ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಶಿಕ್ಷಕರ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
"ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ"
"ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡುತ್ತದೆ"
"ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಮಧ್ಯಪ್ರದೇಶವು ಶಿಕ್ಷಣದ ಗುಣಮಟ್ಟದಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ"
"ನಿಮ್ಮ ಶಿಕ್ಷಣವು ವರ್ತಮಾನವನ್ನು ಮಾತ್ರವಲ್ಲದೆ ದೇಶದ ಭವಿಷ್ಯವನ್ನೂ ರೂಪಿಸುತ್ತದೆ ಎಂಬುದನ್ನು ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು"
Posted On:
12 APR 2023 12:32PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಶಿಕ್ಷಕರ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಧ್ಯಪ್ರದೇಶದಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಅಭಿಯಾನವು ವೇಗವಾಗಿ ನಡೆಯುತ್ತಿದೆ, ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಸಾವಿರಾರು ಯುವಕರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದರು. ಶಿಕ್ಷಕರ ಹುದ್ದೆಗೆ 22,400 ಕ್ಕೂ ಹೆಚ್ಚು ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿಯವರು, ಬೋಧನೆಯಂತಹ ಪ್ರಮುಖ ಕೆಲಸದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನೇಮಕಾತಿ ಪತ್ರಗಳನ್ನು ಪಡೆದ ಯುವಕರನ್ನು ಅಭಿನಂದಿಸಿದರು.
ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಈ ನೀತಿಯು ಮಕ್ಕಳ ಸಮಗ್ರ ಅಭಿವೃದ್ಧಿ, ಜ್ಞಾನ, ಕೌಶಲ್ಯ, ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳ ಉತ್ತೇಜನಕ್ಕೆ ಒತ್ತು ನೀಡುತ್ತದೆ" ಎಂದು ಶ್ರೀ ಮೋದಿ ಹೇಳಿದರು, ಈ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದರು. ಮಧ್ಯಪ್ರದೇಶದಲ್ಲಿ ಬೃಹತ್ ಶಿಕ್ಷಕರ ನೇಮಕಾತಿ ಅಭಿಯಾನವು ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಇಂದು ನೇಮಕಗೊಂಡ ಸುಮಾರು ಅರ್ಧದಷ್ಟು ಶಿಕ್ಷಕರನ್ನು ಬುಡಕಟ್ಟು ಪ್ರದೇಶಗಳಲ್ಲಿ ನಿಯೋಜಿಸಲಾಗುವುದು, ಇದರಿಂದ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮಧ್ಯಪ್ರದೇಶ ಸರ್ಕಾರವು ಈ ವರ್ಷ 60 ಸಾವಿರ ಶಿಕ್ಷಕರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡುವ ಗುರಿಯನ್ನು ನಿಗದಿಪಡಿಸಿದೆ ಮತ್ತು ಇದರ ಪರಿಣಾಮವಾಗಿ, ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ರಾಜ್ಯವು ಶಿಕ್ಷಣದ ಗುಣಮಟ್ಟದಲ್ಲಿ ದೊಡ್ಡ ಜಿಗಿತ ಸಾಧಿಸಿದೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ಜಾಹೀರಾತಿಗೆ ಹಣ ಖರ್ಚು ಮಾಡದೆ ರಾಜ್ಯವು 17 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ತಲುಪಿದೆ ಎಂದು ಪ್ರಧಾನಿ ಗಮನಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಧ್ಯಪ್ರದೇಶ ಸರ್ಕಾರವನ್ನು ಪ್ರಧಾನಿ ಅಭಿನಂದಿಸಿದರು.
ಉದ್ಯೋಗ ಮತ್ತು ಸ್ವಉದ್ಯೋಗ ಉತ್ತೇಜಿಸಲು ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅಡಿಯಲ್ಲಿ ಯುವಕರಿಗೆ ತರಬೇತಿ ನೀಡಲು ದೇಶಾದ್ಯಂತ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ವರ್ಷದ ಆಯವ್ಯಯದಲ್ಲಿ 30 ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರಗಳನ್ನು ತೆರೆಯಲಾಗುವುದು, ಅಲ್ಲಿ ನವಯುಗ ತಂತ್ರಜ್ಞಾನದ ಮೂಲಕ ಯುವಕರಿಗೆ ತರಬೇತಿ ನೀಡಲಾಗುವುದು ಮತ್ತು ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಸಣ್ಣ ಕುಶಲಕರ್ಮಿಗಳಿಗೆ ತರಬೇತಿ ನೀಡಲು ಮತ್ತು ಅವರನ್ನು ಎಂಎಸ್ಎಂಇಗಳೊಂದಿಗೆ ಸಂಪರ್ಕಿಸಲು ಉಪಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಇಂದು ನೇಮಕಗೊಂಡಿರುವ ಸಾವಿರಾರು ಶಿಕ್ಷಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ನಮ್ಮ ಜೀವನದಲ್ಲಿ ತಾಯಿ ಅಥವಾ ಶಿಕ್ಷಕರ ಪ್ರಭಾವದಂತೆ ತಮ್ಮ ವಿದ್ಯಾರ್ಥಿಗಳಿಗೂ ತಮ್ಮ ಹೃದಯದಲ್ಲಿ ಸ್ಥಾನ ಪಡೆಯುವಂತೆ ಕೇಳಿಕೊಂಡರು. "ನಿಮ್ಮ ಶಿಕ್ಷಣವು ವರ್ತಮಾನವನ್ನು ಮಾತ್ರವಲ್ಲದೆ ದೇಶದ ಭವಿಷ್ಯವನ್ನೂ ರೂಪಿಸುತ್ತದೆ ಎಂಬುದನ್ನು ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಶ್ರೀ ಮೋದಿ ಹೇಳಿದರು. ಶಿಕ್ಷಕರು ನೀಡುವ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಎಂದು ಉಲ್ಲೇಖಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. "ನೀವು ರೂಢಿಸಿಕೊಳ್ಳುವ ಮೌಲ್ಯಗಳು ಇಂದಿನ ಪೀಳಿಗೆಯ ಮೇಲೆ ಮಾತ್ರವಲ್ಲದೆ ಮುಂದಿನ ಹಲವು ತಲೆಮಾರುಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ" ಎಂದು ಪ್ರಧಾನಿ ಹೇಳಿದರು.
*****
(Release ID: 1926520)
Visitor Counter : 134
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam