ಆಯುಷ್
azadi ka amrit mahotsav

ಗ್ರಾಮೀಣ ಯುವಕರ ಕೌಶಲ್ಯ ಮತ್ತು ಮಹಿಳೆಯರ ಸಬಲೀಕರಣ; ಆಯುಷ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ


ಗ್ರಾಮೀಣ ಯುವಕರಿಗೆ ಪಂಚಕರ್ಮ ಸಹಾಯಕರಾಗಿ ತರಬೇತಿ ನೀಡುವ ಕೋರ್ಸ್‌ಗಳನ್ನು ಪ್ರಾಯೋಗಿಕ ಆಧಾರದಲ್ಲಿ ಪ್ರಾರಂಭಿಸಲಾಗುವುದು

Posted On: 16 MAR 2023 6:00PM by PIB Bengaluru

ದೀನ್ ದಯಾಳ್ ಉಪಾಧ್ಯಾಯ-ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಅಡಿ, ಆಯುಷ್ ಆರೋಗ್ಯ ವ್ಯವಸ್ಥೆಗಾಗಿ ಗ್ರಾಮೀಣ ಬಡ ಯುವಕರು ಮತ್ತು ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ನುರಿತ ಸಿಬ್ಬಂದಿ ಅಭಿವೃದ್ಧಿಪಡಿಸುವಲ್ಲಿ ಸಹಕರಿಸಲು ಆಯುಷ್ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ. ಇದಲ್ಲದ, ಗ್ರಾಮೀಣ ಯುವಕರಿಗೆ ಪಂಚಕರ್ಮ ತಂತ್ರಜ್ಞರು, ಸಹಾಯಕರಾಗಿ ತರಬೇತಿ ನೀಡುವ ಕೋರ್ಸ್ ಗಳನ್ನು ಪ್ರಾಯೋಗಿಕ ಆಧಾರದಲ್ಲಿ ಆರಂಭಿಸಲಾಗುವುದು.

3 ವರ್ಷಗಳ ಅವಧಿಗ ಮಾನ್ಯವಾಗಿರುವ ಈ ತಿಳಿವಳಿಕೆ ಒಡಂಬಡಿಕೆಗೆ ಕೇಂದ್ರ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವ ಶ್ರೀ ಗಿರಿರಾಜ್ ಸಿಂಗ್, ಆಯುಷ್ ಖಾತೆ ರಾಜ್ಯ ಸಚಿವ ಡಾ. ಮುಂಜ್ಪಾರಾ ಮಹೇಂದ್ರಭಾಯಿ ಅವರ ಸಮ್ಮುಖದಲ್ಲಿ ಡಾ. ಮನೋಜ್ ನೇಸರಿ, ಸಲಹೆಗಾರ ( ಆಯುರ್ವೇದ), ಆಯುಷ್ ಸಚಿವಾಲಯ ಮತ್ತು ಶ್ರೀ ಕರ್ಮ ಜಿಂಪಾ ಭುಟಿಯಾ, ಜಂಟಿ ಕಾರ್ಯದರ್ಶಿ, (ಗ್ರಾಮೀಣ ಕೌಶಲ್ಯಗಳು), ಗ್ರಾಮೀಣಾಭಿವೃದ್ಧಿ ಸಚಿವಾಲಯ ಅವರು ಸಹಿ ಹಾಕಿದರು.

ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ, ವಿಶೇಷ ಕಾರ್ಯದರ್ಶಿ ಶ್ರೀ ಪಿ.ಕೆ ಪಾಠಕ್, ಎಂಒಎ, ಡಾ. ತನುಜಾ ನೇಸರಿ, ನವದೆಹಲಿಯ ಎಐಐಎ ನಿರ್ದೇಶಕಿ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್ ಮತ್ತು ಎರಡೂ ಸಚಿವಾಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಅವರು ತಮ್ಮ ಭಾಷಣದಲ್ಲಿ,, “ಸ್ವಯಂ ಉದ್ಯೋಗದ ಉತ್ಸಾಹ ಹೆಚ್ಚಿಸಲು ಎರಡೂ ಸಚಿವಾಲಯಗಳು ಸಹಕರಿಸುತ್ತಿವೆ. ಇದರಿಂದ ಗ್ರಾಮೀಣ ಯುವಕರು ಮತ್ತು ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ. ನಾವು ಸಮಾಜದ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಎರಡೂ ಸಚಿವಾಲಯಗಳು ಒಂದೇ ರೀತಿಯ ಸಹಯೋಗ ಅನ್ವೇಷಿಸುವುದನ್ನು ಮುಂದುವರಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದರು.

ಶ್ರೀ ಗಿರಿರಾಜ್ ಸಿಂಗ್, "ಈ ತಿಳಿವಳಿಕೆ ಒಪ್ಪಂದವು ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು ಗ್ರಾಮೀಣ ಬಡ ಯುವಕರನ್ನು ಸಬಲೀಕರಣಗೊಳಿಸುವಲ್ಲಿ ಒಂದು ಹೆಗ್ಗುರುತಾಗಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ತರಬೇತಿ ನೀಡುವುದು ಆರಂಭಿಕ ಗುರಿಯಾಗಿದ್ದು, ಮುಂದೆ ಇದನ್ನು ಹೆಚ್ಚಿಸಲಾಗುವುದು. ಸ್ವಸಹಾಯ ಸಂಘಗಳಿಗೂ ಆದ್ಯತೆ ನೀಡುತ್ತೇವೆ' ಎಂದರು.

 

ಈ ತಿಳಿವಳಿಕೆ ಒಪ್ಪಂದದ ಅಡಿ ಕೈಗೊಳ್ಳಲಾಗುವ ತರಬೇತಿ ಕಾರ್ಯಕ್ರಮಕ್ಕೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ(ಡಿಡಿಯು-ಜಿಕೆವೈ)ಯ ವೆಚ್ಚದ ಮಾನದಂಡಗಳ ಪ್ರಕಾರ ಹಣ ನೀಡಲಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್ಆರ್ ಎಲ್ಎಂ) ಮತ್ತು ಡಿಡಿಯು-ಜಿಕೆವೈ ನಿಯಮಾವಳಿಯಂತೆ, ಆಯುಷ್ ಸಚಿವಾಲಯವು ತನ್ನ ಸಂಸ್ಥೆಗಳಿಂದ ನಡೆಸುವ ಕೋರ್ಸ್‌ಗಳು ಮತ್ತು ಅದರ ತರಬೇತಿ ಪಡೆಯಲು ಸಿದ್ಧರಿರುವ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಗ್ರಾಮೀಣ ಬಡ ಯುವಕರನ್ನು ಸೇರಿಸಿಕೊಳ್ಳಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಜತೆ ಸಂವಹನ ನಡೆಸುತ್ತದೆ. ಆದರೆ, ಆಕಾಂಕ್ಷಿಗಳು, ಅಭ್ಯರ್ಥಿಗಳ ಕೋರ್ಸ್‌ಗಳು, ತರಬೇತಿ ಮತ್ತು ಪ್ರಮಾಣೀಕರಣ ನಡೆಸುವ ಉದ್ದೇಶಕ್ಕಾಗಿ ಆಯುಷ್ ಸಚಿವಾಲಯವು ತನ್ನ ಸಂಸ್ಥೆಗಳನ್ನು ಒದಗಿಸುತ್ತದೆ. ಸಚಿವಾಲಯವು ದೇಶಾದ್ಯಂತ ನೋಡಲ್ ಏಜೆನ್ಸಿಗಳನ್ನು ನಿಯೋಜಿಸುತ್ತದೆ, ಅವರು ತಮ್ಮ ಗೊತ್ತುಪಡಿಸಿದ ರಾಜ್ಯಗಳಲ್ಲಿ ಡಿಡಿಯು-ಜಿಕೆವೈ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳ ಸಜ್ಜುಗೊಳಿಸುವಿಕೆ, ಸಮಾಲೋಚನೆ, ತರಬೇತಿ, ನಿಯೋಜನೆ ಮತ್ತು ಟ್ರ್ಯಾಕಿಂಗ್ ಖಚಿತಪಡಿಸುತ್ತಾರೆ.

ಇದರ ಹೊರತಾಗಿ, ಎರಡೂ ಸಚಿವಾಲಯಗಳು ಸೂಕ್ತ ವ್ಯವಸ್ಥೆ ರೂಪಿಸುವಲ್ಲಿ ಕೆಲಸ ಮಾಡುತ್ತವೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಂಬಂಧಿತ ಯೋಜನೆಗಳ ಅಡಿ, ಹೆಚ್ಚುವರಿ ಆದಾಯ ಉತ್ಪಾದಿಸುವ ಸಲುವಾಗಿ ಅನುಮತಿಸಲಾದ ಔಷಧೀಯ ಸಸ್ಯಗಳ ಬೆಳೆ ಚಟುವಟಿಕೆಗಳು, ಸಸ್ಯ ಸಂರಕ್ಷಣೆ, ಅಂತರ ಬೆಳೆಗಳನ್ನು ಗುರುತಿಸಲು ತಾಂತ್ರಿಕ ನೆರವು ನೀಡಲಾಗುತ್ತದೆ. ಸಚಿವಾಲಯವು ತೋಟದ ಫಲಾನುಭವಿಗಳು ಮತ್ತು ವಿವಿಧ ಸಮುದಾಯ ಮಟ್ಟದ ಜೀವನೋಪಾಯದ ಕಾರ್ಮಿಕರಿಗೆ ತರಬೇತಿ ಮತ್ತು ಅಭಿಶಿಕ್ಷಣ(ಓರಿಯಂಟೇಷನ್) ಕಾರ್ಯಕ್ರಮಗಳನ್ನು ಸಹ ಒದಗಿಸುತ್ತದೆ.

ದೀನ್ ದಯಾಳ್ ಉಪಾಧ್ಯಾಯ-ಗ್ರಾಮೀಣ ಕೌಶಲ್ಯ ಯೋಜನೆ(ಡಿಡಿಯು-ಜಿಕೆವೈ)ಯು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್ಆರ್ ಎಲ್ಎಂ) ಭಾಗವಾಗಿ, ಡಿಡಿಯು-ಜಿಕೆವೈ ಯೋಜನೆಯು ಗ್ರಾಮೀಣ ಬಡ ಯುವಕರನ್ನು ಆರ್ಥಿಕವಾಗಿ ಸ್ವತಂತ್ರ ಮತ್ತು ಜಾಗತಿಕ ಮಟ್ಟದಲ್ಲಿ ಕೌಶಲ್ಯ ಉದ್ಯೋಗಿಗಳಾಗಿ ಪರಿವರ್ತಿಸುವ ಮಹತ್ತರ ಗುರಿ ಹೊಂದಿದೆ.

ಈ ತಿಳಿವಳಿಕೆ ಒಪ್ಪಂದವು ಎರಡೂ ಸಚಿವಾಲಯಗಳ ನಡುವೆ ಒಂದಿಕೆ, ಹೊಂದಾಣಿಕೆ ಮತ್ತು ಒಗ್ಗೂಡುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ವಿಶೇಷವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಅಭಿವೃದ್ಧಿ ಮತ್ತು ಬಡತನ ನಿವಾರಣೆಯ ದೊಡ್ಡ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಉಭಯ ಸಚಿವಾಲಯಗಳು ಜಂಟಿ ಕಾರ್ಯಕಾರಿ ಗುಂಪು ರಚಿಸಲು ಒಪ್ಪಿಗೆ ಸೂಚಿಸಿವೆ. ಅದರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಆಯುಷ್ ಸಚಿವಾಲಯವು ಪರಸ್ಪರ ಆಸಕ್ತಿಯ ಇತರ ಚಟುವಟಿಕೆಗಳನ್ನು ಗುರುತಿಸಬಹುದು ಮತ್ತು ಜಂಟಿಯಾಗಿ ಕೆಲಸ ಮಾಡಬಹುದು.

***


(Release ID: 1907983) Visitor Counter : 155