ಕೃಷಿ ಸಚಿವಾಲಯ

ಹೊಸದಿಲ್ಲಿಯಲ್ಲಿಂದು ಆಯೋಜಿಸಲಾದ  'ರೈತರ ಹಕ್ಕುಗಳನ್ನು ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣ'  ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಉದ್ಘಾಟನೆ 


ರೈತರು 'ಅನ್ನದಾತರು' ಮತ್ತು ಆಹಾರವಿದ್ದರೆ ಮಾತ್ರ ದೇಹವಿದೆ, ಮತ್ತು ದೇಹವಿದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ,  ಅದರಿಂದಾಗಿಯೇ ರೈತರಿಗೆ ನಮಸ್ಕರಿಸಬೇಕು ಮತ್ತು ಅವರ ಹಕ್ಕುಗಳು ಹಾಗು ಭವಿಷ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ - ಭಾರತದ ರಾಷ್ಟ್ರಪತಿ

ಹಲವಾರು ಸಸ್ಯ ಪ್ರಭೇದಗಳನ್ನು ಎಚ್ಚರಿಕೆಯಿಂದ ಪೋಷಿಸಿ ಅಭಿವೃದ್ಧಿಪಡಿಸಿದ ನಮ್ಮ ರೈತರ ಪ್ರಯತ್ನಗಳಿಂದಾಗಿ ದೇಶದ ಶ್ರೀಮಂತ ಕೃಷಿ ಪರಂಪರೆಯು ಪ್ರವರ್ಧಮಾನಕ್ಕೆ ಬಂದಿದೆ - ಶ್ರೀ ನರೇಂದ್ರ ಸಿಂಗ್ ತೋಮರ್

