ಪ್ರಧಾನ ಮಂತ್ರಿಯವರ ಕಛೇರಿ

ಜಿ-20 ಭ್ರಷ್ಟಾಚಾರ ನಿಗ್ರಹದ ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


"ದುರಾಸೆ ಎಂಬುದು ಸತ್ಯ ಅರಿತುಕೊಳ್ಳುವುದನ್ನು ತಡೆಯುತ್ತದೆ"

"ಭಾರತವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ಕಟ್ಟುನಿಟ್ಟಾದ ನೀತಿ ಹೊಂದಿದೆ"

"ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ತನ್ನ ಜನರ ಕಡೆಗೆ ಸರ್ಕಾರದ ಪವಿತ್ರ ಕರ್ತವ್ಯವಾಗಿದೆ"

"ಸಕಾಲಿಕ ಆಸ್ತಿ ಪತ್ತೆ ಹಚ್ಚುವಿಕೆ ಮತ್ತು ಅಪರಾಧದ ಆದಾಯ ಗುರುತಿಸುವುದು ಅಷ್ಟೇ ಮುಖ್ಯ"

"ಜಿ-20 ರಾಷ್ಟ್ರಗಳು ವರ್ಧಿತ ಅಂತಾರಾಷ್ಟ್ರೀಯ ಸಹಕಾರ ಮತ್ತು ಸದೃಢ ಕ್ರಮಗಳ ಅನುಷ್ಠಾನದ ಮೂಲಕ ಬದಲಾವಣೆ ತರಬಹುದು"

"ನಮ್ಮ ಆಡಳಿತ ಮತ್ತು ಕಾನೂನು ವ್ಯವಸ್ಥೆಗಳನ್ನು ಬಲಪಡಿಸುವ ಜತೆಗೆ, ನಾವು ನಮ್ಮ ಮೌಲ್ಯ ವ್ಯವಸ್ಥೆಗಳಲ್ಲಿ ನೈತಿಕತೆ ಮತ್ತು ಸಮಗ್ರತೆಯ ಸಂಸ್ಕೃತಿ  ಬೆಳೆಸಬೇಕು"

Posted On: 12 AUG 2023 9:29AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಸಂದೇಶದ ಮೂಲಕ ಕೋಲ್ಕತ್ತಾದಲ್ಲಿ ನಡೆದ ಜಿ-20 ಭ್ರಷ್ಟಾಚಾರ ವಿರೋಧಿ ಅಥವಾ ನಿಗ್ರಹದ ಸಚಿವರ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ನೊಬೆಲ್ ಪ್ರಶಸ್ತಿ ವಿಜೇತ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಸ್ವಂತ ನಗರವಾದ  ಕೋಲ್ಕತ್ತಾಕ್ಕೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನಿ, ಇದು ಭೌತಿಕವಾಗಿ ನಡೆಯುತ್ತಿರುವ ಮೊದಲ ಜಿ-20 ಭ್ರಷ್ಟಾಚಾರ ನಿಗ್ರಹದ ಸಚಿವರ ಸಮಾವೇಶವಾಗಿದೆ.  ಟ್ಯಾಗೋರ್ ಅವರ ಬರಹಗಳನ್ನು ಉಲ್ಲೇಖಿಸಿದ ಪ್ರಧಾನಿ, ದುರಾಸೆ ಎಂಬುದು   ಸತ್ಯ ಅರಿತುಕೊಳ್ಳುವುದನ್ನು ತಡೆಯುತ್ತದೆ. ಪ್ರಾಚೀನ ಭಾರತೀಯ ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವ 'ಮಾ ಗ್ರಿಧಾ' ಅಂದರೆ 'ದುರಾಸೆ ಇರಬಾರದು' ಎಂಬ ಅರ್ತ ಸೂಚಿಸುತ್ತದೆ ಎಂದರು.

