ಪ್ರಧಾನ ಮಂತ್ರಿಯವರ ಕಛೇರಿ

ರೋಜ್ಗಾರ್ ಮೇಳದ ಅಡಿಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಿದ ಭಾಷಣದ ಇಂಗ್ಲಿಷ್ ಅವತರಣಿಕೆ

Posted On: 16 MAY 2023 1:25PM by PIB Bengaluru

ನಮಸ್ಕಾರ,  ಸ್ನೇಹಿತರೇ!

ಇಂದು 70,000 ಕ್ಕೂ ಹೆಚ್ಚು ಯುವಜನರು ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗಕ್ಕಾಗಿ ನೇಮಕಾತಿ ಪತ್ರಗಳನ್ನು ಪಡೆಯುತ್ತಿದ್ದಾರೆ. ನೀವೆಲ್ಲರೂ ಕಠಿಣ ಪರಿಶ್ರಮದ ಮೂಲಕ ಈ ಯಶಸ್ಸನ್ನು ಸಾಧಿಸಿದ್ದೀರಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ. ಕೆಲವು ದಿನಗಳ ಹಿಂದೆ, ಗುಜರಾತಿನಲ್ಲಿ ಇದೇ ರೀತಿಯ 'ರೋಜ್ಗಾರ್ ಮೇಳ' (ಉದ್ಯೋಗ ಮೇಳ) ಆಯೋಜಿಸಲಾಗಿತ್ತು, ಅದರಲ್ಲಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಲಾಗಿತ್ತು. ಈ ತಿಂಗಳು ಅಸ್ಸಾಂನಲ್ಲಿ ಕೂಡಾ ದೊಡ್ಡ  ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಭಾರತ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಆಯೋಜಿಸುವ ಇಂತಹ ಉದ್ಯೋಗ ಮೇಳಗಳು ಯುವಜನರ ಬಗ್ಗೆ ನಮ್ಮ ಬದ್ಧತೆಯನ್ನು ತೋರಿಸುತ್ತವೆ.

ಸ್ನೇಹಿತರೇ!

ಕಳೆದ ಒಂಬತ್ತು ವರ್ಷಗಳಲ್ಲಿ ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ, ಹೆಚ್ಚು ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿಸಲು ಭಾರತ ಸರ್ಕಾರ ಆದ್ಯತೆ ನೀಡಿದೆ. ಈ ಮೊದಲು, ಸಿಬ್ಬಂದಿ ಆಯ್ಕೆ ಮಂಡಳಿಯು ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 15 ರಿಂದ 18 ತಿಂಗಳುಗಳನ್ನು ತೆಗೆದುಕೊಳ್ಳುತ್ತಿತ್ತು, ಅಂದರೆ ಸುಮಾರು ಒಂದೂವರೆ ವರ್ಷಗಳು. ಇಂದು ಈ ಪ್ರಕ್ರಿಯೆಯು ಆರರಿಂದ ಎಂಟು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಮೊದಲು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ತುಂಬಾ ಕಷ್ಟಕರವಾಗಿತ್ತು. ಅರ್ಜಿ ನಮೂನೆಯನ್ನು ಪಡೆಯಲು, ದಾಖಲೆಗಳನ್ನು ದೃಢೀಕರಿಸಲು ಗೆಜೆಟೆಡ್ ಅಧಿಕಾರಿಗಳನ್ನು ಹುಡುಕಲು ಮತ್ತು ನಂತರ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿತ್ತು. ಇದಲ್ಲದೆ, ಅರ್ಜಿಯು ಸಮಯಕ್ಕೆ ಸರಿಯಾಗಿ ತಲುಪಿದೆಯೇ ಅಥವಾ ಇಲ್ಲವೇ, ಮತ್ತು ಮುಖ್ಯವಾಗಿ, ಅಪೇಕ್ಷಿತ ವಿಭಾಗಕ್ಕೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದು ಸಹ ಖಚಿತವಾಗುತ್ತಿರಲಿಲ್ಲ. ಇಂದು ಅರ್ಜಿ ಸಲ್ಲಿಸುವುದರಿಂದ ಹಿಡಿದು ಫಲಿತಾಂಶ ಪಡೆಯುವವರೆಗಿನ ಸಂಪೂರ್ಣ ಪ್ರಕ್ರಿಯೆ ಆನ್ ಲೈನ್ ಆಗಿದೆ. ಇಂದು ದಾಖಲೆಯನ್ನು ಸ್ವಯಂ ದೃಢೀಕರಿಸಿದರೆ ಸಾಕು. ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ಸಂದರ್ಶನ ಸುತ್ತುಗಳನ್ನು ರದ್ದುಪಡಿಸಲಾಗಿದೆ. ಈ ಎಲ್ಲಾ ಪ್ರಯತ್ನಗಳ ಅತಿದೊಡ್ಡ ಪ್ರಯೋಜನವೆಂದರೆ ಭ್ರಷ್ಟಾಚಾರ ಅಥವಾ ಸ್ವಜನಪಕ್ಷಪಾತದ ಸಾಧ್ಯತೆಗಳು ಕೊನೆಗೊಂಡಿವೆ.

ಸ್ನೇಹಿತರೇ,

ಮತ್ತೊಂದು ಕಾರಣಕ್ಕಾಗಿ ಇಂದಿನ ದಿನ  ತುಂಬಾ ವಿಶೇಷವಾಗಿದೆ. ಒಂಬತ್ತು ವರ್ಷಗಳ ಹಿಂದೆ ಮೇ 16 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿತ್ತು. ಇಡೀ ದೇಶವು ಕುತೂಹಲ, ಉತ್ಸಾಹ ಮತ್ತು ವಿಶ್ವಾಸದಿಂದ ತುಂಬಿತ್ತು. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಂತ್ರದೊಂದಿಗೆ ಮುನ್ನಡೆಯುತ್ತಿರುವ ಭಾರತ ಇಂದು ಅಭಿವೃದ್ಧಿ ಹೊಂದಿದ ಭಾರತವಾಗಲು ಶ್ರಮಿಸುತ್ತಿದೆ. ಒಂಬತ್ತು ವರ್ಷಗಳ ಹಿಂದೆ ಮೇ 16 ರಂದು ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಿದಂತೆಯೇ, ಇಂದಿನದು  ಮತ್ತೊಂದು ಪ್ರಮುಖ ದಿನವಾಗಿದೆ. ಹಿಮಾಲಯದ ಮಡಿಲಲ್ಲಿರುವ ನಮ್ಮ ಪ್ರಮುಖ ರಾಜ್ಯಗಳಲ್ಲಿ ಒಂದಾದ ಸಿಕ್ಕಿಂನ ಸಂಸ್ಥಾಪನಾ ದಿನವೂ ಕೂಡಾ ಇಂದು.

ಸ್ನೇಹಿತರೇ,

ಈ ಒಂಬತ್ತು ವರ್ಷಗಳಲ್ಲಿ, ಉದ್ಯೋಗದ ಹೊಸ ಸಾಧ್ಯತೆಗಳನ್ನು ಕೇಂದ್ರವಾಗಿಟ್ಟುಕೊಂಡು ಸರ್ಕಾರದ ನೀತಿಗಳನ್ನು ರೂಪಿಸಲಾಯಿತು. ಆಧುನಿಕ ಮೂಲಸೌಕರ್ಯಗಳ ನಿರ್ಮಾಣವಾಗಲಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಿರಲಿ ಅಥವಾ ಬದುಕುಳಿಯುವಿಕೆಗೆ  ಸಂಬಂಧಿಸಿದ ಸೌಲಭ್ಯಗಳ ವಿಸ್ತರಣೆಯಾಗಿರಲಿ, ಭಾರತ ಸರ್ಕಾರದ ಪ್ರತಿಯೊಂದು ಯೋಜನೆ ಮತ್ತು ನೀತಿಯು ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೇ,

