ಪ್ರಧಾನ ಮಂತ್ರಿಯವರ ಕಛೇರಿ
ʻಇಂಡಿಯಾ ಟುಡೇ ಕಾನ್‌ಕ್ಲೇವ್ʼ ಉದ್ದೇಶಿಸಿ ಪ್ರಧಾನಿ ಭಾಷಣ
"ಇದು ಭಾರತದ ಘಳಿಗೆ"
"21ನೇ ಶತಮಾನದ ಈ ದಶಕದಲ್ಲಿ ಭಾರತದ ಮುಂದಿನ ಅವಧಿಯು ಅಭೂತಪೂರ್ವವಾಗಿದೆ"
"2023ರ ಮೊದಲ 75 ದಿನಗಳ ಸಾಧನೆಗಳು ʻಭಾರತದ ಘಳಿಗೆʼಯ ಪ್ರತಿಬಿಂಬಗಳು"
"ಜಗತ್ತು ಭಾರತೀಯ ಸಂಸ್ಕೃತಿ ಮತ್ತು ಮೃದು ಶಕ್ತಿಯ ಬಗ್ಗೆ ಅಭೂತಪೂರ್ವ ಮೋಹವನ್ನು ಹೊಂದಿದೆ
"ದೇಶವು ಮುಂದುವರಿಯಬೇಕಾದರೆ, ಅದು ಯಾವಾಗಲೂ ಚಲನಶೀಲವಾಗಿರಬೇಕು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರಬೇಕು"
"ಇಂದು, ದೇಶವಾಸಿಗಳು ಸರಕಾರವು ತಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂಬ ವಿಶ್ವಾಸವನ್ನು ಬೆಳೆಸಿಕೊಂಡಿದ್ದಾರೆ"
"ನಾವು ಆಡಳಿತಕ್ಕೆ ಮಾನವೀಯ ಸ್ಪರ್ಶ ನೀಡಿದ್ದೇವೆ"
"ಭಾರತ ಇಂದು ಏನನ್ನು ಸಾಧಿಸಿದರೂ ಅದಕ್ಕೆ ನಮ್ಮ ಪ್ರಜಾಪ್ರಭುತ್ವದ ಶಕ್ತಿ, ನಮ್ಮ ಸಂಸ್ಥೆಗಳ ಶಕ್ತಿ ಕಾರಣ"
"ನಾವು ʻಸಬ್ ಕಾ ಪ್ರಯಾಸ್ʼನೊಂದಿಗೆ ʻಭಾರತದ ಘಳಿಗೆʼಯನ್ನು ಬಲಪಡಿಸಬೇಕು ಮತ್ತು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದಲ್ಲಿ ಅಭಿವೃದ್ಧಿ ಹೊಂದಿದ ಭಾರತದತ್ತ ಪ್ರಯಾಣವನ್ನು ಸಶಕ್ತಗೊಳಿಸಬೇಕು"
Posted On:
18 MAR 2023 10:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಹೋಟೆಲ್ ತಾಜ್ ಪ್ಯಾಲೇಸ್’ನಲ್ಲಿ ನಡೆದ `ಇಂಡಿಯಾ ಟುಡೇ ಕಾನ್‌ಕ್ಲೇವ್ʼ ಉದ್ದೇಶಿಸಿ ಮಾತನಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಮಾವೇಶಕ್ಕೆ ಆಯ್ಕೆ ಮಾಡಲಾದ 'ಭಾರತದ ಘಳಿಗೆʼ (ದಿ ಇಂಡಿಯಾ ಮೂಮೆಂಟ್) ವಿಷಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವಿಶ್ವದ ಅತ್ಯುತ್ತಮ ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು ಮತ್ತು ಚಿಂತಕರು ಇದು ನಿಜವಾಗಿಯೂ ʻಭಾರತದ ಘಳಿಗೆʼ ಎಂಬ ಧ್ವನಿಯನ್ನು ಪ್ರತಿಧ್ವನಿಸುತ್ತಾರೆ ಎಂದು ಹೇಳಿದರು. ಇಂಡಿಯಾ ಟುಡೇ ಗ್ರೂಪ್ ಇದೇ ಆಶಾವಾದವನ್ನು ತೋರಿಸುತ್ತಿರುವುದು ಇನ್ನಷ್ಟು ವಿಶೇಷವಾಗಿದೆ ಎಂದು ಅವರು ಹೇಳಿದರು. 20 ತಿಂಗಳ ಹಿಂದೆ ಕೆಂಪುಕೋಟೆಯಿಂದ ತಾವು ಮಾಡಿದ ಭಾಷಣವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಅಂದು "ಇದು ಸರಿಯಾದ ಸಮಯ ಮತ್ತು ಇದೇ ಸಮಯ " ಎಂದು ಹೇಳಿದ್ದನ್ನು ಸ್ಮರಿಸಿದರು. ಇದು ಭಾರತದ ಘಳಿಗೆ ಎಂದು ಒತ್ತಿ ಹೇಳಿದರು.
