ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಇತ್ತೀಚೆಗೆ ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆ ಹಾಗೂ "ಮೇರಿ ಮಾತಿ ಮೇರಾ ದೇಶ್" ("ನನ್ನ ನೆಲ ನನ್ನ ದೇಶ") ಅಭಿಯಾನದ ಯಶಸ್ಸನ್ನು ಉತ್ತರಾಖಂಡದ ಚಮೋಲಿ ಜಿಲ್ಲೆಯ ದೇಶದ ಮೊದಲ ಗ್ರಾಮ ʻಮಾನಾʼದಲ್ಲಿ ಆಕಾಶವಾಣಿ ದೆಹಲಿ ಆಚರಿಸಿತು

Posted On: 18 SEP 2023 5:34PM by PIB Bengaluru

ಜಿ-20 ಶೃಂಗಸಭೆಯ ಭಾರತದ ಅಧ್ಯಕ್ಷತೆ ಹಾಗೂ 'ನನ್ನ ನೆಲ ನನ್ನ ದೇಶ' ಅಭಿಯಾನದ ಯಶಸ್ವಿ ಸಮಾರೋಪದ ಸಂಭ್ರಮಾಚರಣೆಯನ್ನು ಉತ್ತರಾಖಂಡದ ಚಮೋಲಿ ಜಿಲ್ಲೆಯ `ಮಾನಾ’ ಗ್ರಾಮದಲ್ಲಿ "ರಾಷ್ಟ್ರೀಯ ಹಿಂದಿ ದಿವಸ್" ಎಂದು ಆಚರಿಸಲಾಗುವ 2023ರ ಸೆಪ್ಟೆಂಬರ್ 14ರಂದು ಭವ್ಯ ಸಾಂಸ್ಕೃತಿಕ ವೈಭವದೊಂದಿಗೆ ಆಕಾಶವಾಣಿ ದೆಹಲಿ ನೆರವೇರಿಸಿತು.

ನಗರ ಪ್ರದೇಶಗಳ ಕೇಳುಗರನ್ನು ಗ್ರಾಮೀಣ ಭಾರತದ ಹೃದಯಭಾಗಕ್ಕೆ ಮತ್ತು ಗ್ರಾಮೀಣ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಗೆ ಹತ್ತಿರವಾಗಿಸುವ ಉದ್ದೇಶದಿಂದ ಜುಲೈ 21, 2023ರಿಂದ ಆಕಾಶವಾಣಿ ದೆಹಲಿ ಆಯೋಜಿಸಿದ್ದ ಸರಣಿ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮವು ಒಂದು ಅದ್ಭುತ ಮೈಲುಗಲ್ಲಾಗಿದೆ. 

 ʻಮನಾʼ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಆಕಾಶವಾಣಿಯ ಪ್ರಧಾನ ಮಹಾನಿರ್ದೇಶಕರಾದ ಡಾ. ವಸುಧಾ ಗುಪ್ತಾ ಮತ್ತು ಚಮೋಲಿಯ ಜಿಲ್ಲಾ ದಂಡಾಧಿಕಾರಿ ಶ್ರೀ ಹಿಮಾಂಶು ಖುರಾನಾ ಅವರು ಬಹಳ ಉತ್ಸಾಹದಿಂದ ಉದ್ಘಾಟಿಸಿದರು. ದೆಹಲಿಯ ಆಕಾಶವಾಣಿಯ ಕಾರ್ಯಕ್ರಮಗಳ ವಿಭಾಗದ ಮುಖ್ಯಸ್ಥ ಶ್ರೀ ಎಂ.ಎಸ್.‌ ರಾವತ್, ದೆಹಲಿ ಆಕಾಶವಾಣಿಯ ಜಿ-20 ಕಾರ್ಯಕ್ರಮಗಳ ಸಂಯೋಜಕ ಶ್ರೀ ಪ್ರಮೋದ್ ಕುಮಾರ್ ಹಾಗೂ ಮನಾ ಗ್ರಾಮದ ಪ್ರಧಾನ್ ಪಿತಾಂಬರ ಮೊಲ್ಫಾ ಅವರು ಆಕಾಶವಾಣಿಯ ಪ್ರಧಾನ ಮಹಾ ನಿರ್ದೇಶಕರು ಮತ್ತು ಚಮೋಲಿ ಜಿಲ್ಲಾ ದಂಡಾಧಿಕಾರಿ ಅವರೊಂದಿಗೆ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಜೊತೆಯಾದರು.  ನಂತರ ಸರಸ್ವತಿ ವಂದನೆ ನಡೆಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಆಕಾಶವಾಣಿಯ ಪ್ರಧಾನ ಮಹಾ ನಿರ್ದೇಶಕರಾದ ಡಾ.ವಸುಧಾ ಗುಪ್ತಾ ಅವರು ಮನಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ, ಈ ಗ್ರಾಮದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಆಕಾಶವಾಣಿಯ ಬದ್ಧತೆಯನ್ನು ಒತ್ತಿ ಹೇಳಿದರು. ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದು ಅವರು ತಿಳಿಸಿದರು.

