ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಅಮೃತಸರದಲ್ಲಿ ನಡೆದ 'ಸಂಶೋಧನೆಯ ಬಲವರ್ಧನೆ ಮತ್ತು ಶ್ರೀಮಂತ ಸಹಯೋಗದ ಮೂಲಕ ಹೊಸತನದ ಶೋಧಗಳ ಉತ್ತೇಜನʼ  ಕುರಿತಾದ ʻಜಿ 20ʼ ವಿಚಾರ ಸಂಕಿರಣ


ಜಾಗತಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಿಹಾರಗಳನ್ನು ರೂಪಿಸಲು ಸರಕಾರ-ಶೈಕ್ಷಣಿಕ ಕ್ಷೇತ್ರ-ಉದ್ಯಮದ ಸಂಪರ್ಕ ಕೊಂಡಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ವಿಚಾರ ಸಂಕಿರಣದಲ್ಲಿ ಗಮನ ಕೇಂದ್ರೀಕರಿಸಲಾಯಿತು

Posted On: 15 MAR 2023 5:28PM by PIB Bengaluru

ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಐಐಟಿ ರೋಪರ್ ಏರ್ಪಡಿಸಿದ್ದ 'ಸಂಶೋಧನೆಯ ಬಲವರ್ಧನೆ ಮತ್ತು ಶ್ರೀಮಂತ ಸಹಯೋಗದ ಮೂಲಕ ಹೊಸತನದ ಶೋಧಗಳ ಉತ್ತೇಜನʼ ಎಂಬ ವಿಚಾರ ಸಂಕಿರಣದಲ್ಲಿ ಭಾರತದ ʻಜಿ 20ʼ ಅಧ್ಯಕ್ಷತೆಯು ಕೇಂದ್ರ ಸ್ಥಾನವನ್ನು ಪಡೆಯಿತು. ಈ ಕಾರ್ಯಕ್ರಮದಲ್ಲಿ ʻಜಿ 20ʼ ಶಿಕ್ಷಣ ಕಾರ್ಯಪಡೆಯ  ಪ್ರತಿನಿಧಿಗಳು ಒಂದೆಡೆ ಸೇರಿ ಕೆಲಸ ಮತ್ತು ಹೊಸತನದ ಶೋಧಗಳ ಭವಿಷ್ಯದ ಬಗ್ಗೆ ಚರ್ಚಿಸಿದರು. ಸಮಾನ ಅಭಿವೃದ್ಧಿಗಾಗಿ ರಾಷ್ಟ್ರಗಳ ನಡುವೆ ಸೇತುವೆಗಳನ್ನು ನಿರ್ಮಿಸುವತ್ತ ಗಮನ ಹರಿಸಲಾಯಿತು.

ಐಐಟಿ ರೋಪರ್‌ನ ನಿರ್ದೇಶಕ ಪ್ರೊ. ರಾಜೀವ್ ಅಹುಜಾ ಅವರು ಸ್ವಾಗತ ಭಾಷಣ ಮಾಡಿದರು ಮತ್ತು ಜಾಗತಿಕವಾಗಿ ಸಂಶೋಧನೆ ಮತ್ತು ಹೊಸತನದ ಶೋಧಗಳಲ್ಲಿ ನಾಯಕನಾಗಲು ಭಾರತಕ್ಕೆ ಇರುವ ಅವಕಾಶವನ್ನು ಎತ್ತಿ ತೋರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉನ್ನತ ಶಿಕ್ಷಣದ ಕಾರ್ಯದರ್ಶಿ ಶ್ರೀ ಕೆ.ಸಂಜಯ್ ಮೂರ್ತಿ ಅವರು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಂಶೋಧನೆಯಲ್ಲಿ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು. ಭಾರತೀಯ ವಿಜ್ಞಾನ ಸಂಸ್ಥೆಯ  (ಐಐಎಸ್‌ಸಿ) ನಿರ್ದೇಶಕ ಪ್ರೊ.ಗೋವಿಂದ್ ರಂಗರಾಜನ್ ಅವರು ವಿವಿಧ ಕ್ಷೇತ್ರಗಳ ನಡುವೆ ಪರಸ್ಪರ ಅವಲಂಬನೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅಂತರ-ವಿಭಾಗ ಕ್ರಮಗಳ ಬಗ್ಗೆ ಪ್ರಬುದ್ಧ ಆಲೋಚನೆಗಳನ್ನು ಹಂಚಿಕೊಂಡರು. ಅಭಿವೃದ್ಧಿ ಹೊಂದಿದ ದೇಶಗಳ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುವ ಭಾರತದ ಮಿತವ್ಯಯದ ಆವಿಷ್ಕಾರಗಳು ಮತ್ತು ತಳಮಟ್ಟದ ನವಶೋಧಗಳನ್ನು ಗುರುತಿಸುವ ಹಾಗೂ ಬಳಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. 