ಯಾವುದೇ ರಾಷ್ಟ್ರದ ಅಭಿವೃದ್ಧಿಯ ಪಯಣದ ಹಾದಿಯಲ್ಲಿ ಬರುವ ವಿವಿಧ ಸವಾಲುಗಳು ಮತ್ತು ಹಂತಗಳ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು, 21ನೇ ಶತಮಾನದ ಈ ದಶಕದ ಅವಧಿಯು ಭಾರತದ ಪಾಲಿಗೆ ವಿಶೇಷ ಮಹತ್ವವನ್ನು ಹೊಂದಿದೆ ಎಂದರು. ಹಲವು ದಶಕಗಳ ಹಿಂದೆ ಅಭಿವೃದ್ಧಿ ಹೊಂದಿದ ದೇಶಗಳ ಪ್ರಗತಿಯ ಹಾದಿಯಲ್ಲಿ ಇದ್ದ ಸಂದರ್ಭಗಳಿಗೂ ಈಗಿನ ಸಂದರ್ಭಗಳಿಗೂ ಇರುವ ವ್ಯತ್ಯಾಸವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಜಾಗತಿಕ ಸ್ಪರ್ಧೆಯ ಕೊರತೆಯಿರುವ ಜಗತ್ತಿನಲ್ಲಿ ಆ ದೇಶಗಳು ತಮ್ಮೊಂದಿಗೆ ತಾವು ಸ್ಪರ್ಧಿಸಿದ್ದೇ ಅವುಗಳ ಯಶಸ್ಸಿಗೆ ಕಾರಣವಾಯಿತು ಎಂದರು. ಇಂದು ಭಾರತ ಎದುರಿಸುತ್ತಿರುವ ಪರಿಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ, ಈಗ ಜಾಗತಿಕ ಸವಾಲುಗಳು ಸಮಗ್ರ ಸ್ವರೂಪದಲ್ಲಿವೆ ಮತ್ತು ನಾನಾ ರೂಪಗಳಲ್ಲಿ ಬರುತ್ತವೆ ಎಂದು ಅವರು ಗಮನಸೆಳೆದರು. ಇಂದು ವಿಶ್ವದಾದ್ಯಂತ ಚರ್ಚಿಸಲಾಗುತ್ತಿರುವ 'ಭಾರತದ ಘಳಿಗೆʼ ಸಾಮಾನ್ಯವಲ್ಲ. ಅದರಲ್ಲೂ ವಿಶೇಷವಾಗಿ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧ, ನೂರು ವರ್ಷಗಳಲ್ಲೇ ಅತಿದೊಡ್ಡ ಸಾಂಕ್ರಾಮಿಕ ರೋಗವು ಜಗತ್ತನ್ನು ಆವರಿಸಿದ ಹಿನ್ನೆಲೆಯಲ್ಲಿ ಇದು ಸುಮ್ಮನೆ ಅಲ್ಲ. "ಒಂದು ಹೊಸ ಇತಿಹಾಸವನ್ನು ಬರೆಯಲಾಗುತ್ತಿದೆ ಮತ್ತು ನಾವೆಲ್ಲರೂ ಒಟ್ಟಾಗಿ ಅದಕ್ಕೆ ಸಾಕ್ಷಿಯಾಗುತ್ತಿದ್ದೇವೆ" ಎಂದು ಪ್ರಧಾನಿ ಹೇಳಿದರು. ಭಾರತದ ಮೇಲೆ ಜಗತ್ತು ತನ್ನ ವಿಶ್ವಾಸವನ್ನು ತೋರಿಸುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ, ವಿಶ್ವದ ಸ್ಮಾರ್ಟ್ ಫೋನ್ ಡೇಟಾ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದೆ, ಜಾಗತಿಕ ʻಫಿನ್ ಟೆಕ್ʼ ಅಳವಡಿಕೆ ದರದಲ್ಲಿ ಮೊದಲ ಸ್ಥಾನದಲ್ಲಿದೆ, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕನೆನಿಸಿದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದರು.
2023ರ ಮೊದಲ 75 ದಿನಗಳಲ್ಲಿ ದೇಶದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಭಾರತದಲ್ಲಿ ಐತಿಹಾಸಿಕ ʻಹಸಿರು ಬಜೆಟ್ ಅನ್ನು ಪ್ರಾರಂಭಿಸಲಾಗಿದೆ, ಕರ್ನಾಟಕದ ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗಿದೆ, ಮುಂಬೈ ಮೆಟ್ರೋದ ಮುಂದಿನ ಹಂತವನ್ನು ಪ್ರಾರಂಭಿಸಲಾಗಿದೆ, ವಿಶ್ವದ ಅತಿ ಉದ್ದದ ನದಿ ಯಾನವು ತನ್ನ ಚೊಚ್ಚಲ ಪ್ರಯಾಣವನ್ನು