ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೌಶಲ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯುವ ಶಕ್ತಿಯ ಬಳಕೆ ಕುರಿತ ಬಜೆಟ್ ನಂತರದ ವೆಬಿನಾರ್‌ನಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 25 FEB 2023 11:16AM by PIB Bengaluru

ಸ್ನೇಹಿತರೆ,

'ಅಮೃತ ಕಾಲ'ದ ಈ ಯುಗದಲ್ಲಿ ಕೌಶಲ್ಯ ಮತ್ತು ಶಿಕ್ಷಣ ದೇಶಕ್ಕೆ 2 ಪ್ರಮುಖ ಸಾಧನಗಳಾಗಿವೆ. ನಮ್ಮ ಯುವಕರು ಅಭಿವೃದ್ಧಿ ಹೊಂದಿದ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಅಮೃತ ಯಾತ್ರೆ ಮುನ್ನಡೆಸುತ್ತಿದ್ದಾರೆ. ಹಾಗಾಗಿ 'ಅಮೃತ ಕಾಲ'ದ ಮೊದಲ ಬಜೆಟ್‌ನಲ್ಲಿ ಯುವಕರು ಮತ್ತು ಅವರ ಉಜ್ವಲ ಭವಿಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಬಜೆಟ್ ನಮ್ಮ ಶಿಕ್ಷಣ ವ್ಯವಸ್ಥೆಯು ಪ್ರಾಯೋಗಿಕ ಮತ್ತು ಉದ್ಯಮ ಆಧಾರಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಭದ್ರ ಬುನಾದಿ ಬಲಪಡಿಸುತ್ತಿದೆ. ಹಲವಾರು ವರ್ಷಗಳಿಂದ ನಮ್ಮ ಶಿಕ್ಷಣ ಕ್ಷೇತ್ರ ಗಟ್ಟಿತದಿಂದ ಹೊರತಾಗಿದೆ. ಈ ಸನ್ನಿವೇಶವನ್ನು ಬದಲಾಯಿಸಲು ನಾವು ಪ್ರಯತ್ನಿಸಿದ್ದೇವೆ. ನಾವು ಯುವಕರ ಯೋಗ್ಯತೆ ಮತ್ತು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯವನ್ನು ಮರುನಿರ್ದೇಶಿಸಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕೆ ಮತ್ತು ಕೌಶಲ್ಯ ಎರಡಕ್ಕೂ ಸಮಾನ ಒತ್ತು ನೀಡಿದೆ. ಈ ಪ್ರಯತ್ನದಲ್ಲಿ ನಮಗೆ ಶಿಕ್ಷಕರಿಂದ ಹೆಚ್ಚಿನ ಬೆಂಬಲ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ನಮ್ಮ ಮಕ್ಕಳನ್ನು ಹಿಂದಿನ ಹೊರೆಯಿಂದ ಮುಕ್ತಗೊಳಿಸಲು ನಮಗೆ ಹೆಚ್ಚಿನ ಧೈರ್ಯ ನೀಡಿದೆ. ಇದು ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕೈಗೊಳ್ಳಲು ಸರ್ಕಾರವನ್ನು ಉತ್ತೇಜಿಸಿದೆ.

