ಪ್ರಧಾನ ಮಂತ್ರಿಯವರ ಕಛೇರಿ

ರೋಜ್ ಗಾರ್ ಮೇಳ ಉದ್ದೇಶಿಸಿ ಪ್ರಧಾನಿ ಭಾಷಣ


ಹೊಸದಾಗಿ ನೇಮಕಾತಿಗೊಂಡ 51,000 ಉದ್ಯೋಗಿಗಳಿಗೆ ನೇಮಕಪತ್ರ ವಿತರಣೆ

“ಸೇವೆಗೆ ನೇಮಕಗೊಂಡವರ ಶ್ರದ್ಧೆಯು, ದೇಶ ತನ್ನ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ’’

“ನಾರಿಶಕ್ತಿ ವಂದನ ಅಧಿನಿಯಮ ಹೊಸ ಸಂಸತ್ತಿನಲ್ಲಿ ರಾಷ್ಟ್ರದ ಹೊಸ ಆರಂಭವಾಗಿದೆ’’

“ತಂತ್ರಜ್ಞಾನದಿಂದ ಭ್ರಷ್ಟಾಚಾರ ನಿಂತಿದೆ, ವಿಶ್ವಾಸಾರ್ಹತೆ ಸುಧಾರಿಸಿದೆ, ಕಡಿಮೆ ಸಂಕೀರ್ಣತೆ ಮತ್ತು ಸೌಕರ್ಯ ಹೆಚ್ಚಿಸಿದೆ’’

“ಸರ್ಕಾರದ ನೀತಿಗಳು ಹೊಸ ಮನಸ್ಥಿತಿ, ನಿರಂತರ ಮೇಲ್ವಿಚಾರಣೆ, ಸಮರೋಪಾದಿ ಅನುಷ್ಠಾನ ಮತ್ತು ಸಾಮೂಹಿಕ ಭಾಗವಹಿಸುವಿಕೆಯನ್ನು ಆಧರಿಸಿವೆ, ಇದು ಸ್ಮರಣಾರ್ಹ ಗುರಿಗಳನ್ನು ಸಾಧಿಸಲು ದಾರಿ ಮಾಡಿಕೊಟ್ಟಿದೆ’’

Posted On: 26 SEP 2023 11:37AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರೋಜ್ ಗಾರ್ ಮೇಳ ಉದ್ದೇಶಿಸಿ ಭಾಷಣ ಮಾಡಿದರು ಮತ್ತು ಹೊಸದಾಗಿ ನೇಮಕಗೊಂಡ 51,000 ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಹೊಸದಾಗಿ ನೇಮಕಗೊಂಡರು ದೇಶಾದ್ಯಂತ ಅಂಚೆ ಇಲಾಖೆ, ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆ, ಅಣು ಇಂಧನ ಇಲಾಖೆ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ಸರ್ಕಾರದ ಹಲವು ಇಲಾಖೆಗಳು/ಸಚಿವಾಲಯಗಳಿಗೆ ಸೇರ್ಪಡೆಯಾಗಲಿದ್ದಾರೆ. ಈ ರೋಜ್ ಗಾರ್ ಮೇಳ ದೇಶಾದ್ಯಂತ 46 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ನೇಮಕಾತಿ ಪತ್ರ ಪಡೆದವರನ್ನು ಅಭಿನಂದಿಸಿದರು. ಅವರ ಕಠಿಣ ಪರಿಶ್ರಮ ಮತ್ತು ಬದ್ಧತೆಯ ಮನೋಭಾವದಿಂದ ಇಲ್ಲಿಗೆ ಬಂದಿರುವ ಅವರು ಲಕ್ಷಾಂತರ ಅಭ್ಯರ್ಥಿಗಳ ಸಮೂಹದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. ದೇಶಾದ್ಯಂತ ಗಣೇಶ ಉತ್ಸವದ ಸಂಭ್ರಮವನ್ನು ಉಲ್ಲೇಖಿಸಿದ ಪ್ರಧಾನಿ, ಈ ಶುಭ ಸಂದರ್ಭದಲ್ಲಿ ನೇಮಕಗೊಂಡವರಿಗೆ ಇದು ಹೊಸ ಜೀವನದ ‘ಶ್ರೀ ಗಣೇಶ’ ಎಂದು ಹೇಳಿದರು. "ಭಗವಾನ್ ಗಣೇಶನು ಸಾಧನೆಗಳ ದೇವರು", ಸೇವೆಯ ಕಡೆಗೆ ನೇಮಕಗೊಂಡವರ ಶ್ರದ್ಧೆಯು, ದೇಶವು ತನ್ನ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.

