ಪ್ರಧಾನ ಮಂತ್ರಿಯವರ ಕಛೇರಿ

ರಾಜಸ್ಥಾನದ ಬಿಕಾನೇರ್‌ನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ/ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 08 JUL 2023 8:12PM by PIB Bengaluru

ವೇದಿಕೆಯಲ್ಲಿ ಉಪಸ್ಥಿತರಿರುವ ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ ಅವರೇ, ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರೇ, ಶ್ರೀ ಅರ್ಜುನ್ ಮೇಘವಾಲ್ ಅವರೇ, ಶ್ರೀ ಗಜೇಂದ್ರ ಶೇಖಾವತ್ ಅವರೇ ಮತ್ತು ಕೈಲಾಶ್ ಚೌಧರಿ ಅವರೇ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳೇ, ಶಾಸಕರೇ ಮತ್ತು ರಾಜಸ್ಥಾನದ ನನ್ನ ಪ್ರೀತಿಯ ಸಹೋದರ- ಸಹೋದರಿಯರೇ!

ಧೀರ ಯೋಧರ ಭೂಮಿ ರಾಜಸ್ಥಾನಕ್ಕೆ ನಾನು ತಲೆಬಾಗಿ ವಂದಿಸುತ್ತೇನೆ! ಈ ನೆಲವು ತನ್ನ ಅಭಿವೃದ್ಧಿಗೆ ಬದ್ಧರಾಗಿರುವ ವ್ಯಕ್ತಿಗಳಿಗಾಗಿ ಕುತೂಹಲದಿಂದ ಕಾಯುತ್ತಿದೆ. ಜೊತೆಗೆ, ಅವರಿಗಾಗಿ ಆಹ್ವಾನಗಳನ್ನು ಸಹ ಕಳುಹಿಸುತ್ತದೆ. ದೇಶದ ಪರವಾಗಿ, ಈ ದಿಟ್ಟ ನಾಡಿಗೆ ಅಭಿವೃದ್ಧಿಯ ಹೊಸ ಉಡುಗೊರೆಗಳನ್ನು ನೀಡಲು ನಾನು ನಿರಂತರವಾಗಿ ಶ್ರಮಿಸುತ್ತೇನೆ. ಇಂದು, ಬಿಕಾನೇರ್ ಮತ್ತು ರಾಜಸ್ಥಾನಕ್ಕಾಗಿ 24,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಕೆಲವೇ ತಿಂಗಳುಗಳಲ್ಲಿ, ರಾಜಸ್ಥಾನವು ಆಧುನಿಕ ಆರು ಪಥದ ಎಕ್ಸ್‌ಪ್ರೆಸ್ ವೇಗಳನ್ನು ಪಡೆದುಕೊಂಡಿದೆ. ನಾನು ಫೆಬ್ರವರಿ ತಿಂಗಳಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಕಾರಿಡಾರ್‌ನ ದೆಹಲಿ-ದೌಸಾ-ಲಾಲ್ಸೋಟ್ ವಿಭಾಗವನ್ನು ಉದ್ಘಾಟಿಸಿದ್ದೆ. ಇಂದು, ʻಅಮೃತಸರ-ಜಾಮ್‌ನಗರ ಎಕ್ಸ್‌ಪ್ರೆಸ್‌ ವೇʼನ 500 ಕಿಲೋಮೀಟರ್ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸುಯೋಗ ನಮಗೆ ಒದಗಿದೆ. ಒಂದು ರೀತಿಯಲ್ಲಿ, ರಾಜಸ್ಥಾನ್ ಏಕ್ಸ್‌ಪ್ರೆಸ್‌ ವೇಗಳ ವಿಚಾರದಲ್ಲಿ ದ್ವಿಶತಕವನ್ನು ಗಳಿಸಿದೆ.

