ಪ್ರಧಾನ ಮಂತ್ರಿಯವರ ಕಛೇರಿ

ʻಇಂಡಿಯಾ ಟುಡೇ ಕಾನ್‌ಕ್ಲೇವ್ʼನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 18 MAR 2023 11:17PM by PIB Bengaluru

`ಇಂಡಿಯಾ ಟುಡೇ ಕಾನ್‌ಕ್ಲೇವ್‌ʼನಲ್ಲಿ ನಮ್ಮೊಂದಿಗಿರುವ ಎಲ್ಲ ಗಣ್ಯರಿಗೆ ಶುಭಾಶಯಗಳು! ಡಿಜಿಟಲ್ ಮಾಧ್ಯಮದ ಮೂಲಕ ನಮ್ಮೊಂದಿಗೆ ಸೇರಿದ ಭಾರತ ಮತ್ತು ವಿದೇಶಗಳ ವೀಕ್ಷಕರು ಮತ್ತು ಓದುಗರಿಗೆ ಶುಭಾಶಯಗಳು. ಈ ಸಮಾವೇಶದ ವಿಷಯ - ʻಭಾರತದ ಘಳಿಗೆʼ (ದಿ ಇಂಡಿಯಾ ಮೂಮೆಂಟ್) ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇಂದು, ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು, ಚಿಂತಕರು ಇದು ʻಭಾರತದ ಘಳಿಗೆʼ ಎಂದು ಒಗ್ಗಟ್ಟಿನಿಂದ ಹೇಳುತ್ತಿದ್ದಾರೆ. ಆದರೆ ʻಇಂಡಿಯಾ ಟುಡೇ ಸಮೂಹʼವು ಈ ಆಶಾವಾದವನ್ನು ವ್ಯಕ್ತಪಡಿಸಿರುವುದು 'ಮತ್ತಷ್ಟು ವಿಶೇಷ'ವಾಗಿದೆ. ಅಂದಹಾಗೆ, 20 ತಿಂಗಳ ಹಿಂದೆ ನಾನು ಕೆಂಪು ಕೋಟೆಯಿಂದ ಮಾಡಿದ ಭಾಷಣದ ವೇಳೆ – ಭಾರತಕ್ಕೆ ʻಇದು ಸರಿಯಾದ ಸಮಯ, ಇದೇ ಸಮಯʼ ಎಂದು ಹೇಳಿದ್ದೆ. ಆದರೆ ಈ ಸ್ಥಾನವನ್ನು ತಲುಪಲು 20 ತಿಂಗಳುಗಳು ಬೇಕಾಯಿತು. ಆಗಲೂ - ʻಇದು ಭಾರತದ ಘಳಿಗೆʼ ಎಂಬುದೇ ಸ್ಫೂರ್ತಿಯಾಗಿತ್ತು. 

ಸ್ನೇಹಿತರೇ, 

ಯಾವುದೇ ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ಹಲವಾರು ಏರಿಳಿತಗಳು ಮತ್ತು ಅನೇಕ ಮೈಲುಗಲ್ಲುಗಳಿರುತ್ತವೆ. ಇಂದು, 21ನೇ ಶತಮಾನದ ಈ ದಶಕದ ಈ ಅವಧಿಯು ಭಾರತದ ಪಾಲಿಗೆ ಅಸಾಧಾರಣವಾದುದು. ಪ್ರಸ್ತುತ ಮುಂದುವರಿದಿರುವ ಮತ್ತು ಅಭಿವೃದ್ಧಿ ಹೊಂದಿದ ಅನೇಕ ದೇಶಗಳು, ಕೆಲವು ದಶಕಗಳ ಹಿಂದೆ ಅವುಗಳ ಪ್ರಯಾಣದ ಹಾದಿಯಲ್ಲಿ ವಿಭಿನ್ನ ಪರಿಸ್ಥಿತಿಗಳನ್ನು ಹೊಂದಿದ್ದವು. ಒಂದು ರೀತಿಯಲ್ಲಿ, ಆ ದೇಶಗಳು ತಮಗೆ ತಾವೇ ಪ್ರತಿಸ್ಪರ್ಧಿಗಳಾಗಿದ್ದವು. ಏಕೆಂದರೆ ಈ ದೇಶಗಳು ತಮ್ಮ ವಿರುದ್ಧ ಹೆಚ್ಚಿನ ಪ್ರತಿಸ್ಪರ್ಧಿಗಳನ್ನು ಹೊಂದಿರಲಿಲ್ಲ. ಆದರೆ ಇಂದು ಭಾರತ ಮುನ್ನಡೆಯುತ್ತಿರುವ ಸಂದರ್ಭಗಳು ವಿಭಿನ್ನವಾಗಿವೆ. ಸವಾಲುಗಳು ಬಹಳ ವಿಭಿನ್ನವಾಗಿವೆ, ಅವು ವಿಶಾಲ ಶ್ರೇಣಿಯವಾಗಿದ್ದು, ವೈವಿಧ್ಯತೆಯಿಂದ ತುಂಬಿವೆ. ಇಂದು ಹಲವಾರು ಜಾಗತಿಕ ಸವಾಲುಗಳಿವೆ - 100 ವರ್ಷಗಳಲ್ಲಿ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗಕ್ಕೆ, ದೊಡ್ಡ ಬಿಕ್ಕಟ್ಟಿಗೆ ಜಗತ್ತು ಸಾಕ್ಷಿಯಾಗಿದೆ; ಎರಡು ದೇಶಗಳು ಹಲವು ತಿಂಗಳುಗಳಿಂದ ಯುದ್ಧದಲ್ಲಿ ತೊಡಗಿವೆ, ಇಡೀ ವಿಶ್ವದ ಪೂರೈಕೆ ಸರಪಳಿ ಅಸ್ತವ್ಯಸ್ತವಾಗಿದೆ. ಈ ಪರಿಸ್ಥಿತಿಯನ್ನು ನೋಡಿ ಮತ್ತು ಈ ಹಿನ್ನೆಲೆಯ ಬಗ್ಗೆ ಯೋಚಿಸಿ. ಇಂತಹ ಸನ್ನಿವೇಶದಲ್ಲಿ 'ಭಾರತದ ಘಳಿಗೆʼಯ ಬಗ್ಗೆ ಮಾತನಾಡುವುದು ಸಾಮಾನ್ಯ ವಿಷಯವಲ್ಲ. 

ಒಂದು ಹೊಸ ಇತಿಹಾಸವನ್ನು ಸೃಷ್ಟಿಸಲಾಗುತ್ತಿದೆ ಮತ್ತು ನಾವೆಲ್ಲರೂ ಅದಕ್ಕೆ ಸಾಕ್ಷಿಗಳಾಗಿದ್ದೇವೆ.  ಇಂದು ಇಡೀ ಜಗತ್ತು ಭಾರತವನ್ನು ನಂಬಿದೆ. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಇಂದು ಭಾರತವು ವಿಶ್ವದ ಸ್ಮಾರ್ಟ್ ಫೋನ್ ಡೇಟಾ ಬಳಕೆದಾರರಲ್ಲಿ ನಂಬರ್ ಒನ್ ಆಗಿದೆ. ಇಂದು ಭಾರತವು ಜಾಗತಿಕ ʻಫಿನ್‌ಟೆಕ್‌ʼ ಅಳವಡಿಕೆ ದರದಲ್ಲಿ ಮೊದಲ ಸ್ಥಾನದಲ್ಲಿದೆ. ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. 

