ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
'ಮೂಲಸೌಕರ್ಯ ಮತ್ತು ಹೂಡಿಕೆ' ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ನಾಳೆ ಪ್ರಧಾನ ಮಂತ್ರಿ ಭಾಷಣ
ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ ಟಿಎಚ್) ನೇತೃತ್ವದಲ್ಲಿ ಹಾಗು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಸಹ-ನೇತೃತ್ವದಲ್ಲಿ ಆಯೋಜಿಸಲಾದ ವೆಬಿನಾರ್
ಭಾಗವಹಿಸುವ ಎಲ್ಲಾ ಮಧ್ಯಸ್ಥಗಾರರಿಗೆ ಬಜೆಟ್ ಘೋಷಣೆಗಳ ಬಗ್ಗೆ ಅಭಿಪ್ರಾಯಗಳು, ನಿರೀಕ್ಷಿತ ಫಲಿತಾಂಶಗಳು ಮತ್ತು ಅನುಷ್ಠಾನ ತಂತ್ರಗಳನ್ನು ಹಂಚಿಕೊಳ್ಳಲು ವೆಬಿನಾರ್ ಒಂದು ಅವಕಾಶವನ್ನು ಒದಗಿಸುತ್ತದೆ
ಲಾಜಿಸ್ಟಿಕ್ಸ್ (ಸಾರಿಗೆ) ದಕ್ಷತೆಯನ್ನು ಸುಧಾರಿಸುವುದು, ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹಾಗು ಹೂಡಿಕೆ ಅವಕಾಶಗಳು ಎಂಬ ಮೂರು ಉಪ ಶೀರ್ಷಿಕೆಗಳ ಅಡಿಯಲ್ಲಿ ಬಜೆಟ್ ಘೋಷಣೆಗಳ ನವೀನ ರೀತಿಯ ಅಳವಡಿಕೆಗಳನ್ನು ಸಚಿವಾಲಯಗಳು ವೆಬಿನಾರ್ ನಲ್ಲಿ ಪ್ರಸ್ತುತಪಡಿಸಲಿವೆ.
ಪ್ರಕಟಣಾ ದಿನಾಂಕ:
03 MAR 2023 4:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (4.03.2023) 'ಮೂಲಸೌಕರ್ಯ ಮತ್ತು ಹೂಡಿಕೆ' ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದು 2023-24ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಲೋಚನೆಗಳು, ಚಿಂತನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸುತ್ತಿರುವ 12 ವೆಬಿನಾರ್ ಗಳ ಸರಣಿಯ ಒಂದು ಭಾಗವಾಗಿದೆ.
ಕೇಂದ್ರ ಬಜೆಟ್ ಏಳು ಆದ್ಯತೆಗಳನ್ನು ಅಳವಡಿಸಿಕೊಂಡಿದೆ, ಅವು ಪರಸ್ಪರ ಪೂರಕವಾಗಿವೆ ಮತ್ತು ಅಮೃತ್ ಕಾಲ್ ಮೂಲಕ ದೇಶಕ್ಕೆ ಮಾರ್ಗದರ್ಶನ ನೀಡುವ 'ಸಪ್ತರ್ಷಿ'ಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಎಲ್ಲರನ್ನೂ ಒಳಗೊಂಡ ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯವರೆಗೆ ಸವಲತ್ತುಗಳನ್ನು ತಲುಪಿಸುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯವನ್ನು ಅನಾವರಣಗೊಳಿಸುವುದು, ಹಸಿರು ಬೆಳವಣಿಗೆ, ಯುವ ಶಕ್ತಿ ಮತ್ತು ಹಣಕಾಸು ವಲಯಗಳು ಸೇರಿವೆ.
'ಮೂಲಸೌಕರ್ಯ ಮತ್ತು ಹೂಡಿಕೆಗಳು' ಕುರಿತ ಬಜೆಟ್ ನಂತರದ ವೆಬಿನಾರ್ ಅನ್ನು ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂಒಆರ್ ಟಿ ಎಚ್)ದ ನೇತೃತ್ವದಲ್ಲಿ ಮತ್ತು ಕೈಗಾರಿಕೆ ಹಾಗು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಸಹ-ನೇತೃತ್ವದಲ್ಲಿ ಆಯೋಗಿಸಲಾಗಿದೆ. ಲಾಜಿಸ್ಟಿಕ್ಸ್ (ಸಾರಿಗೆ) ದಕ್ಷತೆಯನ್ನು ಸುಧಾರಿಸುವುದು, ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹಾಗು ಹೂಡಿಕೆ ಅವಕಾಶಗಳು ಎಂಬ ಮೂರು ಉಪ ಶೀರ್ಷಿಕೆಗಳ ಅಡಿಯಲ್ಲಿ ಚರ್ಚೆಗಳನ್ನು ವೆಬಿನಾರಿನಲ್ಲಿ ಆಯೋಜಿಸಲಾಗಿದೆ. .
