ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚೆನ್ನೈನಲ್ಲಿ `ಜಿ-20 ಪರಿಸರ ಮತ್ತು ಹವಾಮಾನ ಸಚಿವರ ಸಭೆ'ಯನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


"ಭಾರತದಲ್ಲಿ, ಪ್ರಕೃತಿ ಮತ್ತು ಅದರ ಮಾರ್ಗಗಳುನಿರಂತರ ಕಲಿಕೆಯ ಮೂಲಗಳಾಗಿವೆ"

ಹವಾಮಾನ ಉಪಕ್ರಮವು 'ಅಂತ್ಯೋದಯ'ವನ್ನು ಅನುಸರಿಸಬೇಕು, ಅಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸಬೇಕು"

ಭಾರತವು 2070ರ ವೇಳೆಗೆ 'ನಿವ್ವಳ ಶೂನ್ಯ' ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಹೊಂದಿದೆ"

ಹುಲಿ ಯೋಜನೆಯ ಪರಿಣಾಮವಾಗಿ ವಿಶ್ವದ 70 ಪ್ರತಿಶತದಷ್ಟು ಹುಲಿಗಳು ಇಂದು ಭಾರತದಲ್ಲಿವೆ

"ʻಮಿಷನ್ ಲೈಫ್‌ʼ ಒಂದು ಜಾಗತಿಕ ಜನಾಂದೋಲನವಾಗಿ ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳನ್ನು ಪ್ರೇರೇಪಿಸುತ್ತದೆ"

ಪ್ರಕೃತಿ ಮಾತೆಯು 'ವಸುದೈವ ಕುಟುಂಬಕಂ' - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕೆ ಆದ್ಯತೆ ನೀಡುತ್ತದೆ"

Posted On: 28 JUL 2023 10:42AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚೆನ್ನೈನಲ್ಲಿ ನಡೆದ `ಜಿ-20 ಪರಿಸರ ಮತ್ತು ಹವಾಮಾನ ಸಚಿವರ ಸಭೆʼಯನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ಚೆನ್ನೈಗೆ ಗಣ್ಯರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಈ ನಗರವು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿದೆ ಎಂದರು. ʻಯುನೆಸ್ಕೋʼ ವಿಶ್ವ ಪರಂಪರೆಯ ತಾಣವಾಗಿರುವ ಮಾಮಲ್ಲಪುರಂನ 'ನೋಡಲೇಬೇಕಾದ' ತಾಣವನ್ನು ಅನ್ವೇಷಿಸುವಂತೆ ಅವರು ಗಣ್ಯರನ್ನು ಒತ್ತಾಯಿಸಿದರು. ಅಲ್ಲಿನ ಸ್ಪೂರ್ತಿದಾಯಕ ಕಲ್ಲಿನ ಕೆತ್ತನೆಗಳು ಮತ್ತು ಅದರ ಅದ್ಭುತ ಸೌಂದರ್ಯವನ್ನು ಅನುಭವಿಸುವಂತೆ ಉತ್ತೇಜಿಸಿದರು.

ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಮಹಾನ್ ಕವಿ ತಿರುವಳ್ಳುವರ್ ಅವರನ್ನು ಉಲ್ಲೇಖಿಸಿದ ಪ್ರಧಾನಿ, "ತನ್ನ ನೀರನ್ನು ಮೇಲಕ್ಕೆ ಸೆಳೆವ ಮೋಡವು ಅದನ್ನು ಮಳೆಯ ರೂಪದಲ್ಲಿ ಹಿಂತಿರುಗಿಸದಿದ್ದರೆ ಸಾಗರಗಳು ಸಹ ಕುಗ್ಗುತ್ತವೆ" ಎಂದು ಹೇಳಿದರು. ಪ್ರಕೃತಿ ಮತ್ತು ಭಾರತದಲ್ಲಿ ನಿರಂತರ ಕಲಿಕೆಯ ಮೂಲವಾಗುವ ಪ್ರಾಕೃತಿಕ ವಿಧಾನಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ ಅಥವಾ ಮರಗಳು ತಮ್ಮ ಹಣ್ಣುಗಳನ್ನು ತಾವೇ ತಿನ್ನುವುದಿಲ್ಲ. ಮೋಡಗಳು ಸಹ ತಮ್ಮ ನೀರಿನಿಂದ ಬೆಳೆಯುವ ಧಾನ್ಯಗಳನ್ನು ತಾವೇ ಸೇವಿಸುವುದಿಲ್ಲ," ಎಂಬ ಮತ್ತೊಂದು ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದರು. ಪ್ರಕೃತಿ ನಮಗೆ ಹೇಗೆ ಒದಗಿಸುತ್ತದೆಯೋ ಅದೇ ರೀತಿ ನಾವು ಸಹ ಪಕೃತಿಗೆ ಒದಗಿಸುವುದನ್ನು ಪ್ರಧಾನಿ ಒತ್ತಿ ಹೇಳಿದರು. ಭೂಮಿ ತಾಯಿಯನ್ನು ರಕ್ಷಿಸುವುದು ಮತ್ತು ಅವಳ ಕಾಳಜಿ ವಹಿಸುವುದು ನಮ್ಮ ಮೂಲಭೂತ ಜವಾಬ್ದಾರಿಯಾಗಿದೆ. ಇಂದು, ಈ ಕರ್ತವ್ಯವನ್ನು ಅನೇಕರು ಬಹಳ ಸಮಯದವರೆಗೆ ನಿರ್ಲಕ್ಷಿಸಿದ್ದರಿಂದ ಇದು 'ಹವಾಮಾನ ಉಪಕ್ರಮʼದ ರೂಪವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು. ಭಾರತದ ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ, ಹವಾಮಾನ ಉಪಕ್ರಮವು 'ಅಂತ್ಯೋದಯ'ವನ್ನು ಅನುಸರಿಸಬೇಕು, ಅಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸಬೇಕು ಎಂದು ಪ್ರಧಾನಿ ಹೇಳಿದರು. ಜಾಗತಿಕ ದಕ್ಷಿಣದ ದೇಶಗಳು ಹವಾಮಾನ ಬದಲಾವಣೆ ಮತ್ತು ಪರಿಸರ ಸಮಸ್ಯೆಗಳಿಂದ ಅತಿಹೆಚ್ಚು ಪ್ರಭಾವಿತವಾಗಿವೆ ಎಂದು ಹೇಳಿದ ಪ್ರಧಾನಿ, 'ಯುಎನ್ ಹವಾಮಾನ ಸಮಾವೇಶ' ಮತ್ತು 'ಪ್ಯಾರಿಸ್ ಒಪ್ಪಂದ' ಅಡಿಯಲ್ಲಿ ಬದ್ಧತೆಗಳ ಮೇಲೆ ಕ್ರಮವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಏಕೆಂದರೆ ಜಾಗತಿಕ ದಕ್ಷಿಣವು ಹವಾಮಾನ ಸ್ನೇಹಿ ರೀತಿಯಲ್ಲಿ ತನ್ನ ಅಭಿವೃದ್ಧಿ ಆಕಾಂಕ್ಷೆಗಳನ್ನು ಪೂರೈಸಲು ಸಹಾಯ ಮಾಡುವಲ್ಲಿ ಇದು ನಿರ್ಣಾಯಕವಾಗಿದೆ.

ಭಾರತವು ತನ್ನ ಮಹತ್ವಾಕಾಂಕ್ಷೆಯ 'ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ' ಮೂಲಕ ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿರುವುದು ಹೆಮ್ಮೆಯ ವಿಚಾರ ಎಂದು ಪ್ರಧಾನಿ ಹೇಳಿದರು. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು 2030ರ ಗುರಿಗಿಂತ 9 ವರ್ಷ ಮುಂಚಿತವಾಗಿ ಸಾಧಿಸಲಾಗಿದೆ ಮತ್ತು ಈಗ ನವೀಕರಿಸಿದ ಗುರಿಗಳ ಮೂಲಕ ಮಿತಿಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ಇಂದು ಭಾರತವು ವಿಶ್ವದ ಅಗ್ರ 5 ದೇಶಗಳಲ್ಲಿ ಒಂದಾಗಿದೆ ಮತ್ತು 2070 ರ ವೇಳೆಗೆ 'ನಿವ್ವಳ ಶೂನ್ಯ' ಸಾಧಿಸುವ ಗುರಿಯನ್ನು ದೇಶ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ, ʻಸಿಡಿಆರ್‌ಐʼ ಮತ್ತು 'ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಪಡೆ ಸೇರಿದಂತೆ ಮೈತ್ರಿಕೂಟಗಳ ಮೂಲಕ ಭಾರತವು ತನ್ನ ಪಾಲುದಾರರೊಂದಿಗೆ ಸಹಯೋಗವನ್ನು ಮುಂದುವರಿಸುತ್ತಿದೆ ಎಂದು ಶ್ರೀ ಮೋದಿ ಆಶಾವಾದ ವ್ಯಕ್ತಪಡಿಸಿದರು.

ಜೀವವೈವಿಧ್ಯ ಸಂರಕ್ಷಣೆ, ರಕ್ಷಣೆ, ಪುನಃಸ್ಥಾಪನೆ ಮತ್ತು ಸಮೃದ್ಧಿಗಾಗಿ ಕೈಗೊಂಡಿರುವ ಸುಸ್ಥಿರ ಉಪಕ್ರಮಗಳನ್ನು ಒತ್ತಿ ತೋರಿಸಿದ ಪ್ರಧಾನಿಯವರು, "ಭಾರತವು ಬೃಹತ್ ವೈವಿಧ್ಯಮಯ ದೇಶವಾಗಿದೆ" ಎಂದರು. ಕಾಡ್ಗಿಚ್ಚು ಮತ್ತು ಗಣಿಗಾರಿಕೆಯಿಂದ ಬಾಧಿತವಾದ ಆದ್ಯತೆಯ ಭೂದೃಶ್ಯಗಳ ಪುನಃಸ್ಥಾಪನೆಯನ್ನು 'ಗಾಂಧಿನಗರ ಅನುಷ್ಠಾನ ಮಾರ್ಗಸೂಚಿ ಮತ್ತು ವೇದಿಕೆ' ಮೂಲಕ ಗುರುತಿಸಲಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಭೂಮಿಯ ಮೇಲಿನ ಏಳು ದೊಡ್ಡ ಬೆಕ್ಕುಗಳ ಸಂತತಿ ಸಂರಕ್ಷಣೆಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ 'ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್' ಅನ್ನು ಉಲ್ಲೇಖಿಸಿದ ಅವರು, ಹುಲಿ ಸಂರಕ್ಷಣಾ ಉಪಕ್ರಮವಾದ 'ಪ್ರಾಜೆಕ್ಟ್ ಟೈಗರ್'ನಿಂದ ಕಲಿತ ಅಂಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹುಲಿ ಯೋಜನೆಯ ಪರಿಣಾಮವಾಗಿ ಇಂದು ವಿಶ್ವದ ಶೇಕಡಾ 70 ರಷ್ಟು ಹುಲಿಗಳು ಭಾರತದಲ್ಲಿವೆ ಎಂದು ಅವರು ಮಾಹಿತಿ ನೀಡಿದರು. ʻಪ್ರಾಜೆಕ್ಟ್ ಲಯನ್ʼ ಮತ್ತು ʻಪ್ರಾಜೆಕ್ಟ್ ಡಾಲ್ಫಿನ್ʼ ಉಪಕ್ರಮಗಳ ಭಾಗವಾಗಿ ನಡೆಯುತ್ತಿರುವ ಕಾರ್ಯಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಭಾರತದ ಉಪಕ್ರಮಗಳು ಜನರ ಪಾಲ್ಗೊಳ್ಳುವಿಕೆಯಿಂದ ಪ್ರೇರಿತವಾಗಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 'ಮಿಷನ್ ಅಮೃತ್ ಸರೋವರ್' ಒಂದು ಅನನ್ಯ ಜಲ ಸಂರಕ್ಷಣಾ ಉಪಕ್ರಮವಾಗಿದೆ. ಕೇವಲ ಒಂದು ವರ್ಷದಲ್ಲಿ 63,000 ಕ್ಕೂ ಹೆಚ್ಚು ಜಲಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಈ ಅಭಿಯಾನವನ್ನು ಸಂಪೂರ್ಣವಾಗಿ ಸಮುದಾಯದ ಭಾಗವಹಿಸುವಿಕೆಯ ಮೂಲಕ ಮತ್ತು ತಂತ್ರಜ್ಞಾನದ ಸಹಾಯದಿಂದ ಜಾರಿಗೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸುಮಾರು 250,000 ಮರುಬಳಕೆ ಮತ್ತು ಮರುಪೂರಣ ಹೊಂಡಗಳ ನಿರ್ಮಾಣದ ಜೊತೆಗೆ ನೀರನ್ನು ಸಂರಕ್ಷಿಸಲು 280,000ಕ್ಕೂ ಹೆಚ್ಚು ಮಳೆ ನೀರು ಕೊಯ್ಲು ಕಾಮಗಾರಿಗಳ ನಿರ್ಮಾಣಕ್ಕೆ ಕಾರಣವಾದ 'ಕ್ಯಾಚ್ ದಿ ರೈನ್' ಅಭಿಯಾನದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ಇದೆಲ್ಲವನ್ನೂ ಜನರ ಭಾಗವಹಿಸುವಿಕೆಯ ಮೂಲಕ ಸಾಧಿಸಲಾಗಿದೆ. ಇದರಲ್ಲಿ ಸ್ಥಳೀಯ ಮಣ್ಣು ಮತ್ತು ನೀರಿನ ಪರಿಸ್ಥಿತಿಗಳ ಗಮನ ಮೇಲೆ ಕೇಂದ್ರೀಕರಿಸಲಾಗಿದೆ," ಎಂದು ಪ್ರಧಾನಿ ಹೇಳಿದರು. ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಆರಂಭಿಸಲಾದ 'ನಮಾಮಿ ಗಂಗೆʼ ಯೋಜನೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆಯೂ ಶ್ರೀ ಮೋದಿ ಪ್ರಸ್ತಾಪಿಸಿದರು. ಇಂದು ನದಿಯ ಅನೇಕ ಭಾಗಗಳಲ್ಲಿ ʻಗಂಗಾ ಡಾಲ್ಫಿನ್ʼ ಮತ್ತೆ ಕಾಣಿಸಿಕೊಂಡಿರುವುದು ಇದರ ಅಡಿಯಲ್ಲಿ ಪ್ರಮುಖ ಸಾಧನೆಗೆ ಉದಾಹರಣೆ ಎಂದು ಪ್ರಧಾನಿ ಹೇಳಿದರು. ಜೌಗು ಪ್ರದೇಶಗಳ ಸಂರಕ್ಷಣೆಯಲ್ಲಿ ʻರಾಮ್ ಸರ್ ತಾಣʼಗಳೆಂದು ಗೊತ್ತುಪಡಿಸಿದ 75 ಜೌಗು ತಾಣಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ಏಷ್ಯಾದಲ್ಲೇ ಅತಿ ದೊಡ್ಡ ʻರಾಮ್‌ಸರ್ ತಾಣʼಗಳ ಜಾಲವನ್ನು ಹೊಂದಿದೆ ಎಂದರು.

'ಸಣ್ಣ ದ್ವೀಪ ರಾಷ್ಟ್ರಗಳನ್ನು' 'ದೊಡ್ಡ ಸಾಗರ ದೇಶಗಳು' ಎಂದು ಉಲ್ಲೇಖಿಸಿದ ಪ್ರಧಾನಿ, “ಸಾಗರಗಳು ಈ ದೇಶಗಳ ಪಾಲಿಗೆ ನಿರ್ಣಾಯಕ ಆರ್ಥಿಕ ಸಂಪನ್ಮೂಲವಾಗಿವೆ. ವಿಶ್ವದಾದ್ಯಂತ ಮೂರು ಶತಕೋಟಿ ಜನರ ಜೀವನೋಪಾಯವನ್ನು ಸಾಗರಗಳು ಬೆಂಬಲಿಸುತ್ತವೆ,ʼʼ ಎಂದರು. ಅಲ್ಲದೆ, ಸಾಗರಗಳು ವ್ಯಾಪಕವಾದ ಜೀವವೈವಿಧ್ಯತೆಗೆ ನೆಲೆಯಾಗಿವೆ ಎಂದ ಅವರು, ಸಾಗರ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ನಿರ್ವಹಣೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. 'ಸುಸ್ಥಿರ ಮತ್ತು ಸದೃಢ ನೀಲಿ ಮತ್ತು ಸಾಗರ ಆಧಾರಿತ ಆರ್ಥಿಕತೆಗಾಗಿ ʻಜಿ-20ʼ ಉನ್ನತ ಮಟ್ಟದ ತತ್ವಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಧಾನಿ ಆಶಾವಾದ ವ್ಯಕ್ತಪಡಿಸಿದರು. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲು ಪರಿಣಾಮಕಾರಿ ಅಂತರರಾಷ್ಟ್ರೀಯ ಕಾನೂನುಬದ್ಧ ಸಾಧನವೊಂದನ್ನು ರಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ʻಜಿ-20ʼಗೆ ಕರೆ ನೀಡಿದರು