ಐಐಟಿ ಹೈದರಾಬಾದ್‌ನ ನಿರ್ದೇಶಕ ಪ್ರೊ.ಬುಡರಾಜು ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ-ಶಿಕ್ಷಣ-ಉದ್ಯಮದ ನಡುವೆ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದರು. ʻರಾಷ್ಟ್ರೀಯ ಶಿಕ್ಷಣ ನೀತಿ 2020ʼ ಭಾರತದಲ್ಲಿ ಶಿಕ್ಷಣದಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದೆ. ʻಐ-ಸ್ಟೆಮ್ ಪೋರ್ಟಲ್ʼ, ʻಐಐಟಿ-ಆರ್&ಡಿ ಮೇಳʼ ಮುಂತಾದ ವಿವಿಧ ಕಾರ್ಯಕ್ರಮಗಳು ದೇಶದಲ್ಲಿ ಸಂಸ್ಥೆಗಳ ನಡುವೆ ಪರಸ್ಪರ ಸಾಂಸ್ಥಿಕ ಸಹಯೋಗವನ್ನು ಉತ್ತೇಜಿಸಲು ಸಹಾಯ ಮಾಡುತ್ತಿವೆ ಎಂದು ಹೇಳಿದರು.

'ಉದಯೋನ್ಮುಖ ಮತ್ತು ಕ್ರಾಂತಿಕಾರಿ ತಂತ್ರಜ್ಞಾನದಲ್ಲಿ ಸಂಶೋಧನೆ, ಇಂಡಸ್ಟ್ರಿ-4.0' ಎಂಬ ಶೀರ್ಷಿಕೆಯಡಿ ಮೊದಲ ಚರ್ಚಾಗೋಷ್ಠಿ ನಡೆಯಿತು. ಆಸ್ಟ್ರೇಲಿಯಾ, ಫ್ರಾನ್ಸ್, ಭಾರತ ಮತ್ತು ಬ್ರಿಟನ್‌ನ ಪ್ಯಾನಲಿಸ್ಟ್‌ಗಳು ಇದರಲ್ಲಿ ಪಾಲ್ಗೊಂಡರು. ಪ್ರೊಫೆಸರ್ ಅನಿಲ್ ಗುಪ್ತಾ ಅವರು ಗೋಷ್ಠಿಯನ್ನು ನಿರ್ವಹಣೆ ಮಾಡಿದರು ಮತ್ತು ಪ್ರೊಫೆಸರ್ ರಾಜೀವ್ ಅಹುಜಾ ಅವರು ಇದರ ಅಧ್ಯಕ್ಷತೆ ವಹಿಸಿದರು. ಉದಯೋನ್ಮುಖ ಆವಿಷ್ಕಾರಗಳ ಬಗ್ಗೆ ಸಂಶೋಧನೆಯನ್ನು ಉತ್ತೇಜಿಸಲು ವಿವಿಧ ಮಧ್ಯಸ್ಥಗಾರರ ಪಾತ್ರ, ಶಿಕ್ಷಣ ವ್ಯವಸ್ಥೆಗಳು ಮತ್ತು ಸಾಮಾನ್ಯವಾಗಿ ಸಮಾಜದ ಮೇಲೆ ಅವುಗಳ ಪ್ರಭಾವದ ಬಗ್ಗೆ ಸೂಕ್ತ ಒಳನೋಟಗಳನ್ನು ತಜ್ಞರು ಹಂಚಿಕೊಂಡರು.

ಪ್ರೊಫೆಸರ್ ಶಾಲಿನಿ ಭರತ್ ಅವರ ಅಧ್ಯಕ್ಷತೆಯಲ್ಲಿ ಚೀನಾ, ಒಮಾನ್, ದಕ್ಷಿಣ ಆಫ್ರಿಕಾ, ಯುಎಇ ಮತ್ತು ಯುನಿಸೆಫ್ ಅನ್ನು ಪ್ರತಿನಿಧಿಸುವ ಪ್ಯಾನಲಿಸ್ಟ್‌ಗಳು 'ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಸಂಶೋಧನೆ' ಕುರಿತ ಎರಡನೇ ಚರ್ಚಾಗೋಷ್ಠಿ ನಡೆಸಿದರು. ಸಂಶೋಧನೆಯ ಕೇಂದ್ರಬಿಂದುವಾಗಿರುವ ವಿಶ್ವವಿದ್ಯಾಲಯಗಳ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಈ ಚರ್ಚೆಯಲ್ಲಿ ಪ್ರಧಾನವಾಗಿ ಗಮನ ಕೇಂದ್ರೀಕರಿಸಲಾಯಿತು. 

ಚರ್ಚಾಸಮಿತಿಯ ಸದಸ್ಯರಲ್ಲಿ ಒಬ್ಬರಾದ ಆಸ್ಟ್ರೇಲಿಯಾ ಸರಕಾರದ ಶಿಕ್ಷಣ ಇಲಾಖೆಯ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅಲಿಸನ್ ಡೆಲ್ ಅವರು ತಮ್ಮ ದೇಶದಲ್ಲಿ ʻರಾಷ್ಟ್ರೀಯ ಸಹಕಾರಿ ಮೂಲಸೌಕರ್ಯ ಯೋಜನೆʼ ಮತ್ತು ಆನ್ವಯಿಕ ಸಂಶೋಧನೆಯತ್ತ ಸಾಗುವಲ್ಲಿ ಅವರ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಸಂಶೋಧನೆ ಮತ್ತು ನವಶೋಧಗಳಲ್ಲಿ ಅಂತರರಾಷ್ಟ್ರೀಯ ಸಹಯೋಗದ ಮಹತ್ವವನ್ನು ಅವರು ಒತ್ತಿ ಹೇಳಿದರು. ಈ ಹಿಂದೆ ಆಸ್ಟ್ರೇಲಿಯಾ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಯಶಸ್ವಿ ಪಾಲುದಾರಿಕೆಯನ್ನು ಎತ್ತಿ ತೋರಿಸಿದರು. ಅಂತಹ ಸಹಯೋಗಗಳು ಅಭಿವೃದ್ಧಿ ಹೊಂದುತ್ತಲೇ ಇರುತ್ತವೆ ಮತ್ತು ಎರಡೂ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಜಾಗತಿಕ ಸವಾಲುಗಳನ್ನು ಎದುರಿಸಲು ಪರಿಹಾರಗಳನ್ನು ವಿನ್ಯಾಸಗೊಳಿಸಲು ಸರಕಾರ-ಶೈಕ್ಷಣಿಕ-ಉದ್ಯಮ ಸಂಪರ್ಕಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಚರ್ಚಾಗೋಷ್ಠಿಯು ಗಮನ ಕೇಂದ್ರೀಕರಿಸಿತು. ಶಿಕ್ಷಣದಲ್ಲಿ ಬಹು ವಿಭಾಗವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಸಂಶೋಧನಾ ಸಹಯೋಗವು ಇಂದಿನ ತುರ್ತು ಅಗತ್ಯವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ರೀತಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪರಿವರ್ತನಕಾರಿ ಸಂಶೋಧನೆಯನ್ನು ಉತ್ತೇಜಿಸಲು ದೇಶಗಳು / ಸಂಸ್ಥೆಗಳು ಅಡೆತಡೆಗಳನ್ನು ನಿವಾರಿಸಬೇಕು ಎಂಬ ಬಗ್ಗೆ ಚರ್ಚಾ ಸಮಿತಿಯು ಒಮ್ಮತ ವ್ಯಕ್ತಪಡಿಸಿತು. ಸಂಶೋಧನಾ ದತ್ತಾಂಶ ಮತ್ತು ನಿಯಮಗಳನ್ನು ಹಂಚಿಕೊಳ್ಳಲು ಅಗತ್ಯ ನೀತಿಗಳನ್ನು ರೂಪಿಸುವ ಅಗತ್ಯವೂ ಇದೆ.  ಜಾಗತಿಕ ಸವಾಲುಗಳನ್ನು ಎದುರಿಸಲು ಉದಯೋನ್ಮುಖ ಮತ್ತು ಕ್ರಾಂತಿಕಾರಿ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಗಾಗಿ ಸಾಮಾನ್ಯ ನೀತಿಯನ್ನು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ʻಜಿ 20ʼ ದೇಶಗಳು ಕೆಲಸ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟರು.

