ಪ್ರಧಾನ ಮಂತ್ರಿಯವರ ಕಛೇರಿ

ಏಪ್ರಿಲ್ 8 ಮತ್ತು 9 ರಂದು ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಪ್ರಧಾನಿ ಭೇಟಿ


ತೆಲಂಗಾಣದಲ್ಲಿ 11,300 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ, ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ

ಬೀಬಿನಗರ ಎಐಐಎಂಎಸ್ ಮತ್ತು ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಲಿದ್ದಾರೆ

ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ

ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ

ಶ್ರೀ ರಾಮಕೃಷ್ಣ ಮಠದ 125 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ

‘ಪ್ರಾಜೆಕ್ಟ್ ಟೈಗರ್‌ ಯೋಜನೆಯ 50 ವರ್ಷಗಳ ಸ್ಮರಣಾರ್ಥʼಕಾರ್ಯಕ್ರಮವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ ಗೆ ಚಾಲನೆ ನೀಡಲಿದ್ದಾರೆ

Posted On: 05 APR 2023 5:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಏಪ್ರಿಲ್ 8 ಮತ್ತು 9 ರಂದು ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

ಏಪ್ರಿಲ್ 8, 2023 ರಂದು, ಬೆಳಿಗ್ಗೆ 11:45 ಕ್ಕೆ ಪ್ರಧಾನ ಮಂತ್ರಿಯವರು ಸಿಕಂದರಾಬಾದ್ ರೈಲು ನಿಲ್ದಾಣವನ್ನು ತಲುಪುತ್ತಾರೆ. ಅಲ್ಲಿ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ 12:15 ರ ಸುಮಾರಿಗೆ, ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಪ್ರಧಾನಿ, ಅಲ್ಲಿ ಅವರು ಹೈದರಾಬಾದ್‌ನ ಬೀಬಿನಗರ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿಯವರು ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ರೈಲ್ವೆಗೆ ಸಂಬಂಧಿಸಿದ ಇತರ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಪ್ರಧಾನಮಂತ್ರಿಯವರು ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ, ಅಲ್ಲಿ ಅವರು ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿಯವರು ಇತರ ರೈಲ್ವೆ ಯೋಜನೆಗಳನ್ನು ಉದ್ಘಾಟಿಸುವರು ಮತ್ತು ಹಸಿರು ನಿಶಾನೆ ತೋರುವರು. ಪ್ರಧಾನಿಯವರು ಸಂಜೆ 4:45 ಕ್ಕೆ, ಚೆನ್ನೈನಲ್ಲಿರುವ ಶ್ರೀ ರಾಮಕೃಷ್ಣ ಮಠದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6:30ಕ್ಕೆ, ಚೆನ್ನೈನ ಅಲ್‌ಸ್ಟ್ರೋಮ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಏಪ್ರಿಲ್ 9, 2023 ರಂದು, ಬೆಳಿಗ್ಗೆ 7:15 ರ ಸುಮಾರಿಗೆ ಪ್ರಧಾನಿಯವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೂ ಅವರು ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗುವ ‘ಪ್ರಾಜೆಕ್ಟ್ ಟೈಗರ್‌ ಯೋಜನೆಯ 50 ವರ್ಷಗಳ ಸ್ಮರಣಾರ್ಥ’ಕಾರ್ಯಕ್ರಮವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ತೆಲಂಗಾಣದಲ್ಲಿ ಪ್ರಧಾನಮಂತ್ರಿ

ತೆಲಂಗಾಣದಲ್ಲಿ 11,300 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ.

ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್, ಐಟಿ ಸಿಟಿ ಹೈದರಾಬಾದನ್ನು ವೆಂಕಟೇಶ್ವರನ ಸನ್ನಿಧಿ ತಿರುಪತಿಯೊಂದಿಗೆ ಸಂಪರ್ಕಿಸುತ್ತದೆ, ಇದು ಮೂರು ತಿಂಗಳ ಅಲ್ಪಾವಧಿಯಲ್ಲಿ ತೆಲಂಗಾಣದಿಂದ ಪ್ರಾರಂಭವಾಗುತ್ತಿರುವ ಎರಡನೇ ವಂದೇ ಭಾರತ್ ರೈಲು. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಮತ್ತು ಯಾತ್ರಿಕ ಪ್ರಯಾಣಿಕರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