ಅಂತಹ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. ಹಿಂದಿನ ವಿಷಯಗಳ ಬಗ್ಗೆ ಯಾರಾದರೂ ತಿಳಿಯಲು ಬಯಸುವುದಾದರೆ, ಅವರು ಅದನ್ನು ತಿಳಿಯಬಹುದು. ಆದರೆ ನಾನು ವರ್ತಮಾನದ ಬಗ್ಗೆ ಮಾತನಾಡಲು ಬಯಸುತ್ತೇನೆ ಮತ್ತು ಅದೂ 2023ರ ಬಗ್ಗೆ. ಈ ವರ್ಷದಲ್ಲಿ, ಅಂದರೆ 2023ರಲ್ಲಿ ಈಗಾಗಲೇ 75 ದಿನಗಳು ಕಳೆದಿವೆ. ಇಂದು ನಾನು ಈ 75 ದಿನಗಳ ಬಗ್ಗೆ ಮಾತ್ರ ಮಾತನಾಡಲು ಬಯಸುತ್ತೇನೆ. ಈ 75 ದಿನಗಳಲ್ಲಿ, ದೇಶದ ಐತಿಹಾಸಿಕ ಹಸಿರು ಬಜೆಟ್ ಅನ್ನು ಮಂಡಿಸಲಾಗಿದೆ. ಈ 75 ದಿನಗಳಲ್ಲಿ, ಕರ್ನಾಟಕದ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಈ 75 ದಿನಗಳಲ್ಲಿ, ಮೆಟ್ರೋ ರೈಲಿನ ಮುಂದಿನ ಹಂತವು ಮುಂಬೈನಲ್ಲಿ ಪ್ರಾರಂಭವಾಗಿದೆ. ಈ 75 ದಿನಗಳಲ್ಲಿ, ವಿಶ್ವದ ಅತಿ ಉದ್ದದ ನದಿ ಯಾನವನ್ನು ದೇಶದಲ್ಲಿ ಪ್ರಾರಂಭಿಸಲಾಗಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಉದ್ಘಾಟಿಸಲಾಗಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನ ಒಂದು ಭಾಗವನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ. ಮುಂಬೈ ಮತ್ತು ವಿಶಾಖಪಟ್ಟಣಂನಿಂದ ʻವಂದೇ ಭಾರತ್ʼ ರೈಲುಗಳು ಚಲಿಸಲು ಪ್ರಾರಂಭಿಸಿವೆ. ʻಐಐಟಿ ಧಾರವಾಡʼದ ಶಾಶ್ವತ ಕ್ಯಾಂಪಸ್ ಅನ್ನು ಉದ್ಘಾಟಿಸಲಾಗಿದೆ. ಭಾರತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಿದೆ. 

ಸ್ನೇಹಿತರೇ, 

ಈ 75 ದಿನಗಳಲ್ಲಿ, ಭಾರತವು ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣ ಮಾಡುವ ಮೂಲಕ ʻಇ20ʼ ಇಂಧನವನ್ನು ಬಿಡುಗಡೆ ಮಾಡಿದೆ. ಈ 75 ದಿನಗಳಲ್ಲಿ ಏಷ್ಯಾದ ಅತಿದೊಡ್ಡ ಆಧುನಿಕ ಹೆಲಿಕಾಪ್ಟರ್ ಕಾರ್ಖಾನೆಯನ್ನು ತುಮಕೂರಿನಲ್ಲಿ ಉದ್ಘಾಟಿಸಲಾಗಿದೆ. ʻಏರ್ ಇಂಡಿಯಾʼ ವಿಶ್ವದಲ್ಲೇ ಅತಿದೊಡ್ಡ ಮೌಲ್ಯದ ವಿಮಾನಗಳಿಗೆ ಕಾರ್ಯಾದೇಶ ನೀಡಿದೆ. ಈ 75 ದಿನಗಳಲ್ಲಿ ಭಾರತವು ʻಇ-ಸಂಜೀವಿನಿʼ ಮೂಲಕ 10 ಕೋಟಿ ಟೆಲಿ ಸಮಾಲೋಚನೆಗಳ ಮೈಲುಗಲ್ಲನ್ನು ಸಾಧಿಸಿದೆ. ಈ 75 ದಿನಗಳಲ್ಲಿ, ಭಾರತವು 8 ಕೋಟಿ ಹೊಸ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸುವ ಮೈಲುಗಲ್ಲನ್ನು ಸಾಧಿಸಿದೆ. ಈ 75 ದಿನಗಳಲ್ಲಿ, ಉತ್ತರ ಪ್ರದೇಶ-ಉತ್ತರಾಖಂಡದಲ್ಲಿ ರೈಲು ಜಾಲದ 100 ಪ್ರತಿಶತ ವಿದ್ಯುದ್ದೀಕರಣದ ಕೆಲಸ ಪೂರ್ಣಗೊಂಡಿದೆ. 

ಸ್ನೇಹಿತರೇ, 

ಈ 75 ದಿನಗಳಲ್ಲಿ 12 ಚಿರತೆಗಳ ಹೊಸ ತಂಡವು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದೆ. ಭಾರತ ಮಹಿಳಾ ಕ್ರಿಕೆಟ್ ತಂಡ ʻಅಂಡರ್-19ʼ ವಿಭಾಗದ ಟಿ-20 ವಿಶ್ವಕಪ್ ಗೆದ್ದಿದೆ. ಈ 75 ದಿನಗಳಲ್ಲಿ ದೇಶವು ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಗೌರವವನ್ನು ಪಡೆದಿದೆ. 

ಸ್ನೇಹಿತರೇ, 

ಈ 75 ದಿನಗಳಲ್ಲಿ, ಸಾವಿರಾರು ವಿದೇಶಿ ರಾಜತಾಂತ್ರಿಕರು ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ʻಜಿ -20ʼ ಸಭೆಗಳಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದಾರೆ. ಈ 75 ದಿನಗಳಲ್ಲಿ, ʻಜಿ -20ʼಯ 28 ಪ್ರಮುಖ ಸಭೆಗಳು ನಡೆದಿವೆ, ಅಂದರೆ ಪ್ರತಿ ಮೂರು ದಿನಕ್ಕೆ ಒಂದು ಸಭೆ ನಡೆದಿದೆ. ಇದೇ ಅವಧಿಯಲ್ಲಿ ʻಇಂಧನ ಶೃಂಗಸಭೆʼ ನಡೆಯಿತು. ಇಂದು ʻಜಾಗತಿಕ ಸಿರಿಧಾನ್ಯಗಳ ಸಮ್ಮೇಳನʼ ನಡೆಯಿತು. ಬೆಂಗಳೂರಿನಲ್ಲಿ ನಡೆದ ʻಏರೋ ಇಂಡಿಯಾʼದಲ್ಲಿ ಭಾಗವಹಿಸಲು 100ಕ್ಕೂ ಹೆಚ್ಚು ದೇಶಗಳು ಭಾರತಕ್ಕೆ ಬಂದಿರುವುದನ್ನು ನಾವು ನೋಡಿದ್ದೇವೆ. ಈ 75 ದಿನಗಳಲ್ಲಿ ಸಿಂಗಾಪುರದೊಂದಿಗೆ ʻಯುಪಿಐʼ ಸಂಪರ್ಕವನ್ನು ಪ್ರಾರಂಭಿಸಲಾಗಿದೆ. ಈ 75 ದಿನಗಳಲ್ಲಿ ಭಾರತವು ಟರ್ಕಿಗೆ ಸಹಾಯ ಮಾಡಲು 'ಆಪರೇಷನ್ ದೋಸ್ತ್' ಅನ್ನು ಪ್ರಾರಂಭಿಸಿತು. ಇಂಡೋ-ಬಾಂಗ್ಲಾದೇಶ ಅನಿಲ ಕೊಳವೆ ಮಾರ್ಗವನ್ನು ಕೆಲವೇ ಗಂಟೆಗಳ ಹಿಂದೆ ಉದ್ಘಾಟಿಸಲಾಗಿದೆ. ಈ 75 ದಿನಗಳಲ್ಲಿನ ಮಾಡಿದ ಸಾಧನೆಗಳ ಪಟ್ಟಿ ಎಷ್ಟು ಉದ್ದವಾಗಿದೆಯೆಂದರೆ, ಅದನ್ನು ಮುಗಿಸುವಷ್ಟರಲ್ಲಿ ನಮಗೆ ಸಮಯ ಮುಗಿದುಹೋಗುತ್ತದೆ. ಕಳೆದ 75 ದಿನಗಳಲ್ಲಿ ಸಂಭವಿಸಿದ ಈ ಕೆಲವು ವಿಷಯಗಳ ಬಗ್ಗೆ ನಾನು ನಿಮಗೆ ಹೇಳುತ್ತಿರುವುದು ಏಕೆಂದರೆ ಇದು 'ಭಾರತದ ಘಳಿಗೆʼಯ ಪ್ರತಿಬಿಂಬವಾಗಿದೆ. 