ಪಂಜಾಬ್ ಮುಖ್ಯಮಂತ್ರಿ ಶ್ರೀ ಭಗವಂತ್ ಮಾನ್ ಅವರ ಭಾಷಣದೊಂದಿಗೆ ವಿಚಾರ ಸಂಕಿರಣ ಕೊನೆಗೊಂಡಿತು. ಇದಕ್ಕೂ ಮುನ್ನ ಪ್ರತಿನಿಧಿಗಳನ್ನು ಸ್ವಾಗತಿಸಿದ ಅವರು ಶಿಕ್ಷಣ ಮತ್ತು ನವಶೋಧದ ಮಹತ್ವವನ್ನು ಒತ್ತಿ ಹೇಳಿದರು. ಪಂಜಾಬಿ ಆಹಾರದ ಸವಿಯನ್ನು ಪ್ರಯತ್ನಿಸುವಂತೆ ಮತ್ತು ರಾಜ್ಯದ ಶ್ರೀಮಂತ ಸಂಸ್ಕೃತಿಯ ಪರಿಚಯ ಪಡೆಯುವಂತೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಮನವಿ ಮಾಡಿದರು. ʻಜಿ 20ʼ ಶಿಕ್ಷಣ ಕಾರ್ಯಪಡೆಯ 2ನೇ ಸಭೆಯ ಆತಿಥ್ಯ ವಹಿಸಲು ಪಂಜಾಬ್‌ಗೆ ಅವಕಾಶ ನೀಡಿದ್ದಕ್ಕಾಗಿ ಶ್ರೀ ಮನ್ ಅವರು ಭಾರತ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವಿಚಾರ ಸಂಕಿರಣದ ಬಳಿಕ ʻಜಿ 20ʼ ಔತಣಕೂಟ ಏರ್ಪಡಿಸಲಾಗಿತ್ತು ಮತ್ತು ಪ್ರತಿನಿಧಿಗಳನ್ನು ರಂಜಿಸಲು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ವಿಚಾರ ಸಂಕಿರಣದ ನೇಪಥ್ಯದಲ್ಲಿ ಉದ್ಯಮ, ಶಿಕ್ಷಣ ಮತ್ತು ನವೋದ್ಯಮ ಕುರಿತಾದ ಮಲ್ಟಿಮೀಡಿಯಾ ಪ್ರಾತ್ಯಕ್ಷಿಯನ್ನು ಸಹ ಆಯೋಜಿಸಲಾಗಿದ್ದು, ಇದು ಮಾರ್ಚ್ 16 ಮತ್ತು 17 ರಂದು ಸ್ಥಳೀಯ ಸಂಸ್ಥೆಗಳು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧಕರಿಗೆ ತೆರೆದಿರುತ್ತದೆ.


****


(Release ID: 1907646) Visitor Counter : 101