ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗುಜರಾತ್ ವಿಶ್ವವಿದ್ಯಾಲಯದ ಭಾರತೀಯ ಸುಸ್ಥಿರತೆ ಸಂಸ್ಥೆ ಆಯೋಜಿಸಿದ್ದ 'ಕಾಶ್ಮೀರ ಮಹೋತ್ಸವ'ವನ್ನುದ್ದೇಶಿಸಿ  ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಭಾಷಣ ಮಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಭಾರತವು ಶತಮಾನಗಳಿಂದ ಸಹಬಾಳ್ವೆಯ ಮೂಲಕ ಮುನ್ನಡೆಯುತ್ತಿದ್ದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈವಿಧ್ಯತೆಯಿಂದ ತುಂಬಿದ ದೇಶದಲ್ಲಿ ಸಹಬಾಳ್ವೆಯನ್ನು ಬಲಪಡಿಸಲು ಹಲವಾರು ಉಪಕ್ರಮಗಳ ಜೊತೆಗೆ 'ಏಕ ಭಾರತ ಶ್ರೇಷ್ಠ ಭಾರತ' ಎಂಬ ಮೂಲ ಮಂತ್ರವನ್ನು ನೀಡಿದ್ದಾರೆ

ಕಾಶ್ಮೀರದಲ್ಲಿ ಬಾಂಬ್ ಸ್ಫೋಟಗಳು, ಮುಷ್ಕರಗಳು ಮತ್ತು ಕಲ್ಲು ತೂರಾಟಗಳು ನಡೆಯುತ್ತಿದ್ದ ಕಾಲವಿತ್ತು, ಆದರೆ ಇಂದು ಶ್ರೀ ಮೋದಿಯವರ ನಾಯಕತ್ವದಲ್ಲಿ ತಂದ ಬದಲಾವಣೆಗಳಿಂದಾಗಿ, ಕಾಶ್ಮೀರದ ಯುವಕರು ತಮ್ಮ ಕೈಯಲ್ಲಿ ಪುಸ್ತಕಗಳು ಮತ್ತು ಲ್ಯಾಪ್ ಟಾಪ್ ಗಳನ್ನು ಹೊಂದಿದ್ದಾರೆ, ಅವರು ನವೋದ್ಯಮಗಳ ಬಗ್ಗೆ ಹೊಸ ಆಲೋಚನೆಯನ್ನು ಹೊಂದಿದ್ದು ವಿಶ್ವದ ಯುವಕರಿಗೆ ಸವಾಲು ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ

ಕೌಶಲ್ಯ ಭಾರತ,  ನವೋದ್ಯಮ ಭಾರತ ಮತ್ತು ಪಿಎಂ ಮುದ್ರಾದಂತಹ ಯೋಜನೆಗಳೊಂದಿಗೆ ದೇಶದ ಯುವಕರು ತಮ್ಮ ಬೌದ್ಧಿಕ ಸಾಮರ್ಥ್ಯ, ಶಕ್ತಿ ಮತ್ತು ಉತ್ಸಾಹವನ್ನು ರೂಪಿಸಿದಾಗ, ಭಾರತವು ವಿಶ್ವದ ಉನ್ನತ ಸ್ಥಾನವನ್ನು ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ಇಂದು, ನವೋದ್ಯಮ ಭಾರತ ಮೂಲಕ ಭಾರತದಲ್ಲಿ 70,000 ಕ್ಕೂ ಹೆಚ್ಚು ನವೋದ್ಯಮಗಳ ಪರಿಸರ ವ್ಯವಸ್ಥೆಯನ್ನು ರೂಪಿಸಲಾಗಿದೆ, ಅದರಲ್ಲಿ ಶೇ.44ರಷ್ಟು ನವೋದ್ಯಮಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ; ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕರು ಕಾಶ್ಮೀರಕ್ಕೆ ಹಿಂತಿರುಗಿದಾಗ, ಅವರು ಕಾಶ್ಮೀರದಲ್ಲಿಯೂ ನವೋದ್ಯಮ ಆಂದೋಲನವನ್ನು ಮುಂದುವರಿಸಬೇಕು

ಕಾಶ್ಮೀರವು ಅನೇಕ ಸಂಸ್ಕೃತಿಗಳು ಲೀನವಾಗಿರುವ ಕೇಂದ್ರವಾಗಿದೆ (ಮೆಲ್ಟಿಂಗ್ ಪಾಟ್) ಮತ್ತು ಭಾರತ ಮಾತೆಯ ಕಿರೀಟವಾಗಿದೆ, ಕಾಶ್ಮೀರದಲ್ಲಿ ನಡೆಯುತ್ತಿರುವ ಬದಲಾವಣೆಗಳು ಕಾಶ್ಮೀರದ ಮಕ್ಕಳಿಗೆ ಮತ್ತು ದೇಶದ ಇಡೀ ಯುವಕರಿಗೆ ಬಹಳ ಮುಖ್ಯವಾಗಿದೆ

ಕಳೆದ ವರ್ಷ ಸುಮಾರು 1.80 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅವರು ಕಾಶ್ಮೀರಿಯತ್ ಮತ್ತು ಕಾಶ್ಮೀರ ಸಂಸ್ಕೃತಿಯನ್ನು ತಿಳಿದು, ಉತ್ತಮ ಸಂದೇಶದೊಂದಿಗೆ ಮರಳಿದ್ದಾರೆ

ವಿಧಿ 370 ಮತ್ತು 35 ಎ ತೆಗೆದುಹಾಕಿದ ನಂತರ, ಕಾಶ್ಮೀರದಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವವು ತಳಮಟ್ಟಕ್ಕೆ ತಲುಪಿದೆ, ಇಂದು 30,000ಕ್ಕೂ ಹೆಚ್ಚು ಚುನಾಯಿತ ಜನ ಪ್ರತಿನಿಧಿಗಳು ಕಾಶ್ಮೀರದ ಪಂಚಾಯತ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ

ಗುಜರಾತ್ ವಿಶ್ವವಿದ್ಯಾಲಯವು ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ವಿಕ್ರಮ್ ಸಾರಾಭಾಯ್ ಮತ್ತು ಶ್ರೀ ನರೇಂದ್ರ ಮೋದಿ ಅವರ ವಿಶ್ವವಿದ್ಯಾಲಯವಾಗಿದೆ, ಈ ವಿಶ್ವವಿದ್ಯಾಲಯವು ರಾಷ್ಟ್ರ ನಿರ್ಮಾಣಕ್ಕೆ ಗಮನಾರ್ಹ ಕೊಡುಗೆ ನೀಡಿದ ಅನೇಕ ಮಹಾನ್ ವ್ಯಕ್ತಿತ್ವಗಳನ್ನು ರೂಪಿಸಿದೆ.