ಕಳೆದ ವರ್ಷ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ʻಮಿಷನ್ ಲೈಫ್‌ʼ(ಪರಿಸರಕ್ಕಾಗಿ ಜೀವನಶೈಲಿ) ಪ್ರಾರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಿ, ʻಮಿಷನ್ ಲೈಫ್‌ʼ ಒಂದು ಜಾಗತಿಕ ಜನಾಂದೋಲನವಾಗಿ ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಹಾಗೂ ಸಾಮೂಹಿಕ ಪ್ರಯತ್ನವನ್ನು ಪ್ರೇರೇಪಿಸುತ್ತದೆ ಎಂದರು. ಭಾರತದಲ್ಲಿ, ಯಾವುದೇ ವ್ಯಕ್ತಿ, ಕಂಪನಿ ಅಥವಾ ಸ್ಥಳೀಯ ಸಂಸ್ಥೆಯ ಪರಿಸರ ಸ್ನೇಹಿ ಕ್ರಮಗಳು ಗಮನಕ್ಕೆ ಬಾರದೆ ಹೋಗುವುದಿಲ್ಲ ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ಘೋಷಿಸಲಾದ 'ಹಸಿರು ಸಾಲ ಕಾರ್ಯಕ್ರಮ'ದ (ಗ್ರೀನ್‌ ಕ್ರೆಡಿಟ್‌) ಅಡಿಯಲ್ಲಿ ಈಗ ಹಸಿರು ಸಾಲಗಳನ್ನು ಗಳಿಸಬಹುದು ಎಂದು ಅವರು ಮಾಹಿತಿ ನೀಡಿದರು. ಮರ ನೆಡುವಿಕೆ, ಜಲ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯಂತಹ ಚಟುವಟಿಕೆಗಳ ಮೂಲಕ ಈಗ ವ್ಯಕ್ತಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರರು ಆದಾಯವನ್ನು ಗಳಿಸಬಹುದು ಎಂದು ಅವರು ವಿವರಿಸಿದರು.

ತಮ್ಮ ಭಾಷಣದ ಕೊನೆಯಲ್ಲಿ, ಪ್ರಕೃತಿ ಮಾತೆಯ ಬಗೆಗಿನ ನಮ್ಮ ಕರ್ತವ್ಯಗಳನ್ನು ನಾವು ಮರೆಯಬಾರದು ಎಂದು ಪ್ರಧಾನಿ ಪುನರುಚ್ಚರಿಸಿದರು.  ʻಜಿ-20 ಪರಿಸರ ಮತ್ತು ಹವಾಮಾನ ಸಚಿವರ ಸಭೆʼಯು ಫಲಪ್ರದ ಮತ್ತು ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ಪ್ರಕೃತಿ ಮಾತೆಯು ವಿಭಜಿತ ವಿಧಾನವನ್ನು ಬೆಂಬಲಿಸುವುದಿಲ್ಲ. ಪ್ರಕೃತಿಯು "ವಸುದೈವ ಕುಟುಂಬಕಂ" - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ"ಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳುವ ಮೂಲಕ ಶ್ರೀ ಮೋದಿ ಅವರು ತಮ್ಮ ಮಾತು ಮುಗಿಸಿದರು.

***


(Release ID: 1943687) Visitor Counter : 141