ಸಂಸ್ಕೃತಿ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ 'ಮೇರಾ ಗಾಂವ್ ಮೇರಿ ಧರೋಹರ್' ಎಂಬ ವಿಶಿಷ್ಟ ಉಪಕ್ರಮಕ್ಕೆ ನಾಳೆ ಚಾಲನೆ ನೀಡಲಿದ್ದಾರೆ.


ಸಾಂಸ್ಕೃತಿಕ ನಕ್ಷೆಯ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಸಂಸ್ಕೃತಿ ಸಚಿವಾಲಯದ ಸಮಗ್ರ-ಭಾರತ ಉಪಕ್ರಮ

ಪ್ರಕಟಣಾ ದಿನಾಂಕ: 26 JUL 2023 2:18PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನಾಳೆ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ 'ಮೇರಾ ಗಾಂವ್ ಮೇರಿ ಧರೋಹರ್' ಎಂಬ ವಿಶಿಷ್ಟ ಉಪಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಸಾಂಸ್ಕೃತಿಕ ನಕ್ಷೆಯ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಸಂಸ್ಕೃತಿ ಸಚಿವಾಲಯದ ದೇಶಾದ್ಯಂತ ನಡೆಯುವ ಪ್ಯಾನ್-ಇಂಡಿಯಾ ಉಪಕ್ರಮವಾಗಿದೆ. ಸಂಜೆ 7 ಗಂಟೆಯಿಂದ ಕುತುಬ್ ಮಿನಾರ್ ನಲ್ಲಿ ನಡೆಯಲಿರುವ ಬೃಹತ್ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನದಲ್ಲಿ ಶ್ರೀ ಅಮಿತ್ ಶಾ ಅವರು ವರ್ಚುವಲ್ ವೇದಿಕೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವರ್ಚುವಲ್ ವೇದಿಕೆ (ಪ್ಲಾಟ್ಫಾರ್ಮ್) https://mgmd.gov.in ಜನರನ್ನು ಭಾರತದ ಹಳ್ಳಿಗಳೊಂದಿಗೆ ಸಂಪರ್ಕಿಸುತ್ತದೆ.

ಸಂಸ್ಕೃತಿ ಸಚಿವಾಲಯವು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ (ಐಜಿಎನ್ಸಿಎ) ಸಹಯೋಗದೊಂದಿಗೆ ಸಾಂಸ್ಕೃತಿಕ ನಕ್ಷೆಯ ರಾಷ್ಟ್ರೀಯ ಮಿಷನ್ ಅಡಿಯಲ್ಲಿ 'ಮೇರಾ ಗಾಂವ್ ಮೇರಿ ಧರೋಹರ್' (ಎಂಜಿಎಂಡಿ) ಯೋಜನೆಯನ್ನು ಪ್ರಾರಂಭಿಸಿದೆ. 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ ಭಾರತದ 6.5 ಲಕ್ಷ ಗ್ರಾಮಗಳನ್ನು ಸಮಗ್ರ ವರ್ಚುವಲ್ ವೇದಿಕೆಯಲ್ಲಿ ಸಾಂಸ್ಕೃತಿಕವಾಗಿ ನಕ್ಷೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎಂಜಿಎಂಡಿ ಮೂಲಕ, ಜನರು ಭಾರತದ ವೈವಿಧ್ಯಮಯ ಮತ್ತು ರೋಮಾಂಚಕ ಸಾಂಸ್ಕೃತಿಕ ಪರಂಪರೆಯಲ್ಲಿ ತಮ್ಮನ್ನು ತಾವು ತಲ್ಲೀನಗೊಳಿಸಿಕೊಳ್ಳುವ/ತೊಡಗಿಸಿಕೊಳ್ಳುವ   ಅವಕಾಶವನ್ನು ಪಡೆಯುತ್ತಾರೆ. ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅಭಿಮಾನದ ಮೆಚ್ಚುಗೆಯನ್ನು ಉತ್ತೇಜಿಸುವುದು, ಆರ್ಥಿಕ ಬೆಳವಣಿಗೆ, ಸಾಮಾಜಿಕ ಸಾಮರಸ್ಯ ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಕಲಾತ್ಮಕ ಅಭಿವೃದ್ಧಿಗೆ ದಾರಿ ಮಾಡಿಕೊಡುವುದು ಈ ಯೋಜನೆಯ ಹಿಂದಿನ ಪ್ರಮುಖ ಆಲೋಚನೆಯಾಗಿದೆ.

