ಹೆಚ್ಚು ಬಾಧಿತವಾದ ಒಳನಾಡಿನ ಬುಡಕಟ್ಟು ಸಮುದಾಯದ ಯುವಕರು ಮತ್ತು ಮಹಿಳೆಯರನ್ನು ದೇಶಾದ್ಯಂತದ ಪ್ರಮುಖ ನಗರಗಳು ಮತ್ತು ಮಹಾನಗರಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳು ಹೀಗಿವೆ:
- ಎಡಪಂಥೀಯ ಉಗ್ರವಾದದಿಂದ ಬಾಧಿತವಾದ ಪ್ರದೇಶಗಳಲ್ಲಿ ಯುವಕರ ಆಕಾಂಕ್ಷೆಗಳನ್ನು ಉತ್ತೇಜಿಸುವುದು.
- ಸಿಪಿಐ ಮಾವೋವಾದಿಗಳು ಸರ್ಕಾರದ ವಿರುದ್ಧ ಹರಡುತ್ತಿರುವ ಅಪಪ್ರಚಾರವನ್ನು ಎದುರಿಸುವುದು.
- ಬುಡಕಟ್ಟು ಪ್ರದೇಶಗಳ ಯುವಕರಿಗೆ ಅಭಿವೃದ್ಧಿ ಚಟುವಟಿಕೆಗಳು ಮತ್ತು ಕೈಗಾರಿಕಾ ಪ್ರಗತಿಯ ಬಗ್ಗೆ ಮಾಹಿತಿ ನೀಡುವುದು ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರನ್ನು ಸಂವೇದನಾಶೀಲಗೊಳಿಸುವುದು.
- ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಈ ಪ್ರದೇಶಗಳಲ್ಲಿ ವಿಶ್ವಾಸವನ್ನು ಆಳಗೊಳಿಸುವುದು.
- ಬುಡಕಟ್ಟು ಸಮುದಾಯದ ಯುವಕರಲ್ಲಿ ಪ್ರಮುಖ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕರು ಮತ್ತು ದೇಶದ ಇತರ ಭಾಗಗಳಲ್ಲಿರುವ ಅವರ ಸಮಾನಮನಸ್ಕ ಗುಂಪುಗಳ ನಡುವೆ ಭಾವನಾತ್ಮಕ ಬಂಧವನ್ನು ಬೆಳೆಸುವುದು.
ʻಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮʼದಲ್ಲಿ 2006-07 ರಿಂದ 2022-23ರವರೆಗೆ ಬುಡಕಟ್ಟು ಸಮುದಾಯದ 25,880 ಯುವಕರು ಭಾಗವಹಿಸಿದ್ದಾರೆ. ಈ ಪೈಕಿ 2014-15 ರಿಂದ 2022-23 ರವರೆಗೆ ಕಳೆದ 9 ವರ್ಷಗಳಲ್ಲಿ 20,700 ಯುವಕರು ಮತ್ತು 2019-20 ರಿಂದ 2022-23 ರವರೆಗೆ ಕಳೆದ 4 ವರ್ಷಗಳಲ್ಲಿ 10,200 ಯುವಕರು ಭಾಗವಹಿಸಿದ್ದಾರೆ. ಈ ವರ್ಷ 5000 ಯುವಕರು ಮತ್ತು ಮಹಿಳೆಯರು ʻಟಿವೈಇಪಿʼಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ, ಈ ಕಾರ್ಯಕ್ರಮದಲ್ಲಿ ಪ್ರತಿವರ್ಷ 2000 ಮಂದಿ ಭಾಗವಹಿಸುತ್ತಿದ್ದರು. ಈ ಸಂಖ್ಯೆಯನ್ನು ಆಗಸ್ಟ್ 2019ರಲ್ಲಿ 4000ಕ್ಕೆ ಮತ್ತು 2022 ರಲ್ಲಿ ವರ್ಷಕ್ಕೆ 5000ಕ್ಕೆ ಹೆಚ್ಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ, ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರು, ಹಿರಿಯ ಸರ್ಕಾರಿ ಅಧಿಕಾರಿಗಳು; ಕ್ರೀಡೆ, ಉದ್ಯಮ, ಕಲೆ ಇತ್ಯಾದಿ ಕ್ಷೇತ್ರಗಳ ಅತ್ಯುತ್ತಮ ಸಾಧಕರು ಹಾಗೂ ಇತರ ಆದರ್ಶಪ್ರಾಯರನ್ನು ಯುವಕರೊಂದಿಗೆ ಸಂವಹನ ನಡೆಸಲು ಆಹ್ವಾನಿಸಲಾಗುತ್ತದೆ. ಇದಲ್ಲದೆ, ಉದ್ಯಮದ ಅನುಭವ ಪ್ರವಾಸಗಳು, ʻಆಜಾದಿ ಕಾ ಅಮೃತ್ ಮಹೋತ್ಸವʼದ ಅಡಿಯಲ್ಲಿನ ಚಟುವಟಿಕೆಗಳು, ಭಾಷಣ ಸ್ಪರ್ಧೆಗಳು, ಕೌಶಲ್ಯ ಅಭಿವೃದ್ಧಿ, ವೃತ್ತಿ ಮಾರ್ಗದರ್ಶನ, ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಭದ್ರತಾ ಪಡೆಗಳ ಶಿಬಿರಗಳಿಗೆ ಭೇಟಿ ನೀಡುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಸಹ ಆಯೋಜಿಸಲಾಗುತ್ತದೆ. ಇದಲ್ಲದೆ, ಈ ಯುವಕರು ತಮ್ಮ ತವರು ಸ್ಥಳಗಳಿಗೆ ಹಿಂದಿರುಗಿದಾಗ, ಅವರು ತಮ್ಮ ಅನುಭವಗಳನ್ನು ಇತರ ಯುವಕರು ಮತ್ತು ತಮ್ಮ ಪ್ರದೇಶದ ನಿವಾಸಿಗಳೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ʻಟಿವೈಇಪಿʼ ಅಡಿಯಲ್ಲಿ, ಈ ವರ್ಷ ಯುವಕರನ್ನು 25 ಗುಂಪುಗಳಲ್ಲಿ ದೇಶದ ಪ್ರಮುಖ ನಗರಗಳು ಮತ್ತು ಮಹಾನಗರಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಪ್ರತಿ ಗುಂಪಿನಲ್ಲಿ ಎಡಪಂಥೀಯ ಉಗ್ರವಾದದಿಂದ ಹೆಚ್ಚು ಬಾಧಿತವಾದ ಒಳನಾಡಿನ 200 ಯುವಕರು ಮತ್ತು ಮಹಿಳೆಯರು ಇರುತ್ತಾರೆ.
ಈ ವರ್ಷ ಮೂರು ಗುಂಪುಗಳು ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡುತ್ತಿವೆ. ಮೊದಲ ತಂಡವು ಅಕ್ಟೋಬರ್ 15 ರಿಂದ 21ರವರೆಗೆ ದೆಹಲಿಗೆ ಭೇಟಿ ನೀಡಲಿದೆ. ಬಿಜಾಪುರ, ಸುಕ್ಮಾ, ಬಸ್ತಾರ್, ದಾಂತೇವಾಡ, ಕಂಕರ್, ನಾರಾಯಣಪುರ ಹಾಗೂ ರಾಜನಂದಗಾಂವ್‌ನಿಂದ 140 ಸ್ಪರ್ಧಿಗಳು ಹಾಗೂ ಮಧ್ಯಪ್ರದೇಶದ ಬಾಲಘಾಟ್‌ನಿಂದ 60 ಸ್ಪರ್ಧಿಗಳು ಭಾಗವಹಿಸಿದ್ದಾರೆ.
*******
(Release ID: 1969052)
Visitor Counter : 132