ಪ್ರಧಾನ ಮಂತ್ರಿಯವರ ಕಛೇರಿ

​​​​​​​ಅಸ್ಸಾಂನ ಗುವಾಹಟಿಯಲ್ಲಿ 3,400 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಿ


ʻಏಮ್ಸ್ʼ ಗುವಾಹಟಿ ಮತ್ತು ಇತರ ಮೂರು ವೈದ್ಯಕೀಯ ಕಾಲೇಜುಗಳನ್ನು ದೇಶಕ್ಕೆ ಸಮರ್ಪಿಸಿದರು

'ಆಪ್‌ ಕೆ ದ್ವಾರ್ ಆಯುಷ್ಮಾನ್' ಅಭಿಯಾನಕ್ಕೆ ಚಾಲನೆ ನೀಡಿದರು

ʻಅಸ್ಸಾಂ ಅತ್ಯಾಧುನಿಕ ಆರೋಗ್ಯ ಸೇವೆ ಸಂಶೋಧನಾ ಸಂಸ್ಥೆʼಗೆ ಶಂಕುಸ್ಥಾಪನೆ

"ಕಳೆದ ಒಂಬತ್ತು ವರ್ಷಗಳಲ್ಲಿ ಈಶಾನ್ಯದಲ್ಲಿ ಸಾಮಾಜಿಕ ಮೂಲಸೌಕರ್ಯ ಗಮನಾರ್ಹವಾಗಿ ಸುಧಾರಿಸಿದೆ"

"ನಾವು ಜನರಿಗಾಗಿ 'ಸೇವಾ ಭಾವ'ದೊಂದಿಗೆ ಕೆಲಸ ಮಾಡುತ್ತೇವೆ"

"ನಾವು ಈಶಾನ್ಯದ ಅಭಿವೃದ್ಧಿಯ ಮೂಲಕ ಭಾರತದ ಅಭಿವೃದ್ಧಿಯ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ"

"ಸರಕಾರದ ನೀತಿ, ಉದ್ದೇಶಗಳು ಮತ್ತು ಬದ್ಧತೆಗಳು ಸ್ವಹಿತಾಸಕ್ತಿಯಿಂದ ಪ್ರೇರಿತವಾಗಿಲ್ಲ, ಬದಲಿಗೆ 'ದೇಶ ಮೊದಲು - ಜನರು ಮೊದಲು' ಎಂಬ ಮನೋಭಾವದಿಂದ ಪ್ರೇರಿತವಾಗಿವೆ.

"ವಂಶಪಾರಂಪರ್ಯ, ಪ್ರಾದೇಶಿಕತೆ, ಭ್ರಷ್ಟಾಚಾರ ಮತ್ತು ಅಸ್ಥಿರತೆಯ ರಾಜಕೀಯವು ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದಾಗ ಅಭಿವೃದ್ಧಿ ಅಸಾಧ್ಯವಾಗುತ್ತದೆ"

"ನಮ್ಮ ಸರಕಾರ ಪ್ರಾರಂಭಿಸಿದ ಯೋಜನೆಗಳು ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ಒದಗಿಸಿವೆ"

"ನಮ್ಮ ಸರಕಾರವು 21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಭಾರತದ ಆರೋಗ್ಯ ಕ್ಷೇತ್ರವನ್ನು ಆಧುನೀಕರಿಸುತ್ತಿದೆ"

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆಗೆ ಅತಿದೊಡ್ಡ ಆಧಾರವೆಂದರೆ ಅದು ʻಸಬ್ ಕಾ ಪ್ರಯಾಸ್ʼ: ಪ್ರಧಾನಿ

