ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ನವದೆಹಲಿಯಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


ʻಭಾರತೀಯ ವಸ್ತ್ರ ಏವಮ್ ಶಿಲ್ಪ ಕೋಶ್ʼ ಹೆಸರಿನ ಜವಳಿ ಮತ್ತು ಕರಕುಶಲ ವಸ್ತುಗಳ ಕರಕುಶಲ ಭಂಡಾರ ಪೋರ್ಟಲ್‌ಗೆ ಚಾಲನೆ

"ಇಂದಿನ ಭಾರತವು ಕೇವಲ 'ಲೋಕಲ್ ಫಾರ್ ವೋಕಲ್' ಆಗಿ ಉಳಿದಿಲ್ಲ, ಅದನ್ನು ಜಗತ್ತಿಗೆ ಕೊಂಡೊಯ್ಯಲು ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ"

"ಸ್ವದೇಶಿ ವಿಚಾರದಲ್ಲಿ ದೇಶವು ಹೊಸ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ"

"ವೋಕಲ್ ಫಾರ್ ಲೋಕಲ್ ಸ್ಫೂರ್ತಿಯೊಂದಿಗೆ, ನಾಗರಿಕರು ಸ್ಥಳೀಯ ಉತ್ಪನ್ನಗಳನ್ನು ಪೂರ್ಣ ಹೃದಯದಿಂದ ಖರೀದಿಸುತ್ತಿದ್ದಾರೆ ಮತ್ತು ಇದು ಸಾಮೂಹಿಕ ಆಂದೋಲನವಾಗಿ ಮಾರ್ಪಟ್ಟಿದೆ"

"ಉಚಿತ ಪಡಿತರ, ಶಾಶ್ವತ ಮನೆ, 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ - ಇದು ಮೋದಿಯವರ ಗ್ಯಾರಂಟಿ"

"ನೇಕಾರರ ಕೆಲಸವನ್ನು ಸುಲಭಗೊಳಿಸುವುದು, ಅವರ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಗುಣಮಟ್ಟ ಹಾಗೂ ವಿನ್ಯಾಸಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ  ನಿರಂತರ ಪ್ರಯತ್ನ ನಡೆಸುತ್ತಿದೆ

"ಪ್ರತಿ ರಾಜ್ಯ ಮತ್ತು ಜಿಲ್ಲೆಯ ಕೈಮಗ್ಗದಿಂದ ತಯಾರಿಸಿದ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಉತ್ತೇಜಿಸಲು ಸರ್ಕಾರವು ರಾಜ್ಯಗಳ ಪ್ರತಿ ರಾಜಧಾನಿಯಲ್ಲಿ ʻಏಕತಾ ಮಾಲ್ʼ ಅನ್ನು ಅಭಿವೃದ್ಧಿಪಡಿಸುತ್ತಿದೆ" 

"ತನ್ನ ನೇಕಾರರಿಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆಯನ್ನು ಒದಗಿಸಲು ಸರ್ಕಾರ ಸ್ಪಷ್ಟ ಕಾರ್ಯತಂತ್ರದೊಂದಿಗೆ ಕಾರ್ಯನಿರ್ವಹಿಸುತ್ತಿದೆ"

ʻಆತ್ಮನಿರ್ಭರ ಭಾರತʼದ ಕನಸುಗಳನ್ನು ಹೆಣೆಯುವವರು ಮತ್ತು 'ಮೇಕ್ ಇನ್ ಇಂಡಿಯಾ'ಕ್ಕೆ ಶಕ್ತಿ ನೀಡುವವರು ಖಾದಿಯನ್ನು ಕೇವಲ ಬಟ್ಟೆಯನ್ನಾಗಿ ಮಾತ್ರವಲ್ಲ, ಒಂದು ಆಯುಧವೆಂದು ಪರಿಗಣಿಸುತ್ತಾರೆ.


"ತ್ರಿವರ್ಣ ಧ್ವಜವನ್ನು ಛಾವಣಿಯ ಮೇಲೆ ಹಾರಿಸಿದಾಗ, ಅದು ನಮ್ಮೊಳಗೂ ರಾರಾಜಿಸುತ್ತದೆ"

Posted On: 07 AUG 2023 3:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದ `ಭಾರತ್ ಮಂಟಪ’ದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.  ಇದೇ ವೇಳೆ, ʻರಾಷ್ಟ್ರೀಯ ಫ್ಯಾಶನ್ ಟೆಕ್ನಾಲಜಿ ಸಂಸ್ಥೆʼ ಅಭಿವೃದ್ಧಿಪಡಿಸಿದ 'ಭಾರತೀಯ ವಸ್ತ್ರ ಏವಮ್ ಶಿಲ್ಪ ಕೋಶ್ʼ ಎಂಬ ಜವಳಿ ಮತ್ತು ಕರಕುಶಲ ವಸ್ತುಗಳ ಭಂಡಾರ ಪೋರ್ಟಲ್‌ಗೆ ಅವರು ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನಕ್ಕೂ ಭೇಟಿ ನೀಡಿ, ನೇಕಾರರೊಂದಿಗೆ ಸಂವಾದ ನಡೆಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಭಾರತ ಮಂಟಪʼದ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಪ್ರಗತಿ ಮೈದಾನದಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಪ್ರದರ್ಶಕರು ತಮ್ಮ ಉತ್ಪನ್ನಗಳನ್ನು ಟೆಂಟ್‌ನಲ್ಲಿ ಹೇಗೆ ಪ್ರದರ್ಶಿಸುತ್ತಿದ್ದರು ಎಂಬುದನ್ನು ಸ್ಮರಿಸಿದರು. ʻಭಾರತ ಮಂಟಪʼದ ಭವ್ಯತೆಯ ನಡುವೆ, ಭಾರತದ ಕೈಮಗ್ಗ ಉದ್ಯಮದ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹಳೆಯ ಮತ್ತು ಹೊಸದರ ಸಂಗಮವು ಇಂದಿನ ʻನವ ಭಾರತʼವನ್ನು ವ್ಯಾಖ್ಯಾನಿಸುತ್ತದೆ ಎಂದರು. "ಇಂದಿನ ಭಾರತವು ಕೇವಲ 'ಲೋಕಲ್ ಫಾರ್ ವೋಕಲ್' ಮಾತ್ರವಲ್ಲ ಉಳಿದಿಲ್ಲ, ಅದನ್ನು ಜಗತ್ತಿಗೆ ಕೊಂಡೊಯ್ಯಲು ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ," ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮ ಆರಂಭಕ್ಕೂ ಮುನ್ನ ನೇಕಾರರೊಂದಿಗೆ ನಡೆಸಿದ ಸಂವಾದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಭವ್ಯ ಆಚರಣೆಯಲ್ಲಿ ದೇಶಾದ್ಯಂತದ ವಿವಿಧ ಕೈಮಗ್ಗ ಕ್ಲಸ್ಟರ್‌ಗಳ ಉಪಸ್ಥಿತಿಯನ್ನು ಉಲ್ಲೇಖಿಸಿ, ಅವುಗಳಿಗೆ ಸ್ವಾಗತ ಕೋರಿದರು. 

