ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿಗೆ ಪ್ರಧಾನಿಗಳಿಂದ ಉತ್ತರ


"ಸರ್ಕಾರದ ಮೇಲೆ ತಮ್ಮ ನಂಬಿಕೆಯನ್ನು ಪದೇ ಪದೇ ತೋರಿಸಿದ್ದಕ್ಕಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಂದಿದ್ದೇನೆ"

"ಪ್ರತಿಪಕ್ಷಗಳು ರಾಜಕೀಯಕ್ಕೇ ಹೆಚ್ಚು ಮಹತ್ವ ನೀಡಿದ್ದರಿಂದ ಸದನದಲ್ಲಿ ಅನೇಕ ಮಹತ್ವದ ಶಾಸನಗಳು ಅತ್ಯಗತ್ಯ ಚರ್ಚೆಯಿಂದ ವಂಚಿತವಾಗಿವೆ"

"21ನೇ ಶತಮಾನದ ಈ ಅವಧಿಯು ಮುಂದಿನ ಸಾವಿರ ವರ್ಷಗಳವರೆಗೆ ದೇಶದ ಮೇಲೆ ಪರಿಣಾಮ ಬೀರುತ್ತದೆ. ನಾವೆಲ್ಲರೂ ಒಂದೇ ಗುರಿಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು"

"ನಾವು ಭಾರತದ ಯುವಕರಿಗೆ ಹಗರಣಗಳಿಂದ ಮುಕ್ತವಾದ ಸರ್ಕಾರವನ್ನು ನೀಡಿದ್ದೇವೆ"

"ಇಂದು ಬಡವರ ಹೃದಯದಲ್ಲಿ ಅವರ ಕನಸುಗಳನ್ನು ಈಡೇರುವ ವಿಶ್ವಾಸ ಮೂಡಿದೆ"

"ಪ್ರತಿಪಕ್ಷಗಳು ಅಪನಂಬಿಕೆಯಲ್ಲಿ ಆಳವಾಗಿ ಮುಳುಗಿರುವುದರಿಂದ ಜನರ ವಿಶ್ವಾಸವನ್ನು ನೋಡಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ"

"2028ರಲ್ಲಿ, ನೀವು ಅವಿಶ್ವಾಸ ನಿಲುವಳಿಯನ್ನು ಮಂಡಿಸುವ ಹೊತ್ತಿಗೆ ದೇಶವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ"

"ಪ್ರತಿಪಕ್ಷಗಳು ಹೆಸರುಗಳನ್ನು ಬದಲಾಯಿಸುವುದರಲ್ಲಿ ನಂಬಿಕೆ ಇರಿಸಿವೆ, ಆದರೆ ಅವರು ತಮ್ಮ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ"

"ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಸಂಸ್ಥಾಪಕರು ಸದಾ ವಂಶಪಾರಂಪರ್ಯ ರಾಜಕೀಯವನ್ನು ವಿರೋಧಿಸಿದರು"

"ಮಹಿಳೆಯರ ವಿರುದ್ಧದ ಅಪರಾಧಗಳನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೆಲಸ ಮಾಡಲಿವೆ"

"ಮಣಿಪುರದಲ್ಲಿ ಶಾಂತಿ ನೆಲೆಸಲಿದೆ ಮತ್ತು ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ"

"ಮಣಿಪುರದ ಜನರಿಗೆ, ಮಣಿಪುರದ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಮತ್ತು ಸದನವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಭರವಸೆ ನೀಡುತ್ತೇನೆ"

"ಮಣಿಪುರವನ್ನು ಮತ್ತೆ ಅಭಿವೃದ್ಧಿಯ ಹಾದಿಗೆ ತರಲು ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ"

"ನಮ್ಮ ಸರ್ಕಾರ ಈಶಾನ್ಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ"

"ನಮಗೆ, ʻಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ʼ ಒಂದು ಘೋಷಣೆಯಲ್ಲ, ಅದೊಂದು ನಂಬಿಕೆ, ಅದೊಂದು ಬದ್ಧತೆ"

"ಸಂಸತ್ತು ಯಾವುದೇ ಒಂದು ಪಕ್ಷಕ್ಕೆ ವೇದಿಕೆಯಲ್ಲ. ಸಂಸತ್ತು ದೇಶದ ಗೌರವಾನ್ವಿತ ಅತ್ಯುನ್ನತ ಸಂಸ್ಥೆ. ಇಲ್ಲಿರುವ ಪ್ರತಿ ಸೆಕೆಂಡನ್ನು ದೇಶಕ್ಕಾಗಿ ಸದ್ವಿನಿಯೋಗವಾಗಬೇಕು"

"ಇಂದಿನ ಭಾರತವು ಒತ್ತಡದಲ್ಲಿ ಕುಸಿಯುವುದಿಲ್ಲ. ಇಂದಿನ ಭಾರತವು ಬಾಗುವುದಿಲ್ಲ, ಆಯಾಸಗೊಳ್ಳುವುದಿಲ್ಲ ಮತ್ತು ನಿಲ್ಲುವುದಿಲ್ಲ"

Posted On: 10 AUG 2023 8:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿಗೆ ಉತ್ತರಿಸಿದರು.

ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರದ ಮೇಲೆ ತಮ್ಮ ನಂಬಿಕೆಯನ್ನು ಪದೇ ಪದೇ ತೋರಿಸಿದ್ದಕ್ಕಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಂದಿದ್ದೇನೆ ಎಂದರು. 2018ರಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ನಿಲುವಳಿ ತಂದಿದ್ದನ್ನು ಸ್ಮರಿಸಿದ ಪ್ರಧಾನಿಯವರು, ಇದು ಸರ್ಕಾರದ ಪಾಲಿಗೆ ವಿಶ್ವಾಸಮತ ನಿರ್ಣಯವಲ್ಲ, ಬದಲಿಗೆ ಸದನದಲ್ಲಿ ಅದನ್ನು ಮಂಡಿಸಿದವರ ಪಾಲಿಗೇ ಅವಿಶ್ವಾಸ ನಿರ್ಣಯ ಎಂದರು. "ನಾವು 2019ರಲ್ಲಿ ಚುನಾವಣೆಗೆ ಹೋದಾಗ, ಪ್ರತಿಪಕ್ಷಗಳ ಮೇಲೆ ಜನರು ಅತ್ಯಂತ ಬಲವಾದ ಅವಿಶ್ವಾಸವನ್ನು ಪ್ರದರ್ಶಿಸಿದರು" ಎಂದು ಪ್ರಧಾನಿ ಹೇಳಿದರು. ಎನ್‌ಡಿಎ ಮತ್ತು ಬಿಜೆಪಿ ಎರಡೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿವೆ ಎಂದು ಒತ್ತಿ ಹೇಳಿದರು. ಒಂದು ರೀತಿಯಲ್ಲಿ, ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಸರ್ಕಾರದ ಪಾಲಿಗೆ ಅದೃಷ್ಟ ಎಂದು ಪ್ರಧಾನಿ ಬಣ್ಣಿಸಿದರು. ಜನರ ಆಶೀರ್ವಾದದಿಂದ ಎನ್‌ಡಿಎ ಮತ್ತು ಬಿಜೆಪಿ ಎಲ್ಲಾ ದಾಖಲೆಗಳನ್ನು ಮುರಿಯುತ್ತವೆ ಮತ್ತು 2024ರಲ್ಲಿ ವಿಜಯಶಾಲಿಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಧಿವೇಶನದ ಆರಂಭದಿಂದಲೂ ಪ್ರತಿಪಕ್ಷಗಳು ಸೂಕ್ತ ಗಂಭೀರತೆಯಿಂದ ಕಲಾಪದಲ್ಲಿ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಪ್ರಧಾನಿ ಹೇಳಿದರು. ಕಳೆದ ಕೆಲವು ದಿನಗಳಲ್ಲಿ ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಆದರೆ, ಈ ಮಹತ್ವದ ಶಾಸನಗಳು, ವಿಧೇಯಕಗಳಿಗಿಂತಲೂ ರಾಜಕೀಯಕ್ಕೇ ಹೆಚ್ಚಿನ ಆದ್ಯತೆ ನೀಡಿದ ಪ್ರತಿಪಕ್ಷಗಳು ವಿಧೇಯಕಗಳ ಚರ್ಚೆಯಲ್ಲಿ ಭಾಗವಹಿಸಲಿಲ್ಲ ಅವರು ಉಲ್ಲೇಖಿಸಿದರು. "ಮೀನುಗಾರರು, ದತ್ತಾಂಶ, ಬಡವರು, ಅವಕಾಶ ವಂಚಿತರು ಮತ್ತು ಬುಡಕಟ್ಟು ಜನಾಂಗದವರೊಂದಿಗೆ ಸಂಬಂಧ ಹೊಂದಿರುವ ಅನೇಕ ವಿಧೇಯಕಗಳು ಕಲಾಪದ ಪಟ್ಟಿಯಲ್ಲಿವೆ. ಆದರೆ ಪ್ರತಿಪಕ್ಷಗಳಿಗೆ ಅವುಗಳ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲ. ಇದು ಜನರ ನಿರೀಕ್ಷೆಗಳಿಗೆ ಮಾಡಿದ ದ್ರೋಹ. ಅವರಿಗೆ ಪಕ್ಷ ದೇಶಕ್ಕಿಂತ ದೊಡ್ಡದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ" ಎಂದು ಪ್ರಧಾನಿ ಟೀಕಿಸಿದರು. ದೇಶವು ಪ್ರತಿಪಕ್ಷಗಳನ್ನು ನೋಡುತ್ತಿದೆ. ಪ್ರತಿಪಕ್ಷಗಳು ಪ್ರತಿ ಬಾರಿಯೂ ಜನರನ್ನು ನಿರಾಶೆಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

ಯಾವುದೇ ಒಂದು ರಾಷ್ಟ್ರದ ಜೀವತಾವಧಿಯಲ್ಲಿ, ಅದು ಹಳೆಯ ಸಂಕೋಲೆಗಳಿಂದ ಹೊರಬಂದು ತನ್ನ ಹೊಸ ಶಕ್ತಿ ಮತ್ತು ದೃಢನಿಶ್ಚಯದೊಂದಿಗೆ ಮುನ್ನಡೆಯುವ ಸಮಯ ಬರುತ್ತದೆ ಎಂದು ಪ್ರಧಾನಿ ಗಮನಸೆಳೆದರು. "21ನೇ ಶತಮಾನದ ಈ ಅವಧಿಯು ನಮ್ಮ ಎಲ್ಲಾ ಆಕಾಂಕ್ಷೆಗಳನ್ನು ಪೂರೈಸುವ ಸಮಯವಾಗಿದೆ. ಈ ಅವಧಿಯಲ್ಲಿ ಏನು ರೂಪುಗೊಂಡರೂ ಅದು ಮುಂದಿನ ಸಾವಿರ ವರ್ಷಗಳವರೆಗೆ ದೇಶದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಮಗೆ ದೊಡ್ಡ ಜವಾಬ್ದಾರಿ ಇದೆ. ಹಾಗಾಗಿ ನಾವು ಒಂದೇ ಅಂಶದ ಬಗ್ಗೆ ಗಮನ ಕೇಂದ್ರೀಕರಿಸಬೇಕು - ದೇಶದ ಅಭಿವೃದ್ಧಿ ಮತ್ತು ದೇಶವಾಸಿಗಳ ಕನಸುಗಳನ್ನು ಸಾಕಾರಗೊಳಿಸಲು ಸಂಪೂರ್ಣ ಸಮರ್ಪಣೆಯತ್ತ ಚಿತ್ತ ಹರಿಸಬೇಕು,” ಎಂದು ಅವರು ಒತ್ತಿ ಹೇಳಿದರು. ನಮ್ಮ ಜನರು ಮತ್ತು ಯುವಕರ ಸಾಮರ್ಥ್ಯವು ನಮ್ಮನ್ನು ನಮ್ಮ ಗಮ್ಯಸ್ಥಾನಕ್ಕೆ ಕೊಂಡೊಯ್ಯಬಲ್ಲದು ಎಂದು ಅವರು ಹೇಳಿದರು.

2014 ಮತ್ತು ನಂತರ, ಹಳೆಯ ಕಹಿ ಅನುಭವಗಳ ಕಾರಣದಿಂದಾಗಿ ದೇಶವು ಪೂರ್ಣ ಬಹುಮತದ ಸರ್ಕಾರವನ್ನು ಆಯ್ಕೆ ಮಾಡಿತು. ಏಕೆಂದರೆ ದೇಶದ ಜನರಿಗೆ ಅವರ ಕನಸುಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ಎಲ್ಲಿದೆ ಎಂದು ತಿಳಿದಿತ್ತು ಎಂದು ಅವರು ಹೇಳಿದರು. "ನಾವು ಭಾರತದ ಯುವಕರಿಗೆ ಹಗರಣಗಳಿಂದ ಮುಕ್ತವಾದ ಸರ್ಕಾರವನ್ನು ನೀಡಿದ್ದೇವೆ. ನಾವು ಅವರಿಗೆ ಧೈರ್ಯ ಮತ್ತು ಮುಕ್ತ ಆಕಾಶದಲ್ಲಿ ಹಾರುವ ಅವಕಾಶವನ್ನು ನೀಡಿದ್ದೇವೆ. ನಾವು ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಸರಿಪಡಿಸಿದ್ದೇವೆ ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೇವೆ" ಎಂದು ಅವರು ಒತ್ತಿ ಹೇಳಿದರು. "ಅವಿಶ್ವಾಸ ನಿರ್ಣಯದ ನೆಪದಲ್ಲಿ ಪ್ರತಿಪಕ್ಷಗಳು ಜನರ ವಿಶ್ವಾಸವನ್ನು ಮುರಿಯಲು ವಿಫಲ ಪ್ರಯತ್ನ ಮಾಡಿವೆ" ಎಂದು ಅವರು ಹೇಳಿದರು. ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿನ ಬೆಳವಣಿಗೆ, ದಾಖಲೆಯ ವಿದೇಶಿ ಹೂಡಿಕೆ ಮತ್ತು ರಫ್ತಿನ ಹೊಸ ಉತ್ತುಂಗಗಳನ್ನು ಪ್ರಸ್ತಾಪಿಸಿದ ಶ್ರೀ ಮೋದಿ, "ಇಂದು ಬಡವರ ಹೃದಯದಲ್ಲಿ ಅವರ ಕನಸುಗಳು ಈಡೇರುವ ವಿಶ್ವಾಸ ಮೂಡಿದೆ," ಎಂದು ಹೇಳಿದರು. 13.5 ಕೋಟಿ ಜನರು ಬಡತನದಿಂದ ಹೊರಬರುತ್ತಿರುವ ಬಗ್ಗೆ ನೀತಿ ಆಯೋಗದ ವರದಿಯ ಬಗ್ಗೆಯೂ ಅವರು ಮಾತನಾಡಿದರು.

