ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಎಸ್ ಸಿಒ ರಾಷ್ಟ್ರಗಳ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಚಿವರ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಶ್ರೀ ಅನುರಾಗ್ ಸಿಂಗ್ ಠಾಕೂರ್;


ಎಸ್ ಸಿಒ ಸದಸ್ಯ ರಾಷ್ಟ್ರಗಳ ಶೃಂಗಸಭೆಯ ಆತಿಥ್ಯ ವಹಿಸುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಷಯ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 15 MAR 2023 7:51PM by PIB Bengaluru

ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು  ಎಂಟು ಶಾಂಘೈ ಕಾರ್ಪೊರೇಷನ್ ಆರ್ಗನೈಸೇಷನ್ (ಎಸ್.ಸಿ.ಒ.) ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ 'ಕ್ರೀಡೆ ಮತ್ತು ದೈಹಿಕ ಸಾಮರ್ಥ್ಯದಲ್ಲಿ ಸಹಯೋಗ' ಎಂಬ ವಿಷಯದ ಮೇಲೆ ಆಯೋಜಿಸಿದ್ದ ಮೂರು ದಿನಗಳ ಶೃಂಗಸಭೆಯು 2023ರ ಮಾರ್ಚ್ 15ರಂದು ಸಮಾರೋಪಗೊಂಡಿತು. 

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮೂರು ದಿನಗಳ ಚರ್ಚೆ ನಡೆಯಿತು, ಅಲ್ಲಿ ಮೊದಲ ಎರಡು ದಿನಗಳನ್ನು ಎಸ್.ಸಿ.ಒ.ರಾಷ್ಟ್ರಗಳ ತಜ್ಞರ ಕಾರ್ಯ ಗುಂಪಿನ ಚರ್ಚೆಗಳಿಗೆ ಮೀಸಲಿಡಲಾಯಿತು ಮತ್ತು ಕೊನೆಯ ದಿನ, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ (ಎಂವೈಎಎಸ್ )ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಅಧ್ಯಕ್ಷತೆಯಲ್ಲಿ ಸಚಿವರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು, ಎಸ್ ಸಿಒ ರಾಷ್ಟ್ರಗಳ ಸದಸ್ಯರಿಗೆ, ವಿಶೇಷವಾಗಿ ಆಜಾದಿ ಕಿ ಅಮೃತ್ ಕಾಲ್ ನ ಮೊದಲ ವರ್ಷ, (ಭಾರತದ ಸ್ವಾತಂತ್ರ್ಯದ 76 ನೇ ವರ್ಷ) ಮತ್ತು ಭಾರತವು ಜಿ 20 ಅಧ್ಯಕ್ಷತೆಯನ್ನು ವಹಿಸಿರುವ ವರ್ಷದಲ್ಲಿ ಎಂವೈಎಎಸ್ ಆತಿಥ್ಯ ವಹಿಸುತ್ತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

"ಕ್ರೀಡೆಯ ಅಡಿಯಲ್ಲಿ ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಎಸ್.ಸಿ.ಒ. ರಾಷ್ಟ್ರಗಳೊಂದಿಗೆ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಆಲೋಚನೆಗಳನ್ನು, ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲು ಹಾಗು ಕ್ರೀಡೆಗೆ ನಮ್ಮ ಬದ್ಧತೆಯನ್ನು ಬಲಪಡಿಸಲು ಸಹಾಯ ಮಾಡುವ ಸಾಮಾನ್ಯ ವೇದಿಕೆಯನ್ನು ರೂಪಿಸಲು ಪ್ರತಿ ಸದಸ್ಯ ರಾಷ್ಟ್ರದ ಪರಿಣತಿಯನ್ನು ಬಳಸುವುದಕ್ಕೆ ಉತ್ಸುಕರಾಗಿದ್ದೇವೆ" ಎಂದೂ ಅವರು ಹೇಳಿದರು.