ಪೂರ್ಣಗೊಳಿಸಿದೆ, ʻಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇʼ ಉದ್ಘಾಟಿಸಲಾಗಿದೆ, ʻದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇʼನ ಒಂದು ಭಾಗವನ್ನು ಉದ್ಘಾಟಿಸಲಾಗಿದೆ, ಮುಂಬೈನಿಂದ ವಿಶಾಖಪಟ್ಟಣಂಗೆ ʻವಂದೇ ಭಾರತ್ʼ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ, ʻಐಐಟಿ ಧಾರವಾಡʼ ಕ್ಯಾಂಪಸ್ ಉದ್ಘಾಟಿಸಲಾಗಿದೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದ್ವೀಪಗಳನ್ನು ದೇಶವು 21 ಪರಮವೀರ ಚಕ್ರ ಪ್ರಶಸ್ತಿ ವಿಜೇತರಿಗೆ ಸಮರ್ಪಿಸಿದೆ, ಪೆಟ್ರೋಲ್‌ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸಿದ ನಂತರ ಭಾರತವು ಇ-20 ಇಂಧನವನ್ನು ಪ್ರಾರಂಭಿಸಿದೆ, ತುಮಕೂರಿನಲ್ಲಿ ಏಷ್ಯಾದ ಅತ್ಯಾಧುನಿಕ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಾಗಿದೆ ಮತ್ತು ʻಏರ್ ಇಂಡಿಯಾʼ ಸಾರ್ವಕಾಲಿಕ ಅತ್ಯಧಿಕ ವಿಮಾನಗಳ ಖರೀದಿ ಆದೇಶವನ್ನು ನೀಡಿದೆ ಎಂದು ಅವರು ಹೇಳಿದರು. ಕಳೆದ 75 ದಿನಗಳಲ್ಲಿ, ಭಾರತದಲ್ಲಿ ʻಇ-ಸಂಜೀವಿನಿ ಆ್ಯಪ್ʼ ಮೂಲಕ 10 ಕೋಟಿ ಟೆಲಿ ಸಮಾಲೋಚನೆಗಳ ಮೈಲುಗಲ್ಲನ್ನು ಸಾಧಿಸಲಾಗಿದೆ, 8 ಕೋಟಿ ಹೊಸ ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ, ರೈಲು ಜಾಲಗಳ 100 ಪ್ರತಿಶತ ವಿದ್ಯುದ್ದೀಕರಣವನ್ನು ಸಾಧಿಸಲಾಗಿದೆ, 12 ಚೀತಾಗಳ ಹೊಸ ತಂಡ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದೆ, ಭಾರತದ ʻಅಂಡರ್ 19ʼ ಮಹಿಳಾ ತಂಡವು ಅಂಡರ್-19 ಟಿ20 ವಿಶ್ವಕಪ್ ಗೆದ್ದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಅಲ್ಲದೆ, ದೇಶವು ಎರಡು ಆಸ್ಕರ್ ಪ್ರಶಸ್ತಿಗಳ ಗೆಲುವನ್ನೂ ಸಂಭ್ರಮಿಸಿದೆ. ಕಳೆದ 75 ದಿನಗಳಲ್ಲಿ 28 ನಿರ್ಣಾಯಕ ʻಜಿ 20ʼ ಸಭೆಗಳು, ʻಇಂಧನ ಶೃಂಗಸಭೆʼ ಮತ್ತು ʻಜಾಗತಿಕ ಸಿರಿಧಾನ್ಯಗಳ ಸಮ್ಮೇಳನʼ ನಡೆದಿದೆ, ಬೆಂಗಳೂರಿನಲ್ಲಿ ನಡೆದ ʻಏರೋ ಇಂಡಿಯಾʼ ಶೃಂಗಸಭೆಯಲ್ಲಿ ನೂರಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ ಎಂದು ಅವರು ಮಾಹಿತಿ ನೀಡಿದರು. ಸಿಂಗಾಪುರದೊಂದಿಗೆ ʻಯುಪಿಐʼ ಸಂಪರ್ಕವನ್ನು ರಚಿಸಲಾಗಿದೆ, ಟರ್ಕಿಗೆ ಸಹಾಯ ಮಾಡಲು ಭಾರತ 'ಆಪರೇಷನ್ ದೋಸ್ತ್' ಅನ್ನು ಪ್ರಾರಂಭಿಸಿದೆ ಮತ್ತು ಇಂಡೋ-ಬಾಂಗ್ಲಾದೇಶ ಅನಿಲ ಪೈಪ್‌ಲೈನ್ ಅನ್ನು ಮಾ.18ರ ಸಂಜೆ ಉದ್ಘಾಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. "ಇದೆಲ್ಲವೂ ʻಭಾರತದ ಘಳಿಗೆʼ ಪ್ರತಿಬಿಂಬವಾಗಿದೆ" ಎಂದು ಪ್ರಧಾನಿ ಹೇಳಿದರು.
ಇಂದು, ಒಂದು ಕಡೆ, ಭಾರತವು ರಸ್ತೆಗಳು, ರೈಲುಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳಂತಹ ಭೌತಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಮತ್ತೊಂದೆಡೆ, ಭಾರತೀಯ ಸಂಸ್ಕೃತಿ ಮತ್ತು ಮೃದು ಶಕ್ತಿಯತ್ತ ವಿಶ್ವವು ಅಭೂತಪೂರ್ವ ರೀತಿಯಲ್ಲಿ ಆಕರ್ಷಿತವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಇಂದು ಯೋಗವು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಇಂದು ಆಯುರ್ವೇದದ ಬಗ್ಗೆ ಎಲ್ಲೆಡೆ ಒಲವು ಕಂಡು ಬರುತ್ತಿದೆ. ಜೊತೆಗೆ ಭಾರತದ ಆಹಾರ ಮತ್ತು ಪಾನೀಯಗಳತ್ತ ಒಲವು ಮೂಡಿದೆ," ಎಂದು ಪ್ರಧಾನಿ ಹೇಳಿದ್ದಾರೆ. ಭಾರತೀಯ ಚಲನಚಿತ್ರಗಳು ಮತ್ತು ಸಂಗೀತವು ತಮ್ಮ ಹೊಸ ಶಕ್ತಿಯಿಂದ ಜನರ ಗಮನವನ್ನು ಸೆಳೆಯುತ್ತಿವೆ ಎಂದು ಅವರು ಹೇಳಿದರು. ಭಾರತದ ಸಿರಿಧಾನ್ಯಗಳು ಸಹ (ಶ್ರೀ ಅನ್ನ) ಕೂಡ ಇಡೀ ವಿಶ್ವವನ್ನು ತಲುಪುತ್ತಿದೆ ಎಂದು ಪ್ರಧಾನಿ ಹೇಳಿದರು. ಅದು ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼವಾಗಲೀ ಅಥವಾ ʻವಿಪತ್ತು ಸದೃಢತೆ ಮೂಲಸೌಕರ್ಯ ಒಕ್ಕೂಟʼವಾಗಲಿ, 'ಜಾಗತಿಕ ಒಳಿತಿನ' ಕಡೆಗೆ ಭಾರತದ ಆಲೋಚನೆಗಳು ಮತ್ತು ಸಾಮರ್ಥ್ಯವನ್ನು ಜಗತ್ತು ಗುರುತಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಅದಕ್ಕಾಗಿಯೇ ಇಂದು ಜಗತ್ತು ಹೇಳುತ್ತದೆ - ಇದು ಭಾರತದ ಘಳಿಗೆ" ಎಂದು ಪ್ರಧಾನಿ ಹೇಳಿದರು. ಇವೆಲ್ಲವೂ ಗುಣಾತ್ಮಕ ಪರಿಣಾಮವನ್ನು ಹೊಂದಿವೆ ಎಂದ ಅವರು, ಹೆಚ್ಚಿನ ದೇಶಗಳು ಸ್ವಯಂಪ್ರೇರಿತವಾಗಿ ಭಾರತದ ಪ್ರಾಚೀನ ವಿಗ್ರಹಗಳನ್ನು ಹಿಂದಿರುಗಿಸುತ್ತಿವೆ ಎಂದು ಮಾಹಿತಿ ನೀಡಿದರು.
"ಭಾರತದ ಕ್ಷಣದ ಅತ್ಯಂತ ವಿಶೇಷವಾದ ವಿಷಯವೆಂದರೆ, ಇಲ್ಲಿ ಕಾರ್ಯಕ್ಷಮತೆಯೊಂದಿಗೆ ಭರವಸೆಯು ಮೇಳೈಸಿದೆ", ಎಂದು ಪ್ರಧಾನಿ ಹೇಳಿದರು. ಇತ್ತೀಚೆಗಿನ ಸುದ್ದಿ ಮುಖ್ಯಾಂಶಗಳನ್ನು ಹಿಂದಿನ ದಿನಗಳ ಸುದ್ದಿ ಮುಖ್ಯಾಂಶಗಳಿಗೆ ಪ್ರಧಾನಿ ಹೋಲಿಸಿದರು. ಹಿಂದಿನ ಸುದ್ದಿ ಮುಖ್ಯಾಂಶಗಳು ಸಾಮಾನ್ಯವಾಗಿ ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಕೋಟಿ ರೂ.ಗಳ ಹಗರಣಗಳ ಬಗ್ಗೆ ಮತ್ತು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಾ ಬೀದಿಗಿಳಿಯುವ ಬಗ್ಗೆ ಇರುತ್ತಿದ್ದವು. ಆದರೆ ಇಂದಿನ ಮುಖ್ಯಾಂಶಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳ ವಿರುದ್ಧ ಕ್ರಮದಿಂದಾಗಿ ಭ್ರಷ್ಟರು ಬೀದಿಗೆ ಬರುವುದನ್ನು ಕಾಣಬಹುದು ಎಂದು ಗಮನಸೆಳೆದರು. ಈ ಹಿಂದೆ ನಡೆದ ಹಗರಣಗಳನ್ನು ವರದಿ ಮಾಡುವ ಮೂಲಕ ಮಾಧ್ಯಮಗಳು ಸಾಕಷ್ಟು ʻಟಿಆರ್‌ಪಿʼಯನ್ನು ಗಳಿಸಿವೆ. ಈಗ ಅಂತಹ ಭ್ರಷ್ಟರ ವಿರುದ್ಧ ಕೈಗೊಳ್ಳುವ ಕ್ರಮದ ಬಗ್ಗೆ ಸುದ್ದಿ ಹಾಕಿ ʻಟಿಆರ್‌ಪಿʼ ಹೆಚ್ಚಿಸಿಕೊಳ್ಳುವ ಅವಕಾಶ ಸುದ್ದಿಮನೆಗಳಿಗೆಇದೆ ಎಂದು ಪ್ರಧಾನಿ ಸಲಹೆ ನೀಡಿದರು.
ಈ ಹಿಂದೆ ನಗರಗಳಲ್ಲಿ ನಗರಗಳಲ್ಲಿ ಬಾಂಬ್ ಸ್ಫೋಟಗಳು ಮತ್ತು ನಕ್ಸಲ್ ಹಿಂಸಾಚಾರದ ಸುದ್ದಿಗಳಿರುತ್ತಿದ್ದವು. ಆದರೆ ಇಂದು ಶಾಂತಿ ಮತ್ತು ಸಮೃದ್ಧಿಯ ಸುದ್ದಿಗಳಿವೆ ಎಂದು ಪ್ರಧಾನಿ ಸ್ಮರಿಸಿದರು. ಈ ಹಿಂದೆ ಪರಿಸರದ ಹೆಸರಿನಲ್ಲಿ ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಸುದ್ದಿ ಇತ್ತು. ಆದರೆ ಇಂದು ಹೊಸ ಹೆದ್ದಾರಿಗಳು ಮತ್ತು ʻಎಕ್ಸ್‌ಪ್ರೆಸ್ ವೇʼಗಳ ನಿರ್ಮಾಣದೊಂದಿಗೆ ಪರಿಸರಕ್ಕೆ ಸಂಬಂಧಿಸಿದ ಸಕಾರಾತ್ಮಕ ಸುದ್ದಿಗಳು ಪ್ರಸಾರವಾಗುತ್ತಿವೆ ಎಂದು ಅವರು ಸ್ಮರಿಸಿದರು. ಆಧುನಿಕ ರೈಲುಗಳ ಪರಿಚಯದಿಂದಾಗಿ ಈ ಹಿಂದೆ ಸಾಮಾನ್ಯವಾಗಿದ್ದ ರೈಲು ಅಪಘಾತಗಳ ಸುದ್ದಿ ಈಗ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ʻಏರ್ ಇಂಡಿಯಾʼ ಹಗರಣಗಳು ಮತ್ತು ಬಡತನದ ಬಗ್ಗೆಯೂ ಅವರು ಮಾತನಾಡಿದರು. ಆದರೆ ಇಂದು ವಿಶ್ವದ ಅತಿದೊಡ್ಡ ವಿಮಾನ ಒಪ್ಪಂದವು ಸುದ್ದಿಯಾಗಿದೆ ಎಂದರು. ʻಭಾರತದ ಘಳಿಗೆʼಯು ಭರವಸೆ ಮತ್ತು ಕಾರ್ಯಕ್ಷಮತೆಯ ಈ ಬದಲಾವಣೆಯನ್ನು ತಂದಿದೆ ಎಂದು ಪ್ರಧಾನಿ ಹೇಳಿದರು.
ದೇಶವು ಆತ್ಮವಿಶ್ವಾಸ ಮತ್ತು ದೃಢನಿಶ್ಚಯವನ್ನು ಹೊಂದಿರುವಾಗ ಭಾರತವನ್ನು ಅವಮಾನಿಸುವ ಮತ್ತು ಭಾರತದ ನೈತಿಕ ಸ್ಥೈರ್ಯವನ್ನು ಮುರಿಯುವ ನಿರಾಶಾವಾದಿ ಚರ್ಚೆಗಳು ನಡೆಯುತ್ತಿವೆ. ವಿದೇಶಗಳು ಸಹ ಭಾರತದ ಬಗ್ಗೆ ಭರವಸೆ ಹೊಂದಿವೆ ಎಂದು ಪ್ರಧಾನಿ ಗಮನಸೆಳೆದರು.
ಗುಲಾಮಗಿರಿಯ ಯುಗದಿಂದಾಗಿ ಭಾರತವು ದೀರ್ಘಾವಧಿಯ ಬಡತನವನ್ನು ಕಂಡಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, "ಭಾರತದ ಬಡವರು ಆದಷ್ಟು ಬೇಗ ಬಡತನದಿಂದ ಹೊರಬರಲು ಬಯಸುತ್ತಾರೆ. ತನ್ನ ಭವಿಷ್ಯದ ಪೀಳಿಗೆಯ ಜೀವನದೊಂದಿಗೆ ತನ್ನ ಜೀವನವೂ ಬದಲಾಗಬೇಕೆಂದು ಅವರು ಬಯಸುತ್ತಾರೆ. ಎಲ್ಲ ಸರಕಾರಗಳ ಪ್ರಯತ್ನಗಳ ಫಲಿತಾಂಶಗಳು ಮುಂದಿನ ತಲೆಮಾರಿನ ಸಾಮರ್ಥ್ಯ ಮತ್ತು ತಿಳುವಳಿಕೆಯನ್ನು ಆಧರಿಸಿವೆ ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಸರಕಾರವು ಹೊಸ ಫಲಿತಾಂಶಗಳನ್ನು ಬಯಸಿತು, ಆದ್ದರಿಂದ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿತು ಎಂದು ಅವರು ಒತ್ತಿಹೇಳಿದರು. ದಾಖಲೆಯ ವೇಗದಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, 48 ಕೋಟಿ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿಸಲಾಗಿದೆ ಮತ್ತು ಶಾಶ್ವತ ಮನೆಗಳ ನಿರ್ಮಾಣಕ್ಕೆ ಹಣವನ್ನು ನೇರವಾಗಿ ಆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಳುಹಿಸಲಾಗಿದೆ ಎಂದು ಅವರು ಉದಾಹರಣೆ ನೀಡಿದರು. ಮನೆ ನಿರ್ಮಿಸುವ ಇಡೀ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಮನೆಯನ್ನು ʻಜಿಯೋ-ಟ್ಯಾಗ್ʼ ಮಾಡಲಾಗಿದೆ ಎಂದು ಅವರು ಹೇಳಿದರು. ಕಳೆದ 9 ವರ್ಷಗಳಲ್ಲಿ 3 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಈ ಮನೆಗಳಲ್ಲಿ ಮಹಿಳೆಯರಿಗೂ ಮಾಲೀಕತ್ವದ ಹಕ್ಕುಗಳಿವೆ ಎಂದು ಒತ್ತಿ ಹೇಳಿದ ಅವರು, ಬಡ ಮಹಿಳೆಯರು ಸಶಕ್ತರೆಂದು ಭಾವಿಸಿದಾಗ ʻಭಾರತದ ಘಳಿಗೆʼ ಖಂಡಿತವಾಗಿಯೂ ಬರುತ್ತದೆ ಎಂದು ಹೇಳಿದರು.