ಭಾರತವು ಕಡುಬಡತನವನ್ನು ಬಹುತೇಕ ನಿರ್ಮೂಲನೆ ಮಾಡಿದೆ ಎಂಬ ʻಅಂತಾರಾಷ್ಟ್ರೀಯ ಹಣಕಾಸು ನಿಧಿʼ (ಐಎಂಎಫ್) ವರರದಿಯನ್ನು ಪ್ರಧಾನಿ ಉಲ್ಲೇಖಿಸಿದರು. ʻಐಎಂಎಫ್ʼ ಅನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತೀಯ ʻಡಿಬಿಟಿʼ(ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ) ಯೋಜನೆ ಮತ್ತು ಇತರ ಸಾಮಾಜಿಕ ಕಲ್ಯಾಣ ಯೋಜನೆಗಳು 'ವ್ಯವಸ್ಥಾಪನಾ ಅದ್ಭುತ' ಎಂದು ಹೇಳಿದರು. ʻಜಲ ಜೀವನ್ ಮಿಷನ್ʼ ದೇಶದಲ್ಲಿ 4 ಲಕ್ಷ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತಿದೆ ಮತ್ತು ʻಸ್ವಚ್ಛ ಭಾರತʼ ಅಭಿಯಾನವು 3 ಲಕ್ಷ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತಿದೆ ಎಂಬ ʻವಿಶ್ವ ಆರೋಗ್ಯ ಸಂಸ್ಥೆʼ ವರದಿಯನ್ನು ಅವರು ಉಲ್ಲೇಖಿಸಿದರು. "ಇವರು ನಗರ ಕೊಳೆಗೇರಿಗಳಲ್ಲಿ ವಾಸಿಸುವ ದೇಶದ ಬಡ ಜನರು" ಎಂದು ಅವರು ಹೇಳಿದರು. ಸ್ವಚ್ಛ ಭಾರತ ಅಭಿಯಾನದ ಬಗ್ಗೆ ʻಯುನಿಸೆಫ್ʼ ಅನ್ನು ಉಲ್ಲೇಖಿಸಿದ ಪ್ರಧಾನಿ, ಈ ಅಭಿಯಾನವು ದೇಶದ ಬಡ ಕುಟುಂಬಗಳಿಗೆ ವರ್ಷಕ್ಕೆ 50,000 ರೂ.ಗಳನ್ನು ಉಳಿಸಲು ಸಹಾಯ ಮಾಡುತ್ತಿದೆ ಎಂದರು.

ಪ್ರತಿಪಕ್ಷಗಳ ಉಡಾಫೆ ಧೋರಣೆಯನ್ನು ಟೀಕಿಸಿದ ಪ್ರಧಾನಿ, ಪ್ರತಿಪಕ್ಷಗಳು ಅಪನಂಬಿಕೆಯ ಆಳದಲ್ಲಿ ಮುಳುಗಿರುವುದರಿಂದ ಅವುಗಳಿಗೆ ಜನರ ವಿಶ್ವಾಸವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದರು. ಪ್ರತಿಪಕ್ಷಗಳ ಕೆಟ್ಟ ಭಾಷೆ ಮತ್ತು ನಿರಂತರ ಟೀಕೆಗಳು 'ಶುಭ ಶಕುನʼ ಕೆಲಸ ಮಾಡುತ್ತವೆ ಎಂದು ಪ್ರಧಾನಿ ಹೇಳಿದರು.

ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುವ ಎಲ್ಲಾ ಸಂಸ್ಥೆಗಳು ನಿರಂತರವಾಗಿ ಹೊಳೆಯುತ್ತವೆ ಎಂದ ಪ್ರಧಾನಿ, ಇದನ್ನು 'ಪ್ರತಿಪಕ್ಷಗಳ ರಹಸ್ಯ ವರ' ಎಂದು ಬಣ್ಣಿಸಿದರು. "ಪ್ರತಿಪಕ್ಷಗಳು ಯಾರಿಗೆ ಕೆಟ್ಟದ್ದನ್ನು ಬಯಸಿದರೂ, ಅಂಥವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ" ಎಂದು ಹೇಳಿದರು.

ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಪ್ರತಿಪಕ್ಷಗಳ ಧೋರಣೆಯನ್ನು ಸ್ಮರಿಸಿದ ಪ್ರಧಾನಿ, ತಪ್ಪು ಮಾಹಿತಿಯನ್ನು ಹರಡಲು ಮತ್ತು ಜನರನ್ನು ಗೊಂದಲಕ್ಕೀಡು ಮಾಡಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದಾಗ್ಯೂ, ಸಾರ್ವಜನಿಕ ವಲಯದ ಬ್ಯಾಂಕುಗಳ ನಿವ್ವಳ ಲಾಭವು ಎರಡು ಪಟ್ಟು ಹೆಚ್ಚಾಗಿದೆ ಎಂದರು. ದೇಶವನ್ನು ʻಎನ್‌ಪಿಎʼ ಬಿಕ್ಕಟ್ಟಿನತ್ತ ತಳ್ಳಿದ ಫೋನ್ ಬ್ಯಾಂಕಿಂಗ್ ಹಗರಣದ ಬಗ್ಗೆಯೂ ಅವರು ಪ್ರಸ್ತಾಪಿಸಿದರು ಮತ್ತು ದೇಶವು ಇದರಿಂದ ಪುನರುಜ್ಜೀವನಗೊಂಡು ಮುಂದೆ ಸಾಗುತ್ತಿದೆ ಎಂದು ಹೇಳಿದರು. ಪ್ರತಿಪಕ್ಷಗಳಿಂದ ತೀವ್ರವಾಗಿ ದಾಳಿಗೊಳಗಾದ ʻಎಚ್‌ಎಎಲ್‌ʼನ ಉದಾಹರಣೆಯನ್ನೂ ಶ್ರೀ ಮೋದಿ ನೀಡಿದರು. ʻಎಚ್‌ಎಎಲ್ʼ ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುತ್ತಿದೆ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಆದಾಯವನ್ನು ದಾಖಲಿಸಿದೆ ಎಂದು ಅವರು ಉಲ್ಲೇಖಿಸಿದರು. ʻಎಲ್ಐಸಿʼ ಬಗ್ಗೆ ಪ್ರತಿಪಕ್ಷಗಳು ಮಾತನಾಡುತ್ತಿರುವ ಟೀಕೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ʻಎಲ್ಐಸಿʼ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂದರು.

"ಪ್ರತಿಪಕ್ಷಗಳು ರಾಷ್ಟ್ರದ ಸಾಮರ್ಥ್ಯ ಮತ್ತು ಸಮರ್ಪಣೆಯಲ್ಲಿ ನಂಬಿಕೆ ಹೊಂದಿಲ್ಲ" ಎಂದು ಹೇಳಿದ ಪ್ರಧಾನಿ, ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ತಾವು ಇತ್ತೀಚೆಗೆ ಹೇಳಿದ್ದನ್ನು ನೆನಪಿಸಿಕೊಂಡರು. ಜವಾಬ್ದಾರಿಯುತ ಪ್ರತಿಪಕ್ಷವಾಗಿ, ಈ ಗುರಿಯನ್ನು ಸಾಧಿಸಲು ಅವರು ತಮ್ಮ ಮಾರ್ಗಸೂಚಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕಾಗಿತ್ತು ಅಥವಾ ಕನಿಷ್ಠ ಸಲಹೆಗಳನ್ನಾದರೂ ನೀಡಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಪ್ರಧಾನಿ ಹೇಳಿದರು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಏನೂ ಮಾಡಬೇಕಾಗಿಲ್ಲ ಎಂದು ಹೇಳುವ ಪ್ರತಿಪಕ್ಷಗಳ ಉಡಾಫೆತನವನ್ನು ಅವರು ಟೀಕಿಸಿದರು. ಪ್ರತಿಪಕ್ಷಗಳ ಇಂತಹ ಚಿಂತನೆಯು ನೀತಿಗಳು, ಗುರಿಗಳು, ದೂರದೃಷ್ಟಿ, ವಿಶ್ವ ಅರ್ಥಶಾಸ್ತ್ರದ ಜ್ಞಾನ ಮತ್ತು ಭಾರತದ ಸಾಮರ್ಥ್ಯಗಳ ಬಗ್ಗೆ ತಿಳಿವಳಿಕೆಯ ಕೊರತೆಯನ್ನು ಸೂಚಿಸುತ್ತದೆ ಎಂದು ಪ್ರಧಾನಿ ಹೇಳಿದರು.

1991ರಲ್ಲಿ ಭಾರತ ಹೇಗೆ ಬಡತನದಲ್ಲಿ ಮುಳುಗಿತು ಮತ್ತು ದಿವಾಳಿಯ ಅಂಚಿನಲ್ಲಿತ್ತು ಎಂಬುದನ್ನು ಪ್ರಧಾನಿ ಒತ್ತಿ ಹೇಳಿದರು. ಆದಾಗ್ಯೂ, 2014ರ ನಂತರ ಭಾರತವು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಿತು. ನಿರ್ದಿಷ್ಟ ಯೋಜನೆ ಮತ್ತು ಕಠಿಣ ಪರಿಶ್ರಮದಿಂದ 'ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ' ಮಂತ್ರದ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಇದು ಮುಂದುವರಿಯುತ್ತದೆ ಮತ್ತು ಅಗತ್ಯ ಸುಧಾರಣೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು. "2028ರಲ್ಲಿ, ನೀವು ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಹೊತ್ತಿಗೆ, ದೇಶವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ" ಎಂದು ಅವರು ಪ್ರತಿಪಕ್ಷಗಳನ್ನು ಉದ್ದೇಶಿಸಿ ತಿಳಿಸಿದರು.

ಪ್ರತಿಪಕ್ಷಗಳ ಅಪನಂಬಿಕೆ ಧೋರಣೆಯ ಬಗ್ಗೆ ಮಾತು ಮುಂದುವರಿಸಿದ ಪ್ರಧಾನಮಂತ್ರಿಯವರು, ಸ್ವಚ್ಛ ಭಾರತ, ಜನ್ ಧನ್ ಖಾತೆ, ಯೋಗ, ಆಯುರ್ವೇದ, ʻಸ್ಟಾರ್ಟ್ ಅಪ್ ಇಂಡಿಯಾʼ, ʻಡಿಜಿಟಲ್ ಇಂಡಿಯಾʼ ಮತ್ತು ʻಮೇಕ್ ಇನ್ ಇಂಡಿಯಾʼದಂತಹ ಅಭಿಯಾನಗಳಲ್ಲಿ ಪ್ರತಿಪಕ್ಷಗಳ ನಂಬಿಕೆಯ ಕೊರತೆಯ ಬಗ್ಗೆ ಹೇಳಿದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆಯ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಆಗಿನ ಸರ್ಕಾರವು ಪಾಕಿಸ್ತಾನದೊಂದಿಗೆ ಸಹಮತ ಹೊಂದಿತ್ತು ಮತ್ತು ಏಕಕಾಲದಲ್ಲಿ ಶಾಂತಿ ಮಾತುಕತೆಗಳನ್ನು ಮುಂದುವರಿಸಿತ್ತು ಎಂದು ಹೇಳಿದರು. ಕಾಶ್ಮೀರಿ ಜನರ ಬದಲು ಹುರಿಯತ್ ಜೊತೆಗಿನ ಅವರ ಒಡನಾಟದ ಬಗ್ಗೆಯೂ ಪ್ರಧಾನಿ ಮಾತನಾಡಿದರು. ʻಸರ್ಜಿಕಲ್ ಸ್ಟ್ರೈಕ್ʼ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಗಳು, ಪ್ರತಿಪಕ್ಷಗಳು ಈ ವಿಷಯದಲ್ಲಿ ಸರ್ಕಾರವನ್ನು ನಂಬುವ ಬದಲು ಹೇಗೆ ಶತ್ರುಗಳು ರೂಪಿಸಿದ ಕಥಾನಕವನ್ನು ನಂಬಿದವು ಎಂಬುದನ್ನು ವಿವರಿಸಿದರು.

"ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ಪ್ರತಿಪಕ್ಷಗಳು ತ್ವರಿತವಾಗಿ ನಂಬುತ್ತವೆ" ಎಂದು ಪ್ರಧಾನಿ ಟೀಕಿಸಿದರು. ಕೆಲವು ಮಾನದಂಡಗಳಲ್ಲಿ ಭಾರತಕ್ಕಿಂತ ಮುಂಚಿತವಾಗಿ ಆಹಾರ ಅಭದ್ರತೆಯೊಂದಿಗೆ ವ್ಯವಹರಿಸುವ ರಾಷ್ಟ್ರವನ್ನು ಉಲ್ಲೇಖಿಸಿದ ವಿದೇಶಿ ಏಜೆನ್ಸಿಯೊ೦ದರ ತಪ್ಪು ಮಾಹಿತಿಯ ವರದಿಯನ್ನು ಪ್ರಧಾನಿ ಉಲ್ಲೇಖಿಸಿದರು. ಪ್ರತಿಪಕ್ಷಗಳು ಇಂತಹ ತಪ್ಪು ಮಾಹಿತಿಯ ವರದಿಗಳಿಗೆ ಅಂಟಿಕೊಳ್ಳುತ್ತವೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ದೇಶವನ್ನು ದೂಷಿಸಲು ಪ್ರಯತ್ನಿಸುತ್ತವೆ ಎಂದು ಅವರು ಹೇಳಿದರು. ʻಮೇಡ್ ಇನ್ ಇಂಡಿಯಾʼ ಕರೋನಾ ಲಸಿಕೆಯ ಉದಾಹರಣೆಯನ್ನು ನೀಡಿದ ಅವರು, ಪ್ರತಿಪಕ್ಷಗಳು ಅದನ್ನು ನಂಬಲಿಲ್ಲ, ಬದಲಿಗೆ ವಿದೇಶಿ ನಿರ್ಮಿತ ಲಸಿಕೆಗಳತ್ತ ನೋಡಿದವು ಎಂದು ಹೇಳಿದರು. ಪ್ರತಿಪಕ್ಷಗಳು ಭಾರತ ಮತ್ತು ಅದರ ಜನರ ಸಾಮರ್ಥ್ಯಗಳನ್ನು ನಂಬುವುದಿಲ್ಲ ಮತ್ತು ಅದೇ ರೀತಿ, ಜನರ ದೃಷ್ಟಿಯಲ್ಲಿ ಪ್ರತಿಪಕ್ಷದ ವಿಶ್ವಾಸದ ಮಟ್ಟವು ಅತ್ಯಂತ ಕಡಿಮೆಯಾಗಿದೆ ಎಂದು ಅವರು ಒತ್ತಿಹೇಳಿದರು.

ಮೈತ್ರಿ ನಿರ್ಮಾಣದಂತಹ ತೋರಿಕೆಯ ಬದಲಾವಣೆಗಳಿಂದ ದೇಶದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದ ಪ್ರಧಾನಿಯವರು, ಹೆಸರಿನ ಸರಳ ಬದಲಾವಣೆಯು ಪ್ರತಿಪಕ್ಷಗಳ ಮೈತ್ರಿಕೂಟದ ಅದೃಷ್ಟವನ್ನು ಬದಲಾಯಿಸುವುದಿಲ್ಲ ಎಂದು ಹೇಳಿದರು. "ಪ್ರತಿಪಕ್ಷಗಳು ಬದುಕುಳಿಯಲು ʻಎನ್‌ಡಿಎʼ ಸಹಾಯವನ್ನು ತೆಗೆದುಕೊಂಡಿವೆ. ಆದರೆ, ಇನ್ನೆರಡು 'ಐʼಗಳನ್ನು ಸೇರಿಸಿಕೊಂಡಿವೆ. ಈ ಎರಡು “ಐʼಗಳಲ್ಲಿ ಮೊದಲನೆಯದು 26 ಪಕ್ಷಗಳ ʻಅಹಂʼ ಅನ್ನು ಸೂಚಿಸಿದರೆ ಮತ್ತೊಂದು ʻಐʼ ಒಂದು ಕುಟುಂಬದ ಅಹಂಕಾರದ ಪ್ರತೀಕ. ಪ್ರತಿಪಕ್ಷಗಳು ಭಾರತವನ್ನು ʻಐ.ಎನ್.ಡಿ.ಐ.ಎ.ʼ ಆಗಿ ವಿಭಜಿಸಿವೆ" ಎಂದು ಅವರು ಟೀಕಿಸಿದರು. "ಪ್ರತಿಪಕ್ಷಗಳು ಹೆಸರುಗಳನ್ನು ಬದಲಾಯಿಸುವುದರಲ್ಲಿ ನಂಬಿಕೆ ಹೊಂದಿರಬಹುದು, ಆದರೆ ಅವುಗಳು  ತಮ್ಮ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ," ಎಂದು ಅವರು ಒತ್ತಿ ಹೇಳಿದರು. ತಮಿಳುನಾಡು ಸರ್ಕಾರದ ಸಚಿವರೊಬ್ಬರ ವಿಭಜಕ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ, ರಾಜ್ಯದ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು ಮತ್ತು ತಮಿಳುನಾಡು ದೇಶಭಕ್ತಿಯ ಪ್ರವಾಹವು ನಿರಂತರವಾಗಿ ಹರಿಯುವ ರಾಜ್ಯವಾಗಿದೆ ಎಂದು ಹೇಳಿದರು. ಹೆಸರುಗಳ ಬಗ್ಗೆ ಪ್ರತಿಪಕ್ಷಗಳ ಆಕರ್ಷಣೆಯ ಬಗ್ಗೆ ಮಾತನಾಡಿದ ಪ್ರಧಾನಿ, ಪ್ರತಿಯೊಂದು ಯೋಜನೆ ಮತ್ತು ಮೈಲುಗಲ್ಲಿಗೆ ಒಂದೇ ಕುಟುಂಬದ ಸದಸ್ಯರ ಹೆಸರನ್ನು ಹೇಗೆ ಇಡಲಾಗಿದೆ ಎಂಬುದನ್ನು ಉಲ್ಲೇಖಿಸಿದರು. ಪ್ರಧಾನಮಂತ್ರಿಯವರು ʻಐ.ಎನ್.ಡಿ.ಐ.ಎ.ʼಯನ್ನು 'ಘಂಡಿಯಾ' ಒಕ್ಕೂಟ (ದುರಹಂಕಾರಿ ಒಕ್ಕೂಟ) ಎಂದು ಕರೆದರು ಮತ್ತು ಪಾಲುದಾರರ ನಡುವಿನ ವಿರೋಧಾಭಾಸಗಳನ್ನು ಒತ್ತಿ ತೋರಿದರು.

ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಸಂಸ್ಥಾಪಕರು ಸದಾ ವಂಶಪಾರಂಪರ್ಯ ರಾಜಕೀಯವನ್ನು ವಿರೋಧಿಸುತ್ತಿದ್ದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ವಂಶಪಾರಂಪರ್ಯ ವ್ಯವಸ್ಥೆಯು ಸಾಮಾನ್ಯ ನಾಗರಿಕರನ್ನು ಹಾನಿಗೊಳಿಸುತ್ತದೆ. ವಂಶಪಾರಂಪರ್ಯ ರಾಜಕೀಯದಿಂದಾಗಿ ಪ್ರಮುಖ ನಾಯಕರು ತೊಂದರೆ ಅನುಭವಿಸಿದ್ದಾರೆ ಎಂದು ಅವರು ಹೇಳಿದರು. ಈ ರೀತಿಯ ರಾಜಕೀಯಕ್ಕೆ ಬಲಿಯಾದ ಘಟಾನುಘಟಿ ನಾಯಕರ ಅನೇಕ ಭಾವಚಿತ್ರಗಳು ಕಾಂಗ್ರೆಸೇತರ ಸರ್ಕಾರಗಳ ನಂತರದ ವರ್ಷಗಳಲ್ಲಿ ಮಾತ್ರ ಸಂಸತ್ತಿನಲ್ಲಿ ಸ್ಥಾನ ಪಡೆದಿವೆ ಎಂದು ಅವರು ಹೇಳಿದರು. ಏಕತಾ ಪ್ರತಿಮೆ ಮತ್ತು ಪ್ರಧಾನ ಮಂತ್ರಿ ಸಂಗ್ರಾಹಾಲಯವನ್ನೂ ಅವರು ಉಲ್ಲೇಖಿಸಿದರು. ಈ ವಸ್ತುಸಂಗ್ರಹಾಲಯವು ಎಲ್ಲಾ ಪ್ರಧಾನ ಮಂತ್ರಿಗಳಿಗೆ ಸಮರ್ಪಿತವಾಗಿದೆ ಮತ್ತು ಪಕ್ಷ ರಾಜಕೀಯವನ್ನು ಮೀರಿದೆ ಎಂದರು.

ಭಾರತದ ಜನರು 30 ವರ್ಷಗಳ ನಂತರ ಎರಡು ಬಾರಿ ಪೂರ್ಣ ಬಹುಮತದ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಆದರೂ, ಪ್ರಧಾನಿ ಕುರ್ಚಿಯಲ್ಲಿ 'ಗರೀಬ್ ಕಾ ಬೇಟಾ' ಕುಳಿತಿರುವುರದಿಂದ ಪ್ರತಿಪಕ್ಷಗಳು ಗೊಂದಲಕ್ಕೊಳಗಾಗಿವೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಲಸಿಕೆಗಳ ಸಾಗಣೆ ಮತ್ತು ವಿದೇಶಗಳಲ್ಲಿ ಸಿಲುಕಿರುವವರನ್ನು ಮರಳಿ ಕರೆತರಲು ಈ ಹಿಂದೆ ಪ್ರತಿಪಕ್ಷಗಳು ವಿಮಾನಗಳು ಮತ್ತು ನೌಕಾ ಹಡಗುಗಳನ್ನು ದುರುಪಯೋಗಪಡಿಸಿಕೊಂಡಿದ್ದನ್ನು ಈಗ ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಉಚಿತ ಕೊಡುಗೆಗಳ ರಾಜಕೀಯದ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ, ಅಂತಹ ರಾಜಕೀಯವು ತರಬಹುದಾದ ವಿನಾಶಕ್ಕೆ ಉದಾಹರಣೆಯಾಗಿ ನೆರೆಯ ದೇಶಗಳಲ್ಲಿನ ಪರಿಸ್ಥಿತಿಗಳನ್ನು ಉಲ್ಲೇಖಿಸಿದರು. ಬೇಜವಾಬ್ದಾರಿಯುತ ಆಶ್ವಾಸನೆಗಳ ಮೂಲಕ ಚುನಾವಣೆಗಳನ್ನು ಗೆಲ್ಲುವ ಪ್ರವೃತ್ತಿಯಿಂದಾಗಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ಜನರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಎಂದಿಗೂ ಆಸಕ್ತಿ ಹೊಂದಿಲ್ಲ ಎಂದು ಪ್ರಧಾನಿ ಹೇಳಿದರು. ಗೃಹ ಸಚಿವರು ಯಾವುದೇ ರಾಜಕೀಯವಿಲ್ಲದೆ ತಾಳ್ಮೆಯಿಂದ ಮತ್ತು ವಿವರವಾಗಿ ಸಮಸ್ಯೆಗಳನ್ನು ವಿವರಿಸಿದರು. ಗೃಹ ಸಚಿವರ ವಿವರಣೆಯು ದೇಶ ಮತ್ತು ರಾಷ್ಟ್ರದ ಕಾಳಜಿಯನ್ನು ತಿಳಿಸುವ ಪ್ರಯತ್ನವಾಗಿತ್ತು. ಇದು ಸದನದ ವಿಶ್ವಾಸವನ್ನು ಮಣಿಪುರಕ್ಕೆ ತಿಳಿಸುವ ಪ್ರಯತ್ನವಾಗಿತ್ತು. ಚರ್ಚಿಸಲು ಮತ್ತು ಮಾರ್ಗಗಳನ್ನು ಕಂಡುಹಿಡಿಯಲು ಇದು ಪ್ರಾಮಾಣಿಕ ಪ್ರಯತ್ನವಾಗಿತ್ತು ಎಂದು ಅವರು ಹೇಳಿದರು.

ಮಣಿಪುರ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮಣಿಪುರದಲ್ಲಿ ನಡೆದ ಹಿಂಸಾಚಾರ ಅತ್ಯಂತ ವಿಷಾದನೀಯ ಎಂದರು. "ಮಹಿಳೆಯರ ವಿರುದ್ಧದ ಅಪರಾಧಗಳನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೆಲಸ ಮಾಡುತ್ತವೆ. ಮುಂಬರುವ ದಿನಗಳಲ್ಲಿ ಮಣಿಪುರದಲ್ಲಿ ಶಾಂತಿ ನೆಲೆಸಲಿದೆ ಎಂದು ನಾವು ಮಾಡುತ್ತಿರುವ ನಮ್ಮ ಪ್ರಯತ್ನದ ಆಧಾರದ ಮೇಲೆ ನಾನು ಭಾರತದ ಜನರಿಗೆ ಭರವಸೆ ನೀಡುತ್ತೇನೆ", ಎಂದು ಪ್ರಧಾನಿ ಹೇಳಿದರು. ಮಣಿಪುರದ ಜನರಿಗೆ, ಮಣಿಪುರದ ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಮತ್ತು ಸದನವು ಅವರೊಂದಿಗೆ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದರು. ಮಣಿಪುರವನ್ನು ಮತ್ತೆ ಅಭಿವೃದ್ಧಿಯ ಪಥದಲ್ಲಿ ತರುವ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನೂ ಮಾಡಲಿದೆ ಎಂದು ಅವರು ಭರವಸೆ ನೀಡಿದರು.

ಸದನದಲ್ಲಿ ಭಾರತ ಮಾತೆಯ ಬಗ್ಗೆ ಆಕ್ಷೇಪಾರ್ಹ ಭಾಷೆಯನ್ನು ಬಳಸುವುದರ ವಿರುದ್ಧ ತೀವ್ರ ಖಂಡನೆಯನ್ನು ದಾಖಲಿಸಿದ ಪ್ರಧಾನಿ, ವಿಭಜನೆಗೆ ಕಾರಣರಾದವರು ಮತ್ತು ವಂದೇ ಮಾತರಂ ಅನ್ನು ನಿಂದಿಸಿದವರು ಸಹ ಇವರೇ ಎಂದು ಹೇಳಿದರು. ಶ್ರೀ ಮೋದಿ ಅವರು ʻಕಚ್ಚತೀವುʼ ವಿಷಯವನ್ನು ಪ್ರತಿಪಕ್ಷಗಳ ವೈಫಲ್ಯಕ್ಕೆ ಉದಾಹರಣೆ ಎಂದು ಉಲ್ಲೇಖಿಸಿದರು.

ಈಶಾನ್ಯಕ್ಕೆ ಸಂಬಂಧಿಸಿದ ಮೂರು ಘಟನೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಮೊದಲನೆಯದಾಗಿ, ಮಾರ್ಚ್ 5, 1966 ರಂದು, ಮಿಜೋರಾಂನಲ್ಲಿ ಜನರ ಮೇಲೆ ದಾಳಿ ಮಾಡಲು ವಾಯುಪಡೆಯನ್ನು ಬಳಸಲಾಯಿತು. ಎರಡನೆಯದಾಗಿ, 1962ರಲ್ಲಿ ಆಗಿನ ಪ್ರಧಾನಿ ನೆಹರೂ ಅವರು ಚೀನಾದ ಆಕ್ರಮಣದ ಸಮಯದಲ್ಲಿ ಈಶಾನ್ಯದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು  ರೇಡಿಯೋ ಮೂಲಕ ಪ್ರಸಾರ ಮಾಡಿದರು. ಈ ಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂಬ ರಾಮ್ ಮನೋಹರ್ ಲೋಹಿಯಾ ಅವರ ಆರೋಪವನ್ನು ಸಹ ಪ್ರಧಾನಿ ಉಲ್ಲೇಖಿಸಿದರು. ಪ್ರಸ್ತುತ ಸರ್ಕಾರದಲ್ಲಿ ಸಚಿವರು ಈಶಾನ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ 400 ರಾತ್ರಿಗಳು ತಂಗಿದ್ದಾರೆ, ಪ್ರಧಾನಿಯೇ 50 ಬಾರಿ ಈ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. "ನಾನು ಈಶಾನ್ಯದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇನೆ. ಪ್ರಧಾನಿಯಾಗುವ ಮೊದಲೇ ನಾನು ಈ ಪ್ರದೇಶದಾದ್ಯಂತ ಪ್ರವಾಸ ಮಾಡಿದ್ದೇನೆ", ಎಂದು ಅವರು ಮಾಹಿತಿ ನೀಡಿದರು.

ಮಣಿಪುರದ ಪರಿಸ್ಥಿತಿಯನ್ನು ಇತ್ತೀಚೆಗೆ ಸಂಘರ್ಷ ಉದ್ಭವಿಸಿತೇನೋ ಎಂಬ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ಮಣಿಪುರದ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಕಾಂಗ್ರೆಸ್ ಮತ್ತು ಅದರ ರಾಜಕೀಯ ಎಂದರು. "ಮಣಿಪುರವು ಶ್ರೀಮಂತ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಿಂದ ತುಂಬಿದೆ. ಮಣಿಪುರವು ಅಸಂಖ್ಯಾತ ತ್ಯಾಗಗಳ ಭೂಮಿಯಾಗಿದೆ," ಎಂದು ಅವರು ಬಣ್ಣಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದು ಸಂಸ್ಥೆಯೂ ಉಗ್ರಗಾಮಿ ಸಂಘಟನೆಗಳ ಕರೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಹಾಕುವುದನ್ನು ನಿಷೇಧಿಸಲಾಗಿತ್ತು ಎಂದು ಅವರು ಸ್ಮರಿಸಿದರು. ಮೊಯಿರಾಂಗ್‌ನ ʻಆಜಾದ್ ಹಿಂದ್ ಫೌಜ್ʼ ಮ್ಯೂಸಿಯಂನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯ ಮೇಲೆ ನಡೆದ ಬಾಂಬ್ ದಾಳಿಯನ್ನು ಅವರು ಉಲ್ಲೇಖಿಸಿದರು. ಮಣಿಪುರದ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ನಿಷೇಧಿಸಲಾಗಿತ್ತು ಮತ್ತು ಗ್ರಂಥಾಲಯಗಳಿಂದ ಪುಸ್ತಕಗಳನ್ನು ಸುಡುವ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದು ಅವರು ನೆನಪಿಸಿಕೊಂಡರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳ ಹಲವಾರು ಉದಾಹರಣೆಗಳನ್ನು ನೀಡಿದ ಪ್ರಧಾನಿ, ದೇವಾಲಯಗಳು ಸಂಜೆ 4 ಗಂಟೆಗೆ ಬಾಗಿಲು ಮುಚ್ಚುತ್ತಿದ್ದವು. ಇಂಫಾಲ್‌ನ ಇಸ್ಕಾನ್ ದೇವಾಲಯದ ಮೇಲೆ ಬಾಂಬ್ ದಾಳಿ ನಡೆಸಿ ಜೀವಹಾನಿಗೆ ಕಾರಣವಾದ ಘಟನೆ ಮತ್ತು ಸರ್ಕಾರಿ ಅಧಿಕಾರಿಗಳು ಉಗ್ರಗಾಮಿಗಳಿಗೆ ನೀಡಿದ ರಕ್ಷಣಾ ಹಣವನ್ನು ಉಲ್ಲೇಖಿಸಿದರು.

ದಿನಗಳಲ್ಲಿ ಈಶಾನ್ಯ ರಾಜ್ಯಗಳು ಅಭಿವೃದ್ಧಿಯ ಕೇಂದ್ರವಾಗಲಿವೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ವ್ಯವಸ್ಥೆಯಲ್ಲಿನ ಚಲನೆಗಳು ಆಗ್ನೇಯ ಏಷ್ಯಾ ಮತ್ತು ಆಸಿಯಾನ್ ದೇಶಗಳಲ್ಲಿ ಬದಲಾವಣೆಯನ್ನು ತರುತ್ತವೆ ಮತ್ತು ಅದು ಈಶಾನ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅಂಶದ ಬಗ್ಗೆ ತಮಗೆ ತಿಳಿದಿದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ, "ನಮ್ಮ ಸರ್ಕಾರವು ಈಶಾನ್ಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದೆ" ಎಂದು ಪ್ರಧಾನಿ ಹೇಳಿದರು. ಈಶಾನ್ಯದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿನ ಹೂಡಿಕೆಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಆಧುನಿಕ ಹೆದ್ದಾರಿಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳು ಹೇಗೆ ಈಶಾನ್ಯದ ಹೆಗ್ಗುರುತಾಗುತ್ತಿವೆ ಎಂಬುದನ್ನು ಉಲ್ಲೇಖಿಸಿದರು. "ಅಗರ್ತಲಾದಲ್ಲಿ ಮೊದಲ ಬಾರಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ, ಸರಕು ರೈಲು ಮೊದಲ ಬಾರಿಗೆ ಮಣಿಪುರವನ್ನು ತಲುಪಿದೆ, ಮೊದಲ ಬಾರಿಗೆ ʻವಂದೇ ಭಾರತ್ʼನಂತಹ ಆಧುನಿಕ ರೈಲು ಈ ಪ್ರದೇಶದಲ್ಲಿ ಓಡಾಡುತ್ತಿದೆ, ಅರುಣಾಚಲ ಪ್ರದೇಶದಲ್ಲಿ ಮೊದಲ ʻಗ್ರೀನ್ ಫೀಲ್ಡ್ ವಿಮಾನ ನಿಲ್ದಾಣʼವನ್ನು ನಿರ್ಮಿಸಲಾಗಿದೆ, ಸಿಕ್ಕಿಂ ವಿಮಾನ ಪ್ರಯಾಣದೊಂದಿಗೆ ಸಂಪರ್ಕ ಸಾಧಿಸಿದೆ, ಈಶಾನ್ಯದಲ್ಲಿ ಮೊದಲ ಬಾರಿಗೆ ʻಏಮ್ಸ್ʼ ತೆರೆಯಲಾಗಿದೆ, ಮಣಿಪುರದಲ್ಲಿ ʻರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯʼ ಮತ್ತು ಮಿಜೋರಾಂನಲ್ಲಿ ಮೊದಲ ಬಾರಿಗೆ ʻಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ʼ ಅನ್ನು ತೆರೆಯಲಾಗುತ್ತಿದೆ. ಮಂತ್ರಿಮಂಡಲದಲ್ಲಿ ಈಶಾನ್ಯ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಾಗಿದೆ, ಮತ್ತು ಮೊದಲ ಬಾರಿಗೆ ಮಹಿಳೆಯೊಬ್ಬರು ರಾಜ್ಯಸಭೆಯಲ್ಲಿ ನಾಗಾಲ್ಯಾಂಡ್ ಅನ್ನು ಪ್ರತಿನಿಧಿಸಿದ್ದಾರೆ. ಮೊದಲ ಬಾರಿಗೆ ಈಶಾನ್ಯದ ಅನೇಕ ಜನರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ ಮತ್ತು ಲಚಿತ್ ಬುರ್ಫುಕನ್ ಅವರಂತಹ ನಾಯಕರ ಸ್ಮರಣಾರ್ಥ ಗಣರಾಜ್ಯೋತ್ಸವದಂದು ಆಚರಣೆಗಳನ್ನು ಮಾಡಲಾಗಿದೆ ಮತ್ತು ರಾಣಿ ಗೈಡಿನ್ಲಿಯು ಹೆಸರಿನಲ್ಲಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಯಿಗಿದೆ" ಎಂದು ಅವರು ಮಾಹಿತಿ ನೀಡಿದರು.

"ನಮಗೆ, ʻಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ʼ ಒಂದು ಘೋಷಣೆಯಲ್ಲ, ಬದಲಿಗೆ ಅದೊಂದು ನಂಬಿಕೆ, ಅದೊಂದು ಬದ್ಧತೆಯಾಗಿದೆ," ಎಂದು ಪ್ರಧಾನಿ ಹೇಳಿದರು. "ನಾನು ದೇಹದ ಪ್ರತಿಯೊಂದು ಕಣವನ್ನು ಮತ್ತು ಪ್ರತಿ ಕ್ಷಣವನ್ನು ದೇಶವಾಸಿಗಳ ಸೇವೆಗೆ ಮೀಸಲಿಡುತ್ತೇನೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ," ಎಂದು ಪ್ರಧಾನಿ ಘೋಷಿಸಿದರು.

"ಸಂಸತ್ತು ಒಂದು ಪಕ್ಷಕ್ಕೆ ವೇದಿಕೆಯಲ್ಲ. ಸಂಸತ್ತು ದೇಶದ ಅತ್ಯುನ್ನತ ಗೌರವಾನ್ವಿತ ಸಂಸ್ಥೆ. ಆದ್ದರಿಂದ, ಸಂಸದರು ಇದಕ್ಕಾಗಿ ಈ ಬಗ್ಗೆ ಗಂಭೀರತೆಯನ್ನು ಹೊಂದಿರುವುದು ಅತ್ಯಗತ್ಯ. ಇಲ್ಲಿ ಸಾಕಷ್ಟು ಸಂಪನ್ಮೂಲಗಳನ್ನು ಮೀಸಲಿಡಲಾಗುತ್ತಿದೆ. ಇಲ್ಲಿರುವ ಪ್ರತಿ ಸೆಕೆಂಡನ್ನು ದೇಶಕ್ಕಾಗಿ ಬಳಸಿಕೊಳ್ಳಬೇಕು. ಗಂಭೀರತೆ ಇಲ್ಲದೆ ಯಾರೊಬ್ಬರೂ ರಾಜಕೀಯ ಮಾಡಬಹುದು, ಆದರೆ ಗಂಭೀರತೆ ಇಲ್ಲದೆ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕಳೆದ 9 ವರ್ಷಗಳಲ್ಲಿ, ಸಾಮಾನ್ಯ ನಾಗರಿಕರ ನಂಬಿಕೆ ಹೊಸ ಎತ್ತರಕ್ಕೆ ಬೆಳೆದಿದೆ ಮತ್ತು ಪ್ರತಿಯೊಬ್ಬ ಭಾರತೀಯನಲ್ಲೂ  ಆತ್ಮವಿಶ್ವಾಸ ತುಂಬಿದೆ ಎಂದು ಪ್ರಧಾನಿ ಹೇಳಿದರು. "ಇಂದಿನ ಭಾರತವು ಒತ್ತಡದಲ್ಲಿ ಕುಸಿಯುವುದಿಲ್ಲ. ಇಂದಿನ ಭಾರತ ಬಗ್ಗುವುದಿಲ್ಲ, ಆಯಾಸಗೊಳ್ಳುವುದಿಲ್ಲ ಮತ್ತು ನಿಲ್ಲುವುದಿಲ್ಲ", ಎಂದು ಶ್ರೀ ಮೋದಿ ಹೇಳಿದರು. ವಿಶ್ವಾಸ ಮತ್ತು ಸಂಕಲ್ಪದೊಂದಿಗೆ ಮುಂದುವರಿಯುವಂತೆ ಅವರು ನಾಗರಿಕರಿಗೆ ಕರೆ ನೀಡಿದರು. ಸಾಮಾನ್ಯ ಜನರ ನಂಬಿಕೆಯು ಭಾರತವನ್ನು ನಂಬಲು ಜಗತ್ತಿಗೆ ಸ್ಫೂರ್ತಿ ನೀಡುತ್ತದೆ ಎಂದರು. ಭಾರತದ ಬಗ್ಗೆ ಹೆಚ್ಚುತ್ತಿರುವ ವಿಶ್ವದ ವಿಶ್ವಾಸವು ಸಾಮಾನ್ಯ ನಾಗರಿಕರಲ್ಲಿ ವಿಶ್ವಾಸ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ, ʻವಿಕಸಿತ ಭಾರತʼಕ್ಕೆ ಬಲವಾದ ಅಡಿಪಾಯ ಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಪ್ರಧಾನಿ ಹೇಳಿದರು. ಈ ಅಡಿಪಾಯವೇ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ರಾಷ್ಟ್ರವು ಕೆಟ್ಟ ಪರಿಸ್ಥಿತಿಗಳಿಂದ ಹೊರಬಂದಿದೆ ಎಂದು ಒತ್ತಿಹೇಳಿದ ಅವರು, ಕ್ಷುಲ್ಲಕ ರಾಜಕೀಯಕ್ಕಾಗಿ ಮಣಿಪುರದ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದರು. "ನಾವು ನೋವು ಮತ್ತು ಸಂಕಟಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು ಮತ್ತು ಚೇತರಿಕೆಗೆ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇದು ಮುಂದಿರುವ ದಾರಿ", ಎಂದು ಪ್ರಧಾನಿ ಮನವಿ ಮಾಡಿದರು.

***



(Release ID: 1947663) Visitor Counter : 144