ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

Posted On: 14 JUL 2023 11:29PM by PIB Bengaluru

ಗೌರವಾನ್ವಿತರೇ ಮತ್ತು ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್, ಎರಡೂ ದೇಶಗಳ ಪ್ರತಿನಿಧಿಗಳು, ಮಾಧ್ಯಮ ಸ್ನೇಹಿತರೇ, ನಮಸ್ಕಾರ!

ಸುಂದರ ನಗರವಾದ ಪ್ಯಾರಿಸ್ ನಲ್ಲಿ ಈ ಆತ್ಮೀಯ ಸ್ವಾಗತಕ್ಕಾಗಿ ನಾನು ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಫ್ರಾನ್ಸ್ ನ ಜನತೆಗೆ ಅವರ ರಾಷ್ಟ್ರೀಯ ದಿನದಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ದಿನವನ್ನು ವಿಶ್ವದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಮೌಲ್ಯಗಳ ಸಂಕೇತವೆಂದು ಪರಿಗಣಿಸಲಾಗಿದೆ. ಈ ಮೌಲ್ಯಗಳು ನಮ್ಮ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಂಬಂಧಗಳ ಅಡಿಪಾಯವೂ ಆಗಿವೆ. ಇಂದು, ಈ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿರಲು ನನಗೆ ಗೌರವವಿದೆ. ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಮೂರು ಸೇವೆಗಳ ತುಕಡಿಗಳು ಈ ಸಂದರ್ಭಕ್ಕೆ ಅನುಗ್ರಹ ಮತ್ತು ಘನತೆಯನ್ನು ಹೆಚ್ಚಿಸಲು ಭಾಗವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ನಾವು ಭಾರತೀಯ ರಫೇಲ್ ವಿಮಾನದ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ನಮ್ಮ ನೌಕಾ ಹಡಗು ಸಹ ಫ್ರಾನ್ಸ್ ಬಂದರಿನಲ್ಲಿತ್ತು. ಸಮುದ್ರ, ಭೂಮಿ ಮತ್ತು ವಾಯು ಕ್ಷೇತ್ರಗಳಲ್ಲಿ ನಮ್ಮ ಹೆಚ್ಚುತ್ತಿರುವ ಸಹಕಾರಕ್ಕೆ ಸಾಕ್ಷಿಯಾಗುವುದು ಒಂದು ಅದ್ಭುತ ದೃಶ್ಯವಾಗಿತ್ತು. ನಿನ್ನೆ, ಅಧ್ಯಕ್ಷ ಮ್ಯಾಕ್ರನ್ ನನಗೆ ಫ್ರಾನ್ಸ್ ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಗೌರವವು 1.4 ಶತಕೋಟಿ ಭಾರತೀಯರ ಗೌರವವಾಗಿದೆ.

ಸ್ನೇಹಿತರೇ,
ನಾವು ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಕಳೆದ 25 ವರ್ಷಗಳ ಬಲವಾದ ಅಡಿಪಾಯವನ್ನು ಆಧರಿಸಿ, ನಾವು ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಲಾಗುತ್ತಿದೆ. ಈ ಅವಧಿಯಲ್ಲಿ ಭಾರತದ ಜನರು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಈ ಪ್ರಯಾಣದಲ್ಲಿ ನಾವು ಫ್ರಾನ್ಸ್ ಅನ್ನು ನೈಸರ್ಗಿಕ ಪಾಲುದಾರನಾಗಿ ನೋಡುತ್ತೇವೆ. ಮುಂದಿನ ಎರಡು ದಿನಗಳಲ್ಲಿ, ಪರಸ್ಪರ ಹಿತಾಸಕ್ತಿಯ ಎಲ್ಲ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ವ್ಯಾಪಕವಾಗಿ ಚರ್ಚಿಸಲು ನಮಗೆ ಅವಕಾಶವಿದೆ. ನಮ್ಮ ಆರ್ಥಿಕ ಸಂಬಂಧಗಳನ್ನು ಬಲಪಡಿಸುವುದು ನಮ್ಮ ಹಂಚಿಕೆಯ ಆದ್ಯತೆಯಾಗಿದೆ.

ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಕೃತಕ ಬುದ್ಧಿಮತ್ತೆ, ಅರೆವಾಹಕಗಳು, ಸೈಬರ್ ಭದ್ರತೆ ಮತ್ತು ಡಿಜಿಟಲ್ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ಹೊಸ ಉಪಕ್ರಮಗಳನ್ನು ಗುರುತಿಸುತ್ತಿದ್ದೇವೆ. ಫ್ರಾನ್ಸ್ ನಲ್ಲಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪ್ರಾರಂಭಿಸಲು ಒಪ್ಪಂದಕ್ಕೆ ಬರಲಾಗಿದೆ. ನಾವು ಎರಡೂ ದೇಶಗಳ ನವೋದ್ಯಮ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಸಂಪರ್ಕಿಸಲು ಒತ್ತು ನೀಡುತ್ತಿದ್ದೇವೆ. ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ, ನಾವು ತಂತ್ರಜ್ಞಾನ ಪೂರೈಕೆ ಸರಪಳಿಗಳ ಪ್ರಜಾಪ್ರಭುತ್ವೀಕರಣಕ್ಕೆ ಶ್ರಮಿಸಬೇಕು. ಹವಾಮಾನ ಬದಲಾವಣೆ ಮತ್ತು ಪರಿಸರ ಸುರಕ್ಷತೆ ನಮ್ಮ ಹಂಚಿಕೆಯ ಮತ್ತು ಉನ್ನತ ಆದ್ಯತೆಗಳಾಗಿವೆ. ಈ ದಿಕ್ಕಿನಲ್ಲಿ, ನಾವು ಈಗಾಗಲೇ ಅಂತಾರಾಷ್ಟ್ರೀಯ ಸೌರ ಮೈತ್ರಿಯನ್ನು ಸ್ಥಾಪಿಸಿದ್ದೇವೆ, ಅದು ಈಗ ಒಂದು ಆಂದೋಲನವಾಗಿ ಮಾರ್ಪಟ್ಟಿದೆ. ನಾವು ಈಗ ನೀಲಿ ಆರ್ಥಿಕತೆ ಮತ್ತು ಸಾಗರ ಆಡಳಿತದ ಮಾರ್ಗಸೂಚಿಯಲ್ಲಿ ತ್ವರಿತವಾಗಿ ಕೆಲಸ ಮಾಡುವ ಗುರಿ ಹೊಂದಿದ್ದೇವೆ. ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಜಂಟಿ ಉಪಕ್ರಮದಲ್ಲಿ ನಾವು ಒಟ್ಟಾಗಿ ಪ್ರಗತಿ ಸಾಧಿಸುತ್ತೇವೆ. ಇಂಡಿಯನ್ ಆಯಿಲ್ ಮತ್ತು ಫ್ರೆಂಚ್ ಕಂಪನಿ ಟೋಟಲ್ ನಡುವೆ ಎಲ್ ಎನ್ ಜಿ ರಫ್ತಿಗಾಗಿ ದೀರ್ಘಕಾಲೀನ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಇದು ನಮ್ಮ ಶುದ್ಧ ಇಂಧನ ಪರಿವರ್ತನೆಯ ಗುರಿಗಳನ್ನು ಬಲಪಡಿಸುತ್ತದೆ. ಶೀಘ್ರದಲ್ಲೇ ನಾವು ಭಾರತ-ಫ್ರಾನ್ಸ್ ಸಿಇಓಗಳ ವೇದಿಕೆಯಲ್ಲೂ ಭಾಗವಹಿಸಲಿದ್ದೇವೆ. ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳ ವ್ಯಾಪಾರ ಪ್ರತಿನಿಧಿಗಳೊಂದಿಗೆ ಆಳವಾದ ಚರ್ಚೆಗಳು ನಡೆಯಲಿವೆ.

ಸ್ನೇಹಿತರೇ,
ರಕ್ಷಣಾ ಸಹಕಾರವು ನಮ್ಮ ಸಂಬಂಧದ ಬಲವಾದ ಆಧಾರಸ್ತಂಭವಾಗಿದೆ. ಇದು ಎರಡೂ ದೇಶಗಳ ನಡುವಿನ ಆಳವಾದ ಪರಸ್ಪರ ನಂಬಿಕೆಯ ಸಂಕೇತವಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ನಲ್ಲಿ ಫ್ರಾನ್ಸ್ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಇಂದು, ನಾವು ರಕ್ಷಣಾ ಕ್ಷೇತ್ರದಲ್ಲಿ ಭಾರತದಲ್ಲಿ ಹೊಸ ತಂತ್ರಜ್ಞಾನಗಳ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇವೆ. ಅದು ಜಲಾಂತರ್ಗಾಮಿ ನೌಕೆಗಳಾಗಿರಲಿ ಅಥವಾ ನೌಕಾ ಹಡಗುಗಳಾಗಿರಲಿ, ನಮ್ಮ ಸ್ವಂತದ ಮಾತ್ರವಲ್ಲದೆ ಇತರ ಸ್ನೇಹಪರ ದೇಶಗಳ ಅಗತ್ಯಗಳನ್ನು ಪೂರೈಸಲು ನಾವು ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ನಮ್ಮ ರಕ್ಷಣಾ ಬಾಹ್ಯಾಕಾಶ ಸಂಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಭಾರತದಲ್ಲಿ ಫ್ರೆಂಚ್ ಕಂಪನಿಗಳು ಎಂಆರ್ ಒ  ಸೌಲಭ್ಯಗಳು, ಬಿಡಿಭಾಗಗಳು ಮತ್ತು ಹೆಲಿಕಾಪ್ಟರ್ ಗಳಿಗೆ ಎಂಜಿನ್ ಗಳ ಉತ್ಪಾದನೆಯಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ನಮ್ಮ ಸಹಯೋಗವನ್ನು ಬಲಪಡಿಸುತ್ತೇವೆ. ನಾಗರಿಕ ಪರಮಾಣು ಸಹಕಾರ ಕ್ಷೇತ್ರದಲ್ಲಿ ಸಣ್ಣ ಮತ್ತು ಸುಧಾರಿತ ಮಾಡ್ಯುಲರ್ ರಿಯಾಕ್ಟರ್ ಗಳಲ್ಲಿನ ಸಹಕಾರದ ಸಾಮರ್ಥ್ಯದ ಬಗ್ಗೆ ನಾವು ಚರ್ಚಿಸಲಿದ್ದೇವೆ. ಇಂದು, ಇಡೀ ದೇಶವು ಭಾರತದಲ್ಲಿ ಚಂದ್ರಯಾನದ ಯಶಸ್ವಿ ಉಡಾವಣೆಯ ಬಗ್ಗೆ ಉತ್ಸುಕವಾಗಿದೆ. ಇದು ನಮ್ಮ ವಿಜ್ಞಾನಿಗಳ ಮಹತ್ವದ ಸಾಧನೆಯಾಗಿದೆ. ಭಾರತ ಮತ್ತು ಫ್ರಾನ್ಸ್ ಬಾಹ್ಯಾಕಾಶ ಕ್ಷೇತ್ರದಲ್ಲಿ ದೀರ್ಘಕಾಲದ ಮತ್ತು ಆಳವಾದ ಸಹಯೋಗವನ್ನು ಹೊಂದಿವೆ. ಉಪಗ್ರಹ ಉಡಾವಣಾ ಸೇವೆಗಳ ಜೊತೆಗೆ ಸಮುದ್ರ ಮತ್ತು ಭೂ ತಾಪಮಾನ ಮತ್ತು ಪರಿಸರವನ್ನು ಮೇಲ್ವಿಚಾರಣೆ ಮಾಡಲು ತ್ರಿಶ್ನಾ ಉಪಗ್ರಹದ ಅಭಿವೃದ್ಧಿ ಸೇರಿದಂತೆ ನಮ್ಮ ಬಾಹ್ಯಾಕಾಶ ಸಂಸ್ಥೆಗಳ ನಡುವೆ ನಾವು ಇತ್ತೀಚೆಗೆ ಹೊಸ ಒಪ್ಪಂದಗಳನ್ನು ತಲುಪಿದ್ದೇವೆ. ಬಾಹ್ಯಾಕಾಶ ಆಧಾರಿತ ಕಡಲ ಡೊಮೇನ್ ಜಾಗೃತಿಯಂತಹ ಕ್ಷೇತ್ರಗಳಲ್ಲಿ ನಾವು ನಮ್ಮ ಸಹಕಾರವನ್ನು ವಿಸ್ತರಿಸಬಹುದು.

ಸ್ನೇಹಿತರೇ,
ಭಾರತ ಮತ್ತು ಫ್ರಾನ್ಸ್ ಜನರ ನಡುವೆ ಆಳವಾದ ಮತ್ತು ದೀರ್ಘಕಾಲದ ಸಂಪರ್ಕಗಳನ್ನು ಹೊಂದಿವೆ. ಇಂದಿನ ನಮ್ಮ ಚರ್ಚೆಗಳು ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿವೆ. ನಾವು ದಕ್ಷಿಣ ಫ್ರಾನ್ಸ್ ನ ಮಾರ್ಸಿಲೆ ನಗರದಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯಲಿದ್ದೇವೆ. ಫ್ರಾನ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಮೂಲದ ಜನರಿಗೆ ದೀರ್ಘಾವಧಿಯ ವೀಸಾ ನೀಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಭಾರತದಲ್ಲಿ ತಮ್ಮ ಕ್ಯಾಂಪಸ್ ಗಳನ್ನು ಸ್ಥಾಪಿಸಲು ನಾವು ಫ್ರಾನ್ಸ್ ವಿಶ್ವವಿದ್ಯಾಲಯಗಳನ್ನು ಆಹ್ವಾನಿಸುತ್ತೇವೆ. ದೆಹಲಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಸ್ಥಾಪನೆಯಲ್ಲಿ ಫ್ರಾನ್ಸ್ ಪಾಲುದಾರನಾಗಿ ಸೇರುತ್ತಿದೆ. ಮುಂದಿನ ವರ್ಷ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗಾಗಿ ಎಲ್ಲಾ ಭಾರತೀಯ ಕ್ರೀಡಾಪಟುಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಕಾರ್ಯಕ್ರಮದ ಯಶಸ್ವಿ ಸಂಘಟನೆಗಾಗಿ ನಾನು ಅಧ್ಯಕ್ಷ ಮ್ಯಾಕ್ರನ್ ಮತ್ತು ಅವರ ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,
ಇಂದು, ನಾವು ಹಲವಾರು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಲಿದ್ದೇವೆ. ಇಂಡೋ-ಪೆಸಿಫಿಕ್ ನ ನಿವಾಸಿ ಶಕ್ತಿಗಳಾಗಿ, ಭಾರತ ಮತ್ತು ಫ್ರಾನ್ಸ್ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ವಿಶೇಷ ಜವಾಬ್ದಾರಿಯನ್ನು ಹೊಂದಿವೆ. ನಮ್ಮ ಸಹಯೋಗಕ್ಕೆ ರಚನಾತ್ಮಕ ರೂಪ ನೀಡಲು ನಾವು ಇಂಡೋ-ಪೆಸಿಫಿಕ್ ಸಹಕಾರ ಮಾರ್ಗಸೂಚಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂಡೋ-ಪೆಸಿಫಿಕ್ ತ್ರಿಕೋನ ಅಭಿವೃದ್ಧಿ ಸಹಕಾರ ನಿಧಿಯ ಪ್ರಸ್ತಾಪದ ಬಗ್ಗೆ ಎರಡೂ ಕಡೆಯವರು ಚರ್ಚೆಯಲ್ಲಿ ತೊಡಗಿದ್ದಾರೆ. ಇದು ವಲಯದಾದ್ಯಂತ ನವೋದ್ಯಮಗಳು ಮತ್ತು ನಾವೀನ್ಯತೆಗಳನ್ನುಉತ್ತೇಜಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತದ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮದಲ್ಲಿ ಕಡಲ ಸಂಪನ್ಮೂಲ ಸ್ತಂಭವನ್ನು ಮುನ್ನಡೆಸುವ ಫ್ರಾನ್ಸ್ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.

ಸ್ನೇಹಿತರೇ,
ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ಉಕ್ರೇನ್ ನಲ್ಲಿನ ಸಂಘರ್ಷದ ಪರಿಣಾಮಗಳನ್ನು ವಿಶ್ವಾದ್ಯಂತ ಅನುಭವಿಸಲಾಗಿದೆ, ಇದು ಜಾಗತಿಕ ದಕ್ಷಿಣದ ದೇಶಗಳ ಮೇಲೆ ವಿಶೇಷವಾಗಿ ನಕಾರಾತ್ಮಕ ಪರಿಣಾಮ ಬೀರಿದೆ. ಇದು ಕಳವಳಕಾರಿ ವಿಷಯವಾಗಿದೆ. ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಪ್ರಯತ್ನಗಳನ್ನು ಮಾಡುವುದು ಅವಶ್ಯಕ. ಎಲ್ಲಾ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂದು ನಾವು ನಂಬುತ್ತೇವೆ. ಶಾಶ್ವತ ಶಾಂತಿ ಮರುಸ್ಥಾಪನೆಗೆ ಕೊಡುಗೆ ನೀಡಲು ಭಾರತ ಸಿದ್ಧವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಫ್ರಾನ್ಸ್ ಯಾವಾಗಲೂ ಒಟ್ಟಾಗಿ ನಿಂತಿವೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ತೊಡೆದುಹಾಕಲು ದೃಢವಾದ ಕ್ರಮ ಅಗತ್ಯ ಎಂದು ನಾವು ನಂಬುತ್ತೇವೆ. ಈ ದಿಕ್ಕಿನಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ.

ಅಧ್ಯಕ್ಷ ಮ್ಯಾಕ್ರನ್,
ಈ ವರ್ಷದ ಜಿ-20 ಶೃಂಗಸಭೆಯಲ್ಲಿ ನಿಮ್ಮನ್ನು ಭಾರತಕ್ಕೆ ಸ್ವಾಗತಿಸಲು ನಾನು ಮತ್ತು ಎಲ್ಲ ಭಾರತೀಯರು ಎದುರು ನೋಡುತ್ತಿದ್ದೇವೆ. ನಿಮ್ಮ ಸ್ನೇಹ ಮತ್ತು ನನಗೆ ಆತಿಥ್ಯ ನೀಡಿದ್ದಕ್ಕಾಗಿ ಮತ್ತೊಮ್ಮೆ ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ: ಇದು ಪ್ರಧಾನಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

****


(Release ID: 1941571) Visitor Counter : 112