ಬಾಹ್ಯಾಕಾಶ ವಿಭಾಗ

ಚಂದ್ರಯಾನ-3 ವಿಶ್ವಕ್ಕೆ ಚಂದ್ರನ ಹೊಸ ದೃಶ್ಯ ದರ್ಶನದ ಅವಕಾಶವನ್ನು ತೆರೆಯಲಿದೆ: ಡಾ.ಜಿತೇಂದ್ರ ಸಿಂಗ್


ಇಡೀ ಜಗತ್ತು ಚಂದ್ರಯಾನ 3 ನ್ನು ಬಹಳ ನಿರೀಕ್ಷೆ, ಕಾತರ ಮತ್ತು ಭರವಸೆಯೊಂದಿಗೆ ಎದುರು ನೋಡುತ್ತಿದೆ ಮತ್ತು ಅದೇ ಸಮಯದಲ್ಲಿ ಚಂದ್ರ ಹಾಗು  ಬ್ರಹ್ಮಾಂಡದ ಇನ್ನೂ ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ರಹಸ್ಯಗಳು  ಅನಾವರಣಗೊಳ್ಳುವುದನ್ನು ಕಾಯುತ್ತಿದೆ: ಡಾ.ಜಿತೇಂದ್ರ ಸಿಂಗ್

"ಚಂದ್ರಯಾನ -3 ಮಿಷನ್, ಚಂದ್ರನಿಗೆ ಇನ್ನು  ಒಂದು ಹೆಜ್ಜೆ ಹತ್ತಿರಕ್ಕೆ ಸಾಗುತ್ತಿರುವುದನ್ನು ಸೂಚಿಸುತ್ತದೆ": ಡಾ.ಜಿತೇಂದ್ರ ಸಿಂಗ್

Posted On: 11 JUL 2023 5:58PM by PIB Bengaluru

ಚಂದ್ರಯಾನ -3 ಜಗತ್ತಿಗೆ ಚಂದ್ರನ ಹೊಸ ದೃಶ್ಯ ದರ್ಶನದ ಅವಕಾಶಗಳನ್ನು ತೆರೆಯುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ  ಸಚಿವ (ಸ್ವತಂತ್ರ ಉಸ್ತುವಾರಿ), ಪಿಎಂಒ ಸಹಾಯಕ ಸಚಿವ , ಪರಮಾಣು ಇಂಧನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಮತ್ತು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಇಂದು ಹೇಳಿದರು.

ಇಟಿ (ಎಕನಾಮಿಕ್ ಟೈಮ್ಸ್)ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಡಾ.ಜಿತೇಂದ್ರ ಸಿಂಗ್ ಅವರು ಭಾರತದ ಹಿಂದಿನ ಮಿಷನ್ ಚಂದ್ರಯಾನ್ -1 ಚಂದ್ರನ ವಿವಿಧ ಅಂಶಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿದೆ, ಏಕೆಂದರೆ ಚಂದ್ರಯಾನ್ -1 ಚಂದ್ರನ ಮೇಲ್ಮೈಯಲ್ಲಿ ನೀರು ಇರುವ ಬಗ್ಗೆ  ಪುರಾವೆಗಳನ್ನು ಮೊದಲ ಬಾರಿಗೆ ವಿಶ್ವದ ಮುಂದೆ ತಂದಿತು ಎಂದು ಹೇಳಿದರು. ಈಗ, ಇಡೀ ಜಗತ್ತು ಚಂದ್ರಯಾನ 3ನ್ನು ಬಹಳ ನಿರೀಕ್ಷೆ, ಕಾತರ ಮತ್ತು ಭರವಸೆಯೊಂದಿಗೆ ನೋಡುತ್ತಿದೆ ಮತ್ತು ಅದೇ ಸಮಯದಲ್ಲಿ ಚಂದ್ರ ಮತ್ತು ಬ್ರಹ್ಮಾಂಡದ ಇನ್ನೂ ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ರಹಸ್ಯಗಳು ಬಹಿರಂಗಗೊಳ್ಳುವುದನ್ನು  ಕಾಯುತ್ತಿದೆ ಎಂದೂ ಅವರು ಹೇಳಿದರು.

ಚಂದ್ರಯಾನ -3 ಮಿಷನ್ ಚಂದ್ರನನ್ನು  ಒಂದು ಹೆಜ್ಜೆ ಹತ್ತಿರಕ್ಕೆ ತರುತ್ತಿರುವುದನ್ನು ಸಂಕೇತಿಸುತ್ತದೆ ಮತ್ತು ಚಂದ್ರನ ಅನ್ವೇಷಣೆಗೆ/ಸಂಶೋಧನೆಗೆ   ಸಂಬಂಧಿಸಿದಂತೆ ಭಾರತವು ಇತರ ದೇಶಗಳಿಗಿಂತ ಹಿಂದುಳಿದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಈ ಮಿಷನ್ನಿನ  ವಿಶಿಷ್ಟ ಲಕ್ಷಣವೆಂದರೆ ಇದು ಚಂದ್ರನಿಂದ ಚಂದ್ರನನ್ನು ವೀಕ್ಷಿಸುವುದಲ್ಲದೆ ಚಂದ್ರನಿಂದ ಭೂಮಿಯನ್ನು ನೋಡುತ್ತದೆ, ಇದರಿಂದಾಗಿ ಭಾರತವು ವಿಶ್ವದ ಮೂರು ಅಥವಾ ನಾಲ್ಕು ರಾಷ್ಟ್ರಗಳ ಗಣ್ಯ ಕೂಟದ (ಕ್ಲಬ್ )  ಭಾಗವಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ, ಬಾಹ್ಯಾಕಾಶ ಅನ್ವೇಷಣೆಯಲ್ಲಿ/ ಸಂಶೋಧನೆಯಲ್ಲಿ  ಭಾರತವನ್ನು ಸಮಾನ ಪಾಲುದಾರ ಮತ್ತು ಸಹಯೋಗಿಯಾಗಿ ಅಮೆರಿಕ ಪರಿಗಣಿಸುತ್ತದೆ ಎಂಬುದು ಸ್ಪಷ್ಟವಾಯಿತು ಎಂಬುದರತ್ತ  ಡಾ. ಜಿತೇಂದ್ರ ಸಿಂಗ್ ಗಮನಸೆಳೆದರು. ನಾಸಾ ಇಂದು ಭಾರತದ ಗಗನಯಾತ್ರಿಗಳ ಬೆಂಬಲ ಕೋರುತ್ತಿದೆ ಮತ್ತು ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಭಾರತವೂ ಒಂದು, ಇದು ಭಾರತದ ಬಾಹ್ಯಾಕಾಶದತ್ತ ಸಾಗುವ ಯಾತ್ರೆಗೆ  ಒಂದು  ಪುರಾವೆಯಾಗಿದೆ ಎಂದೂ  ಅವರು ಹೇಳಿದರು.

ಭಾರತದ ಬಾಹ್ಯಾಕಾಶ ತಂತ್ರಜ್ಞಾನವು ರಾಕೆಟ್ ಗಳನ್ನು ಉಡಾಯಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ವಲಯವಾರು  ಅಭಿವೃದ್ಧಿಯ ನಿಟ್ಟಿನಲ್ಲಿ  ಹೆಚ್ಚಿನ ಪರಿಣಾಮಗಳನ್ನು ಬೀರುವ ಸಾಮರ್ಥ್ಯವನ್ನೂ ಅದು ಹೊಂದಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. 6 ದಶಕಗಳ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾರತವು ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದೂ  ಡಾ. ಜಿತೇಂದ್ರ ಸಿಂಗ್ ಹೇಳಿದರು. ಇಂದು ಬಾಹ್ಯಾಕಾಶವು ವಿಜ್ಞಾನ ಮತ್ತು ತಂತ್ರಜ್ಞಾನ, ದೂರಸಂಪರ್ಕ, ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಿಪತ್ತು ಎಚ್ಚರಿಕೆ ಮತ್ತು ತಗ್ಗಿಸುವಿಕೆ, ಹವಾಮಾನ ಬದಲಾವಣೆಯ ಅಧ್ಯಯನ, ನೌಕಾಯಾನ, ರಕ್ಷಣೆ ಮತ್ತು ಆಡಳಿತ ಸೇರಿದಂತೆ ಮಾನವ ಜೀವನದ ಎಲ್ಲಾ ಹಂತಗಳನ್ನು ಸ್ಪರ್ಶಿಸಿದೆ ಎಂದೂ ಅವರು ಹೇಳಿದರು.

ಅಮೃತ್ ಕಾಲ್ ನ ಮುಂದಿನ 25 ವರ್ಷಗಳಲ್ಲಿ, ಬಾಹ್ಯಾಕಾಶದ ಮೂಲಕ ಭಾರತದ ಆರೋಹಣ ಪ್ರಾರಂಭವಾಗಿದೆ ಮತ್ತು ಭವಿಷ್ಯದಲ್ಲಿ ಬಾಹ್ಯಾಕಾಶ ಆರ್ಥಿಕತೆಯು ಒಟ್ಟು ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಭಾರತವು ಇಲ್ಲಿಯವರೆಗೆ ಉಡಾವಣೆ ಮಾಡಿದ 424 ವಿದೇಶಿ ಉಪಗ್ರಹಗಳಲ್ಲಿ 389 ಉಪಗ್ರಹಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳೆದ ಒಂಬತ್ತು ವರ್ಷಗಳಲ್ಲಿ ಉಡಾವಣೆ ಮಾಡಿದವಾಗಿವೆ. ಇದಲ್ಲದೆ, ಗಳಿಸಿದ 174 ಮಿಲಿಯನ್ ಯುಎಸ್ ಡಾಲರ್ ಗಳಲ್ಲಿ, 157 ಮಿಲಿಯನ್ ಕಳೆದ ಒಂಬತ್ತು ವರ್ಷಗಳಲ್ಲಿ ಬಂದಿದೆ ಮತ್ತು ಅದೇ ರೀತಿ ಇಲ್ಲಿಯವರೆಗೆ ಗಳಿಸಿದ 256 ಮಿಲಿಯನ್ ಯುರೋಗಳಲ್ಲಿ 223 ಮಿಲಿಯನ್ ಪಿಎಂ ಮೋದಿ ನೇತೃತ್ವದ ಸರ್ಕಾರದ 9 ವರ್ಷಗಳಲ್ಲಿ ಬಂದಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ.ಜಿತೇಂದ್ರ ಸಿಂಗ್, ಬಾಹ್ಯಾಕಾಶ ತಂತ್ರಜ್ಞಾನವು ಬೋಧನಾ ಮಾಧ್ಯಮವಾಗಿ ಮಾರ್ಪಟ್ಟಿದೆ ಮತ್ತು ಭೂಭೌತಶಾಸ್ತ್ರ, ಟೆಲಿಮೆಡಿಸಿನ್ ನಂತಹ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಹೇಳಿದರು. ಇಂದು ವೈಫೈ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದ ಮೂಲಕವೂ ಶಿಕ್ಷಣವನ್ನು ಪಡೆಯಲಾಗುತ್ತಿದೆ ಎಂದರು.

ಬಾಹ್ಯಾಕಾಶ ಕ್ಷೇತ್ರದ ರಹಸ್ಯವನ್ನು ಅನಾವರಣ ಮಾಡುವ ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಅವರು, ಏಕಾಂಗಿಯಾಗಿ ಕೆಲಸ ಮಾಡುವ ದಿನಗಳು ಮುಗಿದಿವೆ, ಏಕೀಕರಣವು ಹೊಸ ಮಂತ್ರವಾಗಿದೆ ಎಂದು ಹೇಳಿದರು. ಹೆಚ್ಚಿನ ಫಲಿತಾಂಶಕ್ಕಾಗಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವವು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವಶ್ಯವಾಗಿದೆ ಎಂದೂ  ಅವರು ಹೇಳಿದರು.

****



(Release ID: 1938840) Visitor Counter : 223