ಭ್ರಷ್ಟಾಚಾರದ ಹೆಚ್ಚಿನ ಪರಿಣಾಮವನ್ನು ಬಡವರು ಮತ್ತು ಸೌಲಭ್ಯವಂಚಿತರು ಮತ್ತು ನಿರ್ಲಕ್ಷಿತರು ಎದುರಿಸುತ್ತಿದ್ದಾರೆ. ಇದು ಸಂಪನ್ಮೂಲ ಬಳಕೆಯ ಮೇಲೆ ಪರಿಣಾಮ ಬೀರುತ್ತದೆ, ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತದೆ, ಸೇವಾ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಜನರ ಜೀವನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಅರ್ಥಶಾಸ್ತ್ರದಲ್ಲಿ ಕೌಟಿಲ್ಯನನ್ನು ಉಲ್ಲೇಖಿಸಿದ ಪ್ರಧಾನಿ, ರಾಜ್ಯದ ಜನರ ಕಲ್ಯಾಣವನ್ನು ಗರಿಷ್ಠಗೊಳಿಸಲು ರಾಜ್ಯದ ಸಂಪನ್ಮೂಲಗಳನ್ನು ಹೆಚ್ಚಿಸುವುದು ಸರ್ಕಾರದ ಕರ್ತವ್ಯ. ಈ ಗುರಿ ಸಾಧಿಸಲು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅಗತ್ಯವಿದೆ. ಇದು ತನ್ನ ಜನರ ಕಡೆಗೆ ಸರ್ಕಾರದ ಪವಿತ್ರ ಕರ್ತವ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

"ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ಕಟ್ಟುನಿಟ್ಟಾದ ನೀತಿಯನ್ನು ಭಾರತ ಹೊಂದಿದೆ", ಪಾರದರ್ಶಕ ಮತ್ತು ಜವಾಬ್ದಾರಿಯುತ ಪರಿಸರ ವ್ಯವಸ್ಥೆ ರಚಿಸಲು ಭಾರತವು ತಂತ್ರಜ್ಞಾನ ಮತ್ತು ಇ-ಆಡಳಿತವನ್ನು ಬಳಸಿಕೊಳ್ಳುತ್ತಿದೆ. ಕಲ್ಯಾಣ ಯೋಜನೆಗಳು ಮತ್ತು ಸರ್ಕಾರಿ ಯೋಜನೆಗಳಲ್ಲಿ ಸೋರಿಕೆ ಮತ್ತು ಅಂತರ ಅಥವಾ ಕಂದಕವನ್ನು ತಡೆಯಲಾಗುತ್ತಿದೆ. ಇದರ ಪರಿಣಾಮವಾಗಿ, ಭಾರತದಲ್ಲಿ ಲಕ್ಷಾಂತರ  ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ 360 ಶತಕೋಟಿ ಡಾಲರ್‌ಗಿಂತ ಹೆಚ್ಚು ಮೊತ್ತದ ನೇರ ಲಾಭ ವರ್ಗಾವಣೆಯ ಪ್ರಯೋಜನ ಪಡೆಯುತ್ತಿದ್ದಾರೆ. 33 ಶತಕೋಟಿ ಡಾಲರ್‌ ಹಣ ಉಳಿಸಿ. ಸರ್ಕಾರವು ವ್ಯವಹಾರಗಳಿಗೆ ವಿವಿಧ ಕಾರ್ಯವಿಧಾನಗಳನ್ನು ಸರಳಗೊಳಿಸಿದೆ. ಸರ್ಕಾರಿ ಸೇವೆಗಳ ಯಾಂತ್ರೀಕರಣ ಮತ್ತು ಡಿಜಿಟಲೀಕರಣದ ಉದಾಹರಣೆ ನೀಡಿದ ಪ್ರಧಾನಿ, ಅದು ಬಾಡಿಗೆ ಪಡೆಯುವ ಅವಕಾಶಗಳನ್ನು ತೊಡೆದುಹಾಕಿದೆ. "ನಮ್ಮ ಸರ್ಕಾರಿ ಇ-ಮಾರುಕಟ್ಟೆ, ಅಥವಾ ಜಿಇಎಂ ಪೋರ್ಟಲ್, ಸರ್ಕಾರಿ ಸಂಗ್ರಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತಂದಿದೆ" ಎಂದರು. 2018ರಲ್ಲಿ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೊಳಿಸಿದ ಕುರಿತು ಮಾತನಾಡಿದ ಪ್ರಧಾನಿ, ಸರ್ಕಾರವು ಆರ್ಥಿಕ ಅಪರಾಧಿಗಳನ್ನು ಆಕ್ರಮಣಕಾರಿಯಾಗಿ ಸೆರೆ ಹಿಡಿಯುತ್ತಿದೆ. ಆರ್ಥಿಕ ಅಪರಾಧಿಗಳು ಮತ್ತು ಪರಾರಿಯಾಗಿರುವವರಿಂದ 1.8 ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಆಸ್ತಿ ವಸೂಲಿ ಮಾಡಲು ಸೂಚಿಸಲಾಗಿದೆ. 2014ರಿಂದ 12 ಶತಕೋಟಿ ಡಾಲರ್‌ಗಿಂತ ಹೆಚ್ಚು ಮೌಲ್ಯದ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಲು ‘ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ’ ಸಹಾಯ ಮಾಡಿದೆ ಎಂದು ಪ್ರಧಾನಿ ತಿಳಿಸಿದರು.

