ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಭಾರತದ ʻಜಿ 20ʼ ಅಧ್ಯಕ್ಷ ಸ್ಥಾನಕ್ಕೆ ʻಡಬ್ಲ್ಯು 20ʼ (ಮಹಿಳಾ 20)
2023ರ ಫೆಬ್ರವರಿ 27-28ರಂದು ʻಡಬ್ಲ್ಯು 20ʼ ಉದ್ಘಾಟನಾ ಅಧಿವೇಶನಕ್ಕೆ ಸಾಕ್ಷಿಯಾಲಿರುವ ಔರಂಗಾಬಾದ್
Posted On:
25 FEB 2023 5:45PM by PIB Bengaluru
ಔರಂಗಾಬಾದ್, ಫೆಬ್ರವರಿ 25, 2023
ʻಡಬ್ಲ್ಯು 20ʼ(ಮಹಿಳಾ 20) – ಇದು ʻಜಿ 20ʼ ಅಡಿಯಲ್ಲಿ ಅಧಿಕೃತ ಕಾರ್ಯನಿರತ ಮಹಿಳಾ ಪಡೆಯಾಗಿದ್ದು, 2015ರಲ್ಲಿ ಟರ್ಕಿಯ ಅಧ್ಯಕ್ಷತೆಯ ಸಮಯದಲ್ಲಿ ಇದನ್ನು ರಚಿಸಲಾಯಿತು. ʻಜಿ 20ʼ ಚರ್ಚೆಗಳಲ್ಲಿ ಲಿಂಗ ಸಂಬಂಧಿತ ವಿಚಾರಗಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಲಿಂಗ ಸಮಾನತೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ಸಂಬಂಧ ʻಜಿ 20ʼ ನಾಯಕರ ಘೋಷಣೆಗಳನ್ನು ನೀತಿಗಳು ಮತ್ತು ಬದ್ಧತೆಗಳಾಗಿ ಪರಿವರ್ತಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
2022ರ ಡಿಸೆಂಬರ್ 12ರಂದು ಭಾರತವು ಇಂಡೋನೇಷ್ಯಾದಿಂದ ʻಡಬ್ಲ್ಯು 20ʼ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು. ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ʻಡಬ್ಲ್ಯು 20ʼ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ "ಮಹಿಳಾ ನೇತೃತ್ವದ ಅಭಿವೃದ್ಧಿ" ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಗಮನ ಹರಿಸಿದೆ. ಪ್ರತಿಯೊಬ್ಬ ಮಹಿಳೆ ಘನತೆಯಿಂದ ಬದುಕುವಂತಹ, ತನ್ನ ಮತ್ತ ಇತರರ ಜೀವನವನ್ನು ಪರಿವರ್ತಿಸುವ ಅವಕಾಶವನ್ನು ಪಡೆಯುವಂತಹ ಸಮಾನತೆಯ ಜಗತ್ತನ್ನು ಸೃಷ್ಟಿಸುವ ದೃಷ್ಟಿಕೋನ ಇದಾಗಿದೆ. 2023ನೇ ಸಾಲಿನ ʻಡಬ್ಲ್ಯು 20ʼ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಅಡೆತಡೆಗಳನ್ನು ತೊಡದುಹಾಕುವತ್ತ ಗಮನ ಹರಿಸಿದೆ ಮತ್ತು ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು, ಅವರ ಜೀವನವನ್ನು ಮತ್ತು ಇತರರ ಜೀವನವನ್ನು ಪರಿವರ್ತಿಸಲು ಅನುವು ಮಾಡಿಕೊಡುವ ವಾತಾವರಣ ಮತ್ತು ಪರಿಸರ ವ್ಯವಸ್ಥೆಯನ್ನು ಖಾತರಿಪಡಿಸುವತ್ತ ಗಮನ ಹರಿಸಿದೆ.
ಜಾಗತಿಕ ಮತ್ತು ರಾಷ್ಟ್ರೀಯ ʻಡಬ್ಲ್ಯು 20ʼ ಜಾಲವನ್ನು ಸ್ಥಾಪಿಸುವ ಜೊತೆ ಜೊತೆಗೇ ಹಿಂದಿನ ಅಧ್ಯಕ್ಷ ರಾಷ್ಟ್ರಗಳು ಮುಂದಿಟ್ಟಿರುವ ʻಡಬ್ಲ್ಯು 20ʼ ಕಾರ್ಯಸೂಚಿಯ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳುವುದು 2023ನೇ ಸಾಲಿನ ʻಡಬ್ಲ್ಯು 20ʼ ಮುಂದಿರುವ ಗುರಿಯಾಗಿದೆ. ಈ ಸಮಗ್ರ ಸಮಾಲೋಚನೆಗಳು ಮತ್ತು ಕ್ರಮಗಳು ʻಡಬ್ಲ್ಯು 20ʼ ಪ್ರಕರಣೆ ಮತ್ತು ʻಜಿ 20ʼ ನಾಯಕರ ಘೋಷಣೆಗೆ ಪೂರಕವಾಗಿವೆ. ʻಡಬ್ಲ್ಯು 20ʼ ಪ್ರಕಟಣೆಯು ಪ್ರಾತಿನಿಧಿಕ ಮತ್ತು ಸಮಗ್ರವಾಗಿರುವಂತೆ ಹಾಗೂ ವಿಶ್ವದಾದ್ಯಂತ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಪರಿಹಾರಗಳನ್ನು ಒದಗಿಸುವಂತೆ ಖಚಿತಪಡಿಸಿಕೊಳ್ಳುವ ಗುರಿಯನ್ನು 2023ನೇ ಸಾಲಿನ ʻಡಬ್ಲ್ಯು 20ʼಹೊಂದಿದೆ.
ಭಾರತದ ಅಧ್ಯಕ್ಷತೆಯಲ್ಲಿ ʻಡಬ್ಲ್ಯು 20ʼ ಐದು ಆದ್ಯತೆಯ ಕ್ಷೇತ್ರಗಳನ್ನು ಹೊಂದಿದೆ. ಅವುಗಳೆಂದರೆ: ಉದ್ಯಮಶೀಲತೆಯಲ್ಲಿ ಮಹಿಳೆಯರು, ತಳಮಟ್ಟದಲ್ಲಿ ಮಹಿಳಾ ನಾಯಕತ್ವ, ಲಿಂಗ ಆಧರಿತ ಡಿಜಿಟಲ್ ವಿಭಜನೆಯನ್ನು ನಿವಾರಿಸುವುದು, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ʻಹವಾಮಾನ ಸ್ಥಿತಿಸ್ಥಾಪಕತ್ವ ಉಪಕ್ರಮʼದ ವಿಚಾರದಲ್ಲಿ ಬದಲಾವಣೆ ಹರಿಕಾರರಾಗಿ ಮಹಿಳೆಯರು ಮತ್ತು ಹುಡುಗಿಯರು.
ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಡಾ.ಸಂಧ್ಯಾ ಪುರೆಚಾ ಅವರು ʻಡಬ್ಲ್ಯು 20ʼರ ಅಧ್ಯಕ್ಷರಾಗಿದ್ದಾರೆ. 5ನೇ ರಾಜಸ್ಥಾನ ಹಣಕಾಸು ಆಯೋಗದ ಮಾಜಿ ಅಧ್ಯಕ್ಷೆ ಡಾ.ಜ್ಯೋತಿ ಕಿರಣ್ ಶುಕ್ಲಾ, ಭಾರತದ ಪ್ರಧಾನ ಮಂತ್ರಿಯ ಆರ್ಥಿಕ ಮಂಡಳಿಯ ಸದಸ್ಯ ಪ್ರೊಫೆಸರ್ ಶಮಿಕಾ ರವಿ, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಮತಿ ಭಾರತಿ ಘೋಷ್, ನಟಿ ಶ್ರೀಮತಿ ರವೀನಾ ಟಂಡನ್, ಭಾರತದ ಸುಪ್ರೀಂ ಕೋರ್ಟ್ ವಕೀಲೆ ಶ್ರೀಮತಿ ಬಾನ್ಸುರಿ ಸ್ವರಾಜ್ ಹಾಗೂ ಉದ್ಯಮಿ ಮತ್ತು ಜನಾನುರಾಗಿ ಧರಿತ್ರಿ ಪಟ್ನಾಯಕ್ ಅವರು ʻಡಬ್ಲ್ಯು 20ʼ ಸಚಿವಾಲಯದ ಮುಖ್ಯ ಸಂಚಾಲಕರಾಗಿದ್ದಾರೆ. 