ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ7 ಶೃಂಗಸಭೆಯ 6ನೇ ಕಾರ್ಯಕಾರಿ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಉದ್ಘಾಟನಾ ಭಾಷಣ


ಕಾರ್ಯಕಾರಿ ಅಧಿವೇಶನ 6: ಆಹಾರ, ಆರೋಗ್ಯ, ಅಭಿವೃದ್ಧಿ, ಲಿಂಗಭೇದ ಸೇರಿದಂತೆ ಹಲವಾರು ಬಿಕ್ಕಟ್ಟುಗಳನ್ನು ಪರಿಹರಿಸಲು ಜತೆಗೂಡಿ ಕೆಲಸ ಮಾಡುವುದು

Posted On: 20 MAY 2023 4:24PM by PIB Bengaluru

ಗೌರವಾನ್ವಿತ ಗಣ್ಯರೆ,

ಮೊದಲನೆಯದಾಗಿ, ಜಿ-7 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಾನು ಜಪಾನ್‌ ಪ್ರಧಾನ ಮಂತ್ರಿ, ಗೌರವಾನ್ವಿತ ಕಿಶಿದಾ ಅವರನ್ನು ಅಭಿನಂದಿಸುತ್ತೇನೆ. ಜಾಗತಿಕ ಆಹಾರ ಭದ್ರತೆಯ ವಿಷಯ ಕುರಿತು ಈ ವೇದಿಕೆಯಲ್ಲಿ ನಾನು ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ:

ವಿಶ್ವದ ಅತ್ಯಂತ ದುರ್ಬಲ ಜನರನ್ನು, ವಿಶೇಷವಾಗಿ ಕನಿಷ್ಠ ರೈತರ ಮೇಲೆ ಕೇಂದ್ರೀಕರಿಸುವ ಎಲ್ಲರನ್ನೂ ಒಳಗೊಂಡ ಆಹಾರ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಬೇಕು. ಜಾಗತಿಕ ರಸಗೊಬ್ಬರ ಪೂರೈಕೆ ಸರಪಳಿಗಳನ್ನು ಬಲಪಡಿಸಬೇಕು. ಅದರಲ್ಲಿರುವ ರಾಜಕೀಯ ಅಡೆತಡೆಗಳನ್ನು ನಿವಾರಿಸಬೇಕು. ರಸಗೊಬ್ಬರ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಸ್ತರಣಾ ಮನೋಭಾವ ನಿಲ್ಲಿಸಬೇಕು. ಇವು ನಮ್ಮೆಲ್ಲರ ಸಹಕಾರದ ಉದ್ದೇಶಗಳಾಗಿರಬೇಕು.

ವಿಶ್ವಾದ್ಯಂತ ರಸಗೊಬ್ಬರಗಳಿಗೆ ಪರ್ಯಾಯವಾಗಿ, ನಾವು ನೈಸರ್ಗಿಕ ಕೃಷಿಯ ಹೊಸ ಮಾದರಿ ರೂಪಿಸಬಹುದು. ವಿಶ್ವದ ಪ್ರತಿಯೊಬ್ಬ ರೈತನಿಗೆ ಡಿಜಿಟಲ್ ತಂತ್ರಜ್ಞಾನದ ಪ್ರಯೋಜನವನ್ನು ಒದಗಿಸಬೇಕು ಎಂದು ನಾನು ನಂಬುತ್ತೇನೆ. ಸಾವಯವ ಆಹಾರವನ್ನು ಫ್ಯಾಶನ್ ಹೇಳಿಕೆಗಳು ಮತ್ತು ವಾಣಿಜ್ಯದಿಂದ ಬೇರ್ಪಡಿಸಬೇಕು. ಅದನ್ನು ಪೋಷಣೆ ಮತ್ತು ಆರೋಗ್ಯದೊಂದಿಗೆ ಸಂಪರ್ಕಿಸುವುದು ನಮ್ಮ ಪ್ರಯತ್ನವಾಗಿರಬೇಕು.

ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ಪೌಷ್ಟಿಕಾಂಶ, ಹವಾಮಾನ ಬದಲಾವಣೆ, ನೀರಿನ ಸಂರಕ್ಷಣೆ ಮತ್ತು ಆಹಾರ ಭದ್ರತೆಯ ಸವಾಲುಗಳನ್ನು ಸಿರಿಧಾನ್ಯಗಳು ಒಂದೇ ಸಮಯದಲ್ಲಿ ಪರಿಹರಿಸುತ್ತವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಆಹಾರ ವ್ಯರ್ಥವಾಗುವುದನ್ನು ತಡೆಯುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಬೇಕು. ಸುಸ್ಥಿರ ಜಾಗತಿಕ ಆಹಾರ ಭದ್ರತೆಗೆ ಇದು ಅತ್ಯಗತ್ಯ.

ಗೌರವಾನ್ವಿತ ಗಣ್ಯರೆ,

ಕೋವಿಡ್ ಸಾಂಕ್ರಾಮಿಕ ಸೋಂಕು ಮಾನವತೆಯ ಸಹಕಾರ ಮತ್ತು ಸಹಾಯದ ದೃಷ್ಟಿಕೋನವನ್ನು ಪ್ರಶ್ನಿಸಿದೆ. ಲಸಿಕೆ ಮತ್ತು ಔಷಧಿಗಳ ಲಭ್ಯತೆಯು ಮಾನವ ಕಲ್ಯಾಣದ ಬದಲಿಗೆ ರಾಜಕೀಯಕ್ಕೆ ಸಂಬಂಧಿಸಿದೆ. ಆರೋಗ್ಯ ಭದ್ರತೆಯ ಭವಿಷ್ಯದ ರೂಪ ಹೇಗಿರಬೇಕು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾನು ಕೆಲವು ಸಲಹೆಗಳನ್ನು ನೀಡುತ್ತೇನೆ:

