ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೆಹಲಿ ಪುಸ್ತಕ ಮೇಳ 2023ರ ಪ್ರದರ್ಶನ ವಿಭಾಗದಲ್ಲಿ ಪ್ರಕಾಶನ ವಿಭಾಗಕ್ಕೆ ಅತ್ಯುನ್ನತ ಪ್ರಶಸ್ತಿ
Posted On:
02 AUG 2023 6:40PM by PIB Bengaluru
ಭಾರತ ಸರ್ಕಾರದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಪ್ರಕಾಶನ ವಿಭಾಗವು ದೆಹಲಿ ಪುಸ್ತಕ ಮೇಳ- 2023ರಲ್ಲಿ ಪ್ರದರ್ಶನ ವಿಭಾಗದಲ್ಲಿ ಅತ್ಯುನ್ನತ ಬೆಳ್ಳಿ ಪದಕ ಪ್ರಶಸ್ತಿಗೆ ಪಾತ್ರವಾಗಿದೆ. ಆಗಸ್ಟ್ 2ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಪುಸ್ತಕ ಮೇಳದ ಸಮಾರೋಪ ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಕಾಶನ ವಿಭಾಗದ ಮುಖ್ಯಸ್ಥರು ಹಾಗೂ ಮಹಾನಿರ್ದೇಶಕರಾದ ಶ್ರೀಮತಿ ಅನುಪಮಾ ಭಟ್ನಾಗರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಕಾಶನ ವಿಭಾಗ, ಭಾರತೀಯ ವ್ಯಾಪಾರ ಉತ್ತೇಜನ ಸಂಸ್ಥೆ (ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್- ಐಟಿಪಿಒ) ಹಾಗೂ ಭಾರತೀಯ ಪ್ರಕಾಶಕರ ಒಕ್ಕೂಟ (ಫೆಡರೇಶನ್ ಆಫ್ ಇಂಡಿಯನ್ ಪಬ್ಲಿಷರ್ಸ್- ಎಫ್‌ಐಪಿ) ಹಾಗೂ ಪ್ರಕಾಶನ ವಿಭಾಗದ ಆಯೋಜನಾ ತಂಡದ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಐಟಿಪಿಒ ಸಂಸ್ಥೆಯು ಎಫ್‌ಐಪಿ ಸಹಯೋಗದಲ್ಲಿ ಕಳೆದ ಜುಲೈ 29ರಿಂದ ಆ. 2ರವರೆಗೆ ದೆಹಲಿ ಪುಸ್ತಕ ಮೇಳದ 27ನೇ ಆವೃತ್ತಿಯನ್ನು ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು ಪ್ರಗತಿ ಮೈದಾನದ ಆಯೋಜಿಸಲಾಗಿದ್ದ ಮೇಳದಲ್ಲಿ ಮಳಿಗೆ ಸಂಖ್ಯೆ 12, ಸಭಾಂಗಣ ಸಂಖ್ಯೆ 11ರಲ್ಲಿ ತನ್ನ ಪ್ರಕಾಶನದ ಪುಸ್ತಕ, ನಿಯತಕಾಲಿಕೆಗಳ ಪ್ರದರ್ಶನ ಏರ್ಪಡಿಸಿತ್ತು.
ಮೇಳಕ್ಕೆ ಭೇಟಿ ನೀಡಿದ್ದ ಬಹಳಷ್ಟು ಸಂದರ್ಶಕರು ಪ್ರಕಾಶನ ವಿಭಾಗದ ಪ್ರದರ್ಶಿಸಿದ್ದ ವೈವಿಧ್ಯದ ಪುಸ್ತಕ ಸಂಗ್ರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರ ನಿರ್ಮಾಣ, ಇತಿಹಾಸ ಮತ್ತು ಪರಂಪರೆಯಿಂದ ಹಿಡಿದು ಜೀವನಚರಿತ್ರೆಗಳು, ಆಕರ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯದವರೆಗಿನ ತರಹೇವಾರಿ ವಿಷಯಗಳ ಪುಸ್ತಕದ ದೊಡ್ಡ ಸಂಗ್ರಹವೇ ಅನಾವರಣಗೊಂಡಿತ್ತು. ರಾಷ್ಟ್ರಪತಿ ಭವನದ ಉತ್ಕೃಷ್ಠ ಪುಸ್ತಕ ಆವೃತ್ತಿಗಳು ಹಾಗೂ ವಿಭಾಗವು ವಿಶೇಷವಾಗಿ ಹೊರತಂದಿರುವ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳ ಆಯ್ದ ಭಾಷಣ ಸಂಗ್ರಹಗಳು ಗಮನ ಸೆಳೆಯುವ ಜತೆಗೆ ಸಂದರ್ಶಕರ ಮೆಚ್ಚುಗೆಗೆ ಪಾತ್ರವಾದವು.
