ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 30 JUN 2023 3:13PM by PIB Bengaluru

ದೆಹಲಿ ವಿಶ್ವವಿದ್ಯಾಲಯದ ಈ ಸುವರ್ಣ ಸಮಾರಂಭದಲ್ಲಿ ಉಪಸ್ಥಿತರಿರುವ ನನ್ನ ಸಂಪುಟ ಸಹೋದ್ಯೋಗಿ, ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಜಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಯೋಗೇಶ್ ಸಿಂಗ್ ಜಿ, ಎಲ್ಲಾ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ನನ್ನ ಎಲ್ಲಾ ಯುವ ಸ್ನೇಹಿತರೆ... ನೀವು ನನಗೆ ಈ ಆಹ್ವಾನ ನೀಡಿದಾಗ, ನಾನು ಇಲ್ಲಿಗೆ ಬರಬೇಕು ಎಂದು ಅದಕ್ಕೂ ಮೊದಲೇ ನಿರ್ಧರಿಸಿದ್ದೆ. ಇಲ್ಲಿಗೆ ಬರುವುದೆಂದರೆ ಪ್ರೀತಿ-ಪಾತ್ರರನ್ನು ಭೇಟಿಯಾಗಲು ಬಂದಂತೆ ಭಾಸವಾಗುತ್ತದೆ.

ದೆಹಲಿ ವಿಶ್ವವಿದ್ಯಾಲಯದ ಬಗ್ಗೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ನಾವು ಈ 100 ವರ್ಷಗಳ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದೆವು. ಶಿಕ್ಷಣ ರಂಗದ ಈ ದಿಗ್ಗಜರನ್ನು ನೋಡುವ ಮೂಲಕ, ದೆಹಲಿ ವಿಶ್ವವಿದ್ಯಾಲಯವು ನೀಡಿದ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಬಹುದು. ನನ್ನ ವಿದ್ಯಾರ್ಥಿ ದಿನಗಳಿಂದಲೂ ನನಗೆ ಪರಿಚಯವಿರುವ ಕೆಲವರು ನನ್ನ ಮುಂದೆ ಕುಳಿತಿದ್ದಾರೆ, ಆದರೆ ಅವರು ಈಗ ಬಹಳ ಮುಖ್ಯವಾದ ವ್ಯಕ್ತಿಗಳಾಗಿದ್ದಾರೆ. ಇವತ್ತು ಬಂದರೆ ಈ ಹಳೆಯ ಗೆಳೆಯರನ್ನೆಲ್ಲಾ ಭೇಟಿಯಾಗುವ ಅವಕಾಶ ಖಂಡಿತಾ ಸಿಗುತ್ತದೆ ಎಂಬ ಭಾವನೆ ನನ್ನಲ್ಲಿತ್ತು, ಮನಸ್ಸಿನ ಆಸೆಯಂತೆ, ನಾನು ಅವರೆಲ್ಲರನ್ನು ಭೇಟಿಯಾಗುತ್ತಿದ್ದೇನೆ.

 

ಸ್ನೇಹಿತರೆ,

ದೆಹಲಿ ವಿಶ್ವವಿದ್ಯಾಲಯದ ಯಾವುದೇ ವಿದ್ಯಾರ್ಥಿಗೆ ಕಾಲೇಜು ಉತ್ಸವವು ತನ್ನ ಕಾಲೇಜಿನಲ್ಲೇ ಆಗಲಿ ಅಥವಾ ಬೇರೆ ಕಾಲೇಜಿನಲ್ಲೇ ಆಗಲಿ, ಹೇಗಾದರೂ ಆ ಉತ್ಸವದ ಭಾಗವಾಗುವುದು ಅತ್ಯಂತ ಮುಖ್ಯವಾದ ವಿಷಯ. ನನಗೂ ಇದು ಅಂತಹ ಅವಕಾಶವಾಗಿದೆ. ಇಂದು ದೆಹಲಿ ವಿಶ್ವವಿದ್ಯಾಲಯವು ತನ್ನ 100ನೇ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಹಬ್ಬದ ವಾತಾವರಣದಲ್ಲಿ ನಿಮ್ಮೆಲ್ಲರ ನಡುವೆ ಇರಲು ನನಗೆ ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ. ನನ್ನ ಸ್ನೇಹಿತರೇ, ಕ್ಯಾಂಪಸ್‌ಗೆ ಬರುವ ಸಂತೋಷವನ್ನು ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಬಂದಾಗ ನಿಜವಾಗಿಯೂ ಅನುಭವಿಸುತ್ತೀರಿ. ಇಬ್ಬರು ಸ್ನೇಹಿತರು ಒಟ್ಟಿಗೆ ಸೇರಿದಾಗ, ಅವರು ವಾಕಿಂಗ್ ಮತ್ತು ಚಾಟ್ ಮಾಡುತ್ತಲೇ ಇರುತ್ತಾರೆ, ಇಸ್ರೇಲ್‌ನಿಂದ ಚಂದ್ರನವರೆಗೆ ವಿಶ್ವಾದ್ಯಂತದ ವಿಷಯಗಳನ್ನು ಚರ್ಚಿಸುತ್ತಾರೆ, ಯಾವುದೇ ವಿಷಯವನ್ನೂ ಬಿಡುವುದಿಲ್ಲ. ನೀವು ಯಾವ ಚಲನಚಿತ್ರ ನೋಡಿದ್ದೀರಿ ... ಒಟಿಟಿಯಲ್ಲಿ ಆ ಸರಣಿ ಚೆನ್ನಾಗಿದೆ ... ನೀವು ನಿರ್ದಿಷ್ಟ ರೀಲ್ ನೋಡಿದ್ದೀರಾ ಅಥವಾ ಇಲ್ಲವೇ ... ಈ ರೀತಿಯ ಸಂಭಾಷಣೆಯ ಸಾಗರವೇ ಚರ್ಚೆಗೆ ಬರುತ್ತದೆ! ಅದಕ್ಕೇ, ನಿಮ್ಮಂತೆಯೇ ನಾನು ಕೂಡ ದೆಹಲಿ ಮೆಟ್ರೋದಿಂದ ಇಲ್ಲಿಗೆ ನನ್ನ ಯುವ ಸ್ನೇಹಿತರ ಜೆತೆ ಹರಟೆ ಹೊಡೆಯುತ್ತಾ ಬಂದೆ. ಆ ಸಂಭಾಷಣೆಗಳಲ್ಲಿ, ನಾನು ಕೆಲವು ಕಥೆಗಳನ್ನು ಕಂಡುಹಿಡಿದಿದ್ದೇನೆ ಮತ್ತು ಹಲವಾರು ಆಸಕ್ತಿದಾಯಕ ಮಾಹಿತಿಗಳನ್ನು ಸಹ ಆಲಿಸಿದೆ.