Posted On: 12 SEP 2023 3:34PM by PIB Bengaluru

ಹೊಸದಿಲ್ಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರದ ಐಸಿಎಆರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 'ರೈತರ ಹಕ್ಕುಗಳನ್ನು ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣ'ವನ್ನು (ಜಿಎಸ್ ಎಫ್ ಆರ್) ಉದ್ಘಾಟಿಸಿದರು. ರಾಷ್ಟ್ರಪತಿ  ಮುರ್ಮು ಅವರು ಆಹ್ವಾನಿತ ಭಾರತೀಯ ರೈತರಿಗೆ 'ಸಸ್ಯ ಜೀನೋಮ್ ರಕ್ಷಕ ಸಮುದಾಯಗಳು' ಪ್ರಶಸ್ತಿ (6) ಮತ್ತು 'ಸಸ್ಯ ಜೀನೋಮ್ ರಕ್ಷಕ ರೈತರ ಬಹುಮಾನ' (16) ಹಾಗು  'ಸಸ್ಯ ಜೀನೋಮ್ ರಕ್ಷಕ ರೈತರ ಗುರುತಿಸುವಿಕೆ' (4) ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಗಳನ್ನು ಪಿಪಿವಿಎಫ್ಆರ್ ಕಾಯ್ದೆ, 2001 ರ ನಿಬಂಧನೆಗಳ ಪ್ರಕಾರ ಪಿಪಿವಿಎಫ್ಆರ್ ಪ್ರಾಧಿಕಾರವು ಸ್ಥಾಪಿಸಿದೆ. ಹೊಸದಾಗಿ ನಿರ್ಮಿಸಲಾದ 'ಸಸ್ಯ ಪ್ರಾಧಿಕಾರ ಭವನ', ಪಿಪಿವಿಎಫ್ಆರ್ ಪ್ರಾಧಿಕಾರದ ಕಚೇರಿ ಮತ್ತು ಆನ್ ಲೈನ್  ಸಸ್ಯ ವೈವಿಧ್ಯ 'ನೋಂದಣಿ ಪೋರ್ಟಲ್' ನ್ನು ಅವರು  ಉದ್ಘಾಟಿಸಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಸಹಾಯಕ  ಸಚಿವ ಶ್ರೀ ಕೈಲಾಶ್ ಚೌಧರಿ ಮತ್ತು ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ, ಶ್ರೀಮಂತ ಕೃಷಿ, ಸಾಂಸ್ಕೃತಿಕ ಮತ್ತು ಜನಾಂಗೀಯ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಷ್ಠಿತ ಸಭೆಯನ್ನು ಆಯೋಜಿಸಲು ಭಾರತವನ್ನು ಸೂಕ್ತವಾಗಿ ಆಯ್ಕೆ ಮಾಡಿದ್ದಕ್ಕಾಗಿ ಸಂಘಟಕರಾದ ಎಫ್ಎಒ ಮತ್ತು ಆಹಾರ ಹಾಗು ಕೃಷಿಗಾಗಿ ಇರುವ ಸಸ್ಯ ಆನುವಂಶಿಕ ಸಂಪನ್ಮೂಲಗಳ ಅಂತರರಾಷ್ಟ್ರೀಯ ಒಪ್ಪಂದದ (ಒಪ್ಪಂದ) ಸಚಿವಾಲಯವನ್ನು ಅಭಿನಂದಿಸಿದರು. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ "ವಸುದೈವ ಕುಟುಂಬಕಂ" (ಜಗತ್ತು ಒಂದು ಕುಟುಂಬ) ಎಂಬ ತತ್ವಶಾಸ್ತ್ರದ ನೆಲೆವೀಡಾಗಿರುವ ಈ ಸ್ಥಳಕ್ಕೆ  ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು. ರೈತರು ಶ್ರಮಪಟ್ಟು ಜೀವ ವೈವಿಧ್ಯವನ್ನು , ಕೃಷಿಯಲ್ಲಿ ಬಳಸುವ ಬೆಳೆಗಳ ಪೂರ್ವಜರಾದ ವನ್ಯ ಸಂಬಂಧಿ ಸಸ್ಯಗಳು ಮತ್ತು ಸಾಂಪ್ರದಾಯಿಕ ರೀತಿಯ ಬೆಳೆಗಳನ್ನು ಅಭಿವೃದ್ಧಿಪಡಿಸಿದ್ದಾರೆ ಇಲ್ಲವೇ ಅವುಗಳನ್ನು ಸಂರಕ್ಷಿಸಿದ್ದಾರೆ ಮತ್ತು  ಆ ಮೂಲಕ ಆಧುನಿಕ ಬೆಳೆ ತಳಿ ವರ್ಧನೆ ಕಾರ್ಯಕ್ರಮಗಳಿಗೆ ಮೂಲಾಧಾರಗಳನ್ನು  ಒದಗಿಸಿದ್ದಾರೆ, ಇದರಿಂದಾಗಿ ಮಾನವರು ಮತ್ತು ಜಾನುವಾರುಗಳಿಗೆ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಚಿತಪಡಿಸಿದ್ದಾರೆ ಎಂದು ಅವರು ಹೇಳಿದರು. ರೈತರು ಪ್ರಾಥಮಿಕ ಆಹಾರ ಉತ್ಪಾದಕರು (ಅನ್ನದಾತ) ಆಗಿರುವುದರಿಂದ ಜಿಎಫ್ಎಸ್ಆರ್ ಆಯೋಜಿಸಿರುವುದು  ಅತ್ಯಂತ ಸೂಕ್ತವಾಗಿದೆ ಮತ್ತು ಆಹಾರವಿದ್ದರೆ ಮಾತ್ರ ದೇಹವಿರುತ್ತದೆ ಮತ್ತು ದೇಹವಿದ್ದರೆ ಯಾವುದೇ ಕೆಲಸ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ರೈತರಿಗೆ ನಮಸ್ಕರಿಸಬೇಕಾಗಿದೆ ಮತ್ತು ಅವರ ಹಕ್ಕುಗಳು ಹಾಗು ಭವಿಷ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದೂ ಅವರು ನುಡಿದರು. 