ಚೇತರಿಸಿಕೊಳ್ಳುವ ಆರೋಗ್ಯ ವ್ಯವಸ್ಥೆಗಳ ಸ್ಥಾಪನೆಯು ನಮ್ಮ ಆದ್ಯತೆಯಾಗಬೇಕು. ಸಮಗ್ರ ಆರೋಗ್ಯ ರಕ್ಷಣೆ ನಮ್ಮ ಧ್ಯೇಯವಾಗಬೇಕು. ನಮ್ಮ ಸಹಕಾರದ ಉದ್ದೇಶವು ಸಾಂಪ್ರದಾಯಿಕ ಔಷಧದ ಪ್ರಸರಣ, ಪೂರೈಕೆ, ವಿಸ್ತರಣೆ ಮತ್ತು ಜಂಟಿ ಸಂಶೋಧನೆಯಾಗಿರಬೇಕು.

ಒಂದು ಭೂಮಿ-ಒಂದು ಆರೋಗ್ಯ ನಮ್ಮ ತತ್ವವಾಗಬೇಕು. ಡಿಜಿಟಲ್ ಆರೋಗ್ಯ, ಸಾರ್ವತ್ರಿಕ ಆರೋಗ್ಯ ರಕ್ಷಣೆ ನಮ್ಮ ಗುರಿಯಾಗಬೇಕು.

ಮನುಕುಲದ ಸೇವೆಯಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಮತ್ತು ದಾದಿಯರ ಚಲನಶೀಲತೆ ನಮ್ಮ ಆದ್ಯತೆಯಾಗಬೇಕು.

ಗೌರವಾನ್ವಿತ ಗಣ್ಯರೆ,

ಅಭಿವೃದ್ಧಿಯ ಮಾದರಿಯು ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಗತಿಗೆ ಅಡ್ಡಿಯಾಗಬಾರದು ಎಂದು ನಾನು ನಂಬುತ್ತೇನೆ. ಗ್ರಾಹಕೀಕರಣದಿಂದ ಪ್ರೇರಿತವಾದ ಅಭಿವೃದ್ಧಿ ಮಾದರಿ ಬದಲಾಗಬೇಕು. ನೈಸರ್ಗಿಕ ಸಂಪನ್ಮೂಲಗಳ ಸಮಗ್ರ ಬಳಕೆಗೆ ಒತ್ತು ನೀಡುವ ಅಗತ್ಯವಿದೆ. ನಾವು ಅಭಿವೃದ್ಧಿ, ತಂತ್ರಜ್ಞಾನ ಮತ್ತು ಪ್ರಜಾಪ್ರಭುತ್ವವನ್ನು ಒಟ್ಟಾಗಿ ಕೇಂದ್ರೀಕರಿಸಬೇಕಾಗಿದೆ. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು ಮುಖ್ಯವಾಗಿದೆ. ತಂತ್ರಜ್ಞಾನವು ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ನಡುವಿನ ಸಂಪರ್ಕ ಸೇತುವೆಯಾಗಬಲ್ಲದು.

ಶ್ರೇಷ್ಠ ಗಣ್ಯರೆ,

ಇಂದು ಮಹಿಳಾ ಅಭಿವೃದ್ಧಿ ಭಾರತದಲ್ಲಿ ಚರ್ಚೆಯ ವಿಷಯವಲ್ಲ, ಏಕೆಂದರೆ ಇಂದು ನಾವು ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಪ್ರವರ್ತಕರಾಗಿದ್ದೇವೆ. ಭಾರತದ ರಾಷ್ಟ್ರಪತಿ ಸಹ ಒಬ್ಬ ಮಹಿಳೆ, ಅವರು ಬುಡಕಟ್ಟು ಪ್ರದೇಶದಿಂದ ಬಂದವರು. 33% ಸೀಟುಗಳನ್ನು ತಳಮಟ್ಟದಲ್ಲಿ ಮಹಿಳೆಯರಿಗೆ ಮೀಸಲಿಡಲಾಗಿದೆ. ಅವರು ನಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದಾರೆ. ತೃತೀಯ ಲಿಂಗಿಗಳ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು, ನಾವು ಕಾನೂನು ರೂಪಿಸಿದ್ದೇವೆ. ಭಾರತದಲ್ಲಿ ಸಂಪೂರ್ಣವಾಗಿ ತೃತೀಯ ಲಿಂಗಿಗಳಿಂದ ನಡೆಸಲ್ಪಡುವ ರೈಲು ನಿಲ್ದಾಣವಿದೆ ಎಂಬುದನ್ನು ತಿಳಿದರೆ ನಿಮಗೆ ಸಂತೋಷವಾಗುತ್ತದೆ.

ಗೌರವಯುತ ಗಣ್ಯರೆ,

ಜಿ-20 ಮತ್ತು ಜಿ-7 ಕಾರ್ಯಸೂಚಿಯ ನಡುವೆ ಪ್ರಮುಖ ಸಂಪರ್ಕ ನಿರ್ಮಿಸುವಲ್ಲಿ ನಮ್ಮ ಇಂದಿನ ಚರ್ಚೆಗಳು ತೀರಾ ಪ್ರಯೋಜನಕಾರಿ ಎಂದು ನಾನು ನಂಬುತ್ತೇನೆ. ಇದರಿಂದ ಜಾಗತಿಕ ದಕ್ಷಿಣ ಭಾಗದ ರಾಷ್ಟ್ರಗಳ ಭರವಸೆಗಳು ಮತ್ತು ನಿರೀಕ್ಷೆಗಳಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

 

*****

 


(Release ID: 1928720) Visitor Counter : 123