ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಸಿ ಆರ್‌ ಸಿ ಎಸ್ - ಸಹಾರಾ ಮರುಪಾವತಿ ಪೋರ್ಟಲ್ ಮೂಲಕ ಸಹಾರಾ ಸಮೂಹದ ಸಹಕಾರ ಸಂಘಗಳ ನೈಜ ಠೇವಣಿದಾರರಿಗೆ ಹಣವನ್ನು ವರ್ಗಾಯಿಸಿದರು


ದೇಶದ ಪ್ರತಿಯೊಬ್ಬ ಬಡ ಮತ್ತು ಮಧ್ಯಮ ವರ್ಗದ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಲು ಮತ್ತು ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಪರಿಹರಿಸಲು ಮೋದಿ ಸರ್ಕಾರ ಬದ್ಧವಾಗಿದೆ

ಠೇವಣಿದಾರರು ಕಷ್ಟಪಟ್ಟು ಸಂಪಾದಿಸಿದ ಪ್ರತಿಯೊಂದು ರೂಪಾಯಿಯನ್ನು ಮರಳಿ ಪಡೆಯಲು ಮೋದಿ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ

ಎಲ್ಲಾ ಏಜೆನ್ಸಿಗಳು ಠೇವಣಿದಾರರ ಠೇವಣಿ ಹಣವನ್ನು ದಾಖಲೆ ಸಮಯದಲ್ಲಿ ಹಿಂದಿರುಗಿಸಲು ಶ್ಲಾಘನೀಯ ಕೆಲಸ ಮಾಡಿದ್ದು, ಇದರಿಂದಾಗಿ ಠೇವಣಿದಾರರು ತಮ್ಮ ಹಣವನ್ನು ಮರಳಿ ಪಡೆಯುತ್ತಿದ್ದಾರೆ

ಪೋರ್ಟಲ್ ಅನ್ನು ಪ್ರಾರಂಭಿಸುವ ಸಮಯದಲ್ಲಿ, ಪೋರ್ಟಲ್‌ ನಲ್ಲಿ ನೋಂದಾಯಿಸಿದ 45 ದಿನಗಳಲ್ಲಿ ನೈಜ ಠೇವಣಿದಾರರಿಗೆ ಮೊತ್ತವನ್ನು ಪಾವತಿಸಲಾಗುವುದು ಎಂದು ತಿಳಿಸಲಾಗಿತ್ತು, ಆದರೆ ಸುಪ್ರೀಂ ಕೋರ್ಟ್‌ ರಚಿಸಿದ ಸಮಿತಿ ಮತ್ತು ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ

112 ಫಲಾನುಭವಿಗಳು ಇಂದು ತಮ್ಮ ಬ್ಯಾಂಕ್ ಖಾತೆಗೆ ತಲಾ 10000 ರೂ.ಗಳನ್ನು ಪಡೆದಿದ್ದಾರೆ, ಶೀಘ್ರದಲ್ಲೇ ಎಲ್ಲಾ ಹೂಡಿಕೆದಾರರು ತಮ್ಮ ಹಣವನ್ನು ಮರಳಿ ಪಡೆಯಲಿದ್ದಾರೆ

ಸಹಕಾರ ಸಚಿವಾಲಯದ ಈ ಉಪಕ್ರಮವು ಕೋಟ್ಯಂತರ ಹೂಡಿಕೆದಾರರ ಮನಸ್ಸಿನಲ್ಲಿ ತೃಪ್ತಿ ಮತ್ತು ವಿಶ್ವಾಸವನ್ನು ಮೂಡಿಸಿದೆ

ತಮ್ಮ ಹಣವನ್ನು ಮರಳಿ ಪಡೆಯಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು ಮಾಡಿದ ಪ್ರಯತ್ನಗಳಿಗೆ ಸಹಾರಾ ಸಮೂಹದ ಠೇವಣಿದಾರರು ಕೃತಜ್ಞತೆ ಸಲ್ಲಿಸಿದ್ದಾರೆ