ಸ್ನೇಹಿತರೇ, 

ಇಂದು ದೇಶವು ರಸ್ತೆ-ರೈಲ್ವೆ, ಬಂದರು-ವಿಮಾನ ನಿಲ್ದಾಣದಂತಹ ಭೌತಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ . ಮತ್ತೊಂದೆಡೆ ಭಾರತೀಯ ಸಂಸ್ಕೃತಿ ಮತ್ತು ಮೃದು ಶಕ್ತಿಯ ಕಡೆಗೆ ವಿಶ್ವವು ಅಭೂತಪೂರ್ವ ರೀತಿಯಲ್ಲಿ ಆಕರ್ಷಿತಗೊಳ್ಳುತ್ತಿದೆ. ಇಂದು ಯೋಗ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಇಂದು ಆಯುರ್ವೇದದ ಬಗ್ಗೆಯೂ ಒಲವು ಮೂಡಿದೆ; ಭಾರತೀಯ ಆಹಾರದ ಬಗ್ಗೆ ಕುತೂಹಲ, ಉತ್ಸಾಹ ಹೆಚ್ಚಿದೆ. ಇಂದು ಭಾರತೀಯ ಚಲನಚಿತ್ರಗಳು, ಭಾರತೀಯ ಸಂಗೀತವು ಹೊಸ ಶಕ್ತಿಯೊಂದಿಗೆ ಜನರನ್ನು ಆಕರ್ಷಿಸುತ್ತಿದೆ. ನಮ್ಮ ಸಿರಿಧಾನ್ಯಗಳು ಅಥವಾ 'ಶ್ರೀ ಅನ್ನ' ಸಹ ಇಡೀ ಜಗತ್ತನ್ನು ತಲುಪುತ್ತಿದೆ. ಅದು ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼವಾಗಿರಲಿ ಅಥವಾ ʻವಿಪತ್ತು ಸದೃಢತೆ ಮೂಲಸೌಕರ್ಯ ಒಕ್ಕೂಟʼವಾಗಿರಲಿ, ಭಾರತವು  ಜಾಗತಿಕ ಒಳಿತಿಗಾಗಿ ಆಲೋಚಿಸುತ್ತಿದೆ ಮತ್ತು   ಭಾರತ ಈ ನಿಟ್ಟಿನಲ್ಲಿ ಸಾಮರ್ಥ್ಯವನ್ನು ಹೊಂದಿದೆ ಎಂದು ಜಗತ್ತು ಅರಿತುಕೊಳ್ಳುತ್ತಿದೆ. ಅದಕ್ಕಾಗಿಯೇ ಇಂದು ಜಗತ್ತು ಹೇಳುತ್ತಿದೆ - ʻಇದು ಭಾರತದ ಘಳಿಗೆʼ.

ನೀವೆಲ್ಲರೂ ಇತ್ತೀಚೆಗೆ ಮತ್ತೊಂದು ವಿಷಯವನ್ನು ಗಮನಿಸಿರಬಹುದು. ಈ ಎಲ್ಲಾ ವಿಷಯಗಳು ಬಹು ಪರಿಣಾಮಗಳನ್ನು ಉಂಟುಮಾಡಿವೆ. ಒಂದು ಸಣ್ಣ ವಿಷಯದ ಕಡೆಗೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ, ನಾನು ಇತರ ದೇಶಗಳಿಗೆ ಭೇಟಿ ನೀಡಿದಾಗ ಅಥವಾ ಇತರ ದೇಶಗಳ ಪ್ರತಿನಿಧಿಗಳು ಭಾರತಕ್ಕೆ ಬಂದಾಗ ಅಥವಾ ಭಾರತದಿಂದ ಯಾರಾದರೂ ಒಂದು ದೇಶಕ್ಕೆ ಭೇಟಿ ನೀಡಿದಾಗ, ಭಾರತದಿಂದ ಕದ್ದ ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲು ದೇಶಗಳ ನಡುವೆ ಒಂದು ರೀತಿಯ ಸ್ಪರ್ಧೆ ಇರುವುದನ್ನು ನೀವು ಗಮನಿಸಿರಬಹುದು. ಸ್ವಯಂ ಪ್ರೇರಿತರಾಗಿ, ಅವರು ಈ ಕಲಾಕೃತಿಗಳನ್ನು ನಮಗೆ ಹಿಂದಿರುಗಿಸುತ್ತಿದ್ದಾರೆ, ಏಕೆಂದರೆ ಇವುಗಳನ್ನು ಗೌರವಿಸಲು ಇದು ಸರಿಯಾದ ಸ್ಥಳ ಎಂದು ಈಗ ಅವರಿಗೆ ಮನವರಿಕೆಯಾಗಿದೆ. ಇದು ʻಭಾರತದ ಘಳಿಗೆʼ