Posted On: 14 APR 2023 2:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ 3,400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳ ಶಂಕುಸ್ಥಾಪನೆ/ಲೋಕಾರ್ಪಣೆ ನೆರವೇರಿಸಿದರು. ʻಏಮ್ಸ್ʼ ಗುವಾಹಟಿ ಮತ್ತು ಇತರ ಮೂರು ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಿದರು. ಅವರು ʻಅಸ್ಸಾಂ ಅತ್ಯಾಧುನಿಕ ಆರೋಗ್ಯ ಸೇವೆ ಸಂಶೋಧನಾ ಸಂಸ್ಥೆʼಗೆ(ಎಎಎಚ್ಐಐ) ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ʻಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ(ಎಬಿ-ಪಿಎಂಜೆಎವೈ) ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಮೂಲಕ 'ಆಪ್‌ ಕೆ ದ್ವಾರ್ ಆಯುಷ್ಮಾನ್' ಅಭಿಯಾನಕ್ಕೆ ಚಾಲನೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಸ್ಸಾಮಿಗಳ ಹೊಸ ವರ್ಷದ ಆರಂಭವನ್ನು ಸಂಕೇತಿಸುವ ʻರೊಂಗಲಿ ಬಿಹುʼ ಪ್ರಯುಕ್ತ ರಾಜ್ಯದ ಜನತೆಗೆ ಶುಭ ಕೋರಿದರು. ಈಶಾನ್ಯ ಭಾರತವು ತನ್ನ ಮೊದಲ ʻಏಮ್ಸ್ʼ ಮತ್ತು ʻಅಸ್ಸಾಂ ರಾಜ್ಯವು ಮೂರು ಹೊಸ ವೈದ್ಯಕೀಯ ಕಾಲೇಜುಗಳನ್ನು ಪಡೆಯುವುದರಿಂದ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಆರೋಗ್ಯ ಮೂಲಸೌಕರ್ಯಕ್ಕೆ ಹೊಸ ಶಕ್ತಿ ಬಂದಿದೆ ಎಂದು ಪ್ರಧಾನಿ ಹೇಳಿದರು. ʻಐಐಟಿ ಗುವಾಹಟಿʼ ಸಹಯೋಗದೊಂದಿಗೆ ಸುಧಾರಿತ ಸಂಶೋಧನೆಗಾಗಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಅಸ್ಸಾಂನ ಲಕ್ಷಾಂತರ ನಾಗರಿಕರಿಗೆ ʻಆಯುಷ್ಮಾನ್ ಕಾರ್ಡ್ʼಗಳನ್ನು ವಿತರಿಸುವ ಕೆಲಸವು ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅವರು ಗಮನಿಸಿದರು. ನೆರೆಯ ರಾಜ್ಯಗಳಾದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ ಮತ್ತು ಮಿಜೋರಾಂನ ನಾಗರಿಕರು ಸಹ ಈ ಅಭಿವೃದ್ಧಿ ಯೋಜನೆಗಳ ಲಾಭ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. ಇಂದಿನ ಯೋಜನೆಗಳಿಗಾಗಿ ಪ್ರಧಾನಮಂತ್ರಿಯವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕಳೆದ 8-9 ವರ್ಷಗಳಲ್ಲಿ ಈಶಾನ್ಯ ಭಾರತದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಮಾಡಲಾದ ಪ್ರಯತ್ನಗಳು;  ರಸ್ತೆ, ರೈಲು ಮತ್ತು ವಿಮಾನ ನಿಲ್ದಾಣ ಮೂಲಸೌಕರ್ಯಗಳಲ್ಲಿ ಕಂಡು ಬಂದಿರುವ ಸುಧಾರಣೆಯನ್ನು ಪ್ರಧಾನಿ ಉಲ್ಲೇಖಿಸಿದರು. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಅಭೂತಪೂರ್ವ ರೀತಿಯಲ್ಲಿ ವಿಸ್ತರಿಸಿರುವುದರಿಂದ ಭೌತಿಕ ಮೂಲಸೌಕರ್ಯಗಳ ಜೊತೆಗೆ ಸಾಮಾಜಿಕ ಮೂಲಸೌಕರ್ಯಕ್ಕೂ ಈ ಪ್ರದೇಶದಲ್ಲಿ ಭಾರಿ ಉತ್ತೇಜನ ದೊರೆತಿದೆ ಎಂದು ಪ್ರಧಾನಿ ಹೇಳಿದರು. ಪ್ರಧಾನಮಂತ್ರಿಯವರು ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ ಹಲವಾರು ವೈದ್ಯಕೀಯ ಕಾಲೇಜುಗಳನ್ನು ರಾಜ್ಯಕ್ಕೆ ಸಮರ್ಪಿಸಿದ್ದರು ಮತ್ತು ಇಂದು ಅವರು ʻಏಮ್ಸ್ʼ ಮತ್ತು ಮೂರು ವೈದ್ಯಕೀಯ ಕಾಲೇಜುಗಳನ್ನು ಸಮರ್ಪಿಸಿದರು. ಈ ಪ್ರದೇಶದಲ್ಲಿ ನಿರಂತರವಾಗಿ ಸುಧಾರಿಸುತ್ತಿರುವ ರೈಲು-ರಸ್ತೆ ಸಂಪರ್ಕದಿಂದ ಆಸ್ಪತ್ರೆಗಳಿಗೆ ತೆರಳಲು ರೋಗಿಗಳಿಗೆ ಆಗುತ್ತಿರುವ ಪ್ರಯೋಜನವನ್ನು ಪ್ರಧಾನಿ ಒತ್ತಿಹೇಳಿದರು.

ಈ ಹಿಂದಿನ ಸರಕಾರಗಳ ಆಡಳಿತಾವಧಿಯಲ್ಲಿ ಮನ್ನಣೆಗಾಗಿ ಸರಕಾರಗಳ ಹಾತೊರೆತ ಮತ್ತು ಜನಸಾಮಾನ್ಯರ ಮೇಲೆ ಪ್ರಭುತ್ವ ಸಾಧಿಸುವ ಅವುಗಳ ಹಂಬಲವು ರಾಷ್ಟ್ರವನ್ನು ಹೇಗೆ ಅಸಹಾಯವಾಗಿಸಿತು ಎಂಬುದನ್ನು ಪ್ರಧಾನಿ ಸ್ಮರಿಸಿದರು. ಸಾರ್ವಜನಿಕರು ದೇವರ ಒಂದು ರೂಪ ಎಂದು ಗಮನಸೆಳೆದರು. ಹಿಂದಿನ ಸರಕಾರಗಳು ಈಶಾನ್ಯ ರಾಜ್ಯಗಳ ಕಡೆಗೆ ಪರಕೀಯತೆಯ ಭಾವನೆಯನ್ನು ಸೃಷ್ಟಿಸಿದ್ದವು ಮತ್ತು ಈಶಾನ್ಯ ಭಾರತವನ್ನು ಮುಖ್ಯ ಭೂಭಾಗದಿಂದ ತುಂಬಾ ದೂರದಲ್ಲಿವೆ ಎಂದು ಪರಿಗಣಿಸಿದ್ದವು ಎಂದು ಅವರು ಹೇಳಿದರು. ಆದರೆ ಪ್ರಸ್ತುತ ಸರಕಾರವು ಸೇವಾ ಆಧಾರಿತ ಆಡಳಿತದ ಮೇಲೆ ವಿಶ್ವಾಸ ಹೊಂದಿದೆ. ಇದು ಈಶಾನ್ಯವನ್ನು ಸರಕಾರಕ್ಕೆ ಹೆಚ್ಚು ಸಮೀಪವಾಗುವಂತೆ ಮಾಡಿದೆ. ಈ ಸಾಮೀಪ್ಯದ ಭಾವನೆಯು ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಪ್ರಧಾನಿ ವಿವರಿಸಿದರು.

ಈಶಾನ್ಯದ ಜನರು ತಮ್ಮ ಹಣೆಬರಹಗಳನ್ನು ಬದಲಾಯಿಸುವ ಮತ್ತು ಅಭಿವೃದ್ಧಿ ಹೊಂದುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. "ನಾವು ಈಶಾನ್ಯದ ಅಭಿವೃದ್ಧಿಯ ಮೂಲಕ ಭಾರತದ ಅಭಿವೃದ್ಧಿ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ. ಅಭಿವೃದ್ಧಿಯ ಈ ಚಳವಳಿಯಲ್ಲಿ ಕೇಂದ್ರ ಸರಕಾರವು ಸ್ನೇಹಿತ ಮತ್ತು ಸೇವಕನಾಗಿ ಕೈ ಜೋಡಿಸುತ್ತದೆ", ಎಂದು ಪ್ರಧಾನಿ ಹೇಳಿದರು.

ಈ ಪ್ರದೇಶದ ದೀರ್ಘಕಾಲದ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ವಂಶಪಾರಂಪರ್ಯ, ಪ್ರಾದೇಶಿಕತೆ, ಭ್ರಷ್ಟಾಚಾರ ಮತ್ತು ಅಸ್ಥಿರತೆಯ ರಾಜಕೀಯವು ಮೇಲುಗೈ ಸಾಧಿಸಲು ಪ್ರಾರಂಭಿಸಿದಾಗ ಅಭಿವೃದ್ಧಿ ಅಸಾಧ್ಯವಾಗುತ್ತದೆ ಎಂದರು. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಹೀಗೆಯೇ ಆಗಿದೆ ಎಂದು ಪ್ರಧಾನಿ ಹೇಳಿದರು. 50ರ ದಶಕದಲ್ಲಿ ಸ್ಥಾಪಿಸಲಾದ ʻಏಮ್ಸ್ʼನ ಉದಾಹರಣೆಯನ್ನು ನೀಡುವ ಮೂಲಕ ಅವರು ಇದನ್ನು ವಿವರಿಸಿದರು. ದೇಶದ ಇತರ ಭಾಗಗಳಲ್ಲಿ ʻಏಮ್ಸ್ʼ ತೆರೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತಾದರೂ, ನಂತರದ ವರ್ಷಗಳಲ್ಲಿ ಪ್ರಯತ್ನಗಳು ಮುಂದುವರಿಯಲಿಲ್ಲ. 2014ರ ನಂತರ ಹಾಲಿ ಸರಕಾರವು ಈ ಸಮಸ್ಯೆಗಳನ್ನು ಪರಿಹರಿಸಿದೆ ಎಂದು ಪ್ರಧಾನಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಸರಕಾರವು 15 ʻಏಮ್ಸ್ʼ ಸ್ಥಾಪನೆ ಕೆಲಸವನ್ನು ಪ್ರಾರಂಭಿಸಿದೆ. ಈ ಪೈಕಿ ಹೆಚ್ಚಿನವುಗಳಲ್ಲಿ ಈಗಾಗಲೇ ಚಿಕಿತ್ಸೆಗಳು ಹಾಗೂ ಕೋರ್ಸ್‌ಗಳು ಪ್ರಾರಂಭವಾಗಿವೆ ಎಂದು ಅವರು ಮಾಹಿತಿ ನೀಡಿದರು. "ನಮ್ಮ ಸರಕಾರ ಎಲ್ಲ ನಿರ್ಣಯಗಳನ್ನು ಈಡೇರಿಸುತ್ತದೆ ಎಂಬುದಕ್ಕೆ ಗುವಾಹಟಿಯ ಏಮ್ಸ್ ಕೂಡ ಒಂದು ಉದಾಹರಣೆಯಾಗಿದೆ", ಎಂದು ಪ್ರಧಾನಿ ಹೇಳಿದರು.

ಹಿಂದಿನ ಸರಕಾರಗಳ ನೀತಿಗಳು ದೇಶದಲ್ಲಿ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಕೊರತೆಯನ್ನು ಸೃಷ್ಟಿಸಿವೆ. ಜೊತೆಗೆ ಗುಣಮಟ್ಟದ ಆರೋಗ್ಯ ಸೇವೆಯು ಸಾಮಾನ್ಯ ಜನರ ಕೈಗೆಟುಕದಂತೆ ತಡೆಗೋಡೆ ನಿರ್ಮಿಸಿವೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಕಳೆದ 9 ವರ್ಷಗಳಲ್ಲಿ, ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ವೃತ್ತಿಪರರನ್ನು ಉತ್ತೇಜಿಸಲು ಸರಕಾರ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 2014ಕ್ಕೆ ಒಂದು ದಶಕದ ಮೊದಲು ಕೇವಲ 150 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದವು. ಇದಕ್ಕೆ ಹೋಲಿಸಿದರೆ ಕಳೆದ 9ವರ್ಷಗಳಲ್ಲಿ ಸರಿಸುಮಾರು 300 ವೈದ್ಯಕೀಯ ಕಾಲೇಜುಗಳು ಕಾರ್ಯಾರಂಭ ಮಾಡಿವೆ ಎಂದರು. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ʻಎಂಬಿಬಿಎಸ್ʼ ಸೀಟುಗಳ ಸಂಖ್ಯೆ ದ್ವಿಗುಣಗೊಂಡು ಸುಮಾರು 1 ಲಕ್ಷಕ್ಕೆ ತಲುಪಿದ್ದರೆ, ಪಿಜಿ ಸೀಟುಗಳು ಶೇಕಡಾ 110 ರಷ್ಟು ಏರಿಕೆ ಕಂಡಿವೆ ಎಂದು ಅವರು ಹೇಳಿದರು. ದೇಶದಲ್ಲಿ ವೈದ್ಯಕೀಯ ಶಿಕ್ಷಣದ ವಿಸ್ತರಣೆಗಾಗಿ ʻರಾಷ್ಟ್ರೀಯ ವೈದ್ಯಕೀಯ ಆಯೋಗʼವನ್ನು ಸ್ಥಾಪಿಸಲಾಗಿದೆ.  ಹಿಂದುಳಿದ ಕುಟುಂಬಗಳ ಯುವಕರು ವೈದ್ಯರಾಗಬೇಕೆಂಬ ತಮ್ಮ ಕನಸುಗಳನ್ನು ಈಡೇರಿಸಲು ಮೀಸಲಾತಿಯನ್ನು ಸಹ ಖಾತ್ರಿಪಡಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ವರ್ಷದ ಆಯವ್ಯಯದ ಭಾಗವಾಗಿ 150ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳನ್ನು ಸಹ ಘೋಷಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈಶಾನ್ಯದಲ್ಲಿ, ಕಳೆದ 9 ವರ್ಷಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳದ ಜೊತೆಗೆ ಈ ಪ್ರದೇಶದ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಹಲವಾರು ಹೊಸ ಕಾಲೇಜುಗಳ ಕಾಮಗಾರಿಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.

ಕೇಂದ್ರದಲ್ಲಿ ಬಲವಾದ ಮತ್ತು ಸ್ಥಿರವಾದ ಸರಕಾರ ಇರುವುದೇ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಅಪಾರ ಕೆಲಸಗಳಿಗೆ ಕಾರಣ ಎಂದು ಪ್ರಧಾನಿ ಹೇಳಿದರು. ಬಿಜೆಪಿ ಸರಕಾರದ ನೀತಿಯಲ್ಲಿ, ಉದ್ದೇಶಗಳು ಮತ್ತು ಬದ್ಧತೆಗಳು ಸ್ವಹಿತಾಸಕ್ತಿಯಿಂದ ಪ್ರೇರಿತವಾಗಿಲ್ಲ. ಬದಲಿಗೆ, 'ದೇಶ ಮೊದಲು - ದೇಶವಾಸಿಗಳು ಮೊದಲು' ಎಂಬ ಮನೋಭಾವದಿಂದ ಪ್ರೇರಿತವಾಗಿವೆ ಎಂದು ಅವರು ಹೇಳಿದರು. ಅದಕ್ಕಾಗಿಯೇ, ಸರಕಾರ ʻವೋಟ್ ಬ್ಯಾಂಕ್ʼ ಕಡೆ ಗಮನ ಹರಿಸದೆ, ನಾಗರಿಕರ ಸಮಸ್ಯೆಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸುತ್ತದೆ ಎಂದು ಅವರು ಹೇಳಿದರು. ಬಡ ಕುಟುಂಬಗಳು ವೈದ್ಯಕೀಯ ಚಿಕಿತ್ಸೆಗಾಗಿ ಎದುರಿಸುವ ಹಣಕಾಸಿನ ಕೊರತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಒದಗಿಸುವ ʻಆಯುಷ್ಮಾನ್ʼ ಯೋಜನೆಯ ಬಗ್ಗೆ ಉಲ್ಲೇಖಿಸಿದರು. ಅಂತೆಯೇ, 9000 ʻಜನೌಷಧ ಕೇಂದ್ರʼಗಳು ಕೈಗೆಟುಕುವ ದರದಲ್ಲಿ ಔಷಧಗಳನ್ನು ಒದಗಿಸುತ್ತಿವೆ. ಪ್ರತಿ ಜಿಲ್ಲೆಯಲ್ಲೂ ಕೈಗೆಟುಕುವ ದರದಲ್ಲಿ ʻಸ್ಟೆಂಟ್ʼ ಮತ್ತು ಮೊಣಕಾಲು ಅಳವಡಿಕೆ ಹಾಗೂ ಉಚಿತ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಬಗ್ಗೆ ಅವರು ಉಲ್ಲೇಖಿಸಿದರು. 1.5 ಲಕ್ಷಕ್ಕೂ ಹೆಚ್ಚು ʻಸ್ವಾಸ್ಥ್ಯ ಕೇಂದ್ರʼಗಳು ಆರಂಭಿಕ ರೋಗನಿರ್ಣಯ ಮತ್ತು ಉತ್ತಮ ಚಿಕಿತ್ಸೆಗಾಗಿ ಪ್ರಮುಖ ಪರೀಕ್ಷೆಗಳನ್ನು ಒದಗಿಸುತ್ತಿವೆ. ʻಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತʼ ಅಭಿಯಾನವು ದೇಶ ಮತ್ತು ಬಡವರ ಪ್ರಮುಖ ವೈದ್ಯಕೀಯ ಸವಾಲನ್ನು ಸಹ ಪರಿಹರಿಸುತ್ತಿದೆ. ಸ್ವಚ್ಛತೆ, ಯೋಗ ಮತ್ತು ಆಯುರ್ವೇದದ ಮೂಲಕ ರೋಗ ತಡೆ ಮಾತ್ರವಲ್ಲದೆ, ಜನರ ಸ್ವಾಸ್ಥ್ಯವನ್ನು ಸುಧಾರಣೆಗೆ ಸಹಾಯಕವಾಗುತ್ತದೆ ಎಂದರು.

ಸರಕಾರದ ಯೋಜನೆಗಳ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಸೌಭಾಗ್ಯ ಎಂದು ಹೇಳಿದರು. ʻಆಯುಷ್ಮಾನ್ ಭಾರತ್ ಪಿಎಂ ಜನ ಆರೋಗ್ಯ ಯೋಜನೆʼಯ ಉದಾಹರಣೆಯನ್ನು ನೀಡಿದ ಅವರು, ಇದು ಬಡವರಿಗೆ ಒಟ್ಟು 80,000 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡುವ ಬೆಂಬಲ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ʻಜನೌಷಧ ಕೇಂದ್ರʼಗಳು ಮಧ್ಯಮ ವರ್ಗದವರಿಗೆ 20,000 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡಿವೆ ಎಂದು ಅವರು ಶ್ಲಾಘಿಸಿದರು. ʻಸ್ಟೆಂಟ್‌ʼಗಳು ಮತ್ತು ಮೊಣಕಾಲು ಅಳವಡಿಕೆಗಳ ವೆಚ್ಚವನ್ನು ಕಡಿಮೆ ಮಾಡುವುದರಿಂದ ಬಡ ಮತ್ತು ಮಧ್ಯಮ ವರ್ಗದವರು ಪ್ರತಿವರ್ಷ 13,000 ಕೋಟಿ ರೂ.ಗಳನ್ನು ಉಳಿಸುತ್ತಿದ್ದಾರೆ. ಅಲ್ಲದೆ, ಉಚಿತ ಡಯಾಲಿಸಿಸ್ ಸೌಲಭ್ಯವು ಬಡ ಮೂತ್ರಪಿಂಡ ರೋಗಿಗಳಿಗೆ 500 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು. ಅಸ್ಸಾಂನಲ್ಲಿ ಸುಮಾರು 1 ಕೋಟಿ ʻಆಯುಷ್ಮಾನ್ ಭಾರತ್ ಕಾರ್ಡ್ʼ ಗಳನ್ನು ಹಸ್ತಾಂತರಿಸುವ ಅಭಿಯಾನವೂ ಪ್ರಾರಂಭವಾಗಿದೆ, ಇದು ಅವರಿಗೆ ಹೆಚ್ಚಿನ ಹಣವನ್ನು ಉಳಿಸಲು ಮತ್ತಷ್ಟು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳು ಮಹಿಳೆಯರ ಕಲ್ಯಾಣದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಪ್ರಧಾನಮಂತ್ರಿಯವರು ಸುದೀರ್ಘವಾಗಿ ಮಾತನಾಡಿದರು. ಸಾಂಪ್ರದಾಯಿಕವಾಗಿ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಲು ಹಿಂಜರಿಯುವ ಬಗ್ಗೆ ಅವರು ಹೇಳಿದರು. ಶೌಚಾಲಯಗಳ ವಿಸ್ತರಣೆಯು ಮಹಿಳೆಯರನ್ನು ಅನೇಕ ಕಾಯಿಲೆಗಳಿಂದ ರಕ್ಷಿಸಿದೆ ಮತ್ತು ʻಉಜ್ವಲʼ ಎಲ್‌ಪಿಜಿ ಸಂಪರ್ಕಗಳು ಅವರನ್ನು ಹೊಗೆ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿವೆ ಎಂದು ಅವರು ಹೇಳಿದರು. ʻಜಲ ಜೀವನ್ ಮಿಷನ್ʼ ನೀರಿನಿಂದ ಹರಡುವ ರೋಗಗಳಿಂದ ಜನರನ್ನು ರಕ್ಷಿಸಿದೆ. ʻಮಿಷನ್ ಇಂದ್ರಧನುಷ್ʼ ಅಭಿಯಾನವು ಗಂಭೀರ ಕಾಯಿಲೆಗಳಿಗೆ ಉಚಿತ ಲಸಿಕೆ ನೀಡುವ ಮೂಲಕ ಮಹಿಳೆಯರ ಜೀವ ಉಳಿಸಿದೆ. ʻಆಯುಷ್ಮಾನ್ ಭಾರತ್ʼ, ʻಪ್ರಧಾನ ಮಂತ್ರಿ ಮಾತೃವಂದನಾ ಯೋಜನೆʼ ಮತ್ತು ʻರಾಷ್ಟ್ರೀಯ ಪೌಷ್ಟಿಕತೆ ಮಿಷನ್ʼ ಯೋಜನೆಗಳು ಮಹಿಳೆಯರ ಆರೋಗ್ಯ ಸೂಚ್ಯಂಕಗಳಣ್ನು ಸುಧಾರಿಸಿವೆ ಎಂದರು. "ಸರಕಾರ ಸಂವೇದನಾಶೀಲವಾಗಿದ್ದಾಗ ಮಾತ್ರ, ಬಡವರ ಬಗ್ಗೆ ಸೇವಾ ಭಾವನೆ ಇದ್ದಾಗ, ಅಂತಹ ಕೆಲಸಗಳನ್ನು ಮಾಡಲು ಸಾಧ್ಯ" ಎಂದು ಪ್ರಧಾನಿ ಹೇಳಿದರು.

"ನಮ್ಮ ಸರಕಾರವು 21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಭಾರತದ ಆರೋಗ್ಯ ಕ್ಷೇತ್ರವನ್ನು ಆಧುನೀಕರಿಸುತ್ತಿದೆ," ಎಂದು ಶ್ರೀ ಮೋದಿ ಹೇಳಿದರು. ʻಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ʼ ಮತ್ತು ʻಡಿಜಿಟಲ್ ಹೆಲ್ತ್ ಐಡಿʼಯನ್ನು ಈ ಪಟ್ಟಿಗೆ ಸೇರಿಸಿದರು. ಇದು ಒಂದೇ ಕ್ಲಿಕ್‌ನಲ್ಲಿ ನಾಗರಿಕರ ಡಿಜಿಟಲ್‌ ಆರೋಗ್ಯ ದಾಖಲೆಗಳನ್ನು ಸೃಷ್ಟಿಸುತ್ತದೆ ಮತ್ತು ಆಸ್ಪತ್ರೆ ಸೇವೆಗಳನ್ನು ಸುಧಾರಿಸುತ್ತದೆ. ಈವರೆಗೆ 38 ಕೋಟಿ ಆರೋಗ್ಯ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ಮತ್ತು 1.5 ಲಕ್ಷ ಆರೋಗ್ಯ ವೃತ್ತಿಪರರನ್ನು ಇದರಡಿ ದೃಢೀಕರಿಸಲಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ʻಇ-ಸಂಜೀವಿನಿʼಯ ಜನಪ್ರಿಯತೆಯ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು, ಈ ಯೋಜನೆಯ ಮೂಲಕ 10 ಕೋಟಿ ಇ-ಸಮಾಲೋಚನೆಯನ್ನು ಪೂರ್ಣಗೊಳಿಸಿದ ಸಾಧನೆಯನ್ನು ಉಲ್ಲೇಖಿಸಿದರು.

"ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆಗೆ ಅತಿ ದೊಡ್ಡ ಆಧಾರವೆಂದರೆ ಅದು ʻಸಬ್ ಕಾ ಪ್ರಯಾಸ್ʼ (ಎಲ್ಲರ ಪ್ರಯತ್ನ)", ಎಂದು ಪ್ರಧಾನಿ ಹೇಳಿದರು. ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ʻಸಬ್‌ ಕಾ ಪ್ರಯಾಸ್‌ʼ ಸ್ಫೂರ್ತಿಯನ್ನು ಅವರು ಸ್ಮರಿಸಿದರು. ಇಡೀ ಜಗತ್ತು ವಿಶ್ವದ ಅತಿದೊಡ್ಡ, ತ್ವರಿತ ಮತ್ತು ಅತ್ಯಂತ ಪರಿಣಾಮಕಾರಿ ಕೋವಿಡ್ ಲಸಿಕೀಕರಣ ಅಭಿಯಾನವನ್ನು ಶ್ಲಾಘಿಸುತ್ತಿದೆ ಎಂದು ಹೇಳಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ʻಮೇಡ್ ಇನ್ ಇಂಡಿಯಾʼ ಲಸಿಕೆಗಳನ್ನು ದೂರದ ಸ್ಥಳಗಳಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು ಮತ್ತು ಔಷಧ ವಲಯದ ಕೊಡುಗೆಗಳನ್ನು ಅವರು ಉಲ್ಲೇಖಿಸಿದರು. "ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನ) ಮತ್ತು ʻಸಬ್ ಕಾ ವಿಶ್ವಾಸ್ʼ (ಎಲ್ಲರ ನಂಬಿಕೆ) ಇದ್ದಾಗ ಮಾತ್ರ ಇಷ್ಟು ದೊಡ್ಡ ಮಹಾಯಜ್ಞ ಯಶಸ್ವಿಯಾಗುತ್ತದೆ," ಎಂದು ಪ್ರಧಾನಿ ಹೇಳಿದರು. ಪ್ರತಿಯೊಬ್ಬರೂ ʻಸಬ್ ಕಾ ಪ್ರಯಾಸ್ʼ ಸ್ಫೂರ್ತಿಯೊಂದಿಗೆ ಮುನ್ನಡೆಯಬೇಕು ಮತ್ತು ಆರೋಗ್ಯಕರ ಭಾರತ, ಸಮೃದ್ಧ ಭಾರತದ ಧ್ಯೇಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಮನವಿ ಮಾಡುವ ಮೂಲಕ ಅವರು ತಮ್ಮ ಮಾತು ಮುಗಿಸಿದರು.

ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವರಾದ ಡಾ.ಭಾರತಿ ಪವಾರ್ ಮತ್ತು ಅಸ್ಸಾಂ ಸರಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಗುವಾಹಟಿಯ ʻಏಮ್ಸ್ʼ ಕಾರ್ಯಾರಂಭವು ಅಸ್ಸಾಂ ರಾಜ್ಯ ಮತ್ತು ಇಡೀ ಈಶಾನ್ಯ ಭಾರತಕ್ಕೆ ಒಂದು ಮಹತ್ವದ ಸಂದರ್ಭವಾಗಿದೆ. ಇದು ದೇಶಾದ್ಯಂತ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವ ಪ್ರಧಾನಮಂತ್ರಿಯವರ ಬದ್ಧತೆಗೆ ಸಾಕ್ಷಿಯಾಗಿದೆ. ಈ ಆಸ್ಪತ್ರೆಗೆ 2017ರ ಮೇ ತಿಂಗಳಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. 1120 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ʻಏಮ್ಸ್ ಗುವಾಹಟಿʼ ಅತ್ಯಾಧುನಿಕ ಆಸ್ಪತ್ರೆಯಾಗಿದ್ದು, 30 ಆಯುಷ್ ಹಾಸಿಗೆಗಳು ಸೇರಿದಂತೆ 750 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಈ ಆಸ್ಪತ್ರೆಯು ಈಶಾನ್ಯದ ಜನರಿಗೆ ವಿಶ್ವದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಪ್ರತಿವರ್ಷ 100 ʻಎಂಬಿಬಿಎಸ್ʼ ವಿದ್ಯಾರ್ಥಿಗಳ ವಾರ್ಷಿಕ ಪ್ರವೇಶ ಸಾಮರ್ಥ್ಯವನ್ನು ಹೊಂದಿರುತ್ತದೆ.

