ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಛತ್ತೀಸ್‌ಗಢದ ಜಗದಾಲ್‌ಪುರದಲ್ಲಿ ಇಂದು ನಡೆದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 84ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭದ್ರತಾ ಪಡೆಗಳು ಕಳೆದ 9 ವರ್ಷಗಳಿಂದ ಎಡಪಂಥೀಯ ಉಗ್ರವಾದದ ವಿರುದ್ಧ ಬಿರುಸಿನ ಸಮರ ನಡೆಸುವ ಮೂಲಕ ನಿರ್ಣಾಯಕ ವಿಜಯವನ್ನು ಸಾಧಿಸಿವೆ

ಎಡಪಂಥೀಯ ಉಗ್ರವಾದದ ಕೇಂದ್ರ ಬಿಂದುವಾಗಿರುವ ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಮೊದಲ ಬಾರಿಗೆ ʻಸಿಆರ್‌ಪಿಎಫ್ʼ ತನ್ನ ಸಂಸ್ಥಾಪನಾ ದಿನದ ಪೆರೇಡ್ ಅನ್ನು ಆಯೋಜಿಸುತ್ತಿದೆ ಮತ್ತು ಇದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ

ದೇಶದ ಆಂತರಿಕ ಭದ್ರತೆ ಮತ್ತು ಶಾಂತಿಗಾಗಿ, ಜನರು ಸಿಆರ್‌ಪಿಎಫ್ ಯೋಧರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ, ಯೋಧರ ಧೈರ್ಯ ಮತ್ತು ಶೌರ್ಯದಿಂದ ಸಿಆರ್‌ಪಿಎಫ್‌ ರೂಪುಗೊಂಡಿದೆ

ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು, ಜಮ್ಮು-ಕಾಶ್ಮೀರ ಮತ್ತು ಈಶಾನ್ಯದಲ್ಲಿ ಶಾಂತಿ ಪುನಃಸ್ಥಾಪಿಸುವಲ್ಲಿ ಸಿಆರ್‌ಪಿಎಫ್ ಬಹಳ ಶ್ಲಾಘನೀಯ ಪಾತ್ರ ವಹಿಸಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಹಿಂಸಾಚಾರ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಈಗ ಅಭಿವೃದ್ಧಿಯು ಈ ಪ್ರದೇಶಗಳಲ್ಲಿನ ಕಟ್ಟಕಡೆಯ ವ್ಯಕ್ತಿಯನ್ನು ತಲುಪುತ್ತಿದೆ

ದಶಕಗಳಿಂದ ಎಡಪಂಥೀಯ ಉಗ್ರವಾದದ ಭದ್ರಕೋಟೆಗಳಾಗಿದ್ದ ಬಿಹಾರ ಮತ್ತು ಜಾರ್ಖಂಡ್‌ನ ಬುದ್ಧ ಪಹಾದ್, ಚಕ್ರಬಂಧ ಮತ್ತು ಪರಸ್‌ನಾಥ್ ಪ್ರದೇಶಗಳನ್ನು ಈಗ ಎಡಪಂಥೀಯ ಉಗ್ರವಾದದ ಹಾವಳಿಯಿಂದ ಮುಕ್ತಗೊಳಿಸಲಾಗಿದೆ

ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಎಡಪಂಥೀಯ ಉಗ್ರವಾದವನ್ನು ಸಿಆರ್‌ಪಿಎಫ್‌ ಬೇರುಸಹಿತ ಕಿತ್ತೊಗೆದಿದೆ

ಎಡಪಂಥೀಯ ಉಗ್ರವಾದ ಸಂಬಂಧಿತ ಹಿಂಸಾಚಾರದ ಘಟನೆಗಳು 2010ರ ಉತ್ತುಂಗಕ್ಕೆ ಹೋಲಿಸಿದರೆ 76% ರಷ್ಟು ಕಡಿಮೆಯಾಗಿದೆ, ಸಾವುನೋವುಗಳು ಸಹ ಸುಮಾರು 78% ರಷ್ಟು ಕಡಿಮೆಯಾಗಿವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ದೇಶದ ಭದ್ರತಾ ಪಡೆಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ

ಶ್ರೀ ಅಮಿತ್ ಶಾ ಅವರು ʻಪ್ರಸಾರ ಭಾರತಿʼಯ ಬಸ್ತಾರ್ ವಿಭಾಗದಲ್ಲಿ ಸ್ಥಳೀಯ ʻಹಲ್ಬಿʼ ಭಾಷೆಯಲ್ಲಿ ಸುದ್ದಿ ಬುಲೆಟಿನ್ ಸೇವೆಯನ್ನು ಪ್ರಾರಂಭಿಸಿದರು, ಬುಡಕಟ್ಟು ಜನರ ಸ್ವಂತ ಭಾಷೆಯಲ್ಲಿ ಮೊದಲ ಸುದ್ದಿ ಬುಲೆಟಿನ್ ಅನ್ನು ಪ್ರಾರಂಭಿಸಿದ್ದಕ್ಕಾಗಿ ʻಆಲ್ ಇಂಡಿಯಾ ರೇಡಿಯೋʼ ಮತ್ತು ದೂರದರ್ಶನವನ್ನು ಅಭಿನಂದಿಸಿದರು

ಇದು ನಮ್ಮ ಸ್ಥಳೀಯ ಭಾಷೆಗಳು ಮತ್ತು ಉಪಭಾಷೆಗಳನ್ನು ಬಲಪಡಿಸುವುದಲ್ಲದೆ, ಈ ಪ್ರದೇಶದಲ್ಲಿ ವಾಸಿಸುವ ಜನರು ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳ ಸುದ್ದಿಗಳನ್ನು ತಿಳಿಯಲು ಹಾಗೂ ದೇಶ ಮತ್ತು ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ

Posted On: 25 MAR 2023 2:13PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್‌ಗಢದ ಜಗದಾಲ್‌ಪುರದಲ್ಲಿ ನಡೆದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 84ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಪಥಸಂಚಲನದ ಗೌರವ ವಂದನೆಯನ್ನು ಸ್ವೀಕರಿಸಿದರು. ಶ್ರೀ ಅಮಿತ್ ಶಾ ಅವರು ಪ್ರಸಾರ ಭಾರತಿಯ ಬಸ್ತಾರ್ ವಿಭಾಗಕ್ಕಾಗಿ ʻಹಲ್ಬಿʼ ಸ್ಥಳೀಯ ಭಾಷೆಯಲ್ಲಿ ಸುದ್ದಿ ಬುಲೆಟಿನ್ ಅನ್ನು ಉದ್ಘಾಟಿಸಿದರು.