ಅಂದಹಾಗೆ, ಇದೆಲ್ಲವೂ ಕಾಕತಾಳೀಯವಲ್ಲ, ಸ್ನೇಹಿತರೇ. ಇಂದಿನ ʻಭಾರತದ ಘಳಿಗೆʼಯ ಅತ್ಯಂತ ವಿಶಿಷ್ಟವಾದ ವಿಷಯವೆಂದರೆ ಭರವಸೆಯ ಜೊತೆಗೆ, ಕಾರ್ಯಕ್ಷಮತೆಯನ್ನು ಸಹ ಸೇರಿಸಲಾಗಿದೆ. ಹಲವಾರು ಹಿರಿಯ ಪತ್ರಕರ್ತರು ಇಲ್ಲಿ ಉಪಸ್ಥಿತರಿದ್ದಾರೆ. ನೀವು 2014ಕ್ಕಿಂತ ಮೊದಲು ಮುಖ್ಯಾಂಶಗಳನ್ನು ಬರೆದಿದ್ದೀರಿ, ಓದಿದ್ದೀರಿ ಮತ್ತು ವರದಿ ಮಾಡಿದ್ದೀರಿ. ಮತ್ತು ಆ ಸಮಯದಲ್ಲಿ ನಾನು ಅಲ್ಲಿ ಇರಲಿಲ್ಲ. ಈ ಮೊದಲಿದ್ದ ಮುಖ್ಯಾಂಶಗಳು ಯಾವುವು? ಅವು ಹೆಚ್ಚಾಗಿ ಒಂದಲ್ಲ ಒಂದು ವಲಯದಲ್ಲಿನ 'ಹಲವಾರು ಲಕ್ಷ ಕೋಟಿ' ಹಗರಣಗಳ ಬಗ್ಗೆ ಇರುತ್ತಿದ್ದವು. ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದ ಬಗ್ಗೆ ಇರುತ್ತಿದ್ವು. ಆದರೆ ಇಂದಿನ ಮುಖ್ಯಾಂಶಗಳು ಯಾವುದರ ಕುರಿತಾಗಿವೆ? 'ಭ್ರಷ್ಟಾಚಾರದ ಪ್ರಕರಣಗಳ ವಿರುದ್ಧ ಕ್ರಮ ಕೈಗೊಂಡ ಕಾರಣ, ಭ್ರಷ್ಟರು ಸಂಘಟಿತರಾಗಿ ಬೀದಿಗಿಳಿದ ಕುರಿತಾಗಿವೆ. ಹಿಂದೆ, ಹಗರಣಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ತೋರಿಸುವ ಮೂಲಕ ನೀವು ಸಾಕಷ್ಟು ʻಟಿಆರ್‌ಪಿʼ ಗಳಿಸಿದ್ದೀರಿ. ಈಗಲೂ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡ ಸುದ್ದಿಗಳ ಮೂಲಕ ನಿಮ್ಮ ʻಟಿಆರ್‌ಪಿʼ ಹೆಚ್ಚಿಸಿಕೊಳ್ಳಲು ನಿಮಗೆ ಅವಕಾಶವಿದೆ. ಯಾರ ಒತ್ತಡಕ್ಕೂ ಒಳಗಾಗಬೇಡಿ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ. 

ಸ್ನೇಹಿತರೇ, 

ಈ ಹಿಂದೆ ನಗರಗಳಲ್ಲಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದ ಸುದ್ದಿ ಮುಖ್ಯಾಂಶಗಳು ಇರುತ್ತಿದ್ದವು; ನಕ್ಸಲೀಯ ಘಟನೆಗಳಿಗೆ ಸಂಬಂಧಿಸಿದ ಮುಖ್ಯಾಂಶಗಳು ಇರುತ್ತಿದ್ದವು. ಆದರೆ, ಇಂದು ಶಾಂತಿ ಮತ್ತು ಸಮೃದ್ಧಿಗೆ ಸಂಬಂಧಿಸಿದ ಸುದ್ದಿಗಳು ಹೆಚ್ಚಾಗಿವೆ. ಈ ಹಿಂದೆ ಪರಿಸರ ಕಾಳಜಿಯಿಂದಾಗಿ ಕೆಲವು ಪ್ರಮುಖ ಮೂಲಸೌಕರ್ಯ ಯೋಜನೆಗಳು ಸ್ಥಗಿತಗೊಂಡಿರುವ ಬಗ್ಗೆ ಸುದ್ದಿಗಳು ಇದ್ದವು. ಇಂದು, ಪರಿಸರಕ್ಕೆ ಸಂಬಂಧಿಸಿದ ಸಕಾರಾತ್ಮಕ ಸುದ್ದಿಯೊಂದಿಗೆ, ಹೊಸ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣದ ಯಶೋಗಾಥೆಗಳು ಸುದ್ದಿಯಾಗುತ್ತಿವೆ. ಈ ಮೊದಲು ರೈಲು ಅಪಘಾತಗಳ ಸುದ್ದಿ ಸಾಮಾನ್ಯ ವಿಷಯವಾಗಿತ್ತು. ಇಂದು ಆಧುನಿಕ ರೈಲುಗಳ ಆರಂಭವು ಸುದ್ದಿ ಮುಖ್ಯಾಂಶವಾಗುತ್ತಿದೆ. ಈ ಹಿಂದೆ ʻಏರ್ ಇಂಡಿಯಾʼ ಹಗರಣಗಳು ಮತ್ತು ಸಂಸ್ಥೆಯ ಅಧಃಪಥನದ ಬಗ್ಗೆ ಸುದ್ದಿಗಳು ಇದ್ದವು. ಇಂದು ವಿಶ್ವದ ಅತಿದೊಡ್ಡ ವಿಮಾನ ಒಪ್ಪಂದದ ಸುದ್ದಿ ಇಡೀ ಜಗತ್ತಿನಲ್ಲಿ ಸುದ್ದಿಯಾಗಿದೆ. ʻಭಾರತದ ಘಲಿಗೆʼಯು ಭರವಸೆ ಮತ್ತು ಕಾರ್ಯಕ್ಷಮತೆಯ ಈ ಬದಲಾವಣೆಯನ್ನು ತಂದಿದೆ. 

ಅಂದಹಾಗೆ, ಸ್ನೇಹಿತರೇ, ದೇಶವು ಆತ್ಮವಿಶ್ವಾಸ ಮತ್ತು ಸಂಕಲ್ಪದಿಂದ ದೃಢವಾಗಿರುವ ಸಮಯದಲ್ಲಿ; ವಿದೇಶಗಳು, ಪ್ರಪಂಚದಾದ್ಯಂತದ ವಿದ್ವಾಂಸರು ಸಹ ಭಾರತದ ಬಗ್ಗೆ ಆಶಾವಾದಿಗಳಾಗಿರುವ ಸಮಯದಲ್ಲಿ, ನಿರಾಶಾವಾದವನ್ನು ಹರಡಲು, ಭಾರತವನ್ನು ಅವಮಾನಿಸಲು ಮತ್ತು ಭಾರತದ ನೈತಿಕ ಸ್ಥೈರ್ಯವನ್ನು ಛಿದ್ರಗೊಳಿಸಲು ಪ್ರಯತ್ನಗಳು ನಡೆದಿವೆ. ಯಾರಿಗಾದರೂ ದೃಷ್ಟಿ ಬಿದ್ದು ಹಾನಿಯಾಗುವುದನ್ನು ತಪ್ಪಿಸುವ ಸಲುವಾಗಿ ಶುಭ ಕ್ಷಣಗಳಲ್ಲೂ ಕಪ್ಪು ಚುಕ್ಕೆ ಇಡುವ ಸಂಪ್ರದಾಯವಿರುವುದು ನಮಗೆ ಗೊತ್ತು.  ಇಂದು ಬಹಳಷ್ಟು ಶುಭ ಕಾರ್ಯಗಳು ನಡೆಯುತ್ತಿವೆ. ಹಾಗಾಗಿಯೇ ಕೆಲವರು ಕೆಲವರು ಕಪ್ಪು ಚುಕ್ಕೆಯನ್ನು ಹಚ್ಚುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ, ಆ ಮೂಲಕ ಈ ಶುಭದ  ಮೇಲೆ ಯಾವುದೇ ವಕ್ರ ದೃಷ್ಟಿ ಬೀಳದಂತೆ ಕಾಪಾಡುತ್ತಿದ್ದಾರೆ. 

