ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳ ಪ್ರದಾನ

Posted On: 24 JUL 2023 6:48PM by PIB Bengaluru

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜುಲೈ 24, 2023) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳು -2022 ನ್ನು ಪ್ರದಾನ ಮಾಡಿದರು. ಭೂವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳು ಮತ್ತು ಅತ್ಯುತ್ತಮ ಕೊಡುಗೆಗಳಿಗಾಗಿ ವ್ಯಕ್ತಿಗಳು ಮತ್ತು ತಂಡಗಳನ್ನು ಗೌರವಿಸುವ ಉದ್ದೇಶದಿಂದ ಭಾರತ ಸರ್ಕಾರದ ಗಣಿ ಸಚಿವಾಲಯವು ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭೂವಿಜ್ಞಾನ ಕ್ಷೇತ್ರವು ಬಹಳ ವಿಶಾಲವಾಗಿದೆ. ಇದು ಭೂಕುಸಿತಗಳು, ಭೂಕಂಪಗಳು, ಪ್ರವಾಹಗಳು ಮತ್ತು ಸುನಾಮಿಗಳಂತಹ ನೈಸರ್ಗಿಕ ವಿಪತ್ತುಗಳ ಅಧ್ಯಯನವನ್ನು ಸಹ ಒಳಗೊಂಡಿದೆ. ಈ ವಿಷಯಗಳನ್ನು ಸಾರ್ವಜನಿಕ ಒಳಿತಿನ  ಭೂವಿಜ್ಞಾನಗಳು ಎಂದು ಕರೆಯಲಾಗುತ್ತದೆ ಏಕೆಂದರೆ ಅವು ಹೆಚ್ಚಿನ ಸಂಖ್ಯೆಯ ಜನರ ರಕ್ಷಣೆಯಲ್ಲಿ ಉಪಯುಕ್ತವಾಗಿವೆ ಎಂದರು.

ಗಣಿಗಾರಿಕೆ ನಮ್ಮ ಆರ್ಥಿಕತೆಯ ಪ್ರಾಥಮಿಕ ವಲಯವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಖನಿಜ ಅಭಿವೃದ್ಧಿಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡುವ ಕ್ಷೇತ್ರವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರವು ಗಣಿಗಾರಿಕೆ ಕ್ಷೇತ್ರದಲ್ಲಿ ಅನೇಕ ಪ್ರಗತಿಪರ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತಿವೆ ಎಂದೂ ಅವರು ಹೇಳಿದರು.

ವಿಜ್ಞಾನ ಮತ್ತು ಅಭಿವೃದ್ಧಿಯ ಮಾರ್ಗವು ಮಾತ್ರ ಸರಿಯಾದ ಹಾದಿ  ಎಂಬುದು  ಸಾಬೀತಾಗಿದೆ, ಅದು ಮಾನವೀಯತೆಯ ಕಲ್ಯಾಣಕ್ಕೆ ದಾರಿ  ಎಂದು ರಾಷ್ಟ್ರಪತಿ ಹೇಳಿದರು. ಅದಕ್ಕಾಗಿಯೇ ಭೂವಿಜ್ಞಾನಿ ಸಮುದಾಯವು ಮಾನವ ಕೇಂದ್ರಿತ ಗಣಿಗಾರಿಕೆಯ ದಿಕ್ಕಿನಲ್ಲಿ ಮುಂದುವರಿಯಬೇಕಾಗಿದೆ ಎಂದ ಅವರು ಖನಿಜಗಳ ಸಮರ್ಥ  ಬಳಕೆಗೆ ಕೊಡುಗೆ ನೀಡುವ ಮೂಲಕ ಭಾರತದ ಆರ್ಥಿಕತೆಯನ್ನು ಬಲಪಡಿಸುತ್ತಿರುವುದಕ್ಕಾಗಿ ಭಾರತೀಯ ಭೂವಿಜ್ಞಾನಿಗಳನ್ನು ಶ್ಲಾಘಿಸಿದರು.

ಇತ್ತೀಚಿನ ದಿನಗಳಲ್ಲಿ ಅಪರೂಪದ, ಅಮೂಲ್ಯ ಖನಿಜ/ಲೋಹಗಳಿಗೆ, ಪ್ಲಾಟಿನಂ ಗುಂಪಿನ ಮೂಲವಸ್ತುಗಳು ಮತ್ತು ಅರೆವಾಹಕ ಮೂಲವಸ್ತುಗಳಂತಹ ಖನಿಜಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಪರಿಸರ ಸಂರಕ್ಷಣೆಯ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕೆಲವು ಸಾಂಪ್ರದಾಯಿಕ ಖನಿಜಗಳ ಗಣಿಗಾರಿಕೆ ಮತ್ತು ಅವುಗಳ ಫಲಿತಾಂಶಗಳನ್ನು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಲಾಗುತ್ತಿದೆ ಎಂಬುದರತ್ತ ಬೆಟ್ಟು ಮಾಡಿದ ಅವರು  ಇಂದಿನ ಪ್ರಶಸ್ತಿಗಳಲ್ಲಿ ಸುಸ್ಥಿರ ಖನಿಜ ಅಭಿವೃದ್ಧಿ ಕ್ಷೇತ್ರದಲ್ಲಿನ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ಗಣಿ ಸಚಿವಾಲಯವನ್ನು ಶ್ಲಾಘಿಸಿದರು.  ಸುಸ್ಥಿರ ಖನಿಜ ಅಭಿವೃದ್ಧಿಗಾಗಿ, ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಈ ಮೂರು ಆಯಾಮಗಳಿಗೆ ಸಮಾನ ಗಮನ ನೀಡಲಾಗುತ್ತಿರುವುದಕ್ಕೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ಭಾಷಣ ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

****


(Release ID: 1942340) Visitor Counter : 142