ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜಸ್ಥಾನದ ಚಿತ್ತೋರ್ಗಢದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿ  ಮಾಡಿದ ಭಾಷಣದ ಅನುವಾದ

Posted On: 02 OCT 2023 12:27PM by PIB Bengaluru

ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಸದಸ್ಯರೇ, ಮಹಿಳೆಯರು ಮತ್ತು ಮಹನೀಯರೇ,

ಇಂದು ನಾವು ಸ್ಪೂರ್ತಿದಾಯಕ ವ್ಯಕ್ತಿಗಳಾದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಗಳನ್ನು ಸ್ಮರಿಸುತ್ತೇವೆ. ನಿನ್ನೆ, ಅಕ್ಟೋಬರ್ 1 ರಂದು, ರಾಜಸ್ಥಾನ ಸೇರಿದಂತೆ ಇಡೀ ದೇಶವು ಸ್ವಚ್ಛತೆಯ ಕಡೆಗೆ ಮಹತ್ವದ ಉಪಕ್ರಮವನ್ನು ಪ್ರಾರಂಭಿಸಿತು. ಸ್ವಚ್ಛತಾ ಅಭಿಯಾನವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಿದ್ದಕ್ಕಾಗಿ ನಾನು ಎಲ್ಲಾ ನಾಗರಿಕರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಸ್ನೇಹಿತರೇ,

ಗೌರವಾನ್ವಿತ ಬಾಪು ಅವರು ಸ್ವಚ್ಛತೆ, ಸ್ವಾವಲಂಬನೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಪ್ರತಿಪಾದಿಸಿದರು. ಕಳೆದ ಒಂಬತ್ತು ವರ್ಷಗಳಲ್ಲಿ, ನಮ್ಮ ರಾಷ್ಟ್ರವು ಬಾಪು ಅವರ ಈ ಮೌಲ್ಯಗಳನ್ನು, ಉದ್ದೇಶಗಳನ್ನು ಪಾಲಿಸಿಕೊಂಡು ಬಂದಿದೆ. ಇಂದು ಚಿತ್ತೋಡಗಢದಲ್ಲಿ 7,200 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮಾಡಲಾಗುತ್ತಿರುವುದು ನಮ್ಮ ಸರ್ಕಾರದ ಈ ಬದ್ಧತೆಗೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಅನಿಲ ಆಧಾರಿತ ಆರ್ಥಿಕತೆಯ ಅಡಿಪಾಯವನ್ನು ಬಲಪಡಿಸಲು ದೇಶಾದ್ಯಂತ ಗ್ಯಾಸ್ ಪೈಪ್ಲೈನ್ ಜಾಲವನ್ನು ಹಾಕಲು ಅಭೂತಪೂರ್ವ ಅಭಿಯಾನ ನಡೆಯುತ್ತಿದೆ. ಮೆಹ್ಸಾನಾದಿಂದ ಬಟಿಂಡಾದವರೆಗೆ ಗ್ಯಾಸ್ ಪೈಪ್ಲೈನ್ಗಳನ್ನು ಹಾಕಲಾಗುತ್ತಿದೆ. ಇಂದು ಪಾಲಿ-ಹನುಮಾನ್ಗಢ ವಿಭಾಗದಲ್ಲಿ ಸಮರ್ಪಣೆ ಮಾಡಲಾಗುತ್ತಿದೆ ಈ ವಿಸ್ತರಣೆಯು ರಾಜಸ್ಥಾನದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ನಮ್ಮ ಸಹೋದರಿಯರ ಅಡುಗೆ ಮನೆಗಳಿಗೆ ಕೈಗೆಟಕುವ ದರದಲ್ಲಿ ಗ್ಯಾಸ್ ತಲುಪಿಸುವ ನಮ್ಮ ಅಭಿಯಾನಕ್ಕೆ ಇನ್ನಷ್ಟು ಉತ್ತೇಜನ ಮತ್ತು ವೇಗ ನೀಡುತ್ತದೆ.
 ಸ್ನೇಹಿತರೇ,

ಇಂದು, ರೈಲ್ವೆ ಮತ್ತು ರಸ್ತೆ ಮೂಲಸೌಕರ್ಯದಿಂದ ಸಂಪರ್ಕ ಹೊಂದಿದ ಹಲವಾರು ನಿರ್ಣಾಯಕ ಯೋಜನೆಗಳನ್ನು ಸಹ ಉದ್ಘಾಟಿಸಲಾಗಿದೆ. ಈ ಸೌಲಭ್ಯಗಳು ಮೇವಾರ್ನಲ್ಲಿನ ಜನರ ಜೀವನವನ್ನು ಸುಗಮಗೊಳಿಸುತ್ತದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕೋಟಾದಲ್ಲಿ ಐಐಐಟಿಗೆ ಹೊಸ ಕ್ಯಾಂಪಸ್ ಸ್ಥಾಪನೆಯು ಶಿಕ್ಷಣ ಕೇಂದ್ರವಾಗಿ ಅದರ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಸ್ನೇಹಿತರೇ,

ರಾಜಸ್ಥಾನವು ಹಿಂದಿನಿಂದ ಶ್ರೀಮಂತ ಪರಂಪರೆಯನ್ನು ಹೊಂದಿದೆ, ವರ್ತಮಾನದ ಶಕ್ತಿ ಮತ್ತು ಭವಿಷ್ಯಕ್ಕಾಗಿ ಭರವಸೆಯ ಅವಕಾಶಗಳನ್ನು ಹೊಂದಿದೆ. ಈ ತ್ರಿಕೋನ ಶಕ್ತಿಯು ರಾಷ್ಟ್ರದ ಒಟ್ಟಾರೆ ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತದೆ. ನಾಥದ್ವಾರ ಪ್ರವಾಸಿ ಮತ್ತು ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಯೂ ಆಗಿದೆ. ಈ ಕೇಂದ್ರವು ಜೈಪುರದ ಗೋವಿಂದ್ ದೇವ್ ಜಿ ದೇವಾಲಯ, ಸಿಕರ್ನ ಖತುಶ್ಯಾಮ್ ಜಿ ದೇವಾಲಯ ಮತ್ತು ನಾಥದ್ವಾರವನ್ನು ಪ್ರವಾಸೋದ್ಯಮ ಸರ್ಕ್ಯೂಟ್ನಲ್ಲಿ ಸೇರಿಸುವುದರೊಂದಿಗೆ ರಾಜಸ್ಥಾನದ ಹೆಮ್ಮೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ನಮ್ಮ ಸಾಮೂಹಿಕ ನಂಬಿಕೆಯ ಕೇಂದ್ರವಾದ ಶ್ರೀಕೃಷ್ಣನಿಗೆ ಸಮರ್ಪಿತವಾದ ಸನ್ವಾರಿಯಾ ಸೇಠ್ ದೇವಾಲಯವು ಚಿತ್ತೋರ್ಗಢದ ಸಮೀಪದಲ್ಲಿದೆ. ಪ್ರತಿ ವರ್ಷ, ಲಕ್ಷಾಂತರ ಭಕ್ತರು 'ಸನ್ವಾರಿಯಾ ಸೇಠ್' ಜಿಗೆ ಗೌರವ ಸಲ್ಲಿಸಲು ಭೇಟಿ ನೀಡುತ್ತಾರೆ. ಈ ದೇವಾಲಯವು ವ್ಯಾಪಾರ ಸಮುದಾಯದಲ್ಲಿಯೂ ವಿಶೇಷ ಮಹತ್ವವನ್ನು ಹೊಂದಿದೆ. ಭಾರತ ಸರ್ಕಾರವು ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ 'ಸನ್ವಾರಿಯಾ ಜಿ ದೇವಸ್ಥಾನದಲ್ಲಿ ಸೌಲಭ್ಯಗಳನ್ನು ಆಧುನೀಕರಿಸಿದೆ. ವಾಟರ್ ಲೇಸರ್ ಶೋ, ಪ್ರವಾಸಿ ಸೌಲಭ್ಯ ಕೇಂದ್ರ, ಆಂಫಿಥಿಯೇಟರ್, ಕೆಫೆಟೇರಿಯಾ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಇವು ಭಕ್ತರಿಗೆ ಸೌಕರ್ಯವನ್ನು ಹೆಚ್ಚಿಸುತ್ತವೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ರಾಜಸ್ಥಾನದ ಅಭಿವೃದ್ಧಿಯು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ನಾವು ರಾಜಸ್ಥಾನದಲ್ಲಿ ಎಕ್ಸ್ಪ್ರೆಸ್ ವೇ ಗಳು, ಹೆದ್ದಾರಿಗಳು ಮತ್ತು ರೈಲ್ವೆಗಳಂತಹ ಆಧುನಿಕ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದ್ದೇವೆ. ಅದು ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಆಗಿರಲಿ ಅಥವಾ ಅಮೃತಸರ-ಜಾಮ್ ನಗರ ಎಕ್ಸ್ ಪ್ರೆಸ್ ವೇ ಆಗಿರಲಿ, ಈ ಯೋಜನೆಗಳು ರಾಜಸ್ಥಾನದ ಲಾಜಿಸ್ಟಿಕ್ಸ್ ವಲಯಕ್ಕೆ ಹೊಸ ಶಕ್ತಿಯನ್ನು ಒದಗಿಸುತ್ತವೆ. ಇತ್ತೀಚೆಗೆ, ಉದಯಪುರ-ಜೈಪುರ ವಂದೇ ಭಾರತ್ ರೈಲು ಕೂಡ ಉದ್ಘಾಟನೆಯಾಗಿದೆ. ಭಾರತಮಾಲಾ ಯೋಜನೆಯಿಂದ ಗರಿಷ್ಠ ಲಾಭ ಪಡೆಯುವ ನಿರ್ಣಾಯಕ ರಾಜ್ಯವಾಗಿದೆ ರಾಜಸ್ಥಾನ.

ಸ್ನೇಹಿತರೇ,

ರಾಜಸ್ಥಾನದ ಇತಿಹಾಸವು ಧೈರ್ಯ, ವೈಭವ ಮತ್ತು ಅಭಿವೃದ್ಧಿಯೊಂದಿಗೆ ಕೈಜೋಡಿಸಬೇಕೆಂದು ನಮಗೆ ಕಲಿಸುತ್ತದೆ. ವರ್ತಮಾನದ ಭಾರತವೂ ಅದೇ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ‘ಸಬ್ಕಾ ಪ್ರಯಾಸ್’ (ಸಾಮೂಹಿಕ ಪ್ರಯತ್ನಗಳು) ದೊಂದಿಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವು ಸಮರ್ಪಿತರಾಗಿದ್ದೇವೆ. ಹಿಂದೆ ಬಿಟ್ಟುಹೋದ ಅಥವಾ ಅಂಚಿನಲ್ಲಿರುವ ಆ ಪ್ರದೇಶಗಳು ಮತ್ತು ವರ್ಗಗಳ ಅಭಿವೃದ್ಧಿ ಈಗ ದೇಶದ ಆದ್ಯತೆಯಾಗಿದೆ. ಹೀಗೆ ಕಳೆದ ಐದು ವರ್ಷಗಳಿಂದ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿದಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಮೇವಾರ್ನ ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ ರಾಜಸ್ಥಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಹತ್ವಾಕಾಂಕ್ಷೆಯ ಬ್ಲಾಕ್ಗಳು ಮತ್ತು ಅವುಗಳ ತ್ವರಿತ ಪ್ರಗತಿಯನ್ನು ಗುರುತಿಸುವ ಮತ್ತು ಗಮನಹರಿಸುವ ಮೂಲಕ ಕೇಂದ್ರ ಸರ್ಕಾರವು ಈಗ ಈ ಕಾರ್ಯಕ್ರಮವನ್ನು ಇನ್ನಷ್ಟು ಮುಂದೆ ತೆಗೆದುಕೊಂಡು ಸಾಗುತ್ತದೆ.

ಮುಂಬರುವ ದಿನಗಳಲ್ಲಿ, ಈ ಕಾರ್ಯಕ್ರಮದ ಅಡಿಯಲ್ಲಿ ರಾಜಸ್ಥಾನದ ಅನೇಕ ಬ್ಲಾಕ್ಗಳು ಅಭಿವೃದ್ಧಿಗೆ ಸಾಕ್ಷಿಯಾಗಲಿವೆ. ಹಿಂದುಳಿದವರಿಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರದಿಂದ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇಷ್ಟು ವರ್ಷ ದೂರದ ಗ್ರಾಮಗಳೆಂದು ಪರಿಗಣಿಸಲಾಗಿದ್ದ ಗಡಿ ಗ್ರಾಮಗಳನ್ನು ಈಗ ಮೊದಲ ಗ್ರಾಮವೆಂದು ಗುರುತಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ರಾಜಸ್ಥಾನದ ಹತ್ತಾರು ಗಡಿ ಗ್ರಾಮಗಳಿಗೆ ಅಪಾರ ಪ್ರಯೋಜನಗಳನ್ನು ತರಲಿದೆ. ಕೆಲವು ನಿಮಿಷಗಳ ನಂತರ ನಾನು ಅಂತಹ ವಿಷಯಗಳ ಬಗ್ಗೆ ಹೆಚ್ಚು ವಿವರವಾಗಿ ಮತ್ತು ಮುಕ್ತವಾಗಿ ಮಾತನಾಡುತ್ತೇನೆ ಏಕೆಂದರೆ ಅಂತಹ ವಿಷಯಗಳನ್ನು ಮುಕ್ತ ಸಂಭಾಷಣೆಯಲ್ಲಿ ಚರ್ಚಿಸುವುದು ಆನಂದದಾಯಕವಾಗಿದೆ. ಇಲ್ಲಿ ಕೆಲವು ನಿರ್ಬಂಧಗಳಿವೆ. ಆದ್ದರಿಂದ, ನಾನು ಅಲ್ಲಿ ವಿವರವಾದ ಚರ್ಚೆಯನ್ನು ನಡೆಸುತ್ತೇನೆ. ರಾಜಸ್ಥಾನದ ಅಭಿವೃದ್ಧಿಗಾಗಿ ನಮ್ಮ ನಿರ್ಣಯಗಳು ಶೀಘ್ರವಾಗಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ. ಈ ಆಶಯದೊಂದಿಗೆ, ಹಲವಾರು ಹೊಸ ಯೋಜನೆಗಳಿಗಾಗಿ ನಾನು ಮೇವಾರ್ ನಿವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಎಲ್ಲರಿಗೂ ತುಂಬಾ ಧನ್ಯವಾದಗಳು.

ಹಕ್ಕು ಸ್ವಾಮಿ: ಇದು ಪ್ರಧಾನಿ ಭಾಷಣದ ಅನುವಾದ ಮಾಡಲಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****


(Release ID: 1964146) Visitor Counter : 84