720 ಕೋಟಿ ರೂ. ವೆಚ್ಚದಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಯನ್ನು ಯೋಜಿಸಲಾಗಿದೆ, ಇದು ವಿಶ್ವದರ್ಜೆಯ ಸೌಕರ್ಯಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಸಾಂಪ್ರದಾಯಿಕ ನಿಲ್ದಾಣ ಕಟ್ಟಡದೊಂದಿಗೆ ಬೃಹತ್ ಬದಲಾವಣೆ ಕಾಣುತ್ತದೆ. ಪುನರಾಭಿವೃದ್ಧಿಗೊಂಡ ನಿಲ್ದಾಣವು ಒಂದೇ ಸ್ಥಳದಲ್ಲಿ ಪ್ರಯಾಣಿಕರ ಎಲ್ಲಾ ಸೌಕರ್ಯಗಳೊಂದಿಗೆ ಎರಡು ಹಂತದ ವಿಶಾಲವಾದ ಮೇಲ್ಛಾವಣಿ ಪ್ಲಾಜಾವನ್ನು ಹೊಂದಿರುತ್ತದೆ ಜೊತೆಗೆ ಬಹುಮಾದರಿ ಸಂಪರ್ಕದ ಜೊತೆಗೆ ಪ್ರಯಾಣಿಕರಿಗೆ ರೈಲಿನಿಂದ ಇತರ ಸಾರಿಗೆ ಸಂಪರ್ಕಗಳಿಗೆ ತಡೆರಹಿತ ವರ್ಗಾವಣೆಯನ್ನು ಒದಗಿಸುತ್ತದೆ.

ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ಅವರು ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರ ಪ್ರದೇಶದ ಉಪನಗರ ವಿಭಾಗದಲ್ಲಿ 13 ಹೊಸ ಬಹು-ಮಾದರಿ ಸಾರಿಗೆ ಸೇವೆ (ಎಂಎಂಟಿಎಸ್) ಗಳಿಗೆ ಹಸಿರು ನಿಶಾನೆ ತೋಲಿದ್ದಾರೆ. ಇದು ಪ್ರಯಾಣಿಕರಿಗೆ ವೇಗದ, ಅನುಕೂಲಕರವಾದ ಮತ್ತು ಆರಾಮದಾಯಕವಾದ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ. ಅವರು ಸಿಕಂದರಾಬಾದ್-ಮಹಬೂಬ್‌ನಗರ ಯೋಜನೆಯ ಜೋಡಿ ಮಾರ್ಗ ಮತ್ತು ವಿದ್ಯುದ್ದೀಕರಣ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 1,410 ಕೋಟಿ ರೂಪಾಯಿ ವೆಚ್ಚದಲ್ಲಿ 85 ಕಿಲೋಮೀಟರ್‌ಗೂ ಹೆಚ್ಚು ದೂರದ ಈ ಯೋಜನೆ ಪೂರ್ಣಗೊಂಡಿದೆ. ಯೋಜನೆಯು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ ಮತ್ತು ರೈಲುಗಳ ಸರಾಸರಿ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಹೈದರಾಬಾದ್‌ನ ಬೀಬಿನಗರ ಏಮ್ಸ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ದೇಶದಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಬೀಬಿನಗರ ಏಮ್ಸ್‌ ಅನ್ನು 1,350 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಬೀಬಿನಗರ ಏಮ್ಸ್‌ ಸ್ಥಾಪನೆಯು ತೆಲಂಗಾಣದ ಜನರಿಗೆ ಮನೆ ಬಾಗಿಲಿಗೆ ವ್ಯಾಪಕವಾದ, ಗುಣಮಟ್ಟದ ಮತ್ತು ಸಮಗ್ರ ತೃತೀಯ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 7,850 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ರಸ್ತೆ ಯೋಜನೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳ ರಸ್ತೆ ಸಂಪರ್ಕವನ್ನು ಬಲಪಡಿಸುತ್ತವೆ ಮತ್ತು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