Posted On: 02 MAR 2023 7:15PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ವಿಶ್ವವಿದ್ಯಾಲಯದ ಭಾರತೀಯ ಸುಸ್ಥಿರತೆ ಸಂಸ್ಥೆ ಆಯೋಜಿಸಿದ್ದ ಕಾಶ್ಮೀರ ಮಹೋತ್ಸವವನ್ನುದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, ಭಾರತವು ಶತಮಾನಗಳಿಂದ ಸಹಬಾಳ್ವೆಯ ಮೂಲಕ ಮುನ್ನಡೆಯುತ್ತಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈವಿಧ್ಯತೆಯಿಂದ ತುಂಬಿದ ದೇಶದಲ್ಲಿ ಸಹಬಾಳ್ವೆಯನ್ನು ಬಲಪಡಿಸಲು ಹಲವಾರು ಉಪಕ್ರಮಗಳ ಜೊತೆಗೆ 'ಏಕ ಭಾರತ ಶ್ರೇಷ್ಠ ಭಾರತ'ದ ಮೂಲಮಂತ್ರವನ್ನು ನೀಡಿದ್ದಾರೆ ಎಂದು ಹೇಳಿದರು. ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು, ಪಾಕಪದ್ಧತಿಗಳು ಮತ್ತು ವೇಷಭೂಷಣಗಳು ನಮ್ಮ ಬಲವಾಗಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ, ಅದರಲ್ಲೂ ವಿಶೇಷವಾಗಿ ಯುವಕರಿಗೆ "ಏಕ ಭಾರತ ಶ್ರೇಷ್ಠ ಭಾರತ" ಪರಿಕಲ್ಪನೆಯನ್ನು ಜೀವನದ ಮಂತ್ರವಾಗಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ ಎಂದು ಶ್ರೀ ಶಾ ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಕಾಶ್ಮೀರವು ಅನೇಕ ಸಂಸ್ಕೃತಿಗಳು ಲೀನವಾದ ಕೇಂದ್ರ (ಮೆಲ್ಟಿಂಗ್ ಪಾಟ್) ಮತ್ತು ಭಾರತ ಮಾತೆಯ ಕಿರೀಟದ ರತ್ನವಾಗಿದೆ ಎಂದು ಹೇಳಿದರು. ಕಾಶ್ಮೀರದಲ್ಲಿ ಆಗುತ್ತಿರುವ ಬದಲಾವಣೆಗಳು ಕಾಶ್ಮೀರದ ಮಕ್ಕಳಿಗೆ ಮಾತ್ರವಲ್ಲ, ಇಡೀ ದೇಶದ ಯುವಕರಿಗೂ ಮುಖ್ಯವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಸುಮಾರು 1.80 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು, ಅವರು ಕಾಶ್ಮೀರಿಯತ್ ಮತ್ತು ಕಾಶ್ಮೀರ ಸಂಸ್ಕೃತಿಯನ್ನು ತಿಳಿದುಕೊಂಡು, ಉತ್ತಮ ಸಂದೇಶದೊಂದಿಗೆ ಹಿಂತಿರುಗಿದ್ದಾರೆ ಎಂದು ಶ್ರೀ ಶಾ ಹೇಳಿದರು. ಕಾಶ್ಮೀರದಲ್ಲಿ ಬಾಂಬ್ ಸ್ಫೋಟಗಳು, ಮುಷ್ಕರಗಳು ಮತ್ತು ಕಲ್ಲು ತೂರಾಟಗಳು ನಡೆಯುತ್ತಿದ್ದ ಕಾಲವಿತ್ತು, ಆದರೆ ಇಂದು ಶ್ರೀ ಮೋದಿಯವರ ನಾಯಕತ್ವದಲ್ಲಿ ತಂದ ಬದಲಾವಣೆಗಳಿಂದಾಗಿ, ಕಾಶ್ಮೀರದ ಯುವಕರು ತಮ್ಮ ಕೈಯಲ್ಲಿ ಪುಸ್ತಕಗಳು ಮತ್ತು ಲ್ಯಾಪ್ ಟಾಪ್ ಗಳನ್ನು ಹೊಂದಿದ್ದಾರೆ, ಅವರು ನವೋದ್ಯಮಗಳ ಬಗ್ಗೆ ಹೊಸ ಆಲೋಚನೆಯನ್ನು ಹೊಂದಿದ್ದಾರೆ ಮತ್ತು ವಿಶ್ವದ ಯುವಕರಿಗೆ ಸವಾಲು ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಕಾಶ್ಮೀರದಿಂದ ವಿಧಿ 370 ಮತ್ತು 35 ಎ ತೆಗೆದುಹಾಕಿದ ನಂತರ, ಮೊದಲ ಬಾರಿಗೆ ಪ್ರಜಾಪ್ರಭುತ್ವವು ತಳಮಟ್ಟವನ್ನು ತಲುಪಿದೆ ಎಂದು ಶ್ರೀ ಶಾ ಹೇಳಿದರು.  ಇಂದು ಕಾಶ್ಮೀರದ ಪಂಚಾಯತ್ ವ್ಯವಸ್ಥೆಯಲ್ಲಿ 30,000ಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂದ ಈ ಬದಲಾವಣೆಗಳಿಂದ ಇಡೀ ರಾಷ್ಟ್ರವು ಸಂತಸಗೊಂಡಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ಪ್ರತಿಯೊಂದು ಹಳ್ಳಿಯನ್ನು ಅಭಿವೃದ್ಧಿ ವ್ಯವಸ್ಥೆಯೊಂದಿಗೆ ಮತ್ತು ಕಡುಬಡವರನ್ನು ಆರ್ಥಿಕತೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗುಜರಾತ್ ವಿಶ್ವವಿದ್ಯಾಲಯವು ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ವಿಕ್ರಮ್ ಸಾರಾಭಾಯಿ ಮತ್ತು ಶ್ರೀ ನರೇಂದ್ರ ಮೋದಿ ಅವರ ವಿಶ್ವವಿದ್ಯಾಲಯವಾಗಿದ್ದು, ಈ ವಿಶ್ವವಿದ್ಯಾಲಯವು ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ ಅನೇಕ ಮಹಾನ್ ವ್ಯಕ್ತಿಗಳನ್ನು ರೂಪಿಸಿದೆ ಎಂದರು. ದೇಶದ ಮೊದಲ ನಾವೀನ್ಯತೆ ಉದ್ಯಾನವನ್ನು ಗುಜರಾತ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು ಮತ್ತು ಪ್ರಸ್ತುತ ಇದು 300 ಕ್ಕೂ ಹೆಚ್ಚು ನವೋದ್ಯಮಗಳಿಗೆ ಬೆಂಬಲವಾಗಿದೆ. ಗುಜರಾತ್ ನ ಅಮುಲ್ ಸಹಕಾರಿ ಸಂಘವು 28 ಲಕ್ಷಕ್ಕೂ ಹೆಚ್ಚು ಮಹಿಳೆಯರ ಪರಿಶ್ರಮದಿಂದ ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ವಾರ್ಷಿಕ ವಹಿವಾಟು 60,000 ಕೋಟಿ ರೂ. ಆಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮುಂದಿನ ಮೂರು ವರ್ಷಗಳಲ್ಲಿ ದೇಶದ ಎರಡು ಲಕ್ಷ ಪಂಚಾಯಿತಿಗಳಲ್ಲಿ ಬಹು ಆಯಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ರಚಿಸಲು ನಿರ್ಧರಿಸಿದೆ, ಇದು ಪಂಚಾಯತ್ ಗಳಿಗೆ ಗ್ರಾಮೀಣಾಭಿವೃದ್ಧಿಯ ಹೊಸ ಆಯಾಮಗಳನ್ನು ನೀಡುತ್ತದೆ ಎಂದರು. ಈ ವಿವಿಧೋದ್ದೇಶ ಪಿಎಸಿಎಸ್ ಗಳನ್ನು ತಳಮಟ್ಟದಲ್ಲಿ ಸ್ಥಾಪಿಸಲು ಸಹಕಾರ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ಶ್ರಮಿಸುತ್ತಿದೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ ಯುವಕರಿಗೆ ಹಲವು ವೇದಿಕೆಗಳನ್ನು ಒದಗಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 'ಸ್ಕಿಲ್ ಇಂಡಿಯಾ' ಅಂತಹ ಒಂದು ವೇದಿಕೆಯಾಗಿದ್ದು, ಇದು ಯುವಕರೊಳಗಿನ ಶಕ್ತಿ ಮತ್ತು ಪ್ರತಿಭೆಗೆ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಅನೇಕ ಹೊಸ ಐಟಿಐಗಳಲ್ಲಿ 4000 ಸೀಟುಗಳನ್ನು ಸೃಷ್ಟಿಸಲಾಗಿದೆ, 15,000 ಐಟಿಐಗಳಲ್ಲಿ 126 ವಿಭಾಗಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು. 'ಸ್ಟಾರ್ಟ್ ಅಪ್ ಇಂಡಿಯಾ' – ನವೋದ್ಯಮ ಭಾರತ ಕೂಡ ಅಂತಹ ಒಂದು ಉಪಕ್ರಮವಾಗಿದ್ದು, ಇದರ ಅಡಿಯಲ್ಲಿ 70,000ಕ್ಕೂ ಹೆಚ್ಚು ನವೋದ್ಯಮಗಳು ತಮ್ಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿವೆ, ಆದರೆ 2016ರಲ್ಲಿ ಅವುಗಳ ಸಂಖ್ಯೆ ಕೇವಲ 724 ಆಗಿತ್ತು ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ನವೋದ್ಯಮ ಭಾರತ' ಯೋಜನೆಯನ್ನು ಪ್ರಾರಂಭಿಸಿದ ನಂತರ, 70,000ಕ್ಕೂ ಹೆಚ್ಚು ನವೋದ್ಯಮಗಳು ರೂಪುಗೊಂಡಿವೆ ಮತ್ತು ಈ ನವೋದ್ಯಮಗಳಲ್ಲಿ ಶೇ.44ರಷ್ಟನ್ನು ಹೆಣ್ಣು ಮಕ್ಕಳು ಮತ್ತು ಮಹಿಳೆಯರು ನಡೆಸುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇದಲ್ಲದೆ, 100 ಕ್ಕೂ ಹೆಚ್ಚು ನವೋದ್ಯಮಗಳು ಯುನಿಕಾರ್ನ್ ಕ್ಲಬ್ ಗೆ ಸೇರಿಕೊಂಡಿವೆ ಮತ್ತು ಶೇ.45ರಷ್ಟು ನವೋದ್ಯಮಗಳು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿವೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಕಾಶ್ಮೀರದಲ್ಲಿಯೂ ನವೋದ್ಯಮ ಆಂದೋಲನವನ್ನು ಮುಂದುವರಿಸುವಂತೆ ಯುವಕರಿಗೆ ಕರೆ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಇದರ ಪರಿಣಾಮವಾಗಿ 2022 ರ ಆರ್ಥಿಕ ವರ್ಷದಲ್ಲಿ ಭಾರತದ ಸರಕು ರಫ್ತು 400 ಕೋಟಿ ಡಾಲರ್ ದಾಟಿದೆ ಎಂದು ಅವರು ಹೇಳಿದರು. ಪಿಎಲ್ಐ ಯೋಜನೆಯಡಿ 12 ವಲಯಗಳಲ್ಲಿ 3 ಲಕ್ಷ ಕೋಟಿ ರೂ.ಗಳ ಹೊಸ ಹೂಡಿಕೆ ಬಂದಿದೆ ಎಂದು ಅವರು ಹೇಳಿದರು. ಭಾರತದ ಯುವಕರಿಗೆ 'ಪೇಟೆಂಟ್ ನೋಂದಣಿ'ಗಾಗಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. 2013-14ರಲ್ಲಿ ಭಾರತದಿಂದ ಕೇವಲ 3000 ಅರ್ಜಿಗಳು ಬಂದಿದ್ದವು, ಆದರೆ ಇಂದು ಭಾರತದಿಂದ ವಾರ್ಷಿಕವಾಗಿ 24,000 ಅರ್ಜಿಗಳು ಬರುತ್ತಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಯುವಕರಿಗಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆ, ಡಿಜಿಟಲ್ ಇಂಡಿಯಾ ಅಭಿಯಾನ, ಫಿಟ್ ಇಂಡಿಯಾ, ಖೇಲೋ ಇಂಡಿಯಾದಂತಹ ಹಲವು ಯೋಜನೆಗಳನ್ನು ಆರಂಭಿಸಿದ್ದಾರೆ ಎಂದರು.