"ಆಗಸ್ಟ್ ʻಕ್ರಾಂತಿʼಯ ತಿಂಗಳು" ಎಂದು ಪ್ರಧಾನಿ ಹೇಳಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಮಾಡಿದ ಪ್ರತಿಯೊಂದು ತ್ಯಾಗವನ್ನು ಸ್ಮರಿಸುವ ಸಮಯ ಇದು ಎಂದು ಅವರು ಒತ್ತಿ ಹೇಳಿದರು. ಸ್ವದೇಶಿ ಆಂದೋಲನವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ವಿದೇಶಿ ನಿರ್ಮಿತ ಜವಳಿಗಳನ್ನು ಬಹಿಷ್ಕರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಭಾರತದ ಸ್ವತಂತ್ರ ಆರ್ಥಿಕತೆಗೆ ಸ್ಫೂರ್ತಿಯ ಮೂಲವಾಗಿದೆ ಎಂದರು. ಇದು ಭಾರತದ ನೇಕಾರರನ್ನು ಜನರೊಂದಿಗೆ ಸಂಪರ್ಕಿಸುವ ಆಂದೋಲನವಾಗಿದೆ ಮತ್ತು ಸರ್ಕಾರವು ಈ ದಿನವನ್ನು ʻರಾಷ್ಟ್ರೀಯ ಕೈಮಗ್ಗ ದಿನʼವಾಗಿ ಆಯ್ಕೆ ಮಾಡುವ ಹಿಂದಿನ ಆಶಯವೂ ಇದೇ ಆಗಿದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ, ಕೈಮಗ್ಗ ಉದ್ಯಮದ ವಿಸ್ತರಣೆಗಾಗಿ ಮತ್ತು ನೇಕಾರರಿಗಾಗಿ ಅಭೂತಪೂರ್ವ ಕೆಲಸಗಳನ್ನು ಸರ್ಕಾರ ಮಾಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಸ್ವದೇಶಿ ವಿಚಾರದಲ್ಲಿ ದೇಶದಲ್ಲಿ ಹೊಸ ಕ್ರಾಂತಿಯಾಗಿದೆ" ಎಂದು ಶ್ರೀ ಮೋದಿ ಹೇಳಿದರು. ನೇಕಾರರ ಸಾಧನೆಗಳ ಮೂಲಕ ಭಾರತದ ಯಶಸ್ಸಿನ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು.

ವ್ಯಕ್ತಿಯೊಬ್ಬರ ಗುರುತು ಅವರು ಧರಿಸುವ ಬಟ್ಟೆಗಳ ಮೇಲೆ ಅವಲಂಬಿಸಿರುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇಲ್ಲಿ ಅನಾವರಣಗೊಂಡಿರುವ ವಸ್ತ್ರ ವೈವಿಧ್ಯದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು. ವಿವಿಧ ಪ್ರದೇಶಗಳ ಉಡುಪುಗಳ ಮೂಲಕ ಭಾರತದ ವೈವಿಧ್ಯತೆಯನ್ನು ಆಚರಿಸುವ ಸಂದರ್ಭವೂ ಇದಾಗಿದೆ ಎಂದು ಅವರು ಹೇಳಿದರು. "ಭಾರತವು ಸುಂದರವಾದ ಕಾಮನಬಿಲ್ಲನ್ನು ಹೊಂದಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳಿಂದ ಹಿಡಿದು ಹಿಮಚ್ಛಾದಿತ ಪರ್ವತಗಳಲ್ಲಿ ವಾಸಿಸುವ ಜನರವರೆಗೆ ಹಾಗೂ ಕರಾವಳಿ ಪ್ರದೇಶದ ಜನರಿಂದ ಹಿಡಿದು ಮರುಭೂಮಿಯಲ್ಲಿ ವಾಸಿಸುವವರವರೆಗೆ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಬಟ್ಟೆಗಳಲ್ಲಿನ ವೈವಿಧ್ಯತೆಯ ಬಗ್ಗೆ ಗಮನ ಸೆಳೆದರು. ಭಾರತದ ವೈವಿಧ್ಯಮಯ ಉಡುಪುಗಳನ್ನು ಪಟ್ಟಿ ಮಾಡುವ ಹಾಗೂ ಸಂಕಲಿಸುವ ಅಗತ್ಯದ ಬಗ್ಗೆ ಈ ಹಿಂದೆ ಒತ್ತಿ ಹೇಳಿದ್ದನ್ನು ಪ್ರಧಾನಿ ಸ್ಮರಿಸಿದರು. ಜೊತೆಗೆ, ಇಂದು 'ಭಾರತೀಯ ವಸ್ತ್ರ ಏವಮ್ ಶಿಲ್ಪ ಕೋಶ್' ಪ್ರಾರಂಭದೊಂದಿಗೆ ಈ ಆಶಯ ಫಲಪ್ರದವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಳೆದ ಶತಮಾನಗಳಲ್ಲಿ ಭಾರತದ ಜವಳಿ ಉದ್ಯಮಕ್ಕೆ ಉತ್ತಮ ಅಡಿಪಾಯ ಬಿದ್ದಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ ನಂತರ ಅದನ್ನು ಬಲಪಡಿಸಲು ಯಾವುದೇ ದೃಢವಾದ ಪ್ರಯತ್ನಗಳು ನಡೆಯದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. "ಖಾದಿಯನ್ನು ಸಹ ಅವಸಾನದ ಸ್ಥಿತಿಗೆ ಕೊಂಡೊಯ್ಯಲಾಗಿತ್ತು", ಖಾದಿ ಧರಿಸುವವರನ್ನು ಕೀಳಾಗಿ ನೋಡಲಾಗುತ್ತಿತ್ತು. ಆದರೆ, 2014ರ ನಂತರ ಈ ಪರಿಸ್ಥಿತಿ ಮತ್ತು ಅದರ ಹಿಂದಿನ ಚಿಂತನೆಯನ್ನು ಬದಲಾಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ʻಮನ್ ಕಿ ಬಾತ್ʼ ಕಾರ್ಯಕ್ರಮದ ಆರಂಭಿಕ ಹಂತದಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ನಾಗರಿಕರನ್ನು ಒತ್ತಾಯಿಸಿದ್ದನ್ನು ಪ್ರಧಾನಿ ಸ್ಮರಿಸಿದರು, ಇದರ ಪರಿಣಾಮವಾಗಿ ಕಳೆದ 9 ವರ್ಷಗಳಲ್ಲಿ ಖಾದಿ ಉತ್ಪಾದನೆಯಲ್ಲಿ 3 ಪಟ್ಟು ಹೆಚ್ಚಳವಾಗಿದೆ. ಖಾದಿ ಬಟ್ಟೆಗಳ ಮಾರಾಟವು 5 ಪಟ್ಟು ಹೆಚ್ಚಾಗಿದೆ ಮತ್ತು ವಿದೇಶಗಳಲ್ಲಿ ಅದರ ಬೇಡಿಕೆಯೂ ಹೆಚ್ಚುತ್ತಿದೆ ಎಂದು ಅವರು ಗಮನ ಸೆಳೆದರು. ಶ್ರೀ ಮೋದಿ ತಾವು ಪ್ಯಾರಿಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೃಹತ್ ಫ್ಯಾಷನ್ ಬ್ರಾಂಡ್‌ವೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು(ಸಿಇಒ) ಭೇಟಿ ಮಾಡಿದ್ದನ್ನು ಸ್ಮರಿಸಿದರು. ಖಾದಿ ಮತ್ತು ಭಾರತೀಯ ಕೈಮಗ್ಗದ ಕಡೆಗೆ ಹೆಚ್ಚುತ್ತಿರುವ ಆಕರ್ಷಣೆಯ ಬಗ್ಗೆ ಸಿಇಒ ಮಾತನಾಡಿದ್ದನ್ನು ಮೋದಿ ಅವರು ಸ್ಮರಿಸಿದರು.

ಒಂಬತ್ತು ವರ್ಷಗಳ ಹಿಂದೆ ಖಾದಿ ಮತ್ತು ಗ್ರಾಮೋದ್ಯೋಗಗಳ ವಹಿವಾಟು ಕೇವಲ 25-30 ಸಾವಿರ ಕೋಟಿ ರೂ.ಗಳಷ್ಟಿತ್ತು. ಆದರೆ ಇಂದು ಅದು ಒಂದು ಲಕ್ಷ ಮೂವತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತಲುಪಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಹೆಚ್ಚುವರಿ 1 ಲಕ್ಷ ಕೋಟಿ ರೂ.ಗಳು ಹಳ್ಳಿಗಳಲ್ಲಿನ ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಮತ್ತು ಬುಡಕಟ್ಟು ಜನರಿಗೆ ತಲುಪಿವೆ ಎಂದು ಅವರು ಉಲ್ಲೇಖಿಸಿದರು. ಕಳೆದ 5 ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ, ಹೆಚ್ಚುತ್ತಿರುವ ವಹಿವಾಟಿನ ಕೊಡುಗೆ ಇದಕ್ಕೆ ಕಾರಣವೆಂದರು. "ವೋಕಲ್ ಫಾರ್ ಲೋಕಲ್ ಆಶಯದೊಂದಿಗೆ, ನಾಗರಿಕರು ದೇಶೀಯ ಉತ್ಪನ್ನಗಳನ್ನು ತುಂಬು ಹೃದಯದಿಂದ ಖರೀದಿಸುತ್ತಿದ್ದಾರೆ ಮತ್ತು ಇದು ಸಾಮೂಹಿಕ ಆಂದೋಲನವಾಗಿ ಮಾರ್ಪಟ್ಟಿದೆ," ಎಂದು ಶ್ರೀ ಮೋದಿ ಹೇಳಿದರು. ಮುಂಬರುವ ರಕ್ಷಾ ಬಂಧನ, ಗಣೇಶ ಉತ್ಸವ, ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ನೇಕಾರರು ಮತ್ತು ಕರಕುಶಲಕರ್ಮಿಗಳನ್ನು ಬೆಂಬಲಿಸಲು ಸ್ವದೇಶಿ ಸಂಕಲ್ಪವನ್ನು ಪುನರಾವರ್ತಿಸುವ ಅಗತ್ಯವನ್ನು ಶ್ರೀ ಮೋದಿ ಪುನರುಚ್ಚರಿಸಿದರು.