19 ದೇಶಗಳು ಮತ್ತು ಐರೋಪ್ಯ ಒಕ್ಕೂಟವನ್ನು ಪ್ರತಿನಿಧಿಸುವ ಸರಿಸುಮಾರು 100 ಪ್ರತಿನಿಧಿಗಳನ್ನು ʻಡಬ್ಲ್ಯು 20ʼ ಹೊಂದಿದೆ. ಇವರು ಐದು ಕಾರ್ಯಪಡೆಗಳು, ನೀತಿ ಶಿಫಾರಸುಗಳು ಮತ್ತು ಪ್ರಕಟಣೆಯ ಕರಡುಗಳ ಮೇಲೆ ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ʻಡಬ್ಲ್ಯು 20ʼ ಇಂಡೋನೇಷ್ಯಾದಿಂದ ಅಧಿಕಾರ ವಹಿಸಿಕೊಂಡಾಗಿನಿಂದ, ಜ್ಞಾನ ಮತ್ತು ಜಾಲದ ಪಾಲುದಾರರಾಗಿ ವಿವಿಧ ಸಂಸ್ಥೆಗಳೊಂದಿಗೆ 15 ಕ್ಕೂ ಹೆಚ್ಚು ಒಡಂಬಡಿಕೆಗಳಿಗೆ ʻಡಬ್ಲ್ಯು 20ʼ ಭಾರತವು ಸಹಿ ಹಾಕಿದೆ. ಭಾರತದ 10 ರಾಜ್ಯಗಳಲ್ಲಿ ಸಾವಿರಾರು ಮಹಿಳೆಯರೊಂದಿಗೆ 40 ಜನ್ ಭಾಗೀದಾರಿ ಕಾರ್ಯಕ್ರಮಗಳನ್ನು ನಡೆಸಿದೆ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ 2023ರ ಫೆಬ್ರವರಿ 27-28ರಂದು `ಡಬ್ಲ್ಯೂ 20’ ಉದ್ಘಾಟನಾ ಅಧಿವೇಶನ ನಡೆಯಲಿದೆ. ಇದರ ನಂತರ ಏಪ್ರಿಲ್ 13-14ರಂದು ರಾಜಸ್ಥಾನದ ಜೈಪುರದಲ್ಲಿ ಇತರ ಎರಡು ಡಬ್ಲ್ಯು 20 ಅಂತರರಾಷ್ಟ್ರೀಯ ಕೂಟಗಳು ನಡೆಯಲಿವೆ. ಜೂನ್ 15-16 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ʻಡಬ್ಲ್ಯು 20ʼ ಶೃಂಗಸಭೆ ನಡೆಯಲಿವೆ.
ಔರಂಗಾಬಾದ್ ನಗರವು ʻಡಬ್ಲ್ಯು 20ʼನ ಚೊಚ್ಚಲ ಸಭೆಯನ್ನು ಆಯೋಜಿಸಲು ಸಜ್ಜಾಗಿದೆ. 'ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ಸಮಾನತೆ, ಲಿಂಗ ಸಮಾನತೆ ಮತ್ತು ಘನತೆಯ ಅನ್ವೇಷಣೆ' ಎಂಬ ವಿಷಯಾಧಾರಿತವಾಗಿ ಈ ಮೊದಲ ಸಭೆ ನಡೆಯಲಿದೆ. ಲಿಂಗ ಸಂಬಂಧಿತ ಸಮಸ್ಯೆಗಳನ್ನು ಸಮಗ್ರ ಕಾರ್ಯತಂತ್ರಗಳ ಚರ್ಚೆ, ಸಮಾಲೋಚನೆ ಮತ್ತು ಅಭಿವೃದ್ಧಿಯು ಇದರ ಉದ್ದೇಶವಾಗಿದೆ. ಈ ಸಭೆಯಲ್ಲಿ ʻಜಿ 20ʼ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಜಾಗತಿಕ ಸಂಘ-ಸಂಸ್ಥೆಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಗೌರವಾನ್ವಿತ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ಅಮೂಲ್ಯ ಚಿಂತನೆಗಳನ್ನು ಸಭಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಭಾರತ ಸರಕಾರದ ಹಣಕಾಸು ಸಚಿವಾಲಯದ ಸಹಾಯಕ ಸಚಿವರಾದ ಡಾ. ಭಗತ್ ಕಿಶನ್ ರಾವ್ ಕರದ್ ಹಾಗೂ ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತದ ʻಜಿ 20ʼ ಶೆರ್ಪಾ ಶ್ರೀ ಅಮಿತಾಭ್ ಕಾಂತ್, ʻಡಬ್ಲ್ಯು 20ʼ ಸಂಸ್ಥಾಪಕ ಅಧ್ಯಕ್ಷರಾದ ಡಾ. ಗುಲ್ಡೆನ್ ತುರ್ಕಟನ್ ಮತ್ತು 2022ರ ʻಡಬ್ಲ್ಯು 20ʼ ಇಂಡೋನೇಷ್ಯಾ ಅಧ್ಯಕ್ಷೆ ಶ್ರೀಮತಿ ಉಲಿ ಸಿಲಾಲಾಹಿ ಈ ಅಧಿವೇಶನಕ್ಕೆ ಸಾಕ್ಷಿಯಾಗಲಿದ್ದಾರೆ.