ದೇಶವು ಐತಿಹಾಸಿಕ ಸಾಧನೆಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜನಸಂಖ್ಯೆಯ ಅರ್ಧದಷ್ಟು ಜನರನ್ನು ಸಬಲೀಕರಣಗೊಳಿಸಿದ ನಾರಿಶಕ್ತಿ ವಂದನ ಅಧಿನಿಯಮವನ್ನು ಅವರು ಪ್ರಸ್ತಾಪಿಸಿದರು. “30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆ  ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ಅಂಗೀಕಾರವಾಗಿದೆ. ಈ ನಿರ್ಧಾರವು ಹೊಸ ಸಂಸತ್ತಿನ ಮೊದಲ ಅಧಿವೇಶನದಲ್ಲಿ ನಡೆಯಿತು, ಒಂದು ರೀತಿಯಲ್ಲಿ, ಇದು ಹೊಸ ಸಂಸತ್ತಿನಲ್ಲಿ ರಾಷ್ಟ್ರಕ್ಕೆ ಹೊಸ ಆರಂಭ ದೊರೆತಿದೆ” ಎಂದು ಪ್ರಧಾನಿ ಮೋದಿ ಬಲವಾಗಿ ಪ್ರತಿಪಾದಿಸಿದರು.  

ಹೊಸದಾಗಿ ನೇಮಕಗೊಂಡವರಲ್ಲಿ ಮಹಿಳೆಯರ ಗಮನಾರ್ಹ ಉಪಸ್ಥಿತಿಯನ್ನು ಶ್ಲಾಘಿಸಿದ ಪ್ರಧಾನಿ, ದೇಶದ ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ ಎಂದು ಹೇಳಿದರು. “ನಾರಿಶಕ್ತಿಯ ಸಾಧನೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ ಮತ್ತು ಅವರ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುವುದು ಸರ್ಕಾರದ ನೀತಿಯಾಗಿದೆ’’ ಎಂದು ಅವರು ಹೇಳಿದರು. ಯಾವುದೇ ವಲಯದಲ್ಲಿ ಮಹಿಳೆಯರ ಉಪಸ್ಥಿತಿಯು ಸದಾ ಆ ಪ್ರತಿಯೊಂದು ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು

ನವಭಾರತದ ಆಕಾಂಕ್ಷೆಗಳು ಉತ್ತುಂಗಕ್ಕೇರುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಈ ನವಭಾರತದ ಕನಸುಗಳು ಉತ್ಕೃಷ್ಟವಾಗಿವೆ ಎಂದು ಹೇಳಿದರು.  “2047 ರ ವೇಳೆಗೆ ಭಾರತವು ವಿಕಸಿತ ಭಾರತ ಆಗುವ ಸಂಕಲ್ಪವನ್ನು ಕೈಗೊಂಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಕೆಲವು ವರ್ಷಗಳಲ್ಲಿ, ರಾಷ್ಟ್ರವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ನೌಕರರು ಸಾಕಷ್ಟು ಕೊಡುಗೆಗಳನ್ನು ನೀಡಲಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಅವರು ‘ಪ್ರಜೆಗಳು ಮೊದಲು’(ಸಿಟಿಜನ್ ಫಸ್ಟ್ಗ) ಎಂಬ ವಿಧಾನವನ್ನು ಅನುಸರಿಸುತ್ತಾರೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಇಂದು ನೇಮಕಗೊಂಡಿರುವವರು ತಂತ್ರಜ್ಞಾನದೊಂದಿಗೆ ಬೆಳೆದಿರುವುದನ್ನು ಗಮನಿಸಿದ ಪ್ರಧಾನಮಂತ್ರಿಯವರು ತಮ್ಮ ಕಾರ್ಯಕ್ಷೇತ್ರದಲ್ಲಿ ಅದನ್ನು ಬಳಸಿಕೊಳ್ಳಲು ಮತ್ತು ಆಡಳಿತದ ದಕ್ಷತೆಯನ್ನು ಸುಧಾರಿಸಲು ಒತ್ತು ನೀಡಬೇಕೆಂದು ಹೇಳಿದರು.

ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿ, ಆನ್‌ಲೈನ್ ರೈಲ್ವೆ ಕಾಯ್ದಿರಿಸುವುದು, ಆಧಾರ್ ಕಾರ್ಡ್, ಡಿಜಿಲಾಕರ್, ಇಕೆವೈಸಿ, ಗ್ಯಾಸ್ ಬುಕಿಂಗ್, ಬಿಲ್ ಪಾವತಿಗಳು, ಡಿಬಿಟಿ ಮತ್ತು ಡಿಜಿಯಾತ್ರಾ ಮೂಲಕ ದಾಖಲಾತಿಗಳ ಸಂಕೀರ್ಣತೆಯ ನಿವಾರಣೆ ಮಾಡಲಾಗಿದೆ ಎಂದರು. “ತಂತ್ರಜ್ಞಾನವು ಭ್ರಷ್ಟಾಚಾರವನ್ನು ನಿಲ್ಲಿಸಿದೆ, ವಿಶ್ವಾಸಾರ್ಹತೆ ಸುಧಾರಿಸಿದೆ, ಕಡಿಮೆ ಸಂಕೀರ್ಣತೆ, ಸೌಕರ್ಯವನ್ನು ಹೆಚ್ಚಿಸಿದೆ" ಎಂದು ಪ್ರಧಾನಿ ಹೇಳಿದರು. ಹೊಸದಾಗಿ ನೇಮಕಗೊಂಡಿರುವವರು ಆ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ಮಾಡಲು ಕರೆ ನೀಡಿದರು.

ಕಳೆದ 9 ವರ್ಷಗಳಲ್ಲಿ, ಸರ್ಕಾರದ ನೀತಿಗಳು ಹೊಸ ಮನಸ್ಥಿತಿ, ನಿರಂತರ ಮೇಲ್ವಿಚಾರಣೆ, ಸಮರೋಪಾದಿಯಲ್ಲಿ ಅನುಷ್ಠಾನ ಮತ್ತು ಸಾಮೂಹಿಕ ಸಹಭಾಗಿತ್ವವನ್ನು ಆಧರಿಸಿವೆ ಮತ್ತು ಸ್ಮರಣಾರ್ಹ ಗುರಿಗಳನ್ನು ಸಾಧಿಸಲು ದಾರಿ ಮಾಡಿಕೊಟ್ಟಿವೆ ಎಂದು ಪ್ರಧಾನಿ ಹೇಳಿದರು. ಸ್ವಚ್ಛ ಭಾರತ ಮತ್ತು ಜಲ ಜೀವನ್ ಮಿಷನ್‌ನಂತಹ ಅಭಿಯಾನಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿ, ಗರಿಷ್ಠ ಪ್ರಮಾಣವನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಸರ್ಕಾರದ ಸಮರೋಪಾದಿ ಅನುಷ್ಠಾನ ವಿಧಾನವನ್ನು ಪ್ರಮುಖವಾಗಿ ತಿಳಿಸಿದರು. ದೇಶಾದ್ಯಂತ ಯೋಜನೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು ಸ್ವತಃ ಪ್ರಧಾನಿ ಬಳಸುತ್ತಿರುವ ಪ್ರಗತಿ ವೇದಿಕೆಯ ಉದಾಹರಣೆಯನ್ನು ನೀಡಿದರು. ಸರ್ಕಾರದ ಯೋಜನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವ ಅತ್ಯುನ್ನತ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದು ಅವರು ಒತ್ತಿ ಹೇಳಿದರು. ಲಕ್ಷಗಟ್ಟಲೆ ಯುವಕರು ಸರ್ಕಾರಿ ಸೇವೆಗಳಿಗೆ ಸೇರಿದಾಗ ನೀತಿ ಜಾರಿಯ ವೇಗ ಮತ್ತು ಪ್ರಮಾಣವು ಉತ್ತೇಜನ ಪಡೆಯುತ್ತದೆ, ಇದರಿಂದಾಗಿ ಸರ್ಕಾರಿ ವಲಯದ ಹೊರಗೆ ಉದ್ಯೋಗದಲ್ಲಿ ಉತ್ತೇಜನ ಮತ್ತು ಹೊಸ ಉದ್ಯೋಗ ನೀತಿಗಳನ್ನು ರೂಪಿಸಲು ಕಾರಣವಾಗುತ್ತದೆ ಎಂದು ಅವರು ಪ್ರಸ್ತಾಪಿಸಿದರು.