ʻಸಿಆರ್‌ಪಿಎಫ್ʼ ಸ್ಥಾಪನೆಯ ನಂತರ ಮತ್ತು ಎಡಪಂಥೀಯ ಉಗ್ರವಾದದ ಸಮಸ್ಯೆಯ ಪ್ರಾರಂಭದ ನಂತರ ಮೊದಲ ಬಾರಿಗೆ ಛತ್ತೀಸ್‌ಢದಲ್ಲಿ ಈ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷದ ವಿಷಯವಾಗಿದೆ ಎಂದು ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು ಹೇಳಿದರು. ಛತ್ತೀಸ್‌ಗಢದಲ್ಲಿ ಎಡಪಂಥೀಯ ಉಗ್ರವಾದವನ್ನು ಕೊನೆಗಾಣಿಸುವ ಅಭಿಯಾನದಲ್ಲಿ 763 ಸಿಆರ್‌ಪಿಎಫ್ ಸಿಬ್ಬಂದಿ ಅತ್ಯುನ್ನತ ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು. ಇಂದು ಎಡಪಂಥೀಯ ಉಗ್ರವಾದದ ವಿರುದ್ಧದ ನಮ್ಮ ಹೋರಾಟ ನಿರ್ಣಾಯಕ ಹಂತದಲ್ಲಿದೆ, ಇದಕ್ಕಾಗಿ ಹುತಾತ್ಮ ಯೋಧರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಜಮ್ಮು-ಕಾಶ್ಮೀರವಾಗಿರಲೀ ಅಥವಾ ಈಶಾನ್ಯದಲ್ಲಿ ಶಾಂತಿ ವಿಚಾರವಿರಲೀ ಅಥವಾ ಬುಡಕಟ್ಟು ಜನಾಂಗಕ್ಕೆ ಅಭಿವೃದ್ಧಿ ತರಲು ಎಡಪಂಥೀಯ ಉಗ್ರವಾದದ ವಿರುದ್ಧ ಹೋರಾಟವಿರಲಿ, ಸಿಆರ್‌ಪಿಎಫ್ ಯೋಧರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಟಿಯಿಲ್ಲದ ಶೌರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಆಂತರಿಕ ಭದ್ರತೆ ಕ್ಷೇತ್ರದಲ್ಲಿ ʻಸಿಆರ್‌ಪಿಎಫ್‌ʼನ ಸುವರ್ಣ ಇತಿಹಾಸವು ಎಲ್ಲಾ ಯೋಧರ ಶೌರ್ಯ, ಸ್ಥೈರ್ಯ ಮತ್ತು ತ್ಯಾಗದ ಮನೋಭಾವದಿಂದ ಗುರುತಿಸಲ್ಪಟ್ಟಿದೆ ಎಂದು ಅವರು ಹೇಳಿದರು. 174 ಕೋಟಿ ರೂಪಾಯಿ ಮೌಲ್ಯದ ʻಸಿಆರ್ಪಿಎಫ್‌ʼನ ಮೂರು ಅಭಿವೃದ್ಧಿ ಯೋಜನೆಗಳಿಗೂ ಇಂದು ಇಲ್ಲಿ ಚಾಲನೆ ನೀಡಲಾಗಿದೆ ಎಂದು ಶ್ರೀ ಶಾ ಹೇಳಿದರು. ʻಆಕಾಶವಾಣಿʼ ಇಂದಿನಿಂದ ಪ್ರಸಾರ ಭಾರತಿಯ ಸಾಪ್ತಾಹಿಕ ಸುದ್ದಿ ಬುಲೆಟಿನ್ ಅನ್ನು ಹಲ್ಬಿ ಭಾಷೆಯಲ್ಲಿ ಪ್ರಾರಂಭಿಸಿದೆ ಎಂದು ಅವರು ಮಾಹಿತಿ ನೀಡಿದರು. ಛತ್ತೀಸ್‌ಗಢದಲ್ಲಿ ಬುಡಕಟ್ಟು ಭಾಷೆಯಲ್ಲಿ ಮೊದಲ ಸುದ್ದಿ ಬುಲೆಟಿನ್ ಪ್ರಾರಂಭಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರು ʻಆಲ್ ಇಂಡಿಯಾ ರೇಡಿಯೋʼ ಮತ್ತು ʻದೂರದರ್ಶನʼವನ್ನು ಅಭಿನಂದಿಸಿದರು. ಇದು ನಮ್ಮ ಸ್ಥಳೀಯ ಭಾಷೆಗಳನ್ನು ಬಲಪಡಿಸುವುದಲ್ಲದೆ, ಈ ಪ್ರದೇಶದಲ್ಲಿ ವಾಸಿಸುವ ಜನರು ಪ್ರಪಂಚದಾದ್ಯಂತದ ಸುದ್ದಿಗಳನ್ನು ಪಡೆಯಲು ಹಾಗೂ ದೇಶ ಮತ್ತು ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಇಂದು, ʻಸಿಆರ್‌ಪಿಎಫ್ʼ ಮಹಿಳಾ ಮೋಟಾರ್ ಸೈಕಲ್ ತಂಡದ ʻಫ್ಲ್ಯಾಗ್ ಇನ್ʼ ಕಾರ್ಯಕ್ರಮವೂ ಇದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ 75 ಮಹಿಳಾ ಯೋಧರು 38 ಮೋಟಾರ್ ಸೈಕಲ್‌ಗಳೊಂದಿಗೆ 2023ರ ಮಾರ್ಚ್ 09ರಂದು ಪ್ರಾರಂಭವಾದ 1848 ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಇಂದು ಇಲ್ಲಿಗೆ ತಲುಪಿದ್ದಾರೆ. ಈ ಮಹಿಳಾ ಜವಾನರ ಶೌರ್ಯವು ನಾರಿ ಶಕ್ತಿಯ ಸಂದೇಶವನ್ನು ಇಡೀ ದೇಶದಲ್ಲಿ ಹರಡಲು ಸಹಾಯ ಮಾಡುತ್ತದೆ ಎಂದು ಅಮಿತ್‌ ಶಾ ಹೇಳಿದರು.
 