ಇದು 'ಆಜಾದಿ ಕಾ ಅಮೃತ ಮಹೋತ್ಸವ'ದ ವರ್ಷವಾಗಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರಿಂದ 2047 ರವರೆಗಿನ 25 ವರ್ಷಗಳನ್ನು 'ಅಮೃತ ಕಾಲ' ಎಂದು ಬಣ್ಣಿಸಿದ್ದಾರೆ. ಈ 'ಅಮೃತ ಕಾಲ'ದಲ್ಲಿ, ಸ್ವಾತಂತ್ರ್ಯದ ಶತಮಾನೋತ್ಸವದ ಸಮಯದಲ್ಲಿ, ಭಾರತವು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಥಮ ಸ್ಥಾನದಲ್ಲಿರುವಂತೆ ಮಾಡುವ ಪ್ರತಿಜ್ಞೆಯನ್ನು ನಾವು ಮಾಡಬೇಕು. ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ), ನವೋದ್ಯಮ ಭಾರತ (ಸ್ಟಾರ್ಟ್ ಅಪ್ ಇಂಡಿಯಾ) ಮತ್ತು ಪಿಎಂ ಮುದ್ರಾದಂತಹ ಯೋಜನೆಗಳೊಂದಿಗೆ ದೇಶದ ಯುವಕರು ತಮ್ಮ ಬೌದ್ಧಿಕ ಸಾಮರ್ಥ್ಯ, ಶಕ್ತಿ ಮತ್ತು ಉತ್ಸಾಹವನ್ನು ರೂಪಿಸಿದಾಗ, ಭಾರತವು ವಿಶ್ವದ ಉನ್ನತ ಸ್ಥಾನವನ್ನು ತಲುಪುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

***


(Release ID: 1903929) Visitor Counter : 161