ಸ್ನೇಹಿತರೆ,

ಹೊಸ ತಂತ್ರಜ್ಞಾನವು ಮಕ್ಕಳಿಗೆ ಹೊಸ ರೀತಿಯ ತರಗತಿಗಳನ್ನು ಸೃಜಿಸಲು ಸಹಾಯ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ನಾವು ಸಹ ಇದನ್ನು ಅನುಭವಿಸಿದ್ದೇವೆ. ಅದಕ್ಕಾಗಿಯೇ ಇಂದು ಸರ್ಕಾರವು ಅಂತಹ ಸಾಧನಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ, ಅದರ ಮೂಲಕ 'ಎಲ್ಲಿಯಾದರೂ ಜ್ಞಾನದ ಪ್ರವೇಶ' ಖಾತ್ರಿಪಡಿಸಬಹುದು. ಇಂದು ನಮ್ಮ ಇ-ಕಲಿಕಾ ವೇದಿಕೆ ‘ಸ್ವಯಂ’ 3 ಕೋಟಿ ಸದಸ್ಯರನ್ನು ಹೊಂದಿದೆ. ವರ್ಚುವಲ್ ಪ್ರಯೋಗಾಲಯಗಳು ಮತ್ತು ನ್ಯಾಷನಲ್ ಡಿಜಿಟಲ್ ಲೈಬ್ರರಿ ಜ್ಞಾನದ ದೊಡ್ಡ ಮೂಲವಾಗುವ ಸಾಧ್ಯತೆಯಿದೆ. ಡಿಟಿಎಚ್ ಚಾನೆಲ್‌ಗಳ ಮೂಲಕ ವಿದ್ಯಾರ್ಥಿಗಳು ಸ್ಥಳೀಯ ಭಾಷೆಗಳಲ್ಲಿ ಕಲಿಯುವ ಅವಕಾಶ ಪಡೆಯುತ್ತಿದ್ದಾರೆ. ಇಂದು ದೇಶದಲ್ಲಿ ಇಂತಹ ಅನೇಕ ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಉಪಕ್ರಮಗಳು ನಡೆಯುತ್ತಿವೆ. ಈ ಎಲ್ಲಾ ಉಪಕ್ರಮಗಳು ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯದೊಂದಿಗೆ ಮತ್ತಷ್ಟು ಉತ್ತೇಜನ ಪಡೆಯುತ್ತವೆ. ಇಂತಹ ಭವಿಷ್ಯದ ಹೆಜ್ಜೆಗಳು ನಮ್ಮ ಶಿಕ್ಷಣ, ನಮ್ಮ ಕೌಶಲ್ಯ ಮತ್ತು ನಮ್ಮ ಜ್ಞಾನದ ಸಂಪೂರ್ಣ ಜಾಗವನ್ನು ಬದಲಾಯಿಸಲಿವೆ. ಈಗ ನಮ್ಮ ಶಿಕ್ಷಕರ ಪಾತ್ರ ಕೇವಲ ತರಗತಿಗೆ ಸೀಮಿತವಾಗುವುದಿಲ್ಲ. ಈಗ ಇಡೀ ದೇಶ, ಇಡೀ ಜಗತ್ತು ನಮ್ಮ ಶಿಕ್ಷಕರಿಗೆ ತರಗತಿಯಂತಾಗುತ್ತದೆ. ಇದು ಶಿಕ್ಷಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ. ವಿವಿಧ ರೀತಿಯ ಬೋಧನಾ ಸಾಮಗ್ರಿಗಳು, ವಿವಿಧ ರೀತಿಯ ವೈಶಿಷ್ಟ್ಯಗಳು, ಸ್ಥಳೀಯ ಸ್ಪರ್ಶ ಮತ್ತು ಅಂತಹ ಅನೇಕ ವಿಷಯಗಳು ನಮ್ಮ ಶಿಕ್ಷಣ ಸಂಸ್ಥೆಗಳಿಗೆ ದೇಶಾದ್ಯಂತ ಲಭ್ಯವಾಗಲಿವೆ. ಮುಖ್ಯವಾಗಿ, ಇದು ಹಳ್ಳಿ ಮತ್ತು ನಗರ ಶಾಲೆಗಳ ನಡುವಿನ ಕಂದಕವನ್ನು ತೆಗೆದುಹಾಕುತ್ತದೆ. ಜತೆಗೆ, ಎಲ್ಲರಿಗೂ ಸಮಾನ ಅವಕಾಶಗಳು ಸಿಗಲಿವೆ.