ಹೊಸದಿಲ್ಲಿಯ  ಕುತುಬ್ ಮಿನಾರ್ ನಲ್ಲಿ ನಾಳೆ ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮವು ಸಂದರ್ಶಕರಿಗೆ ಭಾರತದ ಹಳ್ಳಿಗಳನ್ನು ಅನ್ವೇಷಿಸಲು ಮತ್ತು ವರ್ಚುವಲ್ ಆಗಿ  ಪ್ರಯಾಣಿಸಲು ಅವಕಾಶವನ್ನು ನೀಡುವ ಭರವಸೆ ನೀಡುತ್ತದೆ. ಪ್ರದರ್ಶನ ಮತ್ತು ಮಳಿಗೆಗಳು ಬೆಳಿಗ್ಗೆ 11 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತವೆ, ಪ್ರತಿ ಗ್ರಾಮವು ನೀಡುವ ಸಾಂಸ್ಕೃತಿಕ ಅದ್ಭುತಗಳ ಆಕರ್ಷಕ ನೋಟಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಸಂಜೆ 7 ಗಂಟೆಗೆ ಪ್ರಾರಂಭವಾಗುವ ಉದ್ಘಾಟನಾ ಸಮಾರಂಭದಲ್ಲಿ  ಕುತುಬ್ ಮಿನಾರಿನ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನವೂ ಇರುತ್ತದೆ.  ಇದು ಭಾರತದ ಕೆಲವು ಆಯ್ದ ಹಳ್ಳಿಗಳ ವಿಭಿನ್ನ ವಿಷಯ ಶೀರ್ಷಿಕೆಗಳನ್ನು ವಿವರಿಸುತ್ತದೆ. ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಚಿವಾಲಯ, ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ ಸಚಿವಾಲಯದ ಸಚಿವರು ಮತ್ತು ಇತರ ಗೌರವಾನ್ವಿತ ಅತಿಥಿಗಳು ಭಾಗವಹಿಸಲಿದ್ದಾರೆ.

ಎಂಜಿಎಂಡಿ ಉದ್ಘಾಟನಾ  ಚಲನಚಿತ್ರವು ಆಕರ್ಷಕ ಮತ್ತು ಸ್ಪೂರ್ತಿದಾಯಕ ನಿರೂಪಣೆಯನ್ನು ನೀಡುತ್ತದೆ, ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗಿನ ಸಂಪರ್ಕವನ್ನು ಮತ್ತಷ್ಟು ನಿಕಟಗೊಳಿಸುತ್ತದೆ. ಈ ಕಾರ್ಯಕ್ರಮವು ವಿವಿಧ ಹಳ್ಳಿಗಳ ಜನರು ಮತ್ತು ಶ್ರೀ ಅಮಿತ್ ಶಾ ಅವರ ನಡುವಿನ "ಸಂವಾದ್" ಸಹ ಒಳಗೊಂಡಿದೆ, ಇದು ಭಾರತದ ಹಳ್ಳಿಗಳ ಹೃದಯ ಮತ್ತು ಆತ್ಮದೊಂದಿಗೆ ಸಂವಹನ ನಡೆಸಲು ಅನನ್ಯ ಅವಕಾಶವನ್ನು ನೀಡುತ್ತದೆ. ಈ ಭೌತಿಕ ಸಂವಾದವನ್ನು ರೇಡಿಯೋ ಚಾನೆಲ್ ಫೀವರ್ -104.8 ಎಫ್ಎಂನ ಆರ್.ಜೆ  ಶರತ್ ನಿರ್ವಹಿಸಲಿದ್ದಾರೆ. ಖ್ಯಾತ ಕಲಾವಿದರಾದ ಜಾವೇದ್ ಅಲಿ ಮತ್ತು ಅನ್ವೇಷಾ ಅವರನ್ನೊಳಗೊಂಡ ಕಲಾವಿದರ ಸಂಗೀತ ಕಾರ್ಯಕ್ರಮದೊಂದಿಗೆ ಉದ್ಘಾಟನಾ ಸಮಾರಂಭ  ಮುಕ್ತಾಯಗೊಳ್ಳಲಿದೆ.

