ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರಗಾಮಿ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ನಿರ್ಣಾಯಕ ಮಾರ್ಗದರ್ಶನದಲ್ಲಿ, ಸಮಕಾಲೀನ ಆಧುನಿಕ ಅಗತ್ಯಗಳು ಮತ್ತು ಸುಧಾರಣಾ ಸಿದ್ಧಾಂತಕ್ಕೆ ಅನುಗುಣವಾಗಿ ವಸಾಹತುಶಾಹಿ ಯುಗದ ಹಳೆಯ ಕಾರಾಗೃಹ ಕಾಯಿದೆಯನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಮಗ್ರವಾಗಿ ಮಾರ್ಗದರ್ಶನ ನೀಡುವ ಮತ್ತು ಅಸ್ತಿತ್ವದಲ್ಲಿರುವ ಕಾರಾಗೃಹಗಳ ಕಾಯಿದೆಯಲ್ಲಿನ ಅಂತರವನ್ನು ಪರಿಹರಿಸುವ ಉದ್ದೇಶದಿಂದ, ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಸಮಗ್ರವಾದ 'ಮಾದರಿ ಕಾರಾಗೃಹಗಳ ಕಾಯಿದೆ, 2023' ಅನ್ನು ಅಂತಿಮಗೊಳಿಸುತ್ತದೆ, ಇದು ರಾಜ್ಯಗಳಿಗೆ ಮಾರ್ಗದರ್ಶಿ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.
'ಕಾರಾಗೃಹಗಳ ಕಾಯಿದೆ, 1894', 'ಕೈದಿಗಳ ಕಾಯಿದೆ, 1900' ಮತ್ತು 'ಕೈದಿಗಳ ವರ್ಗಾವಣೆ ಕಾಯಿದೆ, 1950' ಅನ್ನು ಸಹ ಗೃಹ ವ್ಯವಹಾರಗಳ ಸಚಿವಾಲಯವು ಪರಿಶೀಲಿಸಿದೆ ಮತ್ತು ಈ ಕಾಯಿದೆಗಳ ಸಂಬಂಧಿತ ನಿಬಂಧನೆಗಳನ್ನು 'ಮಾದರಿ ಕಾರಾಗೃಹಗಳ ಕಾಯಿದೆ 2023 ರಲ್ಲಿ ಸಂಯೋಜಿಸಲಾಗಿದೆ.
'ಮಾದರಿ ಕಾರಾಗೃಹಗಳ ಕಾಯಿದೆ, 2023' ಜೈಲು ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಮತ್ತು ಕೈದಿಗಳನ್ನು ಕಾನೂನು ಪಾಲಿಸುವ ನಾಗರಿಕರನ್ನಾಗಿ ಪರಿವರ್ತಿಸುವುದನ್ನು ಮತ್ತು ಸಮಾಜದಲ್ಲಿ ಅವರ ಪುನರ್ವಸತಿಯನ್ನು ಖಚಿತಪಡಿಸುತ್ತದೆ
ಹೊಸ ಕಾರಾಗೃಹಗಳ ಕಾಯಿದೆಯು ಮಹಿಳೆಯರು ಮತ್ತು ತೃತೀಯ ಲಿಂಗಿ ಕೈದಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತದೆ ಮತ್ತು ಜೈಲು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ ಮತ್ತು ಕೈದಿಗಳ ಪರಿವರ್ತನೆ ಮತ್ತು ಪುನರ್ವಸತಿಗೆ ಒತ್ತು ನೀಡುತ್ತದೆ.
Posted On:
12 MAY 2023 4:32PM by PIB Bengaluru
ಪ್ರಸ್ತುತ ಇರುವ ‘ಕಾರಾಗೃಹಗಳ ಕಾಯಿದೆ, 1894’ ಸ್ವಾತಂತ್ರ್ಯ ಪೂರ್ವದ ಕಾಯಿದೆಯಾಗಿದೆ ಮತ್ತು ಸುಮಾರು 130 ವರ್ಷಗಳಷ್ಟು ಹಳೆಯದಾಗಿದೆ. ಈ ಕಾಯಿದೆಯು ಮುಖ್ಯವಾಗಿ ಅಪರಾಧಿಗಳನ್ನು ಬಂಧನದಲ್ಲಿಡುವುದು ಮತ್ತು ಜೈಲುಗಳಲ್ಲಿ ಶಿಸ್ತು ಮತ್ತು ಸುವ್ಯವಸ್ಥೆಯನ್ನು ಜಾರಿಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಪ್ರಸ್ತುತ ಕಾಯಿದೆಯಲ್ಲಿ ಕೈದಿಗಳ ಸುಧಾರಣೆ ಮತ್ತು ಪುನರ್ವಸತಿಗೆ ಯಾವುದೇ ಅವಕಾಶವಿಲ್ಲ.
