ಇಂಧನ ಸಚಿವಾಲಯ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ಆರ್ ಇ ಸಿ ಲಿಮಿಟೆಡ್ ನಿಂದ ರೂ.3,045 ಕೋಟಿ ಆರ್ಥಿಕ ನೆರವು
Posted On:
25 JUN 2023 4:13PM by PIB Bengaluru
ಬೆಂಗಳೂರು ಮೆಟ್ರೋದ ಎರಡನೇ ಹಂತದ ಯೋಜನೆಯಡಿ ಮೆಟ್ರೋ ಹಳಿಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿ ಎಂ ಆರ್ ಸಿ ಎಲ್ ಗೆ) ಕೇಂದ್ರದ ಇಂಧನ ಸಚಿವಾಲಯದಡಿಯಲ್ಲಿನ ಮಹಾರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ ಆರ್ ಇ ಸಿ ಲಿಮಿಟೆಡ್ ರೂ.3,045 ಕೋಟಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ಬಿ ಎಂ ಆರ್ ಸಿ ಎಲ್ ನ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಬೆಂಗಳೂರಿನಲ್ಲಿ 2023ರ ಜೂನ್ 24 ರಂದು ನಡೆದ ಆರ್ ಇ ಸಿ ಮಂಡಳಿ ಸಭೆಯಲ್ಲಿ ಈ ಆರ್ಥಿಕ ನೆರವು ವಿಸ್ತರಣೆ ನಿರ್ಧಾರ ಕೈಗೊಳ್ಳಲಾಗಿದೆ.
ನಮ್ಮ ಮೆಟ್ರೋದ ಮೊದಲ ಹಂತದಲ್ಲಿ ಪ್ರಸ್ತುತ ಇರುವ ಎರಡು ಕಾರಿಡಾರ್ ಅಂದರೆ ಪೂರ್ವ-ಪಶ್ಚಿಮ ಕಾರಿಡಾರ್ ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ಗಳ ವಿಸ್ತರಣೆ ಕಾರ್ಯವನ್ನು ಎರಡನೇ ಹಂತದ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಎರಡು ಹೊಸ ಮಾರ್ಗಗಳ ಕಾಮಗಾರಿಯೂ ಸೇರಿದೆ. ಈ ಮಾರ್ಗಗಳು ನಗರದ ಕೆಲವು ಅತಿಹೆಚ್ಚಿನ ಜನಸಂದಣಿಯ ಮತ್ತು ವಾಹನ ದಟ್ಟಣೆಯ ಭಾಗಗಳಲ್ಲಿ ಹಾದು ಹೋಗಲಿದೆ.
ಯೋಜನೆಯ ಎರಡನೇ ಹಂತ ಸಂಪರ್ಕವನ್ನು ಹೆಚ್ಚಿಸಲಿದ್ದು, ಬೆಂಗಳೂರಿನ ಜನದಟ್ಟಣೆಯ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆ ನಿವಾರಿಸಲಿದೆ. ಎರಡನೇ ಹಂತ (72.9 ಕಿಲೋಮೀಟರ್) ಪೂರ್ಣಗೊಂಡರೆ ನಮ್ಮ ಮೆಟ್ರೋದ ಒಟ್ಟು ಹಳಿ ಮಾರ್ಗ 101 ನಿಲ್ದಾಣಗಳೊಂದಿಗೆ 114.39 ಕಿಲೋಮೀಟರ್ ನಷ್ಟಿರಲಿದೆ.
ಆರ್ ಇ ಸಿ ಲಿಮಿಟೆಡ್, ದೇಶಾದ್ಯಂತ ಇಂಧನ ವಲಯದ ಹಣಕಾಸು ಮತ್ತು ಅಭಿವೃದ್ಧಿಗೆ ಗಮನಹರಿಸಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಾಗಿದೆ. ಬಿ ಎಂ ಆರ್ ಸಿ ಎಲ್ ಗೆ ಹಣಕಾಸು ನೆರವು ನೀಡಿರುವುದು ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡಬೇಕೆಂಬ ಆರ್ ಇ ಸಿ ಯ ಉದ್ದೇಶದ ಭಾಗವಾಗಿದೆ. 1969 ರಲ್ಲಿ ಸ್ಥಾಪಿತವಾಗಿ ಆರ್ ಇ ಸಿ ಲಿಮಿಟೆಡ್, 50ಕ್ಕೂ ಹೆಚ್ಚು ವರ್ಷಗಳ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಇಂಧನ ವಲಯದ ಇಡೀ ಸರಪಳಿಗೆ ಅಂದರೆ ಉತ್ಪಾದನೆ, ಪ್ರಸರಣ, ಹಂಚಿಕೆ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ಬಗೆಯ ಯೋಜನೆಗಳಿಗೆ ಹಣಕಾಸು ನೆರವು ನೀಡುತ್ತದೆ. ಆರ್ ಇ ಸಿ ನೆರವಿನಿಂದಾಗಿ ಭಾರತದಲ್ಲಿ ಪ್ರತಿ ನಾಲ್ಕನೇ ದೀಪ ಬೆಳಗುತ್ತಿದೆ.
*****
(Release ID: 1935222)
Visitor Counter : 125