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಭಾರತದ 6.5 ಲಕ್ಷ ಗ್ರಾಮಗಳನ್ನು ವರ್ಚುವಲ್ ವೇದಿಕೆಯಲ್ಲಿ ಸಾಂಸ್ಕೃತಿಕವಾಗಿ ಮ್ಯಾಪಿಂಗ್ ಮಾಡುವ ಗುರಿಯೊಂದಿಗೆ ಎಂಜಿಎಂಡಿಯನ್ನು ಸಾಂಸ್ಕೃತಿಕ ಮ್ಯಾಪಿಂಗ್ ಗಾಗಿರುವ ರಾಷ್ಟ್ರೀಯ ಮಿಷನ್ (ಎನ್.ಎಂ.ಸಿ.ಎಂ.)  ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಗುತ್ತಿದೆ, ಇದು ಭಾರತದ ವೈವಿಧ್ಯಮಯ ಮತ್ತು ಶ್ರೀಮಂತ ಸಂಸ್ಕೃತಿಯ ಬಗ್ಗೆ ಅರಿವು ಪಡೆಯಲು ಮತ್ತು ಅದರಲ್ಲಿ ತಲ್ಲೀನರಾಗಿ ತೊಡಗಿಕೊಳ್ಳಲು,  ಅನ್ವೇಷಿಸಲು ಜಗತ್ತಿಗೆ ಅವಕಾಶವನ್ನು ಒದಗಿಸುತ್ತದೆ. ಈ ಸಮಗ್ರ ಪೋರ್ಟಲ್ ಪ್ರತಿ ಗ್ರಾಮದ ಭೌಗೋಳಿಕ ಸ್ಥಳ, ಜನಸಂಖ್ಯಾ ಅಂಶಗಳು ಮತ್ತು ಸಾಂಪ್ರದಾಯಿಕ ಉಡುಪುಗಳು, ಆಭರಣಗಳು, ಕಲೆ ಮತ್ತು ಕರಕುಶಲ ವಸ್ತುಗಳು, ದೇವಾಲಯಗಳು, ಜಾತ್ರೆಗಳು, ಉತ್ಸವಗಳು ಮತ್ತು ಇನ್ನಷ್ಟು ಸಂಗತಿಗಳ ವಿವರಣೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದು ದೇಶದ ಪ್ರತಿಯೊಂದು ಹಳ್ಳಿಯನ್ನು ಅನ್ವೇಷಿಸಲು, ಅಲ್ಲಿಯ ನಾವಿನ್ಯತೆಯ ಬಗ್ಗೆ ಶೋಧಿಸಲು  ಸಂಶೋಧನೆ ಮಾಡಲು ಮತ್ತು ವರ್ಚುವಲ್ ಆಗಿ  ಭೇಟಿ ನೀಡಲು ಏಕ ಕಿಂಡಿ/ಗವಾಕ್ಷದಂತಹ  ವ್ಯವಸ್ಥೆಯ  ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಬಳಕೆದಾರರು ತಮ್ಮ ಡಿಜಿಟಲ್ ಗ್ರಾಮ ಪ್ರಯಾಣವನ್ನು ಪ್ರಾರಂಭಿಸುವಾಗ ಪ್ರೋತ್ಸಾಹಧನವನ್ನು ಗಳಿಸಲು ಮತ್ತು ಇತರ ಬಹುಮಾನಗಳನ್ನು ಗಳಿಸುವ ಅವಕಾಶವನ್ನು ಹೊಂದಿದ್ದಾರೆ.

****


(ಪ್ರಕಟಣೆ ಐ.ಡಿ.: 1942837) ವಿಸಿಟರ್ ಕೌಂಟರ್ : 144
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Odia , Tamil , Telugu