ಪ್ರಧಾನಮಂತ್ರಿಯವರು ಮೂರು ವೈದ್ಯಕೀಯ ಕಾಲೇಜುಗಳನ್ನೂ ರಾಷ್ಟ್ರಕ್ಕೆ ಸಮರ್ಪಿಸಿದರು, ಅವುಗಳೆಂದರೆ ನಲ್ಬರಿಯ  ʻನಲ್ಬರಿ ವೈದ್ಯಕೀಯ ಕಾಲೇಜುʼ, ನಾಗಾಂವ್ನ ʻನಾಗಾಂವ್‌ ವೈದ್ಯಕೀಯ ಕಾಲೇಜುʼ; ಮತ್ತು ಕೋಕ್ರಜಾರ್‌ನ ʻಕೋಕ್ರಜಾರ್‌ ವೈದ್ಯಕೀಯ ಕಾಲೇಜುʼ. ಇವುಗಳನ್ನು ಕ್ರಮವಾಗಿ ಸುಮಾರು 615 ಕೋಟಿ, 600 ಕೋಟಿ ಮತ್ತು 535 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ತುರ್ತು ಸೇವೆಗಳು, ಐಸಿಯು ಸೌಲಭ್ಯಗಳು, ಒಟಿ ಮತ್ತು ಡಯಾಗ್ನೋಸ್ಟಿಕ್ ಸೌಲಭ್ಯಗಳು ಇವೆ. ಒಪಿಡಿ / ಐಪಿಡಿ ಸೇವೆಗಳೊಂದಿಗೆ 500 ಹಾಸಿಗೆಗಳ ಬೋಧನಾ ಆಸ್ಪತ್ರೆಯನ್ನೂ ಒಳಗೊಂಡಿದೆ.  ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ವಾರ್ಷಿಕ 100 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಾತಿ ಸಾಮರ್ಥ್ಯವಿರುತ್ತದೆ.

ಪ್ರಧಾನಮಂತ್ರಿಯವರು 'ಆಪ್‌ ಕೆ ದ್ವಾರ್ ಆಯುಷ್ಮಾನ್' ಅಭಿಯಾನವನ್ನು ಔಪಚಾರಿಕವಾಗಿ ಪ್ರಾರಂಭಿಸಿದ್ದು, ಕಲ್ಯಾಣ ಯೋಜನೆಗಳ ಶೇ.100 ರಷ್ಟು ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪುವ ಅವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಪ್ರಧಾನಮಂತ್ರಿಯವರು ʻಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆʼ (ಎಬಿ-ಪಿಎಂಜೆಎವೈ) ಕಾರ್ಡ್‌ಗಳನ್ನು ಮೂವರು ಪ್ರತಿನಿಧಿ ಫಲಾನುಭವಿಗಳಿಗೆ ವಿತರಿಸಿದರು. ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 1.1 ಕೋಟಿ ಎಬಿ-ಪಿಎಂಜೆಎವೈ ಕಾರ್ಡ್ ಗಳನ್ನು ವಿತರಿಸಲಾಯಿತು.

ʻಅಸ್ಸಾಂ ಅತ್ಯಾಧುನಿಕ ಆರೋಗ್ಯ ಸೇವೆ ಸಂಶೋಧನಾ ಸಂಸ್ಥೆʼಗೆ(ಎಎಎಚ್ಐಐ) ಶಂಕುಸ್ಥಾಪನೆ ನೆರವೇರಿಸಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿಯವರ 'ಆತ್ಮನಿರ್ಭರ ಭಾರತ್' ಮತ್ತು 'ಮೇಕ್ ಇನ್ ಇಂಡಿಯಾ' ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೂ ಸಹ ಮಹತ್ವದ ಹೆಜ್ಜೆಯಾಗಿದೆ. ದೇಶದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಬಳಸಲಾಗುವ ಬಹುಪಾಲು ತಂತ್ರಜ್ಞಾನಗಳನ್ನು ವಿಭಿನ್ನ ಸಂದರ್ಭಗಳಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ. ಭಾರತೀಯ ಪರಿಸರದಲ್ಲಿ ಇದರ ಕಾರ್ಯನಿರ್ವಹಣೆಯು ಹೆಚ್ಚು ದುಬಾರಿ ಮತ್ತು ಸಂಕೀರ್ಣತೆಯಿಂದ ಕೂಡಿರುತ್ತದೆ. ಈ ಹಿನ್ನೆಲೆಯಲ್ಲಿ ʻಎಎಎಚ್ಐಐʼ ಸ್ಥಾಪಿಸಲಾಗುತ್ತಿದೆ. ನಮ್ಮ ಸ್ವಂತ ಸಮಸ್ಯೆಗಳಿಗೆ ನಾವು ನಮ್ಮದೇ ಆದ ಪರಿಹಾರಗಳನ್ನು ಕಂಡುಕೊಳ್ಳುವತ್ತ ಇದು ಕೆಲಸ ಮಾಡುತ್ತದೆ. ಸುಮಾರು 546 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ʻಎಎಎಚ್ಐಐʼ, ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅತ್ಯಾಧುನಿಕ ಆವಿಷ್ಕಾರಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ರಾಷ್ಟ್ರದ ವಿಶಿಷ್ಟ ಸಮಸ್ಯೆಗಳನ್ನು ಗುರುತಿಸುತ್ತದೆ ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

 

***



(Release ID: 1922443) Visitor Counter : 99