ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿಗಳನ್ನು ಭೇಟಿಯಾದ ವಿಯೆಟ್ನಾಂನ ರಕ್ಷಣಾ ಸಚಿವರು

Posted On: 19 JUN 2023 6:48PM by PIB Bengaluru

ವಿಯೆಟ್ನಾಂನ ರಕ್ಷಣಾ ಸಚಿವ ಜನರಲ್ ಫಾನ್ ವಾನ್ ಜಿಯಾಂಗ್ ಅವರು ಇಂದು (ಜೂನ್ 19, 2023) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಜನರಲ್ ಜಿಯಾಂಗ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಿದ ರಾಷ್ಟ್ರಪತಿಗಳು, ಭಾರತ ಮತ್ತು ವಿಯೆಟ್ನಾಂ ದೇಶಗಳು 2000 ವರ್ಷಗಳಿಂದಲೂ ನಾಗರಿಕ ಹಾಗೂ ಸಾಂಸ್ಕೃತಿಕ ಬಂಧದ ಶ್ರೀಮಂತ ಇತಿಹಾಸವನ್ನು ಹಂಚಿಕೊಂಡಿವೆ ಎಂದು ಹೇಳಿದರು. ವಿಯೆಟ್ನಾಂ, ಭಾರತದ ʻಆಕ್ಟ್ ಈಸ್ಟ್ ಪಾಲಿಸಿʼಯ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ಇಂಡೋ-ಪೆಸಿಫಿಕ್ ದೃಷ್ಟಿಕೋನದ ಪ್ರಮುಖ ಪಾಲುದಾರ ಸಹ ಹೌದು ಎಂದು ಅವರು ಹೇಳಿದರು. ಭಾರತ-ವಿಯೆಟ್ನಾಂ ನಡುವಿನ 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಯು ರಕ್ಷಣಾ ಮತ್ತು ಭದ್ರತಾ ಸಹಕಾರ, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು, ಇಂಧನ ಭದ್ರತೆ, ಅಭಿವೃದ್ಧಿ ಸಹಕಾರ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಉಭಯ ದೇಶಗಳ ದ್ವಿಪಕ್ಷೀಯ ಸಹಯೋಗದ ವ್ಯಾಪ್ತಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು. ದ್ವಿಪಕ್ಷೀಯ ರಕ್ಷಣಾ ಸಹಕಾರವು ಈ ಪಾಲುದಾರಿಕೆಯ ಬಲವಾದ ಅಂಶಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು. ಭಾರತ-ವಿಯೆಟ್ನಾಂ ನಡುವಿನ ರಕ್ಷಣಾ ಕಾರ್ಯಕ್ರಮವು ಸಾಮರ್ಥ್ಯ ವರ್ಧನೆ, ಉದ್ಯಮ ಸಹಕಾರ, ಶಾಂತಿಪಾಲನೆ ಮತ್ತು ಜಂಟಿ ಸಮರಾಭ್ಯಾಸಗಳು ಸೇರಿದಂತೆ ವ್ಯಾಪಕ ಅಂಶಗಳನ್ನು ಒಳಗೊಂಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

*****

 



(Release ID: 1933475) Visitor Counter : 104