ಆರಂಭಿಕ ಸಭೆಯಲ್ಲಿ ನ್ಯಾನೊ, ಸೂಕ್ಷ್ಮ ಮತ್ತು ಸ್ಟಾರ್ಟ್ ಅಪ್ ಉದ್ಯಮಗಳಲ್ಲಿ ಮಹಿಳೆಯರನ್ನು ಸಬಲೀಕರಣ; ಹವಾಮಾನ ಸ್ಥಿತಿಸ್ಥಾಪಕತ್ವ ಉಪಕ್ರಮದಲ್ಲಿ ಬದಲಾವಣೆ ಹರಿಕಾರರಾಗಿ ಮಹಿಳೆಯರ ಪಾತ್ರ; ತಳಮಟ್ಟದಲ್ಲಿ ಮಹಿಳಾ ನಾಯಕರಿಗೆ ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯ ಸೃಷ್ಟಿ; ಲಿಂಗ ಆಧರಿಒತ ಡಿಜಿಟಲ್ ವಿಭಜನೆಯನ್ನು ನಿವಾರಣೆ, ಮೂಲಸೌಕರ್ಯ ಮತ್ತು ಕೌಶಲ್ಯದ ಮೂಲಕ ಅವಕಾಶಗಳ ಲಭ್ಯತೆ ಸುಧಾರಿಸುವುದು; ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಮಾರ್ಗೋಪಾಯ; ಭಾರತದಲ್ಲಿ ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಬಗ್ಗೆ ವಿವಿಧ ಚರ್ಚೆಗಳು ನಡೆಯಲಿವೆ. ಭಾರತೀಯ ನೌಕಾಪಡೆ, ತಳಮಟ್ಟದ ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಡೆತಡೆಗಳನ್ನು ದಾಟಿದ ಭಾರತದ ದಿಟ್ಟ ಮಹಿಳೆಯರ ಯಶೋಗಾಥೆಗಳನ್ನು ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗುವುದು.
ಇದಲ್ಲದೆ, ಉದ್ಘಾಟನಾ ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಮಹಾರಾಷ್ಟ್ರದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಔರಂಗಾಬಾದ್‌ನ ಪಾರಂಪರಿಕ ತಾಣಗಳು, ಪ್ರಾಚೀನ ಎಲ್ಲೋರಾ ಗುಹೆಗಳಿಗೆ ಪ್ರತಿನಿಧಿಗಳ ಭೇಟಿ ಸಹ ಇರಲಿದೆ.
ಇಂದು ಭಾರತವು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ತ್ವರಿತ ಪರಿವರ್ತನೆಗೆ ಸಾಕ್ಷಿಯಾಗಿದೆ. ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಮಹಿಳೆಯರು ಸಮಾನ ಪಾಲುದಾರರಾಗಿರುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ʻನವ ಭಾರತʼದ ಆಶಯದೊಂದಿಗೆ ದೇಶ ಮುನ್ನಡೆಯುತ್ತಿದೆ. ಸಶಕ್ತ ಮಹಿಳೆಯರು ಘನತೆಯಿಂದ ಬದುಕುವ ಮತ್ತು ಸಮಾನ ಪಾಲುದಾರರಾಗಿ ಕೊಡುಗೆ ನೀಡುವ ಸಮಾಜವನ್ನು ಪೋಷಿಸಲು ಭಾರತ ಬದ್ಧವಾಗಿದೆ.
ಸಹಯೋಗವನ್ನು ಉತ್ತೇಜಿಸಲು ಹಾಗೂ ಲಿಂಗ ಸಮಾನತೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಉದ್ದೇಶದೊಂದಿಗೆ ʻಡಬ್ಲ್ಯು 20ʼ ಸಭೆಗಳನ್ನು ಯೋಜಿಸಲಾಗಿದೆ.
**
(Release ID: 1902591)
Visitor Counter : 499