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ಸರ್ಕಾರವು ಮೂಲಭೂತ ಸೌಕರ್ಯಗಳಿಗಾಗಿ ಬಂಡವಾಳ ವೆಚ್ಚಕ್ಕಾಗಿ ಸುಮಾರು 34 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ವರ್ಷದ ಬಜೆಟ್ ನಲ್ಲಿ ಬಂಡವಾಳ ವೆಚ್ಚಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೊತ್ತದಿಂದ, ಹೊಸ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳು ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದೆ ಮತ್ತು ಅಂತಹ ಅಸಂಖ್ಯಾತ ಆಧುನಿಕ ಮೂಲಸೌಕರ್ಯಗಳ ನಿರ್ಮಾಣದಿಂದಾಗಿ ದೇಶದಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತವು ಇಂದು ಕೆಲಸ ಮಾಡುತ್ತಿರುವ ವೇಗ ಮತ್ತು ಪ್ರಮಾಣವು ಸ್ವಾತಂತ್ರ್ಯದ 75 ವರ್ಷಗಳ ಇತಿಹಾಸದಲ್ಲಿಯೇ ಅಭೂತಪೂರ್ವವಾದುದಾಗಿದೆ. ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ಭಾರತದಲ್ಲಿ ಕೇವಲ 20,000 ಕಿಲೋಮೀಟರ್ ರೈಲು ಮಾರ್ಗಗಳನ್ನು ಮಾತ್ರ ವಿದ್ಯುದ್ದೀಕರಿಸಲಾಗಿತ್ತು. ಅದಕ್ಕೆ ಬದಲಾಗಿ, ಕಳೆದ ಒಂಬತ್ತು ವರ್ಷಗಳಲ್ಲಿ ನಮ್ಮ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಸುಮಾರು 40,000 ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ. ಅಂದರೆ ದುಪ್ಪಟ್ಟು ಎಂದರ್ಥ. 2014 ರ ಮೊದಲು, ನಮ್ಮ ದೇಶದಲ್ಲಿ ಪ್ರತಿ ತಿಂಗಳು ಕೇವಲ 600 ಮೀಟರ್ ಹೊಸ ಮೆಟ್ರೋ ಮಾರ್ಗಗಳನ್ನು ಹಾಕಲಾಗುತ್ತಿತ್ತು. ಇಂದು ಇದು ಪ್ರತಿ ತಿಂಗಳು ಸರಾಸರಿ ಆರು ಕಿಲೋಮೀಟರ್ ಆಗಿದೆ. ಈ ಮೊದಲು ನಿರ್ಮಾಣದ ವೇಗವು ಮೀಟರ್ ಗಳಲ್ಲಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಿಲೋಮೀಟರ್ ಗಳಲ್ಲಿದೆ. ಈಗ ಆರು ಕಿಲೋಮೀಟರ್ ಹೊಸ ಮೆಟ್ರೋ ಮಾರ್ಗಗಳನ್ನು ಮಾಸಿಕ ಆಧಾರದ ಮೇಲೆ ಹಾಕಲಾಗುತ್ತಿದೆ.
2014ಕ್ಕೂ ಮೊದಲು ದೇಶದಲ್ಲಿ 4 ಲಕ್ಷ ಕಿಲೋಮೀಟರ್ ಗಿಂತಲೂ ಕಡಿಮೆ ಗ್ರಾಮೀಣ ರಸ್ತೆಗಳಿದ್ದವು. ಇಂದು, ದೇಶದಲ್ಲಿ 7.25 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳಿವೆ. ಇದು ಕೂಡ ಬಹುತೇಕ ದ್ವಿಗುಣಗೊಂಡಿದೆ. 2014ಕ್ಕೂ ಮೊದಲು ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಇಂದು ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯೂ ಸುಮಾರು 150 ರಷ್ಟಿದೆ. ಇದರಲ್ಲಿಯೂ ಆ ಸಂಖ್ಯೆ  ದ್ವಿಗುಣವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ನಿರ್ಮಿಸಲಾದ ನಾಲ್ಕು ಕೋಟಿ ಪಕ್ಕಾ ಮನೆಗಳು ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಹಳ್ಳಿಗಳಲ್ಲಿ ಐದು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಅವು ಗ್ರಾಮ ಮಟ್ಟದಲ್ಲಿ ಯುವಜನರನ್ನು ಉದ್ಯಮಿಗಳನ್ನಾಗಿ ಮಾಡುವುದರ ಜೊತೆಗೆ ಉದ್ಯೋಗದ ಪ್ರಮುಖ ಮೂಲವಾಗಿ ಮಾರ್ಪಟ್ಟಿವೆ. ಹಳ್ಳಿಗಳಲ್ಲಿ 30,000 ಕ್ಕೂ ಹೆಚ್ಚು 'ಪಂಚಾಯತ್ ಭವನಗಳನ್ನು' ನಿರ್ಮಿಸುವುದು ಅಥವಾ ಒಂಬತ್ತು ಕೋಟಿ ಮನೆಗಳನ್ನು ನಳ್ಳಿ ನೀರಿನ ಸಂಪರ್ಕದೊಂದಿಗೆ ಜೋಡಿಸುವುದು, ಈ ಎಲ್ಲಾ ಅಭಿಯಾನಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿವೆ. ಅದು ದೇಶದೊಳಗೆ ಬರುತ್ತಿರುವ  ವಿದೇಶಿ ಹೂಡಿಕೆಯಾಗಿರಲಿ ಅಥವಾ ಭಾರತದಿಂದ ಆಗುತ್ತಿರುವ ದಾಖಲೆ ಪ್ರಮಾಣದ  ರಫ್ತಾಗಿರಲಿ, ಅದು ಕೂಡಾ ದೇಶದ ಮೂಲೆ ಮೂಲೆಯಲ್ಲೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೇ,