ಸ್ನೇಹಿತರೆ,

ಅನೇಕ ದೇಶಗಳು ವರ್ಷದಿಂದ ವರ್ಷಕ್ಕೆ 'ಉದ್ಯೋಗದಲ್ಲಿ' ಕಲಿಕೆಗೆ ವಿಶೇಷ ಒತ್ತು ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ಕೇಂದ್ರ ಸರ್ಕಾರವು ಯುವಕರಿಗೆ 'ತರಗತಿಯ ಹೊರಗೆ ಮಾನ್ಯತೆ' ನೀಡಲು ಇಂಟರ್ನ್‌ಶಿಪ್ ಮತ್ತು ಅಪ್ರೆಂಟಿಸ್‌ಶಿಪ್‌ಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಇಂದು ರಾಷ್ಟ್ರೀಯ ಇಂಟರ್ನ್‌ಶಿಪ್ ಪೋರ್ಟಲ್‌ನಲ್ಲಿ ಸುಮಾರು 75 ಸಾವಿರ ಉದ್ಯೋಗದಾತರು ಇದ್ದಾರೆ. ಅವರು ಇಂಟರ್ನ್‌ಶಿಪ್‌ಗಾಗಿ ಸುಮಾರು 25 ಲಕ್ಷ ಉದ್ಯೋಗಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಿಂದ ನಮ್ಮ ಯುವಜನತೆ ಹಾಗೂ ಉದ್ಯಮಕ್ಕೆ ಸಾಕಷ್ಟು ಅನುಕೂಲವಾಗುತ್ತಿದೆ. ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳು ಈ ಪೋರ್ಟಲ್ ಅನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ. ನಾವು ದೇಶದಲ್ಲಿ ಇಂಟರ್ನ್‌ಶಿಪ್ ಸಂಸ್ಕೃತಿಯನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ.

ಸ್ನೇಹಿತರೆ,

ನಮ್ಮ ಯುವಕರ ಭವಿಷ್ಯವನ್ನು ಸಿದ್ಧಗೊಳಿಸಲು ಶಿಷ್ಯವೃತ್ತಿಗಳು ಸಹಾಯ ಮಾಡುತ್ತವೆ ಎಂದು ನಾನು ನಂಬುತ್ತೇನೆ. ನಾವು ಭಾರತದಲ್ಲಿ ಅಪ್ರೆಂಟಿಸ್‌ಶಿಪ್‌ಗಳನ್ನು ಸಹ ಉತ್ತೇಜಿಸುತ್ತಿದ್ದೇವೆ. ಇದು ನಮ್ಮ ಉದ್ಯಮಕ್ಕೆ ಸರಿಯಾದ ಕೌಶಲ್ಯದೊಂದಿಗೆ ಉದ್ಯೋಗಿಗಳನ್ನು ಗುರುತಿಸಲು ಸುಲಭವಾಗುತ್ತದೆ. ಆದ್ದರಿಂದ ಈ ಬಾರಿಯ ಬಜೆಟ್‌ನಲ್ಲಿ ಸುಮಾರು 50 ಲಕ್ಷ ಯುವಕ, ಯುವತಿಯರಿಗೆ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನ ಯೋಜನೆಯಡಿ ವಿದ್ಯಾರ್ಥಿವೇತನ ಒದಗಿಸಲಾಗಿದೆ. ಅಂದರೆ, ನಾವು ಶಿಷ್ಯವೃತ್ತಿಗಾಗಿ ಪೂರಕ ವಾತಾವರಣ ಸೃಷ್ಟಿಸುತ್ತಿದ್ದೇವೆ. ಜತೆಗೆ, ಪಾವತಿಗಳಲ್ಲಿ ಉದ್ಯಮಕ್ಕೆ ಸಹಾಯ ಮಾಡುತ್ತಿದ್ದೇವೆ. ಉದ್ಯಮವು ಅದರ ಸಂಪೂರ್ಣ ಲಾಭ ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೆ,

ಇಂದು ಜಗತ್ತು ಭಾರತವನ್ನು ಉತ್ಪಾದನಾ ಅಥವಾ ತಯಾರಿಕಾ ತಾಣವನ್ನಾಗಿ ನೋಡುತ್ತಿದೆ. ಅದಕ್ಕಾಗಿಯೇ ಇಂದು ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ವಿಶ್ವದಲ್ಲಿ ಅತ್ಯಂತ ಉತ್ಸಾಹವಿದೆ. ಅಂತಹ ಪರಿಸ್ಥಿತಿಯಲ್ಲಿ, ನುರಿತ ಉದ್ಯೋಗಿ ಇಂದು ಬಹಳ ಉಪಯುಕ್ತವಾಗಿದೆ. ಆದ್ದರಿಂದ, ಈ ಬಜೆಟ್‌ನಲ್ಲಿ, ನಾವು ಕೌಶಲ್ಯದ ಮೇಲೆ ಹಿಂದಿನ ವರ್ಷಗಳ ಗಮನವನ್ನು ಮುಂದಕ್ಕೆ ಕೊಂಡೊಯ್ದಿದ್ದೇವೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಮುಂಬರುವ ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ, ಮರುಕೌಶಲ್ಯ ಮತ್ತು ಕೌಶಲ್ಯ ವರ್ಧನೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಯ ಮೂಲಕ, ಬುಡಕಟ್ಟು, ವಿಶೇಷಚೇತನರು ಮತ್ತು ಮಹಿಳೆಯರ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಲ್ಲದೆ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಐಒಟಿ(ಇಂಟರ್ನೆಟ್ ಆಫ್ ಥಿಂಗ್ಸ್), ಡ್ರೋನ್‌ಗಳಂತಹ ಉದ್ಯಮ 4.0 ಅಡಿ, ವಿವಿಧ ಕ್ಷೇತ್ರಗಳಿಗೆ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಭಾರತದಲ್ಲಿ ಉದ್ಯಮ ಆರಂಭಿಸಲು ಸುಲಭವಾಗುತ್ತದೆ. ಭಾರತದಲ್ಲಿ ಹೂಡಿಕೆದಾರರು ಮರು-ಕೌಶಲ್ಯಕ್ಕಾಗಿ ಹೆಚ್ಚಿನ ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸಬೇಕಾಗಿಲ್ಲ. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್ ಯೋಜನೆಯನ್ನ ಸಹ ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರೊಂದಿಗೆ ನಮ್ಮ ಸಾಂಪ್ರದಾಯಿಕ ಕುಶಲಕರ್ಮಿಗಳು, ಕಸೂತಿದಾರರು ಮತ್ತು ಕಲಾವಿದರ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಈ ಕುಶಲಕರ್ಮಿಗಳಿಗೆ ಹೊಸ ಮಾರುಕಟ್ಟೆ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಅವರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲಿದ್ದಾರೆ.

ಸ್ನೇಹಿತರೆ,

ಭಾರತದ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ ಬದಲಾವಣೆಗಳನ್ನು ತರುವಲ್ಲಿ ಶೈಕ್ಷಣಿಕ ಮತ್ತು ಉದ್ಯಮದ ಪಾತ್ರ ಮತ್ತು ಪಾಲುದಾರಿಕೆ ದೊಡ್ಡದಾಗಿದೆ. ಇದರೊಂದಿಗೆ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಸಂಶೋಧನೆ ಸಾಧ್ಯವಾಗಲಿದ್ದು, ಸಂಶೋಧನೆಗೆ ಉದ್ಯಮದಿಂದ ಸಾಕಷ್ಟು ಹಣವೂ ಲಭ್ಯವಾಗಲಿದೆ. ಈ ಬಜೆಟ್‌ನಲ್ಲಿ ಉಲ್ಲೇಖಿಸಲಾದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ 3 ಶ್ರೇಷ್ಠತಾ ಕೇಂದ್ರಗಳಲ್ಲಿ ಉದ್ಯಮ-ಶೈಕ್ಷಣಿಕ ವಲಯದ ಪಾಲುದಾರಿಕೆ ಬಲಪಡಿಸಲಾಗುವುದು. ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ತಂಡಗಳಿಗೆ ಐಸಿಎಂಆರ್ ಪ್ರಯೋಗಾಲಯಗಳು ಲಭ್ಯವಾಗುವಂತೆ ಮಾಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆ ಬಲಪಡಿಸಲು ಖಾಸಗಿ ವಲಯವು ಅಂತಹ ಪ್ರತಿಯೊಂದು ಹೆಜ್ಜೆಯ ಗರಿಷ್ಠ ಪ್ರಯೋಜನ ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೆ,