ಕ್ರೀಡೆಯನ್ನು ಭಾರತದ ಮಾರ್ಗದರ್ಶಕ ಶಕ್ತಿಯನ್ನಾಗಿ ಮಾಡುವ ಮತ್ತು ದೇಶವನ್ನು ವಿಕಸನಗೊಳ್ಳುತ್ತಿರುವ ಕ್ರೀಡಾ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಮಂತ್ರಿಯವರ ಚಿಂತನೆಯನ್ನು ಅವರು ಪುನರುಚ್ಚರಿಸಿದರು.

ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು (ಹೊಸದಿಲ್ಲಿಯಲ್ಲಿರುವ ಹೈಕಮಿಷನ್ನಿನ ಚಾರ್ಜ್ ಡಿ ಅಫೇರ್ಸ್ ಪ್ರತಿನಿಧಿ)  ಚರ್ಚೆಯಲ್ಲಿ ಭಾಗವಹಿಸಿದ್ದರು ಮತ್ತು ಚೀನಾ ಮತ್ತು ತಜಕಿಸ್ತಾನದ ಪ್ರತಿನಿಧಿಗಳು ವರ್ಚುವಲ್ ಮೂಲಕ ಪಾಲ್ಗೊಂಡಿದ್ದರು.

ಕ್ರೀಡಾ ಶಿಕ್ಷಣ, ಸ್ವಚ್ಛ ಕ್ರೀಡೆ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಸಮಾವೇಶಗಳು / ಸೆಮಿನಾರ್ ಗಳು / ತರಬೇತಿ ಕಾರ್ಯಕ್ರಮಗಳನ್ನು ಸೂಕ್ತವಾಗಿ ಆಯೋಜಿಸುವ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮತ್ತು ಹೆಚ್ಚಿನ ಸಹಕಾರದ ಅಗತ್ಯವನ್ನು ಎಲ್ಲ ಕಡೆಯವರು ಪುನರುಚ್ಚರಿಸಿದರು.

ಎಸ್ ಸಿಒ ಸಾಂಪ್ರದಾಯಿಕ ದೈಹಿಕ ಚಟುವಟಿಕೆಗಳಾದ ಯೋಗ, ವುಶು ಇತ್ಯಾದಿಗಳ ಮಹತ್ವವನ್ನು ಅವರು ಶ್ಲಾಘಿಸಿದರು. ಜೀವನಶೈಲಿ ಮತ್ತು ಕ್ರೀಡೆಯಾಗಿ ಮತ್ತು ದೈಹಿಕ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಅವುಗಳ ಪಾತ್ರವನ್ನು ಗಣನೆಗೆ ತೆಗೆದುಕೊಂಡರು; ಕ್ರೀಡಾ ವೈದ್ಯಕೀಯ, ಗುಣಪಡಿಸುವಿಕೆ ಮತ್ತು ಕ್ರೀಡೆಗಳಲ್ಲಿ ಉತ್ಕೃಷ್ಟತೆಯ ಸಾಧನೆಗೆ ನೆರವಾಗುವ ಎಸ್ ಸಿಒ ದೇಶಗಳ ಸಾಂಪ್ರದಾಯಿಕ ಔಷಧದ ಪಾತ್ರವನ್ನು ಸಹ ಗಮನಿಸಲಾಯಿತು.

ಶೃಂಗಸಭೆಯ ಸಮಾರೋಪದಲ್ಲಿ, ಶೃಂಗಸಭೆಯನ್ನು ಆತಿಥ್ಯವಹಿಸಿ ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಎಸ್ ಸಿಒ ಸದಸ್ಯರು ಭಾರತವನ್ನು ಅಭಿನಂದಿಸಿದರು ಮತ್ತು ಆತಿಥೇಯ ರಾಷ್ಟ್ರಕ್ಕೆ ಕೃತಜ್ಞತೆ ಸಲ್ಲಿಸಿದರು.

****



(Release ID: 1907620) Visitor Counter : 73