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ರಸ್ತೆ, ಸಾರಿಗೆ ಹಾಗು ಹೆದ್ದಾರಿ ಸಚಿವ ಶ್ರೀ ನಿತಿನ್ ಜೈರಾಮ್ ಗಡ್ಕರಿ ಅವರು ವೆಬಿನಾರ್ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಲ್ಲದೆ, ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು, ಕೈಗಾರಿಕಾ ಸಂಘಗಳು, ಶಿಕ್ಷಣ ತಜ್ಞರು ಮತ್ತು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರು ಈ ವೆಬಿನಾರಿನಲ್ಲಿ ಭಾಗವಹಿಸುತ್ತಾರೆ ಮತ್ತು ಬಜೆಟ್ ಘೋಷಣೆಗಳ ಉತ್ತಮ ಅನುಷ್ಠಾನಕ್ಕಾಗಿ ಸಲಹೆಗಳ ಮೂಲಕ ಕೊಡುಗೆ ನೀಡುತ್ತಾರೆ. ಧ್ರುವ್ ಕೊಟಕ್ ( ಜೆಎಂ ಬಾಕ್ಸಿ ಗುಂಪಿನ ಎಂ.ಡಿ.) ಶ್ರೀ ಆರ್ ದಿನೇಶ್ (ಟಿವಿಎಸ್ ಲಾಜಿಸ್ಟಿಕ್ಸ್ ಎಂಡಿ, ಮತ್ತು ಸಿಐಐ ಅಧ್ಯಕ್ಷ) ಮತ್ತು ಶ್ರೀ ಶಶಿಧರ್ ಜಗದೀಶನ್ (, ಎಚ್.ಡಿ.ಎಫ್.ಸಿ. ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿ.ಇ.ಒ.) ಅವರು ವೆಬಿನಾರ್ ನಲ್ಲಿ ಮಾತನಾಡಲಿದ್ದಾರೆ.
ವೆಬಿನಾರ್ ಸಮಗ್ರ ಅಧಿವೇಶನವು ಗೌರವಾನ್ವಿತ ಪ್ರಧಾನ ಮಂತ್ರಿಯವರು ಭಾಷಣ ಮಾಡುವ ಉದ್ಘಾಟನಾ ಅಧಿವೇಶನದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಉಪ ಶೀರ್ಷಿಕೆಗಳ ಅಡಿಯಲ್ಲಿ ಪ್ರತ್ಯೇಕ ಅಧಿವೇಶನಗಳು ನಡೆಯುತ್ತವೆ. ಪ್ರಶ್ನೋತ್ತರ ಅಧಿವೇಶನವು ಭಾಗವಹಿಸುವವರಲ್ಲಿ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ.
ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುವುದು, ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹಾಗು ಹೂಡಿಕೆ ಅವಕಾಶಗಳು ಎಂಬ ಮೂರು ಉಪ ಶೀರ್ಷಿಕೆಯ ಅಡಿಯಲ್ಲಿ ಬಜೆಟ್ ಘೋಷಣೆಗಳ ನವೀನ ರೀತಿಯ ಅಳವಡಿಕೆಗಳನ್ನು ಸಚಿವಾಲಯಗಳು ಪ್ರಸ್ತುತಪಡಿಸಲಿವೆ. ಈ ವಿವಿಧ ಶೀರ್ಷಿಕೆಗಳಲ್ಲಿ ಚರ್ಚೆಯಾದ ವಿಚಾರಗಳನ್ನು ವೆಬಿನಾರ್ ನ ಕೊನೆಯ ಹಂತದಲ್ಲಿ ಪೂರ್ಣ ಅಧಿವೇಶನದಲ್ಲಿ ಪ್ರಸ್ತುತಪಡಿಸಲಾಗುವುದು. ಲಭಿಸಿದ ಮತ್ತು ಅಂಗೀಕರಿಸಿದ ಮಾಹಿತಿಗಳ ಆಧಾರದ ಮೇಲೆ, ಸಂಬಂಧಿತ ಸಚಿವಾಲಯಗಳು ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಕಾಲಮಿತಿಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತವೆ.
2023 ರ ಬಜೆಟ್ ನಂತರದ ಈ ವೆಬಿನಾರ್, ಭಾಗವಹಿಸುವ ಎಲ್ಲಾ ಮಧ್ಯಸ್ಥಗಾರರಿಗೆ ಬಜೆಟ್ ಘೋಷಣೆಗಳ ಬಗ್ಗೆ ಅಭಿಪ್ರಾಯಗಳು, ನಿರೀಕ್ಷಿತ ಫಲಿತಾಂಶಗಳು, ಅನುಷ್ಠಾನ ತಂತ್ರಗಳನ್ನು ಹಂಚಿಕೊಳ್ಳಲು ಒಂದು ಮಾರ್ಗವನ್ನು, ಅವಕಾಶವನ್ನು ಒದಗಿಸುತ್ತದೆ.
*****
(ಪ್ರಕಟಣೆ ಐ.ಡಿ.: 1904085)
ವಿಸಿಟರ್ ಕೌಂಟರ್ : 152