 

ಸ್ನೇಹಿತರೆ,

ಇವತ್ತಿನ ಸಂದರ್ಭ ಇನ್ನೊಂದು ಕಾರಣಕ್ಕೂ ವಿಶೇಷವಾಗಿದೆ. ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿ, ದೆಹಲಿ ವಿಶ್ವವಿದ್ಯಾಲಯ ತನ್ನ ಯಶಸ್ವೀ 100 ವರ್ಷಗಳನ್ನು ಪೂರೈಸಿದೆ. ಯಾವುದೇ ದೇಶವಿರಲಿ, ಅದರ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಅದರ ಸಾಧನೆಗಳ ನಿಜವಾದ ಪ್ರತಿಬಿಂಬವಾಗಿದೆ. ಈ 100 ವರ್ಷಗಳ ದೆಹಲಿ ವಿಶ್ವವಿದ್ಯಾಲಯದ ಸುದೀರ್ಘ  ಪಯಣದಲ್ಲಿ ಹಲವು ಐತಿಹಾಸಿಕ ಮೈಲಿಗಲ್ಲುಗಳಿವೆ. ಅನೇಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರ ಅನೇಕ ಜನರ ಜೀವನವು ಇದರಲ್ಲಿ ತೊಡಗಿಸಿಕೊಂಡಿದೆ. ಒಂದು ರೀತಿಯಲ್ಲಿ ದೆಹಲಿ ವಿಶ್ವವಿದ್ಯಾಲಯವು ಕೇವಲ ವಿಶ್ವವಿದ್ಯಾನಿಲಯವಾಗಿರದೆ ಒಂದು ಆಂದೋಲನವಾಗಿದೆ. ಈ ವಿಶ್ವವಿದ್ಯಾಲಯವು ಪ್ರತಿ ಕ್ಷಣವೂ ಬದುಕಿದೆ. ಈ ವಿಶ್ವವಿದ್ಯಾಲಯವು ಪ್ರತಿ ಕ್ಷಣಕ್ಕೂ ಜೀವನವನ್ನು ರೂಪಿಸಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ, ಎಲ್ಲಾ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೆ,

ಇಂದು ಈ ಕಾರ್ಯಕ್ರಮದ ಮೂಲಕ ಹೊಸ ಮತ್ತು ಹಳೆ ವಿದ್ಯಾರ್ಥಿಗಳೂ ಒಂದಾಗುತ್ತಿದ್ದಾರೆ. ಸ್ವಾಭಾವಿಕವಾಗಿ, ಕೆಲವು ನಿತ್ಯಹರಿದ್ವರ್ಣ ಚರ್ಚೆಗಳು ಸಹ ಇರುತ್ತದೆ. ಉತ್ತರ ಕ್ಯಾಂಪಸ್‌ನ ಜನರಿಗೆ, ಕಮಲಾ ನಗರ, ಹಡ್ಸನ್ ಲೇನ್ ಮತ್ತು ಮುಖರ್ಜಿ ನಗರಕ್ಕೆ ಸಂಬಂಧಿಸಿದ ನೆನಪುಗಳಿವೆ. ಸೌತ್ ಕ್ಯಾಂಪಸ್‌ನವರಿಗೆ ಸತ್ಯನಿಕೇತನದ ಕಥೆಗಳು ಇರುತ್ತವೆ. ನೀವು ಯಾವ ವರ್ಷ ಪದವಿ ಪಡೆದಿದ್ದರೂ, ಇಬ್ಬರು ದೆಹಲಿ ವಿವಿಯ ಹಳೆಯ ವಿದ್ಯಾರ್ಥಿಗಳು ಈ ಸ್ಥಳಗಳ ಕುರಿತು ಗಂಟೆಗಳ ಕಾಲ ಮಾತನಾಡಬಹುದು! ಈ ಎಲ್ಲದರ ನಡುವೆ, ಈ 100 ವರ್ಷಗಳಲ್ಲಿ ದೆಹಲಿ ವಿವಿ ತನ್ನ ಭಾವೋದ್ರೇಕಗಳನ್ನು ಜೀವಂತವಾಗಿಟ್ಟಿದ್ದರೆ, ಅದು ತನ್ನ ಮೌಲ್ಯಗಳನ್ನು ಜೀವಂತವಾಗಿಟ್ಟಿದೆ ಎಂದು ನಾನು ನಂಬುತ್ತೇನೆ. ವಿಶ್ವವಿದ್ಯಾನಿಯದ “ನಿಷ್ಠ ಧೃತಿ ಸತ್ಯಂ” ಧ್ಯೇಯವಾಕ್ಯವು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮಾರ್ಗದರ್ಶಿ ದೀಪದಂತಿದೆ.

