ಪ್ರಧಾನ ಮಂತ್ರಿಯವರ ಕಛೇರಿ

ಪಪುವಾ ನ್ಯೂಗಿನಿಯಾದ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

Posted On: 22 MAY 2023 8:39AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 22 ಮೇ 2023 ರಂದು ಪೋರ್ಟ್ ಮೊರೆಸ್ಬಿಯಲ್ಲಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ ಐ ಪಿ ಐ ಸಿ) 3 ನೇ ಶೃಂಗಸಭೆಯ ಸಂದರ್ಭದಲ್ಲಿ ಪಪುವಾ ನ್ಯೂಗಿನಿಯಾದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಜೇಮ್ಸ್ ಮರಾಪೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. 

ಆತ್ಮೀಯ ಸ್ವಾಗತಕ್ಕಾಗಿ ಮತ್ತು 3ನೇ ಎಫ್‌ ಐ ಪಿ ಐ ಸಿ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಮರಾಪೆ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದರು. ಇಬ್ಬರೂ ನಾಯಕರು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಸಾಮರ್ಥ್ಯ ನಿರ್ಮಾಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ವಲಯಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಚರ್ಚಿಸಿದರು. ಹವಾಮಾನ ಕ್ರಿಯೆಗೆ ಸಂಬಂಧಿಸಿದ ವಿಷಯಗಳು ಮತ್ತು ಜನರೊಂದಿಗೆ ಜನರ ಸಂಬಂಧವನ್ನು ಉತ್ತೇಜಿಸುವ ಬಗ್ಗೆಯೂ ಚರ್ಚಿಸಿದರು. ಪೆಸಿಫಿಕ್ ದ್ವೀಪ ರಾಷ್ಟ್ರಗಳ ಆದ್ಯತೆಗಳು ಮತ್ತು ಆಶಯಗಳಿಗೆ ಭಾರತದ ಬೆಂಬಲ ಮತ್ತು ಗೌರವವನ್ನು ಪ್ರಧಾನಿಯವರು ಪುನರುಚ್ಚರಿಸಿದರು.

ಪ್ರಧಾನಿ ಮೋದಿ ಮತ್ತು ಪ್ರಧಾನ ಮಂತ್ರಿ ಮರಾಪೆ ಅವರು ಪಪುವಾ ನ್ಯೂಗಿನಿಯಾದ ಟೋಕ್ ಪಿಸಿನ್ ಭಾಷೆಗೆ ಅನುವಾದವಾಗಿರುವ ತಮಿಳಿನ ‘ತಿರುಕ್ಕುರಲ್’ಗ್ರಂಥವನ್ನು ಬಿಡುಗಡೆ ಮಾಡಿದರು. ಪುಸ್ತಕವನ್ನು ಭಾಷಾಶಾಸ್ತ್ರಜ್ಞರಾದ ಶ್ರೀಮತಿ ಸುಭಾ ಸಸೀಂದ್ರನ್ ಮತ್ತು ಪಪುವಾ ನ್ಯೂ ಗಿನಿಯಾದ ಪಶ್ಚಿಮ ನ್ಯೂ ಬ್ರಿಟನ್ ಪ್ರಾಂತ್ಯದ ಗವರ್ನರ್ ಶ್ರೀ ಸಸೀಂದ್ರನ್ ಮುತ್ತುವೇಲು ಅನುವಾದಿಸಿದ್ದಾರೆ. ಪುಸ್ತಕಕ್ಕೆ ಪ್ರಧಾನಿ ಮಾರಾಪೆ ಅವರ ಮುನ್ನುಡಿ ಇದೆ.

ಪ್ರಧಾನಿ ಮೋದಿ ಅವರು ಲೇಖಕರನ್ನು ಅಭಿನಂದಿಸಿದರು ಮತ್ತು ಪಪುವಾ ನ್ಯೂಗಿನಿಯಾದಲ್ಲಿ ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯ ತತ್ವಗಳನ್ನು ಸಂರಕ್ಷಿಸಲು ಅವರು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

*****



(Release ID: 1926483) Visitor Counter : 121