ಪ್ರಧಾನ ಮಂತ್ರಿಯವರ ಕಛೇರಿ

'ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್' ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ


"ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಗಳಿಗೆ ನೆರವಾಗುವ ಗುರಿಯನ್ನು ಹೊಂದಿದೆ"
 
" ಈ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಿದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಎಲ್ಲರ ಗಮನ ಸೆಳೆದಿದೆ"
 
“ಸ್ಥಳೀಯ ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ಸಣ್ಣ ಕುಶಲಕರ್ಮಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಅವರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ”
 
"ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಸುಬುದಾರರ ಶ್ರೀಮಂತ ಸಂಪ್ರದಾಯಗಳನ್ನು ಉಳಿಸುವ ಗುರಿಯನ್ನು ಹೊಂದಿದೆ"
 
"ನುರಿತ ಕುಶಲಕರ್ಮಿಗಳು ಸ್ವಾವಲಂಬಿ ಭಾರತದ ನಿಜವಾದ ಚೈತನ್ಯದ ಸಂಕೇತಗಳು ಮತ್ತು ನಮ್ಮ ಸರ್ಕಾರವು ಅವರನ್ನು ನವ ಭಾರತದ ವಿಶ್ವಕರ್ಮರು ಎಂದು ಪರಿಗಣಿಸುತ್ತದೆ"
 
"ಹಳ್ಳಿಯ ಪ್ರತಿಯೊಂದು ವರ್ಗವನ್ನು ಅಭಿವೃದ್ಧಿಗಾಗಿ ಸಬಲೀಕರಣಗೊಳಿಸುವುದು ಭಾರತದ ಅಭಿವೃದ್ಧಿ ಪಯಣಕ್ಕೆ ಅತ್ಯಗತ್ಯವಾಗಿದೆ"
 
"ನಾವು ರಾಷ್ಟ್ರದ ವಿಶ್ವಕರ್ಮರ ಅಗತ್ಯಗಳಿಗೆ ಅನುಗುಣವಾಗಿ ನಮ್ಮ ಕೌಶಲ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಮರುಹೊಂದಿಸಬೇಕಾಗಿದೆ"
 
"ಇಂದಿನ ವಿಶ್ವಕರ್ಮರು ನಾಳೆಯ ಉದ್ಯಮಿಗಳಾಗಬಹುದು"
 
"ಕುಶಲಕರ್ಮಿಗಳು ಮತ್ತು ಕಸುಬುದಾರರು ಮೌಲ್ಯ ಸರಪಳಿಯ ಭಾಗವಾದರೆ  ಅವರನ್ನು ಬಲಪಡಿಸಬಹುದು"

Posted On: 11 MAR 2023 11:15AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್’ ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸಿರುವ 12 ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಯಲ್ಲಿ ಇದು ಕೊನೆಯದಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ಮೂರು ವರ್ಷಗಳಿಂದ, ಭಾಗೀದಾರರೊಂದಿಗೆ ಬಜೆಟ್ ನಂತರದ ಸಂವಾದದ ಸಂಪ್ರದಾಯವು ಆರಂಭವಾಗಿದೆ ಎಂದು ಹೇಳಿದರು. ಈ ಚರ್ಚೆಗಳಲ್ಲಿ ಎಲ್ಲಾ ಪಾಲುದಾರರು ಫಲಪ್ರದವಾಗಿ ಭಾಗವಹಿಸಿರುವ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಬಜೆಟ್‌ನ ರಚನೆಯ ಬಗ್ಗೆ ಚರ್ಚಿಸುವ ಬದಲು, ಪಾಲುದಾರರು ಬಜೆಟ್‌ನ ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ಅತ್ಯುತ್ತಮ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಅವರು ಹೇಳಿದರು. ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯು ಹೊಸ ಅಧ್ಯಾಯವಾಗಿದ್ದು, ಸಂಸದರು ಸಂಸತ್ತಿನ ಒಳಗೆ ನಡೆಸಿದ ಚರ್ಚೆಗಳನ್ನು ಎಲ್ಲಾ ಪಾಲುದಾರರು ನಡೆಸುತ್ತಾರೆ, ಇಲ್ಲಿ ಅವರಿಂದ ಅಮೂಲ್ಯವಾದ ಸಲಹೆಗಳನ್ನು ಪಡೆಯುವುದು ಬಹಳ ಉಪಯುಕ್ತವಾಗಿದೆ ಎಂದು ಪ್ರಧಾನಿ ಹೇಳಿದರು.

ಇಂದಿನ ವೆಬಿನಾರ್ ಅನ್ನು ಕೋಟ್ಯಂತರ ಭಾರತೀಯರ ಕೌಶಲ್ಯ ಮತ್ತು ಪರಿಣತಿಗೆ ಸಮರ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ಕಿಲ್ ಇಂಡಿಯಾ ಮಿಷನ್ ಮತ್ತು ಕೌಶಲ್ ರೋಜ್‌ಗಾರ್ ಕೇಂದ್ರದ ಮೂಲಕ ಕೋಟ್ಯಂತರ ಯುವಜನರಿಗೆ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ನಿರ್ದಿಷ್ಟ ಮತ್ತು ಉದ್ದೇಶಿತ ವಿಧಾನದ ಅಗತ್ಯವನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆ ಅಥವಾ ಪಿಎಂ ವಿಶ್ವಕರ್ಮ ಈ ಚಿಂತನೆಯ ಫಲವಾಗಿದೆ ಎಂದು ಪ್ರಧಾನಿ ಹೇಳಿದರು. ಯೋಜನೆಯ ಅಗತ್ಯ ಮತ್ತು ‘ವಿಶ್ವಕರ್ಮ’ಹೆಸರಿನ ಹಿಂದಿನ ತರ್ಕವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಭಾರತೀಯ ತತ್ವಗಳಲ್ಲಿ ಭಗವಾನ್ ವಿಶ್ವಕರ್ಮರಿಗೆ ಇರುವ ಉನ್ನತ ಸ್ಥಾನಮಾನ ಮತ್ತು ಉಪಕರಣಗಳೊಂದಿಗೆ ಕೈಯಿಂದ ಕುಶಲ ಕೆಲಸ ಮಾಡುವವರಿಗೆ ಗೌರವ ನೀಡುವ ಶ್ರೀಮಂತ ಸಂಪ್ರದಾಯದ ಬಗ್ಗೆ ಮಾತನಾಡಿದರು.

ಕೆಲವು ವಲಯಗಳ ಕುಶಲಕರ್ಮಿಗಳ ಬಗ್ಗೆ ಸ್ವಲ್ಪ ಗಮನ ನೀಡಲಾಗಿದೆ, ಬಡಗಿಗಳು, ಕಬ್ಬಿಣದ ಕೆಲಸಗಾರರು, ಶಿಲ್ಪಿಗಳು, ಮೇಸ್ತ್ರಿಗಳು ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿರುವ ಅನೇಕ ವರ್ಗದ ಕುಶಲಕರ್ಮಿಗಳು ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. 

“ಸ್ಥಳೀಯ ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ಸಣ್ಣ ಕುಶಲಕರ್ಮಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಅವರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಾಚೀನ ಭಾರತದಲ್ಲಿ ರಫ್ತಿಗೆ ನುರಿತ ಕುಶಲಕರ್ಮಿಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದರು ಎಂದು ಅವರು ಹೇಳಿದರು. ಈ ಕುಶಲ ಉದ್ಯೋಗಿಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಯಿತು ಮತ್ತು ಅವರ ಕೆಲಸವನ್ನು ಗುಲಾಮಗಿರಿಯ ಸುದೀರ್ಘ ವರ್ಷಗಳಲ್ಲಿ ಪ್ರಾಮುಖ್ಯವಲ್ಲದ್ದು ಎಂದು ಪರಿಗಣಿಸಲಾಯಿತು ಎಂದು ಅವರು ವಿಷಾದಿಸಿದರು. ಭಾರತದ ಸ್ವಾತಂತ್ರ್ಯದ ನಂತರವೂ, ಅವರ ಸುಧಾರಣೆಗಾಗಿ ಕೆಲಸ ಮಾಡಲು ಸರ್ಕಾರದಿಂದ ಯಾವುದೇ ಕ್ರಮಗಳು ಬರಲಿಲ್ಲ, ಪರಿಣಾಮವಾಗಿ, ಕೌಶಲ ಮತ್ತು ಕರಕುಶಲತೆಯ ಅನೇಕ ಕುಟುಂಬಗಳು ತಮ್ಮ ಸಾಂಪ್ರದಾಯಿಕ ವಿಧಾನಗಳನ್ನು ಕೈಬಿಟ್ಟು ಬೇರೆಡೆ ಜೀವನ ನಡೆಸಲು ಆರಂಭಿಸಿದವು ಎಂದು ಪ್ರಧಾನಿ ಹೇಳಿದರು. ಈ ಕಾರ್ಮಿಕ ವರ್ಗವು ಶತಮಾನಗಳಿಂದ ಸಾಂಪ್ರದಾಯಿಕ ವಿಧಾನಗಳನ್ನು ಬಳಸುವ ತಮ್ಮ ಕುಶಲತೆಯನ್ನು ಉಳಿಸಿಕೊಂಡಿದೆ ಮತ್ತು ಅವರು ತಮ್ಮ ಅಸಾಧಾರಣ ಕೌಶಲ್ಯಗಳು ಮತ್ತು ಅನನ್ಯ ಸೃಷ್ಟಿಗಳಿಂದ ಛಾಪು ಮೂಡಿಸುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ನುರಿತ ಕುಶಲಕರ್ಮಿಗಳು ಸ್ವಾವಲಂಬಿ ಭಾರತದ ನಿಜವಾದ ಚೈತನ್ಯದ ಸಂಕೇತಗಳಾಗಿದ್ದಾರೆ ಮತ್ತು ನಮ್ಮ ಸರ್ಕಾರವು ಅಂತಹ ಜನರನ್ನು ನವ ಭಾರತದ ವಿಶ್ವಕರ್ಮರು ಎಂದು ಪರಿಗಣಿಸುತ್ತದೆ ಎಂದರು. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆಯನ್ನು ವಿಶೇಷವಾಗಿ ಅವರಿಗಾಗಿ ಪ್ರಾರಂಭಿಸಲಾಗಿದೆ. ಇದರಲ್ಲಿ ತಮ್ಮ ಸ್ವಂತ ಕೈಗಳಿಂದ ಕೆಲಸ ಮಾಡುವ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಹಳ್ಳಿ ಮತ್ತು ಪಟ್ಟಣಗಳ ನುರಿತ ಕುಶಲಕರ್ಮಿಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಅವರು ಹೇಳಿದರು.

ಮನುಷ್ಯರ ಸಾಮಾಜಿಕ ಸ್ವಭಾವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸಮಾಜದ ಅಸ್ತಿತ್ವ ಮತ್ತು ಅಭಿವೃದ್ಧಿಗೆ ಅಗತ್ಯವಾದ ಸಾಮಾಜಿಕ ಜೀವನದ ಹಲವಾರು ವರ್ಗಗಳಿವೆ ಎಂದು ಹೇಳಿದರು. ಹೆಚ್ಚುತ್ತಿರುವ ತಂತ್ರಜ್ಞಾನದ ಪ್ರಭಾವದ ಹೊರತಾಗಿಯೂ ಇವು ಪ್ರಸ್ತುತವಾಗಿವೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಅಂತಹ ಚದುರಿಹೋಗಿರುವ ಕುಶಲಕರ್ಮಿಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕೃಷಿಯ ಜೊತೆಗೆ ಗ್ರಾಮ ಜೀವನದಲ್ಲಿ ಈ ವೃತ್ತಿಗಳ ಪಾತ್ರವನ್ನು ಒತ್ತಿ ಹೇಳಿದರು. ಗ್ರಾಮದ ಪ್ರತಿಯೊಂದು ವರ್ಗವನ್ನು ಅದರ ಅಭಿವೃದ್ಧಿಗಾಗಿ ಸಬಲೀಕರಣಗೊಳಿಸುವುದು ಭಾರತದ ಅಭಿವೃದ್ಧಿ ಪಯಣಕ್ಕೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಸಿಗುವ ಲಾಭದಂತೆಯೇ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಕುಶಲಕರ್ಮಿಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ವಿಶ್ವಕರ್ಮರ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಮರುಹೊಂದಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಸರ್ಕಾರ ಯಾವುದೇ ಬ್ಯಾಂಕ್ ಖಾತ್ರಿ ಇಲ್ಲದೆ ಕೋಟ್ಯಂತರ ರೂಪಾಯಿ ಸಾಲ ನೀಡುತ್ತಿದೆ ಎಂದು ಮುದ್ರಾ ಯೋಜನೆಯ ಉದಾಹರಣೆ ನೀಡಿದರು. ಈ ಯೋಜನೆಯು ನಮ್ಮ ವಿಶ್ವಕರ್ಮರಿಗೆ ಗರಿಷ್ಠ ಪ್ರಯೋಜನವನ್ನು ಒದಗಿಸಬೇಕು ಎಂದು ಅವರು ಸೂಚಿಸಿದರು ಮತ್ತು ವಿಶ್ವಕರ್ಮ ಬಂಧುಗಳಿಗೆ ಆದ್ಯತೆಯ ಮೇಲೆ ಡಿಜಿಟಲ್ ಸಾಕ್ಷರತಾ ಅಭಿಯಾನದ ಅಗತ್ಯವನ್ನು ಹೇಳಿದರು.

ಕೈಯಿಂದ ತಯಾರಿಸಿದ ಉತ್ಪನ್ನಗಳಿಗೆ ಇರುವ ನಿರಂತರ ಆಕರ್ಷಣೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ದೇಶದ ಪ್ರತಿಯೊಬ್ಬ ವಿಶ್ವಕರ್ಮನಿಗೆ ಸರ್ಕಾರವು ಸಮಗ್ರ ಸಾಂಸ್ಥಿಕ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. ಇದು ಸುಲಭವಾದ ಸಾಲಗಳು, ಕೌಶಲ್ಯ, ತಾಂತ್ರಿಕ ಬೆಂಬಲ, ಡಿಜಿಟಲ್ ಸಬಲೀಕರಣ, ಬ್ರ್ಯಾಂಡ್ ಪ್ರಚಾರ, ಮಾರುಕಟ್ಟೆ ಮತ್ತು ಕಚ್ಚಾ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದರು. ಈ ಯೋಜನೆಯ ಉದ್ದೇಶವು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಸುಬುದಾರರನ್ನು ಅಭಿವೃದ್ಧಿಪಡಿಸುವುದು ಮತ್ತು ಅವರ ಶ್ರೀಮಂತ ಸಂಪ್ರದಾಯವನ್ನು ಉಳಿಸುವುದಾಗಿದೆ ಎಂದು ಅವರು ಹೇಳಿದರು.

ಇಂದಿನ ವಿಶ್ವಕರ್ಮರು ನಾಳಿನ ಉದ್ಯಮಿಗಳಾಗಬೇಕು ಎಂಬುದು ನಮ್ಮ ಗುರಿ. ಇದಕ್ಕಾಗಿ ಅವರ ವ್ಯವಹಾರ ಮಾದರಿಯಲ್ಲಿ ಸುಸ್ಥಿರತೆ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರವು ಸ್ಥಳೀಯ ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯ ಮೇಲೆಯೂ ಗಮನಹರಿಸುತ್ತಿರುವುದರಿಂದ ಗ್ರಾಹಕರ ಅಗತ್ಯಗಳ ಬಗ್ಗೆಯೂ ಸಹ ಕಾಳಜಿ ವಹಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಎಲ್ಲಾ ಪಾಲುದಾರರು ವಿಶ್ವಕರ್ಮ ಸಹೋದ್ಯೋಗಿಗಳ ಜೊತೆಯಾಗಿ, ಅವರ ಅರಿವನ್ನು ಹೆಚ್ಚಿಸಿ, ಆ ಮೂಲಕ ಅವರು ಮುಂದೆ ಸಾಗಲು ಸಹಾಯ ಮಾಡಬೇಕೆಂದು ಅವರು ವಿನಂತಿಸಿದರು. ಇದಕ್ಕಾಗಿ ನೀವು ವಾಸ್ತವಕ್ಕೆ ಹೋಗಬೇಕು, ನೀವು ಈ ವಿಶ್ವಕರ್ಮ ಸಹಚರರ ನಡುವೆ ಓಡಾಡಬೇಕು ಎಂದು ಅವರು ತಿಳಿಸಿದರು.

ಕುಶಲಕರ್ಮಿಗಳು ಮತ್ತು ಕಸುಬುದಾರರು ಮೌಲ್ಯ ಸರಪಳಿಯ ಭಾಗವಾದಾಗ ಅವರನ್ನು ಬಲಪಡಿಸಬಹುದು ಮತ್ತು ಅವರಲ್ಲಿ ಅನೇಕರು ನಮ್ಮ ಎಂಎಸ್‌ಎಂಇ ವಲಯಕ್ಕೆ ಪೂರೈಕೆದಾರರು ಮತ್ತು ಉತ್ಪಾದಕರಾಗಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಉಪಕರಣಗಳು ಮತ್ತು ತಂತ್ರಜ್ಞಾನದ ಸಹಾಯದಿಂದ ಅವರನ್ನು ಆರ್ಥಿಕತೆಯ ಪ್ರಮುಖ ಭಾಗವನ್ನಾಗಿ ಮಾಡಬಹುದು ಎಂದು ತಿಳಿಸಿದ ಪ್ರಧಾನಿ, ಇವರಿಗೆ ಕೌಶಲ್ಯ ಮತ್ತು ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ಉದ್ಯಮವು ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಹೇಳಿದರು. ಬ್ಯಾಂಕ್‌ಗಳಿಂದ ಯೋಜನೆಗಳಿಗೆ ಹಣಕಾಸು ಒದಗಿಸಲು ಸರ್ಕಾರಗಳ ನಡುವೆ ಉತ್ತಮ ಸಮನ್ವಯ ಇರಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಇದು ಪ್ರತಿ ಪಾಲುದಾರರಿಗೆ ಗೆಲುವು-ಗೆಲುವಿನ ಪರಿಸ್ಥಿತಿಯಾಗುತ್ತದೆ. ಕಾರ್ಪೊರೇಟ್ ಕಂಪನಿಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುತ್ತವೆ. ಬ್ಯಾಂಕ್‌ಗಳ ಹಣವನ್ನು ವಿಶ್ವಾಸಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಸರ್ಕಾರದ ಯೋಜನೆಗಳ ವ್ಯಾಪಕ ಪರಿಣಾಮವನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತಮ ತಂತ್ರಜ್ಞಾನ, ವಿನ್ಯಾಸ, ಪ್ಯಾಕೇಜಿಂಗ್ ಮತ್ತು ಹಣಕಾಸಿಗೆ ಸಹಾಯ ಮಾಡುವುದರ ಜೊತೆಗೆ ಇ-ಕಾಮರ್ಸ್ ಮಾದರಿಯ ಮೂಲಕ ಕರಕುಶಲ ಉತ್ಪನ್ನಗಳಿಗೆ ಸ್ಟಾರ್ಟ್‌ಅಪ್‌ಗಳು ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಬಹುದು ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಮೂಲಕ ಖಾಸಗಿ ವಲಯದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಾಗುವುದು, ಇದರಿಂದಾಗಿ ಖಾಸಗಿ ವಲಯದ ನಾವೀನ್ಯತೆ ಶಕ್ತಿ ಮತ್ತು ವ್ಯವಹಾರದ ಕುಶಲತೆಯನ್ನು ಗರಿಷ್ಠಗೊಳಿಸಬಹುದು ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ದೃಢವಾದ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ಎಲ್ಲಾ ಪಾಲುದಾರರಿಗೆ ಪ್ರಧಾನಿ ವಿನಂತಿಸಿದರು. ದೇಶದ ದೂರದ ಭಾಗದ ಜನರನ್ನು ತಲುಪಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಅವರಲ್ಲಿ ಅನೇಕರು ಮೊದಲ ಬಾರಿಗೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಕುಶಲಕರ್ಮಿಗಳು ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯಗಳು ಅಥವಾ ಮಹಿಳೆಯರಾಗಿದ್ದಾರೆ. ಅವರನ್ನು ತಲುಪಲು ಮತ್ತು ಅವರಿಗೆ ಪ್ರಯೋಜನವನ್ನು ಒದಗಿಸಲು ಪ್ರಾಯೋಗಿಕ ಕಾರ್ಯತಂತ್ರದ ಅಗತ್ಯವಿದೆ. ಇದಕ್ಕಾಗಿ, ನಾವು ಕಾಲಮಿತಿಯ ಅಭಿಯಾನ ಮಾದರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.

***



(Release ID: 1905942) Visitor Counter : 212