ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಿ ಅಧ್ಯಕ್ಷತೆಯಲ್ಲಿ ಕೋವಿಡ್ -19 ಮತ್ತು ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯ ನಿರ್ವಹಣೆಗೆ ಕೈಗೊಂಡಿರುವ ಸಿದ್ಧತೆ ಹಾಗೂ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ  


ಮುನ್ನೆಚ್ಚರಿಕೆ ಹಾಗೂ ನಿಗಾ ಕಾಯ್ದುಕೊಳ್ಳುವಂತೆ ಪ್ರಧಾನಿ ಸಲಹೆ

​​​​​​​ಎಲ್ಲ ಗಂಭೀರ ಉಸಿರಾಟ ಸಮಸ್ಯೆ ಪ್ರಕರಣಗಳ ಪರೀಕ್ಷೆ ಹಾಗೂ ಪ್ರಯೋಗಾಲಯದ ಕಣ್ಗಾವಲು ಹೆಚ್ಚಿಸುವುದು ಮತ್ತು ಜಿನೋಮ್ ಅನುಕ್ರಮಣಿಕೆ ವೃದ್ಧಿಸುವ ಅಗತ್ಯವಿದೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದನೆ

ಸಿದ್ಧತೆಗಳನ್ನು ಖಾತ್ರಿಪಡಿಸಲು ಆಸ್ಪತ್ರೆಗಳಲ್ಲಿ ಮತ್ತೆ ಮಾಕ್ ಡ್ರಿಲ್ ಆಯೋಜಿಸಬೇಕು

ಮಾಸ್ಕ್ ಧರಿಸುವಿಕೆ  ಮತ್ತು ಕೋವಿಡ್ ಸೂಕ್ತ ನಡವಳಿಕೆ ಕಡ್ಡಾಯ ಪಾಲನೆಗೆ ಪ್ರಧಾನಿ ಸಲಹೆ

Posted On: 22 MAR 2023 7:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೇಶಾದ್ಯಂತ ಸೋಂಕು ಮತ್ತು ಕೋವಿಡ್-19 ಸ್ಥಿತಿಗತಿ, ಆರೋಗ್ಯ ಮೂಲಸೌಕರ್ಯ ಮತ್ತು ಔಷಧಗಳ ಸಾಗಣೆ ಸಿದ್ಧತೆ, ಲಸಿಕಾ ಅಭಿಯಾನದ ಸ್ಥಿತಿಗತಿ, ಹೊಸ ಕೋವಿಡ್-19 ವೈರಾಣು ಕಾಣಿಸಿಕೊಂಡಿರುವುದು ಮತ್ತು ಜ್ವರದ ಲಕ್ಷಣಗಳು ಹರಡುವ ವಿಧಾನ ಹಾಗೂ ಇದರಿಂದ ದೇಶದ ಸಾರ್ವಜನಿಕ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಕಳೆದ ಎರಡು ವಾರಗಳಿಂದೀಚೆಗೆ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ದೇಶದಲ್ಲಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಕಾರ್ಯದರ್ಶಿ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳೂ ಸೇರಿದಂತೆ ಜಾಗತಿಕ ಕೋವಿಡ್ ಸ್ಥಿತಿಗತಿ ಒಳಗೊಂಡಂತೆ ಹಲವು ಅಂಶಗಳ ಬಗ್ಗೆ ಸಮಗ್ರ ಪ್ರಾತ್ಯಕ್ಷಿಕೆಯನ್ನು ನೀಡಿದರು. ದಿನಕ್ಕೆ ಸರಾಸರಿ 888 ಪ್ರಕರಣಗಳಂತೆ ಮತ್ತು 2023ರ ಮಾರ್ಚ್ 22ಕ್ಕೆ ಕೊನೆಗೊಂಡ ವಾರದಲ್ಲಿ ವಾರದ ಪಾಸಿಟಿವಿಟಿ ದರ ಶೇ.0.98ರಷ್ಟು ದಾಖಲಾಗಿ, ಹೊಸ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಪ್ರಧಾನಿ ಅವರಿಗೆ ವಿವರಿಸಲಾಯಿತು. ಆದರೂ ಸಹ ಇದೇ ವಾರದಲ್ಲಿ ಜಾಗತಿಕವಾಗಿ ದಿನದ ಸರಾಸರಿ ಪ್ರಕರಣಗಳ ಸಂಖ್ಯೆ 1.08 ಲಕ್ಷ ಇದೆ.