ಸ್ನೇಹಿತರೇ,

ರಾಜಸ್ಥಾನವನ್ನು ನವೀಕರಿಸಬಹುದಾದ ಇಂಧನದ ದಿಕ್ಕಿನಲ್ಲಿ ಮುನ್ನಡೆಸಲು ನಾವು ಇಂದು ʻಹಸಿರು ಇಂಧನ ಕಾರಿಡಾರ್ʼ ಅನ್ನು ಸಹ ಉದ್ಘಾಟಿಸಿದ್ದೇವೆ. ಬಿಕಾನೇರ್‌ನಲ್ಲಿ ʻಇಎಸ್‌ಐಸಿʼ ಆಸ್ಪತ್ರೆಯ ನಿರ್ಮಾಣವೂ ಪೂರ್ಣಗೊಂಡಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಬಿಕಾನೇರ್ ಮತ್ತು ರಾಜಸ್ಥಾನದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ಯಾವುದೇ ರಾಜ್ಯವು ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ಸರಿಯಾಗಿ ಗುರುತಿಸಿದಾಗ ಅಭಿವೃದ್ಧಿಯ ಓಟದಲ್ಲಿ ಮುಂದುವರಿಯುತ್ತದೆ. ರಾಜಸ್ಥಾನವು ಅಪಾರ ಸಾಮರ್ಥ್ಯಗಳು ಮತ್ತು ಸಾಧ್ಯತೆಗಳ ಕೇಂದ್ರವಾಗಿದೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಶಕ್ತಿ ರಾಜಸ್ಥಾನಕ್ಕಿದೆ, ಅದಕ್ಕಾಗಿಯೇ ನಾವು ಇಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದ್ದೇವೆ. ರಾಜಸ್ಥಾನವು ಕೈಗಾರಿಕಾ ಅಭಿವೃದ್ಧಿಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ, ಅದಕ್ಕಾಗಿಯೇ ನಾವು ಇಲ್ಲಿ ಸಂಪರ್ಕ ಮೂಲಸೌಕರ್ಯವನ್ನು ಹೈಟೆಕ್ ಮಾಡುತ್ತಿದ್ದೇವೆ. ವೇಗದ ಎಕ್ಸ್‌ಪ್ರೆಸ್ ವೇಗಳು ಮತ್ತು ರೈಲ್ವೆಗಳು ರಾಜಸ್ಥಾನದಾದ್ಯಂತ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅವಕಾಶಗಳನ್ನು ವಿಸ್ತರಿಸುತ್ತವೆ. ಇದರ ದೊಡ್ಡ ಫಲಾನುಭವಿಗಳು ಇಲ್ಲಿನ ಯುವಕರು, ರಾಜಸ್ಥಾನದ ಪುತ್ರರು ಮತ್ತು ಹೆಣ್ಣುಮಕ್ಕಳು.

ಸ್ನೇಹಿತರೇ,

ಇಂದು ಉದ್ಘಾಟಿಸಲಾದ ʻಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ ವೇʼ ರಾಜಸ್ಥಾನವನ್ನು ಹರಿಯಾಣ, ಪಂಜಾಬ್, ಗುಜರಾತ್ ಮತ್ತು ಜಮ್ಮು-ಕಾಶ್ಮೀರದೊಂದಿಗೆ ಸಂಪರ್ಕಿಸುತ್ತದೆ. ಈ ಕಾರಿಡಾರ್ ನೇರವಾಗಿ ರಾಜಸ್ಥಾನ ಮತ್ತು ಬಿಕಾನೇರ್ ಅನ್ನು ಜಾಮ್‌ನಗರ ಮತ್ತು ಕಾಂಡ್ಲಾದಂತಹ ಪ್ರಮುಖ ವಾಣಿಜ್ಯ ಬಂದರುಗಳೊಂದಿಗೆ ಸಂಪರ್ಕಿಸುತ್ತದೆ. ಒಂದೆಡೆ, ಇದು ಬಿಕಾನೇರ್ ಮತ್ತು ಅಮೃತಸರ ಹಾಗೂ ಜೋಧಪುರ ನಡುವಿನ ದೂರವನ್ನು ಕಡಿಮೆ ಮಾಡುತ್ತದೆ. ಮತ್ತೊಂದೆಡೆ, ಇದು ಜೋಧ್‌ಪುರ ಮತ್ತು ಜಲೋರ್ ಹಾಗೂ ಗುಜರಾತ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಈ ಇಡೀ ಪ್ರದೇಶದ ರೈತರು ಮತ್ತು ವ್ಯಾಪಾರಿಗಳು ಈ ಅಭಿವೃದ್ಧಿಯ ಪ್ರಮುಖ ಫಲಾನುಭವಿಗಳು. ಏಕೆಂದರೆ ಈ ಎಕ್ಸ್‌ಪ್ರೆಸ್ ವೇ ಪಶ್ಚಿಮ ಭಾರತದ ಕೈಗಾರಿಕಾ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡುತ್ತದೆ. ನಿರ್ದಿಷ್ಟವಾಗಿ, ಈ ಕಾರಿಡಾರ್ ಮೂಲಕ ದೇಶದ ತೈಲ ಸಂಸ್ಕರಣಾಗಾರಗಳನ್ನು ಸಂಪರ್ಕಿಸಲಾಗುವುದು, ಇದರಿಂದ ಪೂರೈಕೆ ಸರಪಳಿಗಳು ಬಲಗೊಳ್ಳುವುದಲ್ಲದೆ,  ರಾಷ್ಟ್ರಕ್ಕೆ ಆರ್ಥಿಕ ಉತ್ತೇಜನ ದೊರೆಯಲಿದೆ.

ಸ್ನೇಹಿತರೇ,

ಇಂದು, ಬಿಕಾನೇರ್-ರತನ್‌ಗಢ ರೈಲ್ವೆ ಮಾರ್ಗದ ಡಬ್ಲಿಂಗ್‌ ಕೆಲಸವೂ ಇಲ್ಲಿ ಪ್ರಾರಂಭವಾಗಿದೆ. ನಾವು ರಾಜಸ್ಥಾನದಲ್ಲಿ ರೈಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. 2004 ಮತ್ತು 2014ರ ನಡುವೆ, ರಾಜಸ್ಥಾನವು ರೈಲ್ವೆಗೆ ಪ್ರತಿವರ್ಷ ಸರಾಸರಿ ಒಂದು ಸಾವಿರ ಕೋಟಿ ರೂ.ಗಿಂತ ಕಡಿಮೆ ಹಣವನ್ನು ಪಡೆಯಿತು. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಸರ್ಕಾರವು ರಾಜಸ್ಥಾನದಲ್ಲಿ ರೈಲ್ವೆ ಅಭಿವೃದ್ಧಿಗೆ ವರ್ಷಕ್ಕೆ ಸರಾಸರಿ ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಿದೆ. ಇಂದು, ಇಲ್ಲಿ ಹೊಸ ರೈಲ್ವೆ ಮಾರ್ಗಗಳನ್ನು ತ್ವರಿತ ಗತಿಯಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ರೈಲ್ವೆ ಹಳಿಗಳ ವಿದ್ಯುದ್ದೀಕರಣವೂ ವೇಗವಾಗಿ ನಡೆಯುತ್ತಿದೆ.

ಸ್ನೇಹಿತರೇ

ಸಣ್ಣ ವ್ಯಾಪಾರಿಗಳು ಮತ್ತು ಗುಡಿ ಕೈಗಾರಿಕೆಗಳು ಈ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಉಪ್ಪಿನಕಾಯಿ, ಹಪ್ಪಳ, ಖಾರದ ಪದಾರ್ಥಗಳು ಮತ್ತು ಇತರ ಹಲವಾರು ಉತ್ಪನ್ನಗಳಿಗೆ ಬಿಕಾನೇರ್ ದೇಶಾದ್ಯಂತ ಪ್ರಸಿದ್ಧವಾಗಿದೆ. ಸುಧಾರಿತ ಸಂಪರ್ಕದೊಂದಿಗೆ, ಈ ಗುಡಿ ಕೈಗಾರಿಕೆಗಳು ಕಡಿಮೆ ವೆಚ್ಚದಲ್ಲಿ ತಮ್ಮ ಸರಕುಗಳೊಂದಿಗೆ ದೇಶದ ಮೂಲೆ ಮೂಲೆಯನ್ನು ತಲುಪಲು ಸಾಧ್ಯವಾಗುತ್ತದೆ. ದೇಶದ ಜನರಿಗೆ ಬಿಕಾನೇರ್‌ನ ರುಚಿಕರವಾದ ಉತ್ಪನ್ನಗಳು ಸುಲಭವಾಗಿ ಲಭ್ಯವಾಗುತ್ತವೆ.

ಸ್ನೇಹಿತರೇ,

ಕಳೆದ ಒಂಬತ್ತು ವರ್ಷಗಳಲ್ಲಿ ರಾಜಸ್ಥಾನದ ಅಭಿವೃದ್ಧಿಗೆ ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ದಶಕಗಳಿಂದ ಪ್ರಗತಿಯಿಂದ ವಂಚಿತವಾಗಿರುವ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ನಾವು ʻರೋಮಾಂಚಕ ಗ್ರಾಮʼ (ವೈಬ್ರೆಂಟ್‌ ವಿಲೇಜ್‌) ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಗಡಿ ಗ್ರಾಮಗಳನ್ನು ನಾವು ದೇಶದ ಮೊದಲ ಗ್ರಾಮಗಳು ಎಂದು ಘೋಷಿಸಿದ್ದೇವೆ. ಇದು ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಕಾರಣವಾಗಿದೆ, ಮತ್ತು ಗಡಿ ಪ್ರದೇಶಗಳಿಗೆ ಭೇಟಿ ನೀಡುವಲ್ಲಿ ದೇಶದ ಜನರ ಆಸಕ್ತಿಯೂ ಹೆಚ್ಚುತ್ತಿದೆ. ಇದು ಗಡಿಯುದ್ದಕ್ಕೂ ಇರುವ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಹೊಸ ಶಕ್ತಿಯನ್ನು ತಂದಿದೆ.

ಸ್ನೇಹಿತರೇ,

ನಮ್ಮ ರಾಜಸ್ಥಾನಕ್ಕೆ ಸಾಲಾಸರ್ ಬಾಲಾಜಿ ಮತ್ತು ಕರ್ಣಿ ಮಾತಾ ಅವರ ಆಶೀರ್ವಾದ ಚೆನ್ನಾಗಿದೆ. ಆದ್ದರಿಂದ, ಇದು ಅಭಿವೃದ್ಧಿಯ ದೃಷ್ಟಿಯಿಂದಲೂ ಮುಂಚೂಣಿಯಲ್ಲಿರಬೇಕು. ಇಂದು, ಭಾರತ ಸರ್ಕಾರವು ಅದೇ ಭಾವನೆಯೊಂದಿಗೆ ಅಭಿವೃದ್ಧಿ ಯೋಜನೆಗಳಿಗೆ ನಿರಂತರವಾಗಿ ಒತ್ತು ನೀಡುತ್ತಿದೆ, ತನ್ನ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸುತ್ತಿದೆ. ಒಟ್ಟಾಗಿ ನಾವು ರಾಜಸ್ಥಾನದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುತ್ತೇವೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ತುಂಬ ಧನ್ಯವಾದಗಳು!

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

 

***



(Release ID: 1938447) Visitor Counter : 100