ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗಾಗಿ ಉದ್ಯಮಶೀಲತೆ ಯೋಜನೆಗಳ ಕುರಿತು ಜಾಗೃತಿ; ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ 2023 ಫೆಬ್ರವರಿ 22 ಮತ್ತು 23ರಂದು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ 4000 ಗ್ರಾಮ ಮಟ್ಟದ ಶಿಬಿರಗಳ  ಆಯೋಜನೆ

Posted On: 25 FEB 2023 10:56AM by PIB Bengaluru

 

1. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಲಾ ಅವರು ರೈತರಿಗೆ ರಾಷ್ಟ್ರೀಯ ಜಾನುವಾರು ಮಿಷನ್ (ಎನ್ಎಲ್ಎಂ) ಮತ್ತು ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಗಳ ಬಗ್ಗೆ ವಿವರ ನೀಡಿದರು.
2. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕಾರ್ಯದರ್ಶಿ ಅವರು ಉದ್ಯಮಶೀಲತೆ ಅಭಿವೃದ್ಧಿ ಮತ್ತು ಗ್ರಾಮೀಣ ಕೋಳಿ, ಕುರಿ, ಮೇಕೆ ಮತ್ತು ಹಂದಿ ಸಾಕಣೆಯಲ್ಲಿ ಮೇವು ಮತ್ತು ತಳಿ ಅಭಿವೃದ್ಧಿ ಮತ್ತು ಸುಧಾರಣೆಯ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು.
3. ಜಾನುವಾರು ಉತ್ಪಾದಕತೆಯನ್ನು ಸಮರ್ಥನೀಯ ಮತ್ತು ಲಾಭದಾಯಕ ರೀತಿಯಲ್ಲಿ ಹೆಚ್ಚಿಸುವುದು ಇಲಾಖೆಯ ಸಮಗ್ರ ದೃಷ್ಟಿಕೋನವಾಗಿದೆ.
4. ಸಾಮಾನ್ಯ ಸೇವಾ ಕೇಂದ್ರಗಳಿಂದ ಸುಮಾರು 2 ಲಕ್ಷ ರೈತರು ವರ್ಚುವಲ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಾಲಾ ಅವರು ಶಿಬಿರಗಳ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಉದ್ಯಮಶೀಲತೆ ಮತ್ತು ಇತರೆ ಫಲಾನುಭವಿ-ಆಧಾರಿತ ಯೋಜನೆಗಳ ಕುರಿತು ಸಾಮಾನ್ಯ ಸೇವಾ ಕೇಂದ್ರಗಳ ಜಾಲದ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ದೇಶದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ 4,000 ಗ್ರಾಮ ಮಟ್ಟದ ಶಿಬಿರಗಳನ್ನು ನಡೆಸಲಾಗಿದೆ. 2023 ಫೆಬ್ರವರಿ 22 ಮತ್ತು 23ರಂದು ಆಯೋಜಿಸಿದ್ದ ಈ ಶಿಬಿರದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಾಲಾ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ರೈತರು ಮತ್ತು ಹೈನುಗಾರರಿಗೆ ಈ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ  ನೀಡಲಾಯಿತು. ಜತೆಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಪೋರ್ಟಲ್‌ನಲ್ಲಿ ಸ್ಕೀಂಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಒದಗಿಸಲಾಯಿತು.  ಸುಮಾರು 2 ಲಕ್ಷ ರೈತರು ವರ್ಚುವಲ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಾಲಾ ಅವರು ಶಿಬಿರಗಳ ಮೂಲಕ ಸಂಪರ್ಕ ಹೊಂದಿದ್ದ  ರೈತರನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಜಾನುವಾರು ಮಿಷನ್ ಮತ್ತು ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಗಳಲ್ಲಿ ಈಗ ತಳಿ(ಬ್ರೀಡರ್) ಸಾಕಣೆ ಫಾರ್ಮ್ ಉದ್ಯಮಶೀಲರು ಮತ್ತು ಮೇವು ಬೆಳೆಯುವ ಉದ್ಯಮಶೀಲರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಜಾನುವಾರು ಮಿಷನ್ (ಎನ್ಎಲ್ಎಂ) ಗ್ರಾಮೀಣ ಉದ್ಯಮಶೀಲತೆ ಸೃಷ್ಟಿಸಲು ಸಹಾಯ ಮಾಡುತ್ತದೆ. ನಿರುದ್ಯೋಗಿ ಯುವಕರು ಮತ್ತು ಜಾನುವಾರು ಸಾಕಣೆದಾರರಿಗೆ ಉತ್ತಮ ಜೀವನೋಪಾಯದ ಅವಕಾಶ ಸೃಷ್ಟಿಸಲು ಈ ಯೋಜನೆ ಸಹಾಯ ಮಾಡುತ್ತದೆ, ಜಾನುವಾರು, ಹೈನುಗಾರಿಕೆ, ಕೋಳಿ, ಕುರಿ, ಮೇಕೆ, ಹಂದಿ ಸಾಕಣೆ, ಮೇವು ಮತ್ತು ತಳಿ ಸಾಕಣೆ ಕ್ಷೇತ್ರದಲ್ಲಿ ಆತ್ಮ ನಿರ್ಭರ್ ಭಾರತ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರು ರೈತರೊಂದಿಗೆ ಸಂವಾದ ನಡೆಸಿದರು.

 ರೈತರೊಂದಿಗೆ ಸಂವಾದ ಸಂದರ್ಭದಲ್ಲಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರು, ಈ ಯೋಜನೆಗಳು ಉದ್ಯಮಶೀಲತೆಯ ಅಭಿವೃದ್ಧಿ ಮತ್ತು ಗ್ರಾಮೀಣ ಕೋಳಿ, ಕುರಿ, ಮೇಕೆ ಮತ್ತು ಹಂದಿಗಳ ಮೇವು ಮತ್ತು ತಳಿ ಅಭಿವೃದ್ಧಿ ಮತ್ತು ಸುಧಾರಣೆಗೆ ಹೆಚ್ಚಿನ ಗಮನ ನೀಡುತ್ತಿವೆ ಎಂದರು.  ಸರ್ಕಾರವು ಕೋಳಿ ಉತ್ಪಾದನೆ, ಹಾಲು ಮತ್ತು ಮಾಂಸ ಉತ್ಪಾದನೆ ಹೆಚ್ಚಿಸಲು, ಪೌಷ್ಟಿಕಾಂಶದ ಭದ್ರತೆ, ಉದ್ಯೋಗ ಸೃಷ್ಟಿ ಮತ್ತು ದೇಶದ ಆರ್ಥಿಕತೆಯಲ್ಲಿ ಸಮೃದ್ಧಿ ಸಾಧಿಸಲು ಸರ್ಕಾರವು, ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ವಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸಮಗ್ರ ದೃಷ್ಟಿಕೋನವು ಸುಸ್ಥಿರ ಮತ್ತು ಲಾಭದಾಯಕ ರೀತಿಯಲ್ಲಿ ಜಾನುವಾರು ಉತ್ಪಾದಕತೆ ಹೆಚ್ಚಿಸಲು ಪರಸ್ಪರ ಸಂಬಂಧ ಹೊಂದಿವೆ. ಯೋಜನೆಗಳ ಪ್ರಭಾವ ಮತ್ತು ಯಶಸ್ಸನ್ನು ಪ್ರಸ್ತುತಿಗಳು ಮತ್ತು ವೀಡಿಯೊಗಳ ಸಹಾಯದಿಂದ ವಿವರಿಸಲಾಗಿದೆ ಎಂದರು.

****



(Release ID: 1902322) Visitor Counter : 203