ನಮ್ಮ ‘ಸರ್ಕಾರದ ಪರಿಪೂರ್ಣ ಕಾರ್ಯವಿಧಾನ’ವು ಬಜೆಟ್‌ನಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಸ್ಪಷ್ಟವಾಗಿದೆ. ನಮಗೆ, ಶಿಕ್ಷಣ ಮತ್ತು ‘ಕೌಶಲ್ಯ’ ಕೇವಲ ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಗೆ ಸೀಮಿತವಾಗಿಲ್ಲ. ಪ್ರತಿಯೊಂದು ವಲಯದಲ್ಲೂ ಅದಕ್ಕೆ ಅಪಾರ ಸಾಧ್ಯತೆಗಳಿವೆ. ನಮ್ಮ ಆರ್ಥಿಕತೆಯ ಹೆಚ್ಚುತ್ತಿರುವ ಗಾತ್ರದೊಂದಿಗೆ ಈ ವಲಯಗಳು ಸಹ ವಿಸ್ತರಿಸುತ್ತಿವೆ. ಕೌಶಲ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪಾಲುದಾರರಿಗೆ ವಿವಿಧ ಕ್ಷೇತ್ರಗಳಲ್ಲಿ ಬರುತ್ತಿರುವ ಈ ಅವಕಾಶಗಳನ್ನು ಅಧ್ಯಯನ ಮಾಡಲು ನಾನು ಒತ್ತಾಯಿಸುತ್ತೇನೆ. ಈ ಹೊಸ ವಲಯಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ಸೃಜಿಸಲು ಇದು ನಮಗೆ ಸಹಾಯ ಮಾಡುತ್ತದೆ. ಈಗ ನೀವು ವೇಗವಾಗಿ ಬೆಳೆಯುತ್ತಿರುವ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ವೀಕ್ಷಿಸುತ್ತಿರುವಾಗ ಮತ್ತು ಆಲಿಸುತ್ತಿರುವಾಗ, ಭಾರತದ ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮವು ಎಷ್ಟು ವಿಸ್ತರಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಇವು ಉದ್ಯೋಗದ ದೊಡ್ಡ ಮೂಲಗಳಾಗಿವೆ. ಆದ್ದರಿಂದ, ನಮ್ಮ ಕೌಶಲ್ಯ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳು ಅದಕ್ಕಾಗಿ ಮಾನವ ಶಕ್ತಿಯ ಸಾಮರ್ಥ್ಯ ಅಭಿವೃದ್ಧಿಪಡಿಸಬೇಕಾಗಿದೆ. 'ಸ್ಕಿಲ್ ಇಂಡಿಯಾ ಮಿಷನ್' ಅಡಿ ತರಬೇತಿ ಪಡೆದ ಯುವಕರ ನವೀಕೃತ ಡೇಟಾಬೇಸ್ ಸಿದ್ಧಪಡಿಸಲು ನಾವು ಬಯಸುತ್ತೇವೆ. ಏಕೆಂದರೆ, ಅನೇಕ ಯುವಕರು ತಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾಗಿದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದ ನಂತರ, ನಮ್ಮ ಈ ತರಬೇತಿ ಪಡೆದ ಉದ್ಯೋಗಿಗಳನ್ನು ಬಿಡಬಾರದು. ಅದಕ್ಕಾಗಿ ಈಗಿನಿಂದಲೇ ಕೆಲಸ ಮಾಡಬೇಕು.

ಸ್ನೇಹಿತರೆ,

ಫಲಪ್ರದ ಚರ್ಚೆಗಳು ನಡೆಯುತ್ತವೆ, ಉತ್ತಮ ಸಲಹೆಗಳನ್ನು ನೀಡಲಾಗುತ್ತದೆ ಮತ್ತು ಉತ್ತಮ ಪರಿಹಾರಗಳು ಹೊರಹೊಮ್ಮುತ್ತವೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಹೊಸ ಆಲೋಚನೆ, ಚಿಂತನೆ ಮತ್ತು ತಾಜಾ ಶಕ್ತಿಯೊಂದಿಗೆ, ನಮ್ಮ ಯುವ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಈ ಪ್ರಮುಖ ಕ್ಷೇತ್ರಗಳನ್ನು ಸಮೃದ್ಧಗೊಳಿಸಿ. ನಿಮ್ಮ ನಿರ್ಣಯಗಳೊಂದಿಗೆ ಅವುಗಳನ್ನು ಮುಂದುವರಿಸಿ. ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯಲು ಸರ್ಕಾರ ಸಿದ್ಧವಿದೆ. ಈ ವೆಬಿನಾರ್‌ಗಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ. ಧನ್ಯವಾದಗಳು!

ಹಕ್ಕು ನಿರಾಕರಣೆ:  ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

***

 


(Release ID: 1903280) Visitor Counter : 202