ಇಡೀ ವಿಶ್ವದಲ್ಲಿ ಆಸ್ತಿ ಹಕ್ಕುಗಳ ಸವಾಲುಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವದ ಜನಸಂಖ್ಯೆಯ ಕೇವಲ 30 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಆಸ್ತಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ನೋಂದಾಯಿಸಿದ್ದಾರೆ ಎಂಬ ʻವಿಶ್ವಬ್ಯಾಂಕ್ʼ ವರದಿಯನ್ನು ಉಲ್ಲೇಖಿಸಿದರು. ಜಾಗತಿಕ ಅಭಿವೃದ್ಧಿಗೆ ಆಸ್ತಿ ಹಕ್ಕುಗಳ ಕೊರತೆಯನ್ನು ಪ್ರಮುಖ ಅಡಚಣೆ ಎಂದು ಪರಿಗಣಿಸಲಾಗಿದೆ ಎಂದು ಅವರು ಪುನರುಚ್ಚರಿಸಿದರು. ಎರಡೂವರೆ ವರ್ಷಗಳ ಹಿಂದೆ ಪ್ರಾರಂಭಿಸಲಾದ ಭಾರತದ ʻಪಿಎಂ-ಸ್ವಾಮಿತ್ವʼ ಯೋಜನೆಯನ್ನು ವಿಶೇಷವಾಗಿ ಉಲ್ಲೇಖಿಸಿದರು. ಈ ಯೋಜನೆಯಡಿ ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಭೂ ನಕ್ಷೆಯನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ, ಭಾರತದಲ್ಲಿ ಎರಡು ಲಕ್ಷ ಮೂವತ್ತನಾಲ್ಕು ಸಾವಿರ ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ ಮತ್ತು ಒಂದು ಕೋಟಿ ಇಪ್ಪತ್ತೆರಡು ಲಕ್ಷ ಆಸ್ತಿ ಕಾರ್ಡ್ ಗಳನ್ನು ಸಹ ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. "ಇಂತಹ ಅನೇಕ ʻಮೌನ ಕ್ರಾಂತಿʼಗಳು ಇಂದು ಭಾರತದಲ್ಲಿ ನಡೆಯುತ್ತಿವೆ ಮತ್ತು ಇವು ʻಭಾರತದ ಘಳಿಗೆʼಗೆ ಆಧಾರವಾಗುತ್ತಿವೆ," ಎಂದು ಪ್ರಧಾನಿ ಹೇಳಿದ್ದಾರೆ. ʻಪಿಎಂ ಕಿಸಾನ್ ಸಮ್ಮಾನ್ʼ ನಿಧಿಯಿಂದ ಸುಮಾರು ಎರಡೂವರೆ ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
"ನೀತಿ ನಿರ್ಧಾರಗಳಲ್ಲಿ ನಿಷ್ಕ್ರಿಯತೆ ಮತ್ತು ಯಥಾಸ್ಥಿತಿಯು ಯಾವುದೇ ದೇಶದ ಪ್ರಗತಿಗೆ ದೊಡ್ಡ ಅಡಚಣೆಯಾಗಿದೆ," ಎಂದು ಪ್ರಧಾನಿ ಹೇಳಿದರು. ಹಳೆಯ ಚಿಂತನೆ ಮತ್ತು ಕಾರ್ಯವಿಧಾನ ಹಾಗೂ ಕೆಲವು ಕುಟುಂಬಗಳ ನಿರ್ಬಂಧದಿಂದಾಗಿ ಭಾರತದಲ್ಲಿ ದೀರ್ಘಕಾಲ ಮನೆಮಾಡಿದ್ದ ನಿಷ್ಕ್ರಿಯತೆಯ ಬಗ್ಗೆ ಪ್ರಧಾನ ವಿಷಾದಿಸಿದರು. ದೇಶವು ಮುಂದುವರಿಯಬೇಕಾದರೆ, ಅದು ಸದಾ ಚಲನಶೀಲವಾಗಿರಬೇಕು ಮತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರಬೇಕು ಎಂದು ಹೇಳಿದರು. ದೇಶವು ಪ್ರಗತಿ ಸಾಧಿಸಬೇಕಾದರೆ, ಅದು ಹೊಸತನವನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಪ್ರಾಯೋಗಿಕ ಮನಸ್ಥಿತಿಯನ್ನು ಹೊಂದಿರಬೇಕು, ಅದು ತನ್ನ ದೇಶವಾಸಿಗಳ ಸಾಮರ್ಥ್ಯಗಳು ಮತ್ತು ಪ್ರತಿಭೆಗಳಲ್ಲಿ ನಂಬಿಕೆಯನ್ನು ಹೊಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಗುರಿಗಳನ್ನು ಸಾಧಿಸುವಲ್ಲಿ ಜನರ ಆಶೀರ್ವಾದ ಮತ್ತು ಭಾಗವಹಿಸುವಿಕೆ ಇರಬೇಕು ಎಂದು ಪ್ರಧಾನಿ ಹೇಳಿದರು. ಸರಕಾರ ಮತ್ತು ಅಧಿಕಾರದ ಮೂಲಕ ಮಾತ್ರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಹೋದರೆ ಫಲಿತಾಂಶ ಬಹಳ ಸೀಮಿತವಾಗಿರುತ್ತದೆ. ಆದರೆ 130 ಕೋಟಿ ದೇಶವಾಸಿಗಳ ಶಕ್ತಿಯನ್ನು ಒಟ್ಟುಗೂಡಿಸಿದಾಗ, ಪ್ರತಿಯೊಬ್ಬರ ಪ್ರಯತ್ನವನ್ನು ಹಾಕಿದಾಗ, ಯಾವುದೇ ಸಮಸ್ಯೆ ದೇಶದ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ತಮ್ಮ ಸರಕಾರದ ಮೇಲೆ ದೇಶದ ಜನರ ವಿಶ್ವಾಸದ ಮಹತ್ವವನ್ನು ಅವರು ಒತ್ತಿಹೇಳಿದರು. ಇಂದು ಸರಕಾರವು ತಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂಬ ವಿಶ್ವಾಸವನ್ನು ದೇಶದ ನಾಗರಿಕರು ಬೆಳೆಸಿಕೊಂಡಿದ್ದಾರೆ ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. "ಉತ್ತಮ ಆಡಳಿತದಲ್ಲಿ ಮಾನವೀಯ ಸ್ಪರ್ಶ ಮತ್ತು ಸಂವೇದನಾಶೀಲತೆ ಇದೆ. ನಾವು ಆಡಳಿತಕ್ಕೆ ಮಾನವೀಯ ಸ್ಪರ್ಶ ನೀಡಿದ್ದೇವೆ ಮತ್ತು ಅದರಿಂದ ಮಾತ್ರ ಅಂತಹ ದೊಡ್ಡ ಪರಿಣಾಮವನ್ನು ಕಾಣಬಹುದು. ʻರೋಮಾಂಚಕ ಗ್ರಾಮʼ ಯೋಜನೆಯ ಉದಾಹರಣೆಯನ್ನು ನೀಡಿದ ಅವರು, ಇದು ದೇಶದ ಮೊದಲ ಗ್ರಾಮ ಎಂಬ ವಿಶ್ವಾಸವನ್ನು ಮೂಡಿಸುತ್ತದೆ ಮತ್ತು ಈ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಕೇಂದ್ರ ಸರಕಾರದ ಸಚಿವರು ನಿಯಮಿತವಾಗಿ ಈಶಾನ್ಯಕ್ಕೆ ಭೇಟಿ ನೀಡುತ್ತಾರೆ ಮತ್ತು ಆಡಳಿತವನ್ನು ಮಾನವೀಯ ಸ್ಪರ್ಶದೊಂದಿಗೆ ಸಂಪರ್ಕಿಸಿದ್ದಾರೆ ಎಂದು ಅವರು ತಿಳಿಸಿದರು. ತಾವು ಈಶಾನ್ಯ ಭಾಗಕ್ಕೆ 50 ಬಾರಿ ಭೇಟಿ ನೀಡಿರುವುದಾಗಿ ಪ್ರಧಾನಿ ತಿಳಿಸಿದರು. ಈ ಸೂಕ್ಷ್ಮತೆಯು ಈಶಾನ್ಯ ಮತ್ತು ದೇಶದ ಇತರ ಭಾಗಗಳ ನಡುವಿನ ದೂರವನ್ನು ಕಡಿಮೆಗೊಳಿಸಿದೆ ಮಾತ್ರವಲ್ಲದೆ ಅಲ್ಲಿ ಶಾಂತಿಯನ್ನು ಸ್ಥಾಪಿಸುವಲ್ಲಿ ಸಾಕಷ್ಟು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ಉಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರದ ಕಾರ್ಯವಿಧಾನವನ್ನು ಒತ್ತಿ ಹೇಳಿದ ಪ್ರಧಾನಿ, ಸರಕಾರವು ಸುಮಾರು 14 ಸಾವಿರ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿತು ಮತ್ತು ಪ್ರತಿ ಮನೆಗೆ ಸರಕಾರದ ಪ್ರತಿನಿಧಿಯನ್ನು ಕಳುಹಿಸಲಾಯಿತು. "ಕಷ್ಟದ ಸಮಯದಲ್ಲಿ ಸರಕಾರವು ಅವರೊಂದಿಗೆ ಇದೆ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ" ಎಂದು ಪ್ರಧಾನಿ ಹೇಳಿದರು. "ಮಾನವೀಯ ಸಂವೇದನೆಗಳಿಂದ ತುಂಬಿದ ಅಂತಹ ಆಡಳಿತದಿಂದ ʻಭಾರತದ ಘಳಿಗೆʼಯು ಶಕ್ತಿಯನ್ನು ಪಡೆಯುತ್ತದೆ" ಎಂದು ಅವರು ಹೇಳಿದರು. ಆಡಳಿತದಲ್ಲಿ ಈ ಮಾನವೀಯ ಸ್ಪರ್ಶ ಕಾಣೆಯಾಗಿದ್ದರೆ ದೇಶವು ಕರೋನಾ ವಿರುದ್ಧದ ಇಷ್ಟು ದೊಡ್ಡ ಯುದ್ಧವನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಒತ್ತಿಹೇಳಿದರು.