ಕಳೆದ ಕೆಲವು ದಶಕಗಳಲ್ಲಿ, ಜಾಗತಿಕವಾಗಿ ಜೈಲುಗಳು ಮತ್ತು ಕೈದಿಗಳ ಬಗ್ಗೆ ಸಂಪೂರ್ಣ ಹೊಸ ದೃಷ್ಟಿಕೋನವು ವಿಕಸನಗೊಂಡಿದೆ. ಇಂದು ಕಾರಾಗೃಹಗಳನ್ನು ಪ್ರತೀಕಾರದ ಪ್ರತಿಬಂಧಕ ಸ್ಥಳಗಳಾಗಿ ನೋಡಲಾಗುವುದಿಲ್ಲ, ಬದಲಿಗೆ ಸುಧಾರಣಾ ಮತ್ತು ಪರಿವರ್ತನೆ ಸಂಸ್ಥೆಗಳೆಂದು ಪರಿಗಣಿಸಲಾಗಿದೆ, ಅಲ್ಲಿ ಕೈದಿಗಳನ್ನು ಕಾನೂನು ಬದ್ಧ ನಾಗರಿಕರಾಗಿ ಸಮಾಜಕ್ಕೆ ಪರಿವರ್ತಿಸಲಾಗುತ್ತದೆ ಮತ್ತು ಪುನರ್ವಸತಿ ಮಾಡಲಾಗುತ್ತದೆ.
ಭಾರತದ ಸಂವಿಧಾನದ ನಿಬಂಧನೆಗಳ ಪ್ರಕಾರ, 'ಕಾರಾಗೃಹಗಳು'/ 'ಅದರಲ್ಲಿರುವ ಬಂಧಿಯಾಗಿಟ್ಟಿರುವ ವ್ಯಕ್ತಿಗಳು' 'ರಾಜ್ಯ' ವಿಷಯವಾಗಿದೆ. ಜೈಲುಗಳು ಮತ್ತು ಕೈದಿಗಳ ನಿರ್ವಹಣೆಗೆ ಸಂಬಂಧಿಸಿದ ಸೂಕ್ತ ಶಾಸನಬದ್ಧ ನಿಬಂಧನೆಗಳನ್ನು ಮಾಡಲು ರಾಜ್ಯ ಸರ್ಕಾರಗಳಿಗೆ ಮಾತ್ರ ಅವಕಾಶ ಇರುತ್ತದೆ. ಆದಾಗ್ಯೂ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸಮರ್ಥವಾದ ಜೈಲು ನಿರ್ವಹಣೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಈ ನಿಟ್ಟಿನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸಲು ಭಾರತ ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.
ಕಳೆದ ಕೆಲವು ವರ್ಷಗಳಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು (ಎಂ ಹೆಚ್ ಎ) ಅಸ್ತಿತ್ವದಲ್ಲಿರುವ ಕಾರಾಗೃಹಗಳ ಕಾಯಿದೆಯಲ್ಲಿ ಹಲವಾರು ಲೋಪಗಳಿವೆ ಎಂದು ಗಮನಿಸಿದೆ, ಇದು ಹೊಸ ಕಾರಾಗೃಹ ಕಾಯಿದೆಗಳನ್ನು ಜಾರಿಗೊಳಿಸಿದ ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೈಲು ಆಡಳಿತವನ್ನು ನಿಯಂತ್ರಿಸುತ್ತದೆ. ಆಧುನಿಕ ಕಾಲದ ಅಗತ್ಯತೆಗಳು ಮತ್ತು ಜೈಲು ನಿರ್ವಹಣೆಯ ಅಗತ್ಯಗಳಿಗೆ ಅನುಗುಣವಾಗಿ ಪ್ರಸ್ತುತ ಕಾಯಿದೆಯನ್ನು ಪರಿಷ್ಕರಿಸುವ ಮತ್ತು ನವೀಕರಿಸುವ ಅಗತ್ಯವು ಕಂಡುಬಂತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರಗಾಮಿ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ನಿರ್ಣಾಯಕ ಮಾರ್ಗದರ್ಶನದಲ್ಲಿ, ಸಮಕಾಲೀನ ಆಧುನಿಕ ಅಗತ್ಯಗಳು ಮತ್ತು ಸುಧಾರಣಾ ಸಿದ್ಧಾಂತಕ್ಕೆ ಅನುಗುಣವಾಗಿ ವಸಾಹತುಶಾಹಿ ಯುಗದ ಹಳೆಯ ಕಾರಾಗೃಹ ಕಾಯಿದೆಯನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಗೃಹ ವ್ಯವಹಾರಗಳ ಸಚಿವಾಲಯವು ಕಾರಾಗೃಹಗಳ ಕಾಯಿದೆ, 1894 ರ ಪರಿಷ್ಕರಣೆ ಕಾರ್ಯವನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋಗೆ ವಹಿಸಿತು. ಬ್ಯೂರೋ, ರಾಜ್ಯ ಕಾರಾಗೃಹದ ಅಧಿಕಾರಿಗಳು, ಸುಧಾರಣಾ ತಜ್ಞರು ಇತ್ಯಾದಿಗಳೊಂದಿಗೆ ವ್ಯಾಪಕ ಚರ್ಚೆ ನಡೆಸಿದ ನಂತರ ಕರಡನ್ನು ಸಿದ್ಧಪಡಿಸಿತು.
ಜೈಲು ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಸೇರಿದಂತೆ ಅಸ್ತಿತ್ವದಲ್ಲಿರುವ ಕಾರಾಗೃಹಗಳ ಕಾಯಿದೆಯಲ್ಲಿನ ಅಂತರವನ್ನು ನಿವಾರಿಸಲು ಸಮಗ್ರವಾಗಿ ಮಾರ್ಗದರ್ಶನ ನೀಡುವ ಉದ್ದೇಶದಿಂದ, ಸದ್ವರ್ತನೆಯನ್ನು ಪ್ರೋತ್ಸಾಹಿಸಲು ಕೈದಿಗಳಿಗೆ ಪೆರೋಲ್, ಫರ್ಲೋ, ಮಹಿಳೆಯರು/ತೃತೀಯ ಲಿಂಗಿ ಕೈದಿಗಳಿಗೆ ವಿಶೇಷ ಅವಕಾಶ, ಕೈದಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಮತ್ತು ಕೈದಿಗಳ ಸುಧಾರಣೆ ಮತ್ತು ಪುನರ್ವಸತಿ ಇತ್ಯಾದಿಗಳ ಮೇಲೆ ಇದು ಗಮನ ಕೇಂದ್ರೀಕರಿಸಿದೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ಸಮಗ್ರ 'ಮಾದರಿ ಕಾರಾಗೃಹಗಳ ಕಾಯಿದೆ, 2023' ಅನ್ನು ಅಂತಿಮಗೊಳಿಸಿದೆ, ಇದು ರಾಜ್ಯಗಳಿಗೆ ಮಾರ್ಗದರ್ಶಿ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವುಗಳ ಅಧಿಕಾರ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.
1894ರ ಕಾರಾಗೃಹಗಳ ಕಾಯಿದೆ, 1900ರ ಕೈದಿಗಳ ಕಾಯಿದೆ ಮತ್ತು 1950ರ ಕೈದಿಗಳ ವರ್ಗಾವಣೆ ಕಾಯಿದೆಗಳನ್ನೂ ಗೃಹ ವ್ಯವಹಾರಗಳ ಸಚಿವಾಲಯವು ಪರಿಶೀಲಿಸಿದೆ ಮತ್ತು ಈ ಕಾಯಿದೆಗಳ ಸಂಬಂಧಿತ ನಿಬಂಧನೆಗಳನ್ನು ʼಮಾದರಿ ಕಾರಾಗೃಹಗಳ ಕಾಯಿದೆ, 2023ʼ ರಲ್ಲಿ ಸಂಯೋಜಿಸಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಮಾದರಿ ಕಾರಾಗೃಹಗಳ ಕಾಯಿದೆ, 2023 ರಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಅದನ್ನು ತಮ್ಮ ಅಧಿಕಾರ ವ್ಯಾಪ್ತಿಗಳಲ್ಲಿ ಅಳವಡಿಸಿಕೊಳ್ಳಬಹುದು, ಅಂತಹ ಮಾರ್ಪಾಡುಗಳನ್ನು ಅವರು ಅಗತ್ಯವೆಂದು ಪರಿಗಣಿಸಬಹುದು ಮತ್ತು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರುವ ಮೂರು ಕಾಯಿದೆಗಳನ್ನು ರದ್ದುಗೊಳಿಸಬಹುದು.
ಹೊಸ ಮಾದರಿ ಕಾರಾಗೃಹಗಳ ಕಾಯಿದೆಯ ಕೆಲವು ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
i. ಭದ್ರತಾ ಮೌಲ್ಯಮಾಪನ ಮತ್ತು ಕೈದಿಗಳ ಪ್ರತ್ಯೇಕತೆ, ವೈಯಕ್ತಿಕ ಶಿಕ್ಷೆ ಯೋಜನೆ,
ii ಕುಂದುಕೊರತೆ ಪರಿಹಾರ, ಜೈಲು ಅಭಿವೃದ್ಧಿ ಮಂಡಳಿ, ಕೈದಿಗಳ ಬಗೆಗಿನ ವರ್ತನೆ ಬದಲಾವಣೆ.
iii ಮಹಿಳಾ ಕೈದಿಗಳು, ತೃತೀಯ ಲಿಂಗಿ ಕೈದಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ.
iv. ಜೈಲು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಜೈಲು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಗೆ ಅವಕಾಶ.
v. ನ್ಯಾಯಾಲಯಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್, ಜೈಲುಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳು ಇತ್ಯಾದಿ.
vi. ಜೈಲುಗಳಲ್ಲಿ ಮೊಬೈಲ್ ಫೋನ್‌ಗಳಂತಹ ನಿಷೇಧಿತ ವಸ್ತುಗಳನ್ನು ಬಳಸುವುದಕ್ಕಾಗಿ ಕೈದಿಗಳು ಮತ್ತು ಜೈಲು ಸಿಬ್ಬಂದಿಗೆ ಶಿಕ್ಷೆಯನ್ನು ನಿಗದಿಪಡಿಸುವುದು.
vii. ಹೆಚ್ಚಿನ ಭದ್ರತೆಯ ಜೈಲು, ತೆರೆದ ಜೈಲು (ಮುಕ್ತ ಮತ್ತು ಅರೆ ಮುಕ್ತ) ಇತ್ಯಾದಿಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿಬಂಧನೆ.
viii. ಕಠಿಣ ಅಪರಾಧಿಗಳು ಮತ್ತು ರೂಢಿಗತ ಅಪರಾಧಿಗಳ ಅಪರಾಧ ಚಟುವಟಿಕೆಗಳಿಂದ ಸಮಾಜವನ್ನು ರಕ್ಷಿಸುವ ಅವಕಾಶ.
ix. ಉತ್ತಮ ನಡತೆಯನ್ನು ಉತ್ತೇಜಿಸಲು ಕೈದಿಗಳಿಗೆ ಕಾನೂನು ನೆರವು, ಪೆರೋಲ್, ಫರ್ಲೋ ಮತ್ತು ಮೊದಲೇ ಬಿಡುಗಡೆ ಇತ್ಯಾದಿಗಳನ್ನು ಒದಗಿಸುವುದು.
X. ಕೈದಿಗಳ ವೃತ್ತಿಪರ ತರಬೇತಿ ಮತ್ತು ಕೌಶಲ ಅಭಿವೃದ್ಧಿ ಮತ್ತು ಸಮಾಜದಲ್ಲಿ ಅವರನ್ನು ಮರುಸೇರ್ಪಡೆಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸುವುದು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸರ್ಕಾರವು ಪ್ರತಿಯೊಂದು ವಲಯದಲ್ಲಿ ಸುಧಾರಣೆಗಳನ್ನು ತರಲು ಬದ್ಧವಾಗಿದೆ ಮತ್ತು ಮೋದಿ ಸರ್ಕಾರದ ಈ ನಿರ್ಧಾರವು ದೇಶಾದ್ಯಂತ ಜೈಲು ಮತ್ತು ಕೈದಿಗಳ ನಿರ್ವಹಣೆಯಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಸುಧಾರಣೆಯನ್ನು ತರಲು ಕಾರಣವಾಗುತ್ತದೆ.
*****
(Release ID: 1923830)
Visitor Counter : 196