 

ಸ್ನೇಹಿತರೆ,

ನಮ್ಮ ದೇಶದಲ್ಲಿ ಈ ಶ್ಲೋಕವನ್ನು ಪದೇಪದೆ ಉಲ್ಲೇಖಿಸಲಾಗುತ್ತದೆ:

ಜ್ಞಾನ್-ವನೇನ್ ಸುಖವನ್, ಜ್ಞಾನ್-ವನೇವ್ ಜೀವತಿ.

ಜ್ಞಾನ-ವನೇವ ಬಲಃ ತಸ್ಮಾತ್ ಜ್ಞಾನ-ಮಯೋ ಭವ ।

ಇದರರ್ಥ ಜ್ಞಾನ ಹೊಂದಿರುವವನು ಸಂತೋಷವಾಗಿರುವನು, ಶಕ್ತಿಶಾಲಿಯಾಗಿರುವನು. ಮತ್ತು ವಾಸ್ತವದಲ್ಲಿ, ಜ್ಞಾನವುಳ್ಳವನು ನಿಜವಾಗಿಯೂ ಜಯಶಾಲಿಯಾಗುತ್ತಾನೆ. ಆದ್ದರಿಂದ, ಭಾರತವು ನಳಂದದಂತಹ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನು ಹೊಂದಿದ್ದಾಗ, ಭಾರತವು ಸಂತೋಷ ಮತ್ತು ಸಮೃದ್ಧಿಯ ಉತ್ತುಂಗದಲ್ಲಿತ್ತು. ಭಾರತವು ತಕ್ಷಿಲದಂತಹ ಸಂಸ್ಥೆಗಳನ್ನು ಹೊಂದಿದ್ದಾಗ, ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡಿತು. ಭಾರತದ ಸಮೃದ್ಧ ಶಿಕ್ಷಣ ವ್ಯವಸ್ಥೆಯು ಭಾರತದ ಏಳಿಗೆಯ ಚಾಲನಾಶಕ್ತಿಯಾಗಿತ್ತು.

ಜಾಗತಿಕ ಜಿಡಿಪಿಯಲ್ಲಿ ಭಾರತ ಮಹತ್ವದ ಪಾಲು ಹೊಂದಿದ್ದ ಕಾಲವದು. ಆದರೆ, ನೂರಾರು ವರ್ಷಗಳ ಗುಲಾಮಗಿರಿಯು ಶಿಕ್ಷಣದ ದೇಗುಲವಾಗಿದ್ದ ನಮ್ಮ ಶಿಕ್ಷಣ ಕೇಂದ್ರಗಳನ್ನು ನಾಶಪಡಿಸಿತು. ಭಾರತದ ಬೌದ್ಧಿಕ ಹರಿವು ಸ್ಥಗಿತಗೊಂಡಾಗ, ಭಾರತದ ಬೆಳವಣಿಗೆಯೂ ಕುಂಠಿತವಾಯಿತು.

ಸುದೀರ್ಘ ಕಾಲದ ಗುಲಾಮಗಿರಿಯ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಈ ಸಮಯದಲ್ಲಿ, ಸ್ವಾತಂತ್ರ್ಯದ ಭಾವನಾತ್ಮಕ ಉಬ್ಬರವಿಳಿತಕ್ಕೆ ಸಂಕೀರ್ಣ ಆಕಾರ ನೀಡುವಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಮಹತ್ವದ ಪಾತ್ರ ವಹಿಸಿದವು. ಇದರ ಫಲವಾಗಿ, ಆ ಕಾಲದ ಸಮಕಾಲೀನ ಜಗತ್ತಿಗೆ ಸವಾಲೊಡ್ಡಬಲ್ಲ ಯುವ ಪೀಳಿಗೆ ಹುಟ್ಟಿಕೊಂಡಿತು. ದೆಹಲಿ ವಿಶ್ವವಿದ್ಯಾಲಯವೂ ಈ ಆಂದೋಲನದ ಪ್ರಮುಖ ಕೇಂದ್ರವಾಗಿತ್ತು. ದೆಹವಿ ವಿವಿಯ ಎಲ್ಲಾ ವಿದ್ಯಾರ್ಥಿಗಳು, ಅವರ ಕೋರ್ಸ್ ಲೆಕ್ಕಿಸದೆ, ಅವರ ಸಂಸ್ಥೆಯ ಬೇರುಗಳೊಂದಿಗೆ ಪರಿಚಿತರಾಗಿರುತ್ತಾರೆ. ಹಿಂದಿನದನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಅಸ್ತಿತ್ವವನ್ನು ರೂಪಿಸುತ್ತದೆ, ಆದರ್ಶಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ ಮತ್ತು ಭವಿಷ್ಯದ ದೃಷ್ಟಿಕೋನಗಳನ್ನು ವಿಸ್ತರಿಸುತ್ತದೆ.

