ಪ್ರಧಾನ ಮಂತ್ರಿಯವರ ಕಛೇರಿ
ಸ್ವಿಜರ್ ಲೆಂಡ್‌ನ ಜಿನೀವಾದಲ್ಲಿ ವಿಶ್ವ ಆರೋಗ್ಯ ಶೃಂಗಸಭೆಯ 76 ನೇ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
Posted On:
21 MAY 2023 7:04PM by PIB Bengaluru
ಗೌರವಾನ್ವಿತ ಗಣ್ಯರೆ, ಅತಿಥಿಗಳೆ ಮತ್ತು ನಿಯೋಗಗಳ ಪ್ರತಿನಿಧಿಗಳೆ, ಎಲ್ಲರಿಗೂ ನಮಸ್ಕಾರ!
ಜಿನೀವಾದಲ್ಲಿ ವಿಶ್ವ ಆರೋಗ್ಯ ಶೃಂಗಸಭೆ(ಅಸೆಂಬ್ಲಿ)ಯ 76ನೇ ಅಧಿವೇಶನದಲ್ಲಿ ಭಾಗವಹಿಸಿರುವ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. 75 ವರ್ಷಗಳ ಕಾಲ ಜಗತ್ತಿಗೆ ಸೇವೆ ಸಲ್ಲಿಸುವ ಐತಿಹಾಸಿಕ ಮೈಲಿಗಲ್ಲು ಪೂರ್ಣಗೊಳಿಸಿದ್ದಕ್ಕಾಗಿ ನಾನು ವಿಶ್ವ ಆರೋಗ್ಯ ಸಂಘಟನೆ(WHO)ಯನ್ನು ಅಭಿನಂದಿಸುತ್ತೇನೆ. ವಿಶ್ವ ಆರೋಗ್ಯ ಸಂಘಟನೆ 100 ವರ್ಷಗಳ ಸುದೀರ್ಘ ಸೇವೆಯ ಕಾಲಾವಧಿ ತಲುಪಿರುವಾಗ ಮುಂದಿನ 25 ವರ್ಷಗಳ ಗುರಿಗಳನ್ನು ನಿಗದಿಪಡಿಸುತ್ತದೆ ಎಂಬುದು ನನಗೆ ಖಾತ್ರಿಯಿದೆ.
ಸ್ನೇಹಿತರೆ,
ಕೋವಿಡ್-19 ಸಾಂಕ್ರಾಮಿಕವು ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಸಹಯೋಗದ ಅಗತ್ಯವನ್ನು ನಮಗೆ ತೋರಿಸಿದೆ. ಸಾಂಕ್ರಾಮಿಕ ರೋಗವು ಜಾಗತಿಕ ಆರೋಗ್ಯ ವಾಸ್ತಶಿಲ್ಪದಲ್ಲಿ ಅನೇಕ ಅಂತರ, ಕಂದಕಗಳನ್ನು ಎತ್ತಿ ತೋರಿಸಿದೆ. ಜಾಗತಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಸಸುಧಾರಣಾ ಅಥವಾ ಚೇತರಿಕೆಯ ವ್ಯವಸ್ಥೆ ನಿರ್ಮಿಸಿಕೊಳ್ಳಲು ಸಾಮೂಹಿಕ ಅಥವಾ ಸಂಘಟಿತ ಪ್ರಯತ್ನದ ಅಗತ್ಯವಿದೆ.
ಸ್ನೇಹಿತರೆ,
ಸಾಂಕ್ರಾಮಿಕ ರೋಗವು ಜಾಗತಿಕ ಆರೋಗ್ಯ ಪಾಲನ್ನು ಹೆಚ್ಚಿಸುವ ಅಗತ್ಯವನ್ನು ಸಹ ಎತ್ತಿ ತೋರಿಸಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಅಂತಾರಾಷ್ಟ್ರೀಯ ಸಹಕಾರಕ್ಕೆ ತನ್ನ ಬದ್ಧತೆಯನ್ನು ತೋರಿಸಿದೆ. ನಾವು ಸುಮಾರು 300 ದಶಲಕ್ಷ ಡೋಸ್ ಲಸಿಕೆಗಳನ್ನು 100ಕ್ಕಿಂತ ಅಧಿಕ ದೇಶಗಳಿಗೆ ರವಾನಿಸಿದ್ದೇವೆ. ಈ ದೇಶಗಳಲ್ಲಿ ಹಲವು ವಿಶ್ವದ ದಕ್ಷಿಣ ಭಾಗದ ರಾಷ್ಟ್ರಗಳು ಸಹ ಸೇರಿವೆ. ಸಂಪನ್ಮೂಲಗಳಿಗೆ ಸಮಾನ ಪ್ರವೇಶ ಮತ್ತು ಲಭ್ಯತೆ ಬೆಂಬಲಿಸುವುದು ಮುಂಬರುವ ವರ್ಷಗಳಲ್ಲಿ ವಿಶ್ವ ಆರೋಗ್ಯ ಸಂಘಟನೆಗೆ ಪ್ರಮುಖ ಆದ್ಯತೆಯಾಗಿದೆ ಎಂಬುದು ನನಗೆ ಖಾತ್ರಿಯಿದೆ.
ಸ್ನೇಹಿತರೆ,
ಅನಾರೋಗ್ಯದ ಅನುಪಸ್ಥಿತಿಯು ಉತ್ತಮ ಆರೋಗ್ಯದಂತೆ ಅಲ್ಲ ಎಂದು ಭಾರತದ ಸಾಂಪ್ರದಾಯಿಕ ಬುದ್ಧಿವಂತಿಕೆ ಅಥವಾ ತಿಳಿವಳಿಕೆ ಹೇಳುತ್ತದೆ. ನಾವು ಅನಾರೋಗ್ಯದಿಂದ ಮುಕ್ತರಾಗುವುದು ಮಾತ್ರವಲ್ಲದೆ, ಸ್ವಾಸ್ಥ್ಯದತ್ತ ಒಂದು ಹೆಜ್ಜೆ ಮುಂದೆ ಹೋಗಬೇಕು. ಯೋಗ, ಆಯುರ್ವೇದ ಮತ್ತು ಧ್ಯಾನದಂತಹ ಸಾಂಪ್ರದಾಯಿಕ ವ್ಯವಸ್ಥೆಗಳು ಆರೋಗ್ಯದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳನ್ನು ತಿಳಿಸುತ್ತವೆ. ವಿಶ್ವ ಆರೋಗ್ಯ ಸಂಘಟನೆಯ ಮೊದಲ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಭಾರತದಲ್ಲಿ (ಗುಜರಾತ್) ಸ್ಥಾಪಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಮೂಲಕ ಜಗತ್ತು ಸಿರಿಧಾನ್ಯಗಳ ಮಹತ್ವವನ್ನು ಗುರುತಿಸುತ್ತಿರುವುದು ನನಗೂ ಖುಷಿ ತಂದಿದೆ.
ಸ್ನೇಹಿತರೆ,
ಭಾರತದ ಪ್ರಾಚೀನ ಗ್ರಂಥಗಳು ಜಗತ್ತನ್ನು ಒಂದೇ ಕುಟುಂಬವಾಗಿ ನೋಡಲು ಕಲಿಸುತ್ತವೆ- ವಸುದೈವ ಕುಟುಂಬಕಂ. ಈ ವರ್ಷ ನಮ್ಮ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ, ನಾವು ''ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'' ಎಂಬ ಘೋಷವಾಕ್ಯ(ವಿಷಯ)ದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಉತ್ತಮ ಆರೋಗ್ಯಕ್ಕಾಗಿ ನಮ್ಮ ದೃಷ್ಟಿ ''ಒಂದು ಭೂಮಿ ಒಂದು ಆರೋಗ್ಯ''. ನಮ್ಮ ಇಡೀ ಪರಿಸರ ವ್ಯವಸ್ಥೆಯು ಆರೋಗ್ಯಕರವಾಗಿದ್ದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಆದ್ದರಿಂದ, ನಮ್ಮ ದೃಷ್ಟಿ ಕೇವಲ ಮನುಷ್ಯರಿಗೆ ಸೀಮಿತವಾಗಿಲ್ಲ. ಇದು ಪ್ರಾಣಿಗಳು, ಸಸ್ಯಗಳು ಮತ್ತು ಹವಾಮಾನ ಸೇರಿದಂತೆ ಸಂಪೂರ್ಣ ಪರಿಸರ ವ್ಯವಸ್ಥೆಗೆ ವಿಸ್ತರಿಸುತ್ತದೆ.
ಸ್ನೇಹಿತರೆ,
ಕಳೆದ ಕೆಲವು ವರ್ಷಗಳಲ್ಲಿ ಭಾರತವು ಆರೋಗ್ಯ ಸೇವೆಯ ಲಭ್ಯತೆ, ಪ್ರವೇಶ ಮತ್ತು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು ಹೆಚ್ಚಿನ ಕೆಲಸ ಮಾಡಿದೆ. ಆಯುಷ್ಮಾನ್ ಭಾರತ್ - ಇದು ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಅಥವಾ ಆರೋಗ್ಯ ಮೂಲಸೌಕರ್ಯಗಳ ಬೃಹತ್ ಹೆಚ್ಚಳ ಅಥವಾ ಲಕ್ಷಾಂತರ ಕುಟುಂಬಗಳಿಗೆ ನೈರ್ಮಲ್ಯ ಮತ್ತು ಕುಡಿಯುವ ನೀರು ಒದಗಿಸುವುದು... ಈ ರೀತಿಯ ನಮ್ಮ ಅನೇಕ ಪ್ರಯತ್ನಗಳು ಕೊನೆಯ ಮೈಲಿಯಲ್ಲಿ ನೆಲೆಸಿರುವ ಜನರ ಆರೋಗ್ಯವನ್ನು ಹೆಚ್ಚಿಸುವ ಗುರಿ ಹೊಂದಿವೆ. ಭಾರತದ ವೈವಿಧ್ಯತೆಯ ಪ್ರಮಾಣದೊಂದಿಗೆ ಕೆಲಸ ಮಾಡುವ ಒಂದು ಕಾರ್ಯ ವಿಧಾನವು ಇತರರಿಗೆ ಒಂದು ಮಾರ್ಗಸೂಚಿಯಾಗಿರಬಹುದು. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಿಶ್ವ ಆರೋಗ್ಯ ಸಂಘಟನೆಯು ಇದೇ ರೀತಿಯ ಪ್ರಯತ್ನಗಳನ್ನು ನಡೆಸಿದರೆ ಅವುಗಳಿಗೆ ಬೆಂಬಲ ನೀಡಲು ನಾವು ಉತ್ಸುಕರಾಗಿದ್ದೇವೆ.
ಸ್ನೇಹಿತರೆ,
ಎಲ್ಲರಿಗೂ ಆರೋಗ್ಯ ಹೆಚ್ಚಿಸುವ ವಿಶ್ವ ಆರೋಗ್ಯ ಸಂಘಟನೆಯ 75 ವರ್ಷಗಳ ಪ್ರಯತ್ನಗಳಿಗಾಗಿ ನಾನು ಆ ಮಹಾಸಂಸ್ಥೆಯನ್ನು ಶ್ಲಾಘಿಸಲು ಬಯಸುತ್ತೇನೆ. ಡಬ್ಲ್ಯುಎಚ್ಒನಂತಹ ಜಾಗತಿಕ ಸಂಸ್ಥೆಗಳ ಪಾತ್ರವು ಹಿಂದೆ ಖಂಡಿತವಾಗಿಯೂ ಮಹತ್ವದ್ದಾಗಿತ್ತು. ಆದರೆ ಸವಾಲುಗಳಿಂದ ಕೂಡಿದ ಭವಿಷ್ಯದಲ್ಲಿ ಇದು ಇನ್ನಷ್ಟು ಮಹತ್ವದ್ದಾಗಿದೆ. ಆರೋಗ್ಯಕರ ಜಗತ್ತನ್ನು ನಿರ್ಮಿಸುವ ಪ್ರತಿಯೊಂದು ಪ್ರಯತ್ನಕ್ಕೂ ಸಹಾಯ ಮಾಡಲು ಭಾರತ ಬದ್ಧವಾಗಿದೆ. ಧನ್ಯವಾದ, ತುಂಬು ಧನ್ಯವಾದಗಳು!
****
(Release ID: 1930921)
Visitor Counter : 121
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam