ಜವಳಿ ಸಚಿವಾಲಯ

ಏಳು ಪಿಎಂ ಮಿತ್ರ (ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಜವಳಿ ವಲಯ ಮತ್ತು ಉಡುಪು) ಪಾರ್ಕ್ ತಾಣಗಳ ಘೋಷಣೆ

 
ತಮಿಳುನಾಡು, ತೆಲಂಗಾಣ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮಹಾರಾಷ್ಟ್ರದಲ್ಲಿ ಪಿಎಂ ಮಿತ್ರ ಪಾರ್ಕ್ ಗಳು ತಲೆ ಎತ್ತಲಿವೆ.

ಗೌರವಾನ್ವಿತ ಪ್ರಧಾನ ಮಂತ್ರಿಯವರ  ದೂರದೃಷ್ಟಿಯಿಂದ ಪ್ರೇರಿತವಾದ ಪಿಎಂ ಮಿತ್ರ ಪಾರ್ಕ್ ಗಳು - ಫಾರ್ಮ್ ನಿಂದ ಫೈಬರ್,  ಫೈಬರ್ ನಿಂದ ಫ್ಯಾಕ್ಟರಿ, ಫ್ಯಾಕ್ಟರಿಯಿಂದ ಫ್ಯಾಷನ್, ಫ್ಯಾಷನ್ನಿನಿಂದ  ವಿದೇಶಕ್ಕೆ ಎಂಬ 5ಎಫ್ ಗಳ ಚಿಂತನೆಯನ್ನು ಅಳವಡಿಸಿಕೊಂಡಿರುತ್ತವೆ. 
 
ಸುಮಾರು 70,000 ಕೋಟಿ ರೂ.ಗಳ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಅಂದಾಜಿಸಲಾಗಿದೆ

ನೂಲುವ, ನೇಯ್ಗೆ, ಸಂಸ್ಕರಣೆ / ಬಣ್ಣ ಮತ್ತು ಮುದ್ರಣದಿಂದ ಹಿಡಿದು ಒಂದೇ ಸ್ಥಳದಲ್ಲಿ ಉಡುಪು ತಯಾರಿಕೆಯವರೆಗೆ ಸಮಗ್ರ ಜವಳಿ ಮೌಲ್ಯ ಸರಪಳಿಯನ್ನು ರೂಪಿಸಿಕೊಳ್ಳಲು  ಪಾರ್ಕ್ ಗಳು ಅವಕಾಶವನ್ನು ಒದಗಿಸುತ್ತವೆ. 

ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವು  ಅತ್ಯಾಧುನಿಕ ತಂತ್ರಜ್ಞಾನವನ್ನು ಆಕರ್ಷಿಸುತ್ತದೆ ಮತ್ತು ಈ ವಲಯದಲ್ಲಿ ವಿದೇಶೀ ನೇರ ಹೂಡಿಕೆ (ಎಫ್ಡಿಐ)  ಮತ್ತು ಸ್ಥಳೀಯ ಹೂಡಿಕೆಯನ್ನು ಹೆಚ್ಚಿಸುತ್ತದೆ

ಪ್ರತಿ ಪಾರ್ಕಿನ  ಒಂದು ಸ್ಥಳದಲ್ಲಿ ಸಮಗ್ರ ಜವಳಿ ಮೌಲ್ಯ ಸರಪಳಿಯು ಉದ್ಯಮದ ಸಾಗಾಟ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡುತ್ತದೆ
 
ಪಿಎಂ ಮಿತ್ರ ಪಾರ್ಕ್ ಗಳ ಸ್ಥಾಪನೆಗಾಗಿ ಕೇಂದ್ರ ಮತ್ತು ರಾಜ್ಯಗಳು ಜಂಟಿ ಸಹಯೋಗದ ಮಾದರಿಯಲ್ಲಿ (ಜೆ.ವಿ.) ವಿಶೇಷ ಉದ್ದೇಶದ ಘಟಕಗಳನ್ನು (ಎಸ್ ಪಿವಿ) ರಚಿಸಲಿವೆ

ಪಿಎಂ ಮಿತ್ರ ಪಾರ್ಕ್ ತಾಣಗಳಿಗೆ ಭಾರತ ಸರ್ಕಾರದಿಂದ ಅನುಮೋದನೆ ಇರುತ್ತದೆ

Posted On: 17 MAR 2023 5:21PM by PIB Bengaluru

ಜವಳಿ ಉದ್ಯಮಕ್ಕಾಗಿ 7 ಪಿಎಂ ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶಗಳು ಮತ್ತು ಉಡುಪು (ಪಿಎಂ ಮಿತ್ರ) ಪಾರ್ಕ್ ಗಳನ್ನು ಸ್ಥಾಪಿಸುವ ತಾಣಗಳನ್ನು ಭಾರತ ಸರ್ಕಾರ ಇಂದು ಪ್ರಕಟಿಸಿದೆ. ತಮಿಳುನಾಡು, ತೆಲಂಗಾಣ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈ ಪಾರ್ಕ್ ಗಳು ತಲೆ ಎತ್ತಲಿವೆ.

ಗೌರವಾನ್ವಿತ ಪ್ರಧಾನ ಮಂತ್ರಿಯವರ 5 ಎಫ್ ದೃಷ್ಟಿಕೋನದಿಂದ (ಅಂದರೆ ಫಾರ್ಮ್ ನಿಂದ ಫೈಬರ್ ನಿಂದ ಫ್ಯಾಕ್ಟರಿಯಿಂದ ಫ್ಯಾಷನ್ ನಿಂದ ವಿದೇಶಕ್ಕೆ) ಪ್ರೇರಿತವಾದ ಪಿಎಂ ಮಿತ್ರ ಪಾರ್ಕ್ ಗಳು ಭಾರತವನ್ನು ಜವಳಿ ಉತ್ಪಾದನೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ಸರ್ಕಾರದ ಚಿಂತನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಟ್ಟ ಪ್ರಮುಖ ಹೆಜ್ಜೆಯಾಗಿವೆ. ಈ ಪಾರ್ಕ್ ಗಳು ಜವಳಿ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತವೆ ಮತ್ತು ಆರ್ಥಿಕತೆಯನ್ನು ಸಾಧಿಸಲು ಸಹಾಯ ಮಾಡುತ್ತವೆ ಹಾಗು ಭಾರತದಲ್ಲಿ ಉತ್ಪಾದನೆಗೆ ಜಾಗತಿಕ ಮಟ್ಟದ ಉದ್ಯಮಿಗಳನ್ನು  ಆಕರ್ಷಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.

13 ರಾಜ್ಯಗಳಿಂದ ಸ್ವೀಕರಿಸಿದ 18 ಪ್ರಸ್ತಾವನೆಗಳಲ್ಲಿ ಈ 7 ಸ್ಥಳಗಳನ್ನು ಪಿಎಂ ಮಿತ್ರ ಪಾರ್ಕ್ ಗಳಿಗಾಗಿ  ಆಯ್ಕೆ ಮಾಡಲಾಗಿದೆ. ಸಂಪರ್ಕ, ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆ, ಜವಳಿ / ಕೈಗಾರಿಕಾ ನೀತಿ, ಮೂಲಸೌಕರ್ಯ, ಸೌಕರ್ಯ-ಸೇವೆಗಳು ಮುಂತಾದ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಪಾರದರ್ಶಕ ಸವಾಲು ವಿಧಾನವನ್ನು ಬಳಸಿಕೊಂಡು ಅರ್ಹ ರಾಜ್ಯಗಳು ಮತ್ತು ತಾಣಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ  ಆಯ್ಕೆ ಮಾಡಲಾಗಿದೆ.  ಪಿಎಂ ಗತಿ ಶಕ್ತಿ- ಬಹು ಮಾದರಿ ಸಂಪರ್ಕಕ್ಕಾಗಿರುವ  ರಾಷ್ಟ್ರೀಯ ಮಹಾ ಯೋಜನೆಯನ್ನು  ಕೂಡಾ ಈ  ಮೌಲ್ಯಮಾಪನಕ್ಕಾಗಿ ಬಳಸಲಾಯಿತು.

ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ.)  ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವ ಮತ್ತು ಈ ವಲಯದಲ್ಲಿ ನಾವೀನ್ಯತೆ ಹಾಗು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಸೃಷ್ಟಿಸಲು ಪಿಎಂ ಮಿತ್ರ ಪಾರ್ಕ್ ಗಳು ಸಹಾಯ ಮಾಡುತ್ತವೆ.

ಜವಳಿ ಸಚಿವಾಲಯವು ಈ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ನಡೆಸಲಿದೆ. ಪ್ರತಿ ಪಾರ್ಕಿಗೆ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಡೆತನದ ಎಸ್ ಪಿವಿಯನ್ನು ಸ್ಥಾಪಿಸಲಾಗುವುದು, ಇದು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಜವಳಿ ಸಚಿವಾಲಯವು ಪ್ರತೀ ಪಾರ್ಕಿಗೆ ಆಯಾ ಪಾರ್ಕ್ ಎಸ್ ಪಿವಿಗೆ 500 ಕೋಟಿ ರೂ.ಗಳವರೆಗೆ ಅಭಿವೃದ್ಧಿ ಬಂಡವಾಳ ಬೆಂಬಲದ ರೂಪದಲ್ಲಿ ಆರ್ಥಿಕ ನೆರವು ನೀಡಲಿದೆ. ತ್ವರಿತ ಅನುಷ್ಠಾನವನ್ನು ಉತ್ತೇಜಿಸಲು ಪಿಎಂ ಮಿತ್ರ ಪಾರ್ಕ್ ನಲ್ಲಿರುವ ಘಟಕಗಳಿಗೆ ಪ್ರತೀ ಪಾರ್ಕಿಗೆ 300 ಕೋಟಿ ರೂ.ಗಳವರೆಗೆ ಸ್ಪರ್ಧಾತ್ಮಕ ಪ್ರೋತ್ಸಾಹಕ ಬೆಂಬಲವನ್ನು (ಸಿಐಎಸ್) ಸಹ ಒದಗಿಸಲಾಗುವುದು. ಮಾಸ್ಟರ್ ಡೆವಲಪರ್ ಮತ್ತು ಹೂಡಿಕೆದಾರರ ಘಟಕಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನವನ್ನು  ಖಚಿತಪಡಿಸಿಕೊಳ್ಳಲು ಭಾರತ ಸರಕಾರದ (ಜಿಒಐ)  ಇತರ ಯೋಜನೆಗಳೊಂದಿಗೆ ಸಂಯೋಜನೆಯನ್ನು ಸಹ ಸುಗಮಗೊಳಿಸಲಾಗುವುದು.

ರಾಜ್ಯ ಸರ್ಕಾರಗಳು ಕನಿಷ್ಠ 1000 ಎಕರೆ ಋಣಮುಕ್ತ ಭೂಮಿಯನ್ನು ಒದಗಿಸುತ್ತವೆ ಮತ್ತು ಎಲ್ಲಾ ಸೌಕರ್ಯಗಳನ್ನು, ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಹಾಗು ನೀರಿನ ಲಭ್ಯತೆ ಮತ್ತು ತ್ಯಾಜ್ಯ ನೀರು ವಿಲೇವಾರಿ ವ್ಯವಸ್ಥೆ, ಪರಿಣಾಮಕಾರಿ ಏಕ ಗವಾಕ್ಷಿ ಕ್ಲಿಯರೆನ್ಸ್ ಮತ್ತು ಅನುಕೂಲಕರ ಹಾಗು ಸ್ಥಿರವಾದ ಕೈಗಾರಿಕಾ / ಜವಳಿ ನೀತಿಯನ್ನು ಒದಗಿಸುತ್ತವೆ.

ಪಾರ್ಕ್ ಗಳು ಅತ್ಯುತ್ತಮ ಮೂಲಸೌಕರ್ಯ, ಪ್ಲಗ್ ಮತ್ತು ಪ್ಲೇ ಸೌಲಭ್ಯಗಳು ಮತ್ತು ಉದ್ಯಮಕ್ಕೆ ತರಬೇತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ಒದಗಿಸುತ್ತವೆ.

ಪಿಎಂ ಮಿತ್ರ ಪಾರ್ಕ್ ಗಳು ಒಂದು ವಿಶಿಷ್ಟ ಮಾದರಿಯನ್ನು ಪ್ರತಿನಿಧಿಸುತ್ತವೆ, ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೂಡಿಕೆಯನ್ನು ಹೆಚ್ಚಿಸಲು, ನಾವೀನ್ಯತೆಯನ್ನು ಉತ್ತೇಜಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಅಂತಿಮವಾಗಿ ಭಾರತವನ್ನು ಜವಳಿ ಉತ್ಪಾದನೆ ಹಾಗು ರಫ್ತುಗಳಿಗೆ ಜಾಗತಿಕ ತಾಣವನ್ನಾಗಿ ಮಾಡಲು ಒಗ್ಗೂಡಿ ಕೆಲಸ ಮಾಡುತ್ತವೆ. ಈ ಉದ್ಯಾನವನಗಳ ಮೂಲಕ ಸುಮಾರು 70,000 ಕೋಟಿ ರೂ.ಗಳ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಯನ್ನು ನಿರೀಕ್ಷಿಸಲಾಗಿದೆ.

****(Release ID: 1908206) Visitor Counter : 257