ಜಿಡಿಪಿ ಬೆಳವಣಿಗೆ ಮತ್ತು ಉತ್ಪಾದನೆ ಮತ್ತು ರಫ್ತುಗಳಲ್ಲಿನ ಏರಿಳಿತದ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಆಧುನಿಕ ಮೂಲಸೌಕರ್ಯದಲ್ಲಿ ಹಿಂದೆಂದೂ ನಿರೀಕ್ಷಿಸದ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಲಾಗುತ್ತಿದೆ ಎಂದು ಪ್ರಸ್ತಾಪಿಸಿದರು. ನವೀಕರಿಸಬಹುದಾದ ಇಂಧನ, ಸಾವಯವ ಕೃಷಿ, ರಕ್ಷಣೆ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳ ಬಗ್ಗೆ ಹೂಡಿಕೆದಾರರು ಹೊಸ ಉತ್ಸಾಹವನ್ನು ತೋರಿಸುತ್ತಿದ್ದಾರೆ. ಭಾರತದ ಆತ್ಮನಿರ್ಭರ ಅಭಿಯಾನವು ಮೊಬೈಲ್ ಫೋನ್‌ಗಳಿಂದ ವಿಮಾನವಾಹಕ ನೌಕೆಗಳವರೆಗೆ, ಕರೋನಾ ಲಸಿಕೆಯಿಂದ ಯುದ್ಧ ವಿಮಾನಗಳವರೆಗೆ ಫಲಿತಾಂಶಗಳನ್ನು ತೋರಿಸುತ್ತಿದೆ. ಹಾಗಾಗಿ ಇಂದು ಯುವಜನತೆಗೆ ಹೊಸ ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತಿವೆ ಎಂದು ಹೇಳಿದರು.