ಸ್ನೇಹಿತರೇ,

ದೀರ್ಘಕಾಲದ ಗುಲಾಮಗಿರಿಯಿಂದಾಗಿ, ನಾವು ದೀರ್ಘಕಾಲದ ಬಡತನವನ್ನು ಕಂಡಿದ್ದೇವೆ. ಈ ಅವಧಿಯು ಎಷ್ಟೇ ದೀರ್ಘವಾಗಿದ್ದರೂ, ಒಂದು ವಿಷಯವಂತೂ ಸತ್ಯ. ಭಾರತದ ಬಡವರು ಸಾಧ್ಯವಾದಷ್ಟು ಬೇಗ ಬಡತನದಿಂದ ಹೊರಬರಲು ಬಯಸುತ್ತಾರೆ. ಇಂದಿಗೂ ಅವರು ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ತನ್ನ ಜೀವನ ಬದಲಾಗಬೇಕೆಂದು ಬಯಸುತ್ತಾರೆ; ಅವರ ಭವಿಷ್ಯದ ಪೀಳಿಗೆಯ ಜೀವನವು ಬದಲಾಗಬೇಕು ಎಂದು ಆಶಿಸುತ್ತಾರೆ. ಅವರು ದಿನಕ್ಕೆ ಕೇವಲ ಎರಡು ಊಟಕ್ಕೆ ಸೀಮಿತವಾಗಲು ಬಯಸುವುದಿಲ್ಲ. 

ಕಳೆದ ದಶಕಗಳಲ್ಲಿ ದೆಶದ ಎಲ್ಲಾ ಸರಕಾರಗಳು ಸಹ ತಮ್ಮ ಸಾಮರ್ಥ್ಯ ಮತ್ತು ತಿಳುವಳಿಕೆಗೆ ಅನುಗುಣವಾಗಿ ಪ್ರಯತ್ನಗಳನ್ನು ಮಾಡಿವೆ. ಆ ಪ್ರಯತ್ನಗಳಿಗೆ ಅನುಗುಣವಾಗಿ ಆ ಸರಕಾರಗಳು ಸಹ ಅಪೇಕ್ಷಿತ ಫಲಿತಾಂಶಗಳನ್ನು ಪಡೆದಿವೆ. ಆದರೆ ನಾವು ಹೊಸ ಫಲಿತಾಂಶಗಳನ್ನು ಬಯಸಿದ್ದೇವೆ, ಆದ್ದರಿಂದ ನಾವು ನಮ್ಮ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಉದಾಹರಣೆಗೆ, ಈ ಹಿಂದೆಯೂ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ನಾವು ದಾಖಲೆಯ ವೇಗದಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಈ ಹಿಂದೆಯೂ ದೇಶದಲ್ಲಿ ಬ್ಯಾಂಕುಗಳು ಇದ್ದವು ಮತ್ತು ಬಡವರಿಗೆ ಸಹಾಯ ಮಾಡಲು ಬ್ಯಾಂಕುಗಳನ್ನು ಸಹ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈಗ, ಅರುಣ್ ಜೀ ಅವರು ವಿವರವಾಗಿ ಹೇಳಿದಂತೆ, ನಾವು ತ್ವರಿತವಾಗಿ 48 ಕೋಟಿ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಿದ್ದೇವೆ. ಬಡವರಿಗೆ ಮನೆಗಳನ್ನು ನೀಡುವ ಯೋಜನೆ ಈಗಾಗಲೇ ಇತ್ತು. ಆ ಯೋಜನೆಗಳ ಸ್ಥಿತಿಯ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿತ್ತು. ಆದರೆ ನಮ್ಮ ಸರಕಾರ ಅದನ್ನು ಸಂಪೂರ್ಣವಾಗಿ ಬದಲಾಯಿಸಿತು. ಈಗ ಮನೆಯ ಹಣವನ್ನು ನೇರವಾಗಿ ಬಡವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈಗ ಮನೆಗಳನ್ನು ನಿರ್ಮಿಸುವ ಪ್ರಕ್ರಿಯೆಯ ಮುಗಿದ ನಂತರ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತದೆ, ಮತ್ತು ನಾವು ಫಲಾನುಭವಿಗಳಿಂದ ಮುನ್ನಡೆಸಲ್ಪಡುವ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ಮುಂದೆ ಸಾಗುತ್ತಿದ್ದೇವೆ. ಯೋಜನೆಯು ಫಲಾನುಭವಿ ಅಥವಾ ಮಾಲೀಕರಿಂದಲೇ ಚಾಲಿತವಾದಾಗ ಅಲ್ಲಿ ಯಾವುದೇ ಹಗರಣಗಳಿಗೆ ಅವಕಾಶವಿರುವುದಿಲ್ಲ. ಏಕೆಂದರೆ ಆ ಮನೆಯ ಮಾಲೀಕರು ಒಳ್ಳೆಯ ಮನೆಯನ್ನು ನಿರ್ಮಿಸಲು ಬಯಸುತ್ತಾರೆ. 

ಕಳೆದ 9 ವರ್ಷಗಳಲ್ಲಿ ನಾವು 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿ ಬಡವರಿಗೆ ಹಸ್ತಾಂತರಿಸಿದ್ದೇವೆ. ವಿಶ್ವದಲ್ಲಿ ಇಡೀ ದೇಶದ ಜನಸಂಖ್ಯೆ 3 ಕೋಟಿ ಇರುವ ಅನೇಕ ದೇಶಗಳಿವೆ. ಹಾಗೆ ನೋಡಿದರೆ, ನಾವು ಒಂದು ರೀತಿಯಲ್ಲಿ, ಒಂದು ಸಂಪೂರ್ಣ ಹೊಸ ದೇಶಕ್ಕೆ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮಲ್ಲಿ ಮಹಿಳೆಯರ ಹೆಸರಿನಲ್ಲಿ ಆಸ್ತಿಯನ್ನು ಹೊಂದಿರುವುದು ಕಡಿಮೆ. ಅಂಗಡಿ, ಕಾರುಗಳು, ಭೂಮಿ ಮತ್ತು ಎಲ್ಲವನ್ನೂ ಕುಟುಂಬದ ಪುರುಷ ಸದಸ್ಯರ ಹೆಸರಿನಲ್ಲಿ ಖರೀದಿಸಲಾಗುತ್ತದೆ. ಆದರೆ ನಮ್ಮ ಸರಕಾರ ನಿರ್ಮಿಸಿದ ಮತ್ತು ಬಡವರಿಗೆ ನೀಡಿದ ಮನೆಗಳಲ್ಲಿ, ಸುಮಾರು 2.5 ಕೋಟಿ ಮನೆಗಳು ಜಂಟಿ ಮಾಲೀಕತ್ವವನ್ನು ಹೊಂದಿವೆ ಮತ್ತು ಮಹಿಳೆಯರಿಗೂ ಮಾಲೀಕತ್ವದ ಹಕ್ಕುಗಳಿವೆ. ಈಗ ಹೇಳಿ, ಬಡ ಮಹಿಳೆಯರಲ್ಲಿ ಸಶಕ್ತ ಭಾವನೆ ಮೂಡಿದ್ದಾದರೆ ʻಭಾರತದ ಘಳಿಗೆʼ ಖಂಡಿತವಾಗಿಯೂ ಬರುತ್ತದೆಯೇ ಅಥವಾ ಇಲ್ಲವೇ? 

ದೇಶದಲ್ಲಿ ಇಂತಹ ಅನೇಕ ಬದಲಾವಣೆಗಳು ನಡೆದಿವೆ, ಅವು ʻಭಾರತದ ಘಳಿಗೆʼಯನ್ನು ಮುನ್ನೆಲೆಗೆ ತಂದಿವೆ. ಈ ಕೆಲವು ಬದಲಾವಣೆಗಳನ್ನು ಮಾಧ್ಯಮಗಳು ಸಹ ಚರ್ಚಿಸಿಲ್ಲ. 'ಆಸ್ತಿ ಹಕ್ಕುಗಳು' ಸಹ ಒಂದು ಪ್ರಮುಖ ಜಾಗತಿಕ ಸವಾಲಾಗಿದೆ ಎಂದು ನಿಮಗೆ ತಿಳಿದಿದೆಯೇ? ʻವಿಶ್ವ ಬ್ಯಾಂಕ್ʼ ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯ ಕೇವಲ 30 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಆಸ್ತಿಯ ಮೇಲೆ ಕಾನೂನುಬದ್ಧವಾಗಿ ನೋಂದಾಯಿತ ಹಕ್ಕನ್ನು ಹೊಂದಿದ್ದಾರೆ. ಅಂದರೆ, ವಿಶ್ವದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ತಮ್ಮ ಆಸ್ತಿಯ ಕಾನೂನುಬದ್ಧ ದಾಖಲೆಯನ್ನು ಹೊಂದಿಲ್ಲ.

ಆಸ್ತಿ ಹಕ್ಕುಗಳ ಕೊರತೆಯನ್ನು ಜಾಗತಿಕ ಅಭಿವೃದ್ಧಿಗೆ ಪ್ರಮುಖ ಅಡಚಣೆ ಎಂದು ಪರಿಗಣಿಸಲಾಗಿದೆ. ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಸಹ ಈ ಸವಾಲನ್ನು ಎದುರಿಸುತ್ತಿವೆ. ಆದರೆ ಇಂದಿನ ಭಾರತವು ಈ ಅಂಶದಲ್ಲೂ ಮುಂದಾಳತ್ವ ವಹಿಸುತ್ತಿದೆ. ʻಪಿಎಂ-ಸ್ವಾಮಿತ್ವʼ ಯೋಜನೆ ಕಳೆದ 2 ರಿಂದ 2.5 ವರ್ಷಗಳಿಂದ ಭಾರತದಲ್ಲಿ ಜಾರಿಗೊಂಡಿದೆ. ಇಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಭಾರತದ ಹಳ್ಳಿಗಳಲ್ಲಿ, ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಭೂಮಿಯನ್ನು ಮ್ಯಾಪಿಂಗ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ, ಭಾರತದ 2 ಲಕ್ಷ 34 ಸಾವಿರ ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. 1 ಕೋಟಿ 22 ಲಕ್ಷ ʻಆಸ್ತಿ ಕಾರ್ಡ್‌ʼ ಗಳನ್ನು ಸಹ ನೀಡಲಾಗಿದೆ. ಈ ಇಡೀ ಪ್ರಕ್ರಿಯೆಗೆ ಮತ್ತೊಂದು ಪ್ರಯೋಜನವಿದೆ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಮನೆಗಳು ಅಥವಾ ಭೂಮಿಯನ್ನು ಅತಿಕ್ರಮಿಸಲಾಗುತ್ತದೆ ಎಂದು ಹಳ್ಳಿಗಳ ಜನರು ಇನ್ನು ಮುಂದೆ ಹೆದರುವ ಅಗತ್ಯವಿಲ್ಲ.

ಇಂತಹ ಅನೇಕ ಮೌನ ಕ್ರಾಂತಿಗಳು ಇಂದು ಭಾರತದಲ್ಲಿ ನಡೆಯುತ್ತಿವೆ ಮತ್ತು ಇವು ʻಭಾರತದ ಘಳಿಗೆʼಯ ಅಡಿಪಾಯವಾಗುತ್ತಿವೆ. ಮತ್ತೊಂದು ಉದಾಹರಣೆಯೆಂದರೆ ರೈತರಿಗೆ ನೀಡಿದ ನೆರವು. ಈ ಹಿಂದೆ ಚುನಾವಣೆಗೂ ಮುನ್ನ ರೈತರ ಸಾಲ ಮನ್ನಾ ಘೋಷಣೆಗಳು ಹೊರಬೀಳುತ್ತಿದ್ದವು. ಆದರೆ, ಕೋಟ್ಯಂತರ ರೈತರಿಗೆ ಬ್ಯಾಂಕ್ ಖಾತೆಯೇ ಇರಲಿಲ್ಲ. ಅವರು ಇತರ ಮೂಲಗಳಿಂದ ಸಾಲಗಳನ್ನು ತೆಗೆದುಕೊಳ್ಳುತ್ತಿದ್ದರು. ಸಾಲ ಮನ್ನಾದ ಯಾವುದೇ ಪ್ರಯೋಜನ ಅವರಿಗೆ ದೊರೆಯುತ್ತಿರಲಿಲ್ಲ. ನಾವು ಈ ಪರಿಸ್ಥಿತಿಯನ್ನು ಸಹ ಬದಲಾಯಿಸಿದ್ದೇವೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಅಡಿಯಲ್ಲಿ ಈವರೆಗೆ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದೇಶದ 11 ಕೋಟಿ ಸಣ್ಣ ರೈತರಿಗೆ ಇದರಿಂದ ಪ್ರಯೋಜನವಾಗಿದೆ. 

ಸ್ನೇಹಿತರೇ, 

ಯಾವುದೇ ದೇಶದ ಪ್ರಗತಿಗೆ ನೀತಿ-ನಿರ್ಧಾರಗಳಲ್ಲಿ ಸ್ಥಗಿತತೆ ಅಥವಾ ಯಥಾಸ್ಥಿತಿಯು ಒಂದು ಪ್ರಮುಖ ಅಡಚಣೆಯಾಗಿದೆ. ನಮ್ಮ ದೇಶದಲ್ಲಿಯೂ, ಹಳೆಯ ಆಲೋಚನೆ ಮತ್ತು ಕಾರ್ಯವಿಧಾನ; ಮತ್ತು ಕೆಲವು ಕುಟುಂಬಗಳ ಮಿತಿಗಳಿಂದಾಗಿ, ದೀರ್ಘಕಾಲದ ʻಸ್ಥಗಿತತೆʼ ಇತ್ತು. ದೇಶವು ಮುಂದೆ ಸಾಗಬೇಕಾದರೆ, ದೇಶವು ಸದಾ ಚಲನಶೀಲನವಾಗಿರಬೇಕು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರಬೇಕು. ದೇಶವು ಪ್ರಗತಿ ಸಾಧಿಸಬೇಕಾದರೆ, ಅದು ಹೊಸತನವನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರಬೇಕು; ಅದು ಪ್ರಗತಿಪರ ಮನಸ್ಥಿತಿಯನ್ನು ಹೊಂದಿರಬೇಕು. ದೇಶವು ಮುಂದೆ ಸಾಗಬೇಕಾದರೆ, ಅದು ತನ್ನ ದೇಶವಾಸಿಗಳ ಸಾಮರ್ಥ್ಯ ಮತ್ತು ಪ್ರತಿಭೆಗಳ ಬಗ್ಗೆ ವಿಶ್ವಾಸವನ್ನು ಹೊಂದಿರಬೇಕು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ರಾಷ್ಟ್ರದ ಸಂಕಲ್ಪಗಳು ಮತ್ತು ಕನಸುಗಳಿಗೆ ದೇಶದ ಜನರ ಆಶೀರ್ವಾದ ಇರಬೇಕು; ಗುರಿಗಳನ್ನು ಸಾಧಿಸುವಲ್ಲಿ ಜನರ ಭಾಗವಹಿಸುವಿಕೆ ಇರಬೇಕು. 