Posted On: 04 AUG 2023 3:50PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಸಿ ಆರ್‌ಸಿ ಎಸ್ - ಸಹಾರಾ ಮರುಪಾವತಿ ಪೋರ್ಟಲ್ ಮೂಲಕ ಸಹಾರಾ ಸಮೂಹದ ಸಹಕಾರ ಸಂಘಗಳ ನಿಜವಾದ ಠೇವಣಿದಾರರಿಗೆ ಹಣ ವರ್ಗಾವಣೆಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಬಿಎಲ್ ವರ್ಮಾ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಶ್ರೀ ಆರ್. ಸುಭಾಷ್ ರೆಡ್ಡಿ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್, ಮರುಪಾವತಿ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ನಿಯೋಜಿಸಲಾಗಿದ್ದ ನಾಲ್ವರು ವಿಶೇಷ ಕರ್ತವ್ಯಾಧಿಕಾರಿಗಳು (ಒ ಎಸ್‌ ಡಿ) ಮತ್ತು ಮರುಪಾವತಿ ಪಡೆದ ಕೆಲವು ಠೇವಣಿದಾರರು  ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ದೇಶದ ಪ್ರತಿಯೊಬ್ಬ ಬಡ ಮತ್ತು ಮಧ್ಯಮ ವರ್ಗದ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಲು ಮತ್ತು ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ ಎಂದು ಹೇಳಿದರು. ಸಹಕಾರ ಸಚಿವಾಲಯವು ಇಂದು ಈ ದಿಕ್ಕಿನಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಿದೆ. ಎಲ್ಲಾ ಏಜೆನ್ಸಿಗಳು ಠೇವಣಿದಾರರ ಠೇವಣಿ ಹಣವನ್ನು ದಾಖಲೆ ಸಮಯದಲ್ಲಿ ಮರಳಿಸುವ ಶ್ಲಾಘನೀಯ ಕೆಲಸ ಮಾಡಿದ್ದು, ಇದರೊಂದಿಗೆ ಠೇವಣಿದಾರರು ತಮ್ಮ ಹಣವನ್ನು ಮರಳಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಜುಲೈ 18, 2023 ರಂದು ನವದೆಹಲಿಯಲ್ಲಿ ಸಿ ಆರ್‌ಸಿ ಎಸ್ - ಸಹಾರಾ ಮರುಪಾವತಿ ಪೋರ್ಟಲ್ ಅನ್ನು ಪ್ರಾರಂಭಿಸುವ ಸಮಯದಲ್ಲಿ, ಪೋರ್ಟಲ್‌ನಲ್ಲಿ ನೋಂದಾಯಿಸಿದ 45 ದಿನಗಳಲ್ಲಿ ನಿಜವಾದ ಠೇವಣಿದಾರರಿಗೆ ಹಣವನ್ನು ಪಾವತಿಸಲಾಗುವುದು ಎಂದು ತಿಳಿಸಲಾಗಿತ್ತು, ಆದರೆ ಸುಪ್ರೀಂ ಕೋರ್ಟ್‌ನಿಂದ ರಚಿಸಲ್ಪಟ್ಟ ಸಮಿತಿ ಮತ್ತು ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡಿದ್ದು, ದಾಖಲೆ ಸಮಯದಲ್ಲಿ ಶ್ಲಾಘನೀಯ ಕೆಲಸ ಮಾಡಿವೆ. ಒಂದು ತಿಂಗಳೊಳಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, 112 ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 10 ಸಾವಿರ ರೂ. ವರ್ಗಾಯಿಸಲಾಗಿದೆ. ಸಹಕಾರ ಸಚಿವಾಲಯದ ಈ ಉಪಕ್ರಮವು ಕೋಟ್ಯಂತರ ಹೂಡಿಕೆದಾರರ ಮನಸ್ಸಿನಲ್ಲಿ ತೃಪ್ತಿ ಮತ್ತು ವಿಶ್ವಾಸವನ್ನು ಮೂಡಿಸಿದೆ ಎಂದು ಶ್ರೀ ಶಾ ಹೇಳಿದರು.