ಸಾಂಸ್ಕೃತಿಕ ಜಾನಪದ ಕಾರ್ಯಕ್ರಮವು ಮನಾ ಗ್ರಾಮದ ಸ್ಥಳೀಯ ಕಲಾವಿದರ ಆಕರ್ಷಕ ಪ್ರದರ್ಶನಗಳನ್ನು ಒಳಗೊಂಡಿತ್ತು. ಪುರುಷರ ಮೋಡಿ ಮಾಡುವ ಪೌನಾ ನೃತ್ಯ ಮತ್ತು ಮನಾ ಗ್ರಾಮದ ಪ್ರತಿಭಾವಂತ ಮಹಿಳೆಯರ ವಿವಿಧ ಜಾನಪದ ಪ್ರದರ್ಶನಗಳು ಇದರ ಭಾಗವಾಗಿದ್ದವು. ಮಾನಾ ಗ್ರಾಮದ ಮಹಿಳೆಯರು ವಿವಿಧ ಜಾನಪದ ನೃತ್ಯಗಳು ಮತ್ತು ಹಾಡುಗಾರಿಕೆಯಲ್ಲಿ ಭಾಗವಹಿಸಿದರು. ಪ್ರವಾಸೋದ್ಯಮ, ʻವೋಕಲ್ ಫಾರ್ ಲೋಕಲ್ʼ ಮತ್ತು ʻಡಿಜಿಟಲ್ ಇಂಡಿಯಾʼದಂತಹ ವಿಷಯಗಳ ಕುರಿತಾಗಿ ಅವರ ಪ್ರದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ತಮ್ಮ ಮನಸೂರೆಮಾಡಿದ ಪ್ರದರ್ಶನಗಳ ಜೊತೆಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ರುಚಿಕರವಾದ ಸ್ಥಳೀಯ ಭಕ್ಷ್ಯಗಳನ್ನು ತಯಾರಿಸಲು ಮಹಿಳೆಯರು ವ್ಯವಸ್ಥೆ ಮಾಡಿದರು. ಆಕಾಶವಾಣಿ ಕಲಾವಿದರು ಮತ್ತು ಉತ್ತರಾಖಂಡದ ಹೆಮ್ಮೆ ಎನಿಸಿರುವ ರಾಖಿ ರಾವತ್ ಹಾಗೂ ಅವರ ತಂಡವು ಉತ್ತರಾಖಂಡದ ಸುಂದರವಾದ ಜಾನಪದ ನೃತ್ಯಗಳು ಮತ್ತು ಹಾಡುಗಳನ್ನು ಪ್ರಸ್ತುತಪಡಿಸಿತು. ಉತ್ತರ ಮತ್ತು ಮಧ್ಯ ವಲಯಗಳ ತಂಡಗಳನ್ನು ಒಳಗೊಂಡ ʻಐಟಿಬಿಪಿ ಜಾಝ್ ಬ್ಯಾಂಡ್ʼ ತಮ್ಮ ಸಂಗೀತದಿಂದ ಪ್ರೇಕ್ಷಕರನ್ನು ಮೋಡಿ ಮಾಡಿತು, ದೇಶಭಕ್ತಿಯ ಉತ್ಸಾಹವನ್ನು ಹೆಚ್ಚಿಸಿತು, ಪ್ರತಿಯೊಬ್ಬರಲ್ಲೂ ರಾಷ್ಟ್ರೀಯ ಹೆಮ್ಮೆಯ ಜಾಗೃತಿ ಮೂಡಿಸಿತು.

ಆಕಾಶವಾಣಿ ದೆಹಲಿಯು ಜುಲೈನಿಂದ ಭಾರತದ ಜಿ-20 ಅಧ್ಯಕ್ಷತೆ ಮತ್ತು 'ಮೇರಿ ಮಾತಿ ಮೇರಾ ದೇಶ್' ಅಭಿಯಾನವನ್ನು ಆಚರಿಸುವ ಸರಣಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಅಭಿಯಾನದ ಅಡಿಯಲ್ಲಿ ಸುಮಾರು 25 ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದು ಭಾರತದ ಯುವಕರ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

 