ಅಧಿಕಾರದಲ್ಲಿರುವ ಸರಕಾರದ ಮೇಲೆ ಅವಲಂಬನೆ ಮೂಲಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಮಾರ್ಗವು ಬಹಳ ಸೀಮಿತ ಫಲಿತಾಂಶಗಳನ್ನು ನೀಡುತ್ತದೆ. ಆದರೆ 130 ಕೋಟಿ ದೇಶವಾಸಿಗಳ ಶಕ್ತಿಯನ್ನು ಸೇರಿಸಿದಾಗ, ಪ್ರತಿಯೊಬ್ಬರ ಪ್ರಯತ್ನವನ್ನು ಸೇರಿಸಿದಾಗ, ದೇಶದ ಮುಂದೆ ಯಾವುದೇ ಅಡೆತಡೆಗಳು ನಿಲ್ಲಲು ಸಾಧ್ಯವಿಲ್ಲ. ಇದಕ್ಕಾಗಿ, ಸರಕಾರದ ಮೇಲೆ ದೇಶದ ಜನರ ವಿಶ್ವಾಸವೂ ಅಷ್ಟೇ ಮುಖ್ಯ. ಸರಕಾರವು ತಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂಬ ನಂಬಿಕೆಯನ್ನು ಇಂದು ದೇಶವಾಸಿಗಳು ಬೆಳೆಸಿಕೊಂಡಿರುವುದು ನನಗೆ ಸಂತೋಷ ತಂದಿದೆ. 

ಅದಕ್ಕೆ ಕಾರಣವನ್ನೂ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅದಕ್ಕೆ ಕಾರಣವೆಂದರೆ ಆಡಳಿತದಲ್ಲಿ ಮೂಡಿರುವ 'ಮಾನವೀಯ ಸ್ಪರ್ಶ' ಮತ್ತು ಉತ್ತಮ ಆಡಳಿತದಲ್ಲಿ ಸಂವೇದನಾಶೀಲತೆ. ನಾವು ಆಡಳಿತಕ್ಕೆ ಮಾನವೀಯ ಸ್ಪರ್ಶ ನೀಡಿರುವುದರಿಂದ ಅಂತಹ ಪ್ರಮುಖ ಪರಿಣಾಮ ಗೋಚರಿಸುತ್ತಿದೆ. ಉದಾಹರಣೆಗೆ, ಈಗ ʻರೋಮಾಂಚಕ ಗ್ರಾಮʼ(ವೈಬ್ರೆಂಟ್‌ ವಿಲೇಜ್‌) ಯೋಜನೆಯನ್ನೇ ತೆಗೆದುಕೊಳ್ಳೋಣ. ದಶಕಗಳಿಂದ, ನಮ್ಮ ಗಡಿ ಗ್ರಾಮಗಳನ್ನು ಕೊನೆಯ ಹಳ್ಳಿಗಳು ಎಂದು ಪರಿಗಣಿಸಲಾಗಿತ್ತು. ಅವುಗಳನ್ನು ದೇಶದ ಮೊದಲ ಗ್ರಾಮಗಳನ್ನಾಗಿ ಪರಿವರ್ತಿಸುವ ವಿಶ್ವಾಸವನ್ನು ನಾವು ಅವರಿಗೆ ನೀಡಿದ್ದೇವೆ. ನಾವು ಅಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಇಂದು ಸರಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳು ಈ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ, ಅಲ್ಲಿನ ಜನರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಅಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆ. 

ಈಶಾನ್ಯದ ಜನರು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದೆಹಲಿಯಿಂದ ದೂರವಿದ್ದರು. ಇಲ್ಲಿಯೂ ನಾವು ಆಡಳಿತದಲ್ಲಿ ಮಾನವೀಯ ಸ್ಪರ್ಶ ಮೂಡಿಸಿದ್ದೇವೆ. ಅರುಣ್ ಜೀ ಅವರು ಬಹಳ ವಿವರವಾಗಿ ಹೇಳಿದಂತೆ ಈಗ ಕೇಂದ್ರ ಸರಕಾರದ ಮಂತ್ರಿಗಳು, ನಿಯಮಿತವಾಗಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಾರೆ. ಮತ್ತು ಅವರು ರಾಜ್ಯದ ರಾಜಧಾನಿಗಳಿಗೆ ಮಾತ್ರವಲ್ಲ, ಒಳನಾಡಿಗೂ ಭೇಟಿ ನೀಡುತ್ತಾರೆ. ನಾನು ಈಶಾನ್ಯಕ್ಕೆ ಸುಮಾರು 50 ಬಾರಿ ಭೇಟಿ ನೀಡಿದ್ದೇನೆ.

ಸ್ನೇಹಿತರೇ, 

ಈ ಸಂವೇದನಾಶೀಲತೆಯು ಈಶಾನ್ಯದ ಅಂತರವನ್ನು ಕಡಿಮೆ ಮಾಡಿದ್ದಲ್ಲದೆ, ಅಲ್ಲಿ ಶಾಂತಿಯನ್ನು ಸ್ಥಾಪಿಸುವಲ್ಲಿ ಸಾಕಷ್ಟು ಸಹಾಯ ಮಾಡಿದೆ. ಉಕ್ರೇನ್ ಬಿಕ್ಕಟ್ಟಿನ ಸಮಯದಲ್ಲಿ ಸರಕಾರದ ಕೆಲಸದ ಕಾರ್ಯವೈಖರಿಯನ್ನು ಸಹ ನೀವು ಮರೆಯಬಾರದು. ದೇಶದ ಸಾವಿರಾರು ಕುಟುಂಬಗಳು ಚಿಂತೆಗೀಡಾಗಿದ್ದವು. ನಾವು ಸುಮಾರು 14,000 ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿದೆವು ಮತ್ತು ಪ್ರತಿ ಮನೆಗೆ ಸರಕಾರದ ಪ್ರತಿನಿಧಿಗಳನ್ನು ಕಳುಹಿಸಿದೆವು. ಕುಟುಂಬದಲ್ಲಿ ಸರಕಾರಿ ಪ್ರತಿನಿಧಿಯ ಉಪಸ್ಥಿತಿಯ ಮೂಲಕ ಕಷ್ಟದ ಸಮಯದಲ್ಲಿ ಸರಕಾರದ ಅವರೊಂದಿಗೆ ಇದೆ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ. ಕೆಲವೊಮ್ಮೆ ಅಂತಹ ಪರಿಸ್ಥಿತಿಗಳಲ್ಲಿ, ಸಂದರ್ಭಗಳು ನಿಯಂತ್ರಣ ತಪ್ಪುತ್ತವೆ ಮತ್ತು ಮಾಡಬೇಕಾದ ಕೆಲಸದಲ್ಲಿ ಅಡೆತಡೆಗಳು ಸೃಷ್ಟಿಯಾಗುತ್ತವೆ ಎಂದು ನಿಮಗೆ ಗೊತ್ತಿದೆ. ಆದ್ದರಿಂದ, ನಾವು ಮಾಡಿದ ಮೊದಲ ಕೆಲಸವೆಂದರೆ, ಪ್ರತಿ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸಹಾಯ ಮಾಡುವ ನಿಟ್ಟಿನಲ್ಲಿ ಸರಕಾರಿ ಪ್ರತಿನಿಧಿಯನ್ನು ನೇಮಿಸಿದ್ದು. ತತ್ಪರಿಣಾಮವಾಗಿ, ದೇಶದ ಜನರಿಗೆ ತಮ್ಮ ಮಗು ಸುರಕ್ಷಿತವಾಗಿದೆ ಮತ್ತು ಮಗು ಶೀಘ್ರದಲ್ಲೇ ಹಿಂತಿರುಗುತ್ತದೆ ಎಂದು ಮನವರಿಕೆಯಾಯಿತು. ಮಾನವ ಸಂವೇದನೆಯಿಂದ ತುಂಬಿರುವ ಇಂತಹ ಆಡಳಿತದಿಂದ ʻಭಾರತದ ಘಳಿಗೆʼ ಶಕ್ತಿಯನ್ನು ಪಡೆಯುತ್ತದೆ. ಆಡಳಿತದಲ್ಲಿ ಈ ಮಾನವೀಯ ಸ್ಪರ್ಶ ಇಲ್ಲದಿದ್ದರೆ, ಕರೋನಾ ವಿರುದ್ಧದ ಅಂತಹ ದೊಡ್ಡ ಯುದ್ಧವನ್ನು ಗೆಲ್ಲಲು ನಮಗೆ ಸಾಧ್ಯವಾಗುತ್ತಿರಲಿಲ್ಲ.