ತಮಿಳುನಾಡಿನಲ್ಲಿ ಪ್ರಧಾನಿ

1260 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು (ಹಂತ-1) ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ಸೇರ್ಪಡೆಯು ವಿಮಾನ ನಿಲ್ದಾಣದ ಪ್ರಯಾಣಿಕರ ಸೇವೆಯ ಸಾಮರ್ಥ್ಯವನ್ನು ವಾರ್ಷಿಕ 23 ಮಿಲಿಯನ್ ಪ್ರಯಾಣಿಕರಿಂದ 30 ಮಿಲಿಯನ್ ಪ್ರಯಾಣಿಕರಿಗೆ ಹೆಚ್ಚಿಸುತ್ತದೆ. ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯ ಪ್ರತಿಬಿಂಬವಾಗಿದೆ, ಇಲ್ಲಿನ ಸಾಂಪ್ರದಾಯಿಕ ವೈಶಿಷ್ಟ್ಯಗಳಾದ ಕೋಲಂ, ಸೀರೆ, ದೇವಾಲಯಗಳು ಮತ್ತು ನೈಸರ್ಗಿಕ ಪರಿಸರವನ್ನು ಬಿಂಬಿಸುವ ಇತರ ಅಂಶಗಳನ್ನು ಒಳಗೊಂಡಿದೆ.

ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ. ತಾಂಬರಂ ಮತ್ತು ಸೆಂಗೋಟ್ಟೈ ನಡುವಿನ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಕೊಯಮತ್ತೂರು, ತಿರುವರೂರ್ ಮತ್ತು ನಾಗಪಟ್ಟಿಣಂ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿರುವ ತಿರುತುರೈಪೂಂಡಿ – ಅಗಸ್ತಿಯಂಪಲ್ಲಿ ಡೆಮು ಸೇವೆಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ.

294 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡಿರುವ ತಿರುತುರೈಪೂಂಡಿ ಮತ್ತು ಅಗಸ್ತಿಯಂಪಲ್ಲಿ ನಡುವಿನ 37 ಕಿಮೀ ಗೇಜ್ ಪರಿವರ್ತನೆ ವಿಭಾಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ನಾಗಪಟ್ಟಿಣಂ ಜಿಲ್ಲೆಯ ಅಗಸ್ತಿಯಂಪಲ್ಲಿಯಿಂದ ಖಾದ್ಯ ಮತ್ತು ಕೈಗಾರಿಕಾ ಉಪ್ಪಿನ ಸಾಗಣೆಗೆ ಅನುಕೂಲವಾಗಲಿದೆ.

ಚೆನ್ನೈನಲ್ಲಿರುವ ಶ್ರೀ ರಾಮಕೃಷ್ಣ ಮಠದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಸ್ವಾಮಿ ರಾಮಕೃಷ್ಣಾನಂದರು 1897 ರಲ್ಲಿ ಚೆನ್ನೈನಲ್ಲಿ ಶ್ರೀ ರಾಮಕೃಷ್ಣ ಮಠವನ್ನು ಪ್ರಾರಂಭಿಸಿದರು. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ವಿವಿಧ ರೀತಿಯ ಮಾನವೀಯ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಆಧ್ಯಾತ್ಮಿಕ ಸಂಸ್ಥೆಗಳಾಗಿವೆ.

ಚೆನ್ನೈನ ಅಲ್‌ಸ್ಟ್ರೋಮ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಸುಮಾರು 3700 ಕೋಟಿ ರೂ.ಗಳ ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧುರೈ ನಗರದಲ್ಲಿ 7.3 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಉದ್ಘಾಟನೆ ಮತ್ತು ರಾಷ್ಟ್ರೀಯ ಹೆದ್ದಾರಿ 785 ರ 24.4 ಕಿಮೀ ಉದ್ದದ ನಾಲ್ಕು ಪಥದ ರಸ್ತೆ ಯೋಜನೆಯನ್ನು ಇವು ಒಳಗೊಂಡಿವೆ. ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಹೆದ್ದಾರಿ-744 ರ ರಸ್ತೆ ನಿರ್ಮಾಣ ಯೋಜನೆಗೂ ಶಂಕುಸ್ಥಾಪನೆಯನ್ನೂ ಮಾಡಲಿದ್ದಾರೆ. 2400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಯೋಜನೆಯು ತಮಿಳುನಾಡು ಮತ್ತು ಕೇರಳ ನಡುವಿನ ಅಂತರ-ರಾಜ್ಯ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಮಧುರೈನ ಮೀನಾಕ್ಷಿ ದೇವಸ್ಥಾನ, ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಾಲಯ ಮತ್ತು ಕೇರಳದ ಶಬರಿಮಲೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲಕವಾಗುತ್ತದೆ.

