ಸಂಸ್ಕೃತಿ ಸಚಿವಾಲಯ

ಬಂಜಾರ ಧರ್ಮಗುರು ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮೊದಲ ಬಾರಿಗೆ ಆಚರಿಸುತ್ತಿದೆ.


ಫೆಬ್ರವರಿ 27ರಂದು ಜರುಗಲಿರುವ 284ನೇ ಜಯಂತಿಯಲ್ಲಿ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ

Posted On: 26 FEB 2023 10:12AM by PIB Bengaluru

ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಬಂಜಾರ ಸಮುದಾಯದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರು ಸಂತ ಸೇವಾಲಾಲ್ ಮಹಾರಾಜ್ ಅವರ 284ನೇ ಜನ್ಮದಿನ ಆಚರಿಸುತ್ತಿದೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರು ಅಮಿತ್ ಶಾ ಅವರೊಂದಿಗೆ ಆಗಮಿಸಲಿದ್ದಾರೆ. 27.02.2023ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಆಡಳಿತ ಸಚಿವ ಶ್ರೀ ಸಂಜಯ್ ರಾಥೋಡ್, ಹಿರಿಯ ಬಿಜೆಪಿ ನಾಯಕ ಮತ್ತು ದೆಹಲಿಯ ಮಾಜಿ ಶಾಸಕ ಶ್ರೀ ಮಂಜಿಂದರ್ ಸಿಂಗ್ ಸಿರ್ಸಾ, ಕರ್ನಾಟಕ ರಾಜ್ಯದ ಕಲಬುರಗಿ ಸಂಸದ ಡಾ ಉಮೇಶ್ ಜಾಧವ್, ಅಖಿಲ ಭಾರತ ಬಂಜಾರ ಸೇವಾ ಸಂಘವು ರಾಷ್ಟ್ರೀಯ ಅಧ್ಯಕ್ಷ ಶ್ರೀ ಶಂಕರ ಪವಾರ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನವದೆಹಲಿಯ ಸಂತ ಸೇವಾಲಾಲ್ ಮಹಾರಾಜ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿರುವ ಕಲಬುರಗಿ ಕ್ಷೇತ್ರದ ಬಿಜೆಪಿ ಸಂಸದ ಡಾ. ಉಮೇಶ ಜಾಧವ್ ಅವರು ಬಂಜಾರ ಸಮುದಾಯದ ಏಕೈಕ ಬಿಜೆಪಿ ಸಂಸದರಾಗಿದ್ದಾರೆ. ದೆಹಲಿಯ ಸಂತ ಸೇವಾಲಾಲ್ ಮಹಾರಾಜ್ ಚಾರಿಟಬಲ್ ಟ್ರಸ್ಟ್ ಕಳೆದ 3 ವರ್ಷಗಳಿಂದ ದೆಹಲಿಯಲ್ಲಿ ವಿವಿಧ ಬಂಜಾರ ಸಮುದಾಯದ ಜನರೊಂದಿಗೆ ಸೇರಿ ಸಂತ ಸೇವಾಲಾಲ್ ಜಯಂತಿ ಆಚರಿಸುತ್ತಾ ಬಂದಿದೆ. ದೇಶದ ವಿವಿಧ ರಾಜ್ಯಗಳ ಬಂಜಾರ ಸಮುದಾಯ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ.

ಪ್ರತಿ ವರ್ಷದಂತೆ, ಈ ವರ್ಷವೂ ಈ ಸಂತ ಸೇವಾಲಾಲ್ ಜಯಂತಿ ಆಚರಿಸಲು ದೇಶಾದ್ಯಂತ ಬಂಜಾರರು ದೆಹಲಿಯಲ್ಲಿ ಸೇರುತ್ತಿದ್ದಾರೆ. ಕರ್ನಾಟಕದಿಂದ ವಿಶೇಷ ರೈಲು ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ 2,500ಕ್ಕೂ ಹೆಚ್ಚು ಬಂಜಾರ ಸಮುದಾಯದ ಜನರು ದೆಹಲಿ ತಲುಪಿದ್ದಾರೆ. 2023 ಫೆಬ್ರವರಿ 26ರಂದು ಅಂದರೆ ಇಂದು ದೆಹಲಿಯ ಜನಪಥ್ ರಸ್ತೆಯಲ್ಲಿರುವ ಡಾ. ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಬಂಜಾರ ಕಲೆ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ಪ್ರದರ್ಶನಗೊಳ್ಳಲಿವೆ. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು 2023 ಫೆಬ್ರವರಿ 27ರಂದು ಬೆಳಗ್ಗೆ 11 ಗಂಟೆಗೆ 2ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
 