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ರಾಷ್ಟ್ರಪತಿಗಳನ್ನು ಸ್ವಾಗತಿಸುತ್ತ , ಹೊಸದಿಲ್ಲಿಯಲ್ಲಿ (2022 ರ ಸೆಪ್ಟೆಂಬರ್ 17 ರಿಂದ 24,ರ ನಡುವೆ) ನಡೆದ ಎಫ್ಎಒನ ಅಂತರರಾಷ್ಟ್ರೀಯ ಒಪ್ಪಂದದ ಆಡಳಿತ ಮಂಡಳಿಯ ಒಂಬತ್ತನೇ ಅಧಿವೇಶನದಲ್ಲಿ ಭಾರತ ಸರ್ಕಾರ ಪ್ರಸ್ತಾಪಿಸಿದ ಜಿಎಫ್ಎಸ್ಆರ್ ಅನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (ಡಿಎ &ಎಫ್ಡಬ್ಲ್ಯೂ)ಯು ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ (ಪಿಪಿವಿಎಫ್ಆರ್) ಪ್ರಾಧಿಕಾರದ ಸಹಯೋಗದೊಂದಿಗೆ ಸಮರ್ಥವಾಗಿ ಆಯೋಜಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್), ಐಸಿಎಆರ್-ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಐಎಆರ್ ಐ) ಮತ್ತು ಐಸಿಎಆರ್-ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ (ಎನ್ ಬಿ ಪಿಜಿಆರ್) ಸಹಭಾಗಿತ್ವವನ್ನು ನೀಡಿವೆ. ಕೃಷಿ ಜೀವವೈವಿಧ್ಯ ಸಂರಕ್ಷಣೆ ಕೇವಲ ಕರ್ತವ್ಯವಲ್ಲ, ಅದು  ಪರಿಸರ ವ್ಯವಸ್ಥೆಯ ಉಳಿವಿಗೆ ಪ್ರಮುಖ ಅಗತ್ಯವಾಗಿದೆ ಎಂದೂ  ಅವರು ಹೇಳಿದರು. ನಮ್ಮ ದೇಶದ ಶ್ರೀಮಂತ ಕೃಷಿ ಪರಂಪರೆಯು ನಮ್ಮ ರೈತರ ಪ್ರಯತ್ನಗಳಿಂದಾಗಿ ಪ್ರವರ್ಧಮಾನಕ್ಕೆ ಬಂದಿದೆ, ಅವರು ಹಲವಾರು ಸಸ್ಯ ಪ್ರಭೇದಗಳನ್ನು ಎಚ್ಚರಿಕೆಯಿಂದ ಪೋಷಿಸಿ ಅಭಿವೃದ್ಧಿಪಡಿಸಿದ್ದಾರೆ. ಈ ರೀತಿಯ ಸಸ್ಯ ವೈವಿಧ್ಯಗಳು ಜೀವನೋಪಾಯದ ಮೂಲ ಮಾತ್ರವಲ್ಲ, ಪ್ರಕೃತಿ ಮತ್ತು ಸಂಸ್ಕೃತಿಯ ನಡುವಿನ ಆಳವಾದ ಸಂಪರ್ಕಕ್ಕೆ  ಅವು ಜೀವಂತ ಸಾಕ್ಷಿಯಾಗಿವೆ   ಎಂದೂ  ಅವರು ನುಡಿದರು. 

ಡಿಎ ಮತ್ತು ಎಫ್ ಡಬ್ಲ್ಯೂ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು, ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ (ಪಿಪಿವಿಎಫ್ ಆರ್) ಕಾಯ್ದೆ, 2001 ರ ಮೂಲಕ ಸಸ್ಯ ವೈವಿಧ್ಯ ನೋಂದಣಿಯ ಸಂದರ್ಭದಲ್ಲಿ ರೈತರ ಹಕ್ಕುಗಳನ್ನು ಸೇರಿಸಿದ ವಿಶ್ವದ ಮೊದಲ ದೇಶ ಭಾರತವಾಗಿದೆ ಎಂದು ಮಾಹಿತಿ ನೀಡಿದರು. ಪಿಪಿವಿಎಫ್ಆರ್ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಮೊಹಾಪಾತ್ರ ಸ್ವಾಗತ ಭಾಷಣ ಮಾಡಿದರು ಮತ್ತು ಜಿಎಫ್ಎಸ್ಆರ್ ನ  ಉಗಮ ಹಾಗು ನಿರೀಕ್ಷೆಗಳ ಬಗ್ಗೆ ವಿವರಿಸಿದರು.