ʻಸಿಆರ್‌ಪಿಎಫ್ʼ ಅನ್ನು ಜುಲೈ 27, 1939ರಂದು ಸ್ಥಾಪಿಸಲಾಯಿತು, ಆದರೆ ಈ ಪಡೆಗೆ ಅದರ ಆಧುನಿಕ ರೂಪವನ್ನು ಉಕ್ಕಿನ ಮನುಷ್ಯ ಮತ್ತು ದೇಶದ ಮೊದಲ ಗೃಹ ಸಚಿವ ಸರ್ದಾರ್ ಪಟೇಲ್ ನೀಡಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಡಿಸೆಂಬರ್ 28, 1949ರಂದು ಸರ್ದಾರ್ ಪಟೇಲ್ ಅವರು ಇದನ್ನು ʻಕೇಂದ್ರ ಮೀಸಲು ಪೊಲೀಸ್ ಪಡೆʼ ಎಂದು ಮರುನಾಮಕರಣ ಮಾಡಿದರು ಮತ್ತು ಮಾರ್ಚ್ 19, 1950ರಂದು ಅವರು ಈ ಪಡೆಗೆ ಚಿಹ್ನೆಯನ್ನು ನೀಡಿದರು. ಒಂದೇ ಬೆಟಾಲಿಯನ್‌ನೊಂದಿಗೆ ಪ್ರಾರಂಭವಾದ ಈ ಪಡೆಯು ಇಂದು ದೇಶದ ಅತಿದೊಡ್ಡ ʻಸಿಎಪಿಎಫ್ʼ ಆಗಿದ್ದು, 246 ಬೆಟಾಲಿಯನ್‌ಗಳು, 4 ವಲಯ ಪ್ರಧಾನ ಕಚೇರಿ, 21 ಸೆಕ್ಟರ್ ಪ್ರಧಾನ ಕಚೇರಿ, 2 ಕಾರ್ಯಾಚರಣೆ ವಲಯದ ಪ್ರಧಾನ ಕಚೇರಿ, 17 ಕಾರ್ಯಾಚರಣೆ ವಲಯಗಳು, 42 ಆಡಳಿತ ವಲಯಗಳು ಮತ್ತು 3.25 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ ಎಂದು ಶ್ರೀ ಶಾ ಮಾಹಿತಿ ನೀಡಿದರು.

1959ರ ಅಕ್ಟೋಬರ್ 21ರಂದು ಲಡಾಖ್‌ನ ಹಾಟ್ ಸ್ಪ್ರಿಂಗ್‌ನಲ್ಲಿ ಚೀನಾ ಸೇನೆಯ ವಿರುದ್ಧ ಹೋರಾಡುವಾಗ ʻಸಿಆರ್‌ಪಿಎಫ್ʼ ಯೋದರು ಅದಮ್ಯ ಧೈರ್ಯ ಮತ್ತು ತ್ಯಾಗದ ಮನೋಭಾವವನ್ನು ಪ್ರದರ್ಶಿಸಿ ಹುತಾತ್ಮರಾದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಅವರ ಬಲಿದಾನವನ್ನು ಅಮರವಾಗಿಸಲು, ರಾಷ್ಟ್ರವು ಅಕ್ಟೋಬರ್ 21 ಅನ್ನು ʻಪೊಲೀಸ್ ಸಂಸ್ಮರಣಾ ದಿನʼವಾಗಿ ಆಚರಿಸಲು ನಿರ್ಧರಿಸಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಚಾಣಕ್ಯಪುರಿಯಲ್ಲಿ ʻರಾಷ್ಟ್ರೀಯ ಪೊಲೀಸ್ ಸ್ಮಾರಕʼವನ್ನು ನಿರ್ಮಿಸಿದ್ದಾರೆ, ಅಲ್ಲಿ ಪ್ರತಿ ವರ್ಷ ಅಕ್ಟೋಬರ್ 21ರಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು. ಏಪ್ರಿಲ್ 9, 1965ರಂದು, ಕಚ್ ಮರುಭೂಮಿಯ ಸರ್ದಾರ್ ಪೋಸ್ಟ್‌ನಲ್ಲಿ ಪಾಕಿಸ್ತಾನ ಸೇನೆಗೆ ʻಸಿಆರ್‌ಪಿಎಫ್‌ʼ ದಿಟ್ಟತನದಿಂದ ತಕ್ಕ ಉತ್ತರವನ್ನು ನೀಡಿತು ಮತ್ತು ಈ ದಿನವನ್ನು ಗುರುತಿಸಲು, ಏಪ್ರಿಲ್ 09 ಅನ್ನು ಇಡೀ ದೇಶವು ʻಶೌರ್ಯ ದಿವಸ್ʼ ಆಗಿ ಆಚರಿಸುತ್ತದೆ ಎಂದು ಅವರು ಹೇಳಿದರು.
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಭದ್ರತಾ ಪಡೆಗಳು ಕಳೆದ 9 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧ ನಿರ್ಣಾಯಕ ಯುದ್ಧವನ್ನು ನಡೆಸಿವೆ ಮತ್ತು ಭಾರಿ ಯಶಸ್ಸನ್ನು ಸಾಧಿಸಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಡಪಂಥೀಯ ತೀವ್ರಗಾಮಿಗಳಿಂದ ಅಭಿವೃದ್ಧಿಯ ಪಥದಲ್ಲಿ ಉಂಟಾಗಿರುವ ಅಡೆತಡೆಗಳನ್ನು ನಿವಾರಿಸಲು ʻಸಿಆರ್‌ಪಿಎಫ್‌ʼಗೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಎಲ್ಲಾ ಸಮಸ್ಯಾತ್ಮಕ ಪ್ರದೇಶಗಳಲ್ಲಿ, ʻಸಿಆರ್‌ಪಿಎಫ್‌ʼ ಸ್ಥಳೀಯ ಪೊಲೀಸರೊಂದಿಗೆ ಜತೆಗೂಡಿ ಮತ್ತು ಅವರನ್ನು ಪ್ರೋತ್ಸಾಹಿಸುವ ಮೂಲಕ ಭೇದಿಸಲಾಗದ ಶಕ್ತಿಯನ್ನು ಸೃಷ್ಟಿಸಿದೆ, ತನ್ನ ಸಾಂಸ್ಥಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಶ್ರೀ ಶಾ ಹೇಳಿದರು.

ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಹಿಂಸಾಚಾರದ ಘಟನೆಗಳು 2010ರ ಉತ್ತುಂಗಕ್ಕೆ ಹೋಲಿಸಿದರೆ 76% ರಷ್ಟು ಕಡಿಮೆಯಾಗಿದೆ ಮತ್ತು ಪ್ರಾಣಹಾನಿ ಕೂಡ ಸುಮಾರು 78% ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಇದಲ್ಲದೆ, ಎಡಪಂಥೀಯ ಉಗ್ರಗಾಮಿಗಳು ಅಂತರರಾಜ್ಯ ಗಡಿಗಳ ಲಾಭ ಪಡೆಯುವುದನ್ನು ತಡೆಯಲು ʻಸಿಆರ್‌ಪಿಎಫ್‌ʼ ವಿವಿಧ ರಾಜ್ಯಗಳ ಪೊಲೀಸರೊಂದಿಗೆ ಜಂಟಿ ಕಾರ್ಯಪಡೆಯನ್ನು ರಚಿಸಿದೆ. ಇಂದು ಬುದ್ಧ ಪಹಾದ್, ಚಕರ್ಬಂಡಾ ಮತ್ತು ಪರಸ್‌ನಾಥ್‌ ತ್ರಿವಳಿ ಕೂಡಲಿಯನ್ನು ಎಡಪಂಥೀಯ ಉಗ್ರವಾದದಿಂದ ಮುಕ್ತಗೊಳಿಸಲಾಗಿದೆ ಮತ್ತು ದೇಶದ ಮುಖ್ಯವಾಹಿನಿಗೆ ತರಲಾಗಿದೆ. ಇಂದು ಅಲ್ಲಿ ಎಲ್ಲಾ ಬಗೆಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಬಿಹಾರ ಮತ್ತು ಜಾರ್ಖಂಡ್‌ನಲ್ಲಿನ ಭದ್ರತಾ ನಿರ್ವಾತವು ಕೊನೆಗೊಂಡಿದೆ. ಇದು ಧೈರ್ಯಶಾಲಿ ಸಿಆರ್‌ಪಿಎಫ್ ಯೋಧರು ಮತ್ತು ಪೊಲೀಸ್ ಪಡೆಗಳ ಸಂಯೋಜಿತ ಶಕ್ತಿಯಿಂದ ಮಾತ್ರ ಸಾಧ್ಯವಾಗಿದೆ ಎಂದು ಶ್ರೀ ಶಾ ಹೇಳಿದರು. ಎಡಪಂಥೀಯ ತೀವ್ರಗಾಮಿಗಳಿಗೆ ಧನಸಹಾಯದ ಮೂಲವನ್ನು ನಿಗ್ರಹಿಸಲು, ʻಎನ್ಐಎʼ ಮತ್ತು ಜಾರಿ ನಿರ್ದೇಶನಾಲಯದಿಂದ ಪ್ರಕರಣಗಳನ್ನು ದಾಖಲಿಸುವ ಮೂಲಕ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರಕಾರದ ಅಭಿವೃದ್ಧಿ ಕಾರ್ಯಗಳು ಈಗ ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ತಲುಪುತ್ತಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಭಿವೃದ್ಧಿಗೆ ಮಂಜೂರಾದ 70,000 ಕಿ.ಮೀ ರಸ್ತೆಗಳ ಪೈಕಿ 11,000 ಕಿ.ಮೀ ರಸ್ತೆ ಪೂರ್ಣಗೊಂಡಿದೆ, 2343 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ, ಆದ್ಯತೆಯ ಪ್ರದೇಶಗಳಲ್ಲಿ ʻಏಕಲವ್ಯ ಶಾಲೆʼ ತೆರೆಯಲಾಗುತ್ತಿದೆ, ಕೇವಲ 5 ವರ್ಷಗಳಲ್ಲಿ 1258 ಬ್ಯಾಂಕ್ ಶಾಖೆಗಳನ್ನು ತೆರೆಯಲಾಗಿದೆ, 1348 ಎಟಿಎಂಗಳನ್ನು ತೆರೆಯಲಾಗಿದೆ, 47 ಐಟಿಐಗಳು ಮತ್ತು 68 ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯುವ ಕೆಲಸವೂ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ʻಸಿಆರ್‌ಪಿಎಫ್ʼ ಮತ್ತು ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಸರಕಾರದ ಜಂಟಿ ಪ್ರಯತ್ನಗಳಿಂದಾಗಿ ಈ ಪ್ರದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚುತ್ತಿದೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ʻಸಿಆರ್‌ಪಿಎಫ್ʼ ಯೋಧರ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಛತ್ತೀಸ್‌ಗಢ ಬಸ್ತಾರಿಯಾ ಬೆಟಾಲಿಯನ್‌ನಲ್ಲಿ 400 ಸ್ಥಳೀಯ ಯುವಕರನ್ನು ನೇಮಕ ಮಾಡಲಾಗಿದೆ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು 398 ದೊಡ್ಡ ಮತ್ತು ಸಣ್ಣ ಸೇತುವೆಗಳನ್ನು ನಿರ್ಮಿಸುವಲ್ಲಿ ʻಸಿಆರ್‌ಪಿಎಫ್ʼ ಕೊಡುಗೆ ನೀಡಿದೆ. 25 ಲಕ್ಷಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ಹಾರಿಸುವ ಮೂಲಕ ʻಹರ್ ಘರ್ ತಿರಂಗಾʼ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಸಿಆರ್‌ಪಿಎಫ್‌ ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ʻಸಿಆರ್‌ಪಿಎಫ್ʼನ ಆಧುನೀಕರಣಕ್ಕೆ ಹೆಚ್ಚಿನ ಗಮನ ನೀಡಲಾಗಿದೆ ಎಂದರು. 2022-23ರಲ್ಲಿ 14 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜಗದಾಲ್‌ಪುರದಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಮತ್ತು ಬೆಟಾಲಿಯನ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ʻಸಿಆರ್‌ಪಿಎಫ್‌ʼಗೆ 4309 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ವಸತಿ ತೃಪ್ತಿ ಅನುಪಾತವನ್ನು ಹೆಚ್ಚಿಸಲು, ಸುಮಾರು 11,000 ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ʻಸಿಎಪಿಎಫ್‌ʼಗಳಿಗೆ ಇನ್ನೂ 28,500 ಮನೆಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ. ʻಪ್ರಧಾನ ಮಂತ್ರಿ ವಿದ್ಯಾರ್ಥಿವೇತನʼ ಯೋಜನೆಯಡಿ ಪ್ರತಿ ತಿಂಗಳು ಬಾಲಕಿಯರಿಗೆ 3000 ರೂ., ಬಾಲಕರಿಗೆ 2500 ರೂ. ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರವು ʻಸಿಆರ್‌ಪಿಎಫ್‌ʼ ಜವಾನರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಲ್ಲಿ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಬೆನ್ನಿಗೆ ನಿಂತಿದೆ ಎಂದು ಶ್ರೀ ಅಮಿತ್ ಶಾ ಭರವಸೆ ನೀಡಿದರು. ʻಸಿಆರ್‌ಪಿಎಫ್‌ʼನ 84 ವರ್ಷಗಳ ಭವ್ಯ ಇತಿಹಾಸವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಈ ಪಡೆಯು ಭಾರತ ಮಾತೆಯ ಸೇವೆಯನ್ನು ಸಮರ್ಪಣಾ ಭಾವದಿಂದ ಮುಂದುವರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

***


(Release ID: 1910777) Visitor Counter : 151