ಸಂತ ಸೇವಾಲಾಲ್ ಮಹಾರಾಜರು 1739 ಫೆಬ್ರವರಿ 15ರಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸುರಗೊಂಡನಕೊಪ್ಪದಲ್ಲಿ ಜನಿಸಿದರು. ಅವರನ್ನು ಬಂಜಾರ ಸಮುದಾಯದ ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ. ದೇಶಾದ್ಯಂತ ಸುಮಾರು 10ರಿಂದ 12 ಕೋಟಿ ಬಂಜಾರ ಸಮುದಾಯವಿದೆ ಎಂದು ಅಂದಾಜಿಸಲಾಗಿದೆ. ವಿಶೇಷವಾಗಿ ಅರಣ್ಯವಾಸಿಗಳು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ಸೇವೆ ಸಲ್ಲಿಸಲು ಸಂತ ಸೇವಾಲಾಲ್ ಅವರು ತಮ್ಮ ತಂಡದೊಂದಿಗೆ ದೇಶಾದ್ಯಂತ ಪ್ರಯಾಣ ಮಾಡಿದರು. ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಅವರ ಅಸಾಧಾರಣ ಜ್ಞಾನ, ಅತ್ಯುತ್ತಮ ಕೌಶಲ್ಯ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿಂದಾಗಿ ಅವರು ಬುಡಕಟ್ಟು ಸಮುದಾಯಗಳಲ್ಲಿ ಪ್ರಚಲಿತದಲ್ಲಿರುವ ಕಟ್ಟುಪಾಡು ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಬಂಜಾರರ ಜೀವನ ವಿಧಾನದಲ್ಲಿ ಸುಧಾರಣೆಗಳನ್ನು ತಂದರು. ದೇಶಾದ್ಯಂತ ವಿವಿಧ ಹೆಸರುಗಳಿಂದ ನೆಲೆಸಿರುವ ಬಂಜಾರ ಸಮುದಾಯ ತಮ್ಮ ಅಲೆಮಾರಿ ಜೀವನಶೈಲಿಯನ್ನು ಶಾಶ್ವತವಾಗಿ ತೊರೆದು ತಾಂಡಾಗಳಲ್ಲಿ ನೆಲೆಸಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸಂತ ಸೇವಾಲಾಲ್ ಮಹಾರಾಜರು ಪ್ರತಿ ಬಂಜಾರ ಕುಟುಂಬದ ಪೂಜ್ಯ ಸಂಕೇತವಾಗಿದ್ದಾರೆ. ಈ ಎಲ್ಲಾ ರಾಜ್ಯಗಳಲ್ಲಿ ಸಂತ ಸೇವಾಲಾಲ್ ಮಹಾರಾಜರ ಜನ್ಮದಿನವನ್ನು ಫೆಬ್ರವರಿ ಮಾಸದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಂತ ಸೇವಾಲಾಲ್ ಜಿ ಅವರ ಸಮಾಧಿ ಸ್ಥಳವು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಮನೋರಾ ತಾಲೂಕಿನಲ್ಲಿರುವ ಪೊಹ್ರಾದೇವಿಯಲ್ಲಿದ್ದು, ಅದು ಬಂಜಾರರ ಕಾಶಿ ಎಂದೇ ಗುರುತಿಸಲ್ಪಿಟ್ಟಿದೆ.

****



(Release ID: 1902593) Visitor Counter : 1004