 

ಸ್ನೇಹಿತರೆ,

ಅದು ಒಬ್ಬ ವ್ಯಕ್ತಿಯಾಗಿರಲಿ ಅಥವಾ ಸಂಸ್ಥೆಯಾಗಿರಲಿ, ಅವರ ಆಕಾಂಕ್ಷೆಗಳನ್ನು ರಾಷ್ಟ್ರದ ಸಂಕಲ್ಪಗಳೊಂದಿಗೆ ಜೋಡಿಸಿದಾಗ, ಅವರ ಯಶಸ್ಸು ರಾಷ್ಟ್ರದ ಸಾಧನೆಗಳೊಂದಿಗೆ ಹೆಣೆದುಕೊಂಡಿರುತ್ತದೆ. ಒಂದು ಕಾಲದಲ್ಲಿ ದೆಹಲಿ ವಿಶ್ವವಿದ್ಯಾಲಯವು ಕೇವ 3 ಕಾಲೇಜುಗಳನ್ನು ಹೊಂದಿತ್ತು, ಇಂದು 90ಕ್ಕೂ ಹೆಚ್ಚು ಕಾಲೇಜುಗಳಿವೆ. ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯು ಹದಗೆಟ್ಟಿದ್ದರೆ, ಇಂದು ಅದು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂದು ದೆಹಲಿ ವಿವಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯು ಪುರುಷ ವಿದ್ಯಾರ್ಥಿಗಳನ್ನು ಮೀರಿಸಿದೆ. ಅಂತೆಯೇ, ದೇಶದಲ್ಲಿ ಲಿಂಗ ಸಮಾನತೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಇದರರ್ಥ ಶಿಕ್ಷಣ ಸಂಸ್ಥೆಯ ಬೇರುಗಳು ಆಳವಾಗಿ, ಅದು ರಾಷ್ಟ್ರದ ಶಾಖೆಗಳನ್ನು ತಲುಪುತ್ತದೆ. ಆದ್ದರಿಂದ, ವಿಶ್ವವಿದ್ಯಾಲಯ ಮತ್ತು ಭವಿಷ್ಯದ ರಾಷ್ಟ್ರದ ಆಕಾಂಕ್ಷೆಗಳ ನಡುವೆ ಹೊಂದಾಣಿಕೆ ಮತ್ತು ಅಂತರ್ ಸಂಪರ್ಕ ಇರಬೇಕು.

ಮುಂದಿನ 25 ವರ್ಷಗಳ ನಂತರ ದೇಶವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ದೆಹಲಿ ವಿಶ್ವವಿದ್ಯಾಲಯವು ತನ್ನ 125ನೇ ವಾರ್ಷಿಕೋತ್ಸವ ಆಚರಿಸುತ್ತದೆ. ಅಂದು ಭಾರತದ ಸ್ವಾತಂತ್ರ್ಯವೇ ಗುರಿಯಾಗಿದ್ದರೂ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಹಿಂದಿನ ಶತಮಾನದ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಹಿಂದಿನ ಶತಮಾನದ 3ನೇ ದಶಕವು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ವೇಗ ನೀಡಿತು. ಈಗ, ಪ್ರಸಕ್ತ ಶತಮಾನದ ಈ 3ನೇ ದಶಕವು ಭಾರತದ ಅಭಿವೃದ್ಧಿಯ ಪಯಣಕ್ಕೆ ಹೊಸ ವೇಗ ನೀಡಲಿದೆ. ಇಂದು ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, ಐಐಟಿಗಳು, ಐಐಎಂಗಳು, ಎನ್ಐಟಿಗಳು ಮತ್ತು ಏಮ್ಸ್ ನಂತಹ  ಸಂಸ್ಥೆಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಈ ಎಲ್ಲಾ ಸಂಸ್ಥೆಗಳು ನವ ಭಾರತ ನಿರ್ಮಾಣದ ಭದ್ರ ಬುನಾದಿ ಹಾಕುತ್ತಿವೆ.

 

ಸ್ನೇಹಿತರೆ,

ಶಿಕ್ಷಣವು ಕೇವಲ ಬೋಧನೆ ಪ್ರಕ್ರಿಯೆಯಲ್ಲ, ಅದು ನಿರಂತರ ಕಲಿಕೆಯ ಪ್ರಕ್ರಿಯೆಯೂ ಆಗಿದೆ. ದೀರ್ಘ ಕಾಲದವರೆಗೆ, ಶಿಕ್ಷಣದ ಗಮನವು ವಿದ್ಯಾರ್ಥಿಗಳಿಗೆ ಏನು ಕಲಿಸಬೇಕು ಎಂಬುದರ ಮೇಲೆ ಉಳಿದಿತ್ತು. ಆದರೆ, ನಾವು ವಿದ್ಯಾರ್ಥಿಗಳು ಏನನ್ನು ಕಲಿಯಲು ಬಯಸುತ್ತಾರೆ ಎಂಬುದರತ್ತ ಗಮನ ಹರಿಸಿದ್ದೇವೆ. ನಿಮ್ಮೆಲ್ಲರ ಸಾಮೂಹಿಕ ಪ್ರಯತ್ನದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಈಗ ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳ ಆಧಾರದ ಮೇಲೆ ತಮ್ಮ ಆದ್ಯತೆಯ ವಿಷಯಗಳನ್ನು ಆಯ್ಕೆ ಮಾಡುವ ಉತ್ತಮ ಅನುಕೂಲ ಪಡೆದಿದ್ದಾರೆ.

ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಸಂಸ್ಥೆಗಳನ್ನು ಸ್ಪರ್ಧಾತ್ಮಕವಾಗಿಸಲು ನಾವು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಮಾರ್ಗಸೂಚಿಯನ್ನು ಪರಿಚಯಿಸಿದ್ದೇವೆ. ಇದು ದೇಶಾದ್ಯಂತ ಸಂಸ್ಥೆಗಳಿಗೆ ಪ್ರೇರಣೆ ನೀಡುತ್ತಿದೆ. ನಾವು ಶಿಕ್ಷಣದ ಗುಣಮಟ್ಟದೊಂದಿಗೆ ಸಂಸ್ಥೆಗಳ ಸ್ವಾಯತ್ತತೆಯನ್ನು ಸಹ ಜೋಡಿಸಿದ್ದೇವೆ. ಸಂಸ್ಥೆಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ, ಹೆಚ್ಚು ಸ್ವಾಯತ್ತತೆ ನೀಡಲಾಗುತ್ತದೆ.

 

ಸ್ನೇಹಿತರೆ,

ಶಿಕ್ಷಣ ಕ್ಷೇತ್ರದ ಭವಿಷ್ಯದ ನೀತಿಗಳು ಮತ್ತು ನಿರ್ಧಾರಗಳ ಪರಿಣಾಮವೆಂದರೆ, ಇಂದು ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕ ಮನ್ನಣೆ ಗಳಿಸುತ್ತಿವೆ. 2014ರಲ್ಲಿ ಕೇವಲ 12 ಭಾರತೀಯ ವಿಶ್ವವಿದ್ಯಾಲಯಗಳನ್ನು ಕ್ಯುಎಸ್ ವಿಶ್ವ ಶ್ರೇಯಾಂಕದಲ್ಲಿ ಪಟ್ಟಿ ಮಾಡಲಾಗಿತ್ತು, ಆದರೆ ಇಂದು ಈ ಸಂಖ್ಯೆ 45ಕ್ಕೆ ಏರಿದೆ.

ನಮ್ಮ ಶಿಕ್ಷಣ ಸಂಸ್ಥೆಗಳು ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿವೆ. ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿ-ಅಧ್ಯಾಪಕರ ಅನುಪಾತ ಮತ್ತು ಖ್ಯಾತಿಯ ವಿಷಯದಲ್ಲಿ ನಮ್ಮ ಸಂಸ್ಥೆಗಳು ವೇಗವಾಗಿ ಸುಧಾರಿಸುತ್ತಿವೆ. ನನ್ನ ಸ್ನೇಹಿತರೇ, ಈ ಎಲ್ಲದರ ಹಿಂದೆ ಇರುವ ದೊಡ್ಡ ಮಾರ್ಗದರ್ಶಿ ಶಕ್ತಿ ಯಾವುದು ಎಂದು ನಿಮಗೆ ತಿಳಿದಿದೆಯೇ? ಈ ಸಭಾಂಗಣದಲ್ಲಿ ಕುಳಿತಿರುವ ನನ್ನ ಯುವಕರ ಸಾಮರ್ಥ್ಯ ಭಾರತದ ಯುವ ಶಕ್ತಿಯೇ ಮಾರ್ಗದರ್ಶಿ ಶಕ್ತಿಯಾಗಿದೆ.

 

ಸ್ನೇಹಿತರೆ,

ವಿದ್ಯಾರ್ಥಿಗಳು ಯಾವುದೇ ಸಂಸ್ಥೆಗೆ ಪ್ರವೇಶ ಪಡೆಯುವ ಮೊದಲು ಉದ್ಯೋಗಗಳಿಗೆ ಆದ್ಯತೆ ನೀಡುತ್ತಿದ್ದ ಕಾಲವೊಂದಿತ್ತು. ಇದರರ್ಥ ಪ್ರವೇಶವು ಪದವಿಗೆ ಸಮಾನಾರ್ಥಕವಾಗಿದೆ ಮತ್ತು ಪದವಿ ಎಂದರೆ ಉದ್ಯೋಗ ಎಂದರ್ಥ. ಶಿಕ್ಷಣ ಈ ಮಟ್ಟಿಗೆ ಸೀಮಿತವಾಗಿತ್ತು. ಆದರೆ, ಇಂದಿನ ಯುವಕರು ತಮ್ಮ ಜೀವನವನ್ನು ಈ ಕಲ್ಪನೆಗೆ ಸೀಮಿತಗೊಳಿಸಲು ಬಯಸುವುದಿಲ್ಲ. ಅವರು ಹೊಸದನ್ನು ಮಾಡಲು ಬಯಸುತ್ತಾರೆ; ಅವರು ತಮ್ಮದೇ ಆದ ಮಾರ್ಗ ಕಂಡುಕೊಳ್ಳಲು ಬಯಸುತ್ತಾರೆ.

2014ರ ಮೊದಲು ಭಾರತದಲ್ಲಿ ಕೇವಲ 100 ಸ್ಟಾರ್ಟಪ್‌ಗಳಿದ್ದವು. ಇಂದು ಭಾರತದಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. 2014-15ಕ್ಕೆ ಹೋಲಿಸಿದರೆ ಈಗ ಶೇ.40ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಸಲ್ಲಿಸಲಾಗುತ್ತಿದೆ. ನೀಡಲಾಗುತ್ತಿರುವ ಪೇಟೆಂಟ್‌ಗಳ ಸಂಖ್ಯೆಯೂ 5 ಪಟ್ಟು ಹೆಚ್ಚಾಗಿದೆ. ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತವು 81 ನೇ ಸ್ಥಾನದಲ್ಲಿತ್ತು. ನಾವು ಈಗ 46ನೇ ಸ್ಥಾನಕ್ಕೆ ಏರಿದ್ದೇವೆ. ಇಂದು ನಾವು ಉನ್ನತ ಸ್ಥಾನವನ್ನು ಗಳಿಸಿದ್ದೇವೆ.

ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಪ್ರವಾಸ ಮುಗಿಸಿ ಹಿಂತಿರುಗಿದ್ದೇನೆ. ಇಂದು ಭಾರತದ ಗೌರವ ಮತ್ತು ಹೆಮ್ಮೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ನೀವು ಗಮನಿಸಿರಬೇಕು. ಇಂದು ಭಾರತದ ಕೀರ್ತಿ ಹೆಚ್ಚಿರುವುದಕ್ಕೆ ಕಾರಣವೇನು? ಉತ್ತರ ಒಂದೇ. ಏಕೆಂದರೆ ಭಾರತದ ಸಾಮರ್ಥ್ಯಗಳು ಬೆಳೆದಿವೆ ಮತ್ತು ವಿಶ್ವವು ಭಾರತದ ಯುವಕರ ವಿಶ್ವಾಸ ಗಳಿಸಿದೆ. ಈ ಭೇಟಿಯ ಸಮಯದಲ್ಲಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ಎಂಬ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದೊಂದಿಗೆ, ನಮ್ಮ ಯುವಕರಿಗೆ ಭೂಮಿಯಿಂದ ಬಾಹ್ಯಾಕಾಶದವರೆಗೆ, ಸೆಮಿಕಂಡಕ್ಟರ್‌ಗಳಿಂದ ಕೃತ ಬುದ್ಧಿಮತ್ತೆವರೆಗೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.