ಕಾರ್ಯದರ್ಶಿ (ಡಿಎಆರ್ ಇ)ಮತ್ತು ಮಹಾನಿರ್ದೇಶಕ (ಐಸಿಎಆರ್) ಡಾ.ಹಿಮಾಂಶು ಪಾಠಕ್, ಟ್ರಸ್ಟ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ (ಟಿಎಎಎಸ್) ಅಧ್ಯಕ್ಷ ಮತ್ತು ಐಸಿಎಆರ್ ಮಾಜಿ ಕಾರ್ಯದರ್ಶಿ ಡಾ.ಆರ್.ಎಸ್.ಪರೋಡಾ, ಐಟಿಪಿಜಿಆರ್ ಎಫ್ ಎ ಕಾರ್ಯದರ್ಶಿ ಕೆಂಟ್ ನಡೋಜಿ ಮತ್ತು ಭಾರತದಲ್ಲಿ ಎಫ್ಎಒ ಪ್ರತಿನಿಧಿ ತಕಾಯುಕಿ ಹಗಿವಾರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತವು 2023 ರ ಸೆಪ್ಟೆಂಬರ್ 12 ರಿಂದ 15 ರವರೆಗೆ ಜಿಎಫ್ಎಸ್ಆರ್ ಆಯೋಜಿಸುತ್ತಿದೆ, ಇದರಲ್ಲಿ 59 ದೇಶಗಳಿಂದ 700 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಒಪ್ಪಂದದ ರಾಷ್ಟ್ರೀಯ ಕೇಂದ್ರಗಳು, ವಿಶ್ವದಾದ್ಯಂತದ ರೈತ ಸಂಘಟನೆಗಳು, ನೀತಿ ನಿರೂಪಕರು, ವಿಜ್ಞಾನಿಗಳು, ಸಂಶೋಧನಾ ವಿದ್ವಾಂಸರು, ಉದ್ಯಮ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಅಂತರ್ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಕಾನೂನು ತಜ್ಞರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಇದರಲ್ಲಿ ಸೇರಿದ್ದಾರೆ. ಈ ರೀತಿಯ ಮೊದಲ ವಿಚಾರ ಸಂಕಿರಣವು ನವೀನ ವಿಧಾನಗಳು, ಪರಿಣಾಮಕಾರಿ ನೀತಿಗಳು, ಉತ್ತಮ ಪದ್ಧತಿಗಳು/ಅಭ್ಯಾಸಗಳು, ಜ್ಞಾನ ಮತ್ತು ರೈತರ ಹಕ್ಕುಗಳನ್ನು ಕಾರ್ಯಗತಗೊಳಿಸುವಲ್ಲಿ ಅನುಭವ ಹಂಚಿಕೆಯ ಚರ್ಚೆಗಳ ಮೂಲಕ ಒಪ್ಪಂದದ ಪಾಲುದಾರ ಪಕ್ಷಗಳಿಂದ  ರೈತರ ಹಕ್ಕುಗಳ ಅನುಷ್ಠಾನವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ಜಾಗತಿಕ ವಿಚಾರ ಸಂಕಿರಣವು ರೈತರನ್ನು ಕೃಷಿ ಜೀವವೈವಿಧ್ಯತೆಯ ಸಂರಕ್ಷಕರು ಮತ್ತು ಜಾಗತಿಕ ಆಹಾರ ಭದ್ರತೆಯ ರಕ್ಷಕರು ಎಂದು ಗುರುತಿಸುವುದನ್ನು ಉತ್ತೇಜಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ

****



(Release ID: 1956668) Visitor Counter : 140