ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು "ಬಿಪರ್‌ಜಾಯ್" ಚಂಡಮಾರುತದ ಸನ್ನದ್ಧತೆಯನ್ನು ಪರಿಶೀಲಿಸಲು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಚಂಡಮಾರುತದ ನಿರೀಕ್ಷಿತ ಹಾದಿಯಲ್ಲಿ ವಾಸಿಸುವ ಜನರನ್ನು ರಕ್ಷಿಸಲು ಸ್ಥಳೀಯ ಆಡಳಿತವು ಕೈಗೊಂಡಿರುವ ಸನ್ನದ್ಧತೆ ಮತ್ತು ಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಿಸಿದರು
'ಶೂನ್ಯ ಸಾವುನೋವು' ಖಾತರಿಪಡಿಸುವುದು ಮತ್ತು "ಬಿಪರ್ಜಾಯ್" ಚಂಡಮಾರುತದಿಂದ ಉಂಟಾಗುವ ಸಂಭಾವ್ಯ ಹಾನಿಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜೂನ್ 12ರಂದು ನಡೆದ ಪರಿಶೀಲನಾ ಸಭೆಯಲ್ಲಿ ಅವರು ನೀಡಿದ ಪ್ರಮುಖ ನಿರ್ದೇಶನಗಳ ಬಗ್ಗೆ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕಿದೆ
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರವು ಸಾಕಷ್ಟು ಸಂಖ್ಯೆಯ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಿದೆ; ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಘಟಕಗಳು ಹಾಗೂ ಪರಿಕರಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಹಾಯಕ್ಕಾಗಿ ನಿಯೋಜಿಸಲಾಗಿದೆ
ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ; ಅಲ್ಲದೆ, ಭಾರತ ಸರ್ಕಾರದ ಎಲ್ಲಾ ಸಂಸ್ಥೆಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ
ಗುಜರಾತ್ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ ಗೃಹ ಸಚಿವರು
Posted On:
13 JUN 2023 7:37PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು "ಬಿಪರ್‌ಜಾಯ್" ಚಂಡಮಾರುತದ ಸನ್ನದ್ಧತೆಯನ್ನು ಪರಿಶೀಲಿಸಲು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಮತ್ತು ಶ್ರೀ ಪುರುಷೋತ್ತಮ್ ರೂಪಾಲ, ಗುಜರಾತ್ ಸರ್ಕಾರದ ಹಲವಾರು ಸಚಿವರು, ಸಂಸದರು, ಶಾಸಕರು, ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದರು. ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾನಿರ್ದೇಶಕರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ಸದಸ್ಯ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಅತ್ಯಂತ ತೀವ್ರವಾದ ಚಂಡಮಾರುತ 'ಬಿಪರ್‌ಜಾಯ್'ನ ಪ್ರಸ್ತುತ ಸ್ಥಿತಿಯ ಬಗ್ಗೆ ಐಎಂಡಿ ಮಹಾನಿರ್ದೇಶಕರು ಕೇಂದ್ರ ಗೃಹ ಸಚಿವರಿಗೆ ವಿವರಿಸಿದರು. ಜೂನ್ 15ರ ಮಧ್ಯಾಹ್ನದ ವೇಳೆಗೆ ಜಾಖೌ ಬಂದರು (ಗುಜರಾತ್) ಬಳಿ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಸೌರಾಷ್ಟ್ರ ಮತ್ತು ಕಚ್ ಹಾಗೂ ಪಕ್ಕದ ಪಾಕಿಸ್ತಾನ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಚಂಡಮಾರುತದ ನಿರೀಕ್ಷಿತ ಹಾದಿಯಲ್ಲಿ ವಾಸಿಸುವ ಜನರನ್ನು ರಕ್ಷಿಸಲು ಸ್ಥಳೀಯ ಆಡಳಿತವು ಕೈಗೊಂಡಿರುವ ಸನ್ನದ್ಧತೆ ಮತ್ತು ಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಿಸಿದರು. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಮತ್ತು ಸಮುದ್ರದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಒಟ್ಟು 21,595 ದೋಣಿಗಳು, 27 ಹಡಗುಗಳು ಮತ್ತು 24 ದೊಡ್ಡ ಹಡಗುಗಳನ್ನು ಇಲ್ಲಿಯವರೆಗೆ ನಿಲ್ಲಿಸಲಾಗಿದೆ. ಸ್ಥಳಾಂತರಿಸುವ ಉದ್ದೇಶಕ್ಕಾಗಿ ಸೂಕ್ಷ್ಮ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಚಂಡಮಾರುತದಿಂದ ಬಾಧಿತವಾಗುವ ಪ್ರದೇಶಗಳಲ್ಲಿ 450 ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಮತ್ತು ಅಗತ್ಯ ಔಷಧಿಗಳ ಪೂರೈಕೆಯನ್ನು ಖಚಿತಪಡಿಸಲಾಗಿದೆ ಎಂದು ಶ್ರೀ ಪಟೇಲ್ ಮಾಹಿತಿ ನೀಡಿದರು. ಸಾಕಷ್ಟು ಆಶ್ರಯ ಶಿಬಿರಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಸರಬರಾಜನ್ನು ಖಚಿತಪಡಿಸಿಕೊಳ್ಳಲು 597 ತಂಡಗಳನ್ನು ನಿಯೋಜಿಸಲಾಗಿದೆ. ʻಎನ್ಡಿಆರ್ಎಫ್ʼನ 18 ತಂಡಗಳು ಮತ್ತು ʻಎಸ್ಡಿಆರ್ಎಫ್ʼನ 12 ತಂಡಗಳನ್ನು ಸಹ ನಿಯೋಜಿಸಲಾಗಿದೆ.
'ಶೂನ್ಯ ಸಾವುನೋವು' ಖಾತರಿಪಡಿಸುವುದು ಮತ್ತು "ಬಿಪರ್ಜಾಯ್" ಚಂಡಮಾರುತದಿಂದ ಉಂಟಾಗುವ ಸಂಭಾವ್ಯ ಹಾನಿಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜೂನ್ 12ರಂದು ನಡೆದ ಪರಿಶೀಲನಾ ಸಭೆಯಲ್ಲಿ ಅವರು ನೀಡಿದ ಪ್ರಮುಖ ನಿರ್ದೇಶನಗಳ ಬಗ್ಗೆ ತ್ವರಿತವಾಗಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆಯಿದೆ ಎಂದು ಗೃಹ ಸಚಿವರು ಹೇಳಿದರು.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರವು ಸಾಕಷ್ಟು ಸಂಖ್ಯೆಯ ʻಎನ್ಡಿಆರ್ಎಫ್ʼ ತಂಡಗಳನ್ನು ನಿಯೋಜಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರೊಂದಿಗೆ, ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆ ಘಟಕಗಳು ಹಾಗೂ ರಕ್ಷಣಾ ಸಲಕರಣಗಳನ್ನು ಅಗತ್ಯಗಳಿಗೆ ಅನುಗುಣವಾಗಿ ಸಹಾಯಕ್ಕಾಗಿ ನಿಯೋಜಿಸಲಾಗಿದೆ. ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ ಎಂದು ಅವರು ಹೇಳಿದರು. ಶ್ರೀ ಶಾ ಅವರು ಗುಜರಾತ್ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದರು.
ಸೂಕ್ಷ್ಮ ಸ್ಥಳಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹಾಗೂ ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರಿನಂತಹ ಎಲ್ಲಾ ಅಗತ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಕೇಂದ್ರ ಗೃಹ ಸಚಿವರು ಗುಜರಾತ್ ಸರ್ಕಾರಕ್ಕೆ ಸೂಚಿಸಿದರು. ಯಾವುದೇ ಹಾನಿಯ ಸಂದರ್ಭದಲ್ಲಿ, ಈ ಸೇವೆಗಳನ್ನು ತಕ್ಷಣವೇ ಪುನಃಸ್ಥಾಪಿಸುವ ರೀತಿಯಲ್ಲಿ ನಮ್ಮ ಸನ್ನದ್ಧತೆ ಇರಬೇಕು ಎಂದು ಅವರು ಹೇಳಿದರು. ಎಲ್ಲಾ ಆಸ್ಪತ್ರೆಗಳಲ್ಲಿ ಮೊಬೈಲ್ ಮತ್ತು ಲ್ಯಾಂಡ್ಲೈನ್ ಸಂಪರ್ಕ ಮತ್ತು ವಿದ್ಯುತ್ಗೆ ಪರ್ಯಾಯ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಶ್ರೀ ಶಾ ನಿರ್ದೇಶನ ನೀಡಿದರು. ಚಂಡಮಾರುತವು 8-10 ಇಂಚು ಮಳೆಯನ್ನು ತರುವ ನಿರೀಕ್ಷೆಯಿದೆ, ಇದು ಕಛ್ ಮತ್ತು ಸೌರಾಷ್ಟ್ರದಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ಗೃಹ ಸಚಿವರು ಹೇಳಿದರು. ಅದನ್ನು ಎದುರಿಸಲು ಅಗತ್ಯವಾದ ಸಿದ್ಧತೆಗಳನ್ನು ಪರಿಶೀಲಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಶ್ರೀ ಶಾ ಅವರು ಸೋಮನಾಥ ಮತ್ತು ದ್ವಾರಕಾ ದೇವಾಲಯದ ಸುತ್ತಲೂ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಕೇಳಿಕೊಂಡರು. ಪ್ರಧಾನಮಂತ್ರಿಯವರ ನಿರ್ದೇಶನದಂತೆ ಗಿರ್ ಅರಣ್ಯದಲ್ಲಿ ಪ್ರಾಣಿಗಳು ಮತ್ತು ಮರಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಶ್ರೀ ಅಮಿತ್ ಶಾ ಅವರು ಗುಜರಾತ್ನ ಸಂಸದರು ಮತ್ತು ಶಾಸಕರಿಗೆ ಆಯಾ ಪ್ರದೇಶಗಳಲ್ಲಿ ಚಂಡಮಾರುತದ ಅಪಾಯದ ಬಗ್ಗೆ ಅರಿವು ಮೂಡಿಸಿ, ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.
****
(Release ID: 1932269)
Visitor Counter : 129