ಸ್ನೇಹಿತರೇ,

ಭಾರತ ಇಂದು ಏನನ್ನೇ ಸಾಧಿಸಿದರೂ ಅದಕ್ಕೆ ನಮ್ಮ ಪ್ರಜಾಪ್ರಭುತ್ವದ ಶಕ್ತಿ ಮತ್ತು ನಮ್ಮ ಸಂಸ್ಥೆಗಳ ಶಕ್ತಿ ಕಾರಣ. ಇಂದು ಭಾರತದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವು ಬಲವಾದ ಇಚ್ಛಾಪೂರ್ವಕ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದನ್ನು ಜಗತ್ತು ನೋಡುತ್ತಿದೆ. ಪ್ರಜಾಪ್ರಭುತ್ವವು ಏನನ್ನು ನೀಡಬಲ್ಲದು ಎಂದು ಭಾರತವು ಜಗತ್ತಿಗೆ ತೋರಿಸಿದೆ. ಕಳೆದ ಹಲವು ವರ್ಷಗಳಲ್ಲಿ, ಭಾರತವು ಹಲವಾರು ಹೊಸ ಸಂಸ್ಥೆಗಳನ್ನು ಸ್ಥಾಪಿಸಿದೆ. ಭಾರತದ ನಾಯಕತ್ವದಲ್ಲಿ ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼ ರಚಿಸಲಾಗಿದೆ. ಭಾರತದ ನಾಯಕತ್ವದಲ್ಲಿ ʻವಿಪತ್ತು ಸದೃಢತೆ ಮೂಲಸೌಕರ್ಯ ಒಕ್ಕೂಟʼ (ಸಿಡಿಆರ್‌ಐ) ರೂಪುಗೊಂಡಿದೆ. ಇಂದು ʻನೀತಿ ಆಯೋಗʼವು ಭವಿಷ್ಯದ ಮಾರ್ಗಸೂಚಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಕಾರ್ಪೊರೇಟ್ ಆಡಳಿತವನ್ನು ಬಲಪಡಿಸುವಲ್ಲಿ ʻರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿʼ (ಎನ್‌ಸಿಎಲ್‌ಟಿ) ಪ್ರಮುಖ ಪಾತ್ರ ವಹಿಸುತ್ತಿದೆ. ʻಜಿಎಸ್‌ಟಿʼ ಮಂಡಳಿ ಕಾರಣದಿಂದಾಗಿ, ದೇಶದಲ್ಲಿ ಆಧುನಿಕ ತೆರಿಗೆ ವ್ಯವಸ್ಥೆಯನ್ನು ರೂಪಿಸಲಾಗಿದೆ. 

ಇಂದು ಭಾರತದಲ್ಲಿ ಹೆಚ್ಚು ಹೆಚ್ಚು ಜನರ ಪ್ರಜಾಸತಾತ್ಮಕ ಭಾಗವಹಿಸುವಿಕೆ ಹೇಗೆ ಹೆಚ್ಚುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ಕರೋನಾ ನಡುವೆಯೂ ದೇಶದಲ್ಲಿ ಅನೇಕ ಚುನಾವಣೆಗಳು ಯಶಸ್ವಿಯಾಗಿ ನಡೆದವು. ಇದು ನಮ್ಮ ಸಂಸ್ಥೆಗಳ ಶಕ್ತಿ. ಜಾಗತಿಕ ಬಿಕ್ಕಟ್ಟಿನ ಮಧ್ಯೆ, ಇಂದು ಭಾರತದ ಆರ್ಥಿಕತೆಯು ಬಲವಾಗಿದೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಬಲವಾಗಿದೆ; ಇದು ನಮ್ಮ ಸಂಸ್ಥೆಗಳ ಶಕ್ತಿ. ನಾವು ಕರೋನಾ ಲಸಿಕೆಯನ್ನು ಎಲ್ಲೆಡೆ ತಲುಪಿಸಿದ್ದೇವೆ; 220 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಇದು ನಮ್ಮ ಸಂಸ್ಥೆಗಳ ಶಕ್ತಿ. ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಪ್ರಜಾಸತಾತ್ಮಕ ಸಂಸ್ಥೆಗಳ ಈ ಯಶಸ್ಸು ಕೆಲವು ಜನರನ್ನು ಮತ್ತು ಅವರಿಂದ ದಾಳಿಗಳನ್ನು ಪ್ರಚೋದಿಸುತ್ತಿವೆ ಎಂದು ನಾನು ನಂಬುತ್ತೇನೆ. ಆದರೆ ಈ ದಾಳಿಗಳ ಹೊರತಾಗಿಯೂ, ಭಾರತವು ತನ್ನ ಗುರಿಗಳತ್ತ ವೇಗವಾಗಿ ಸಾಗುತ್ತದೆ ಮತ್ತು ತನ್ನ ಗುರಿಗಳನ್ನು ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ. 
ಸ್ನೇಹಿತರೇ, ಭಾರತದ ಪಾತ್ರವು ಜಾಗತಿಕವಾಗುತ್ತಿರುವಾಗ, ಭಾರತೀಯ ಮಾಧ್ಯಮಗಳು ಸಹ ತನ್ನ ಪಾತ್ರವನ್ನು ಜಾಗತಿಕಗೊಳಿಸಬೇಕು. ನಾವು 'ಎಲ್ಲರ ಪ್ರಯತ್ನ'ದೊಂದಿಗೆ 'ಭಾರತ ಘಳಿಗೆ'ಗೆ ಶಕ್ತಿ ತುಂಬಬೇಕಿದೆ. 'ಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣವನ್ನು ಬಲಪಡಿಸಬೇಕಾಗಿದೆ. ಇಲ್ಲಿಗೆ ಬಂದು ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ʻಇಂಡಿಯಾ ಟುಡೇ ಸಮೂಹʼದ ಅರುಣ್ ಜಿ ಅವರಿಗೆ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. 2024ರಲ್ಲಿಯೂ ನನ್ನನ್ನು ಆಹ್ವಾನಿಸುವ ಅವರ ದಿಟ್ಟ ಮುನ್ಸೂಚನೆಗಾಗಿ ಅವರಿಗೆ ವಿಶೇಷ ಧನ್ಯವಾದಗಳು. 
ಧನ್ಯವಾದಗಳು!

ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ, ಮೂಲ ಭಾಷಣ ಹಿಂದಿಯಲ್ಲಿತ್ತು.

 ******



(Release ID: 1908974) Visitor Counter : 129