ಕರ್ನಾಟಕದಲ್ಲಿ ಪ್ರಧಾನಿ

ಪ್ರಧಾನಮಂತ್ರಿಯವರು ಬೆಳಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಮುಂಚೂಣಿಯ ಕ್ಷೇತ್ರ ಸಿಬ್ಬಂದಿ ಮತ್ತು ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಸಹಾಯ ಗುಂಪುಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಆನೆ ಶಿಬಿರದ ಮಾವುತರು ಮತ್ತು ಕಾವಾಡಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ 5 ನೇ ಸುತ್ತಿನ ಪರಿಣಾಮಕಾರಿ ನಿರ್ವಹಣಾ ಮೌಲ್ಯಮಾಪನದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹುಲಿ ಸಂರಕ್ಷಿತ ಪ್ರದೇಶಗಳ ಕ್ಷೇತ್ರ ನಿರ್ದೇಶಕರೊಂದಿಗೆ ಪ್ರಧಾನ ಮಂತ್ರಿಯವರು ಸಂವಾದ ನಡೆಸಲಿದ್ದಾರೆ.

ಪ್ರಧಾನ ಮಂತ್ರಿಯವರು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಗೆ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿಯವರು ಜುಲೈ, 2019 ರಲ್ಲಿ, ವನ್ಯಜೀವಿಗಳ ಬೇಡಿಕೆಯನ್ನು ಅಳಿಸಿಹಾಕಲು ಮತ್ತು ಏಷ್ಯಾದಲ್ಲಿ ಬೇಟೆಯಾಡುವುದು ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ದೃಢವಾಗಿ ನಿಗ್ರಹಿಸಲು ಜಾಗತಿಕ ನಾಯಕರ ಒಕ್ಕೂಟಕ್ಕೆ ಕರೆ ನೀಡಿದ್ದರು. ಪ್ರಧಾನಿಯವರ ಸಂದೇಶದ ಅನುಸಾರವಾಗಿ ಒಕ್ಕೂಟ ಆರಂಭಿಸಲಾಗುತ್ತಿದೆ. ಐಬಿಸಿಎ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾಗಳ  ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಜಾತಿಯ ಪ್ರಾಣಿಗಳಿಗೆ ನೆಲೆಯಾಗಿರುವ ದೇಶಗಳ ಸದಸ್ಯತ್ವವನ್ನು ಇದು ಹೊಂದಿದೆ.

ಪ್ರಧಾನಮಂತ್ರಿಯವರು ‘ಪ್ರಾಜೆಕ್ಟ್ ಟೈಗರ್‌ ಯೋಜನೆಯ 50 ವರ್ಷಗಳ ಸ್ಮರಣಾರ್ಥ’ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ‘ಹುಲಿ ಸಂರಕ್ಷಣೆಗಾಗಿ ಅಮೃತ ಕಾಲದ ದೃಷ್ಟಿಕೋನ’ಪ್ರಕಟಣೆಗಳನ್ನು ಬಿಡುಗಡೆ ಮಾಡುವರು, ಹುಲಿ ಸಂರಕ್ಷಿತ ಪ್ರದೇಶಗಳ ಪರಿಣಾಮಕಾರಿ ಮೌಲ್ಯಮಾಪನದ 5 ನೇ ಸುತ್ತಿನ ಸಾರಾಂಶ ವರದಿ, ಹುಲಿ ಸಂಖ್ಯೆಗಳ ಘೋಷಣೆ ಮತ್ತು ಅಖಿಲ ಭಾರತ ಹುಲಿ ಅಂದಾಜಿನ (5 ನೇ ಸುತ್ತು) ಸಾರಾಂಶ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಾಜೆಕ್ಟ್ ಟೈಗರ್‌ ಯೋಜನೆಯು 50 ವರ್ಷಗಳನ್ನು ಪೂರ್ಣಗೊಳಿಸಿದ ಅಂಗವಾಗಿ ನಾಣ್ಯವನ್ನು ಸಹ ಪ್ರಧಾನಿಯವರು ಬಿಡುಗಡೆ ಮಾಡಲಿದ್ದಾರೆ.

*****

 



(Release ID: 1914102) Visitor Counter : 193