ಜವಳಿ ವಲಯಕ್ಕಾಗಿ ಜಾರಿಗೆ ತರಲಾದ ಯೋಜನೆಗಳು ಸಾಮಾಜಿಕ ನ್ಯಾಯದ ಪ್ರಮುಖ ಸಾಧನವಾಗುತ್ತಿವೆ ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. ದೇಶಾದ್ಯಂತ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಲಕ್ಷಾಂತರ ಜನರು ಕೈಮಗ್ಗದ ಕೆಲಸದಲ್ಲಿ ತೊಡಗಿದ್ದಾರೆ. ಇವರಲ್ಲಿ ಹೆಚ್ಚಿನವರು ದಲಿತ, ಹಿಂದುಳಿದ, ಪಾಸ್ಮಾಂಡಾ ಮತ್ತು ಬುಡಕಟ್ಟು ಸಮಾಜಗಳಿಂದ ಬಂದವರು ಎಂದು ಪ್ರಧಾನಿ ಗಮನಸೆಳೆದರು. ಸರ್ಕಾರದ ಪ್ರಯತ್ನಗಳು ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾಹಿತಿ ನೀಡಿದರು. ವಿದ್ಯುತ್, ನೀರು, ಅನಿಲ ಸಂಪರ್ಕ, ಸ್ವಚ್ಛ ಭಾರತ್ ಯೋಜನೆಗಳ ಉದಾಹರಣೆಗಳನ್ನು ನೀಡಿದ ಅವರು, ಇಂತಹ ಅಭಿಯಾನಗಳಿಂದ ಈ ಜನರು ಗರಿಷ್ಠ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದರು. "ಉಚಿತ ಪಡಿತರ, ಶಾಶ್ವತ ಮನೆ, 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ, ಇದು ಮೋದಿಯವರ ಗ್ಯಾರಂಟಿ" ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಸರ್ಕಾರವು ಮೂಲಭೂತ ಸೌಕರ್ಯಗಳಿಗಾಗಿ ನೇಕಾರ ಸಮುದಾಯದ ದಶಕಗಳ ಕಾಯುವಿಕೆಯನ್ನು  ಕೊನೆಗೊಳಿಸಿದೆ ಎಂದು ಒತ್ತಿ ಹೇಳಿದರು.

ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪ್ರದಾಯಗಳನ್ನು ಜೀವಂತವಾಗಿಡಲು ಶ್ರಮಿಸುವುದು ಮಾತ್ರವಲ್ಲದೆ, ಹೊಸ ಅವತಾರದಲ್ಲಿ ಜಗತ್ತನ್ನು ಆಕರ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅದಕ್ಕಾಗಿಯೇ, ಈ ಕೆಲಸದಲ್ಲಿ ತೊಡಗಿರುವವರ ಶಿಕ್ಷಣ, ತರಬೇತಿ ಮತ್ತು ಆದಾಯಕ್ಕೆ ಸರ್ಕಾರವು ಒತ್ತು ನೀಡುತ್ತಿದೆ.  ಆ ಮೂಲಕ ನೇಕಾರರು ಮತ್ತು ಕರಕುಶಲಕರ್ಮಿಗಳ ಮಕ್ಕಳ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ನೇಕಾರರ ಮಕ್ಕಳಿಗೆ ಕೌಶಲ್ಯ ತರಬೇತಿಗಾಗಿ ಜವಳಿ ಸಂಸ್ಥೆಗಳಲ್ಲಿ 2 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿವೇತನ ನೀಡುತ್ತಿರುವುದನ್ನು ಅವರು ಉಲ್ಲೇಖಿಸಿದರು. ಕಳೆದ 9 ವರ್ಷಗಳಲ್ಲಿ 600ಕ್ಕೂ ಹೆಚ್ಚು ಕೈಮಗ್ಗ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಸಾವಿರಾರು ನೇಕಾರರಿಗೆ ತರಬೇತಿ ನೀಡಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. "ನೇಕಾರರ ಕೆಲಸವನ್ನು ಸುಲಭಗೊಳಿಸಲು, ಅವರ ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ಗುಣಮಟ್ಟ ಮತ್ತು ವಿನ್ಯಾಸಗಳನ್ನು ಸುಧಾರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಕಂಪ್ಯೂಟರ್ ಚಾಲಿತ ಪಂಚಿಂಗ್ ಯಂತ್ರಗಳನ್ನು ಸಹ ಅವರಿಗೆ ಒದಗಿಸಲಾಗುತ್ತಿದೆ, ಇದು ಹೊಸ ವಿನ್ಯಾಸಗಳನ್ನು ವೇಗವಾಗಿ ರಚಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಉಲ್ಲೇಖಿಸಿದರು. "ಯಾಂತ್ರೀಕೃತ ಯಂತ್ರಗಳೊಂದಿಗೆ ವಾರ್ಪ್ ತಯಾರಿಕೆಯೂ ಸುಲಭವಾಗುತ್ತಿದೆ. ಇಂತಹ ಅನೇಕ ಉಪಕರಣಗಳು, ಅಂತಹ ಅನೇಕ ಯಂತ್ರಗಳನ್ನು ನೇಕಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ," ಎಂದು ಅವರು ಹೇಳಿದರು. ಕೈಮಗ್ಗ ನೇಕಾರರಿಗೆ ನೂಲಿನಂತಹ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ಒದಗಿಸುತ್ತಿದೆ ಮತ್ತು ಕಚ್ಚಾ ವಸ್ತುಗಳನ್ನು ಸಾಗಿಸುವ ವೆಚ್ಚವನ್ನು ಸಹ ಭರಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ʻಮುದ್ರಾʼ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ನೇಕಾರರು ಈಗ ಅಡಮಾನ ರಹಿತ ಸಾಲ ಪಡೆಯಲು ಸಾಧ್ಯವಾಗಿದೆ ಎಂದರು.