"ಭಾರತ ಇಂದು ಏನನ್ನೇ ಸಾಧಿಸಿದರೂ ಅದಕ್ಕೆ ನಮ್ಮ ಪ್ರಜಾಪ್ರಭುತ್ವದ ಶಕ್ತಿ, ನಮ್ಮ ಸಂಸ್ಥೆಗಳ ಶಕ್ತಿ ಕಾರಣ," ಎಂದು ಶ್ರೀ ಮೋದಿ ಹೇಳಿದರು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಭಾರತದ ಸರಕಾರವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಜಗತ್ತು ನೋಡುತ್ತಿದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಅನೇಕ ಹೊಸ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದ ಪ್ರಧಾನಿಯವರು ʻವಿಪತ್ತು ಸದೃಢತೆ ಮೂಲಸೌಕರ್ಯ ಒಕ್ಕೂಟʼ ಮತ್ತು ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼದ ಉದಾಹರಣೆಯನ್ನು ನೀಡಿದರು. ಭವಿಷ್ಯದ ಮಾರ್ಗಸೂಚಿಯನ್ನು ನಿರ್ಧರಿಸುವಲ್ಲಿ ನೀತಿ ಆಯೋಗ ದೊಡ್ಡ ಪಾತ್ರ ವಹಿಸುತ್ತಿದೆ, ದೇಶದಲ್ಲಿ ಕಾರ್ಪೊರೇಟ್ ಆಡಳಿತವನ್ನು ಬಲಪಡಿಸುವಲ್ಲಿ ʻರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿʼ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಭಾರತದಲ್ಲಿ ಆಧುನಿಕ ತೆರಿಗೆ ವ್ಯವಸ್ಥೆಯನ್ನು ರಚಿಸುವಲ್ಲಿ ʻಜಿಎಸ್‌ಟಿʼ ಮಂಡಳಿಯ ಪಾತ್ರವನ್ನು ಅವರು ಪ್ರಸ್ತಾಪಿಸಿದರು. ಕರೋನಾ ನಡುವೆ ದೇಶದಲ್ಲಿ ಅನೇಕ ಚುನಾವಣೆಗಳು ಯಶಸ್ವಿಯಾಗಿ ನಡೆದಿವೆ ಎಂದು ಅವರು ತಿಳಿಸಿದರು. "ಜಾಗತಿಕ ಬಿಕ್ಕಟ್ಟಿನ ಮಧ್ಯೆ, ಇಂದು ಭಾರತದ ಆರ್ಥಿಕತೆ ಬಲವಾಗಿದೆ, ಬ್ಯಾಂಕಿಂಗ್ ವ್ಯವಸ್ಥೆ ಬಲವಾಗಿದೆ. ಇದು ನಮ್ಮ ಸಂಸ್ಥೆಗಳ ಶಕ್ತಿ," ಎಂದು ಅವರು ಹೇಳಿದರು. ಸರಕಾರವು ಇಲ್ಲಿಯವರೆಗೆ 220 ಕೋಟಿ ಡೋಸ್ ಕರೋನಾ ಲಸಿಕೆಯನ್ನು ನೀಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಈ ಕಾರಣದಿಂದಾಗಿ ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಹೆಚ್ಚು ದಾಳಿ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಈ ದಾಳಿಗಳ ನಡುವೆಯೂ ಭಾರತವು ತನ್ನ ಗುರಿಗಳತ್ತ ವೇಗವಾಗಿ ಸಾಗುತ್ತದೆ ಮತ್ತು ತನ್ನ ಗುರಿಗಳನ್ನು ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ," ಎಂದು ಅವರು ಹೇಳಿದರು.
ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಭಾರತೀಯ ಮಾಧ್ಯಮದ ಪಾತ್ರವನ್ನು ಜಾಗತಿಕವಾಗಿ ವಿಸ್ತರಿಸುವ ಅಗತ್ಯವನ್ನು ಒತ್ತಿಹೇಳಿದರು. "ನಾವು 'ಸಬ್ ಕಾ ಪ್ರಯಾಸ್'ನೊಂದಿಗೆ ʻಭಾರತದ ಘಳಿಗೆʼಯನ್ನು ಬಲಪಡಿಸಬೇಕಾಗಿದೆ ಮತ್ತು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದಲ್ಲಿ ಅಭಿವೃದ್ಧಿ ಹೊಂದಿದ ಭಾರತದತ್ತ ಪ್ರಯಾಣವನ್ನು ಸಶಕ್ತಗೊಳಿಸಬೇಕಾಗಿದೆ" ಎಂದು ಪ್ರಧಾನಿ ಕರೆ ನೀಡಿದರು.
***
(Release ID: 1908552)
Visitor Counter : 181
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam