ವಾರ್ತಾ ಮತ್ತು ಪ್ರಸಾರ ಸಚಿವಾಲಯ

8ನೇ ʻರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿʼ ಪ್ರದಾನ ಮಾಡಿದ ಕೇಂದ್ರ ಸಚಿವ ಡಾ.ಎಲ್.ಮುರುಗನ್


ಶ್ರೀಮತಿ ಸಿಪ್ರಾ ದಾಸ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ನಮ್ಮ ಛಾಯಾಗ್ರಾಹಕರು ನಮ್ಮ ಅನನ್ಯ ಸಾಂಸ್ಕೃತಿಕ ರಾಜಧಾನಿಯನ್ನು ಜಗತ್ತಿಗೆ ಪರಿಚಯಿಸಬಲ್ಲರು: ಡಾ.ಮುರುಗನ್

Posted On: 07 MAR 2023 1:54PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಅವರು ʻ8ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿʼ ಪ್ರದಾನ ಮಾಡಿದರು.

ರೂ.3,00,000 ನಗದು ಬಹುಮಾನ ಒಳಗೊಂಡ ಒಂದು ʻಜೀವಮಾನ ಸಾಧನೆ ಪ್ರಶಸ್ತಿʼ ಸೇರಿದಂತೆ ಒಟ್ಟು 13 ಪ್ರಶಸ್ತಿಗಳನ್ನು ನೀಡಲಾಯಿತು. ಕ್ರಮವಾಗಿ ರೂ.1,00,000 ಮತ್ತು ರೂ.75,000 ನಗದು ಬಹುಮಾನ ಒಳಗೊಂಡ ʻವರ್ಷದ ವೃತ್ತಿಪರ ಛಾಯಾಗ್ರಾಹಕʼ ಮತ್ತು ʻವರ್ಷದ ಹವ್ಯಾಸಿ ಛಾಯಾಗ್ರಾಹಕʼ ವಿಭಾಗದಲ್ಲಿ ತಲಾ ಒಂದು ಪ್ರಶಸ್ತಿ; ʻವೃತ್ತಿಪರʼ ಮತ್ತು ʻಹವ್ಯಾಸಿʼ ವಿಭಾಗಗಳೆರಡರಲ್ಲೂ ಕ್ರಮವಾಗಿ ತಲಾ ರೂ.50,000/- ಮತ್ತು ರೂ.30,000/- ನಗದು ಬಹುಮಾನ ಒಳಗೊಂಡ 5 ʻವಿಶೇಷ ಉಲ್ಲೇಖ ಪ್ರಶಸ್ತಿʼಗಳು ಇದರಲ್ಲಿ ಸೇರಿವೆ.

 

 ಶ್ರೀಮತಿ ಸಿಪ್ರಾ ದಾಸ್ ಅವರಿಗೆ ʻಜೀವಮಾನ ಸಾಧನೆ ಪ್ರಶಸ್ತಿʼಯನ್ನು ನೀಡಲಾಯಿತು. ಶ್ರೀ ಶಶಿ ಕುಮಾರ್ ರಾಮಚಂದ್ರನ್ ಅವರಿಗೆ ʻವರ್ಷದ ವೃತ್ತಿಪರ ಛಾಯಾಗ್ರಾಹಕ ಪ್ರಶಸ್ತಿʼ ಮತ್ತು ಶ್ರೀ ಅರುಣ್ ಸಹಾ ಅವರಿಗೆ ʻವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿʼಯನ್ನು ನೀಡಲಾಯಿತು. ಇಂದು ನಡೆದ ಸಮಾರಂಭದಲ್ಲಿ ʻವೃತ್ತಿಪರʼ ಮತ್ತು ʻಹವ್ಯಾಸಿʼ ವಿಭಾಗದಲ್ಲಿ ತಲಾ 6 ಪ್ರಶಸ್ತಿಗಳು ಸೇರಿದಂತೆ ಒಟ್ಟು ಹದಿಮೂರು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. `ವೃತ್ತಿಪರ’ ವಿಭಾಗದ ವಿಷಯ "ಜೀವನ ಮತ್ತು ನೀರು"; `ಹವ್ಯಾಸಿ’ ವಿಭಾಗದ ವಿಷಯ "ಭಾರತದ ಸಾಂಸ್ಕೃತಿಕ ಪರಂಪರೆ" ಆಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮುರುಗನ್ ಅವರು ಎಲ್ಲಾ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ವಿಜೇತರು ವೈವಿಧ್ಯಮಯ ವೃತ್ತಿಪರ ಹಿನ್ನೆಲೆಯಿಂದ ಬಂದಿದ್ದರೂ, ಛಾಯಾಗ್ರಹಣದ ಬಗ್ಗೆ ಅವರ ಉತ್ಸಾಹವು ಅವರೆಲ್ಲರನ್ನೂ ಒಟ್ಟುಗೂಡಿಸಿದೆ ಎಂದು ಹೇಳಿದರು. ಈ ಪ್ರಶಸ್ತಿಗಳು ಈ ಛಾಯಾಗ್ರಾಹಕರ ಅಸಾಧಾರಣ ಪ್ರತಿಭೆ ಮತ್ತು ಅತ್ಯುತ್ತಮ ಸಾಮರ್ಥ್ಯಗಳನ್ನು ಗುರುತಿಸುತ್ತವೆ ಎಂದು ಅವರು ಹೇಳಿದರು.

ಛಾಯಾಗ್ರಹಣವು ಸಮಯ ಮತ್ತು ಸ್ಥಳವನ್ನು ಮೀರಿದ ಸಾರ್ವತ್ರಿಕ ದೃಶ್ಯ ಭಾಷೆಯಾಗಿದೆ. ಇದು ವರ್ತಮಾನವನ್ನು ದಾಖಲಿಸುವುದರ ಜೊತೆಗೆ ಗತವನ್ನು ನೋಡಲು ಕಿಂಡಿಯಾಗುತ್ತದೆ ಎಂದು ಸಚಿವರು ಬಣ್ಣಿಸಿದರು. ಛಾಯಾಚಿತ್ರಗಳು ಸುಳ್ಳು ಹೇಳುವುದಿಲ್ಲ, ಅವು ಸದಾ ಪ್ರತಿಯೊಂದು ಕ್ರಿಯೆ ಮತ್ತು ಭಾವನೆಯ ಸತ್ಯವನ್ನು ಹೇಳುತ್ತವೆ ಎಂದರು. ಸ್ವಾತಂತ್ರ್ಯ ಚಳವಳಿ ಮತ್ತು ಅದರ ನಾಯಕರನ್ನು ಅಮರಗೊಳಿಸುವಲ್ಲಿ ಛಾಯಾಚಿತ್ರಗಳು ನೀಡಿದ ಕೊಡುಗೆಯನ್ನು ಸಚಿವರು ಸ್ಮರಿಸಿದರು. ಇಂದು ನಾವು ʻಸ್ವಾಂತ್ರ್ಯದ ಅಮೃತ ಮಹೋತ್ಸವʼವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಈ ಛಾಯಾಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಛಾಯಾಗ್ರಾಹಕರನ್ನು ವೃತ್ತಿಯ ಬಗೆಗಿನ ಅವರ ಸಮರ್ಪಣೆಗಾಗಿ ಮತ್ತು ತಮ್ಮ ಕಥೆಗಳನ್ನು ಹೇಳಲು ಛಾಯಾಗ್ರಾಹಕರಲ್ಲಿರುವ ಸಹಜ ತುಡಿತವನ್ನು ಡಾ. ಮುರುಗನ್ ಅವರು ಶ್ಲಾಘಿಸಿದರು. ಛಾಯಾಗ್ರಾಹಕರು ಸತ್ಯಗಳು, ಅಂಕಿ-ಅಂಶಗಳು ಮತ್ತು ಹೇಳಿಕೆಗಳಿಗೆ ತೂಕವನ್ನು ನೀಡುವುದರ ಜೊತೆಗೆ ಸುಳ್ಳುಗಳು ಮತ್ತು ನಕಲಿಗಳ ಮುಖವಾಡಗಳನ್ನು ಕಳಚಬಲ್ಲರು ಎಂದು ಅವರು ಹೇಳಿದರು. ನಮ್ಮ ಅದ್ಭುತ ಛಾಯಾಗ್ರಾಹಕರು ನಮ್ಮ ಶ್ರೀಮಂತ ಮತ್ತು ಅನನ್ಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ನಮ್ಮ ಸಾಂಸ್ಕೃತಿಕ ರಾಜಧಾನಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಸಚಿವರು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗಣ್ಯರು ವಿಶೇಷ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, “ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿಗಳು ದೇಶದ ಛಾಯಾಗ್ರಾಹಕರು ಮಾಡಿದ ಅಪಾರ ಪ್ರಯತ್ನವನ್ನು ಪ್ರೋತ್ಸಾಹಿಸುವ ಪ್ರಯತ್ನವಾಗಿದೆ,” ಎಂದು ಹೇಳಿದರು. ಭವಿಷ್ಯದಲ್ಲಿ ಸರಕಾರದ ಪ್ರಮುಖ ಯೋಜನೆಗಳನ್ನು ಪ್ರಶಸ್ತಿಗಳ ವರ್ಗವಾಗಿ ಸೇರಿಸಬಹುದು ಎಂದು ಶ್ರೀ ಚಂದ್ರ ಅವರು ಶಿಫಾರಸು ಮಾಡಿದರು.

ʻಜೀವಮಾನ ಸಾಧನೆ ಪ್ರಶಸ್ತಿʼಗಾಗಿ ಒಟ್ಟು 9 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಜ್ಯೂರಿ ಸದಸ್ಯರ ಶಿಫಾರಸಿನ ಮೇರೆಗೆ 12 ಮಂದಿ ವಿವಿಧ ವಿಭಾಗಗಳಿಗೆ ನಾಮನಿರ್ದೇಶನಗೊಂಡರು ಎಂದು ಪ್ರಶಸ್ತಿಗಳ ಜ್ಯೂರಿ ಅಧ್ಯಕ್ಷ ಶ್ರೀ ವಿಜಯ್ ಕ್ರಾಂತಿ ಸಭಿಕರಿಗೆ ಮಾಹಿತಿ ನೀಡಿದರು. ವೃತ್ತಿಪರ ವಿಭಾಗಕ್ಕೆ ಒಟ್ಟು 4,535 ಚಿತ್ರಗಳೊಂದಿಗೆ 462 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 21 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ ಈ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಹವ್ಯಾಸಿ ವಿಭಾಗದಲ್ಲಿ, 24 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಂದ 6,838 ಚಿತ್ರಗಳೊಂದಿಗೆ 874 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

8ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿಗಳ ವಿಜೇತರು
ಜೀವಮಾನ ಸಾಧನೆ ಪ್ರಶಸ್ತಿ
ಶ್ರೀಮತಿ ಸಿಪ್ರಾ ದಾಸ್

ವರ್ಷದ ವೃತ್ತಿಪರ ಛಾಯಾಗ್ರಾಹಕ ಪ್ರಶಸ್ತಿ

ಶ್ರೀ ಶಶಿ ಕುಮಾರ್ ರಾಮಚಂದ್ರನ್

ವೃತ್ತಿಪರ ವಿಭಾಗದಲ್ಲಿ ವಿಶೇಷ ಉಲ್ಲೇಖ ಪ್ರಶಸ್ತಿಗಳು

ಶ್ರೀ ದೀಪಜ್ಯೋತಿ ಬಾನಿಕ್

ಶ್ರೀ ಮನೀಶ್ ಕುಮಾರ್ ಚೌಹಾಣ್

ಶ್ರೀ ಆರ್ ಎಸ್ ಗೋಪಕುಮಾರ್

ಶ್ರೀ ಸುದೀಪ್ತೋ ದಾಸ್

ಶ್ರೀ ಉಮೇಶ್ ಹರಿಶ್ಚಂದ್ರ ನಿಕ್ಕಂ


ವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿ

ಶ್ರೀ ಅರುಣ್ ಸಹಾ

ಹವ್ಯಾಸಿ ವಿಭಾಗದಲ್ಲಿ ವಿಶೇಷ ಉಲ್ಲೇಖ ಪ್ರಶಸ್ತಿಗಳು

ಶ್ರೀ ಸಿ ಎಸ್ ಶ್ರೀರಂಜ್

ಮೋಹಿತ್ ವಾಧ್ವಾನ್, ಡಾ.

ಶ್ರೀ ರವಿಶಂಕರ್ ಎಸ್ ಎಲ್

ಶ್ರೀ ಸುಭಾದೀಪ್ ಬೋಸ್

ಶ್ರೀ ತರುಣ್ ಅಡುರುಗಟ್ಲಾ

8ನೇ ʻರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿʼಗಳಿಗೆ ತೀರ್ಪುಗಾರರ ಮಂಡಳಿ ಸದಸ್ಯರು
 
ಶ್ರೀ ವಿಜಯ್ ಕ್ರಾಂತಿ, ಅಧ್ಯಕ್ಷರು

ಶ್ರೀ ಜಗದೀಶ್ ಯಾದವ್, ಸದಸ್ಯ

ಶ್ರೀ ಅಜಯ್ ಅಗರ್ವಾಲ್‌, ಸದಸ್ಯ

ಶ್ರೀ ಕೆ. ಮಾಧವನ್ ಪಿಳ್ಳೈ, ಸದಸ್ಯ

ಶ್ರೀಮತಿ ಆಶಿಮಾ ನಾರಾಯಣ್, ಸದಸ್ಯೆ, ಮತ್ತು

ಶ್ರೀ ಸಂಜೀವ್ ಮಿಶ್ರಾ, ಛಾಯಾಚಿತ್ರ ಅಧಿಕಾರಿ, ಫೋಟೋ ವಿಭಾಗ, ಸದಸ್ಯ ಕಾರ್ಯದರ್ಶಿ.

*****

 



(Release ID: 1904872) Visitor Counter : 141