ಗುಜರಾತ್‌ನ ನೇಕಾರರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಾವು ಪ್ರತಿನಿಧಿಸುವ ಕ್ಷೇತ್ರವಾದ ಇಡೀ ಕಾಶಿ ಪ್ರದೇಶದ ಕೈಮಗ್ಗ ಉದ್ಯಮದ ಕೊಡುಗೆಗಳನ್ನು ಎತ್ತಿ ತೋರಿಸಿದರು. ನೇಕಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಎದುರಿಸುತ್ತಿರುವ ಪೂರೈಕೆ ಸರಪಳಿ ಮತ್ತು ಮಾರುಕಟ್ಟೆಯ ಸವಾಲುಗಳ ಬಗ್ಗೆ ಅವರು ಗಮನಸೆಳೆದರು. ʻಭಾರತ ಮಂಟಪʼದಂತೆ ದೇಶಾದ್ಯಂತ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಕೈಯಿಂದ ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಉಲ್ಲೇಖಿಸಿದರು. ಉಚಿತ ಮಳಿಗೆಗಳ ಜೊತೆಗೆ ದೈನಂದಿನ ಭತ್ಯೆಯನ್ನು ಸಹ ಒದಗಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಗುಡಿ ಕೈಗಾರಿಕೆಗಳು ಮತ್ತು ಕೈಮಗ್ಗಗಳಿಂದ ತಯಾರಿಸಿದ ಉತ್ಪನ್ನಗಳ ತಂತ್ರಗಾರಿಕೆ ಮತ್ತು ಮಾದರಿಗಳಲ್ಲಿ ನಾವೀನ್ಯತೆ ತರುವುದರ ಜೊತೆಗೆ, ಮಾರುಕಟ್ಟೆ ಅಭ್ಯಾಸಗಳಲ್ಲೂ ನಾವೀನ್ಯತೆಯನ್ನು ಪ್ರದರ್ಶಿಸುತ್ತಿರುವ ಭಾರತದ ನವೋದ್ಯಮಗಳು ಹಾಗೂ ಯುವಕರನ್ನು ಪ್ರಧಾನಿ ಶ್ಲಾಘಿಸಿದರು. ಈ ಉದ್ಯಮದ ಉಜ್ವಲ ಭವಿಷ್ಯಕ್ಕೆ ಯಾರೊಬ್ಬರೂ ಸಾಕ್ಷಿಯಾಗಬಹುದು ಎಂದು ಹೇಳಿದರು. 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರತಿ ಜಿಲ್ಲೆಯಿಂದ ವಿಶೇಷ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜಿಸಲಾಗುತ್ತಿದೆ ಎಂದರು. ಅಂತಹ ಉತ್ಪನ್ನಗಳ ಮಾರಾಟಕ್ಕಾಗಿ ದೇಶದ ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ಮಳಿಗೆಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪ್ರತಿ ರಾಜ್ಯ ಮತ್ತು ಜಿಲ್ಲೆಯ ಕೈಮಗ್ಗದಿಂದ ತಯಾರಿಸಿದ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುವುದನ್ನು ಉತ್ತೇಜಿಸಲು ಸರ್ಕಾರವು ರಾಜ್ಯಗಳ ಪ್ರತಿ ರಾಜಧಾನಿಯಲ್ಲಿ ʻಏಕತಾ ಮಾಲ್ʼ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕೈಮಗ್ಗ ಕ್ಷೇತ್ರದಲ್ಲಿ ತೊಡಗಿರುವವರಿಗೆ ಪ್ರಯೋಜನ ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು. ಏಕತಾ ಪ್ರತಿಮೆಯಲ್ಲಿರುವ ʻಏಕ್ತಾ ಮಾಲ್ʼ ಬಗ್ಗೆಯೂ ಶ್ರೀ ಮೋದಿ ಪ್ರಸ್ತಾಪಿಸಿದರು. ಇದು ಪ್ರವಾಸಿಗರಿಗೆ ಭಾರತದ ಏಕತೆಯನ್ನು ಅನುಭವಿಸಲು ಮತ್ತು ಯಾವುದೇ ರಾಜ್ಯದಿಂದ ಉತ್ಪನ್ನಗಳನ್ನು ಒಂದೇ ಸೂರಿನಡಿ ಖರೀದಿಸಲು ಅವಕಾಶವನ್ನು ನೀಡುತ್ತದೆ ಎಂದರು.

ತಮ್ಮ ವಿದೇಶ ಪ್ರವಾಸದ ಸಂದರ್ಭದಲ್ಲಿ ಗಣ್ಯರಿಗೆ ನೀಡುವ ವಿವಿಧ ಉಡುಗೊರೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅದನ್ನು ತಯಾರಿಸುವವರ ಬಗ್ಗೆ ತಿಳಿಸಿದಾಗ ಆ ಉಡುಗೊರೆ ಪಡೆದವರು ಮೆಚ್ಚುಗೆ ವ್ಯಕ್ತಪಡಿಸುವುದಲ್ಲದೆ, ಅವರ ಮೇಲೆ ಅದು ಆಳವಾದ ಪರಿಣಾಮ ಬೀರುತ್ತದೆ ಎಂದರು.