ವಿಭಾಗವು ಹೊರತಂದಿರುವ ʼಇಂಡಿಯಾ/ ಭಾರತ್ʼ ಜನಪ್ರಿಯ ವಾರ್ಷಿಕ ಆಕಾರ ಪುಸ್ತಕವು ಪ್ರಕಾಶನ ಮಳಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ವಿಭಾಗವು ಕಲೆ ಮತ್ತು ಸಂಸ್ಕೃತಿ ಕುರಿತಾದ ಆಕರ್ಷಕ ಅದ್ಭುತ ಚಿತ್ರಗಳ್ಳುಳ ಪುಸ್ತಕ ಕೂಡ ಸಂದರ್ಶಕರ ವಿಶೇಷ ಮನ್ನಣೆ ಪಡೆಯಿತು. ಇದೇ ಸಂದರ್ಭದಲ್ಲಿ ವಿಭಾಗವು ಪ್ರಕಟಿಸಿರುವ 'ಯೋಜನಾ ಕ್ಲಾಸಿಕ್ಸ್' ವಿಶೇಷ ಪುಸ್ತಕವನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಮಂಗಳವಾರ ಬಿಡುಗಡೆ ಮಾಡಿದರು. ಈ ಪುಸ್ತಕವು ಸದ್ಯದಲ್ಲೇ ಸೂಚನಾ ಭವನದಲ್ಲಿನ ಪ್ರಕಾಶ ವಿಭಾಗದ ಪುಸ್ತಕ ಗ್ಯಾಲರಿಯಲ್ಲಿ ಲಭ್ಯವಾಗಲಿದೆ. ಹಾಗೆಯೇ ವೆಬ್‌ಸೈಟ್ ವಿಳಾಸ www.publicationsdivision.nic.in ನಲ್ಲೂ ಲಭ್ಯವಿರಲಿದೆ.
ಪ್ರದರ್ಶನ ಮಳಿಗೆಯಲ್ಲಿ ಕೇವಲ ಪುಸ್ತಕಗಳಲ್ಲಷ್ಟೇ ಅಲ್ಲದೆ, ಪ್ರಕಾಶನ ಭಾಗದ ಜನಪ್ರಿಯ ಮತ್ತು ವ್ಯಾಪಕ ಪ್ರಸರಣ ಹೊಂದಿರುವ ಯೋಜನಾ, ಕುರುಕ್ಷೇತ್ರ, ಆಜ್‌ಕಲ್ ಮತ್ತು ಬಾಲ ಭಾರತಿ ನಿಯತಕಾಲಿಕೆಗಳ ಬಗ್ಗೆಯೂ ಸಂದರ್ಶಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ವಿಭಾಗವು ಪ್ರಕಟಿಸುವ ಉದ್ಯೋಗ ಸುದ್ದಿ / ರೋಜ್‌ಗಾರ್ ಸಮಾಚಾರ್ ಸಾಪ್ತಾಹಿಕವು ನಿಯಮಿತವಾಗಿ ಉದ್ಯೋಗಾವಕಾಶ ಕುರಿತಂತೆ ಉಪಯುಕ್ತ ಮಾಹಿತಿ ಒದಗಿಸುತ್ತಿರುವ ಕುರಿತೂ ಪ್ರಶಂಸೆ ವ್ಯಕ್ತವಾಯಿತು.
***
(Release ID: 1945374)
Visitor Counter : 94