ಒಂದು ಕಾಲದಲ್ಲಿ ಭಾರತಕ್ಕೆ ನಿಲುಕದ ತಂತ್ರಜ್ಞಾನಗಳು ಈಗ ನಮ್ಮ ಯುವಜನರಿಗೆ ಲಭ್ಯವಾಗಿವೆ. ಅವರ ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲಾಗುವುದು. ಅಮೆರಿಕದ ಮೈಕ್ರಾನ್, ಗೂಗಲ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಕಂಪನಿಗಳು ಭಾರತದಲ್ಲಿ ಗಮನಾರ್ಹ ಹೂಡಿಕೆ ಮಾಡಲು ನಿರ್ಧರಿಸಿವೆ. ನನ್ನ ಸ್ನೇಹಿತರೆ, ಭವಿಷ್ಯವು ನಿಮಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಲಿದೆ, ಅದು ನಿಮ್ಮ ಮನೆ ಬಾಗಿಲನ್ನು ಹೇಗೆ ತಟ್ಟುತ್ತಿದೆ ಎಂಬುದು ಸ್ಪಷ್ಟವಾಗಿದೆ.

 

ಸ್ನೇಹಿತರೆ,

ಇಂಡಸ್ಟ್ರಿ 4.0ರ ಕ್ರಾಂತಿಯೂ ನಮ್ಮ ಮನೆ ಬಾಗಿಲಿಗೆ ಬಂದಿದೆ. ಕೃತಕ ಬುದ್ಧಿಮತ್ತೆ ಮತ್ತು ಆಗ್ಮೆಂಟೆಡ್ ರಿಯಾಲಟಿ/ವರ್ಚುವಲ್ ರಿಯಾಲಿಟಿ ಕುರಿತು ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರಗಳಲ್ಲಿ ನಾವು ನೋಡುತ್ತಿದ್ದದ್ದು ಈಗ ನಮ್ಮ ನಿಜ ಜೀವನದ ಅನುಭವಗಳ ಭಾಗವಾಗುತ್ತಿದೆ. ಡ್ರೈವಿಂಗ್‌ನಿಂದ ಶಸ್ತ್ರಚಿಕಿತ್ಸೆಯವರೆಗೆ, ರೊಬೊಟಿಕ್ಸ್ ಹೊಸ ಸಾಮಾನ್ಯವಾಗುತ್ತಿದೆ. ಈ ಎಲ್ಲಾ ಕ್ಷೇತ್ರಗಳು ಭಾರತದ ಯುವ ಪೀಳಿಗೆಗೆ, ನಮ್ಮ ವಿದ್ಯಾರ್ಥಿಗಳಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ತನ್ನ ಬಾಹ್ಯಾಕಾಶ ಕ್ಷೇತ್ರ, ರಕ್ಷಣಾ ಕ್ಷೇತ್ರವನ್ನು ತೆರೆದಿದೆ, ಡ್ರೋನ್ ಸಂಬಂಧಿತ ನೀತಿಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಈ ಎಲ್ಲಾ ನಿರ್ಧಾರಗಳು ದೇಶದ ಹೆಚ್ಚಿನ ಸಂಖ್ಯೆಯ ಯುವಕರಿಗೆ ಪ್ರಗತಿ ಹೊಂದಲು ಮತ್ತು ಮುನ್ನಡೆಯಲು ವಿಫುಲ ಅವಕಾಶಗಳನ್ನು ಒದಗಿಸಿವೆ.

 

ಸ್ನೇಹಿತರೆ,

ಭಾರತದ ಅಭಿವೃದ್ಧಿಯ ಪಯಣದ ಇನ್ನೊಂದು ಅಂಶವೆಂದರೆ, ಸಾವಿರಾರು ಯುವಕರು ಮತ್ತು ನಮ್ಮ ವಿದ್ಯಾರ್ಥಿಗಳು ಅದರಿಂದ ಹೇಗೆ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು. ಇಂದು ವಿಶ್ವಾದ್ಯಂತದ ಜನರು ಭಾರತ, ಅದರ ಗುರುತು ಮತ್ತು ಅದರ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ  ಪ್ರತಿಯೊಂದು ದೇಶವೂ ತನ್ನದೇ ಆದ ಅಗತ್ಯಗಳೊಂದಿಗೆ ಹೋರಾಡುತ್ತಿತ್ತು. ಆದರೆ, ಭಾರತವು ತನ್ನ ಸ್ವಂತ ಅಗತ್ಯಗಳನ್ನು ಪೂರೈಸಿದ್ದು ಮಾತ್ರವಲ್ಲದೆ, ಇತರ ದೇಶಗಳಿಗೂ ಸಹಾಯಹಸ್ತ ಚಾಚಿತು.

ಆದ್ದರಿಂದ, ಬಿಕ್ಕಟ್ಟಿನ ಸಮಯದಲ್ಲೂ ಸೇವೆಯನ್ನು ಪ್ರೇರೇಪಿಸುವ ಭಾರತದ ಮೌಲ್ಯಗಳು ಯಾವುವು ಎಂಬ ಕುತೂಹಲ ಜಗತ್ತಿನಲ್ಲಿ ಹುಟ್ಟಿಕೊಂಡಿದೆ. ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳು, ಅದರ ಜಿ-20 ಅಧ್ಯಕ್ಷತೆ, ಇವೆಲ್ಲವೂ ಭಾರತದ ಬಗ್ಗೆ ಕುತೂಹಲ ಹೆಚ್ಚಿಸಲು ಕೊಡುಗೆ ನೀಡುತ್ತವೆ. ಇದು ನಮ್ಮ ವಿದ್ಯಾರ್ಥಿಗಳಿಗೆ ಮಾನವಿಕ ಕ್ಷೇತ್ರದಲ್ಲಿ ಹಲವಾರು ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಯೋಗ, ಸಂಸ್ಕೃತಿ, ಹಬ್ಬಗಳು, ಸಾಹಿತ್ಯ, ಇತಿಹಾಸ, ಪರಂಪರೆ, ಸಂಪ್ರದಾಯಗಳು ಮತ್ತು ಪಾಕ ಪದ್ಧತಿಯಂತಹ ನಮ್ಮ ವಿಜ್ಞಾನ ಕುರಿತು ಈಗ ಎಲ್ಲರೂ ಚರ್ಚಿಸುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಜನರಿಗೆ ಅವು ಆಕರ್ಷಣೆಯಾಗುತ್ತಿವೆ. ಆದ್ದರಿಂದ, ಭಾರತಕ್ಕೆ ಜಗತ್ತನ್ನು ಪರಿಚಯಿಸುವ, ನಮ್ಮ ಸೃಷ್ಟಿಗಳನ್ನು ಜಾಗತಿಕವಾಗಿ ಪ್ರಸಾರ ಮಾಡುವ ಭಾರತೀಯ ಯುವಕರಿಗೆ ಹೆಚ್ಚುತ್ತಿರುವ ಬೇಡಿಕೆಯಿದೆ. ಇಂದು ಪ್ರಜಾಪ್ರಭುತ್ವ, ಸಮಾನತೆ ಮತ್ತು ಪರಸ್ಪರ ಗೌರವದಂತಹ ಭಾರತೀಯ ಮೌಲ್ಯಗಳು ಸಾರ್ವತ್ರಿಕವಾಗಿ ಪ್ರಸ್ತುತವಾಗುತ್ತಿವೆ. ಸರ್ಕಾರಿ ವೇದಿಕೆಗಳಿಂದ ರಾಜತಾಂತ್ರಿಕತೆಯವರೆಗೆ ಅನೇಕ ಕ್ಷೇತ್ರಗಳಲ್ಲಿ ಭಾರತೀಯ ಯುವಕರಿಗೆ ನಿರಂತರವಾಗಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ದೇಶದೊಳಗಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕ್ಷೇತ್ರಗಳು ಯುವಕರಿಗೆ ಅಪಾರ ಸಾಧ್ಯತೆಗಳನ್ನು ತೆರೆದಿವೆ.

ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪಿಎಂ-ಮ್ಯೂಸಿಯಂ ಮೂಲಕ ಸ್ವತಂತ್ರ ಭಾರತದ ಅಭಿವೃದ್ಧಿ ಪಯಣ ಗೋಚರಿಸುತ್ತಿದೆ. ದೆಹಲಿಯು "ಯುಗೇ ಯುಗೀನ್ ಭಾರತ್" ಎಂಬ ವಿಶ್ವದ ಅತಿದೊಡ್ಡ ಪಾರಂಪರಿಕ ವಸ್ತುಸಂಗ್ರಹಾಲಯವನ್ನು ಹೊಂದಲಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಕಲೆ, ಸಂಸ್ಕೃತಿ ಮತ್ತು ಇತಿಹಾಸದಲ್ಲಿ ತೊಡಗಿರುವ ಯುವಕರಿಗೆ, ತಮ್ಮ ಉತ್ಸಾಹವನ್ನು ವೃತ್ತಿಯಾಗಿ ಪರಿವರ್ತಿಸಲು ಈಗ ಹಲವಾರು ಅವಕಾಶಗಳಿವೆ. ಅದೇ ರೀತಿ, ಭಾರತೀಯ ಶಿಕ್ಷಕರು ಇಂದು ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಹೊಂದಿದ್ದಾರೆ. ಜಾಗತಿಕ ನಾಯಕರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಾಗಲೆಲ್ಲಾ ಅವರಲ್ಲಿ ಅನೇಕರು ಭಾರತೀಯ ಶಿಕ್ಷಕರೊಂದಿಗೆ ತಮ್ಮ ಸಂಪರ್ಕದ ಬಗ್ಗೆ ಬಹಳ ಹೆಮ್ಮೆಯಿಂದ ಕಥೆಗಳನ್ನು ಹಂಚಿಕೊಳ್ಳುತ್ತಾರೆ, ಮಾತನಾಡುತ್ತಾರೆ.

ಭಾರತದ ಮೃದು ಶಕ್ತಿಯು ಭಾರತೀಯ ಯುವಕರಿಗೆ ಯಶೋಗಾಥೆಗಳನ್ನು ಸೃಜಿಸಬಹುದು. ಇದೆಲ್ಲದಕ್ಕೂ ನಮ್ಮ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಿದ್ಧವಾಗಬೇಕು, ನಾವು ನಮ್ಮ ಮನಸ್ಥಿತಿಯನ್ನು ಸಿದ್ಧಪಡಿಸಬೇಕು. ಪ್ರತಿಯೊಂದು ವಿಶ್ವವಿದ್ಯಾಲಯವು ತನ್ನದೇ ಆದ ಮಾರ್ಗಸೂಚಿ ರೂಪಿಸಬೇಕಾಗಿದೆ. ಅದು ಗುರಿಗಳನ್ನು ನಿರ್ಧರಿಸುತ್ತದೆ.

ನೀವು ಈ ಸಂಸ್ಥೆಯ 125 ವರ್ಷಗಳನ್ನು ಆಚರಿಸುವಾಗ, ನಿಮ್ಮ ಎಣಿಕೆಯು ವಿಶ್ವದ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಲಿ. ಆದ್ದರಿಂದ, ಇದನ್ನು ಸಾಧಿಸಲು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಿ. ನೀವು ಸ್ಥಿರವಾಗಿ ಕೆಲಸ ಮಾಡಬೇಕಾಗಿರುವುದರಿಂದ ಭವಿಷ್ಯವನ್ನು ರೂಪಿಸುವ ಆವಿಷ್ಕಾರಗಳು ಇಲ್ಲಿ ಸಂಭವಿಸಬೇಕು ಮತ್ತು ಇಡೀ ವಿಶ್ವದ ಅತ್ಯುತ್ತಮ ಆಲೋಚನೆಗಳು ಮತ್ತು ನಾಯಕರು ಇಲ್ಲಿಂದ ಹೊರಹೊಮ್ಮಬೇಕು.

ಆದರೆ ಈ ಎಲ್ಲಾ ಬದಲಾವಣೆಗಳ ನಡುವೆ ಸಂಪೂರ್ಣವಾಗಿ ಬದಲಾಗಬೇಡಿ ಸ್ನೇಹಿತರೇ, ಸ್ಥಳೀಯತೆ ಉಳಿಸಿಕೊಳ್ಳಲು ಕೆಲವು ವಿಷಯಗಳನ್ನು ಹಾಗೆಯೇ ಬಿಡಿ. ಉತ್ತರ ಕ್ಯಾಂಪಸ್‌ನಲ್ಲಿ ಪಟೇಲ್ ಚೆಸ್ಟ್‌ನ ಚಹಾ...ನೂಡಲ್ಸ್...ಸೌತ್ ಕ್ಯಾಂಪಸ್‌ನಲ್ಲಿರುವ ಚಾಣಕ್ಯನ ಮೊಮೊಸ್... ಅವುಗಳ ರುಚಿ ಬದಲಾಗದಂತೆ ನೋಡಿಕೊಳ್ಳಬೇಕು.

 

ಸ್ನೇಹಿತರೆ,

ನಾವು ನಮ್ಮ ಜೀವನದಲ್ಲಿ ಒಂದು ಗುರಿ ಹೊಂದಿಸಿದಾಗ, ನಾವು ಮೊದಲು ನಮ್ಮ ಮನಸ್ಸು ಮತ್ತು ಹೃದಯವನ್ನು ಸಿದ್ಧಪಡಿಸಬೇಕು. ರಾಷ್ಟ್ರದ ಮನಸ್ಸು ಮತ್ತು ಹೃದಯವನ್ನು ಸಿದ್ಧಪಡಿಸುವ ಜವಾಬ್ದಾರಿ ಅದರ ಶಿಕ್ಷಣ ಸಂಸ್ಥೆಗಳ ಮೇಲಿದೆ. ಶಿಕ್ಷಣ ಸಂಸ್ಥೆಗಳ ದೂರದೃಷ್ಟಿ ಮತ್ತು ಧ್ಯೇಯೋದ್ದೇಶಗಳ ಮೂಲಕವೇ ನಮ್ಮ ಹೊಸ ಪೀಳಿಗೆಯು ಭವಿಷ್ಯಕ್ಕೆ ಸಿದ್ಧವಾಗಲು ಮತ್ತು ಸವಾಲುಗಳನ್ನು ಸ್ವೀಕರಿಸುವ ಮತ್ತು ಎದುರಿಸುವ ಮನೋಧರ್ಮ ಹೊಂದಲು ಸಾಧ್ಯ.

ದೆಹಲಿ ವಿಶ್ವವಿದ್ಯಾಲಯವು ತನ್ನ ಸುದೀರ್ಘ ಪಯಣದ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ ಖಂಡಿತವಾಗಿಯೂ ಈ ನಿರ್ಣಯಗಳನ್ನು ಪೂರೈಸುತ್ತದೆ ಎಂದು ನಾನು ನಂಬುತ್ತೇನೆ. ನೀವು ಶತಮಾನೋತ್ಸವ ವರ್ಷದ ಈ ಪಯಣವನ್ನು ಮುಂದಕ್ಕೆ ಕೊಂಡೊಯ್ದ ರೀತಿಯಲ್ಲಿ, ನೀವು ಇನ್ನೂ ಹೆಚ್ಚಿನ ಸಾಮರ್ಥ್ಯಗಳೊಂದಿಗೆ, ಹೆಚ್ಚು ಭವ್ಯವಾದ ರೀತಿಯಲ್ಲಿ, ಹೆಚ್ಚಿನ ಕನಸುಗಳು ಮತ್ತು ಸಂಕಲ್ಪಗಳನ್ನು ಹೊತ್ತುಕೊಂಡು ಯಶಸ್ಸನ್ನು ಸಾಧಿಸಲು ಮುನ್ನಡೆಯಿರಿ. ಸಾಧನೆಗಳು ನಿಮ್ಮ ಹೆಜ್ಜೆಗಳನ್ನು ಮುಟ್ಟುತ್ತಲೇ ಇರುತ್ತವೆ, ನಿಮ್ಮ ಸಾಮರ್ಥ್ಯಗಳಿಂದ ರಾಷ್ಟ್ರ ಪ್ರಗತಿಯಾಗಲಿ. ಈ ಶುಭಾಶಯಗಳೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ತುಂಬು ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***

 



(Release ID: 1937013) Visitor Counter : 130