ʻಜಿಇಎಂʼ ಪೋರ್ಟಲ್ ಅಥವಾ ಸರ್ಕಾರಿ ಇ-ಮಾರುಕಟ್ಟೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸಣ್ಣ ಕುಶಲಕರ್ಮಿಗಳು ಅಥವಾ ನೇಕಾರರು ಸಹ ತಮ್ಮ ಸರಕುಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಕೈಮಗ್ಗ ಮತ್ತು ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ಸುಮಾರು 1.75 ಲಕ್ಷ ಸಂಸ್ಥೆಗಳು ಇಂದು ಜಿಇಎಂ ಪೋರ್ಟಲ್‌ನೊಂದಿಗೆ ಸಂಪರ್ಕ ಹೊಂದಿವೆ ಎಂದು ಮಾಹಿತಿ ನೀಡಿದರು. ಕೈಮಗ್ಗೆ ಕ್ಷೇತ್ರದ ನಮ್ಮ ಸಹೋದರ ಸಹೋದರಿಯರು ಡಿಜಿಟಲ್ ಇಂಡಿಯಾದ ಪ್ರಯೋಜನಗಳನ್ನು ಪಡೆಯುವುದನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

"ಸರ್ಕಾರವು ತನ್ನ ನೇಕಾರರಿಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆಯನ್ನು ಒದಗಿಸಲು ಸ್ಪಷ್ಟ ಕಾರ್ಯತಂತ್ರದೊಂದಿಗೆ ಕಾರ್ಯನಿರ್ವಹಿಸುತ್ತಿದೆ" ಎಂದು ಪ್ರಧಾನಿ ಹೇಳಿದರು. ಭಾರತದ ಎಂಎಸ್ಎಂಇಗಳು, ನೇಕಾರರು, ಕುಶಲಕರ್ಮಿಗಳು ಮತ್ತು ರೈತರ ಉತ್ಪನ್ನಗಳನ್ನು ವಿಶ್ವದಾದ್ಯಂತದ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ವಿಶ್ವದ ಬೃಹತ್ ಕಂಪನಿಗಳು ಮುಂದೆ ಬರುತ್ತಿವೆ ಎಂದು ಅವರು ಹೇಳಿದರು. ವಿಶ್ವದಾದ್ಯಂತ ದೊಡ್ಡ ಮಳಿಗೆಗಳು, ಚಿಲ್ಲರೆ ಪೂರೈಕೆ ಸರಪಳಿಗಳು, ಆನ್‌ಲೈನ್ ಮಾರಾಟ ಸಂಸ್ಥೆಗಳು ಹಾಗೂ ರೀಟೇಲ್‌ ಅಂಗಡಿಗಳನ್ನು ಹೊಂದಿರುವ ಹಲವಾರು ಕಂಪನಿಗಳ ಮುಖ್ಯಸ್ಥರೊಂದಿಗೆ ಈ ಸಂಬಂಧ ನೇರ ಚರ್ಚೆಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಅಂತಹ ಕಂಪನಿಗಳು ಈಗ ಭಾರತದ ಸ್ಥಳೀಯ ಉತ್ಪನ್ನಗಳನ್ನು ವಿಶ್ವದ ಮೂಲೆ ಮೂಲೆಗೂ ಕೊಂಡೊಯ್ಯಲು ನಿರ್ಧರಿಸಿವೆ ಎಂದು ಅವರು ಉಲ್ಲೇಖಿಸಿದರು. "ಅದು ಸಿರಿಧಾನ್ಯಗಳು ಅಥವಾ ಕೈಮಗ್ಗ ಉತ್ಪನ್ನಗಳಾಗಿರಲಿ, ಈ ದೊಡ್ಡ ಅಂತರರಾಷ್ಟ್ರೀಯ ಕಂಪನಿಗಳು ಅವುಗಳನ್ನು ವಿಶ್ವದಾದ್ಯಂತದ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತವೆ" ಎಂದು ಅವರು ಹೇಳಿದರು. ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಮತ್ತು ಇವುಗಳ ಪೂರೈಕೆ ಸರಪಳಿಯನ್ನು ಈ ಬಹುರಾಷ್ಟ್ರೀಯ ಕಂಪನಿಗಳು ಬಳಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಜವಳಿ ಉದ್ಯಮ ಮತ್ತು ಫ್ಯಾಷನ್ ಜಗತ್ತಿಗೆ ಸಂಬಂಧಿಸಿದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವದ ಅಗ್ರ-3 ಆರ್ಥಿಕತೆಗಳಲ್ಲಿ ಒಂದಾಗಲು ಕೈಗೊಂಡ ಕ್ರಮಗಳ ಜೊತೆಗೆ, ನಮ್ಮ ಚಿಂತನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ಈ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಭಾರತದ ಕೈಮಗ್ಗ, ಖಾದಿ ಮತ್ತು ಜವಳಿ ಕ್ಷೇತ್ರವನ್ನು ವಿಶ್ವ ಚಾಂಪಿಯನ್ ಗಳನ್ನಾಗಿ ಮಾಡಲು 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. "ಅದು ಕಾರ್ಮಿಕ, ನೇಕಾರ, ವಿನ್ಯಾಸಕ ಅಥವಾ ಉದ್ಯಮಿ ಯಾರೇ ಆಗಿರಲಿ ಪ್ರತಿಯೊಬ್ಬರೂ ಸಮರ್ಪಿತ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ" ಎಂದು ಅವರು ಹೇಳಿದರು. ನೇಕಾರರ ಕೌಶಲ್ಯವನ್ನು ಪ್ರಮಾಣ ಮತ್ತು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಭಾರತದಲ್ಲಿ ನವ-ಮಧ್ಯಮ ವರ್ಗದ ಉದಯದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ಉತ್ಪನ್ನಕ್ಕೂ ಬೃಹತ್ ಯುವ ಗ್ರಾಹಕ ವರ್ಗವನ್ನು ರೂಪಿಸಲಾಗುತ್ತಿದೆ ಮತ್ತು ಇದು ಜವಳಿ ಕಂಪನಿಗಳಿಗೆ ದೊಡ್ಡ ಅವಕಾಶವನ್ನು ಒದಗಿಸುತ್ತದೆ ಎಂದರು. ಆದ್ದರಿಂದ, ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸುವುದು ಮತ್ತು ಅದರಲ್ಲಿ ಹೂಡಿಕೆ ಮಾಡುವುದು ಈ ಕಂಪನಿಗಳ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಹೊರಗಿನಿಂದ ಸಿದ್ಧ ಉಡುಪುಗಳನ್ನು ಆಮದು ಮಾಡಿಕೊಳ್ಳುವ ವಿಧಾನವನ್ನು ಅವರು ಖಂಡಿಸಿದರು. ಸ್ಥಳೀಯ ಪೂರೈಕೆ ಸರಪಳಿಯಲ್ಲಿ ಹೂಡಿಕೆ ಮಾಡುವಂತೆ ಮತ್ತು ಭವಿಷ್ಯಕ್ಕಾಗಿ ಅದನ್ನು ಸಜ್ಜುಗೊಳಿಸುವಂತೆ ಅವರು ಕರೆ ನೀಡಿದರು. ಈ ವಲಯದ ದೊಡ್ಡ ಉದ್ಯಮಗಳು, ಇಷ್ಟು ಕಡಿಮೆ ಅವಧಿಯಲ್ಲಿ ಅದು ಹೇಗೆ ಸಾಧ್ಯವಾಗುತ್ತದೆ ಎಂದು ನೆಪಗಳನ್ನು ನೀಡಬಾರದು ಎಂದು ಹೇಳಿದರು. "ನಾವು ಭವಿಷ್ಯದಲ್ಲಿ ಲಾಭ ಪಡೆಯಲು ಬಯಸಿದರೆ, ನಾವು ಇಂದು ಸ್ಥಳೀಯ ಪೂರೈಕೆ ಸರಪಳಿಯಲ್ಲಿ ಹೂಡಿಕೆ ಮಾಡಬೇಕು. ಇದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ಸಾಕಾರಗೊಳಿಸುವ ಮಾರ್ಗವಾಗಿದೆ" ಎಂದು ಅವರು ಹೇಳಿದರು. ಈ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ವದೇಶಿ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು. "ಆತ್ಮನಿರ್ಭರ ಭಾರತದ ಕನಸುಗಳನ್ನು ಹೆಣೆಯುವವರು ಮತ್ತು 'ಮೇಕ್ ಇನ್ ಇಂಡಿಯಾ'ಕ್ಕೆ ಶಕ್ತಿ ನೀಡುವವರು ಖಾದಿಯನ್ನು ಕೇವಲ ಬಟ್ಟೆ ಮಾತ್ರವಲ್ಲ, ಆಯುಧವೆಂದು ಪರಿಗಣಿಸುತ್ತಾರೆ" ಎಂದು ಪ್ರಧಾನಿ ಉದ್ಗರಿಸಿದರು.