2014ರಲ್ಲಿ ತಮ್ಮ ಮೊದಲ ಜಿ-20 ಶೃಂಗಸಭೆಯಲ್ಲಿ ಎಲ್ಲಾ ಜಿ-20 ರಾಷ್ಟ್ರಗಳು ಮತ್ತು ಜಾಗತಿಕ ದಕ್ಷಿಣಕ್ಕೆ ಪಲಾಯನಗೈದ ಆರ್ಥಿಕ ಅಪರಾಧಿಗಳ ಸವಾಲುಗಳ ಕುರಿತು ಮಾತನಾಡಿದ್ದನ್ನು ಪ್ರಧಾನಿ ನೆನಪಿಸಿಕೊಂಡರು. ಅವರು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮಕ್ಕಾಗಿ 9 ಅಂಶಗಳ ಕಾರ್ಯಸೂಚಿ ಪ್ರಸ್ತುತಪಡಿಸಿದ ಅವರು, ಆಸ್ತಿ ಮರುಪಡೆಯುವಿಕೆ ವಿಷ್ಯದಲ್ಲಿ 2018ರ ಜಿ-20 ಶೃಂಗಸಭೆ ಮತ್ತು ಕಾರ್ಯನಿರತ ಗುಂಪು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಮಾಹಿತಿ ಹಂಚಿಕೆಯ ಮೂಲಕ ಕಾನೂನು ಜಾರಿ ಸಹಕಾರ, ಆಸ್ತಿ ಮರುಪಡೆಯುವಿಕೆ ಕಾರ್ಯವಿಧಾನಗಳನ್ನು ಬಲಪಡಿಸುವುದು ಮತ್ತು ಭ್ರಷ್ಟಾಚಾರ-ವಿರೋಧಿ ಅಧಿಕಾರಿಗಳ ಸಮಗ್ರತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ 3 ಆದ್ಯತೆಯ ಕ್ಷೇತ್ರಗಳ ಮೇಲಿನ ಕ್ರಮ-ಆಧಾರಿತ ಉನ್ನತ ಮಟ್ಟದ ತತ್ವಗಳನ್ನು ಪ್ರಧಾನಿ ಸ್ವಾಗತಿಸಿದರು. ಕಾನೂನು ಜಾರಿ ಸಂಸ್ಥೆಗಳ ನಡುವೆ ಅನೌಪಚಾರಿಕ ಸಹಕಾರದ ಬಗ್ಗೆ ತಿಳುವಳಿಕೆ ಸಾಧಿಸಲಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು, ಇದು ಅಪರಾಧಿಗಳು ಗಡಿ ದಾಟುವಾಗ ಕಾನೂನಿನ ಲೋಪದೋಷಗಳನ್ನು ಬಳಸಿಕೊಳ್ಳುವುದನ್ನು ತಡೆಯುತ್ತದೆ. ಸಮಯೋಚಿತ ಆಸ್ತಿ ಪತ್ತೆ ಮತ್ತು ಅಪರಾಧದ ಆದಾಯದ ಗುರುತಿನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ದೇಶಗಳು ತಮ್ಮ ದೇಶೀಯ ಆಸ್ತಿ ಮರುಪಡೆಯುವಿಕೆ ಕಾರ್ಯವಿಧಾನಗಳನ್ನು ಹೆಚ್ಚಿಸಲು ಉತ್ತೇಜಿಸುವ ಅಗತ್ಯವಿದೆ. ವಿದೇಶಿ ಆಸ್ತಿಗಳ ಮರುಪಡೆಯುವಿಕೆ ಕ್ರಮಗಳನ್ನು  ತ್ವರಿತಗೊಳಿಸಲು ಅಪರಾಧ-ಆಧರಿತ ಮುಟ್ಟುಗೋಲು ಕ್ರಮಗಳನ್ನು ಬಳಸುವ ಮೂಲಕ ಜಿ-20 ದೇಶಗಳು ಮಾದರಿಯಾಗಬಹುದು. ಇದು ನ್ಯಾಯಾಂಗ ಪ್ರಕ್ರಿಯೆಯ ನಂತರ ಅಪರಾಧಿಗಳ ತ್ವರಿತ ವಾಪಸಾತಿ ಮತ್ತು ಹಸ್ತಾಂತರವನ್ನು ಖಚಿತಪಡಿಸುತ್ತದೆ. "ಇದು ಭ್ರಷ್ಟಾಚಾರದ ವಿರುದ್ಧ ನಮ್ಮ ಜಂಟಿ ಹೋರಾಟದ ಬಗ್ಗೆ ಬಲವಾದ ಸಂದೇಶವನ್ನು ಕಳುಹಿಸುತ್ತದೆ" ಎಂದು ಅವರು ಹೇಳಿದರು.

ಜಿ-20 ರಾಷ್ಟ್ರಗಳ ಸಾಮೂಹಿಕ ಅಥವಾ ಸಂಘಟಿತ ಪ್ರಯತ್ನಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಗಣನೀಯವಾಗಿ ಬೆಂಬಲಿಸಬಹುದು. ವರ್ಧಿತ ಅಂತಾರಾಷ್ಟ್ರೀಯ ಸಹಕಾರ ಮತ್ತು ಭ್ರಷ್ಟಾಚಾರದ ಮೂಲ ಕಾರಣಗಳನ್ನು ಪರಿಹರಿಸುವ ಸದೃಢ ಕ್ರಮಗಳ ಅನುಷ್ಠಾನದ ಮೂಲಕ ದೊಡ್ಡ ಬದಲಾವಣೆ ತರಬಹುದು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಲೆಕ್ಕಪತ್ರ ಸಂಸ್ಥೆಗಳ ಪಾತ್ರ ದೊಡ್ಡದು. ನಮ್ಮ ಆಡಳಿತ ಮತ್ತು ಕಾನೂನು ವ್ಯವಸ್ಥೆಗಳನ್ನು ಬಲಪಡಿಸುವುದರೊಂದಿಗೆ ಮೌಲ್ಯ ವ್ಯವಸ್ಥೆಗಳಲ್ಲಿ ನೈತಿಕತೆ ಮತ್ತು ಸಮಗ್ರತೆಯ ಸಂಸ್ಕೃತಿಯನ್ನು ಬೆಳೆಸುವುದು ಅಗತ್ಯ. “ಹಾಗೆ ಮಾಡುವುದರಿಂದ ಮಾತ್ರ ನಾವು ನ್ಯಾಯಯುತ ಮತ್ತು ಸುಸ್ಥಿರ ಸಮಾಜಕ್ಕೆ ಅಡಿಪಾಯ ಹಾಕಬಹುದು. ಫಲಪ್ರದ ಮತ್ತು ಯಶಸ್ವಿ ಸಮಾವೇಶ ಆಯೋಜಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಶುಭಾಶಯ ಹೇಳಲು ಬಯಸುತ್ತೇನೆ”, ಎಂದು ಪ್ರಧಾನ ಮಂತ್ರಿ ಅವರು ಭಾಷಣ ಮುಕ್ತಾಯಗೊಳಿಸಿದರು.

 

My remarks at the G20 Anti-Corruption Ministerial Meeting in Kolkata. @g20org https://t.co/dmaS4NwLcM

— Narendra Modi (@narendramodi) August 12, 2023

 

***



(Release ID: 1948120) Visitor Counter : 102