ದೇಶದ ಜೀವನದಲ್ಲಿ ಮತ್ತು ಹೊಸದಾಗಿ ನೇಮಕಾತಿಗೊಂಡವರಲ್ಲಿ ಮುಂದಿನ 25 ವರ್ಷಗಳ ಅಮೃತ ಕಾಲದ ಮಹತ್ವವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ತಂಡದ ಕೆಲಸ(ಟೀಮ್ ವರ್ಕ್) ಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ತಿಳಿಸಿದರು. ಜಿ-20 ನಮ್ಮ ಸಂಪ್ರದಾಯ, ನಿರ್ಣಯ ಮತ್ತು ಆತಿಥ್ಯದ ಕಾರ್ಯಕ್ರಮವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಯಶಸ್ಸು ವಿವಿಧ ಸಾರ್ವಜನಿಕ ಮತ್ತು ಖಾಸಗಿ ಇಲಾಖೆಗಳ ಯಶಸ್ಸು ಕೂಡ ಆಗಿದೆ. ಜಿ-20ಯ ಯಶಸ್ಸಿಗೆ ಎಲ್ಲರೂ ತಂಡವಾಗಿ ಕೆಲಸ ಮಾಡಿದರು ಎಂದರು. "ಇಂದು ನೀವೂ ಸಹ ಸರ್ಕಾರಿ ನೌಕರರ ಟೀಮ್ ಇಂಡಿಯಾದ ಭಾಗವಾಗುತ್ತಿರುವುದು ನನಗೆ ಖುಷಿ ತಂದಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹೊಸದಾಗಿ ನೇಮಕಗೊಂಡವರಿಗೆ ಸರ್ಕಾರದೊಂದಿಗೆ ನೇರವಾಗಿ ಕೆಲಸ ಮಾಡಲು ಅವಕಾಶವಿದೆ ಎಂದ ಪ್ರಧಾನಮಂತ್ರಿ ತಮ್ಮ ಕಲಿಕೆಯ ಪಯಣವನ್ನು ಮುಂದುವರಿಸಲು ಮತ್ತು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಲು ಐಜಿಒಟಿ (ಐಗಾಟ್) ಕರ್ಮಯೋಗಿ ಪೋರ್ಟಲ್ ಅನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಭಾಷಣವನ್ನು ಮುಕ್ತಾಯಗೊಳಿಸುವ  ಮುನ್ನ ಪ್ರಧಾನಿ ಅವರು, ನೇಮಕಗೊಂಡವರನ್ನು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದರು ಮತ್ತು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಂಕಲ್ಪವನ್ನು ಕೈಗೊಳ್ಳುವಂತೆ ಕರೆ ನೀಡಿದರು.

ಹಿನ್ನೆಲೆ:

ದೇಶಾದ್ಯಂತ 46 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ ಆಯೋಜಿಸಲಾಗಿತ್ತು. ಈ ಉಪಕ್ರಮವನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಆಯ್ಕೆಯಾದವರು, ಅಂಚೆ ಇಲಾಖೆ, ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆ, ಅಣು ಶಕ್ತಿ ಇಲಾಖೆ, ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಸಚಿವಾಲಯ, ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಯಾಗಲಿದ್ದಾರೆ.

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿ ಅವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್‌ಗಾರ್ ಮೇಳವು ಒಂದು ಹೆಜ್ಜೆಯಾಗಿದೆ. ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ನೀಡುತ್ತಿದೆ ಎಂದು ನಿರೀಕ್ಷಿಸಲಾಗಿದೆ.


ಹೊಸದಾಗಿ ಸೇರ್ಪಡೆಗೊಂಡವರು ಐಜಿಒಟಿ ಕರ್ಮಯೋಗಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮಾದರಿಯಲ್ಲಿರುವ ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಪಡೆಯುತ್ತಿದ್ದಾರೆ, ಅಲ್ಲಿ 680 ಕ್ಕೂ ಹೆಚ್ಚು ಇ-ಕಲಿಕೆ ಕೋರ್ಸ್‌ಗಳಿದ್ದು, ಅವುಗಳಲ್ಲಿ 'ಎಲ್ಲಿದ್ದರೂ ಕಲಿಯುವ’ ಸ್ವರೂಪದಲ್ಲಿ ವಿನ್ಯಾಸಗೊಳಿಸಿ ಲಭ್ಯವಾಗುವಂತೆ ಮಾಡಲಾಗಿದೆ.  

 

Rozgar Mela stands as our dedicated effort to empower young individuals and strengthen their active engagement in the country's development. https://t.co/S1ZBRkXcR7

— Narendra Modi (@narendramodi) September 26, 2023

 

***

 

 



(Release ID: 1960990) Visitor Counter : 90