ಆಗಸ್ಟ್ 9ರ ಪ್ರಸ್ತುತತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ದಿನಾಂಕವು ಬ್ರಿಟಿಷರಿಗೆ ʻಕ್ವಿಟ್ ಇಂಡಿಯಾʼ ಸಂದೇಶವನ್ನು ಕಳುಹಿಸಿದ, ಪೂಜ್ಯ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತದ ಅತಿದೊಡ್ಡ ʻಭಾರತ ಬಿಟ್ಟು ತೊಲಗಿʼ ಚಳವಳಿಗೆ ಸಾಕ್ಷಿಯಾಗಿದೆ ಎಂದರು. ಇದಾದ ಸ್ವಲ್ಪ ಸಮಯದ ನಂತರ, ಬ್ರಿಟಿಷರು ಭಾರತವನ್ನು ತೊರೆಯಬೇಕಾಯಿತು ಎಂದು ಪ್ರಧಾನಿ ಹೇಳಿದರು. ದೇಶವು ಇಚ್ಛಾಶಕ್ತಿಯಿಂದ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಂದಿನ ತುರ್ತು ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಒಂದು ಕಾಲದಲ್ಲಿ ಬ್ರಿಟಿಷರನ್ನು ಓಡಿಸಲು ಬಳಸಿದ ಅದೇ ಮಂತ್ರವನ್ನು ಇಂದು 'ವಿಕಸಿತ ಭಾರತ' ಅಥವಾ ʻಅಭಿವೃದ್ಧಿ ಹೊಂದಿದʼ ಭಾರತವನ್ನು ನಿರ್ಮಿಸಲು ಅಡ್ಡಿಯಾಗಿರುವ ಶಕ್ತಿಗಳನ್ನು ಓಡಿಸಲು ಬಳಸಬಹುದು ಎಂದು ಅವರು ಹೇಳಿದರು. "ಇಡೀ ಭಾರತ ಒಕ್ಕೊರಲ ದನಿಯಲ್ಲಿ ಹೇಳುತ್ತಿದೆ - ಭ್ರಷ್ಟಾಚಾರ, ವಂಶಪಾರಂಪರ್ಯ, ತುಷ್ಟೀಕರಣವನ್ನು  ಭಾರತ ಬಿಟ್ಟು ಓಡಿಸಬೇಕು" ಎಂದು ಶ್ರೀ ಮೋದಿ ಉದ್ಗರಿಸಿದರು. ಭಾರತದಲ್ಲಿನ ಈ ದುಷ್ಕೃತ್ಯಗಳು ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ಒತ್ತಿಹೇಳಿದ ಅವರು, ರಾಷ್ಟ್ರವು ಈ ದುಷ್ಕೃತ್ಯಗಳನ್ನು ಸೋಲಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ದೇಶವು ವಿಜಯಶಾಲಿಯಾಗಲಿದೆ, ಭಾರತದ ಜನರು ವಿಜಯಶಾಲಿಯಾಗುತ್ತಾರೆ" ಎಂದು ಅವರು ಹೇಳಿದರು.

