ಉಪರಾಷ್ಟ್ರಪತಿಗಳ ಕಾರ್ಯಾಲಯ

ಆಕಾಶಕ್ಕೆ ಮಿತಿಯೇ ಇಲ್ಲ, ಇದು ಕೇವಲ ಆರಂಭ- ಉಪರಾಷ್ಟ್ರಪತಿ ಹೇಳಿಕೆ 


ಚಂದ್ರಯಾನ-3ರ ಯಶಸ್ಸಿನೊಂದಿಗೆ ಇಸ್ರೋ ತನ್ನ ವಾರ್ಷಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯಾಗಿ ದಾಖಲಿಸಿದೆ- ವಿಪಿ 

ಬಾಹ್ಯಾಕಾಶ ವಲಯದಲ್ಲಿನ ಸಾಧನೆಗಳು ಭಾರತವನ್ನು ಜಗತ್ತಿನ ಕೇಂದ್ರ ವೇದಿಕೆಗೆ ಕೊಂಡೊಯ್ದಿದೆ- ಉಪರಾಷ್ಟ್ರಪತಿ ಹೇಳಿಕೆ 

ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತೀಯ ಬಾಹ್ಯಾಕಾಶ ನೀತಿ 2023 ಒಂದು ದೊಡ್ಡ ಸಾಧನೆ- ಉಪರಾಷ್ಟ್ರಪತಿ ಬಣ್ಣನೆ 

ರಾಜ್ಯಸಭೆಯಲ್ಲಿಂದು “ಭಾರತದ ಅದ್ಭುತ ಬಾಹ್ಯಾಕಾಶ ಪಯಣ’ ಕುರಿತು ಚರ್ಚೆಯನ್ನು ಆರಂಭಿಸಿದ ಉಪರಾಷ್ಟ್ರಪತಿ 

Posted On: 20 SEP 2023 2:48PM by PIB Bengaluru

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ದ ಸಾಧನೆಗಳನ್ನು "ಅಸಾಧಾರಣವಾದುದಕ್ಕಿಂತ ಕಡಿಮೆಯೇನಲ್ಲ" ಎಂದು ಶ್ಲಾಘಿಸಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಶ್ರೀ ಜಗದೀಪ್ ಧನಕರ್ ಅವರು ಚಂದ್ರಯಾನ-3ರ ಯಶಸ್ಸಿನೊಂದಿಗೆ ಇಸ್ರೋ ತನ್ನ ವಾರ್ಷಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯಾಗಿ ದಾಖಲಿಸಿದೆ ಎಂದು ಬಲವಾಗಿ ಪ್ರತಿಪಾದಿಸಿದರು. 

“ಚಂದ್ರಯಾನ-3ರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಭಾರತದ ಅದ್ಭುತ ಬಾಹ್ಯಾಕಾಶ ಪಯಣ" ಎಂಬ ಚರ್ಚೆಯ ಆರಂಭದಲ್ಲಿ ಇಂದು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಚಂದ್ರಯಾನ-3 ರ ಯಶಸ್ಸು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್  (ಮೃದುವಾದ ಇಳಿಯುವಿಕೆ) ಅನ್ನು ಸಾಧಿಸಿದ ದೇಶಗಳ ಸಾಲಿನಲ್ಲಿ ಭಾರತವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಿದೆ. ಈ ಸಾಧನೆಯೊಂದಿಗೆ, ಭಾರತವು 2025ರ ವೇಳೆಗೆ ಮಾನವರನ್ನು ಚಂದ್ರನ ಮೇಲೆ ಇರಿಸುವ ಅಮೆರಿಕಾ ನೇತೃತ್ವದ ಬಹುಪಕ್ಷೀಯ ಉಪಕ್ರಮದ ಆರ್ಟೆಮಿಸ್ ಒಪ್ಪಂದದ ಸದಸ್ಯತ್ವವನ್ನು ಪಡೆದುಕೊಂಡಿದೆ ಎಂದು ಅವರು ವಿವರಿಸಿದರು

ಆರು ದಶಕಗಳಿಗೂ ಅಧಿಕ ಸಮಯದ ಭಾರತೀಯ ಬಾಹ್ಯಾಕಾಶ ಪಯಣವನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಗಳು, ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ವಿದೇಶಿ ಉಡಾವಣಾ ವಾಹಕಗಳ ಅವಲಂಬನೆಯಿಂದ ಸ್ವದೇಶಿ ಉಡಾವಣಾ ಸಾಮರ್ಥ್ಯಗಳೊಂದಿಗೆ ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸುವ ಪರಿವರ್ತನೆಗೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದರು. ಭಾರತವು ತನ್ನದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿರುವುದು ಮಾತ್ರವಲ್ಲದೆ ಇತರ ದೇಶಗಳಿಗೆ ಉಪಗ್ರಹಗಳನ್ನು ಉಡಾವಣೆ ಮಾಡಲು ತನ್ನ ಸೇವೆಗಳನ್ನು ವಿಸ್ತರಿಸಿದೆ, ಈವರೆಗೆ 424 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ಚಂದ್ರನ ಮೇಲ್ಮೈಯನ್ನು ಮೀರಿದ ಭಾರತದ ಸಾಧನೆಗಳನ್ನು ಶ್ಲಾಘಿಸಿದ ಶ್ರೀ ಧನಕರ್ ಅವರು, 2014 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ ಭಾರತದ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ) ಯಶಸ್ವಿಯಾಗಿ ಮಂಗಳ ಗ್ರಹವನ್ನು ತಲುಪಿತ್ತು ಎಂಬುದನ್ನು ಸದನಕ್ಕೆ ನೆನಪು ಮಾಡಿಕೊಟ್ಟರು. ಇತ್ತೀಚೆಗೆ ಉಡಾವಣೆ ಮಾಡಲಾದ ಆದಿತ್ಯ-ಎಲ್ 1 ಮಿಷನ್ ಮತ್ತು ಶುಕ್ರವನ್ನು ಅಧ್ಯಯನ ಮಾಡಲು ಮುಂಬರುವ ಶುಕ್ರಯಾನ-ಮಿಷನ್ ಅನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಉಪರಾಷ್ಟ್ರಪತಿ ಅವರು,  ಗ್ರಹಗಳ ಅನ್ವೇಷಣೆ ಮತ್ತು ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿರುವುದು, ದೇಶದ ಅಭಿವೃದ್ಧಿಯ ಅಗತ್ಯತೆಗಳನ್ನು ಪರಿಹರಿಸಲು ಬಾಹ್ಯಾಕಾಶ ಪ್ರಯತ್ನಗಳನ್ನು ಬಳಸುವ ಇಸ್ರೋದ ಪ್ರಯತ್ನಗಳ ಸ್ವಾಭಾವಿಕ ವಿಸ್ತರಣೆಯಾಗಿದೆ ಎಂದು ಹೇಳಿದರು.

ನಾಸಾ ಮತ್ತು ಇಸಾದಂತಹ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಸಿದರೆ “ವೆಚ್ಚದ ಒಂದು ಭಾಗ”ದಲ್ಲಿ ಈ ಸಾಧನೆಗಳನ್ನು ಸಾಧಿಸಲು ಸಾಧ್ಯವಾಗುವ ಇಸ್ರೋದ ಶಕ್ತಿಯನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿ, ಈ ಕಡಿಮೆ ವೆಚ್ಚವು ಸ್ವದೇಶೀಕರಣದ ಮೇಲಿನ ಆದ್ಯತೆ ಮತ್ತು ಆಮದು ಮೇಲಿನ ಅವಲಂಬನೆ ತಗ್ಗಿಸುವುದರ ಪರಿಣಾಮವಾಗಿದೆ ಎಂದು ಒತ್ತಿ ಹೇಳಿದರು. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚು ನವೀನ ಮತ್ತು ಆರ್ಥಿಕವಾಗಿ ಸದೃಢ ಭವಿಷ್ಯದೆಡೆಗೆ ಸಾಗಲು 2023ರ ಭಾರತೀಯ ಬಾಹ್ಯಾಕಾಶ ನೀತಿ  ಒಂದು ‘ದೊಡ್ಡ ಗರಿ’ ಎಂದು ಉಲ್ಲೇಖಿಸಿದ ಉಪರಾಷ್ಟ್ರಪತಿ, ಬಾಹ್ಯಾಕಾಶ ಅನ್ವೇಷಣಾ ಕ್ಷೇತ್ರಕ್ಕೆ ಖಾಸಗಿ ಉದ್ಯಮಗಳ ಪ್ರವೇಶವು ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಹೇಳಿದರು. 

ಬಾಹ್ಯಾಕಾಶ ವಲಯದಲ್ಲಿನ ಭಾರತದ ಸಾಧನೆಗಳು “ರಾಷ್ಟ್ರವನ್ನು ಜಗತ್ತಿನ ಪ್ರಮುಖ ವೇದಿಕೆಗೆ ತಲುಪಿಸಿದೆ” ಎಂದು ಬಲವಾಗಿ ಪ್ರತಿಪಾದಿಸಿದ ಉಪರಾಷ್ಟ್ರಪತಿಗಳು, ಭಾರತದ ಬಾಹ್ಯಾಕಾಶ ಅನ್ವೇಷಣೆಯ ಪಯಣದ ವಿಷಯ ‘ರಾಷ್ಟ್ರೀಯ ಹೆಮ್ಮೆ’ ಎಂದು ಶ್ಲಾಘಿಸಿದರು. “ಚಂದ್ರಯಾನದಿಂದ ಚಂದ್ರನವರೆಗೆ, ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ) ಮತ್ತು ಆದಿತ್ಯ-ಎಲ್ 1 ರ ಸೌರ ಅನ್ವೇಷಣೆಯ ಮೂಲಕ ಭಾರತಕ್ಕೆ ಆಕಾಶವೇ ಮಿತಿಯಲ್ಲ; ಇದು ಕೇವಲ ಆರಂಭವಷ್ಟೇ’’ ಎಂದು ತೋರಿಸಿದೆ” ಅವರು ಒತ್ತಿ ಹೇಳಿದರು.

ಉಪರಾಷ್ಟ್ರಪತಿಗಳ ಭಾಷಣದ ಪೂರ್ಣ ಪಠ್ಯ ಇಲ್ಲಿದೆ..  : https://pib.gov.in/PressReleasePage.aspx?PRID=1958999 

***



(Release ID: 1959087) Visitor Counter : 99