ಕಳೆದ 2022ರ ಡಿಸೆಂಬರ್ 22ರಂದು ನಡೆದ ಕೋವಿಡ್-19 ಪರಿಶೀಲನಾ ಸಭೆಯಲ್ಲಿ ಪ್ರಧಾನಮಂತ್ರಿಗಳು ನೀಡಿದ್ದ ನಿರ್ದೇಶನದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. 20 ಪ್ರಮುಖ ಕೋವಿಡ್ ಔಷಧಗಳು, 12 ಇತರ ಔಷಧಗಳು, 8 ಬಫರ್ ಔಷಧಗಳು ಮತ್ತು 1 ಜ್ವರದ ಔಷಧಗಳ ಬೆಲೆ ಹಾಗೂ ಲಭ್ಯತೆ ಬಗ್ಗೆ ನಿಗಾ ಇರಿಸಿರುವುದಾಗಿ ಪ್ರಧಾನಿ ಅವರಿಗೆ ತಿಳಿಸಲಾಯಿತು. 2022ರ ಡಿಸೆಂಬರ್ 22ರಂದು 22 ಸಾವಿರ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್  ನಡೆಸಲಾಯಿತು ಮತ್ತು ಅನಂತರ ಆಸ್ಪತ್ರೆಗಳಲ್ಲಿ ಹಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.  

ದೇಶದಲ್ಲಿನ ಜ್ವರದ ಸ್ಥಿತಿಗತಿ ವಿಶೇಷವಾಗಿ ಕಳೆದ ಕೆಲವು ತಿಂಗಳಿನಿಂದೀಚೆಗೆ ಗಮನಿಸಿರುವಂತೆ ಎಚ್1ಎನ್1 ಮತ್ತು ಎಚ್3ಎನ್2 ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಲಾಯಿತು. ಪ್ರಧಾನಮಂತ್ರಿಗಳು ನಿಯೋಜಿತ ಐಎನ್ಎಸ್ಎಸಿಒಜಿ ಜಿನೋಮ್ ಸ್ವೀಕ್ವೆನ್ಸಿಂಗ್ ಲ್ಯಾಬೊರೇಟರಿಗಳಲ್ಲಿ ಎಲ್ಲ ಪಾಸಿಟಿವ್ ಪ್ರಕರಣಗಳನ್ನು ಜಿನೋಮ್ ಸ್ವೀಕ್ವೆನ್ಸಿಂಗ್  ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದು ಹೊಸ ರೂಪಾಂತರಿಗಳು ಯಾವುದಾದರು ಇದ್ದರೆ ಅವುಗಳನ್ನು ಪತ್ತೆಹಚ್ಚಲು ಮತ್ತು ಸಕಾಲಕ್ಕೆ ಸ್ಪಂದಿಸಲು ನೆರವಾಗಲಿದೆ.  

ಆಸ್ಪತ್ರೆ ಆವರಣಗಳಲ್ಲಿ ರೋಗಿಗಳು, ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಕಾರ್ಯಕರ್ತರು ಎಲ್ಲರೂ ಮಾಸ್ಕ್ ಗಳನ್ನು ಧರಿಸುವುದೂ ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲನೆ ಮಾಡಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಹಿರಿಯ ನಾಗರಿಕರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಜನದಟ್ಟಣೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು.

ಐ ಆರ್ ಐ/ಎಸ್ಎಆರ್ ಐ(ಸಾರಿ) ಪ್ರಕರಣಗಳ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಸಾರ್ಸ್-ಸಿಒವಿ-2 ಮತ್ತು ಅಡೆನೊ ವೈರಾಣು, ಸೋಂಕು ಜ್ವರದ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದರು. ಅಲ್ಲದೆ ಪ್ರಧಾನಿ ಅವರು, ಜ್ವರ ಮತ್ತು ಕೋವಿಡ್-19ಕ್ಕೆ ಅಗತ್ಯ ಔಷಧಗಳ ಸಾಗಣೆ ಮತ್ತು ಲಭ್ಯತೆಯನ್ನು ಖಾತರಿಪಡಿಸಲು ಒತ್ತು ನೀಡಬೇಕು ಹಾಗೂ ಸಾಕಷ್ಟು ಹಾಸಿಗೆಗಳೂ ಮತ್ತು ಮಾನವ ಸಂಪನ್ಮೂಲ ಲಭ್ಯತೆಯನ್ನು ಖಾತರಿಪಡಿಸಬೇಕು ಎಂದರು.

ಕೋವಿಡ್-19 ಸಾಂಕ್ರಾಮಿಕ ಇನ್ನೂ ಕೊನೆಗೊಂಡಿಲ್ಲ ಮತ್ತು ನಿರಂತರವಾಗಿ ದೇಶಾದ್ಯಂತ ಸ್ಥಿತಿಗತಿ ಮೇಲೆ ನಿಗಾ ಇಡುವ ಅಗತ್ಯವಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. 5 ವಿಧದ ಕಾರ್ಯತಂತ್ರ – ಟೆಸ್ಟ್- ಟ್ರ್ಯಾಕ್ – ಟ್ರೀಟ್ – ವ್ಯಾಕ್ಸಿನೇಶನ್ ಮತ್ತು ಕೋವಿಡ್ ಸೂಕ್ತ ನಡವಳಿಕೆ, ಪ್ರಯೋಗಾಲಯ ನಿಗಾ ಹೆಚ್ಚಿಸುವುದು ಮತ್ತು ಎಲ್ಲ ಬಗೆಯ ಗಂಭೀರ ಉಸಿರಾಟ ಸಮಸ್ಯೆ(ಸಾರಿ) ಪ್ರಕರಣಗಳ ಪರೀಕ್ಷೆಯನ್ನು ಮುಂದುವರಿಸಿ, ಹೆಚ್ಚಿನ ಗಮನಹರಿಸುವಂತೆ ಪ್ರಧಾನಿ ಸಲಹೆ ನೀಡಿದರು. 
ನಮ್ಮ ಆಸ್ಪತ್ರೆಗಳು ಎಲ್ಲ ಬಗೆಯ ತುರ್ತು ಸಂದರ್ಭಗಳನ್ನು ಎದುರಿಸಲು ಸಿದ್ಧವಾಗಿವೆ ಎಂಬುದನ್ನು ಖಾತರಿಪಡಿಸಲು ನಿರಂತರವಾಗಿ ಮಾಕ್ ಡ್ರಿಲ್ ಗಳನ್ನು ನಡೆಸಬೇಕಾಗಿದೆ.

ಸಮುದಾಯ ಉಸಿರಾಟದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು, ಜನದಟ್ಟಣೆ ಇರುವ ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಪ್ರಧಾನಮಂತ್ರಿ ಸಮುದಾಯಕ್ಕೆ ಕರೆ ನೀಡಿದರು.

ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ, ನೀತಿ ಆಯೋಗದ ಸದಸ್ಯ(ಆರೋಗ್ಯ) ವಿ.ಕೆ. ಪೌಲ್, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ, ಫಾರ್ಮಸೆಟಿಕಲ್ಸ್ ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕರು, ಪ್ರಧಾನಮಂತ್ರಿಗಳ ಕಾರ್ಯಾಲಯದ ಸಲಹೆಗಾರ ಶ್ರೀ ಅಮಿತ್ ಕರೆ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.  

****


(Release ID: 1909759) Visitor Counter : 141