ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಆರನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ಭಾರತದ ರಾಷ್ಟ್ರಪತಿ 

Posted On: 10 MAR 2023 1:38PM by PIB Bengaluru

ನವದೆಹಲಿಯಲ್ಲಿ ಇಂದು (ಮಾರ್ಚ್ 10, 2023) ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಭಾರತದಾದ್ಯಂತದ ವಿದ್ಯಾರ್ಥಿಗಳು ಜೆ ಎನ್ ‌ಯುನಲ್ಲಿ ಅಧ್ಯಯನ ಮಾಡುತ್ತಾರೆ. ಈ ವಿಶ್ವವಿದ್ಯಾನಿಲಯವು ವೈವಿಧ್ಯತೆಯ ಮಧ್ಯೆಯೂ ಭಾರತದ ಸಾಂಸ್ಕೃತಿಕ ಏಕತೆಯ ಜೀವಂತಿಕೆಯ ಪ್ರತಿಬಿಂಬವನ್ನು ಪ್ರಸ್ತುತಪಡಿಸುತ್ತದೆ. ಈ ವಿಶ್ವವಿದ್ಯಾನಿಲಯದಲ್ಲಿ ಇತರ ಹಲವು ದೇಶಗಳ ವಿದ್ಯಾರ್ಥಿಗಳು ಸಹ ಅಧ್ಯಯನ ಮಾಡುತ್ತಾರೆ. ಹೀಗಾಗಿ, ಕಲಿಕೆಯ ಕೇಂದ್ರವಾಗಿ ಜೆ ಎನ್ ‌ಯು ಕೀರ್ತಿ ಭಾರತದ ಹೊರಗೂ ಹಬ್ಬಿದೆ ಎಂದರು.

ತನ್ನ ಪ್ರಗತಿಪರ ಕಟುವಟಿಕೆಗಳು ಮತ್ತು ಸಾಮಾಜಿಕ ಸಂವೇದನೆ, ಒಳಗೊಳ್ಳುವಿಕೆ ಮತ್ತು ಮಹಿಳಾ ಸಬಲೀಕರಣದ ವಿಷಯದಲ್ಲಿ ಅಪಾರ ಕೊಡುಗೆಗಳಿಗೆ ಜೆ ಎನ್ ‌ಯು ಹೆಸರುವಾಸಿಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

ಶಿಕ್ಷಣ ಮತ್ತು ಸಂಶೋಧನೆ, ರಾಜಕೀಯ, ನಾಗರಿಕ ಸೇವೆ, ರಾಜತಾಂತ್ರಿಕತೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯಂತಹ ವಿವಿಧ ಕ್ಷೇತ್ರಗಳಲ್ಲಿ ಜೆ ಎನ್ ‌ಯು ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗ ಪ್ರಭಾವಯುತ ಕೊಡುಗೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು. 2017 ರಿಂದ ನಿರಂತರವಾಗಿ ಜೆಎನ್‌ಯು 'ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ' ಅಡಿಯಲ್ಲಿ ದೇಶದ ವಿಶ್ವವಿದ್ಯಾಲಯಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಜೆ ಎನ್ ‌ಯು ನ ದೃಷ್ಟಿಕೋನ, ಧ್ಯೇಯ ಮತ್ತು ಉದ್ದೇಶಗಳನ್ನು ಅದರ ಸ್ಥಾಪನಾ ಶಾಸನದಲ್ಲಿ ವಿವರಿಸಲಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಈ ಮೂಲಭೂತ ಆದರ್ಶಗಳು ರಾಷ್ಟ್ರೀಯ ಏಕೀಕರಣ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವದ ಜೀವನ ವಿಧಾನ, ಅಂತರರಾಷ್ಟ್ರೀಯ ತಿಳುವಳಿಕೆ ಮತ್ತು ಸಮಾಜದ ಸಮಸ್ಯೆಗಳಿಗೆ ವೈಜ್ಞಾನಿಕ ನಿಲುವುಗಳನ್ನು ಒಳಗೊಂಡಿವೆ. ಈ ಮೂಲ ತತ್ವಗಳ ಅನುಸರಣೆಯಲ್ಲಿ ವಿಶ್ವವಿದ್ಯಾನಿಲಯ ಸಮುದಾಯವು ಆಚಲವಾಗಿರುವಂತೆ ಅವರು ಆಗ್ರಹಿಸಿದರು.

ವ್ಯಕ್ತಿತ್ವ ವಿಕಸನವೂ ಶಿಕ್ಷಣದ ಮುಖ್ಯ ಉದ್ದೇಶಗಳಲ್ಲಿ  ಒಂದು ಎಂದು ರಾಷ್ಟ್ರಪತಿ ಹೇಳಿದರು. ಪ್ರಸ್ತುತ ಹರಿವಿನೊಂದಿಗೆ ಸಾಗುವ ಭರದಲ್ಲಿ ವ್ಯಕ್ತಿತ್ವ ವಿಕಸನದ ಅಮೂಲ್ಯವಾದ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದ. ಯುವ ವಿದ್ಯಾರ್ಥಿಗಳು ಕುತೂಹಲ, ಪ್ರಶ್ನೆ ಕೇಳುವುದು ಮತ್ತು ತರ್ಕಬದ್ಧದ ಯೋಚನೆಯ  ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ಪ್ರವೃತ್ತಿಯನ್ನು ಪ್ರೋತ್ಸಾಹಿಸಬೇಕು. ಯುವ ಪೀಳಿಗೆಯ ಅವೈಜ್ಞಾನಿಕ ಸಾಂಪ್ರದಾಯಿಕ ಪರಿಕಲ್ಪನೆಯ ವಿರೋಧವನ್ನು ಸಹ ಪ್ರೋತ್ಸಾಹಿಸಬೇಕು. ವಿಚಾರಗಳ ಸ್ವೀಕಾರ ಅಥವಾ ಅಸ್ವೀಕಾರ ಚರ್ಚೆ ಮತ್ತು ಸಂವಾದವನ್ನು ಆಧರಿಸಿರಬೇಕು ಎಂದು ಕೂಡಾ ಅವರು ಹೇಳಿದರು. 

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಡೀ ವಿಶ್ವ ಸಮುದಾಯದ ಬಗ್ಗೆ ಚಿಂತಿಸಬೇಕು ಎಂದು ರಾಷ್ಟ್ರಪತಿ ಹೇಳಿದರು. ಹವಾಮಾನ ಬದಲಾವಣೆ, ಮಾಲಿನ್ಯ, ಯುದ್ಧ ಮತ್ತು ಅಶಾಂತಿ, ಭಯೋತ್ಪಾದನೆ, ಮಹಿಳೆಯರ ಅಭದ್ರತೆ ಮತ್ತು ಅಸಮಾನತೆಯಂತಹ ಅನೇಕ ಸಮಸ್ಯೆಗಳು ಮಾನವೀಯತೆಗೆ  ಸವಾಲೋಡ್ಡುತ್ತಿವೆ. ಪ್ರಾಚೀನ ಕಾಲದಿಂದ ಇಂದಿನವರೆಗೆ, ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳು ವ್ಯಕ್ತಿಗತ ಮತ್ತು ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿವೆ ಮತ್ತು ಸಮಾಜದ ಗುರಿಗಳನ್ನು ಸಾಧಿಸುವಲ್ಲಿ ಕೊಡುಗೆ ನೀಡಿವೆ. ಈ ವಿಷಯಗಳ ಕುರಿತು ಜಾಗ್ರತವಾಗಿದ್ದು  ಕ್ರಿಯಾಶೀಲರಾಗುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಎತ್ತಿಹಿಡಿಯುವಲ್ಲಿ, ಸಂವಿಧಾನದ ಮೌಲ್ಯಗಳನ್ನು ಕಾಪಾಡುವಲ್ಲಿ ಮತ್ತು ರಾಷ್ಟ್ರ ನಿರ್ಮಾಣದ ಗುರಿಗಳನ್ನು ಸಾಧಿಸುವಲ್ಲಿ ಜೆ ಎನ್ ಯು ನಂತಹ ವಿಶ್ವವಿದ್ಯಾಲಯಗಳು ಪರಿಣಾಮಕಾರಿಯಾಗಿ ಕೊಡುಗೆ ನೀಡುತ್ತವೆ ಎಂದು ರಾಷ್ಟ್ರಪತಿ ವಿಶ್ವಾಸ ವ್ಯಕ್ತಪಡಿಸಿದರು.

*****


(Release ID: 1905636)