ಕಳೆದ ಒಂಬತ್ತು ವರ್ಷಗಳಲ್ಲಿ ಕೆಲಸದ ಸ್ವರೂಪವೂ ಬಹಳ ವೇಗವಾಗಿ ಬದಲಾಗಿದೆ. ಈ ಬದಲಾಗುತ್ತಿರುವ ಸಂದರ್ಭಗಳಲ್ಲಿ, ಯುವಜನರಿಗೆ ಹೊಸ ಕ್ಷೇತ್ರಗಳು ರೂಪುಗೊಂಡಿವೆ. ಕೇಂದ್ರ ಸರ್ಕಾರವು ಈ ಹೊಸ ವಲಯಗಳನ್ನು ನಿರಂತರವಾಗಿ ಬೆಂಬಲಿಸುತ್ತಿದೆ. ಈ ಒಂಬತ್ತು ವರ್ಷಗಳಲ್ಲಿ ದೇಶವು ನವೋದ್ಯಮ ಸಂಸ್ಕೃತಿಯಲ್ಲಿ ಹೊಸ ಕ್ರಾಂತಿಗೆ ಸಾಕ್ಷಿಯಾಗಿದೆ. 2014 ರಲ್ಲಿ ದೇಶದಲ್ಲಿ ಕೆಲವು ನೂರು ನವೋದ್ಯಮ (ಸ್ಟಾರ್ಟ್ ಅಪ್ ) ಗಳು ಇದ್ದವು, ಆದರೆ ಇಂದು ಈ ಸಂಖ್ಯೆ ಒಂದು ಲಕ್ಷಕ್ಕೆ ಹತ್ತಿರದಲ್ಲಿದೆ. ಮತ್ತು ಈ ನವೋದ್ಯಮಗಳು ಕನಿಷ್ಠ 10 ಲಕ್ಷ ಯುವಕರಿಗೆ ಉದ್ಯೋಗವನ್ನು ಒದಗಿಸಿವೆ ಎಂದು ಅಂದಾಜಿಸಲಾಗಿದೆ.

ಸ್ನೇಹಿತರೇ,

ಈ ಒಂಬತ್ತು ವರ್ಷಗಳಲ್ಲಿ ಕ್ಯಾಬ್ ಅಗ್ರಿಗೇಟರ್ ಗಳ ಮೂಲಕ ಅಂದರೆ ಆಪ್ ಗಳ ಮೂಲಕ ಟ್ಯಾಕ್ಸಿಗಳು ಭಾರತೀಯ ನಗರಗಳ ಹೊಸ ಜೀವನಾಡಿಯಾಗುವುದನ್ನು ದೇಶ ನೋಡಿದೆ. ಇದೇ ಅವಧಿಯಲ್ಲಿ, ಆನ್ಲೈನ್ ವಿತರಣೆಯ ಹೊಸ ವ್ಯವಸ್ಥೆಯನ್ನು ರಚಿಸಲಾಗಿದೆ, ಇದು ಲಕ್ಷಾಂತರ ಯುವಕರಿಗೆ ಉದ್ಯೋಗವನ್ನು ನೀಡಿದೆ. ಈ ಒಂಬತ್ತು ವರ್ಷಗಳಲ್ಲಿ ಡ್ರೋನ್ ವಲಯದಲ್ಲಿ ಹೊಸ ಉತ್ಕರ್ಷ ಕಂಡುಬಂದಿದೆ. ರಸಗೊಬ್ಬರ ಸಿಂಪಡಿಸುವುದರಿಂದ ಹಿಡಿದು ಔಷಧಿಗಳ ಪೂರೈಕೆಯವರೆಗೆ ಡ್ರೋನ್ ಗಳ ಬಳಕೆ ಹೆಚ್ಚುತ್ತಿದೆ. ಈ ಒಂಬತ್ತು ವರ್ಷಗಳಲ್ಲಿ, ನಗರ ಅನಿಲ ವಿತರಣಾ ವ್ಯವಸ್ಥೆಯು 60 ನಗರಗಳಿಂದ 600 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ.