ಸಹಕಾರ ಸಚಿವಾಲಯದ ರಚನೆಯ ಸಮಯದಲ್ಲಿ, ಸಚಿವಾಲಯವು ಸಹಕಾರ ರಚನೆಯನ್ನು ಬಲಪಡಿಸುವ ಕಾರ್ಯ, ಸುಮಾರು 75 ವರ್ಷಗಳ ಹಿಂದೆ ಮಾಡಿದ ಸಹಕಾರಿ ಕಾನೂನುಗಳಲ್ಲಿ ಸಮಯೋಚಿತ ಬದಲಾವಣೆಗಳು, ಸಹಕಾರಿ ಸಂಸ್ಥೆಗಳ ಬಗ್ಗೆ ಸಾರ್ವಜನಿಕರು ಕಳೆದುಕೊಂಡಿದ್ದ ನಂಬಿಕೆಯನ್ನು ಮರು ಸ್ಥಾಪಿಸುವುದು ಸೇರಿದಂತೆ ವಿವಿಧ ಸವಾಲುಗಳನ್ನು ಹೊಂದಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಎಲ್ಲಾ ಸವಾಲುಗಳನ್ನು ಪರಿಹರಿಸಲು ಸಹಕಾರ ಸಚಿವಾಲಯವು ಕೆಲಸ ಮಾಡಿದೆ. ಕಳೆದ ಸುಮಾರು 15 ವರ್ಷಗಳಿಂದ ಸಹಾರಾ ಸಮೂಹದ ನಾಲ್ಕು ಸಹಕಾರ ಸಂಘಗಳಲ್ಲಿ ಸಿಲುಕಿರುವ ಕೋಟ್ಯಂತರ ರೂಪಾಯಿಗಳನ್ನು ಮರುಪಾವತಿಸಲು ದೇಶದ ಕೋಟಿಗಟ್ಟಲೆ ಹೂಡಿಕೆದಾರರಿಗೆ ಸಹಾಯ ಮಾಡಲು ಈ ಪ್ರಯತ್ನಗಳನ್ನು ಮಾಡಲಾಗಿದೆ. ಸಿ ಆರ್‌ ಸಿ ಎಸ್-ಸಹಾರಾ ಮರುಪಾವತಿ ಪೋರ್ಟಲ್‌ನಲ್ಲಿ ಸುಮಾರು 33 ಲಕ್ಷ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಶ್ರೀ ಶಾ ಹೇಳಿದರು.

ಸಹಾರಾ ಸಮೂಹದ ನಾಲ್ಕು ಸಹಕಾರಿ ಸಂಘಗಳಲ್ಲಿ ಸಿಲುಕಿರುವ ಹೂಡಿಕೆದಾರರ ಹಣವನ್ನು ಮರುಪಾವತಿಸಲು ಸಹಕಾರ ಸಚಿವಾಲಯವು ಸುಮಾರು ಒಂದು ವರ್ಷದ ಹಿಂದೆ ಸರಣಿ ಸಭೆಗಳನ್ನು ಪ್ರಾರಂಭಿಸಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸಿ, ಸಹಕಾರ ಸಚಿವಾಲಯವು ಎಲ್ಲಾ ಇಲಾಖೆಗಳೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸಲಾಗುವುದು ಮತ್ತು ನಿಜವಾದ ಠೇವಣಿದಾರರಿಗೆ ಮರುಪಾವತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು ಎಂದು ಅವರು ಹೇಳಿದರು.

ಇಂದು 112 ಹೂಡಿಕೆದಾರರಿಗೆ ತಲಾ 10,000 ರೂ ಮೊತ್ತವನ್ನು ಪಾವತಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಏಕೆಂದರೆ ಸಣ್ಣ ಹೂಡಿಕೆದಾರರು ಮರುಪಾವತಿಯ ಮೇಲೆ ಮೊದಲ ಹಕ್ಕನ್ನು ಹೊಂದಿರುತ್ತಾರೆ. ಆದರೆ ಮುಂಬರುವ ದಿನಗಳಲ್ಲಿ, ಎಲ್ಲಾ ಹೂಡಿಕೆದಾರರು ತಮ್ಮ ಹಣವನ್ನು ಮರಳಿ ಪಡೆಯುವುದು ಖಚಿತ. ಲೆಕ್ಕ ಪರಿಶೋಧನೆ ಪ್ರಕ್ರಿಯೆ ಮುಗಿದಿರುವುದರಿಂದ ಮುಂದಿನ ಕಂತು ಪಾವತಿಗೆ ಇನ್ನೂ ಕಡಿಮೆ ಸಮಯ ಹಿಡಿಯಲಿದೆ ಎಂದು ಅವರು ಹೇಳಿದರು. ದೇಶದ ಪ್ರತಿಯೊಬ್ಬ ನಾಗರಿಕನ ಠೇವಣಿಗಳನ್ನು ಸುರಕ್ಷಿತಗೊಳಿಸುವುದು ಮತ್ತು ಸಂವಿಧಾನದ ಅಡಿಯಲ್ಲಿ ಕಾನೂನು ಜಾರಿಗೊಳಿಸಲು ಹಕ್ಕುಗಳನ್ನು ಬಳಸಿಕೊಂಡು ಅವರ ಠೇವಣಿಗಳನ್ನು ಹಿಂದಿರುಗಿಸುವುದು ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಸಹಾರಾ ಸಮೂಹದ ಸಹಕಾರಿ ಸಂಘಗಳ ಹೂಡಿಕೆದಾರರಿಗೆ ಮೋದಿ ಸರ್ಕಾರವು ಅವರು ಕಷ್ಟಪಟ್ಟು ಗಳಿಸಿದ ಪ್ರತಿಯೊಂದು ರೂಪಾಯಿಯನ್ನು ಮರಳಿ ಪಡೆಯಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ರೀ ಶಾ ಭರವಸೆ ನೀಡಿದರು. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಶ್ರೀ ಆರ್. ಸುಭಾಷ್ ರೆಡ್ಡಿ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್, ವಿಶೇಷ ಕಾರ್ಯದರ್ಶಿ ಶ್ರೀ ವಿಜಯ್ ಕುಮಾರ್ ಮತ್ತು ಸಹಕಾರ ಸಚಿವಾಲಯದ ಅಧಿಕಾರಿಗಳು ಮತ್ತು ಎಲ್ಲಾ ಸಂಬಂಧಿತ ಏಜೆನ್ಸಿಗಳಿಗೆ ದಾಖಲೆ ಸಮಯದಲ್ಲಿ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಕ್ಕಾಗಿ ಶ್ರೀ ಅಮಿತ್ ಶಾ ಅವರು ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಹಣವನ್ನು ಮರಳಿ ಪಡೆಯಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯ ಮಾಡಿದ ಪ್ರಯತ್ನಗಳಿಗೆ ಸಹಾರಾ ಸಮೂಹದ ಠೇವಣಿದಾರರು ಕೃತಜ್ಞತೆ ಸಲ್ಲಿಸಿದರು.

ಇಂದು, ಮೊದಲ ಹಂತದಲ್ಲಿ, ಸಹಾರಾ ಸಮೂಹದ ಸಹಕಾರ ಸಂಘಗಳ 112 ಠೇವಣಿದಾರರು ತಮ್ಮ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳ ಮೂಲಕ ತಲಾ 10,000 ರೂ. ಪಡೆದಿದ್ದಾರೆ. ಮೊದಲ ಹಂತದ ವಿಶ್ಲೇಷಣೆಯ ಆಧಾರದ ಮೇಲೆ, ಲೆಕ್ಕಪರಿಶೋಧಕರು ಅಮಿಕಸ್ ಕ್ಯೂರಿಯವರ ಸಹಾಯದಿಂದ ಕ್ಲೈಮ್‌ಗಳ ಪರಿಶೀಲನೆಗಾಗಿ "ಸಾಮಾನ್ಯ ಕಾರ್ಯವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್)" ವನ್ನು ಸಿದ್ಧಪಡಿಸುತ್ತಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿ ಆರ್‌ ಸಿ ಎಸ್‌)-ಸಹಾರಾ ಮರುಪಾವತಿ ಪೋರ್ಟಲ್ https://mocrefund.crcs.gov.in ಅನ್ನು ಜುಲೈ 18, 2023 ರಂದು ಪ್ರಾರಂಭಿಸಿದರು. ಈ ಪೋರ್ಟಲ್ ಅನ್ನು ಸಹಾರಾ ಸಮೂಹದ ಸಹಕಾರ ಸಂಘಗಳ ನಿಜವಾದ ಠೇವಣಿದಾರರು  ಕ್ಲೈಮ್‌ಗಳನ್ನು ಸಲ್ಲಿಸಲು ಅಭಿವೃದ್ಧಿಪಡಿಸಲಾಗಿದೆ. ಅವಗಳೆಂದರೆ, ಸಹಾರಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್, ಸಹಾರಾಯನ್ ಯೂನಿವರ್ಸಲ್ ಮಲ್ಟಿಪರ್ಪಸ್ ಸೊಸೈಟಿ ಲಿಮಿಟೆಡ್, ಹಮಾರಾ ಇಂಡಿಯಾ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಸ್ಟಾರ್ಸ್ ಮಲ್ಟಿಪರ್ಪಸ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್.

ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾರ್ಚ್ 29, 2023 ರಂದು ತನ್ನ ಆದೇಶದಲ್ಲಿ "ಸಹಾರಾ-ಸೆಬಿ ಮರುಪಾವತಿ ಖಾತೆಯಿಂದ" 5000 ಕೋಟಿ ರೂ.ಗಳನ್ನು ಸಹಾರಾ ಸಮೂಹದ ಸಹಕಾರ ಸಂಘಗಳ ನಿಜವಾದ ಠೇವಣಿದಾರರ ನ್ಯಾಯಸಮ್ಮತ ಬಾಕಿ ವಿತರಣೆಗಾಗಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ (ಸಿ ಆರ್‌ ಶಿ ಎಸ್) ಗೆ ವರ್ಗಾಯಿಸಲು ನಿರ್ದೇಶಿಸಿತು. ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಅಮಿಕಸ್ ಕ್ಯೂರಿ ಶ್ರೀ ಗೌರವ್ ಅಗರವಾಲ್ ಅವರ ಸಹಾಯದಿಂದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರು ವಿತರಣಾ ಪ್ರಕ್ರಿಯೆಯ ಮೇಲ್ವಿಚಾರಣೆ ಮತ್ತು ಉಸ್ತುವಾರಿ ನಡೆಸುತ್ತಿದ್ದಾರೆ. ಮರುಪಾವತಿ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಮೇಲಿನ ಪ್ರತಿಯೊಂದು ಸೊಸೈಟಿಗಳಿಗೆ ವಿಶೇಷ ಕರ್ತವ್ಯದ ಮೇಲೆ ನಾಲ್ವರು ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.

ಕ್ಲೈಮ್‌ಗಳ ಸಲ್ಲಿಕೆಗಾಗಿ ಅಭಿವೃದ್ಧಿಪಡಿಸಲಾದ ಆನ್‌ಲೈನ್ ಪೋರ್ಟಲ್ ಬಳಕೆದಾರ ಸ್ನೇಹಿ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಿದೆ. ಇಡೀ ಪ್ರಕ್ರಿಯೆಯು ಡಿಜಿಟಲ್ ಆಗಿದೆ. ನಿಜವಾದ ಠೇವಣಿದಾರರ ಕಾನೂನುಬದ್ಧ ಠೇವಣಿಗಳನ್ನು ಮಾತ್ರ ಮರುಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್‌ನಲ್ಲಿ ಅಗತ್ಯ ಪರಿಶೀಲನೆಗಳನ್ನು ಅಳವಡಿಸಲಾಗಿದೆ. ಸಹಕಾರ ಸಚಿವಾಲಯದ ವೆಬ್‌ಸೈಟ್ ಮೂಲಕ ಪೋರ್ಟಲ್ ಅನ್ನು ಸಹ ಪ್ರವೇಶಿಸಬಹುದು. ಈ ಸೊಸೈಟಿಗಳ ನಿಜವಾದ ಠೇವಣಿದಾರರು ಪೋರ್ಟಲ್‌ ನಲ್ಲಿ ಲಭ್ಯವಿರುವ ಆನ್‌ ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ ಲೋಡ್ ಮಾಡುವ ಮೂಲಕ ತಮ್ಮ ಕ್ಲೈಮ್‌ ಗಳನ್ನು ಸಲ್ಲಿಸಬೇಕು. ಠೇವಣಿದಾರರ ಗುರುತನ್ನು ಆಧಾರ್ ಕಾರ್ಡ್ ಪರಿಶೀಲನೆಯ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ನೇಮಕಗೊಂಡ ಸೊಸೈಟಿಗಳ ಲೆಕ್ಕಪರಿಶೋಧಕರು ಮತ್ತು ಒ ಎಸ್‌ ಡಿ ಗಳಿಂದ ಅವರ ಕ್ಲೈಮ್‌ ಗಳ ಪರಿಶೀಲನೆ ಮತ್ತು ಅಪ್‌ ಲೋಡ್ ಮಾಡಿದ ದಾಖಲೆಗಳ ನಂತರ, ನಿಜವಾದ ಠೇವಣಿದಾರರಿಗೆ ಹಣದ ಲಭ್ಯತೆಗೆ ಒಳಪಟ್ಟು ಅವರ ಆನ್‌ ಲೈನ್ ಕ್ಲೈಮ್‌ ಗಳನ್ನು ಸಲ್ಲಿಸಿದ 45 ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ ಮತ್ತು ಎಸ್‌ ಎಂ ಎಸ್‌ /ಪೋರ್ಟಲ್ ಮೂಲಕ ಅವರಿಗೆ ತಿಳಿಸಲಾಗುತ್ತದೆ. ಸೊಸೈಟಿಗಳ ನಿಜವಾದ ಠೇವಣಿದಾರರು ತಮ್ಮ ಹಕ್ಕು ಮತ್ತು ಠೇವಣಿಗಳ ಪುರಾವೆಯಾಗಿ ಅಗತ್ಯವಿರುವ ದಾಖಲೆಗಳೊಂದಿಗೆ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.

****



(Release ID: 1945836) Visitor Counter : 97