ವಿಶೇಷವೆಂದರೆ, ಆಕಾಶವಾಣಿ ದೆಹಲಿಯು ಅಟ್ಟಾರಿ ಗಡಿಯಲ್ಲಿ 'ಏಕ್ ಶಾಮ್ ಬಿಎಸ್ಎಫ್ ಜವಾನೋ ಕೆ ನಾಮ್' ಎಂಬ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಆಯೋಜಿಸಿತು. ಇದರ ಮೂಲಕ ಕೆಚ್ಚೆದೆಯ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಗೌರವ ಸಲ್ಲಿಸಿತು. ಇದಲ್ಲದೆ, ಭಾರತದ ಜಿ -20 ಅಧ್ಯಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ʻಜಿ -20 ರನ್ʼ ಅನ್ನು ಸಹ ನಡೆಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಚಿತ್ರಕಲೆ ಸ್ಪರ್ಧೆಗಳು, ರಂಗೋಲಿ ಸ್ಪರ್ಧೆಗಳು ಮತ್ತು ಆಕರ್ಷಕ ಸಾಂಸ್ಕೃತಿಕ ಹಾಗೂ ಜಾನಪದ ಪ್ರದರ್ಶನಗಳು ಇದ್ದವು. ದೇಶದ ವಿವಿಧ ರಾಜ್ಯಗಳ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದುದ್ದಕ್ಕೂ ಅದರಲ್ಲಿ ಭಾಗವಹಿಸಿದವರು ಮತ್ತು ಕಲಾವಿದರು ಅದ್ಭುತ ಉತ್ಸಾಹ ಪ್ರದರ್ಶಿಸಿದರು. ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಲ್ಲದೆ, ರೇಡಿಯೋ ಸೆಟ್‌ಗಳು, ಟಿ-ಶರ್ಟ್‌ಗಳು, ಜಿ-20 ಕಿಟ್‌ಗಳು, ಸ್ಮರಣಿಕೆಗಳು ಮುಂತಾದವನ್ನು ಸ್ವೀಕರಿಸಿದರು. ಇದು ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಆಚರಣೆಯ ನೆನಪುಗಳನ್ನು ಚಿರಸ್ಥಾಯಿಗೊಳಿಸಿತು.

ನಮ್ಮ ದೇಶದ ಮೊದಲ ಗ್ರಾಮವಾದ ಮಾನಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಆಕಾಶವಾಣಿ ದೆಹಲಿಯ ಈ ಉಪಕ್ರಮವು ಐತಿಹಾಸಿಕ ಕ್ಷಣವನ್ನು ಗುರುತಿಸುತ್ತದೆ ಮತ್ತು ಅಂತಹ ಮೊದಲ ಸರಣಿ ಕಾರ್ಯಕ್ರಮಗಳಾಗಿ ದಾಖಲೆ ನಿರ್ಮಿಸಿದೆ. ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ ಮತ್ತು ಮನಾದ ಜನರ ಸಹಕಾರಕ್ಕೆ ಆಕಾಶವಾಣಿ ದೆಹಲಿ ಆಭಾರಿಯಾಗಿದೆ.

ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ಮತ್ತು ಭಾರತದ ಶ್ರೀಮಂತ ಪರಂಪರೆಯ ಸಾರವನ್ನು ಉತ್ತೇಜಿಸಲು, ಎಲ್ಲಾ ವರ್ಗದ ಜನರನ್ನು ಏಕತೆ ಮತ್ತು ದೇಶಭಕ್ತಿಯ ಮನೋಭಾವದಲ್ಲಿ ಒಗ್ಗೂಡಿಸಲು ಆಕಾಶವಾಣಿ ದೆಹಲಿ ಸಮರ್ಪಿತವಾಗಿದೆ.

'ಮೇರಿ ಮಾತಿ ಮೇರಾ ದೇಶ್' ಮತ್ತು ʻಜಿ -20ʼ ಆಚರಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಆಕಾಶವಾಣಿ ದೆಹಲಿಯು ದೇಶದ ಸಾರ್ವಜನಿಕರಲ್ಲಿ ಸಂತೋಷ ಹಾಗೂ ಉತ್ಸಾಹವನ್ನು ಹರಡುವ ಕೆಲಸದಲ್ಲಿ ಮಗ್ನವಾಗಿತ್ತು. ʻಸಿಐಎಸ್ಎಫ್ʼ ಯೋಧರಿಗಾಗಿ ಸೆಪ್ಟೆಂಬರ್ 25, 2023 ರಂದು ಸಿಐಎಸ್ಎಫ್ ಇಂದಿರಾಪುರಂನಲ್ಲಿ ಮುಂದಿನ ಕಾರ್ಯಕ್ರಮವನ್ನು ಯೋಜಿಸಲಾಗಿದೆ.


****



(Release ID: 1958798) Visitor Counter : 99