ಸ್ನೇಹಿತರೇ,

ಭಾರತ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಮುದ್ರಾ ಯೋಜನೆಯಡಿ ದೇಶದ ಯುವಜನರಿಗೆ 23 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಕೆಲವರು ಈ ಹಣದಿಂದ ತಮ್ಮ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ, ಕೆಲವರು ಟ್ಯಾಕ್ಸಿ ಖರೀದಿಸಿದ್ದಾರೆ ಅಥವಾ ಕೆಲವರು ತಮ್ಮ ಅಂಗಡಿಯನ್ನು ವಿಸ್ತರಿಸಿದ್ದಾರೆ. ಮತ್ತು ಅವರ ಸಂಖ್ಯೆ ಲಕ್ಷಗಳಲ್ಲಿಲ್ಲ. ಈ ಸಂಖ್ಯೆ ಇಂದು ಕೋಟಿಗಳಲ್ಲಿದೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಮುದ್ರಾ ಯೋಜನೆಯ ಸಹಾಯದಿಂದ ಮೊದಲ ಬಾರಿಗೆ ತಮ್ಮದೇ  ಸ್ವಂತ ಉದ್ಯೋಗವನ್ನು  ಪ್ರಾರಂಭಿಸಿದ ಸುಮಾರು ಎಂಟರಿಂದ ಒಂಬತ್ತು ಕೋಟಿ ಜನರಿದ್ದಾರೆ. ಪ್ರಸ್ತುತ ನಡೆಯುತ್ತಿರುವ 'ಆತ್ಮನಿರ್ಭರ ಭಾರತ್' ಅಭಿಯಾನವು ದೇಶದಲ್ಲಿ ಉತ್ಪಾದನೆಯ ಮೂಲಕ ಉದ್ಯೋಗ ಸೃಷ್ಟಿಯನ್ನು ಅವಲಂಬಿಸಿದೆ. ಪಿಎಲ್ಐ ಯೋಜನೆಯಡಿ ಉತ್ಪಾದನೆಗೆ ಕೇಂದ್ರ ಸರ್ಕಾರ ಸುಮಾರು 2 ಲಕ್ಷ ಕೋಟಿ ರೂ.ಗಳ ನೆರವು ನೀಡುತ್ತಿದೆ. ಭಾರತವನ್ನು ವಿಶ್ವದ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ, ಈ ಮೊತ್ತವು ಲಕ್ಷಾಂತರ ಯುವಜನರಿಗೆ ಉದ್ಯೋಗವನ್ನು ಒದಗಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಭಾರತದ ಯುವಕರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಇದರ ಭಾಗವಾಗಿ, ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಸಹ ಯುದ್ಧೋಪಾದಿಯಲ್ಲಿ ನಿರ್ಮಿಸಲಾಗುತ್ತಿದೆ. 2014 ಮತ್ತು 2022 ರ ನಡುವೆ ಪ್ರತಿ ವರ್ಷ ಹೊಸ ಐಐಟಿ ಮತ್ತು ಐಐಎಂ ಬಂದಿವೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರತಿ ವಾರ ಸರಾಸರಿ ಒಂದು ವಿಶ್ವವಿದ್ಯಾಲಯವನ್ನು ತೆರೆಯಲಾಗಿದೆ ಮತ್ತು ಪ್ರತಿದಿನ ಎರಡು ಕಾಲೇಜುಗಳನ್ನು ತೆರೆಯಲಾಗಿದೆ. ನಮ್ಮ ಸರ್ಕಾರ ರಚನೆಯಾಗುವ ಮೊದಲು ದೇಶದಲ್ಲಿ ಸುಮಾರು 720 ವಿಶ್ವವಿದ್ಯಾಲಯಗಳಿದ್ದವು. ಈಗ ಈ ಸಂಖ್ಯೆ 1100 ಕ್ಕಿಂತ ಹೆಚ್ಚಾಗಿದೆ. ಏಳು ದಶಕಗಳಲ್ಲಿ ದೇಶದಲ್ಲಿ ಕೇವಲ ಏಳು ಏಮ್ಸ್ ಗಳನ್ನು ನಿರ್ಮಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ನಾವು 15 ಹೊಸ ಏಮ್ಸ್ (ಎ.ಐ.ಐ.ಎಂ.ಎಸ್.)ಗಳನ್ನು ನಿರ್ಮಿಸುವತ್ತ ಸಾಗಿದ್ದೇವೆ. ಈ ಆಸ್ಪತ್ರೆಗಳಲ್ಲಿ ಅನೇಕವು ತಮ್ಮ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿವೆ. 2014 ರ ಹೊತ್ತಿಗೆ, ದೇಶಾದ್ಯಂತ 400 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳಿದ್ದವು. ಇಂದು ಅವುಗಳ  ಸಂಖ್ಯೆ ಸುಮಾರು 700 ಕ್ಕೆ ಏರಿದೆ. ಕಾಲೇಜುಗಳ ಸಂಖ್ಯೆ ಹೆಚ್ಚಾದರೆ ಸಹಜವಾಗಿಯೇ ಸೀಟುಗಳ ಸಂಖ್ಯೆಯೂ ಹೆಚ್ಚುತ್ತದೆ ಮತ್ತು ಯುವಜನರಿಗೆ ಉನ್ನತ ಶಿಕ್ಷಣದ ಅವಕಾಶಗಳೂ ಹೆಚ್ಚಾಗುತ್ತವೆ. 2014ಕ್ಕೆ ಮೊದಲು ದೇಶದಲ್ಲಿ ಕೇವಲ 80,000 ಎಂಬಿಬಿಎಸ್ ಮತ್ತು ಎಂಡಿ ಸೀಟುಗಳಿದ್ದವು. ಈಗ ದೇಶದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಸೀಟುಗಳು 1.70 ಲಕ್ಷಕ್ಕೂ ಹೆಚ್ಚು ಇವೆ. 

ಸ್ನೇಹಿತರೇ,

ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಐಟಿಐಗಳು ಸಹ ಪ್ರಮುಖ ಪಾತ್ರ ವಹಿಸುತ್ತಿವೆ. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಪ್ರತಿದಿನ ಹೊಸ ಐಟಿಐ ನಿರ್ಮಿಸಲಾಗಿದೆ. ಇಂದು, ದೇಶದ ಹೊಸ ಅಗತ್ಯಗಳಿಗೆ ಅನುಗುಣವಾಗಿ ಸುಮಾರು 15,000 ಐಟಿಐಗಳಲ್ಲಿ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲಾಗುತ್ತಿದೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ 1.25 ಕೋಟಿಗೂ ಹೆಚ್ಚು ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ.

ಸ್ನೇಹಿತರೇ,

ಸರ್ಕಾರದ ಈ ಪ್ರಯತ್ನಗಳಿಂದಾಗಿ, ಅನೇಕ ಹೊಸ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇಪಿಎಫ್ಒನ ಒಂದು ಉದಾಹರಣೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ. ನಾವು 2018-19 ರ ನಂತರ ಇಪಿಎಫ್ಒನ ನಿವ್ವಳ ವೇತನದಾರರ ಅಂಕಿಅಂಶಗಳನ್ನು ನೋಡಿದರೆ, ನಾಲ್ಕೂವರೆ ಕೋಟಿಗೂ ಹೆಚ್ಚು ಜನರು ಔಪಚಾರಿಕ ಉದ್ಯೋಗಗಳನ್ನು ಪಡೆದಿದ್ದಾರೆ. ಭಾರತದಲ್ಲಿ ಔಪಚಾರಿಕ ಉದ್ಯೋಗಗಳಲ್ಲಿ ನಿರಂತರ ಹೆಚ್ಚಳವಾಗಿದೆ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯ ವೇತನದಾರರ ದತ್ತಾಂಶವು ಸ್ಪಷ್ಟವಾಗಿ ತೋರಿಸುತ್ತದೆ. ಔಪಚಾರಿಕ ಉದ್ಯೋಗಗಳ ಈ ಹೆಚ್ಚಳದ ಜೊತೆಗೆ, ದೇಶದಲ್ಲಿ ಸ್ವ-ಉದ್ಯೋಗ ಅವಕಾಶಗಳು ಸಹ ನಿರಂತರವಾಗಿ ಹೆಚ್ಚುತ್ತಿವೆ.

ಸ್ನೇಹಿತರೇ,

ಕಳೆದ ಕೆಲವು ವಾರಗಳಲ್ಲಿನ ವರದಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಉದ್ಯಮ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಅಭೂತಪೂರ್ವ ಸಕಾರಾತ್ಮಕತೆ ಕಂಡುಬಂದಿದೆ. ಕೆಲವು ದಿನಗಳ ಹಿಂದೆ, ನಾನು ವಾಲ್ಮಾರ್ಟ್ನ ಸಿಇಒ ಅವರನ್ನು ಭೇಟಿಯಾದೆ. ಮುಂದಿನ 3-4 ವರ್ಷಗಳಲ್ಲಿ ತಮ್ಮ ಕಂಪನಿಯು ಭಾರತದಿಂದ 80,000 ಕೋಟಿ ರೂ.ಗಳ ಸರಕುಗಳನ್ನು ರಫ್ತು ಮಾಡಲು ಪ್ರಾರಂಭಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ವಲಯದಲ್ಲಿ ಕೆಲಸ ಮಾಡಲು ಬಯಸುವ ನಮ್ಮ ಯುವಜನರಿಗೆ ಇದು ಉತ್ತಮ ಸುದ್ದಿಯಾಗಿದೆ. ಸಿಸ್ಕೊದ ಸಿಇಒ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಕಂಪನಿಯು ಭಾರತದಲ್ಲಿ ತಯಾರಿಸಿದ 8,000 ಕೋಟಿ ರೂ.ಗಳ ಉತ್ಪನ್ನಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಆಪಲ್ ಸಿಇಒ ಕೂಡ ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದರು. ಭಾರತದ ಉಜ್ವಲ ಭವಿಷ್ಯದ ಬಗ್ಗೆ ಮತ್ತು ವಿಶೇಷವಾಗಿ ಮೊಬೈಲ್ ಉತ್ಪಾದನೆಯ ಬಗ್ಗೆ ಅವರು ತುಂಬಾ ವಿಶ್ವಾಸ ಹೊಂದಿದ್ದರು.  ವಿಶ್ವದ ಪ್ರಸಿದ್ಧ ಸೆಮಿಕಂಡಕ್ಟರ್ ಕಂಪನಿ ಎನ್.ಎಕ್ಸ್.ಪಿ.ಯ ಉನ್ನತ ಅಧಿಕಾರಿಗಳು ಇತ್ತೀಚೆಗೆ ನನ್ನನ್ನು ಭೇಟಿಯಾದರು. ಅವರು ಭಾರತದ ಅರೆವಾಹಕ ಪರಿಸರ ವ್ಯವಸ್ಥೆಯ ರಚನೆ ಮತ್ತು ಅದರ ಸಾಮರ್ಥ್ಯದ ಬಗ್ಗೆ ತುಂಬಾ ಸಕಾರಾತ್ಮಕವಾಗಿದ್ದಾರೆ. ಫಾಕ್ಸ್ಕಾನ್ ಭಾರತದಲ್ಲಿ ಅನೇಕ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಪ್ರಾರಂಭಿಸಿದೆ. ಮುಂದಿನ ಒಂದು ವಾರದಲ್ಲಿ ನಾನು ಮತ್ತೊಮ್ಮೆ ವಿಶ್ವದ ಅತಿದೊಡ್ಡ ಕಂಪನಿಗಳ ಅನೇಕ ಸಿಇಒಗಳನ್ನು ಭೇಟಿಯಾಗಲಿದ್ದೇನೆ. ಅವರೆಲ್ಲರೂ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸಾಹದಿಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮತ್ತು ಪ್ರಯತ್ನಗಳು ಭಾರತದ ವಿವಿಧ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಎಷ್ಟು ವೇಗವಾಗಿ ಸೃಷ್ಟಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಈ 'ಮಹಾಯಜ್ಞ'ದಲ್ಲಿ ಅಂತಹ ಪ್ರಮುಖ ಬದಲಾವಣೆಗಳಲ್ಲಿ ನೀವು ಈಗ ನೇರ ಪಾತ್ರವನ್ನು ಹೊಂದಿರುತ್ತೀರಿ. ನೀವು ಜವಾಬ್ದಾರಿಗಳನ್ನು ಪೂರೈಸಬೇಕು ಮತ್ತು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಗಳನ್ನು ಅರಿತುಕೊಳ್ಳಬೇಕು. ಈ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ. ಇಂದಿನಿಂದ ನಿಮ್ಮ ಜೀವನದಲ್ಲಿ ಕಲಿಕೆಯ ಹೊಸ ಹಂತವೂ ಪ್ರಾರಂಭವಾಗುತ್ತಿದೆ. ಸರ್ಕಾರವು ತನ್ನ ಉದ್ಯೋಗಿಗಳ ಹೊಸ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಐಜಿಒಟಿ ಕರ್ಮಯೋಗಿ ಎಂಬ ಆನ್ಲೈನ್ ಕಲಿಕಾ ವೇದಿಕೆಯನ್ನು ಪ್ರಾರಂಭಿಸಲಾಗಿದೆ. ಈ ಪ್ಲಾಟ್ ಫಾರ್ಮ್ ನಲ್ಲಿ ಅನೇಕ ರೀತಿಯ ಕೋರ್ಸ್ ಗಳು ಲಭ್ಯವಿವೆ. ಅವುಗಳನ್ನು ಪೂರ್ಣವಾಗಿ ಬಳಸಿಕೊಳ್ಳಿ.  ನಿಮ್ಮ ಸಾಮರ್ಥ್ಯವು ಹೆಚ್ಚಾದಷ್ಟೂ, ನಿಮ್ಮ ಕೆಲಸದಲ್ಲಿ ಹೆಚ್ಚು ಸಕಾರಾತ್ಮಕ ಪರಿಣಾಮವು ಗೋಚರಿಸುತ್ತದೆ. ಮತ್ತು ಸಮರ್ಥ ಜನರ ಕಾರಣದಿಂದಾಗಿ ಕೆಲಸದ ಮೇಲೆ ಧನಾತ್ಮಕ ಪರಿಣಾಮವುಂಟಾಗಿ ದೇಶದ ಎಲ್ಲಾ ಚಟುವಟಿಕೆಗಳಲ್ಲಿ ಸಕಾರಾತ್ಮಕತೆಗೆ ವೇಗ ತುಂಬುತ್ತದೆ. ಇಂದು, ಈ ಮಹತ್ವದ ಸಂದರ್ಭದಲ್ಲಿ ನಿಮ್ಮ ಜೀವನದ ಅತ್ಯಂತ ಪ್ರಮುಖ ಹಂತದಲ್ಲಿ ನಿಮ್ಮ ಹೊಸ ಪ್ರಯಾಣಕ್ಕಾಗಿ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಶುಭ ಹಾರೈಸುತ್ತೇನೆ. ನಿಮ್ಮ ಕುಟುಂಬ ಸದಸ್ಯರಿಗೂ ನಾನು ಶುಭ ಹಾರೈಸುತ್ತೇನೆ, ಏಕೆಂದರೆ ಅವರು ನಿಮ್ಮ ಜೀವನದಲ್ಲಿ ಹೆಚ್ಚಿನ ಭರವಸೆ, ನಿರೀಕ್ಷೆ ಮತ್ತು ಉತ್ಸಾಹದಿಂದ ಬಹಳಷ್ಟು ಕೊಡುಗೆ ನೀಡಿದ್ದಾರೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ, ನಾನು ಮತ್ತೊಮ್ಮೆ ನಿಮಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.

****



(Release ID: 1928480) Visitor Counter : 91