ಕೊನೆಯದಾಗಿ, ಹಲವು ವರ್ಷಗಳಿಂದ ತ್ರಿವರ್ಣ ಧ್ವಜವನ್ನು ನೇಯಲು ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಮಹಿಳೆಯರೊಂದಿಗೆ ನಡೆಸಿದ ಸಂವಾದದ ಬಗ್ಗೆ ಬೆಳಕು ಚೆಲ್ಲಿದರು. ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಮತ್ತು ಮತ್ತೊಮ್ಮೆ 'ಹರ್ ಘರ್ ತಿರಂಗಾ' ಆಚರಿಸುವಂತೆ ಅವರು ನಾಗರಿಕರಿಗೆ ಕರೆ ನೀಡಿದರು. "ತ್ರಿವರ್ಣ ಧ್ವಜವನ್ನು ಛಾವಣಿಗಳ ಮೇಲೆ ಹಾರಿಸಿದಾಗ, ಅದು ನಮ್ಮೊಳಗೂ ರಾರಾಜಿಸುತ್ತದೆ" ಎಂದು ಪ್ರಧಾನಿ ಮಾತು ಮುಗಿಸಿದರು. ಕೇಂದ್ರ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್, ಕೇಂದ್ರ ಜವಳಿ ಖಾತೆ ರಾಜ್ಯ ಸಚಿವೆ ಶ್ರೀಮತಿ ದರ್ಶನ ಜರ್ದೋಶ್ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ನಾರಾಯಣ್ ತಾತು ರಾಣೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
ಹಿನ್ನೆಲೆ

ದೇಶದ ಶ್ರೀಮಂತ ಕಲೆ ಮತ್ತು ಕರಕುಶಲತೆಯ ಸಂಪ್ರದಾಯವನ್ನು ಜೀವಂತವಾಗಿರಿಸಿರುವ ಕುಶಲಕರ್ಮಿಗಳು ಮತ್ತು ಕೈಕಸುಬಿಗಳಿಗೆ ಪ್ರೋತ್ಸಾಹ ಹಾಗೂ ನೀತಿ ಬೆಂಬಲವನ್ನು ನೀಡುವ ದೃಢ ಪ್ರತಿಪಾದಕರಾಗಿ ಪ್ರಧಾನಿ ಸದಾ ಮುಂದಿದ್ದಾರೆ. ಈ ಆಶಯದಿಂದ ಪ್ರೇರಣೆ ಪಡೆದ ಸರ್ಕಾರವು ʻರಾಷ್ಟ್ರೀಯ ಕೈಮಗ್ಗ ದಿನʼವನ್ನು ಆಚರಿಸಲು ಪ್ರಾರಂಭಿಸಿತು. ಅಂತಹ ಮೊದಲ ಆಚರಣೆಯನ್ನು 2015ರ ಆಗಸ್ಟ್ 7 ರಂದು ನಡೆಸಲಾಯಿತು. 1905ರ ಆಗಸ್ಟ್ 7 ರಂದು ಪ್ರಾರಂಭವಾದ ʻಸ್ವದೇಶಿ ಚಳವಳಿʼಯ ನೆನಪಿಗಾಗಿ ನಿರ್ದಿಷ್ಟವಾಗಿ ಈ ದಿನಾಂಕವನ್ನು ಆಯ್ಕೆ ಮಾಡಲಾಯಿತು. ಈ ನಡೆಯು ಸ್ಥಳೀಯ ಕೈಗಾರಿಕೆಗಳು, ವಿಶೇಷವಾಗಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಿತು.

ಈ ವರ್ಷ 9ನೇ ʻರಾಷ್ಟ್ರೀಯ ಕೈಮಗ್ಗ ದಿನʼವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯು(ಎನ್ಐಎಫ್‌ಟಿ) ಅಭಿವೃದ್ಧಿಪಡಿಸಿರುವ ಜವಳಿ ಮತ್ತು ಕರಕುಶಲ ವಸ್ತುಗಳ ಭಂಡಾರವಾದ ʻಭಾರತೀಯ ವಸ್ತ್ರ ಏವಮ್ ಶಿಲ್ಪ ಕೋಶ್‌ʼನ ಇ-ಪೋರ್ಟಲ್‌ಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ 3000ಕ್ಕೂ ಹೆಚ್ಚು ಕೈಮಗ್ಗ ಮತ್ತು ಖಾದಿ ನೇಕಾರರು, ಕುಶಲಕರ್ಮಿಗಳು ಮತ್ತು ಜವಳಿ ಮತ್ತು ಎಂಎಸ್ಎಂಇ ವಲಯದ ಪಾಲುದಾರರು ಭಾಗವಹಿಸಿದರು. ಇದು ಭಾರತದಾದ್ಯಂತ ಕೈಮಗ್ಗ ಕ್ಲಸ್ಟರ್‌ಗಳು, ʻಎನ್‌ಐಎಫ್‌ಟಿʼ ಕ್ಯಾಂಪಸ್‌ಗಳು, ನೇಕಾರ ಸೇವಾ ಕೇಂದ್ರಗಳು, ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಕ್ಯಾಂಪಸ್‌ಗಳು, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ, ಕೈಮಗ್ಗ ರಫ್ತು ಉತ್ತೇಜನ ಮಂಡಳಿ, ಕೆವಿಐಸಿ ಸಂಸ್ಥೆಗಳು ಮತ್ತು ವಿವಿಧ ರಾಜ್ಯ ಕೈಮಗ್ಗ ಇಲಾಖೆಗಳನ್ನು ಒಟ್ಟುಗೂಡಿಸುತ್ತದೆ.

 

***



(Release ID: 1946612) Visitor Counter : 144